About the Author

ಜ.ಹೊ.ನಾ ಎಂದೇ ಖ್ಯಾತರಾದ ಜ.ಹೊ.ನಾರಾಯಣಸ್ವಾಮಿ ಅವರು 13-06-1941ರಂದು ಹಾಸನ ತಾಲೂಕಿನ ಜನಿವಾರ ಎಂಬ ಗ್ರಾಮದಲ್ಲಿ ಜನಿಸಿದರು. ತಂದೆ ಹೊನ್ನಯ್ಯ, ತಾಯಿ ತಿಮ್ಮಮ್ಮ. ಮಹಾಕವಿ ಕುವೆಂಪುರವರ ಬೆರಳೆಣಿಕೆಯ ಆಪ್ತ ಶಿಷ್ಯ ವೃಂದದಲ್ಲಿ ಜ.ಹೊ.ನಾ ಪ್ರಮುಖರು. ಸಾಹಿತ್ಯ ವಲಯದಲ್ಲಿ ಆಲೋಚನೆಯ ದಾರಿದ್ರ್ಯ ಹಿಡಿದು ಸಂಪ್ರದಾಯ ನೇಣುಗಂಬಕ್ಕೆ ತುತ್ತಾದ ಸಂದರ್ಭದಲ್ಲಿ ಜ.ಹೊ.ನಾ ಅದಾರಾಚೆಯ ವೈಚಾರಿಕ ಲೋಕ ದರ್ಶನ ಮಾಡಿಸಿದವರು. ಮಾನವ ಕುಲಂ ತಾನೋಂದೇ ವಲಂ ಎನ್ನುವಂತೆ ವೇದ, ಕುರಾನ್ ಆಚೆಗೆ ನಮ್ಮನ್ನೆಲ್ಲಾ ಕೊಂಡೋಯ್ದು ಮಠ, ಮಂದಿರ, ಚರ್ಚ್, ಮಸೀದಿಗಳ ತೊರೆದು ಹೊರಬಂದು ಮಾನವೀಯ ಮೌಲ್ಯಗಳ ಆವಿರ್ಭವಿಸಿಕೊಳ್ಳುವಂತೆ ಕರೆನೀಡಿದ ಮಾನವತಾವಾದಿ ಜ.ಹೊ.ನಾ. ಪ್ರಾಥಮಿಕ ಶಿಕ್ಷಣದಿಂದ ಪದವಿಪೂರ್ವ ಶಿಕ್ಷಣವನ್ನು ಹಾಸನದಲ್ಲಿಯೇ ಪಡೆದು, ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೊಗಿ ಮತ್ತೆ ಹಾಸನಕ್ಕೆ ಬಂದು ವಕೀಲಿ ವೃತ್ತಿ ನಡೆಸಿ ಎರಡು ಬಾರಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಸೇವೆ ಸಲ್ಲಿಸಿದ್ದರು.

ಕರ್ನಾಟಕ ಸಾಹಿತ್ಯ ಅಕಾಡಮಿಯ ಸದಸ್ಯರಾಗಿ, ಹಾಸನ ಜಿಲ್ಲಾ ಬಿಜಿವಿಎಸ್ ಸಂಸ್ಥಾಪಕ ಅಧ್ಯಕ್ಷರಾಗಿ, ಸಾಕ್ಷರತಾ ಆಂದೋಲನದ ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯದರ್ಶಿಯಾಗಿ, ಸಂವೇದನಾ ಕಲಾವಿದರು ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿ, ಜಿಲ್ಲಾ ಬರಹಗಾರರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾಗಿ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಜ.ಹೊ.ನಾ ನಾಡಿನಾದ್ಯಾಂತ ಪ್ರಖ್ಯಾತರಾದವರು. ಇವರ ಅನೇಕ ಕೃತಿಗಳು ವಿವಿಧ ವಿಶ್ವವಿದ್ಯಾನಿಲಯಗಳಿಂದ, ಕನ್ನಡ ಪ್ರಾಧಿಕಾರಗಳಿಂದ ಪ್ರಕಟಗೊಂಡಿವೆ. ರೈತ ಚಳವಳಿಯಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದ ಇವರು ಅನೇಕ ಸಮಾಜ ಪರ ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಜ.ಹೊ.ನಾ ಕೃತಿಗಳು: ಜಗದ ತೊಟ್ಟಿಲು-ಕವನ ಸಂಕಲನ, ಬೆಳಕಿನ ದಾರಿ, ವಿವೇಕಾನಂದರ ಕ್ರಾಂತಿಕಾರಿ ವಿಚಾರಗಳು, ವೇದ ಕುರಾನ್ ಆಚೆಗೆ, ವಿವೇಕಾನಂದ ಮಾನವತೆಗಾಗಿ ಕಾವಿಯೊಳಗೆ ಕುದಿದ ಕೆಂಡ, ಆವರಣ-ಅನಾವರಣ, ಬ್ರಾಹ್ಮಣ್ಯದ ತಂತ್ರಗಳು, ಸಂಪ್ರದಾಯದ ನೇಣುಗಂಬ, ಚೈತನ್ಯದ ಪೂಜೆ ಮುಂತಾದ ವೈಚಾರಿಕ ಕೃತಿಗಳು, ನರಬಲಿ,-ನಾಟಕ, ಅದಮ್ಯ, ಸಿದ್ಧಾರ್ಥ-ಕಾದಂಬರಿಗಳು, ಸ್ವಾಮಿ ವಿವೇಕಾನಂದ, ಜಯಪ್ರಕಾಶ ನಾರಾಯಣ, ಭಗತ್ ಸಿಂಗ್, ನಿಷ್ಠನ್ಯಾಯವಾದಿ ಎಚ್‌ಎಸ್‌ಎಂ, ಕಾರುಗೋಡಿನ ತೊಟ್ಟಿಮನೆ ಕೆ.ಎಂ. ಚಂದ್ರಶೇಖರ್ ಮುಂತಾದವರ ಜೀವನ ಚರಿತ್ರೆಗಳು, ಹರ್ಮನ್‌ಸೇನ್-ವಾಚಿಕೆ; ಶ್ರೀಕುವೆಂಪು-ಸಂಕೀರ್ಣ; ಭಾರತದ ರೈತ-ಅನುವಾದ; ಬೇಲೂರು ಹಳೆಬೀಡು-ನವಸಾಕ್ಷರಿಗಾಗಿ ಬರೆದ ಬರಹಗಳು ಹೀಗೆ 25ಕ್ಕೂ ಅನೇಕ ಬಗೆಯ ಕೃತಿಗಳನ್ನು ಜ.ಹೊ.ನಾ ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.

ಪ್ರಶಸ್ತಿಗಳು: ಇವರ ವೇದ ಕುರಾನ್ ಆಚೆಗೆ ಕೃತಿಗೆ ಡಾ.ಹೆಚ್. ನರಸಿಂಹಯ್ಯ ದತ್ತಿನಿಧಿ ಪ್ರಶಸ್ತಿ, ಬಂದಿದೆ. ಅಲ್ಲದೆ, ಅನಿಕೇತನ ಪ್ರಶಸ್ತಿ, ಹಾಸನ ಜಿಲ್ಲಾ ರಾಜೋತ್ಸವ ಪ್ರಶಸ್ತಿ ಹಾಗೂ ಹಲವು ಸಂಘಗಳಿಂದ ಅನೇಕ ಗೌರವ ಪುರಸ್ಕಾರಗಳು ಲಭಿಸಿವೆ. ಹಾಸನ ಜಿಲ್ಲಾ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.

ಜ.ಹೊ.ನಾರಾಯಣಸ್ವಾಮಿ (ಜ.ಹೊ.ನಾ)

(13 Jun 1941-09 Nov 2018)