About the Author

ಕರ್ನಾಟಕದ ಪ್ರಮುಖ ಹೋರಾಟಗಾರ್ತಿ ಕೆ. ನೀಲಾ ಅವರು ಕನ್ನಡದ ಕಥೆಗಾರರಲ್ಲಿ ಒಬ್ಬರು. ನೀಲಾ ಅವರು 1966ರ ಆಗಸ್ಟ್ 1 ರಂದು ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ ಜನಿಸಿದರು. ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿಯೇ ಓದು, ಬರಹದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಇವರ ಕತೆ, ಕವನ, ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 
ತೊಗರಿ ಬೆಳೆಗೆ ಬೆಂಬಲ ಬೆಲೆ ಸಿಗಬೇಕೆಂದು ರೈತಪರ ಹೋರಾಟದಲ್ಲಿ ಜೈಲು ಸೇರಿದಾಗ ಬರೆದ ಬದುಕು ಬಂದೀಖಾನೆ ಕೃತಿಯು ಜೈಲಿನ ಕಥನ ಒಳಗೊಂಡಿದೆ. ಮಹಿಳೆ- ಸಮಸ್ಯೆ ಸವಾಲುಗಳು  ಪ್ರಚಾರೋಪನ್ಯಾಸ ಮಾಲೆಯ ಕಿರು ಹೊತ್ತಿಗೆ, ಜ್ಯೋತಿಯೊಳಗಣ ಕಾಂತಿ, ತಿಪ್ಪೆಯನರಸಿ ಮತ್ತು ಇತರ ಕತೆಗಳು ಎಂಬ ಕತಾ ಸಂಕಲನ ಹಾಗೂ  ರೈಲು ಚಿತ್ರಗಳು ಅಂಚಿನಲ್ಲಿ  ಪ್ರವಾಸ ಕಥನ ಪ್ರಕಟಿಸಿದ್ದಾರೆ. ನೆಲದ ಪಿಸಿಮಾತು, ನೆಲದ ನಂಟು, ಬಾಳ ಕೌದಿ   ಅಂಕಣ ಬರಹಗಳು.  ಕರುಳಿರಿಯುವ ನೋವು -ಕತೆ  ಬಿ.ಎ ಮತ್ತು ಬಿ,ಕಾಂ  ನಾಲ್ಜನೆ ಸೆಮಿಸ್ಟರ್‍ಗೆ  ಪಠ್ಯವಾಗಿದೆ.  
ಕೊಂದಹರುಳಿದರೆ ಕತೆಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ರಾಜಪುರೋಹಿತ ದತ್ತಿ ಪುರಸ್ಕಾರ, ಚಿನ್ನದ ಪದಕದೊಂದಿಗೆ ಪ್ರಥಮ ಬಹುಮಾನ, ಸಂದಿದೆ. ಮುನ್ನೂರು ಪ್ರತಿಷ್ಠಾನದ ಅಮ್ಮ ಪ್ರಶಸ್ತಿ(2009), ಪ್ರಜಾವಾಣಿ ದೀಪಾವಳಿ ಸಂಭ್ರಮದ ಕಥಾಸ್ಪರ್ಧೆಯಲ್ಲಿ ’ತಿಪ್ಪೆಯನರಸಿ’ ಕತೆಗೆ ದ್ವಿತಿಯ ಬಹುಮಾನ (2000),  ಶ್ರೀಮತಿ ಯಶೋಧಾ ರಾಗೌ ಟ್ರಸ್ಟ್ ಮೈಸೂರು ವತಿಯಿಂದ ಶ್ರೀಮತಿ ಕವಿತಾ ಸ್ಮಾರಕ ಪ್ರಶಸ್ತಿ(2011), ಸಾಮಾಜಿಕ ಸೇವೆಗಾಗಿ  ಕಿತ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿ (2019) ದೊರೆತಿವೆ.
ಬೇಲೂರಿನ ಉರಿಲಿಂಗ ಪೆದ್ದಿ ಟ್ರಸ್ಟ್ ನಡೆಸುವ  ಬೀದರ ಜಿಲ್ಲಾ ಪ್ರಥಮ ಬಂಡಾಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ (  2012) , ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಪ್ರಶಸ್ತಿ, ಬೀದರ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನ (2013) ಅಧ್ಯಕ್ಷತೆ ವಹಿಸಿದ್ದರು. ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದರು
ವರದಕ್ಷಿಣೆಗಾಗಿ ನಡೆಯುವ ದೌರ್ಜನ್ಯ, ಅತ್ಯಾಚಾರ, ಕೊಲೆ, ಮಕ್ಕಳ ಮೇಲೆ ನಡೆಯುವ ಲೈಂಗಿಕ ಹಿಂಸೆ ಮುಂತಾದ ಪ್ರಕರಣಗಳನ್ನು ಕೈಗೆತ್ತಿಕೊಂಡ ಹೋರಾಟ ಮಾಡುವ  ಮಹಿಳಾ ಹೋರಾಟಗಾರ್ತಿ.  ಸದ್ಯಕ್ಕೆ  ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯಡಿಯಲ್ಲಿ ಸಾವಿರಾರು ಕೂಲಿ ಕಾರ್ಮಿಕರ ಕೈಗೆ ಉದ್ಯೋಗ ಕೊಡಿಸಿದ್ದಾರೆ.


 

ಕೆ. ನೀಲಾ

(01 Aug 1966)

BY THE AUTHOR