About the Author

ಕನ್ನಡದಲ್ಲಿ ನವ್ಯಕಾವ್ಯಕ್ಕೆ ನಾಂದಿ ಹಾಡಿದ ಮೊಗೇರಿ ಗೋಪಾಲಕೃಷ್ಣ ಅಡಿಗ ಅವರನ್ನು ‘ಒಂದು ಜನಾಂಗದ ಕಣ್ಣು ತೆರೆಸಿದ ಕವಿ’ ಎಂದು ಗುರುತಿಸಲಾಗುತ್ತಿತ್ತು. ಅಡಿಗರು 1918ರ ಫೆಬ್ರುವರಿ 18ರಂದು ಜನಿಸಿದರು. ತಂದೆ ರಾಮಪ್ಪ ಮತ್ತು ತಾಯಿ ಗೌರಮ್ಮ.

ಬೈಂದೂರಿನಲ್ಲಿ ಶಾಲಾ ಶಿಕ್ಷಣ, ಮೈಸೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಆಯಿತು. ಬಿ.ಎ. ಆನರ್ಸ್ ಪದವಿ (1942) ಗಳಿಸಿದ ನಂತರ ಚಿತ್ರದುರ್ಗ, ದಾವಣಗೆರೆ, ಬೆಂಗಳೂರು ಪ್ರೌಢಶಾಲೆಗಳಲ್ಲಿ ಅಧ್ಯಾಪಕರಾಗಿ ಕೆಲಸಮಾಡಿದ್ದರು. ಆಮೇಲೆ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದಿ ಎಂ.ಎ. ಪದವಿ (1947) ಗಳಿಸಿದರು. ಮೈಸೂರಿನ ಶಾರದಾವಿಲಾಸ್ ಕಾಲೇಜಿನಲ್ಲಿ ಉಪನ್ಯಾಸಕ (1948-52), ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ (1952-54) ಸಾಗರದ ಎಲ್.ಬಿ. ಕಾಲೇಜಿನಲ್ಲಿ ಮತ್ತು ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿ ಇವರು ಕಾರ್ಯನಿರ್ವಹಿಸಿದ್ದರು. ಅನಂತರ ನ್ಯಾಷನಲ್ ಬುಕ್ ಟ್ರಸ್ಟಿನ ನಿರ್ದೇಶಕ (1971) ಆಗಿದ್ದರು. ಇದಾದ ನಂತರ 1971ರಲ್ಲಿ ಜನಸಂಘದ ಅಭ್ಯರ್ಥಿಯಾಗಿ ಸಂಸತ್ತಿನ ಚುನಾವಣೆಗೆ ಸ್ಪರ್ಧಿಸಿದ್ದರು. ಸಿಮ್ಲಾದ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡೀಸ್‍ನಲ್ಲಿ ರಿಸರ್ಚ್ ಫೆಲೋ ಆಗಿ ಕೆಲಸಮಾಡಿದರು.

ಸಾಕ್ಷಿ ಎಂಬ ತ್ರೈಮಾಸಿಕವನ್ನು ಕೆಲಕಾಲ ನಡೆಸಿದ ಇವರು ಕನ್ನಡದಲ್ಲಿ ಶ್ರೇಷ್ಠ ಕವನಗಳನ್ನೂ ವಿಮರ್ಶಾಕೃತಿಗಳನ್ನೂ ಬರೆದಿದ್ದಾರೆ. ಇವರ ಸೇವೆಗೆ ಮೆಚ್ಚಿ ಹಲವಾರು ಪ್ರಶಸ್ತಿಗಳು ಬಂದಿವೆ. ರಾಜ್ಯ ಸರಕಾರ ‘ವರ್ಧಮಾನ’ ಕವನ ಸಂಕಲನಕ್ಕೆ ಪ್ರಶಸ್ತಿ (1973), ಕೇಂದ್ರ ಸರಕಾರದ ಪ್ರಶಸ್ತಿ (1974), ಕರ್ನಾಟಕ ಸರಕಾರ ಪಂಪ ಪ್ರಶಸ್ತಿ (1993), ಮಧ್ಯಪ್ರದೇಶ ಸರಕಾರದ ಕಬೀರ್ ಸನ್ಮಾನ ಪ್ರಶಸ್ತಿ ಇವರಿಗೆ ಲಭಿಸಿತ್ತು. 1979ರಲ್ಲಿ ಧರ್ಮಸ್ಥಳದಲ್ಲಿ ನಡೆದ 51ನೇ ಕನ್ನಡ ಸಾಹಿತ್ಯ ಸಮ್ಮೇಳನ (1979) ಅಧ್ಯಕ್ಷತೆ ವಹಿಸಿದ್ದರು. ಅಡಿಗರು 1992ರ ನವೆಂಬರ್ 14ರಂದು ನಿಧನರಾದರು.

ಮುಖ್ಯ ಕೃತಿಗಳು: ಭಾವತರಂಗ, ಕಟ್ಟುವೆವು ನಾವು, ನಡೆದುಬಂದ ದಾರಿ, ಭೂಮಿಗೀತ, ಚಂಡಮದ್ದಲೆ, ವರ್ಧಮಾನ ಇತ್ಯಾದಿ ಕವನಸಂಕಲಗಳು. ಅನಾಥೆ, ಆಕಾಶದೀಪ (ಕಾದಂಬರಿಗಳು), ಮಣ್ಣಿನ ವಾಸನೆ, ವಿಚಾರಪಥ, ಕನ್ನಡದ ಅಭಿಮಾನ (ಗದ್ಯ ಲೇಖನಗಳು), ಹುಲ್ಲಿನ ದಳಗಳು, ಭೂಗರ್ಭಯಾತ್ರೆ, ಇತಿಹಾಸಚಿತ್ರ (ಅನುವಾದಗಳು).

ಎಂ. ಗೋಪಾಲಕೃಷ್ಣ ಅಡಿಗ

(18 Feb 1918-14 Nov 1992)

Awards

BY THE AUTHOR

ABOUT THE AUTHOR