About the Author

ಕವಿ, ವಿಮರ್ಶಕ ಮುಳಿಯ ತಿಮ್ಮಪ್ಪಯ್ಯನವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮುಳಿಯ ಗ್ರಾಮದಲ್ಲಿ. ಮನೆಯಲ್ಲಿಯೇ ಕುಳಿತು ಸಂಸ್ಕೃತ ಕಲಿತ ಅವರು ಸಂಸ್ಕೃತಾಭ್ಯಾಸವನ್ನು ಮುಂದುವರೆಸಲು ತಿರುವಾಂಕೂರು ಹಾಗೂ ಮೈಸೂರಿಗೆ ಪ್ರಯಾಣ ಮಾಡಿದರು. 1911ರಲ್ಲಿ ಮಂಗಳೂರಿನ ಕೆನರಾ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿದ್ದರು. ಮುದ್ದಣನ ರಾಮಾಶ್ವಮೇಧ ಚೌಕಟ್ಟಿನಲ್ಲಿ ಮೂಡಿ ಬಂದ ಕೃತಿ ‘ಚಂದ್ರಾವಳಿ ವಿಲಾಸ.’ ಭಾಗವತದಲ್ಲಿ ಬರುವ ಶಂಭಾಸುರನ ಕಥೆಯಾಧಾರಿತ ಹಳೆಗನ್ನಡದ ಛಂದಸ್ಸಿನಲ್ಲಿ ಮೂಡಿ ಬಂದದ್ದು ‘ಸೊಬಗಿನ ಬಳ್ಳಿ.’ ಕರ್ಣನ ಕುರಿತಾದ ಗದ್ಯ ಕಥನ ನಡೆಯನಾಡು-ಮಹಾಭಾರತದ ಕಥೆ ಆಧಾರಿತ. ಪ್ರೇಮಪಾಶವೆಂಬ ಮತ್ತೊಂದು ಕೃತಿ, ನೀತಿ ವಾಕ್ಯ ಆಧಾರಿತ ಕಾಲ್ಪನಿಕ ಕಥನ ಕಾವ್ಯ. ಬಾಲ್ಯದಿಂದಲೇ ತೊರವೆ ರಾಮಾಯಣಕ್ಕೆ ಮಾರು ಹೋಗಿ ರಚಿಸಿದ ಕೃತಿ ‘ನವನೀತ ರಾಮಾಯಣ’. ಪಶ್ಚಾತ್ತಾಪ ಮತ್ತು ವೀರ ಬಂಕೇಯ ಎಂಬ ಎರಡು ಕಾದಂಬರಿ ರಚಿಸಿದ್ದಾರೆ. ಪಶ್ಚಾತ್ತಾಪ ಅವರ ಸಾಮಾಜಿಕ ಕಾದಂಬರಿ. ವೀರ ಬಂಕೇಯ ಐತಿಹಾಸಿಕ ವಸ್ತುವುಳ್ಳ ಕಾದಂಬರಿ. ದಕ್ಷಿಣ ಕನ್ನಡ ಜಿಲ್ಲೆಯವರಾದ್ದರಿಂದ ಯಕ್ಷಗಾನದಲ್ಲಿ ಬಹು ಆಸಕ್ತಿ ಹೊಂದಿದ್ದರು. ’ಪಾರ್ತಿಸುಬ್ಬ’, ‘ಸೂರ‍್ಯಕಾಂತಿ ಕಲ್ಯಾಣ’ ಯಕ್ಷಗಾನ ಕೃತಿಗಳಾಗಿವೆ. ‘ಹಗಲಿರುಳು’ ಇವರು ರಚಿಸಿದ ನಾಟಕ.  ಪಂಪನನ್ನು ಕುರಿತ ಸಂಶೋಧನಾ ಕೃತಿ ‘ನಾಡೋಜ ಪಂಪ’. ಇದರ ಜೊತೆಗೆ ಇವರ ಉಪನ್ಯಾಸಗಳು ಹಾಗೂ ಲೇಖನಗಳು ಗ್ರಂಥ ರೂಪದಲ್ಲಿ ಪ್ರಕಟಗೊಂಡಿವೆ. 1931ರಲ್ಲಿ ಕಾರವಾರದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಗೌರವ ಸಂದಿದೆ. 1950ರಲ್ಲಿ ನಿಧನರಾದರು. 

ಮುಳಿಯ ತಿಮ್ಮಪ್ಪಯ್ಯ

(03 Mar 1888-04 Jan 1950)