About the Author

ಪ್ರಾಚೀನ ಸಾಹಿತ್ಯದಲ್ಲಿ ಬಹು ಆಸ್ಥೆ ಹೊಂದಿದ್ದ ಎನ್‌ ಅನಂತ ರಂಗಾಚಾರ್‌ರವರು ಹುಟ್ಟಿದ್ದು ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರದಲ್ಲಿ. ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ. ಎನ್.ಎಸ್. ಸುಬ್ಬರಾವ್, ಎಂ. ಹಿರಿಯಣ್ಣ, ಎ.ಆರ್. ವಾಡಿಯಾ ಇವರ ಗುರುಗಳು. ‘ಮಲ್ಲಿಕಾರ್ಜುನರ ಸೂಕ್ತಿ ಸುಧಾರ್ಣವ’ ಗ್ರಂಥವನ್ನು ಅಚ್ಚುಕಟ್ಟಾಗಿ ಸಂಶೋಧಿಸಿ ಸಂಕಲಿಸಿ ಅಕಾರಾದಿಯಾಗಿ ಪ್ರಕಟಿಸಿದ್ದಾರೆ. ಹಲವಾರು ಕೈಬರಹದ ಗ್ರಂಥಗಳ ಸಂಶೋಧನೆಗೆ ಮುಂದಾಗಿ ದೇಶದ ಒಳಗೂ ಹೊರಗೂ ಸಂಚಾರ ಕೈಗೊಂಡರು. ಇವರ ಪ್ರಮುಖ ಕ್ಷೇತ್ರ ಗ್ರಂಥ ಸಂಪಾದನೆ, ಸಂಶೋಧನೆ, ಸಾಹಿತ್ಯ ಚರಿತ್ರೆ ರಚನೆಗಳು. ಸೂಕ್ತಿ”ಸುಧಾರ್ಣವ’ದ 2000 ಪದ್ಯಗಳಿಗೆ, ಕಾವ್ಯಸಾರದ 3500 ಪದ್ಯಗಳಿಗೆ ತುಲನಾತ್ಮಕವಾಗಿ, ಕ್ರೋಢಿಕರಿಸಿ ಅಕಾರಾದಿಯನ್ನು ಗುರುತಿಸಿ, ಆಕರ ಗ್ರಂಥವನ್ನಾಗಿ ಮಾಡಿದರು. ಅವರ ಮತ್ತೊಂದು ಪ್ರಮುಖ ಗ್ರಂಥವೆಂದರೆ “ಕನ್ನಡ ಚಂಪೂ ಕಾವ್ಯಗಳ ಪದ್ಯಾನುಕ್ರಮಣಿಕೆ.” ದುರ್ಗಸಿಂಹನ ಪಂಚತಂತ್ರ ಕೃತಿಗೆ ಸಾಹಿತ್ಯ ಅಕಾಡಮಿಯ ಬಹುಮಾನ, ಕಾವ್ಯಸಾರ ಕೃತಿಗೆ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ಲಭಿಸಿದೆ. ಅವರು ರಚಿಸಿದ ಸಾಹಿತ್ಯ ಚರಿತ್ರೆ ‘ಸಾಹಿತ್ಯ ಭಾರತೀ’ ಮಹಾಪ್ರಬಂಧಕ್ಕೆ ಡಿ.ಲಿಟ್ ಪದವಿ ದೊರೆತಿದೆ.

ಎನ್‌. ಅನಂತರಂಗಾಚಾರ್‌

(23 May 1906-28 Oct 1997)