About the Author

ಪಂಚಾಕ್ಷರಿ ಹಿರೇಮಠ ಅವರು 1933ರ ಜನೆವರಿ 6 ರಂದು ರಾಯಚೂರು ಜಿಲ್ಲೆಯ ಕೊಪ್ಪಳ ತಾಲೂಕಿನ ಬಿಸರಹಳ್ಳಿಯಲ್ಲಿ ಜನಿಸಿದರು. ತಾಯಿ ಬಸಮ್ಮ; ತಂದೆ ವೇದಮೂರ್ತಿ ಮಲಕಯ್ಯ. 2 ವರ್ಷದವರಿದ್ದಾಗ ಪಂಚಾಕ್ಷರಿ ತಮ್ಮ ತಂದೆಯನ್ನು ಕಳೆದುಕೊಂಡರು. 
ಬಿಸರಹಳ್ಳಿಯಲ್ಲಿ ಆರಂಭಿಕ ಶಿಕ್ಷಣ, ನಂತರ ಕೊಪ್ಪಳಕ್ಕೆ ಬಂದರು. ಭಾರತ ಸ್ವತಂತ್ರವಾದರೂ ಸಹ ನಿಜಾಮಶಾಹಿ ಆಳ್ವಿಕೆಯಲ್ಲಿದ್ದ ಕೊಪ್ಪಳದಲ್ಲಿ ದಬ್ಬಾಳಿಕೆ ನಡೆದಿತ್ತು. ಸ್ವಾಮಿ ರಮಾನಂದ ತೀರ್ಥರ ಮುಂದಾಳುತ್ವದಲ್ಲಿ  ಹೈ-ಕ ವಿಮೋಚನಾ ಚಳವಳಿ ಆರಂಭವಾಗಿತ್ತು. ವಿಮೋಚನೆಯಾದ ಬಳಿಕ ಬಿಸರಹಳ್ಳಿಗೆ ಮರಳಿದ ಪಂಚಾಕ್ಷರಿ ಅವರು ಕೊಪ್ಪಳ, ಕಲಬುರಗಿ ಸುತ್ತಾಡಿ ಕೊನೆಗೆ ಧಾರವಾಡಕ್ಕೆ ಬಂದರು.

ಅವರು ಸ್ವಾಧ್ಯಾಯ ಬಲದಿಂದಲೇ ಸ್ನಾತಕೋತ್ತರ ಪದವಿ ಪಡೆದರು. 1985ರಲ್ಲಿ ಅಮೆರಿಕೆಯ ಅರಿಝೋನಾ ಜಾಗತಿಕ ವಿಶ್ವವಿದ್ಯಾಲಯದಿಂದ ಡಿ.ಲಿಟ್ ಪದವಿಯನ್ನು ಪಡೆದ ಪ್ರಥಮ ಕನ್ನಡಿಗರು

ಪತ್ರಕರ್ತರಾಗಿ, ಪ್ರಕಾಶಕರಾಗಿ, ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ಕನ್ನಡ, ಉರ್ದು, ಹಿಂದಿ, ಗುಜರಾತಿ  ಭಾಷೆಯಲ್ಲೂ ಸಾಹಿತ್ಯ ರಚಿಸಿದ್ದಾರೆ. ಮಾತ್ರವಲ್ಲ; ರಷ್ಯಾ, ಜಾರ್ಜಿಯಾ ಹಾಗೂ ಉಝೇಕಿಸ್ತಾನ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕರ್ನಾಟಕ ವಿ.ವಿ.ಯಲ್ಲಿ ಪ್ರಾಧ್ಯಾಪಕರಾಗಿ ನಂತರ 1993ರಲ್ಲಿ ಸೇವಾ ನಿವೃತ್ತಿ ಪಡೆದರು.

ಪಂಚಾಕ್ಷರಿ ಹಿರೇಮಠ ಅವರ ಕತೆಯು ಕೋರಿಯಾದಿಂದ ಪ್ರಕಾಶಿತವಾದ Asian Literature ಪುಸ್ತಕದಲ್ಲಿ ಸ್ಥಾನ ಪಡೆದಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಎನ್.ಬಿ.ಟಿ.ಗಾಗಿ ಅವರು ಅನೇಕ ಪುಸ್ತಕಗಳನ್ನು ಅನುವಾದಿಸಿದ್ದಾರೆ. 1954 ರಿಂದಲೇ ಹಿರೇಮಠ ಅವರು ಆಕಾಶವಾಣಿಯಲ್ಲಿ ಹಾಗೂ ದೂರದರ್ಶನದಲ್ಲಿ ಭಾಷಣ, ಕಾವ್ಯವಾಚನ, ನಾಟಕ, ಸಂದರ್ಶನ ಗಳಲ್ಲಿ ಭಾಗವಹಿಸಿದ್ದಾರೆ. ಗ್ರೀಸ್, ಕೋರ್ಪೂದಲ್ಲಿ ನಡೆದ ವಿಶ್ವ ಕವಿಗಳ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಈಜಿಪ್ತ್ ಗೆ ಹೋದಾಗ ಅಲ್ಲಿಯ ರೇಡಿಯೋ ಇವರ ಸಂದರ್ಶನ ಮಾಡಿ ಕವಿತೆಗಳನ್ನು ಪ್ರಸಾರ ಮಾಡಿತ್ತು. 'ಮಿತ್ರದೇಶದ ಕವಿತೆಗಳು ’ (1988) ಈ ಕವನಸಂಕಲನಕ್ಕೆ ದಿ. ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ ದೊರಕಿದೆ. 

ಚೈತ್ಯಾಕ್ಷಿ, ನೀ ರುದ್ರನಾಗು, ಗಾಳಿ-ಗಂಧ, ಮಿತ್ರದೇಶದ ಕವಿತೆಗಳು (ಕವನ ಸಂಕಲನಗಳು) , ರವೀಂದ್ರ ರವೀಂದ್ರರು, ಕವಿ-ಕಾವ್ಯ-ಕಲ್ಪನೆ, ಕವಿ-ಕಾವ್ಯ-ಚಿಂತನ, ಚೆಲುವಿನ ಅಲೆಗಳು, ಹದಿನಾರು ಪ್ರಬಂಧಗಳು, ಜ್ಞಾನಪೀಠ ಪ್ರಶಸ್ತಿ ವಿಜೇತ- 'ಫಿರಾಕ್ ' ಗೋರಖಪುರಿ, ಮಹಾಯೋಗಿನಿ ಲಲ್ಲೇಶ್ವರಿ, ಭೂದಾನ, ಆರ್.ಸಿ.ಭೂಸನೂರಮಠ (ಸಂ), ಉರ್ದು ಸಾಹಿತ್ಯ-ಒಂದು ಪರಿಚಯ(ಪ್ರಬಂಧ/ವಿಮರ್ಶೆಗಳು) , ಈ ಬದುಕು ಬಂಗಾರ, ಏನೆಂಥ ಮಧುರವೀ ಬದುಕು (ಕರಂದೀಕರ ಸಾಹಿತ್ಯ ಬಹುಮಾನ ಪಡೆದಿದೆ).-ಇವು ಪತ್ರ ಸಾಹಿತ್ಯಗಳು, ಹಾನಗಲ್ಲ ಕುಮಾರಸ್ವಾಮಿಗಳು, ವಿಜಯ ಮಹಾಂತ ಸ್ವಾಮಿಗಳು, ಪುಣ್ಯಚಿತ್ತರು-ಜೀವನ ಚರಿತ್ರೆಗಳು, ಚಾಕ್ಲೆಟ್ ಮತ್ತು ಇತರ ಕತೆಗಳು, ನೀತಿ ಕತೆಗಳು-ಮಕ್ಕಳ ಸಾಹಿತ್ಯ, ಮಣಿಮುಕುರ ಪ್ರಭೆ, ಶಿವಯೋಗ, ಶಿವಲಿಂಗದೀಪ್ತಿ, ಗವಿದೀಪ್ತಿ (ಇತರರೊಡನೆ), ಶಿವದೇವ ( ಇತರರೊಡನೆ), ಪದ್ಮಶ್ರೀ (ಇತರರೊಡನೆ) -ಇವು ಸಂಪಾದಿತ ಕೃತಿಗಳು,

ಅವರ ಅನುವಾದ ಸಾಹಿತ್ಯವಂತೂ ವಿಫುಲ; ಬಯಲ ಬಾನಿನಲ್ಲಿ (ಹಿಂದಿ/ಕವನ), ಕಾಶ್ಮೀರದ ಹೂ (ಉರ್ದು/ಕಥೆ), ಮಗ್ಗ ಚೆಲ್ಲಿದ ಬೆಳಕು (ಹಿಂದಿ/ಕಾದಂಬರಿ), ಬೋರಬನ್ ಕ್ಲಬ್ (ಉರ್ದು/ಕಾದಂಬರಿ), ಕಪ್ಪು ಹೊತ್ತಗೆ (ಗುಜರಾತಿ/ ಕಾದಂಬರಿ), ಪುರಾತನ ಲಖನೌ (ಉರ್ದು/ಇತಿಹಾಸ), ಮೂರು ಪಂಜಾಬಿ ನಾಟಕಗಳು (ಪಂಜಾಬಿ/ನಾಟಕ) ಸೇರಿದಂತೆ ಸುಮಾರು 21ಕ್ಕೂ ಅಧಿಕ ಕೃತಿಗಳನ್ನು ಅನುವಾದಿಸಿದ್ದಾರೆ.

ಪಂಚಾಕ್ಷರಿ ಹಿರೇಮಠ

(06 Jan 1933)