About the Author

‘ವಚನ ಪಿತಾಮಹ’ ಎಂದೇ ಪ್ರಸಿದ್ಧರಾದ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಹನ್ನೆರಡನೇ ಶತಮಾನದ ವಚನ ಸಾಹಿತ್ಯವನ್ನು ಬೆಳಕಿಗೆ ತಂದವರು. ಧಾರವಾಡದಲ್ಲಿ 1880ರ ಜುಲೈ 2ರಂದು ಜನಿಸಿದರು. ತಂದೆ ಗುರುಬಸಪ್ಪ, ತಾಯಿ ದಾನಾದೇವಿ. ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು ನಂತರ ಉನ್ನತ ಶಿಕ್ಷಣವನ್ನು ಮುಂಬಯಿನಲ್ಲಿ ಪಡೆದರು. 1904ರಲ್ಲಿ ಎಲ್ಎಲ್ ಬಿ ಪದವಿ ಪಡೆದ ನಂತರ ವಕೀಲಿ ವೃತ್ತಿ ಆರಂಭಿಸಿದರು.
1923ರಲ್ಲಿ ಬಿಜಾಪುರದಲ್ಲಿ ಸರ್ಕಾರಿ ವಕೀಲರಾಗಿ ನೇಮಕಗೊಂಡ ಅವರು ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಯಾಗಿದ್ದರು. ಮುಂಬಯಿ ವಿಧಾನಸಭಾ ಸದಸ್ಯರೂ ಆಗಿ ಆಯ್ಕೆಯಾಗಿದ್ದರು. ಜಿಲ್ಲಾ ಗ್ರಾಮಾಂತರ ಅಭಿವೃದ್ಧಿ ಮಂಡಳಿಯು ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದರು.
ಬಿಜಾಪುರದಲ್ಲಿ ಕನ್ನಡ ಶಾಲೆಗಳ ಪ್ರಗತಿಗಾಗಿ ಶ್ರಮಿಸಿದ ಅವರು ಶಿವಾನುಭವ ಪತ್ರಿಕೆ (1926) ಪ್ರಾರಂಭಿಸಿದರು. ನಂತರ ಕರ್ನಾಟಕ (1928) ವಾರಪತ್ರಿಕೆ ಆರಂಭಿಸಿದರು. ವೀರಶೈವ ಶಿಕ್ಷಣ ಫಂಡ್ ವೀರಶೈವ ವಿದ್ಯಾವರ್ಧಕ ಸಂಘ, ಸಿದ್ಧೇಶ್ವರ ಬ್ಯಾಂಕ್ ಮೊದಲಾದ ಸಂಸ್ಥೆಗಳನ್ನು ಸ್ಥಾಪಿಸಿದರು.
ಪರಿಷತ್ತಿನ ಸ್ಥಾಪಕವರ್ಗದಲ್ಲಿ ಒಬ್ಬರಾದ ಇವರು ಪರಿಷತ್ತಿನ ಆಜೀವಸದಸ್ಯರಾಗಿ ಜೀವನ ಪರ್ಯಂತ ಶ್ರಮಿಸಿದರು. ಬ್ರಿಟಿಷ್ ಸರ್ಕಾರ ಇವರಿಗೆ ರಾವ್ ಬಹದ್ದೂರ್, ರಾವ್ ಸಾಹೇಬ್ ಪ್ರಶಸ್ತಿ ನೀಡಿತ್ತು. ಮರಾಠಿ ಪ್ರಭಾವ ಇರುವ ಪ್ರದೇಶಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಕನ್ನಡ ಪ್ರಾಥಮಿಕ ಶಾಲೆಗಳನ್ನು ತೆರೆದರು. ಕರ್ನಾಟಕ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ (1956) ನೀಡಿತು. ಬಳ್ಳಾರಿಯಲ್ಲಿ ನಡೆದ 12 ಕನ್ನಡ ಸಾಹಿತ್ಯ ಸಮ್ಮೇಳನದ (1926) ಅಧ್ಯಕ್ಷತೆ ವಹಿಸಿದ್ದರು. ಧಾರವಾಡದಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭೆ (1933)ಯ ಅಧ್ಯಕ್ಷರಾಗಿದ್ದರು. ಅವರು 1964ರ ಜೂನ್ 27ರಂದು ನಿಧನರಾದರು.
ವಚನಶಾಸ್ತ್ರಸಾರ (3 ಭಾಗಗಳು), 770 ಅಮರ ಗಣಾಧೀಶ್ವರ ಚರಿತ್ರೆಗಳು, ಶಿವಶರಣ ಕೃತಿಗಳು, ಬಸವೇಶ್ವರ ವಚನಗಳು ಮೊದಲಾದ ಶಿವಶರಣರ ವಚನಸಂಗ್ರಹಗಳು, ಶಿವಾನುಭವ ಶಬ್ದಕೋಶ, ಶೂನ್ಯ ಸಂಪಾದನೆ, ದೇವರ ದಾಸಿಮಯ್ಯ, ವಚನ ಮೊದಲಾದ 60 ಗ್ರಂಥಗಳು, ಕೆಳದಿ ಸಂಸ್ಥಾನದ ರಾಯರ ವಂಶಾವಳಿ, ಕೊಡಗು ಸಂಸ್ಥಾನದ ರಾಜೆಂದ್ರನಾಮೆ' ಅವರ ಪ್ರಮುಖ ಕೃತಿ.

ಫ.ಗು. ಹಳಕಟ್ಟಿ

(02 Jul 1880-29 Jun 1964)