About the Author

ಖ್ಯಾತ ರಂಗಕರ್ಮಿ ಪ್ರಸನ್ನ ‌ಅವರು ಜನಿಸಿದ್ದು ಮಾರ್ಚ್ 23, 1951 ರಂದು ಶಿವಮೊಗ್ಗ ಜಿಲ್ಲೆಯ ಆನವಟ್ಟಿಯಲ್ಲಿ. ತಂದೆ ಪ್ರಹ್ಲಾದಾಚಾರ್ಯ, ತಾಯಿ ಹೇಮಾವತಿ ಬಾಯಿ. ಸೆಂಟ್ರಲ್ ಕಾಲೇಜಿನಿಂದ ಎಂ.ಎಸ್ಸಿ. ಪದವಿ ಪಡೆದವರು. 

ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ ಶಾಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರವಾದರು.  ಪ್ರಸನ್ನರು ದೆಹಲಿಯ ನಾಟಕ ಶಾಲೆಯಲ್ಲಿದ್ದ ದಿನಗಳಲ್ಲಿ ನಿರ್ದೇಶಿಸಿದ ನಾಟಕಗಳಲ್ಲಿ ಗಾಂಧಿ, ಉತ್ತರ ರಾಮಚರಿತಂ, ಅಗ್ನಿ ಔರ್ ಬರ್ ಕಾ, ಫ್ಯೂಜಿಯಾಮ ಪ್ರಮುಖವಾದವು. ಇಂಗ್ಲಿಷ್, ಹಿಂದಿ, ಕನ್ನಡ ಭಾಷೆಗಳ ಮೇಲೆ ಅವರು ಪ್ರಭುತ್ವ ಸಾಧಿಸಿದ್ದರು. ರಾಷ್ಟ್ರೀಯ ನಾಟಕಶಾಲೆಯಲ್ಲಿ ಕೆಲಕಾಲ ಬೋಧನೆ ಮಾಡಿ, ರಂಗಭೂಮಿ ಅಧ್ಯಯನಕ್ಕಾಗಿ ರಷ್ಯ, ಜರ್ಮನಿ ಮುಂತಾದ ಕಡೆಗಳಲ್ಲಿ ಪ್ರವಾಸ ಕೈಗೊಂಡರು. ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಎಡಪಂಥೀಯ ವಿಚಾರ ಧಾರೆಗೆ ಪ್ರಾಶಸ್ತ್ಯ ನೀಡಿದ ಪ್ರಸನ್ನರಿಂದ ಮೂಡಿಬಂದದ್ದು ‘ಸಮುದಾಯ’ ತಂಡ. ರಾಜ್ಯಾದ್ಯಂತ ಅದರ ಶಾಖೆಗಳು ಮೂಡಿದವು. ನಾಟಕ, ಜಾಥಾ, ಕಲಾ ಮೇಳಗಳ ಮೂಲಕ ಅವರು ಜನಾಂದೋಲನವನ್ನು ಕೈಗೊಂಡರು. ಕಾರ್ಮಿಕರು, ಪ್ರಗತಿಪರ ಚಿಂತಕರು, ಸಾಹಿತಿ-ಕಲಾವಿದರನ್ನು ಒಗ್ಗೂಡಿಸಲು ವೇದಿಕೆ ಸ್ಥಾಪಿಸಿದ್ದೇ ಅಲ್ಲದೆ, ಜಡ್ಡುಗಟ್ಟಿದ ಸಾಮಾಜಿಕ ವ್ಯವಸ್ಥೆಯ ಪರಿವರ್ತನೆಗೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದರು.

ಪ್ರಸನ್ನರು ನಿರ್ದೇಶಿಸಿದ ಪ್ರಮುಖ ನಾಟಕಗಳಲ್ಲಿ ತುಘಲಕ್, ಗೆಲಿಲಿಯೋ, ಹುತ್ತವ ಬಡಿದರೆ, ತದ್ರೂಪಿ, ಕದಡಿದ ನೀರು, ತಾಯಿ, ದಂಗೆಯ ಮುಂಚಿನ ದಿನಗಳು, ಹ್ಯಾಮ್ಲೆಟ್ ,ಮುಂತಾದವುಗಳು. ನೌಟಂಕಿ, ಸ್ವಯಂವರ, ನಾಶವಾಯ್ತೆ ಲಂಕಾದ್ರಿಪುರ ಮುಂತಾದ ಕಾದಂಬರಿಗಳನ್ನು ಕೂಡಾ ರಚಿಸಿದ್ದಾರೆ.ಸಂಘಟನಾ ಚತುರತೆ, ಹೊಸ ಚಿಂತನೆ ಮತ್ತು ಸೃಜನಶೀಲತೆಗಳಿಗಾಗಿ ಪ್ರಸನ್ನರು ಹೆಸರಾಗಿದ್ದಾರೆ.ಪ್ರಸನ್ನ ಅವರು ಹೆಗ್ಗೋಡಿನಲ್ಲಿ ನೆಲೆಸಿ ಕವಿ-ಕಾವ್ಯ ಟ್ರಸ್ಟ್ ಆಶ್ರಯದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿದರಲ್ಲದೆ. ಋಜುವಾತು ಪತ್ರಿಕೆಗೆ ಹೊಸರೂಪ ನೀಡಿದರು. ಗುಡಿ ಕೈಗಾರಿಕೆಗೆ ಪ್ರೋತ್ಸಾಹ, ಗ್ರಾಮೀಣ ಕುಶಲ ಕರ್ಮಿಗಳ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಜಯನಗರ ಸೌತ್ ಎಂಡ್ ಸರ್ಕಲ್, ಗಿರಿನಗರದ ಪ್ರವೇಶ ದ್ವಾರದ ಬಳಿ ‘ದೇಸಿ’ ಅಂಗಡಿ ಪ್ರಾರಂಭಿಸಿದರಲ್ಲದೆ, ಗ್ರಾಮೀಣ ಕುಶಲ ಕರ್ಮಿಗಳಿಗೆ ಕಲ್ಯಾಣನಿಧಿಯನ್ನು ಸ್ಥಾಪಿಸಿದರು.

ಸಂಗೀತ ನಾಟಕ ಅಕಾಡಮಿ ಫೆಲೋಷಿಪ್, ರಂಗಭೂಮಿ ಅಧ್ಯಯನಕ್ಕಾಗಿ ಭಾರತ ಭವನ್ ಫೆಲೋಷಿಪ್, ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯ ನಾಟಕ ಅಕಾಡಮಿ ಬಹುಮಾನ, ಪು.ತಿ.ನ. ಟ್ರಸ್ಟ್ ಪುರಸ್ಕಾರ, ಚದುರಂಗ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿಇನ್ನೂ ಅನೇಕ ಗೌರವ ಪುರಸ್ಕಾರಗಳಿಗೆ ಪ್ರಸನ್ನ ಅವರು ಭಾಜನರಾಗಿದ್ದಾರೆ. 

ಪ್ರಸನ್ನ

(23 Mar 1951)