ದಾಂಪತ್ಯ ಜೀವನವೇ ಒಂದು ಹೂಮಂಚ:  ರಜನಿ ಭಟ್ ಪೆರ್ವೋಡಿ


"ತಾಳ್ಮೆಯಿಂದ, ಕಾಳಜಿಯಿಂದ ಪರಸ್ಪರ ಹೊಂದಿಕೊಂಡು ನಡೆದರೆ ದಾಂಪತ್ಯ ಜೀವನವೇ ಒಂದು ಹೂಮಂಚ. ಹೂ ಮಂಚವನ್ನು ಮುಳ್ಳಿನ ಮಂಚವಾಗಿಸದೆ, ಸಹನೆಯ ನಡತೆಯಿಂದಾಗಿ ಸದಾ ಮನಸಿನಲಿ ಉಳಿಯುವ ಪಾತ್ರ ‘ವರುಣ್’ ನದ್ದು" ಎನ್ನುತ್ತಾರೆ ರಜನಿ ಭಟ್ ಪೆರ್ವೋಡಿ. ಅವರು ಲೇಖಕಿ ಚಿತ್ರಲೇಖ ಅವರ ‘ಹೂಮಂಚ’ ಕಾದಂಬರಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ...

ತಾಳ್ಮೆಯಿಂದ, ಕಾಳಜಿಯಿಂದ ಪರಸ್ಪರ ಹೊಂದಿಕೊಂಡು ನಡೆದರೆ ದಾಂಪತ್ಯ ಜೀವನವೇ ಒಂದು ಹೂಮಂಚ. ಹೂ ಮಂಚವನ್ನು ಮುಳ್ಳಿನ ಮಂಚವಾಗಿಸದೆ ಸಹನೆಯ ನಡತೆಯಿಂದಾಗಿ ಸದಾ ಮನಸಿನಲಿ ಉಳಿಯುವ ಪಾತ್ರ "ವರುಣ್" ನದ್ದು. ಟ್ಯಾಕ್ಸ್ ಆಫೀಸರ್ ಆದ ಕೇಶವರಾಯರದು ತಮ್ಮ ತಾಯಿ "ಮಂಗಳಮ್ಮ" ಪತ್ನಿ "ಸುಗುಣಮ್ಮ" ಮತ್ತು ಮೂವರು ಮಕ್ಕಳೊಂದಿಗೆ ಸುಖವಾದ ಸಂಸಾರ. ಮಕ್ಕಳು "ಆರತಿ", "ವಸುಮತಿ " ಮತ್ತು "ಕೃತಿಕಾ". ಅವರ ಹೆಸರುಗಳನ್ನು ಕ್ರಮವಾಗಿ "ರತಿ" "ಮತಿ" ಮತ್ತು "ಕೃತಿ" ಎಂದು ಮೊಟಕುಗೊಳಿಸಲಾಯಿತು.

ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಉತ್ತಮ ಮನೆಗಳಿಗೆ ಸೇರಿಸುವುದೇ ಅವರ ಉದ್ದೇಶ. ರತಿ ಕೊನೆಯ ಹಂತದ ಬಿ. ಎ. ತರಗತಿಯಲ್ಲಿರುವಾಗ ಅವಳ ಅಜ್ಜಿ "ಮಂಗಳಮ್ಮ"ನ ಆರೋಗ್ಯ ಕೆಡುತ್ತದೆ. ಅವರಿಗೆ ರತಿಯ ಮದುವೆ ನೋಡುವ ಆಸೆ. ಆದುದರಿಂದ ಕೇಶವರಾಯರು ವರನ ಅನ್ವೇಷಣೆಗೆ ತೊಡಗಿದ್ದರು. ಭವಿಷ್ಯದ ಸುಂದರ ಕನಸುಗಳನ್ನು ಹೊತ್ತು ಕೊನೆಯ ಪರೀಕ್ಷೆ ಮುಗಿಸಿ ಸಿನಿಮಾ ನೋಡಿ ಬರುವಾಗ ಜೋರಾದ ಮಳೆ ಬಂದು ಬಸ್ ಸಿಗದೆ ಆಟೋ ದಲ್ಲಿ ಹಿಂದಿರುಗುವಾಗ ಆಟೋ ಡ್ರೈವರ್ ನ ಕಾಮುಕ ದಾಳಿಗೆ ಬಲಿಯಾಗಿ ರತಿಯ ಬಾಳು "ಕತ್ತಲಾಯಿತು".

ಮನೆಗೆ ಬಂದು ವಿಷಯ ತಿಳಿಸಿದಾಗ ಎಲ್ಲರೂ ಕಂಗಾಲಾದರೂ ಕೇಶವರಾಯರು ಧೈರ್ಯ ತಂದುಕೊಂಡು ವಿಷಯ ಬೇರೆ ಯಾರಿಗೂ ತಿಳಿಸಬಾರದಾಗಿ ಆದೇಶಿಸಿದರು. ಕೇಶವರಾಯರು ತ್ವರಿತವಾಗಿ ಗೋಪಾಲಸ್ವಾಮಿ ಹಾಗೂ ನಳಿನಾಕ್ಷಮ್ಮನವರ ಏಕ ಮಾತ್ರ ಪುತ್ರ ಇಂಜಿನಿಯರ್ ಆಗಿದ್ದ "ವರುಣ್" ನ ಜೊತೆ ಮಗಳ ಮದುವೆ ನಿಶ್ಚಯ ಮಾಡುತ್ತಾರೆ. ಆದರೆ ರತಿಗೆ ಆದ ಕೆಟ್ಟ ಘಟನೆಯನ್ನು ಮುಚ್ಚಿಡುತ್ತಾರೆ.

ರತಿ ಈ ಮದುವೆ ತನಗೆ ಬೇಡವೆಂದು ಗೋಗರೆದರೂ ಕೇಶವರಾಯರು ತಮ್ಮ ತಾಯಿಯ ಅನಾರೋಗ್ಯದ ನೆವ ಹೂಡಿ ಅವಳನ್ನು ಮದುವೆಗೆ ಒಪ್ಪಿಸುತ್ತಾರೆ. ಮದುವೆಯ ಮೊದಲ ರಾತ್ರಿಯ "ಹೂಮಂಚ" ದಲ್ಲಿ ಅವರು ಜೊತೆಯಾಗುವುದಿಲ್ಲ. ರತಿ ತಾನು ಪುರುಷರನ್ನು ದ್ವೇಷಿಸುವುದಾಗಿ ನುಡಿದು ತನ್ನ ಬಾಳಿನಲ್ಲಿ ನಡೆದ ಘಟನೆಯನ್ನು ಪ್ರಾಮಾಣಿಕವಾಗಿ ವರುಣ್ ಗೆ ತಿಳಿಸಿ ಅವನಿಂದ ದೂರವೇ ಉಳಿಯುತ್ತಾಳೆ.

ವರುಣ್ ಗೆ ಮೊದಲು ಆಘಾತವಾದರೂ, ಮೋಸ ಮಾಡಿದ ಅವಳ ತಂದೆಯ ಬಗ್ಗೆ ಕ್ರೋಧ ಉಂಟಾದರೂ ಅವಳ ಪ್ರಾಮಾಣಿಕತೆಯ ನಡೆ ಇಷ್ಟವಾಗುತ್ತದೆ. ಈ ವಿಷಯ ತಂದೆ ತಾಯಿಯವರಿಗೆ ತಿಳಿದರೆ ಅವರು ನೊಂದುಕೊಳ್ಳಬಹುದು ಎಂದು ಅವರ ಸಮ್ಮುಖದಲ್ಲಿ ಗಂಡ ಹೆಂಡಿರಾಗಿ ನಟನೆ ಮಾಡಬೇಕು ಎಂದು ವರುಣ್ ರತಿಗೆ ತಿಳಿಸಿ ಅವಳನ್ನು ಒಪ್ಪಿಸುತ್ತಾನೆ.

ಹೀಗೇ ವರ್ಷವೊಂದು ಕಳೆದರೂ ತೋರಿಕೆಯ ಒಡನಾಟದೊಂದಿಗೆ ಅವರಿಬ್ಬರೂ ದೂರವೇ ಉಳಿಯುತ್ತಾರೆ. ಆದರೂ ವರುಣ್ ತಾಳ್ಮೆಯಿಂದ ನಡೆದುಕೊಳ್ಳುತ್ತಾನೆ. ಇದರ ಮಧ್ಯೆ "ಮತಿ"ಯ ವಿವಾಹವೂ ಜರಗುತ್ತದೆ. ಈ ದಂಪತಿಗಳನ್ನು ನೋಡಿದಾಗ ತಾನೇನೋ ಕಳೆದುಕೊಂಡಿದ್ದೇನೆ ಎಂಬ ಅರಿವು ರತಿಗೆ ಒಳಗೊಳಗೇ ಕಾಡುತ್ತದೆ.

ಮುಂದೆ ಆಗಾಗ ಕಾಲೇಜ್ ನಿಂದ ನೇರವಾಗಿ ಅಕ್ಕನ ಮನೆಗೆ ಬರುವ ಸಣ್ಣ ತಂಗಿ ಕೃತಿ ಭಾವನೊಂದಿಗೆ ಸಲುಗೆಯಿಂದ ಇರುತ್ತಾಳೆ. ಕೃತಿ ಮತ್ತು ವರುಣ್ ಮನೆಯವರ ಸಂಭಾಷಣೆಗಳು ಬಹಳ ಹಾಸ್ಯವಾಗಿದ್ದು ಓದುಗರ ಮನಸಿಗೆ ಮುದ ನೀಡುತ್ತದೆ.

ಕಾಲದ ತುಳಿತದಲ್ಲಿ "ಕಳಂಕ"ದ ತೀವ್ರತೆ ಕಮ್ಮಿಯಾಗಿ ಈಗೀಗ ರತಿಗೆ ವರುಣ್ ನ ಬಗ್ಗೆ ಜಿಗುಪ್ಸೆಯಿಲ್ಲ. ಬದಲಾಗಿ ಆಕರ್ಷಣೆ. ಗಂಡಸರನ್ನೇ ದ್ವೇಷಿಸುತ್ತಿದ್ದ ರತಿ ಈಗಲೂ ಬದಲಾಗಿಲ್ಲ ಎಂಬುದು ವರುಣನ ಅಭಿಪ್ರಾಯ. ಬಹಳ ಆತ್ಮೀಯರಾಗಿದ್ದ ವರುಣ್ ಮತ್ತು ತನ್ನ ತಂಗಿ ಕೃತಿಯ ಸಂಬಂಧದ ಬಗ್ಗೆ ತಪ್ಪು ಅಭಿಪ್ರಾಯ ಹೊಂದಿದ ರತಿ ತೆಗೆದುಕೊಂಡ ನಿರ್ಧಾರ ಯಾವದು.? ವರುಣ್ ನ ತಾಳ್ಮೆಗೆ ಬೆಲೆ ಸಿಕ್ಕಿತೇ? ಎಂಬ ಕತೆಯನ್ನು ಸೂಕ್ಷ್ಮವಾಗಿ ವಿವರಿಸುತ್ತದೆ.

MORE FEATURES

'ಹೆಗಲು': ತ್ಯಾಗ, ನಿಸ್ವಾರ್ಥತೆಯ ಅಪರೂಪದ ಜೀವನಗಾಥೆ

14-12-2025 Bengaluru

"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...

ಅನುಕ್ಷಣ ಅನುಭವಿಸಿ: ಸಮಯ ನಿರ್ವಹಣೆಯ ಮಾರ್ಗದರ್ಶಿ

14-12-2025 BENGALURU

ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...

ಮಕ್ಕಳ ಕಥಾಸಾಹಿತ್ಯ ಸಂವೇದನೆಯ ಹೊಸ ಹೆಜ್ಜೆಗಳು.......

13-12-2025 ಬೆಂಗಳೂರು

"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...