ಈ ವಿಶ್ವವು ಕಲ್ಪನೆಗೆ ಮೀರಿದಷ್ಟು ವಿಸ್ತಾರವಾಗಿದೆ


“ಇಲ್ಲಿ ಜೀವ ಮತ್ತು ದೇವ ಭಿನ್ನವಲ್ಲ. ಇಲ್ಲಿ ಜೀವ ಮತ್ತು ದೇವ ಇಬ್ಬರೂ ಸೇರಿ ಆದ ಬಯಲಿನ ಚಿತ್ರಣವನ್ನು ನೀಡುತ್ತದೆ,” ಎನ್ನುತ್ತಾರೆ ಶ್ರೀಧರ ಎಚ್‌. ಬಿ. ಅವರು ತಮ್ಮ “ಬಯಲು” ಕಾದಂಬರಿಗೆ ಬರೆದ ಲೇಖಕರ ಮಾತು.

ಎತ್ತಣ ಮಾಮರ ಎತ್ತಣ ಕೋಗಿಲೆ
ಎತ್ತಣಿಂದೆತ್ತ ಸಂಬಂಧವಯ್ಯಾ?
ಬೆಟ್ಟದ ನೆಲ್ಲಿಕಾಯಿ ಸಮುದ್ರದೊಳಗಣ ಉಪ್ಪು
ಎತ್ತಣಿಂದೆತ್ತ ಸಂಬಂಧವಯ್ಯಾ?
ಗುಹೇಶ್ವರ ಲಿಂಗಕ್ಕೂ ಎನಗೆಯೂ
ಎತ್ತಣಿಂದೆತ್ತ ಸಂಬಂಧವಯ್ಯಾ?

ಅಲ್ಲಮನ ಪ್ರಸಿದ್ಧವಾದ ವಚನಗಳಲ್ಲಿ ಇದೂ ಒಂದು. ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಮಪ್ರಭು ಈ ವಚನದಲ್ಲಿ ತನ್ನ ಬದುಕಿನಲ್ಲಿ ನಡೆದ ಘಟನೆಯೊಂದನ್ನು ಧ್ವನಿಪೂರ್ಣವಾಗಿ ಹೇಳಿರುವಂತೆ ಕಾಣುತ್ತದೆ. ಇಷ್ಟಲಿಂಗವು ತನ್ನ ಕರಸ್ಥಳಕ್ಕೆ ಬಂದ ವಿಸ್ಮಯವನ್ನು ಅಲ್ಲಮ ಇಲ್ಲಿ ಸೂಚಿಸುತ್ತಿರುವಂತಿದೆ. 'ಬಯಲು' ಕಾದಂಬರಿಯನ್ನು ಬರೆಯಲು ಕಾರಣವಾದ ಸಂಗತಿಯೂ ಇದೇ ರೀತಿಯ ಒಂದು ಸಂದರ್ಭದಲ್ಲಿ ಆಯಿತು ಎಂದರೆ ಅತಿಶಯೋಕ್ತಿಯಲ್ಲ.

'ಬಯಲು' ಅಲ್ಲಮನ ಕಥನ, ನನ್ನ ಮೂರನೆಯ ಕಾದಂಬರಿ. ಕ್ರಿ.ಶ. 12ನೆಯ ಶತಮಾನದ ಮಹಾನ್ ಸಂತ ಅಲ್ಲಮಪ್ರಭುವಿನ ಬಗೆಗೆ ಒಂದು ಕಾದಂಬರಿಯನ್ನು ಬರೆಯಬೇಕೆನ್ನುವ ಕನಸು ಹಲವು ಸಮಯದಿಂದ ನನ್ನೊಳಗಿತ್ತು. ಇದಕ್ಕೆ ಪ್ರೇರಣೆ ನೀಡುವಂತಹ ಘಟನೆಯೊಂದು ಆಕಸ್ಮಿಕವಾಗಿ ನಡೆಯಿತು.

ಹಿರಿಯರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಒಮ್ಮೆ ಮಾತನಾಡುವ ಸಂದರ್ಭದಲ್ಲಿ ಅಲ್ಲಮಪ್ರಭು ಜನ್ಮತಳೆದ ಬಳ್ಳಿಗಾವೆಯನ್ನು ಒಮ್ಮೆ ನೋಡಬೇಕು ಎಂದು ತಮ್ಮ ಮನಸ್ಸಿನ ಅಪೇಕ್ಷೆಯನ್ನು ವ್ಯಕ್ತಪಡಿಸಿದ್ದರು. 2022ರ ಫೆಬ್ರವರಿ ತಿಂಗಳಲ್ಲಿ ಅಂತಹ ಒಂದು ಸನ್ನಿವೇಶ ಅಯಾಚಿತವಾಗಿ ಒದಗಿಬಂತು. ಪ್ರೊ. ಮಲ್ಲೇಪುರಂ ಅವರು ಸಾಗರಕ್ಕೆ ಕಾರ್ಯಾರ್ಥವಾಗಿ ಬರುವವರಿದ್ದರು. ಇದೇ ಸಮಯದಲ್ಲಿ ನಾನು ಪುತ್ತೂರಿನಿಂದ ಸಾಗರಕ್ಕೆ ಹೋದೆ. ದಿನಾಂಕ 24.02.2022ರಂದು ನಾವು ಬನವಾಸಿ. ಬಳ್ಳಿಗಾವೆ, ತಾಳಗುಂದ, ಬಂದಳಿಕೆ ಹಾಗೂ ಇನ್ನಿತರ ಸ್ಥಳಗಳಿಗೆ ಭೇಟಿ ನೀಡಿದೆವು.

ಬಳ್ಳಿಗಾವೆಯ ಕೇದಾರೇಶ್ವರ ದೇವಸ್ಥಾನದ ‌ ಗರ್ಭಗುಡಿಯ ಎದುರು ನಿಂತ ಸಂದರ್ಭದಲ್ಲಿ ಪ್ರೊ. ಮಲ್ಲೇಪುರಂ ಅವರು ಅಯಾಚಿತವಾಗಿ ಹೇಳಿದ ಮಾತು ನನ್ನ ಕಿವಿಯಲ್ಲಿ ಈಗಲೂ ಅನುರಣನಗೊಳ್ಳುತ್ತಿದೆ. "ಶ್ರೀಧರ್ ನೀವು ನನಗೆ ಅಲ್ಲಮಪ್ರಭುವಿನ ಬಗೆಗೆ ಒಂದು ಕಾದಂಬರಿ ಬರೆದು ಕೊಡಬೇಕು" ಎಂದರು. ಅವರ ಮಾತುಗಳನ್ನು ಕೇಳಿದ ನನಗೆ ತುಸು ಗಾಬರಿಯಾಯಿತು. ಅಲ್ಲಮನಂತಹ ಸಂತ ವಚನಕಾರನ ಬಗೆಗೆ ಕಾದಂಬರಿ ಬರೆಯುವುದು ಸುಲಭವಲ್ಲ ಎಂಬ ಎಚ್ಚರ ನನ್ನಲ್ಲಿ ಜಾಗ್ರತವಾಯಿತು.

"ಅದು ಅತ್ಯಂತ ಕಷ್ಟದ ಜವಾಬ್ದಾರಿ" ಎಂದು ಹೇಳುವಷ್ಟರಲ್ಲಿ "ಚಪಡ ಕಾದಂಬರಿಯನ್ನು ಬರೆದ ನಿಮಗೆ ಇದು ಸಾಧ್ಯ" ಎಂದು ಭರವಸೆಯ ಮಾತನ್ನು ಹೇಳಿದರು. ಆ ಕ್ಷಣಕ್ಕೆ 'ಆಯ್ತು ನೋಡುವ' ಎಂದು ಹೇಳಿದೆ. ಅಂದಿನಿಂದ ಅಲ್ಲಮ ನಿಧಾನವಾಗಿ ಮನಸ್ಸನ್ನು ಆಕ್ರಮಿಸಲು ತೊಡಗಿದ. ಅಲ್ಲಮನ ವಚನ ಸಾಹಿತ್ಯಕ್ಕೆ ಪೂರಕವಾಗಿ ಹರಿಹರನ ರಗಳೆ, ರಾಘವಾಂಕ ವಿರಚಿತ ಸಿದ್ಧರಾಮ ಚಾರಿತ್ರ, ಚಾಮರಸನ ಪ್ರಭುಲಿಂಗ ಲೀಲೆ, ಎಳಂದೂರು ಹರೀಶ್ವರನ ಪ್ರಭುದೇವರ ಪುರಾಣ, ಗೂಳೂರು ಸಿದ್ಧವೀರಣ್ಣೂಡೆಯ ವಿರಚಿತ ಪ್ರಭುದೇವರ ಶೂನ್ಯ ಸಂಪಾದನೆ ಮುಂತಾದ ಕೃತಿಗಳಲ್ಲಿ ಅಲ್ಲಮನ ಜೀವನ ವೃತ್ತಾಂತದ ಎಳೆಗಳು ಸಿಗುತ್ತವೆ. ಅಲ್ಲದೆ ಅಕ್ಕಮಹಾದೇವಿಯ ವಚನ, ಬಸವಣ್ಣನ ವಚನ, ಚೆನ್ನಬಸವಣ್ಣ ಹಾಗೂ ಇನ್ನಿತರ ವಚನಗಳು, ಪ್ರೊ ಸಂ.ಶಿ. ಭೂಸನೂರಮಠ ಅವರ ಶೂನ್ಯ ಸಂಪಾದನೆಯ ಪರಾಮರ್ಶೆ ಮೊದಲಾದ ಕೃತಿಗಳನ್ನು ಓದಿ ಮುಗಿಸುವಷ್ಟರಲ್ಲಿ ಅಲ್ಲಮನ ಬದುಕಿನ ಸ್ಕೂಲ ಚಿತ್ರವೊಂದು ಆಕಾರ ಪಡೆಯತೊಡಗಿತು.

ಮೊದಲ ಕೆಲವು ಪುಟಗಳನ್ನು ಬರೆದ ಬಳಿಕ ಕೆಲಸದ ಒತ್ತಡದಿಂದ ಬರೆವಣಿಗೆ ಕುಂಟಲುತೊಡಗಿತು. ಇದರೆಡೆಯಲ್ಲಿ 'ನಾಥಪಂಥದ ಉಗಮ ಮತ್ತು ವಿಕಾಸ' ಹಾಗೂ 'ನೆನಪಾಗಿ ಉಳಿದವರು' ಎರಡು ಕೃತಿಗಳು ಪ್ರಕಟವಾದವು. ಇದರ ಬೆನ್ನಿಗೆ ಅಲ್ಲಮನ ಕಾದಂಬರಿಯನ್ನು ಶೀಘ್ರವಾಗಿ ಮುಗಿಸಬೇಕು ಎಂಬ ಚೌಕಟ್ಟನ್ನು ನಾನೇ ಹಾಕಿಕೊಂಡು ಕೆಲಸವನ್ನು ಆರಂಭಿಸಿದೆ. ಬರೆಯುತ್ತಾ ಹೋದಂತೆ ಅಲ್ಲಮನ ಬದುಕಿನ ಪುಟಗಳು ತೆರೆದುಕೊಳ್ಳುತ್ತಾ ಹೋದವು. ಅಲ್ಲಮನ ವಚನಗಳಲ್ಲಿ ಆಗಾಗ ಬರುವ 'ಬಯಲು' ಶಬ್ದವನ್ನು ಈ ಕೃತಿಗೆ ಇಟ್ಟಿರುವುದು ಆಕಸ್ಮಿಕವಲ್ಲ.

ವರ್ತಮಾನದಲ್ಲಿ ಶಿಕಾರಿಪುರ ತಾಲೂಕಿನಲ್ಲಿ ಬರುವ ಬಳ್ಳಿಗಾವಿ ಪ್ರಾಚೀನ ಕಾಲದಲ್ಲಿ ಬನವಸೆ ಹನ್ನೆರಡು ಸಾವಿರ ಒಂದು ದೊಡ್ಡ ಪಟ್ಟಣವಾಗಿತ್ತು; ಅದಕ್ಕೆ ರಾಜಧಾನಿಯ ಗೌರವವಿತ್ತು. ಕಾಳಾಮುಖ ಶೈವರ ಪ್ರಮುಖಕೇಂದ್ರವಾದ ಈ ನಗರದಲ್ಲಿ ಶಿಕ್ಷಣವನ್ನು ನೀಡುವ ಘಟಿಕಾ ಸ್ಥಾನವಿತ್ತು. ಬೌದ್ಧ, ಜೈನ, ಶೈವ ಧರ್ಮಗಳ ಸಂಗಮ ಸ್ಥಳವೂ ಆಗಿತ್ತು. ಬದುಕಿನ ಸಂಕೀರ್ಣ ಸಂದರ್ಭದಲ್ಲಿ ಅನಿಮಿಷ ಯೋಗಿಯಿಂದ ಲಿಂಗವನ್ನು ಪಡೆದ ಬಳಿಕ ಅಲ್ಲಮನ ವ್ಯಕ್ತಿತ್ವದಲ್ಲಿ ಅಗಾಧವಾದ ಬದಲಾವಣೆ ಕಾಣುತ್ತದೆ. ಇಲ್ಲಿಂದ ಮುಂದೆ ಆತ ಶಿವಪಥವನ್ನರಸುವ ಯೋಗಿಯಾಗಿ ಕಾಣಿಸುತ್ತಾನೆ. ಬದುಕಿನ ಕೊನೆಯ ಘಟ್ಟದಲ್ಲಿ ಶ್ರೀಶೈಲದಲ್ಲಿ ಐಕ್ಯನಾಗಿರಬೇಕು ಎಂಬ ಅಭಿಪ್ರಾಯವಿದೆ.

ಕ್ರಿ. ಶ. ಹನ್ನೆರಡನೆಯ ಶತಮಾನ, ಕನ್ನಡ ಸಾಹಿತ್ಯದ ದೃಷ್ಟಿಯಿಂದ ಅತ್ಯಂತ ಸಂಕೀರ್ಣಯುಗ. ಕನ್ನಡ ಸಾಹಿತ್ಯ ಊಹಿಸುವುದಕ್ಕೂ ಸಾಧ್ಯವಾಗದ ರೀತಿಯಲ್ಲಿ ತನ್ನ ಮಗ್ಗುಲು ಬದಲಿಸಿದ ಸಮಯವಿದು. ವಚನ ಸಾಹಿತ್ಯದೊಂದಿಗೆ ಬರುವ ನೂರಾರು ವಚನಕಾರರು ಇಲ್ಲಿನ ಭಾಷೆ, ಶೈಲಿ, ಬರವಣಿಗೆಗೆ ಹೊಸರೂಪವನ್ನು ನೀಡಿದರು. ಹೀಗೆ ಬರುವ ಹಲವು ವಚನಕಾರರ ಬಗೆಗೆ ಮೊದಲನೆಯಸಲ ಹರಿಹರ ದಾಖಲಿಸಿರುವುದು ಕುತೂಹಲಕರವಾಗಿದೆ. ಮಾತ್ರವಲ್ಲ, ಹರಿಹರ ಚಿತ್ರಿಸಿದ ವಚನಕಾರರ ಬಗೆಗಿನ ವಿವರಗಳು ಕನ್ನಡದಲ್ಲಿ ಮೊದಲಸಲ ಬಂದಿರುವ ಜೀವನಚರಿತ್ರೆಯ ರೂಪದ ಪುಟಗಳು ಎಂದು ಗುರುತಿಸಲು ಸಾಧ್ಯ. ಹರಿಹರನು ವಚನಕಾರರ ಬಗೆಗೆ ಬರೆದಿರುವ ಕೃತಿಗಳು ಮುಂದಿನ ಬರಹಗಾರರಿಗೆ ಆಕರಗಳಾದವು.

ವಚನಕಾರರು ಬರೆದಿರುವ ವಚನಗಳ ಅಧ್ಯಯನವು ಶೂನ್ಯಸಂಪಾದನೆ ಎಂಬ ಹೆಸರಿನಲ್ಲಿ ಕ್ರಿ.ಶ. 15ನೆಯ ಶತಮಾನದ ವೇಳೆಗೆ ಆರಂಭವಾಯಿತು. ಶೂನ್ಯ ಎಂದರೆ 'ಏನೂ ಇಲ್ಲ' ಎಂಬುದು ಸಾಮಾನ್ಯ ಅರ್ಥ. ಆಧ್ಯಾತ್ಮ ವಲಯದಲ್ಲಿ 'ಎಲ್ಲವನ್ನೂ ಒಳಗೊಂಡಿರುವುದು' ಎಂಬ ವಿಶೇಷ ಅರ್ಥ ಈ ಶಬ್ದಕ್ಕಿದೆ. ಶೂನ್ಯ ಸಂಪಾದನೆಯ ಹಿನ್ನೆಲೆಯಲ್ಲಿ ಬಂದಿರುವ ಕೃತಿಗಳ ಬಗ್ಗೆ ವಿದ್ವಾಂಸರಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ಶಿವಗಣಪ್ರಸಾದಿ ಮಹಾ ದೇವಯ್ಯಗಳ ಸಂಪಾದನೆ (ಕ್ರಿ.ಶ. 1400), ಕೆಂಚವೀರಣ್ಣೂಡೆಯರ ಸಂಪಾದನೆ (1580), ಗುಮ್ಮಳಾಪುರದ ಸಿದ್ದಲಿಂಗದೇವರ ಸಂಪಾದನೆ (ಕ್ರಿ.ಶ. 1583), ಹಲಗೆಯಾರ್ಯರ ಸಂಪಾದನೆ (ಕ್ರಿ.ಶ. 1584), ಗೂಳೂರು ಸಿದ್ಧವೀರಣ್ಣೂಡೆ ಯರ ಸಂಪಾದನೆ (ಕ್ರಿ.ಶ. 1600) ಕೃತಿಗಳು ದೊರಕಿವೆ. ಇವುಗಳಲ್ಲಿ ವಚನ ಕಾರರ ವಚನಗಳನ್ನು ಸಂದರ್ಭೋಚಿತವಾಗಿ ಕಥನರೂಪದಲ್ಲಿ ಜೋಡಿಸಿರುವುದನ್ನು ನೋಡಬಹುದು.

ವೀರಶೈವ ಪರವಾದ ಶಿವಾದ್ವಿತ ದರ್ಶನದಲ್ಲಿ ಶೂನ್ಯವೆಂದರೆ ಸೊನ್ನೆ ಯಲ್ಲ; ಸೃಷ್ಟಿ. ಏನೂ ಇಲ್ಲ ಎಂದಲ್ಲ, ಎಲ್ಲದೂ ಆಗಿರುವುದು. ಜೀವ ಮತ್ತು ದೇವ ಇವೆರಡರ ಐಕ್ಯಾನುಸಂಧಾನ ಇಲ್ಲಾಗುತ್ತದೆ. ಅದೇ ಶಿವ, ಅದನ್ನೇ ಶೂನ್ಯ ಎಂದು ಹೇಳಿದೆ. ಶರಣನಾದವನಿಗೆ ಶೂನ್ಯತ್ವ ಅಥವಾ ಶಿವದ ಸಂಪಾದನೆಯೇ ಶೂನ್ಯ ಸಂಪಾದನೆ. ಇಲ್ಲಿ ಜೀವ ಮತ್ತು ದೇವ ಭಿನ್ನವಲ್ಲ. ಇಲ್ಲಿ ಜೀವ ಮತ್ತು ದೇವ ಇಬ್ಬರೂ ಸೇರಿ ಆದ ಬಯಲಿನ ಚಿತ್ರಣವನ್ನು ನೀಡುತ್ತದೆ.

ಶೂನ್ಯತ್ವವು ಇಹವನ್ನು ಉಳಿಸಿಕೊಂಡು ಪರವನ್ನು ಸಾಧಿಸಿತು. ಆರಂಭದಲ್ಲಿ ಜೀವ ಬೇರೆ, ದೇವ ಬೇರೆ ಎಂಬ ದೈತ ಭಾವವಿದ್ದರೂ ಅಂತ್ಯದಲ್ಲಿ ಐಕ್ಯಸ್ಥಲದ ಆಚೆಗೆ ಎರಡೂ ಕೂಡಿ ಏಕತ್ವವೆನಿಸಿ ನಿಲ್ಲುವುದೇ ಶೂನ್ಯ ದರ್ಶನ. ಇಂತಹ ಶೂನ್ಯಸ್ಥಿತಿಯನ್ನು ಪಡೆಯಲು ಸಿದ್ದತೆಯ ಅಗತ್ಯವಿದೆ. ಅವುಗಳನ್ನು ಹೀಗೆ ಗುರುತಿಸಿದೆ : ಗುರು, ಲಿಂಗ ಜಂಗಮಗಳೆಂಬ ತ್ರಿವಿಧ ಗಳನ್ನು ನಿಜವೆಂದು ತಿಳಿಯುವುದು, ಪಂಚೇಂದ್ರಿಯಗಳ ಕಾಮನೆಯಿಂದ ಬಿಡುಗಡೆ ಪಡೆಯುವುದು, ಅಜ್ಞಾನ, ಚಂಚಲವಾದ ಸ್ಥಿತಿಯಿಂದ ಹೊರಗೆ ಬರುವುದು, ಅಷ್ಟಮದಗಳನ್ನು ನಾಶಗೊಳಿಸಿ ದೇಹವೇ ದೇಗುಲ, ಅದರಲ್ಲಿರುವ ಜೀವಾತ್ಮನೇ ಪರಮಾತ್ಮ ಎಂಬ ತಿಳಿವನ್ನು ಪಡೆದು ವಿಶ್ವಾತ್ಮಕ ಚೈತನ್ಯದಲ್ಲಿ ಏಕವಾಗಿ ನಿಲ್ಲಬೇಕು. ಈ ರೀತಿ ಆತ್ಮವಿಕಾಸಗೊಂಡು ಶಿವತ್ವವನ್ನು ಪಡೆಯುವು ದನ್ನು ಶೂನ್ಯ ಸಂಪಾದನೆ ಎಂದು ಹೇಳಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಿದ್ದರೆ ಸಾಧನೆಯ ಹಾದಿಯಲ್ಲಿರುವ ಶರಣನು ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯವೆಂಬ ಷಟ್‌ಸ್ಥಲವನ್ನು ದಾಟಬೇಕು ಎಂಬ ನಿಲುವು ಶರಣರ ವಚನಗಳಲ್ಲಿ ಬಂದಿದೆ. ಆತ್ಮವಿಕಾಸದ ಸೋಪಾನ ಗಳಿವು. ಇದನ್ನೇ ಅಲ್ಲಮ 'ಬಯಲು' ಎಂದು ಆಗಾಗ ಪ್ರಸ್ತಾಪಿಸುತ್ತಾನೆ.

ಈ ನಿಟ್ಟಿನಲ್ಲಿ ಅಲ್ಲಮನ ಒಂದು ವಚನ ಇಂತಿದೆ :

ಬಯಲು ಬಯಲನೆ ಬಿತ್ತಿ, ಬಯಲು ಬಯಲನೆ ಬೆಳೆದು
ಬಯಲು ಬಯಲಾಗಿ ಬಯಲಾಯಿತ್ತಯ್ಯಾ
ಬಯಲ ಜೀವನ, ಬಯಲ ಭಾವನೆ
ಬಯಲು ಬಯಲಾಗಿ ಬಯಲಾಯಿತ್ತಯ್ಯಾ.
ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು.
ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ!

ಈ ವಿಶ್ವವು ಕಲ್ಪನೆಗೆ ಮೀರಿದಷ್ಟು ವಿಸ್ತಾರವಾಗಿದೆ. ಸಕಲ ಜೀವಿಗಳಿಗೂ ಇದು ಆಶ್ರಯವನ್ನು ನೀಡುತ್ತದೆ. ಕಾಲಪ್ರವಾಹಕ್ಕೆ ಒಳಗಾದ ಇದು, ಯಾವುದೋ ಒಂದು ಆದಿ ಕ್ಷಣದಲ್ಲಿ ತನ್ನ ಮಹಾಕಾರಣವಾದ ಶಿವ-ಶಕ್ತಿ ಸಂಪುಟರೂಪ ಮಹಾಲಿಂಗದಿಂದ ಜನ್ಮತಾಳಿದೆ. ಹೀಗೆ ವಿಶ್ವ ಹಾಗೂ ಮಹಾಲಿಂಗವು ಬಯಲಿನ ರೂಪವೇ ಆಗಿದೆ. ಅದು ಅನಂತ ಶಾಂತಿಯ ನೆಲೆ. ಶಾಂತಿಯನ್ನು ಬಯಸಿ ಬಂದ ಶಿಷ್ಯನಲ್ಲಿ ಗುರುವು ಬಯಲಜ್ಞಾನವೆಂಬ ಬೀಜವನ್ನು ಬಿತ್ತುತ್ತಾನೆ. ಶಿಷ್ಯನು ಭಕ್ತಿಜಲವನ್ನೆರೆದು ಆ ಜ್ಞಾನವೃಕ್ಷವನ್ನು ಬೆಳೆಸುತ್ತಾನೆ. ಆಗ ಶರಣನಿಗೆ ಬಯಲಾಗುವ ಅನುಭವ ಸಹಜವಾಗಿ ಆಗುತ್ತದೆ. ಹಿಂದಿನ ಮಹಾನುಭಾವರೆಲ್ಲ ಗುರುವಿನಿಂದ ಬಯಲನರಿತು, ಬಯಲನೆ ಪರಿಭಾವಿಸಿ ಆ ಬಯಲಿನೊಳಗೆ ಅರ್ಪಿಸಿಕೊಂಡು ಅರಿವನ್ನು ಪಡೆದು ಬಯಲಾಗಿದ್ದಾರೆ. ನಾನೂ ಸಹ ಅದನ್ನೇ ನಂಬಿರುವೆ. ಅರಿವಿನಿಂದ ಅರ್ಚಿಸಿ ಬಟ್ಟ ಬಯಲಿನಲ್ಲಿ ನಿಂತಿರುವೆ" ಎಂದು ಹೇಳುವಲ್ಲಿ ಅಲ್ಲಮ ಬಯಲಾಗುವ ರೀತಿಯನ್ನು ಸುಂದರವಾಗಿ ಹೇಳಿದ್ದಾನೆ. ಶೂನ್ಯಕ್ಕೆ ಸಮನಾಗಿ ಅಲ್ಲಮ ಬಳಸುವ ಬಯಲು ಕನ್ನಡದ ದೃಷ್ಟಿಯಿಂದ ಅತ್ಯಂತ ಪ್ರಮುಖ ಪರಿಕಲ್ಪನೆ ಯಾಗಿದೆ.

ವಚನ ಸಾಹಿತ್ಯದ ಆಗಮನದೊಂದಿಗೆ ಬರುವ ಅಲ್ಲಮಪ್ರಭು ಆಧ್ಯಾತ್ಮದ ನೆಲೆಯಲ್ಲಿ ಸಮಕಾಲೀನರಿಗೆ ಮುಖಾಮುಖಿಯಾಗುತ್ತಾನೆ. ಮಾತ್ರವಲ್ಲ, ಈತನನ್ನು ಸರಿಗಟ್ಟಬಲ್ಲ ವ್ಯಕ್ತಿ ಅನಂತರದ ಕಾಲದಲ್ಲಿ ಬಂದಿಲ್ಲವೆಂಬುದೇ ಆತನ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ. ಗೂಳೂರು ಸಿದ್ಧವೀರಣ್‌ಡೆಯ ವಿರಚಿತ ಪ್ರಭುದೇವರ ಶೂನ್ಯ ಸಂಪಾದನೆ ಈ ಸರಣಿಯಲ್ಲಿ ಬರುವ ಒಂದು ಮಹತ್ವದ ಕೃತಿ. ಇದರಲ್ಲಿ ಅನುಭಾವಿ ಅಲ್ಲಮನೇ ಕೇಂದ್ರಬಿಂದು. ಅನುಭಾವ ಈ ಕೃತಿಯ ಜೀವರಸ, ಅಲ್ಲಮನ ವಿಚಾರಧಾರೆ ಇಡೀ ಕೃತಿಯಲ್ಲಿ ಪಸರಿಸಿದೆ. ಅಲ್ಲಮನಿಗೆ ಮಣಿಯದ ವ್ಯಕ್ತಿಯಿಲ್ಲ. ಎಲ್ಲರ ಪ್ರಶ್ನೆ, ಸಂದೇಹಗಳಿಗೆ ಅಲ್ಲಮ ಉತ್ತರ ನೀಡುತ್ತಾನೆ. ಆತನ ವಚನಗಳನ್ನು ಗಮನಿಸಿದರೆ ಅಲ್ಲಮ ಅಧ್ಯಾತ್ಮಗುರು ಎಂಬಲ್ಲಿ ಸಂಶಯವಿಲ್ಲ.

ಶೂನ್ಯಸಂಪಾದನೆಕಾರರು, ತಮ್ಮ ವಸ್ತುವಿನ್ಯಾಸಕ್ಕೆ ಅನುಗುಣವಾಗಿ ವಚನಗಳನ್ನು ಆಯ್ದು ಔಚಿತ್ಯವರಿತು ಜೋಡಿಸಿದ್ದಾರೆ. ವಚನಕಾರರ ಭಾವಶ್ರೀಮಂತಿಕೆ ಇಲ್ಲಿ ಕಾಣುತ್ತದೆ. ತನ್ನ ಬದುಕಿನ ಅವಧಿಯಲ್ಲಿ ಅಲ್ಲಮ ಮುಖಾಮುಖಿಯಾಗುವ ವ್ಯಕ್ತಿಗಳ ದೊಡ್ಡ ಪಟ್ಟಿಯೇ ದೊರೆಯುತ್ತದೆ. ಆದರೆ ಎಲ್ಲಿಯೂ ಅಲ್ಲಮ ಇನ್ನೊಬ್ಬರ ಮೇಲೆ ಸವಾರಿ ಮಾಡಿದ್ದಿಲ್ಲ. ಮಾತು- ಮಥನದ ಮೂಲಕವೇ ಎಲ್ಲರಿಗೂ ಅರಿವನ್ನು ಮೂಡಿಸಿದ ದಾರ್ಶನಿಕ. ಅಲ್ಲಮ ಶೂನ್ಯಸಂಪಾದನೆಯಲ್ಲಿ ನಾಯಕನಂತೆ ಕಾಣಿಸುತ್ತಾನೆ; ಇತರ ಪಾತ್ರಗಳು ಸ್ವಯಂಪೂರ್ಣವಾಗಿ ರೂಪುಗೊಂಡಿವೆ. ಅವು ತಮ್ಮ ದೃಶ್ಯ ಮುಗಿದ ಕೂಡಲೇ ನೇಪತ್ಯಕ್ಕೆ ಸರಿಯುತ್ತವೆ. ಅವುಗಳಿಗೆ ತಮ್ಮದೇ ಆದ ವ್ಯಕ್ತಿತ್ವ ಮತ್ತು ಅಸ್ತಿತ್ವವಿದೆ. ಗೊಗ್ಗಯ್ಯ, ಮರುಳು ಶಂಕರದೇವ, ಮಡಿವಾಳ ಮಾಚಯ್ಯ, ಗೋರಕ್ಷ, ಸಿದ್ಧರಾಮ, ಬಸವಣ್ಣ, ಲಕ್ಕಮ್ಮ, ನೀಲಮ್ಮ, ಮುಕ್ತಾಯಕ್ಕ, ಅಕ್ಕಮಹಾದೇವಿ, ಚೆನ್ನಬಸವಣ್ಣ ಮುಂತಾದ ಪಾತ್ರಗಳಿಗೆ ಸ್ವಯಂಪೂರ್ಣತೆಯ ಸೌಂದರ್ಯವಿದೆ. ಅಲ್ಲಮನ ಜೊತೆಯಲ್ಲಿ ನಡೆಸಿದ ಚರ್ಚೆಯಿಂದ ನವನೀತವನ್ನು ಪಡೆದ ಸಂತೃಪ್ತಿ ಅವರದು.

ಭವಿಯಾಗಿ ಹುಟ್ಟಿದವನು ಭಕ್ತನಾಗಬೇಕು. ಶರಣನಾದವನು ಜಂಗಮನಾಗಬೇಕು. ಜಂಗಮನಾದವನು ಶಿವನಾಗಬೇಕು ಎಂಬ ನಿಲುವು ಅಲ್ಲಮನದು. ವಿಶ್ವವನ್ನು ಲೌಕಿಕದ ನೆಲೆಯಿಂದ ಅಧ್ಯಾತ್ಮಿಕ ನೆಲೆಗೆ ಮೇಲೆತ್ತುವ ಅಪೇಕ್ಷೆ ಆತನದು. ಹೀಗಾಗಿ ಅಲ್ಲಮನ ಮಾತು ಜ್ಯೋತಿರ್ಲಿಂಗವಾಗಿ ಬೆಳಗುತ್ತದೆ; ಅರಿವು, ಬೆಳಗು, ಚೈತನ್ಯ ಸ್ವರೂಪಿಯಾಗಿ ನಿಲ್ಲುತ್ತವೆ; ಶರಣರ ಅಂಗಗಳೆಲ್ಲವೂ ಲಿಂಗಮಯವಾದ್ದರಿಂದ ಅವರ ಮಾತುಗಳೆಲ್ಲವೂ ಸೂಳ್ಳುಡಿಗಳಾಗುತ್ತವೆ. ಅವು ಅನುಭಾವದ ಅರಿವಿನ ಜ್ಯೋತಿಗಳು.

ಬಳ್ಳಿಗಾವೆಯಲ್ಲಿ ಹುಟ್ಟಿ, ಕಲ್ಯಾಣಕ್ಕೆ ತೆರಳಿ ಶರಣರಿಗೆ ಮಾರ್ಗದರ್ಶನ ಮಾಡುವ ಅಲ್ಲಮನನ್ನು ಅಧ್ಯಾತ್ಮಿಕ ನೆಲೆಯಲ್ಲಿ ಮೇರುಪುರುಷನೆಂದು ಸಾಮಾನ್ಯವಾಗಿ ಚಿತ್ರಿಸಿರುವುದನ್ನು ನೋಡುತ್ತೇವೆ. ಆದರೆ 'ಬಯಲು' ಕೃತಿಯಲ್ಲಿ ಅಲ್ಲಮನ ಮನಸ್ಸಿನ ಒಳಪದರದ ಸೂಕ್ಷ್ಮಗಳನ್ನು ತೆರೆದಿಡುವ ಪ್ರಯತ್ನವಿದೆ. ಅಲ್ಲಮನಿಗೆ ತೀರಾ ಹತ್ತಿರದಲ್ಲಿ ಇದ್ದವನು ಹರಿಹರ. ಆದ್ದರಿಂದ ಹರಿಹರನ ಕಥನ ಸರಣಿಯನ್ನು ಮುಖ್ಯವಾಗಿ ಆಧರಿಸಿ ಉಳಿದ ಅಕರಗಳನ್ನು ಪೂರಕವಾಗಿ ಬಳಸಿದೆ. ಬಳ್ಳಿಗಾವೆಯ ದೇವಾಲಯದಲ್ಲಿ ನಡೆಯುತ್ತಿದ್ದ ಮಾಧವಿಯ ನೃತ್ಯ ಪ್ರದರ್ಶನದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಮಲತೆಯನ್ನು ಭೇಟಿಯಾಗುವನು. ಅವರಿಬ್ಬರ ದಾಂಪತ್ಯ, ಕಾಮಲತೆಯ ಆಕಸ್ಮಿಕ ಮರಣ ಅಲ್ಲಮನ ಬದುಕಿಗೆ ಮಹತ್ವದ ತಿರುವನ್ನು ನೀಡಿದ ಘಟನೆ. ಕೃತಿಯಲ್ಲಿ ಅಲ್ಲಮನ ಬಾಲ್ಯ, ಶಿಕ್ಷಣ, ಕಲ್ಯಾಣದಲ್ಲಿ ಅಲ್ಲಮನ ವ್ಯಕ್ತಿತ್ವಕ್ಕೆ ದೊರಕಿದ ಮಾನ್ಯತೆಯ ಬಗೆಗೆ ಸಾಕಷ್ಟು ವಿವರಗಳಿವೆ. ಅಂತಿಮವಾಗಿ ಅಲ್ಲಮ ಬಯಲಾಗುವುದನ್ನು ಅತ್ಯಂತ ಸಾಂಕೇತಿಕವಾಗಿ ನೀಡಿದೆ. ಇದಕ್ಕೆ ಪೂರಕವಾಗಿ ಷಟ್‌ಸ್ಥಲ ಸಿದ್ಧಾಂತದ ಪರಿಕಲ್ಪನೆಯನ್ನು ವಚನ ಸಾಹಿತ್ಯದ ಹಿನ್ನೆಲೆಯಲ್ಲಿ ತರುವ ಪ್ರಯತ್ನವಿದೆ. ಮುಖ್ಯ ಕಥೆಗೆ ಪೂರಕವಾಗಿ ಅಕ್ಕಮಹಾದೇವಿ, ಸಿದ್ಧರಾಮ, ಬಸವಣ್ಣ ಮುಂತಾದ ಶರಣರ ಇತಿವೃತ್ತವನ್ನು ಸಂಕ್ಷಿಪ್ತವಾಗಿ ನೀಡಿದೆ.

ಒಟ್ಟಿನಲ್ಲಿ ಅಲ್ಲಮಪ್ರಭು ತನ್ನ ಪಾದಗಳನ್ನು ನೆಲದಲ್ಲಿ ಗಟ್ಟಿಯಾಗಿ ಊರಿ ನಿಧಾನವಾಗಿ ಊರ್ಧ್ವಮುಖವಾಗಿ ಬೆಳೆಯುವ ಚಿತ್ರವಿದೆ. ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಆಯಾಮಗಳಲ್ಲಿ ಬೆಳೆಯುತ್ತಾ ಸಾಗುವ 'ಬಯಲು' ಕಾದಂಬರಿ ಆಧ್ಯಾತ್ಮಿಕ ಉನ್ನತಿಯಲ್ಲಿ ನಿಲ್ಲುತ್ತದೆ. ಹೀಗಾಗಿ 'ಬಯಲು' ಕೃತಿಯ ಓದುವಿಕೆ ಭಿನ್ನವಾದ ಅನುಭವವನ್ನು ನೀಡುತ್ತದೆ ಎಂಬಲ್ಲಿ ಸಂಶಯವಿಲ್ಲ. ಓದುಗರ ಅನುಭವ ಮತ್ತು ಸಿದ್ಧತೆಯೂ ಇಲ್ಲಿ ಮುಖ್ಯವಾಗುತ್ತದೆ ಎಂಬ ಅನಿಸಿಕೆ ನನ್ನದು.

MORE FEATURES

'ಹೆಗಲು': ತ್ಯಾಗ, ನಿಸ್ವಾರ್ಥತೆಯ ಅಪರೂಪದ ಜೀವನಗಾಥೆ

14-12-2025 Bengaluru

"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...

ಅನುಕ್ಷಣ ಅನುಭವಿಸಿ: ಸಮಯ ನಿರ್ವಹಣೆಯ ಮಾರ್ಗದರ್ಶಿ

14-12-2025 BENGALURU

ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...

ಮಕ್ಕಳ ಕಥಾಸಾಹಿತ್ಯ ಸಂವೇದನೆಯ ಹೊಸ ಹೆಜ್ಜೆಗಳು.......

13-12-2025 ಬೆಂಗಳೂರು

"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...