ಹೊಸ ಕಲ್ಯಾಣ ಕಟ್ಟುವ ಕನಸಿನ ʼಕಲ್ಯಾಣಪುರʼ ನಾಟಕ


"ಬಸವಣ್ಣನ ಸಂಘರ್ಷವು ಇಲ್ಲಿದೆ. ಇವು ಇಲ್ಲಿ ಎದ್ದು ಕಾಣುವ ಅಂಶಗಳು. ವಿಸಾಜಿಯವರ ರಂಗಭಾಷೆ, ಹೊಸ ನುಡಿಗಟ್ಟುಗಳು ಗಾಢ ಅನುಭೂತಿ ನೀಡುವವು. ಹೀಗೆ ದುಃಖದ ಘಟನೆಯಿಂದಲೇ ನಾಟಕ ಆರಂಭಗೊಂಡಿದೆ," ಎನ್ನುತ್ತಾರೆ ಡಿ.ಎಸ್.ಚೌಗಲೆ. ಅವರು ವಿಕ್ರಮ ವಿಸಾಜಿ ಅವರ ʻಕಲ್ಯಾಣಪುರʼ ಮೂರಂಕಿನ ನವನಾಟಕದ ಕುರಿತು ಬರೆದ ನುಡಿ ನಿಮ್ಮ ಓದಿಗಾಗಿ..

ವಿಕ್ರಮ ವಿಸಾಜಿ ಕನ್ನಡದ ಮಹತ್ವದ ಸಂವೇದನಶೀಲ ಕವಿ ಮತ್ತು ವಿಮರ್ಶಕರು. ಅವರು ಇತ್ತೀಚಿನ ವರ್ಷಗಳಲ್ಲಿ ಕೆಲವು ನಾಟಕಗಳನ್ನು ಬರೆದಿರುವರು. ʼಕಲ್ಯಾಣಪುರʼ ಅವರ ಮೂರಂಕಿನ ನವನಾಟಕ. ಕಲ್ಯಾಣ(ಪುರ)ದ ಬಸವಣ್ಣನ ಮನೆಯಲ್ಲಿ ಇದು ತೆರೆದುಕೊಳ್ಳುತ್ತದೆ. ಕನ್ನಡ ರಂಗಭೂಮಿಯಲ್ಲಿ ಬಸವಣ್ಣ ಮತ್ತು ಶರಣರ ಚಳುವಳಿ ಕುರಿತಾದ ನಾಟಕಗಳಿಗೇನುಕೊರತೆಯಿಲ್ಲ. ಅದಕ್ಕೊಂದು ದೊಡ್ಡ ಪರಂಪರೆಯೇ ಇದೆ. ಪ್ರಸ್ತುತ ವಿಕ್ರಮ ವಿಸಾಜಿಯವರ ʼಕಲ್ಯಾಣಪುರʼ ನಾಟಕವೂ ಸಹ ಈ ನಾಟಕ ಪರಂಪರೆಯ ಒಂದು ಕೊಂಡಿ. ಬಸವಣ್ಣ, ಗಂಗಾಂಬಿಕೆ, ನೀಲಾಂಬಿಕೆ ಅಕ್ಕನಾಗಮ್ಮ ಮತ್ತು ಬಾಲಸಂಗಯ್ಯ ಪಾತ್ರಗಳು. ಕಲ್ಯಾಣಪುರದ ಬಸವಣ್ಣನ ಮನೆಯಲ್ಲಿ ನಾಟಕ ಜರುಗುವುದು.

ವಿಕ್ರಮ ವಿಸಾಜಿ ಅದೇ ಪ್ರಾಂತದವರು. ಅವರ ಹುಟ್ಟಿದೂರು ಬೀದರ ಜಿಲ್ಲೆಯ ಭಾಲ್ಕಿ. ಅವರು ಆರಂಭದ ಅರಿಕೆಯಲ್ಲಿ ಹೇಳಿದಂತೆ ಭಾಲ್ಕಿಯ ಚನ್ನಬಸವ ಪಟ್ಟದ್ದೇವರ ಕಾಯಕ ಬದುಕು ಮತ್ತು ವಚನಗಳ ಪ್ರಭಾವ ಅವರ ಮೇಲಿದೆ ಎಂಬುದು. ಅವುಗಳಲ್ಲದೇ ಕಲ್ಯಾಣದ ಕತೆಗಳು, ವಚನ ಸಾಹಿತ್ಯ, ಬಸವ ಪುರಾಣ, ಪ್ರಭುಲಿಂಗಲೀಲೆ ಅಂಥ ಕೃತಿಗಳ ಪಾಠ ಪ್ರವಚನಗಳನ್ನು ಆಲಿಸುತ್ತ ಬೆಳೆದವರು. ಹೀಗಾಗಿ ಇವು ಈ ನಾಟಕ ರಚನೆಗೆ ಪ್ರೇರಣೆ ಮತ್ತು ಅಕರಗಳಾಗಿವೆ. ಆ ನೆಲದ ಬದುಕಿನಲ್ಲಿ ವಚನಗಳ ಘಾಟು ಹಿಂದಿನಿಂದಲೂ ಪಸರಿಸಿದೆ. ಸಹಜವಾಗಿ ವಿಸಾಜಿಯವರೊಳಗೂ ಆಂತರ್ಯದಲ್ಲಿ ಅವು ಸ್ತ್ರೋತಗೊಂಡಿವೆ. ಹಾಗೆಯೇ ಕನ್ನಡದ ಶರಣರ ಕುರಿತಾದ ನಾಟಕಗಳು ಅವರ ಹುಡುಕಾಟಕ್ಕೆ ನೆಲೆ ಒದಗಿಸಿವೆ. ಪ್ರಸ್ತುತ ನಾಟಕ ʼಕಲ್ಯಾಣಪುರʼದ ಪ್ರಸಂಗಗಳು ನಡೆಯುವುದು ಬಸವಣ್ಣನವರ ಮಹಾಮನೆಯಲ್ಲಿ ಮತ್ತು ಆ ಪರಿಸರದಲ್ಲಿ. ಶರಣರ ಚಳುವಳಿಯು ಪಡೆದ ತಿರುವುಗಳ ಪರಿಣಾಮಗಳು ದುರಂತ ಸುದ್ದಿಗಳಾಗಿ ಕೇಳಿಬರತೊಡಗುತ್ತವೆ. ಇವು ಬಸವಣ್ಣ, ಗಂಗಾಂಬಿಕೆ, ನೀಲಾಂಬಿಕೆ ಮತ್ತು ಅಕ್ಕನಾಗಮ್ಮನವರನ್ನು ಚಿಂತೆಗೀಡು ಮಾಡುವವು.

ಬಸವಣ್ಣನವರು ರಾಜ್ಯಾಡಳಿತ ಮತ್ತು ಶರಣರ ಚಳುವಳಿ-ಇವೆರಡು ಬಾಜುಗಳಲ್ಲಿ ಸಮನ್ವಯತೆ ಸಾಧಿಸಿದ್ದರು. ಒಂದೆಡೆ ಪ್ರಭುತ್ವ; ಮತ್ತೊಂದೆಡೆ ಪ್ರಜಾಪ್ರಭುತ್ವ. ಈ ಆಲೋಚನೆಗಳ ಸಮ ಸಮಾಜದ ಚಳುವಳಿ, ಅನುಭವ ಮಂಟಪದ ಚಟುವಟಿಕೆಗಳು. ಧರ್ಮವು ಪ್ರಭುತ್ವ ವ್ಯವಸ್ಥೆಯೊಂದಿಗೆ ಅಂಟಿಕೊಂಡು ಒಂದು ಪ್ರತಿಗಾಮಿ ಪ್ರತಿರೋಧ ಒಡ್ಡುತ್ತಿರುವಾಗ ಸ್ವಾಭಾವಿಕವಾಗಿ ಸಂಘರ್ಷ, ಹಿಂಸೆ, ಕೊಲೆ, ಕದನಗಳು ಬಸವಣ್ಣನನ್ನು ಆತಂಕ, ಸಂಕಟಕ್ಕೆ ಒಳಪಡಿಸುವ ಪ್ರಸಂಗಗಳು. ಇವುಗಳ ಎಳೆ ನಾಟಕದಲ್ಲಿ ಕಾಣುತ್ತದೆ. ಹೀಗಾಗಿ ನಾಟಕ ರಚನೆ ಸಂಕೀರ್ಣವಾಗಿದೆ.

ಮೊದಲ ದೃಶ್ಯದಲ್ಲಿ ಬಾಲಸಂಗಯ್ಯನ ಆರೋಗ್ಯ ಹದಗೆಟ್ಟಿದೆ. ತಂದೆಯಾದ ಬಸವಣ್ಣನಿಗೆ ಪುರುಸೊತ್ತಿಲ್ಲ. ನೀಲಾಂಬಿಕೆ, ಗಂಗಾಂಬಿಕೆ ಮತ್ತು ಅಕ್ಕನಾಗಮ್ಮ ಶುಶ್ರೂಷೆ ಹೊಣೆ ಹೊತ್ತು ಆರೋಗ್ಯ ಸುಧಾರಣೆಯ ಕ್ಷಣಗಳಿಗೆ ಕಾತರರು. ಆದರೆ ಬಸವಣ್ಣನು ಆಸ್ಥಾನ ಮತ್ತು ಶರಣರ ಮಧ್ಯೆ ಕಾಯಕ ನಿರತನು. ಮನೆಗೆ ಬಂದಾಗ ಅಕ್ಕನಾಗಮ್ಮನು ಆತನಿಗೆ ತಂದೆಯ ಜವಾಬುದಾರಿಯನ್ನು ಜ್ಞಾಪಿಸುತ್ತಾರೆ. ʼನಿನ್ನ ಊರ ಉಸಾಬರಿ ಇದ್ದದ್ದೆ. ಆದರ ನಿನ್ನದು ಮಗನ ಜೊತೆ ಆಟ ಆಡೋ ತಂದೆಯ ವಯಸ್ಸು. ನಿನಗೊಬ್ಬ ಮಗ ಇದ್ದಾನೆ ಅನ್ನೋದನ್ನ ಮರೀಬೇಡ.ʼ ಎಂದು ಕುಟುಕುವಳು. ಅಸಹಾಯ ಸ್ಥಿತಿಯ ಬಸವಣ್ಣ, ʼಕ್ಷಮಿಸಿರಿ, ನಾನು ಒಳ್ಳೆಯ ಗಂಡ ಅಲ್ಲ, ಒಳ್ಳೆಯ ತಂದೆಯೂ ಅಲ್ಲ.ʼ ಎಂದು ನೆರವಾಗದಿರುವುದಕ್ಕೆ ಪಶ್ಚಾತ್ತಾಪ ಪಡುವನು. ಕೊನೆಗೂ ಅವರಿಗೆ ಮಗುವನ್ನು ಉಳಿಸಿಕೊಳ್ಳಲಾಗುವುದಿಲ್ಲ. ಬಾಲಸಂಗಯ್ಯ ನಿಧನವಾಗುವನು. ಎಲ್ಲರು ದುಃಖಿತರು. ʼತಾಯಿಯ ಗರ್ಭದಲ್ಲಿ ಹುಟ್ಟಿದ ಲಿಂಗವೊಂದು ಭೂಮಿಯ ಗರ್ಭ ಸೇರಿದೆ. ಅಂಗೈಯೊಳಗಿನ ಲಿಂಗವೇ ನಮ್ಮ ಮಗುʼ ಎಂದು ತಿಳಿದ ಬಸವಣ್ಣ ಎಲ್ಲರಿಗು ಸಾಂತ್ವನ ಹೇಳುವನು. ಈ ಸಾಲುಗಳು ವಿಸಾಜಿಯವರ ಕವಿತ್ವವನ್ನು ಧ್ವನಿಸುತ್ತವೆ. ಒಂದು ಕಡೆ ಕುಟುಂಬದ ಹೊಣೆ, ಮತ್ತೊಂದು ಕಡೆಗೆ ಶರಣರ ಹೋರಾಟ. ಎರಡನ್ನೂ ನಿಭಾಯಿಸಲು ಹೊರಟ

ಬಸವಣ್ಣನ ಸಂಘರ್ಷವು ಇಲ್ಲಿದೆ. ಇವು ಇಲ್ಲಿ ಎದ್ದು ಕಾಣುವ ಅಂಶಗಳು. ವಿಸಾಜಿಯವರ ರಂಗಭಾಷೆ, ಹೊಸ ನುಡಿಗಟ್ಟುಗಳು ಗಾಢ ಅನುಭೂತಿ ನೀಡುವವು. ಹೀಗೆ ದುಃಖದ ಘಟನೆಯಿಂದಲೇ ನಾಟಕ ಆರಂಭಗೊಂಡಿದೆ.

ಗಂಗಾಂಬಿಕೆ, ಅಕ್ಕನಾಗಮ್ಮನವರು ಬಸವಣ್ಣನ ಕ್ರಾಂತಿಕಾರಿ ಆಲೋಚನೆ, ಅವುಗಳನ್ನು ಕಾರ್ಯರೂಪಕ್ಕೆ ತರುವ ಚಿಂತನೆ, ಚಡಪಡಿಕೆಗಳನ್ನು ಶ್ಲಾಘಿಸುವರು. ಸಾಮಾಜಿಕ ಪರಿವರ್ತನೆಗೆ, ಪಲ್ಲಟಕ್ಕೆ ಕಾರಣವಾಗಬಹುದಾದ ಹೋರಾಟದ ಬೀಜಗಳು ಮೊಳಕೆ ಒಡೆದು ಮರವಾಗುತ್ತಿದ್ದವು. ಪ್ರಭುತ್ವವು ಧರ್ಮದ ಹೆಸರಿನಲ್ಲಿ ಸಮಾಜದ ನಡುವೆ ಒಂದು ಭಯದ ವಾತಾವರಣವನ್ನು ಸೃಷ್ಟಿ ಮಾಡಿತ್ತು. ಶರಣರ ಮೇಲೆ ದಾಳಿಗಳು ಶುರುವುಗೊಂಡಿದ್ದವು. ಕಟ್ಟಿದ ಲಿಂಗವನ್ನು ಕಿತ್ತೆಸೆದು ಜನ ಭಯಭೀತಗೊಂಡಿದ್ದರು. ಪ್ರಾಣವನ್ನು ಕಾಪಾಡಿಕೊಳ್ಳಲು ಹರ ಸಾಹಸ ಪಡುತ್ತಿದ್ದರು. ಸಮಾಜದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸುವ ರಾಜಕೀಯ ಕುತಂತ್ರಗಳು ಕಾಲದ ಓಘದಲ್ಲಿ ನಡೆಯುತ್ತಲೇ ಬಂದಿವೆ. ಇಂದಿನ ವರ್ತಮಾನದಲ್ಲಿಯೂ ನಡೆಯುತ್ತಿರುವ ಹಾಗೆ.

ಶರಣತ್ವವೆಂದರೆ ಮಾನವೀಯ ಮೌಲ್ಯ. ಶರಣರು ಕೆಲವರು ಆ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುತ್ತಿರಲಿಲ್ಲ ಎಂಬ ಆರೋಪವಿತ್ತು. ಅದನ್ನು ಗಿಳಿಪಾಠ ಮಾಡಿಕೊಂಡಿದ್ದರು. ಕೆಲವರಲ್ಲಿ ಭಂಡತನ ಮತ್ತು ಜಡತ್ವ ಬೆಳೆಯುತ್ತಿತ್ತು. ಅವರಿಗೆ ತಾಳ್ಮೆ ಕಾಯ್ದುಕೊಳ್ಳುವುದರ ಮತ್ತು ತಾತ್ವಿಕ ಬದ್ಧತೆಯ ಅಗತ್ಯವಿತ್ತು. ಅಲ್ಲಿಯ ಸಾಮಾಜಿಕ ವ್ಯವಸ್ಥೆ, ಬಿಜ್ಜಳ, ಸೋವಿದೇವರ ಸಂಗಡ ಬಸವಣ್ಣ ಮತ್ತು ಶರಣರ ತಣ್ಣನೆಯ ವೈಚಾರಿಕ ಸಂಘರ್ಷ-ಹೀಗೆ ಚರ್ಚೆಗಳು ನೀಲಾಂಬಿಕೆ, ಗಂಗಾಂಬಿಕೆ ಮತ್ತು ಬಸವಣ್ಣ ಅವರ ನಡುವೆ ನಡೆಯುವವು. ಇವು ಮೌಲ್ಯವನ್ನು ಕಟ್ಟುವಂಥವು. ಬಿಜ್ಜಳ ವರ್ಸಸ್‌ ಶರಣರು- ಎಂಬ ಅನುಮಾನದ ವಾತಾವರಣದಲ್ಲಿ ಬಸವಣ್ಣನ ದ್ವಂದ್ವಸ್ಥಿತಿ, ʼನನಗಿದೆಂಥ ಸಂಕಟ. ಬಿಜ್ಜಳರನ್ನೂ ಉಳಿಸಬೇಕು, ಶರಣರನ್ನೂ ರಕ್ಷಿಸಬೇಕು. ಸಮಯ ನನ್ನೆದುರು ಹೊಸ ಹೊಸ ದಾಳಗಳನ್ನು ಉರುಳಿಸುತ್ತಿದೆ.ʼ ಆತನ ಧರ್ಮಸಂಕಟದ ಮಾತುಗಳು. ಸೋವಿದೇವ ಯಾವಾಗಲಾದರೂ ಶರಣರ ವಿರುದ್ಧ ಕಾರ್ಯ ಎಸಗುವವನು. ಈ ಆತಂಕ ಬಸವಣ್ಣನನ್ನು ನಿರಂತರ ಕಾಡುತ್ತಿತ್ತು.

ಅಲ್ಲಮಪ್ರಭುಗಳಿಗೆ ಒಳಗಣ್ಣಿತ್ತೋ ಏನೋ? ಕಲ್ಯಾಣದ ಸುತ್ತಲಿನ ಕ್ರಿಯೆಗಳಿಗೆ ಭಾಷ್ಯ ನುಡಿದಂತೆ ಮಾತನಾಡುತ್ತಿದ್ದಾಗ ಮತ್ತು ನಿಜಾರ್ಥದಲ್ಲಿ ಬಸವಣ್ಣನನ್ನು ಅರ್ಥೈಸಿಕೊಂಡವನೆಂದರೆ ಅಲ್ಲಮ! ಬಸವಣ್ಣ ಯಾರು ಯಾರಿಗೆ ಹೇಗೆ ಕಾಣುತ್ತಾನೆ? ಇದನ್ನು ಅಲ್ಲಮನಷ್ಟು ನಿಖರವಾಗಿ ಬೇರೆ ಯಾರಿಗೂ ಹೇಳಲು ಸಾಧ್ಯವಿಲ್ಲ. ಹಾಗೆಯೆ ಬಸವಣ್ಣನಿಗೆ ಪ್ರಭುಗಳೆಂದರೆ ಆತ್ಮಸುಖ, ಸಖ! ಪರಸ್ಪರರ ಗ್ರಹಿಕೆ ಅಪ್ರತಿಮ! ಅದು ಅವರಿಗೆ ಅರಿವಿಗೆ ಬಂದಿದ್ದು ಕಾಣುತ್ತದೆ. ಅದಕ್ಕೆ ಅಲ್ಲಮನು ಕಲ್ಯಾಣವನ್ನು ಬಿಡುವಾಗ, ʼಬಸವಣ್ಣನವರು ಕಲ್ಯಾಣವನ್ನು ತೊರೆದು ಹೊರಡುವ ಮೊದಲು ನಾನು ಹೊರಡುವೆ. ಬಸವನಿಲ್ಲದ ಕಲ್ಯಾಣದಲ್ಲಿ ನಾನೇಕೆ ಇರಬೇಕು!ʼ ಹೀಗೆ ನುಡಿದು ಹೋಗಿದ್ದರು. ಈ ನುಡಿ, ಅವರ ಒಳದೃಷ್ಟಿಯೋ! ಅದು ಮುಂದಾಗಬಹುದಾದ ಘಟನೆಗಳಿಗೆ ಮುನ್ನುಡಿ ಬರೆದಂತಿತ್ತು. ಬಸವಣ್ಣ ಮತ್ತು ಅ®èಮರ ವಚನಗಳ ವಿನ್ಯಾಸದ ಕುರಿತೂ ಚರ್ಚೆಗಳಿವೆ. ಬಸವಣ್ಣ ಅಲಂಕಾರಗಳನ್ನು ನಂಬಿದವ. ಅಲ್ಲಮ ಒಂದೇ ನುಡಿಯ ಮಾಯೆಯನ್ನು ಸೃಷ್ಟಿಸಿದವ. ಆ ಕಾರಣಕ್ಕಾಗಿಯೇ ಅಲ್ಲಮ ಅನುಭವ ಮಂಟಪದ ಅಧ್ಯಕ್ಷನಾಗಿದ್ದು. ಅಲ್ಲಮ ಹೇಳಿದ್ದು, ʼನಾನು ಅರ್ಥಗಳನ್ನು ಕೊಡೋದಿಲ್ಲ, ಕೊಡುವುದು ಬರೀ ಶಬ್ದ. ನಿಮಗೆ ಬೇಕಾದ ಅರ್ಥಗಳನ್ನ ನೀವೇ ಕಟ್ಕೋಬೇಕು.ʼ ಎಂದು. ಈ ಸಂವಾದಗಳು ವಿಸಾಜಿಯವರು ಗ್ರಹಿಸಿದ ಅಲ್ಲಮನ ದರುಶನ ಮಾಡಿಸುತ್ತದೆ.

ತನಗೆ ತಾನೇ ಗೃಹಬಂಧನಕ್ಕೆ ಒಳಗಾಗಿದ್ದಾನೆ ಬಸವಣ್ಣ. ಕೋಣೆಯಲ್ಲಿ ಅಂತರ್ಮುಖಿಯಾಗಿ ಕುಳಿತಿದ್ದಾನೆ. ಮೌನ ಮುರಿಯುತ್ತಿಲ್ಲ. ಬಸವಣ್ಣನಿಗೆ ಗೊತ್ತಾಗಿದೆ. ಅದಕ್ಕೆ ವಾರದ ಹಿಂದೆಯೇ ಶರಣರಿಗೆ ಕಲ್ಯಾಣಪುರ ತೊರೆಯಲು ಸೂಚಿಸಿದ್ದಾನೆ. ʼಹೊರಡಿ, ಶ್ರೀಶೈಲಕ್ಕೋ, ಉಳವಿಗೋ, ಬನವಾಸಿಗೋ, ಸಂಗಮಕ್ಕೋ ಹೊರಡಿ.ʼ ಹೀಗೆಂದು ಅವರಿಗೆ ಸಾಗಲು ಆದೇಶಿಸಿದ್ದಾನೆ. ಕಲ್ಯಾಣದ ನಡುಬೀದಿಯಲ್ಲಿ ಓಡಾಡುವ ಸ್ವಾತಂತ್ರ್ಯ ಈಗ ಶರಣರಿಗೆ ಉಳಿದಿಲ್ಲ. ಅಲ್ಲಿ ಬೀದಿ ಬೀದಿಗಳಲ್ಲಿ ಸೋವಿದೇವನ ಸೈನಿಕರು ಗಸ್ತು ಕಾದಿರುವರು. ದಿನದಿಂದ ದಿನಕ್ಕೆ ಕಲ್ಯಾಣದ ಪರಿಸ್ಥಿತಿ ಹದಗೆಡುತ್ತಿದೆ. ಯಾವುದೋ ಊರಿನ ಮುದುಕಿ ತಾನು ಬಸವಣ್ಣನನ್ನು ನೋಡಬೇಕೆಂದು ಅಗಸಿಯಲ್ಲಿ ಕುಳಿತು ರೋಧಿಸುತ್ತಿದ್ದಾಳೆ. ಶರಣರ ಹಕ್ಕುಗಳನ್ನು, ವಚನ ಹೇಳುವುದನ್ನು ಹತ್ತಿಕ್ಕಲಾಗಿದೆ. ನಾಲ್ಕು ಜನ ಸೇರುವ ಹಾಗಿಲ್ಲ. ನಿಷೇದಾಜ್ಞೆ ಜಾರಿಯಿದೆ. ಒಂದು (ಅ)ಘೋಷಿತ ತುರ್ತುಸ್ಥಿತಿ. ಕಾಲ ಬದಲಾಗಿದೆ. ಬಿಜ್ಜಳ ʼಬಸವನೆಂದರೆ ಅರಮನೆಯ ಹೆಮ್ಮೆ ಅನ್ನುತ್ತಿದ್ದರು. ಈಗ! ಬಸವಣ್ಣನಿಂದ ಮಾನ ಹರಾಜಾಗುತ್ತಿದೆ.ʼ ಎನ್ನುತ್ತಿದ್ದಾರೆ. ಬಸವಣ್ಣನ ಮನಸ್ಸಿನಿಂದ ಇವತ್ತು ಅರಮನೆಯ ದಾರಿ ಅಳಿಸಿ ಹೋಗಿದೆ. ಬಸವಕಲ್ಯಾಣವು ಹೋಗಿ ಈಗ ಸೋವಿದೇವನ

ಕಲ್ಯಾಣವಾಗಿದೆ.ಇಂಥ ಪ್ರಸಂಗಕ್ಕೆ ಅಕ್ಕನಾಗಮ್ಮ, ನೀಲಾಂಬಿಕೆ ಮತ್ತು ಗಂಗಾಂಬಿಕೆ ಸಾಕ್ಷಿಯಾಗಿದ್ದಾರೆ. ವಿಸಾಜಿಯವರು ಬದಲಾದ ಕಲ್ಯಾಣದ ಪರಿಸ್ಥಿತಿಯನ್ನು ಈ ಪ್ರತಿಮಾತ್ಮಕ ನುಡಿಗಳಲ್ಲಿ ಕಟ್ಟಿಕೊಟಿದ್ದಾರೆ.

ಕಲ್ಯಾಣವು ಈಗ ಹತ್ಯೆಗೆ ಇಳಿದ ಪುರ. ಹಿಂಸೆಗೆ ಪ್ರತಿ ಹಿಂಸೆಯನ್ನು ಬಸವಣ್ಣ ಎಂದೂ ಸಮರ್ಥಿಸಿದವನಲ್ಲ. ಆತ ಸಕಲ ಜೀವಿಗಳಿಗೆ ಲೇಸನ್ನು ಬಯಸಿದಾತ. ಕಲ್ಯಾಣದ ಈ ದಾರುಣ ಅಂತ್ಯವನ್ನು ಯಾರೂ ನಿರೀಕ್ಷಿಸಿರಲಿಲ್ಲ. ಆರಂಭದಲ್ಲಿ ಅಂತ್ಯದ ಸೂಚನೆ ಎಲ್ಲಿರುತ್ತದೆ? ಈ ಸರಳ ಸತ್ಯವು ಆತನಿಗೆ ಗೊತ್ತು. ಕಲ್ಯಾಣವು ಇಂದು ಕೆನ್ನೀರು ಸುರಿಸುತ್ತಿದೆ. ಅದನ್ನು ಕಂಡು ಬಸವಣ್ಣನ ಹೃದಯ ಮರುಗುತ್ತಿದೆ. ಆತನಿಗೆ ಮನುಷ್ಯನ ಮೂಲ ಪ್ರವೃತ್ತಿಯು ಜ್ಞಾಪಕಕ್ಕೆ ಬರುತ್ತಿದೆ. ʼರಕ್ತದ ರುಚಿ ಮನುಷ್ಯರ ಆದಿಮ ನೆನಪು. ಅದನ್ನು ಬಿಟ್ಟು ಹೊರಬರಲಾರರೇನೋ. ʼಹೀಗೆ ಬಸವಣ್ಣ ತನ್ನ ಸೋದರಿಯ ಸಂಗಡ ಮಾತನಾಡುವಾಗ ಆತ್ಮಪರೀಕ್ಷೆಗೆ ಒಳಪಡುವನು. ಶರಣನಿರಲಿ, ಬಿಜ್ಜಳನಿರಲಿ ಅಥವಾ ತಾನಿರಲಿ. ಮನುಷ್ಯನ ಒಳ ಹೊರಗು ಒಂದೇ ಆಗಿರಬೇಕು. ಈ ನಿಲುವು ಆತನದು. ಮನುಷ್ಯನ ಮೂಲ ನಡೆಗಳು ಒಂದೇ ಆಗಿರುತ್ತವೆ ಎನ್ನುವುದಕ್ಕೆ ಕಲ್ಯಾಣದ ಘಟನೆಗಳು ಇದಕ್ಕೆ ಸಾಕ್ಷಿ ಆಗುವವು. ಬಡವರ ಅನ್ನಕ್ಕೆ ಕತ್ತರಿ ಬೀಳುತ್ತದೆ. ದಾಸೋಹದ ಮನೆಗಳ ದವಸ ಕಾಳಸಂತೆಕೋರರ ಪಾಲಾಗುತ್ತಿದೆ. ಸೋವಿದೇವನ ಮದುವೆಯ ಉಳಿದ ಆಹಾರವನ್ನು ಹೊರಗೆ ಸುರಿಯುತ್ತಾರೆ. ಹಸಿದ ಬಡವರು ಅದಕ್ಕೆ ಬಾಯಿ ಹಾಕಿದಾಗ ಸೈನಿಕರು ಚಾಟಿ ಏಟು ನೀಡುತ್ತಿದ್ದಾರೆ. ಅನುಭವ ಮಂಟಪ, ದಾಸೋಹ ಮನೆಗಳು ಭಣಗುಡುತ್ತಿವೆ. ಕೊಲೆ ಸುಲಿಗೆ ಹಿಂಸಾಚಾರ, ದೌರ್ಜನ್ಯಗಳಲ್ಲಿ ಕಲ್ಯಾಣಪುರ ಮುಳುಗುತ್ತಿದೆ.

ಬಸವಣ್ಣ ತೀವ್ರ ದುಃಖಿಯಾಗಿರುವನು. ಯಾವ ಕೈಯಿಂದ ಮಕ್ಕಳಿಗೆ ಆಶೀರ್ವಾದ ಮಾಡಬೇಕಿತ್ತೋ ಅದೇ ಕೈಯಿಂದ ಮಣ್ಣು ಹಾಕುವ ಸರದಿ! ಪರಸ್ಪರ ಇಷ್ಟಪಟ್ಟ ಹರಳಯ್ಯ ಮಧುವರಸರ ಮದುಮಕ್ಕಳು. ಅವರ ಹತ್ಯೆಯೆಂದರೆ ಅದು ಪ್ರೇಮದ ಹತ್ಯೆಯೂ ಹೌದು. ಮೌಲ್ಯದ ಕೊಲೆಯೂ ಸರಿ! ಅವರ ಪ್ರೇಮ ಚಿಗುರಲು ಜೇನು ನೊಣಗಳ ಪ್ರಸಂಗವು ನಾಟಕಕ್ಕೆ ಪೂರಕವಾಗಿ ಹೆಣೆಯಲಾಗಿದೆ. ಇದನ್ನು ಒಂದು ತಂತ್ರವಾಗಿ ವಿಸಾಜಿ ಬಳಸಿದ್ದಾರೆ. ಅಧಿಕಾರಶಾಹಿ ಅವರನ್ನು ಹೊಸಕಿ ಹಾಕಿದೆ. ಒಂದೊಂದಾಗಿ ಹೀಗೆ ಕಲ್ಯಾಣದ ಕನಸುಗಳು ಕಮರಿ ಹೋಗುತ್ತಿವೆ. ಬಸವಣ್ಣ ಆ ರಾತ್ರಿ ಮಹಾಮನೆಯ ಉಪ್ಪರಿಗೆಯ ಮೇಲಿಂದ ಕಲ್ಯಾಣಪುರವನ್ನು ನೋಡುವ ಪ್ರಸಂಗ ರೂಪಕಾತ್ಮಕವಾಗಿದೆ. ಅದು ಅದರ ಅಧಃಪತನದ ದಿಕ್ಸೂಚಿಯಂತೆ ಮೂಡಿದೆ. ʼಕಲ್ಯಾಣಪುರವು ದಟ್ಟವಾದ ಕತ್ತಲೆಯೊಡನೆ ಹೋರಾಡಲು ಸಾಧ್ಯವಾಗದ ಅಸಹಾಯಕತೆಯಿಂದ ನರಳುತ್ತಿತ್ತು.ಇಡೀ ಪಟ್ಟಣ ದಾಳಿ ಮಾಡುವ ಚಿರತೆಯ ಕಳ್ಳ ಹೆಜ್ಜೆಯಂತೆ ತೋರುತ್ತಿತ್ತು. ಆ ಚಿರತೆಯ ಹೆಜ್ಜೆ ಸಪ್ಪಳವನ್ನು ನಾನು ಆಲಿಸಿದ್ದೆ. ಅದರ ಬಾಯಿಯಲ್ಲಿ ಎಳೆಯ ಮದುಮಕ್ಕಳ ರಕ್ತವಿತ್ತು. ಅದರ ಕಣ್ಣಲ್ಲಿ ಸುಡುತ್ತಿರುವ ಕಲ್ಯಾಣದ ಬೆಂಕಿಯಿತ್ತು.ʼ ಬಸವಣ್ಣವರ ಈ ಸಾಲುಗಳು ಕನಸು ಮತ್ತು ವಾಸ್ತವನ್ನು ದರ್ಶಿಸುತ್ತವೆ.

ವಚನದ ಕಟ್ಟುಗಳನ್ನು ಸುಡಲಾಗುತ್ತದೆ. ಶರಣರಿಂದ ತುಂಬಿದ್ದ ಕಲ್ಯಾಣವು ಖಾಲಿಯಾಗಿದೆ. ದಾಸಿಮಯ್ಯ, ಚೆನ್ನಯ್ಯ, ಕಕ್ಕಯ್ಯ, ಹರಳಯ್ಯ, ಮಧುವರಸ, ಸಂಗವ್ವೆ, ರೆಮ್ಮವ್ವೆ, ಲಕ್ಕವ್ವ, ಕಾಳವ್ವೆ, ಅಕ್ಕ, ಪ್ರಭುಗಳಿಲ್ಲದ ಕಲ್ಯಾಣವನ್ನು ಕಲ್ಪಿಸುವುದೂ ಕಷ್ಟ. ಸೂಳೆ ಸಂಕವ್ವೆಯನ್ನು ಅವಳ ವೃತ್ತಿಯಿಂದ ಅವಮಾನ ಮಾಡಿ ವಚನಗಳನ್ನು ಸುಟ್ಟು ಹಾಕುವರು. ಶರಣರ ದನಿಯನ್ನು ಕಲ್ಯಾಣದಲ್ಲಿ ಅಡಗಿಸಲಾಗುತ್ತದೆ.

ಬಸವಣ್ಣ ಈಗ ಏಕಾಂಗಿ. ಆತನ ಮನೆಯ ದೀಪಕ್ಕೆ ಎಣ್ಣೆಯಿಲ್ಲ. ಅದು ನಂದಿ ಹೋಗುವ ಕಾಲ ಸನ್ನಿಹಿತವಾಗಿದೆ. ಇದು ಅಂತ್ಯದ ದಿಕ್ಸೂಚಿಯಂತಿದೆ.ನೀಲಾಂಬಿಕೆ ಹೊರಡಲು ಕರೆಯುತ್ತಾಳೆ. ಆದರೆ ಮನೆ ಬಿಟ್ಟು ಬರಲು ಬಸವಣ್ಣ ಸಿದ್ಧನಿಲ್ಲ. ʼಕಲ್ಯಾಣ ನನ್ನ ಬದುಕಿನ ಕೊನೆಯ ತಾಣ. ಇಂಥ ಕಲ್ಯಾಣವನ್ನು ತೊರೆಯುವುದು ನನ್ನಿಂದ ಸಾಧ್ಯವಿಲ್ಲʼಎನ್ನುವನು. ಕಾಯಕದ ಆ ಮಣ್ಣಿನ ಸಂಬಂಧವನ್ನು ಅಷ್ಟು ಸುಲಭವಾಗಿ ಆತನಿಗೆ ಕಡಿದುಕೊಳ್ಳುವುದು ಸಾಧ್ಯವಿಲ್ಲ. ಮಡಿವಾಳ ಮಾಚಿದೇವರು, ಚೌಡರಸರು, ಏಕಾಂತ ರಾಮಯ್ಯ, ಕನ್ನದ ಬ್ರಹ್ಮಯ್ಯ, ಮಸಣಯ್ಯ, ಗಂಗವ್ವ, ಅಕಮ್ಮ-ಎಲ್ಲರೂ ಊರು ತ್ಯಜಿಸಿದ್ದಾರೆ. ʼನೀಲಾ ನೀನು ಹೊರಡು. ಪ್ರಳಯಕ್ಕೂ ಎಲ್ಲವನ್ನೂ ನಾಶ ಮಾಡುವ ಶಕ್ತಿಯಿಲ್ಲ. ಅಂತ್ಯದಲ್ಲೂ ಅಸ್ತಿತ್ವ ಉಳಿಸಿಕೊಳ್ಳುವ ಅದೆಷ್ಟೋ ಜೀವಾಣುಗಳಿವೆ. ನೆನಪುಗಳೇ ಕಲ್ಯಾಣದ ಭರವಸೆ. ನೀನು ಹೊರಡು ನೀಲಾ. ಹೊಸ ಕಲ್ಯಾಣಕ್ಕಾಗಿ ಹಂಬಲಿಸುತ್ತ ನಾನಿಲ್ಲೇ ಉಳಿಯುವೆ.ʼ ಎನ್ನುವನು. ಕಲ್ಯಾಣದ ಚಳುವಳಿಯ ಫಲ-ನಿಷ್ಫಲದ ಸಂಪೂರ್ಣ ಹೊಣೆಯನ್ನು ಬಸವಣ್ಣ ಹೊತ್ತಂತಿದೆ. ಈ ಮಾತಿನೊಂದಿಗೆ ನಾಟಕ ಹೊಸ ಭರವಸೆಯ ದೀಪ ಬೆಳಗಿಸಿ ಕೊನೆಗೊಳ್ಳುತ್ತದೆ.

ವಿಕ್ರಮರ ಪ್ರಸ್ತುತ ನಾಟಕವು ಕನ್ನಡದಲ್ಲಿ ಇದುವರೆಗೆ ಬಂದ ಶರಣರ ನಾಟಕಗಳಲ್ಲಿ ಭಿನ್ನವಾಗಿ ನಿಲ್ಲುತ್ತದೆ. ಇದು ಆಶಯ ಮತ್ತು ಕಟ್ಟಿದ ಬಗೆಯ ಸಂದರ್ಭದಲ್ಲಿ ಎದ್ದು ಕಾಣುವ ನಾಟಕ. ಪ್ರತಿಮೆ, ರೂಪಕಮತ್ತು ನುಡಿಗಟ್ಟುಗಳು ಅಲ್ಲಲ್ಲಿ ಬಳಕೆಗೊಂಡಿದ್ದು ಇದರ ಶಕ್ತಿ. ಬೇರೆಯದೇ ಪರಿಭಾಷೆಯೂ ಇದೆ. ಬಸವಣ್ಣನ ಮಹಾಮನೆಯಲ್ಲಿ ಇಡೀ ನಾಟಕ ಜರುಗುತ್ತದೆ. ರಾಜಸತ್ತೆಯ ಮೇಲೆ ವೈದಿಕಶಾಹಿಯ ಒತ್ತಡಗಳಿವೆ. ಅದರಿಂದ ಬಿಜ್ಜಳ, ಸೋವಿದೇವರ ನಡೆಗಳು ಪ್ರಭಾವಿಸಿವೆ. ಕಲ್ಯಾಣದಲ್ಲಿ ಹೊಸ ಸಮ ಸಮಾಜದ ವಿರುದ್ಧ ಒಂದು ಷಡ್ಯಂತ್ರವೇ ನಡೆಯುತ್ತದೆ. ಅದು ಒಂದು ಆಂತರ್ಯದ ಧಾರೆಯಾಗಿ ಜನ್ಮ ತಾಳುತ್ತದೆ. ಅದು ಅಗೋಚರವಾಗಿ ಅಮೂರ್ತ ರೂಪದಲ್ಲಿ ನಾಟಕದೊಳಗೆ ಹರಿಯುತ್ತದೆ. ಇದು ಈ ನಾಟಕದ ರಚನಾ ವಿನ್ಯಾಸದ ಹೆಗ್ಗಳಿಕೆ. ಬಹಳಷ್ಟು ಪ್ರಸಂಗಗಳು ಘಟಿಸಲು ಅವಕಾಶಗಳಿತ್ತು. ಆದರೆ ಅವುಗಳನ್ನು ಪಾತ್ರಗಳ ಮಾತುಗಳಲ್ಲಿ ಕಟ್ಟಲಾಗಿದೆ. ಒಂದು ಪಕ್ಷ ಅವು ಘಟಿಸಿದ್ದರೆ ಪ್ರಯೋಗಕ್ಕೆ ಆಯಾಮಗಳು ದಕ್ಕುತ್ತಿದ್ದವು. ಸಂಘರ್ಷ ಹುಟ್ಟಿ ನಾಟಕೀಯತೆ ದೊರಕುತ್ತಿತ್ತು. ಇದೊಂದು ಕೊರತೆಯಾಗಿ ಕಾಡುತ್ತದೆ. ಇದು ಈಗ ನಿರ್ದೇಶಕರಿಗೆ ಸವಾಲು. ಅವರು ಮುರಿದು ಕಟ್ಟುವ ಮೂಲಕ ನಾಟಕಕ್ಕೆ ಹೊಸ ಆಯಾಮವನ್ನು ರಂಗದ ಮೇಲೆ ನೀಡು

 

MORE FEATURES

ಮಹಾಭಾರತಕ್ಕೆ ಮಾತ್ರ ಸೀಮಿತವಾಗದೆ ಸಾರ್ವಕಾಲಿಕತೆಯ ಸ್ಪರ್ಶವನ್ನು ಹೊಂದಿದೆ

09-12-2025 ಬೆಂಗಳೂರು

"ಯಾವುದೋ ಒಂದು ಕ್ಷಣದಲ್ಲಿ ಈ ಕಾದಂಬರಿಯ ಕಥಾವಸ್ತುವಿಗೆ ಪ್ರೇರಣೆ ನೀಡಿತು. ಕೆಲವು ಕಾಲ ಮನಸ್ಸಿನಲ್ಲಿ ಮಥನವಾಗುತ್ತ...

ಅಂಬೇಡ್ಕರ್‌ ಪ್ರಸಕ್ತ ಸಮಾಜ, ರಾಜಕೀಯಕ್ಕೆ ಬಹು ಮುಖ್ಯ: ದೀಪಾ ಭಾಸ್ತಿ

09-12-2025 ಬೆಂಗಳೂರು

ಗುಲ್ಬರ್ಗಾ: ಸಪ್ನ ಬುಕ್ ಹೌಸ್, ಬೆಂಗಳೂರು ಮತ್ತು ಕುಟುಂಬ ಪ್ರಕಾಶನ, ಕಲಬುರಗಿ ವತಿಯಿಂದ ಪ್ರೊ. ಎಚ್ ಟಿ ಪೋತೆ ಅವರ ಡಾ ಬ...

ಈಗಿನ ಕಾಲದಲ್ಲಿ ಇದು ಎಲ್ಲರಿಗೂ ತಲುಪಬೇಕಾದಂತಹ ಪುಸ್ತಕ

09-12-2025 ಬೆಂಗಳೂರು

"ಕಲ್ಕತ್ತಾದ ಗೌರವಾನ್ವಿತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಹುಡುಗಿ, ತನ್ನ ಸಂಬಂಧಿ ಅಣ್ಣನ ಸ್ಥಾನದಲ್ಲಿ ಇದ್ದ ರಮೇ...