ಇತಿಹಾಸವನ್ನು ಸಮಗ್ರವಾಗಿ ನೋಡುವ ಪರಿ 'ಮಣ್ಣೆ’


ಮಣ್ಣೆಯ ಶಾಸನಗಳು ಎಂಬ ವಿಭಾಗದಲ್ಲಿರುವ ದಟ್ಟ ವಿವರಗಳು, ಸಾಮಾನ್ಯ ಓದುಗನಿಗೂ, ಅದ್ಭುತ ಲೋಕವನ್ನು ತೆರೆದಿಡುತ್ತವೆ. ಅಲ್ಲಿ ಬಳಸಿರುವ ಭಾಷೆಯು, ಆ ಕಾಲದಲ್ಲಿ ಪ್ರಚಲಿತವಿದ್ದ ಪದ್ಧತಿಗಳು, ಆಚರಣೆಗಳು, ರಾಜರ ದಾನಪ್ರವೃತ್ತಿಯ ಜೊತೆಗೇ ತಮ್ಮನ್ನು ಹೊಗಳಿಕೊಳ್ಳುವ ಪರಿಗಳನ್ನು ತೆರೆದಿಡುತ್ತದೆ ಎನ್ನುತ್ತಾರೆ ಲೇಖಕ ಶಂಕರ್ ಅಜ್ಜಂಪುರ. ಲೇಖಕ ಎಚ್.ಎಸ್. ಗೋಪಾಲರಾವ್ ಅವರ ಮಣ್ಣೆ – ಒಂದು ಪರಿಚಯಾತ್ಮಕ ಅಧ್ಯಯನ ಕೃತಿಯ ಕುರಿತ ಲೇಖನ ನಿಮಗಾಗಿ..

ಮಣ್ಣೆ – ಒಂದು ಪರಿಚಯಾತ್ಮಕ ಅಧ್ಯಯನ
ಲೇಖಕರು – ಡಾ. ಎಚ್.ಎಸ್. ಗೋಪಾಲರಾವ್
ಪ್ರಕಾಶಕರು – ಅಭಿನವ ಪ್ರಕಾಶನ
ಪುಟಗಳು - 240
ಪ್ರಕಟಿತ ವರ್ಷ -2021
ಬೆಲೆ – ರೂ. 250

ಮಣ್ಣೆ – “ಒಂದು ಪರಿಚಯಾತ್ಮಕ ಅಧ್ಯಯನ”, ಈ ಕೃತಿಯ ಲೇಖಕರಾದ ಡಾ. ಎಚ್.ಎಸ್. ಗೋಪಾಲರಾಯರು ಹೇಳಿಕೊಂಡಿರುವಂತೆ ಮಣ್ಣೆಯೊಂದಿಗಿನ ಅವರ ನಂಟು ಅರ್ಧ ಶತಮಾನದಷ್ಟಿದೆ. ಅಂಥ ಆಪ್ತತೆಯಿರುವ ಕಾರಣದಿಂದಲೇ ಅವರ ಈ ಕೃತಿ ಓದುಗರಿಗೂ ಹತ್ತಿರವಾಗುತ್ತದೆ. ಪರಿಚಯಾತ್ಮಕ ಅಧ್ಯಯನ ಭಾಗದಲ್ಲಿ ಮಣ್ಣೆಯ ಸ್ಥೂಲ ಪರಿಚಯವಿದೆ.

ಇತಿಹಾಸದ ಬಗ್ಗೆ ಪ್ರೀತಿ ಬೆಳೆಯುವಂತೆ ಮಾಡಿದವರು ಅವರ ಚಿಕ್ಕಪ್ಪ ಎಚ್.ಎನ್. ನಾಗರಾಜರಾಯರಾದರೆ, ಮಣ್ಣೆಯ ಬಗ್ ಪ್ರೀತಿ ಬಂದದ್ದು ಸಿ.ಎಚ್. ಹಯವದನರಾಯರ ಪುಸ್ತಕದಿಂದ. ಅದು ಲಭ್ಯವಾದ ಪರಿಯನ್ನೂ ವಿವರಿಸಿರುವುದರಲ್ಲಿ ಅಂದಿನ ಪರಿಸ್ಥಿತಿ ಕಾಣುವಂತಿದೆ. 

ಅದಕ್ಕಿಂತ ಸ್ವಾರಸ್ಯವೆಂದರೆ, ಮಣ್ಣೆಯನ್ನು ಕುರಿತಾದ ಶಾಸನವನ್ನು ಓದಿದರೆ ಏಳು ಕೊಪ್ಪರಿಗೆ ಹಣ ದೊರೆಯುತ್ತದೆಂಬ ಆಶೆಯು ಶಾಸನಗಳನ್ನು ಓದಲು ಪ್ರೇರಕವಾಯಿತು ಎಂದು ಪ್ರಾಂಜಲವಾಗಿ ಹೇಳಿಕೊಂಡಿದ್ದಾರೆ! ಅದೇ ರೀತಿ ದುರಂತವೆಂದರೆ, ಮುಂದೆ ಆ ಶಾಸನವನ್ನು ಚಪ್ಪಡಿ ಕಲ್ಲಿಗೆಂದು ಒಡೆದು ಹಾಕಲಾಯಿತು. ಇಂಥ ಚಿಕ್ಕ ಘಟನೆಗಳನ್ನು ಪ್ರಸ್ತಾಪಿಸುತ್ತ, ಇತಿಹಾಸವು ಹಾದು ಬಂದ ದಾರಿಯನ್ನು ಗೋಪಾಲರಾಯರು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.

ಅವರ ಈ ಕೃತಿಯಲ್ಲಿ ಇತಿಹಾಸವನ್ನು ಸಮಗ್ರವಾಗಿ ನೋಡುವ ಪರಿಯನ್ನೂ ತಿಳಿಸಿದ್ದಾರೆ. ಪರಿವಿಡಿಯ ಪಟ್ಟಿಯೇ ಅದಕ್ಕೆ ಉದಾಹರಣೆ. ಇತಿಹಾಸಕ್ಕೆ ಇರುವ ಆಯಾಮಗಳನ್ನು ವಿಂಗಡವಾಗಿ ವಿವರಿಸಿದ್ದಾರೆ. ಒಂದು ಕಾಲಕ್ಕೆ ಭವ್ಯವಾಗಿ ಮೆರೆದ ಮಣ್ಣೆ ಈಗ ಚಿಕ್ಕ ಗ್ರಾಮವಾಗಿ ಕುಂದಿಹೋಗಿದೆ.

ಹಾಗಿದ್ದೂ ಅಲ್ಲಿ ಲಭ್ಯವಾದ ವಿವಿಧ ವಿವರಗಳಲ್ಲಿ ಅದರ ಶ್ರೀಮಂತಿಕೆ ತುಂಬಿರುವುದು ಕಾಣುವಂತಿದೆ. ಅಂದಿನ ರಾಜಕೀಯ ಪರಿಸ್ಥಿತಿಯು ಅಲ್ಲಿ ದೊರಕಿದ ಶಿಲಾಶಾಸನಗಳು ವಿವರಿಸುತ್ತವೆಯಾದರೆ. ಸಾಹಿತ್ಯ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಸಾಮಾಜಿಕ ನೆಲಗಟ್ಟುಗಳಲ್ಲಿ ಅಂದು ಮಣ್ಣೆಯು ಮೆರೆದ ವೈಭವವನ್ನು ಕಟ್ಟಿಕೊಡಲಾಗಿದೆ.

ಮಣ್ಣೆಯ ಶಾಸನಗಳು ಎಂಬ ವಿಭಾಗದಲ್ಲಿರುವ ದಟ್ಟ ವಿವರಗಳು, ಸಾಮಾನ್ಯ ಓದುಗನಿಗೂ, ಅದ್ಭುತ ಲೋಕವನ್ನು ತೆರೆದಿಡುತ್ತವೆ. ಅಲ್ಲಿ ಬಳಸಿರುವ ಭಾಷೆಯು, ಆ ಕಾಲದಲ್ಲಿ ಪ್ರಚಲಿತವಿದ್ದ ಪದ್ಧತಿಗಳು, ಆಚರಣೆಗಳು, ರಾಜರ ದಾನಪ್ರವೃತ್ತಿಯ ಜೊತೆಗೇ ತಮ್ಮನ್ನು ಹೊಗಳಿಕೊಳ್ಳುವ ಪರಿಗಳನ್ನು ತೆರೆದಿಡುತ್ತದೆ.

ತಾಮ್ರ ಶಾಸನಗಳ ಸೊಗಸಾದ ಮುದ್ರಣವನ್ನು ನೀಡಲಾಗಿದ್ದು, ಲಿಪಿತಜ್ಞರಿಗೆ, ಅವುಗಳನ್ನು ಮೂಲದಲ್ಲೇ ಓದುವ ಅವಕಾಶವನ್ನು ಕಲ್ಪಿಸಿವೆ. ಶಿಲಾ ಶಾಸನಗಳು ಸಾಕಷ್ಟು ಭಗ್ನಗೊಂಡಿದ್ದು, ಅವುಗಳ ಪಠ್ಯಗಳಲ್ಲಿ ತ್ರುಟಿತವಿರುವುದು ಸ್ವಾಭಾವಿಕ. ಡಾ. ಗೋಪಾಲರಾಯರು ಜನಸಾಮಾನ್ಯರಿಗೆ ಈ ಕೃತಿಯ ಮೂಲಕ ಮಾಡಿರುವ ಮಹದುಪಕಾರವೆಂದರೆ, ಶಾಸನಗಳ ಸಂಗ್ರಹ ಭಾವಾನುವಾದನ್ನು ರಚಿಸಿರುವುದು. ಅದರಲ್ಲೂ ಸ್ವತಃ ಕಾದಂಬರಿಕಾರರೂ, ಸಾಹಿತಿಯೂ ಆಗಿರುವ ರಾಯರ ಬರವಣಿಗೆಯಲ್ಲಿ ಅಂದಿನ ಕಾಲಘಟ್ಟ, ರಾಜರ ಗುಣಸ್ವಭಾವಗಳನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ್ದಾರೆ. ಇದರ ಸ್ಪಷ್ಟತೆಯು ಓದುಗರಿಗೆ ಬರಲೆಂದು, ಆಸಕ್ತಿ ಕೆರಳಿಸುವಲ್ಲಿ ನೆರವಾಗುತ್ತದೆಂದು ಭಾವಿಸಿ, ಕೆಲವು ಸಾಲುಗಳನ್ನು ಅಲ್ಲಿರುವಂತೆಯೇ ಇಲ್ಲಿ ಉದ್ಧರಿಸಲಾಗಿದೆ.

“ಜೀವನವು ಗಾಳಿಯಂತೆ, ಮಿಂಚಿನಂತೆ, ಅಸ್ಥಿರದ ಪ್ರತಿಫಲನವೆಂದು ತಿಳಿದು, ಚಂಚಲವಲ್ಲದ ಉತ್ಕೃಷ್ಟ ಲೋಕವನ್ನು ಸಾಧಿಸಲು ದೇವಭೋಗವಾಗಿ ಜಿನಮಂದಿರಕ್ಕೆ ಭೂಮಿ ದಾನ ಮಾಡಿದ”. ಅರಸನ ವೈರಾಗ್ಯ ಭಾವವು ಎದ್ದು ಕಾಣುವಂತಿದೆ.

“...... ಕರ್ಣನ ದಾನಗಳನ್ನು ಶಿಥಿಲಗೊಳಿಸಿ, ದಿಗಂತವನ್ನು ಸೇರಿದ ಇತರ ರಾಜರ ದಾನಗಳನ್ನು ಮೀರಿದ ಇವನ ದಾನಗಳನ್ನು ಕಂಡು ರಾಜನ ಆನೆಗಳಿಗೆ ನಾಚಿಕೆಯಾಗುತ್ತಿತ್ತು. ಯಾರೂ ದೀರ್ಘಕಾಲ ಗೆಲ್ಲಲಾಗದಿದ್ದ ಗಂಗರನ್ನು, ತನ್ನ ಪರಾಕ್ರಮದಿಂದ ಗೆದ್ದು ಅಸಮಾನ ಎನಿಸಿಕೊಂಡಿದ್ದ, ತನ್ನನ್ನೂ ಆಕ್ರಮಿಸಬಹುದೆಂಬ ಭೀತಿಯಿಂದ ಕಲಿ ಪಲಾಯನ ಮಾಡಿದ್ದ.....” ಇತಿಹಾಸದ ಜೊತೆಗೆ ಅಲಂಕಾರಿಕ ವರ್ಣನೆಯ ಸೊಬಗು ಇಲ್ಲಿದೆ.

“ತನ್ನ ಆಳ್ವಿಕೆಯು ಪ್ರವರ್ಧಮಾನವಾದ (ವಿಜಯ) ಸಂವತ್ಸರದಲ್ಲಿ, ಮಾನ್ಯಪುರದಲ್ಲಿ ಬೀಡುಬಿಟ್ಟಿದ್ದಾಗ, ಪುಷ್ಯ ನಕ್ಷತ್ರದಂದು ಸೂರ್ಯಗ್ರಹಣ ಸಂಭವಿಸಿದಾಗ, ಜಿನಭವನದಲ್ಲಿ ವಾರವಿಲಾಸಿನಿಯರಿಂದ ವಿರಚಿತವಾದ ನೃತ್ಯ, ಗೀತ, ವಾದ್ಯ, ಬಲಿ, ವಿಲೇಪನ, ದೇವಪೂಜೆ ಮತ್ತು ಹೊಸ ಸೇರ್ಪಡೆಗಳಿಗಾಗಿ, ಎಡದಿಂಡೆ ವಿಷಯದ ಪೆರ್ವ್ವಡಿಯೂರು ಎಂಬ ಗ್ರಾಮವನ್ನು ಸರ್ವಬಾಧಾಪರಿಹಾರವಾಗಿ, ಉದಕಪೂರ್ವಕವಾಗಿ ದಾನ ನೀಡಲಾಗಿದೆ”..... ಎಂಬ ಈ ಸಂದರ್ಭವನ್ನು ಗ್ರಹಿಸಿದರೆ, ಸೂರ್ಯಗ್ರಹಣಕ್ಕೆ ಅಂದು ಇದ್ದ ಮಹತ್ವವನ್ನು ಅರಿಯಬಹುದು. ದೇಶದಲ್ಲಿ ಸಂಭವಿಸದ ಗ್ರಹಣಗಳಿಗೂ ಭಯಂಕರ ಪರಿಹಾರಗಳನ್ನು ಸೂಚಿಸುತ್ತ, ಗ್ರಹಣವೆಂದರೆ ಪ್ರಳಯ ಸಮಾನವೆಂದು ಬಿಂಬಿಸುತ್ತಿರುವ ಇಂದಿನ ಜ್ಯೋತಿಷಿಗಳ, ವಾಹಿನಿಗಳನ್ನಿಷ್ಟು ಇಲ್ಲಿ ನೆನಪಿಸಿಕೊಂಡರೆ, ಗ್ರಹಣವು ಪುಣ್ಯಕಾಲವೆಂದೇಕೆ ಭಾವಿಸಲಾಗುತ್ತಿತ್ತು ಎಂದಂತೂ ತಿಳಿಯುತ್ತದೆ.

ಎಲ್ಲ ಶಾಸನಗಳ ಕೊನೆಯಲ್ಲಿ ಬರುವ ಶಾಪಾಶಯದ ಅನುವಾದವು ಇಂತಿದೆ. ಇದರಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಸನ್ನಡತೆಯ ಅಗತ್ಯವನ್ನು ಸೊಗಸಾಗಿ ಬಿಂಬಿಸಲಾಗಿದೆ.

“ತಾನು ಕೊಟ್ಟದ್ದನ್ನಾಗಲೀ, ಪರರು ಕೊಟ್ಟದ್ದನ್ನಾಗಲೀ ಅಪಹರಿಸಿದರೆ, ಅರವತ್ತು ಸಂವತ್ಸರ ಕಾಲ ಕ್ರಿಮಿಯಾಗಿ ಹುಟ್ಟುತ್ತಾರೆ. ಬ್ರಹ್ಮಸ್ವವು ಘೋರವಾದ ವಿಷ. ವಿಷವು ಒಬ್ಬನನ್ನು ಕೊಲ್ಲುತ್ತದೆ. ದೇವಸ್ವವು ಮಕ್ಕಳು ಮತ್ತು ಮೊಮ್ಮಕ್ಕಳನ್ನು ಕೊಲ್ಲುತ್ತದೆ”.

ಇತಿಹಾಸಕ್ಕೆ ಸಂಬಂಧಿಸಿದ ನೀರಸ ವಿವರಗಳು ಅನೇಕ ಬಾರಿ ಸಾಮಾನ್ಯ ಓದುಗನಿಗೆ ಆಕರ್ಷಣೀಯ ಎನ್ನಿಸದೇ ಇರಬಹುದು. ಆದರೆ ಡಾ. ಗೋಪಾಲರಾಯರ ಬರಹದಲ್ಲಿ ಅಂಥ ನೀರಸತೆ ಕಾಣದು. ಸಾಂದರ್ಭಿಕವಾಗಿ ಈಗಿನ ವಿಷಯಗಳನ್ನು ಪ್ರಸ್ತಾಪಿಸುತ್ತಲೇ ಅವರು ಓದುಗನನ್ನು ವಸ್ತುವಿನ ಕಡೆಗೆ ಗಮನವಿರುವಂತೆ ನೋಡಿಕೊಂಡಿದ್ದಾರೆ. 

ಕೊನೆಯಲ್ಲಿ ನನಗೆ ಅಭಿನವದ ಪರವಾಗಿ ಬರೆದಿರುವ ರವಿಕುಮಾರರ ಮಾತುಗಳು ತುಂಬ ಮಹತ್ವದ್ದೆನ್ನಿಸಿತು. ಏಕೆಂದರೆ ಇತಿಹಾಸದ ಬಗ್ಗೆ ಅಲಕ್ಷ್ಯವುಂಟಾದ ಕಾಲಘಟ್ಟವನ್ನು ಅವರು ಸಮರ್ಥವಾಗಿ ಪ್ರತಿಪಾದಿಸಿದ್ದಾರೆ. ಅವರು ಹೇಳುತ್ತಾರೆ – “ಇವತ್ತು ದಾಖಲೆಗಳು ಎಷ್ಟು ಪುರಾತನ ಎಂಬುದನ್ನು ನಿಖರವಾಗಿ ತಿಳಿಸುವ ತಂತ್ರಜ್ಞಾನವಿದೆ. ಇವು ಇರದ ಕಾಲಕ್ಕೆ ವಿದ್ವಾಂಸರು ಪಠ್ಯಗಳನ್ನು ಆಧರಿಸಿ ಅಂದಿನ ಸಮಾಜ, ಕಾಲಗತಿಗಳನ್ನು ವಿಶ್ಲೇಷಿಸುತ್ತಿದ್ದರು. ಕನ್ನಡದಲ್ಲಿ ಬಹುಶಃ ನವ್ಯಕಾವ್ಯದ ಕಾಲಘಟ್ಟದಲ್ಲಿ ಸಾಮಾಜಿಕ, ಸಾಹಿತ್ಯಕ ಪಲ್ಲಟಗಳಾಯಿತು. ನಮ್ಮ ಪರಂಪರೆ, ಪೂರ್ವಪಠ್ಯಗಳ ಬಗ್ಗೆ ಅನಾದರ ಹೆಚ್ಚಾಯಿತು. ಆದರೆ ಈಗ ಕಾಲ ಬದಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನರ ಆಸಕ್ತಿ ಈ ಬಗ್ಗೆ ಹೆಚ್ಚಾಗುತ್ತಿರುವುದನ್ನು ನೋಡಬಹುದು. ಅಂತೆಯೇ ಸರಕಾರ ವಿಶ್ವವಿದ್ಯಾಲಯಗಳು, ಸಂಸ್ಥೆಗಳು ಮಾಡುತ್ತಿದ್ದ ಕೆಲಸವನ್ನು ವ್ಯಕ್ತಿಗಳೇ ಮಾಡುತ್ತಿದ್ದಾರೆ. ಅಂಥವರಲ್ಲಿ ಡಾ. ಎಚ್.ಎಸ್. ಗೋಪಾಲರಾಯರೇ ಉಜ್ವಲ ಉದಾಹರಣೆ”.

ಪುಸ್ತಕದ ಬಗ್ಗೆ ನಾಲ್ಕು ಸಾಲು ಬರೆಯಲು ಪ್ರೋತ್ಸಾಹಿಸಿದ ಗೋಪಾಲರಾಯರ ಮಾತುಗಳಲ್ಲಿ ಅವ್ಯಾಜ ಅಂತಃಕರಣ ಪ್ರೀತಿಯಿರುತ್ತದೆ. ವಿಶಾಲ ದೃಷ್ಟಿಕೋನವಿರುತ್ತದೆ. ಇದೆಲ್ಲವನ್ನು ಅವರೊಡನೆ ನಡೆಸುವ ಪ್ರತಿ ಮಾತುಕತೆಯಲ್ಲೂ ನಾನು ಅನುಭವಿಸುತ್ತೇನೆ.

ಶಾಸ್ತ್ರಗ್ರಂಥವನ್ನು ಸಾಮಾನ್ಯರಿಗೆ ತಲುಪಿಸುವಲ್ಲಿ, ಪ್ರೊ.ಬಿ.ಜಿ.ಎಲ್ ಸ್ವಾಮಿಯವರಂತೆ, ಕನ್ನಡ ಸಾಹಿತ್ಯದಲ್ಲಿ ಅನೇಕರು ದುಡಿದಿದ್ದಾರೆ. ಅಂಥದೇ ಗುಣ ವಿಶೇಷಗಳೊಂದಿಗೆ ಹಿರಿಯರಾದ ಡಾ. ಗೋಪಾಲರಾಯರ ಬರವಣಿಗೆಯನ್ನು ಓದಿ ಆನಂದಿಸಲು ಈ ಕೃತಿ ಉತ್ತಮ ಉದಾಹರಣೆ.

ಶಂಕರ ಅಜ್ಜಂಪುರ ಅವರ ಲೇಖಕ ಪರಿಚಯ..

MORE FEATURES

ಜೀವಂತಿಕೆ ತುಂಬಿದ ಬರಹಗಳು

08-05-2024 ಬೆಂಗಳೂರು

"ಶಶಿಧರ ಹಾಲಾಡಿ ಅವರು ಬಾಲ್ಯ ಕಳೆದದ್ದು ಅವರ ಹಳ್ಳಿಯ ಪರಿಸರದ ನಿಸರ್ಗದ ಮಡಿಲಲ್ಲಿ. ಹಾಗಾಗಿ ಆ ಪರಿಸರ ಅವರ ಮೇಲೆ ಗ...

ಜನಸಾಮಾನ್ಯರಿಗಷ್ಟೇ ಅಲ್ಲ; ಪತ್ರಕರ್ತರಿಗೂ ಪಠ್ಯದಂತೆ ಇಲ್ಲಿನ ಬರಹಗಳು ರೂಪುಗೊಂಡಿವೆ..

08-05-2024 ಬೆಂಗಳೂರು

"ಕಾಡಿಗೆ ನಾವು ಮನುಷ್ಯರಾಗಿ ಹೋಗಬಾರದು. ನಾವು ಕೂಡ ಒಂದು ಪ್ರಾಣಿಯಾಗಿರಬೇಕು. ಯಾವ ಪ್ರಾಣಿ, ಪಕ್ಷಿಯನ್ನು ವೀಕ್ಷಿಸ...

ಅಪಾರ ಅನುಭವ ಮತ್ತು ಅಧ್ಯಯನದ ಸಂಗಮ ಈ ಕೃತಿ

07-05-2024 ಬೆಂಗಳೂರು

"ಅಪಾರ ಅನುಭವ ಮತ್ತು ಅಧ್ಯಯನದ ಸಂಗಮವಾದ ಈ ಕೃತಿ ಶಿಕ್ಷಣ ಕ್ಷೇತ್ರದಲ್ಲಿ ದುಡಿಯುತ್ತಿರುವವರ ಅದರಲ್ಲೂ ಪ್ರಮುಖವಾಗಿ...