ಮಣೇವು


ಲೇಖಕ ಮಾರುತಿ ಗೋಪಿಕುಂಟೆ ಅವರು ಬರೆದ 'ಮಣೇವು' ಕಥೆ ನಿಮ್ಮ ಓದಿಗಾಗಿ....

ಹೊತ್ತಾರೆಯೆ ಎದ್ದ ರಾಜೀವಪ್ಪ ಗುಡಿಸಲಿನಿಂದ ಹೊರಬಂದ ಹೊರಗೆ ಇಟ್ಟಿದ್ದ ಕರಿಬಾನಿಯ ಮುಚ್ಚಳ ತೆಗೆದು ಮುಖ ತೊಳೆಯಲೆಂದು ಮುಚ್ಚಳ ತೆಗೆದವನಿಗೆ ನೀರು ಖಾಲಿಯಾಗಿದ್ದು ನೋಡಿ" ಈ ಬೋಸುಡಿ ನೀರ್ಕೂಡ ಹಾಕಿಲ್ಲ ಎಲ್ಗೋಗಿದ್ಲೊ ಊರಾಡಾಕೆ ಸ್ವಲ್ಪನು ಭಯ್ವಿಲ್ಲ ಇವಳ್ಗೆ ಏನ್ ಕೇಳಿದ್ರು ಎದ್ರು ಮಾತಾಡ್ತಾಳೆ ಕಾಲ್ ಮುರೀಬೇಕು ಬೋಸುಡಿದ "ಅಂದುಕೊಂಡವನು ಹರಕು ಮುರುಕು ಟವಲ್ಲಿನಲ್ಲೆ ನಾಲ್ಕೈದು ಬಾರಿ ಮುಖ ಉಜ್ಜಿದ ಮುಖದ ಮೇಲಿನ ಕೊಳೆ ಹೋಯ್ತೊ ಟವಲ್ಲಿನ ಕೊಳೆ ಮೆತ್ತಿಕೊಂಡ್ತೊ ಮುಖ ತೊಳೆಯೊ ಶಾಸ್ತ್ರ ಟವಲ್ಲಿನಲ್ಲೆ ಮುಗಿಸಿದ ಕಾಲುಗಳು ಊರಿನ ಕಡೆ ಹೆಜ್ಜೆ ಹಾಕಿದವು. ಸೀದಾ ಊರ ಮುಂದಿನ ಸಂಗಪ್ಪನ ಅಂಗಡಿಗೆ ಹೋದ.

ಊರಿನಲ್ಲಿ ಇದ್ದದ್ದು ಅದೊಂದೆ ಅಂಗಡಿ ಅದನ್ನು ಅಂಗಡಿ ಅನ್ನುವುದಕ್ಕಿಂತ ಹೋಟೆಲ್ ಅನ್ನೋದೆ ಸೂಕ್ತ ಏನೆಲ್ಲಾ ಸಿಗುತ್ತಿತ್ತು ಬೆಂಕಿ ಪೊಟ್ಟಣದಿಂದಿಡಿದು ಉಪ್ಪಿನವರೆಗೂ ಎಲ್ಲವೂ ಅಡುಗೆಗೆ ಬೇಕಾದ ಸಾಮಗ್ರಿಗಳು ದೊರೆಯುತ್ತಿದ್ದವು. ಜೊತೆಗೆ ಮಾಗಿ ಕಾಲದಲ್ಲಿ ಬೆಳಿಗ್ಗೆ ತಿಂಡಿ ಮಧ್ಯಾಹ್ನದ ಊಟವು ದೊರೆಯುತ್ತಿತ್ತು. ಮಾಗಿ ಕಾಲದಲ್ಲೆ ಯಾಕೆ ಅನ್ಬೋದು ಮಾಗಿ ಕಾಲದಲ್ಲಿ ಕೃಷಿ ಚಟುವಟಿಕೆಗಳು ನಡೀತಾ ಇದ್ದವು. ಬೆಳಿಗ್ಗೆ ಕೂಲಿ ಹೋಗೊ ಹೆಂಗಸರು ಒಂದೊಂದು ಇಡ್ಲಿ ಕಟ್ಟಿಸಿಕೊಳ್ಳೋರು ಕೆಲವು ಹೊಲದಲ್ಲಿ ಆಳುಗಳಿಗೆಂದೆ ತಿಂಡಿ ಕಟ್ಟಿಸಿಕೊಂಡು ಹೋಗುತ್ತಿದ್ದರು ಇನ್ನೂ ಪೂರ್ತಿ ಊರು ದಿನನಿತ್ಯದ ಅಡುಗೆಗೆ ಆ ಅಂಗಡಿಯನ್ನೆ ಅವಲಂಬಿಸಿದ್ದರು. ಬೆಳಗಿನ ಜಾವದಲ್ಲಂತೂ ಟಿ ಕಾಫಿ ವ್ಯಾಪಾರ ಜೋರಾಗಿ ನಡೆಯುತ್ತಿತ್ತು. ಜೊತೆಗೆ ಸುತ್ತ ಮುತ್ತಲ ಗ್ರಾಮದ ಸುದ್ದಿಗಳು ಜನರ ಬಾಯಿಯಲ್ಲಿ ಕಿಲಕಿಲನೆ ನುಲಿದು ದೆಹಲಿಯ ರಾಜಕೀಯದವರೆಗೂ ನಡೆದು ವಿಮರ್ಶೆ ಆತ್ಮವಿಮರ್ಶೆ ಎಲ್ಲವೂ ನಡೆಯುತ್ತಿದ್ದವು.

ಇತ್ತೀಚಿನ ಸುದ್ದಿಯೆಂದರೆ ಅದೂ ದೇವಿರಮ್ಮನ ಜಾತ್ರೆ ಅದೂ ಹತ್ತು ವರ್ಷಗಳಾದ ಮೇಲೆ ನಡೆಯುತ್ತಿತ್ತು. ಅದೂ ಪ್ರತಿವರ್ಷ ನಡಿಬೇಕಾದ ಜಾತ್ರೆ ಬರಗಾಲ, ಅತಿವೃಷ್ಟಿ, ಇದ್ದಕ್ಕಿದ್ದಂತೆ ಚಿಕ್ಕವಯಸ್ಸಿನ ಹುಡುಗರಿಬ್ಬರ ಸಾವು, ಬಸುರಿ ಹೆಂಗಸು ಸತ್ತದ್ದು, ಬೇಸಿಗೆಯ ಕಾಲದಲ್ಲಿ ಬಂದೊದಗಿದ ಕಾಲರಾ ಇಂತದೆ ಕಾರಣಗಳಿಗೆ ಮುಂದೂಡುತ್ತಿದ್ದ ಜಾತ್ರೆಯನ್ನು ಇತ್ತೀಚೆಗೆ ಮಳೆ ಬಂದು ಬೆಳೆಯೆಲ್ಲಾ ಚೆನ್ನಾಗಿ ಜನರೆಲ್ಲಾ ಸಂಭ್ರಮದಲ್ಲಿದ್ದಾಗ ಊರಿನ ಮುಖಂಡರೆಲ್ಲಾ ಸೇರಿ ಈ ವರ್ಷ ಜಾತ್ರೆ ಮಾಡೋದೆ ಸರಿ ಎಂದು ತೀರ್ಮಾನಕ್ಕೆ ಬಂದಿದ್ದರು. ಇನ್ನೇನು ಜಾತ್ರೆಗೆ ವಾರವಿದೆ ಅನ್ನೋವಾಗ ರಾಜೀವಪ್ಪ ಬಡತನವನ್ನೆ ಹಾಸಿ ಹೊದ್ದು ಮಲಗಿ ಅದರಲ್ಲೆ ಹೈರಾಣದವನಿಗೆ ಈ ಜಾತ್ರೆ ನಡೆಯುವುದು ಖಾತ್ರಿ ಆದಮೇಲೆ ಇದ್ದಕ್ಕಿದ್ದಂತೆ ಚುರುಕಾಗಿದ್ದ ಯಾವಾಗಲೂ ಸಪ್ಪೆ ಮೋರಿ ಹಾಕಿಕೊಂಡು ಕೂಳಿಗಷ್ಟೆ ಕೂಲಿ ಮಾಡುತ್ತಿದ್ದ ಬಂದ ಹಣದಲ್ಲಿ ಅರ್ಧ ಮನೆಗೆ ಕೊಟ್ಟು ಉಳಿದರ್ದ ತನ್ನ ಖರ್ಚಿಗೆ ಸಮ ಮಾಡುತ್ತಿದ್ದ ಇದಕ್ಕೆ ಎಷ್ಟೊ ಬಾರಿ ಇಬ್ಬರ ಮಧ್ಯೆ ಜಗಳ ನಡೆದು ಬೇಸರವಾಗಿ ಇನ್ನಷ್ಟು ಪಾಕೆಟ್ ಹೊಟ್ಟೆ ಸೇರುತ್ತಿತ್ತು ಇವನ ರೋಸು ಇಷ್ಟೆ ಎಂದು ಬೈದುಕೊಳ್ಳುತ್ತ ತನ್ನ ಮಗಳು ಮಂಜಿಯನ್ನು ತಬ್ಬಿ ಮಲಗಿಕೊಳ್ಳುತ್ತಿದ್ದ ಹೆಂಡತಿ ನಂಜಮ್ಮ. ಇತ್ತೀಚಿನ ಅವನ ಮುಖದ ಮೇಲಿನ ಗೆಲುವಿಗೆ ಕಾರಣವಾದರೂ ಏನು ಎಂದು ಅವನ ಕಣ್ಣುಗಳಲ್ಲಿ ಹುಡುಕಿ ಸೋತಿದ್ದಳು.

ಅಂಗಡಿಗೆ ಇವತ್ತೇನು ಹೊಸದಾಗಿ ಬಂದಿರಲಿಲ್ಲ ಅದು ರಾಜೀವಪ್ಪನ ನಿತ್ಯದ ಅಭ್ಯಾಸವು ಆಗಿತ್ತು. ಚರ್ಚೆ ಜೋರಾಗಿಯೆ ನಡೆದಿತ್ತು ಈ ವರ್ಷ ಜಾತ್ರೆಗೆ ಏನೆಲ್ಲಾ ಬರುತ್ತದೆ ದೇವಿಯನ್ನು ಯಾವರೀತಿ ಮೆರವಣಿಗೆ ಮಾಡಬೇಕು ಎಂಬುದನ್ನು ಸಂಕಟಪ್ಪಗೌಡ ವಿವರಿಸುತ್ತ ಇದ್ದ ಉಳಿದವರು ಬಾಯಿಬಿಟ್ಟುಕೊಂಡು ಕೇಳುತ್ತಿದ್ದರು. ದೇವಿರಮ್ಮನ ಜಾತ್ರೆಗೆ 'ಮಣೇವು 'ಬಾಳ ಮುಖ್ಯ ಸಾಮಿ ಅದನ್ಮಾತ್ರ ಶಂದಾಕ್ ಮಾಡ್ಬೇಕು ನಾವೆಲ್ಲ ಕುಣಿದು ಬಾಳ ದಿನ್ವಾಗೈತೆ ನೀವು ಮುಂದ್ನಿಂತು ನಡೆಸ್ಬೇಕು ಗೌಡ್ರೆ ' ಅಂದ ಊರಿನ ಯಜಮಾನಕೆ ಮಾಡೊ ಮಾನಪ್ಪ ಹೂಂ ಮಾಡೋಣಂತೆ ಆದರೆ ನಾನೆ ಮುಂದಿರ್ಬೇಕು ನಾನೆಜ್ಜೆ ಹಾಕೋದ್ನ ನೋಡಿ ಊರಿನ ಹೆಂಗಸ್ರು ಯಾಗ್ ನಾಚ್ಕಂತಾರೆ ನೋಡ್ತಾ ಇರು ಎಂದು ಮೀಸೆಮೇಲೆ ಕೈ ಹಾಕಿ ಒಮ್ಮೆ ಮೀಸೆ ತಿರುವಿದ. ಇದನ್ನು ಕೇಳಿದ ರಾಜೀವಪ್ಪನ ಮುಖ ಕಿವುಚಿದಂಗಾಯಿತು. ಏನು ಮಾತಾಡದೆ ಒಂದು ಕಪ್ ಟಿ ಕುಡಿದು ಅಲ್ಲಿಂದ ವಾಪಾಸ್ಸಾಗುವಾಗ ಬರಬರನೆ ಹೆಜ್ಜೆ ಹಾಕುತ್ತಿದ್ದವನಿಗೆ 'ಮಣೇವು 'ಎಂಬ ಪದವೆ ಮನಸ್ಸಿನಲ್ಲೊಂದು ಬಿರುಗಾಳಿ ಎಬ್ಬಿಸಿತು ತನ್ನಪ್ಪ ನೆನಪಾದ ಅವನ ಚಿತ್ರ ಕಣ್ಮುಂದೆ ಬಂದಂಗಾಯ್ತು.

****************************************************************************************
ತಂದೆ ನರಸಿಂಹಪ್ಪ ಒಳ್ಳೆ ಕಟ್ಟುಮಸ್ತಾದ ಆಳು ಅವನ ಮುಖದ ಮೇಲಿನ ಉರಿಗೊಂಡ ಮೀಸೆಯೆ ಮುಖವನ್ನೆಲ್ಲಾ ಆವರಿಸಿತ್ತು. ಅವನು ವಾಲ್ಗ ಬಡಿಯುವುದರಲ್ಲಿ ಎತ್ತಿದ ಕೈ ಡುವ್.. ಡೆಕ್... ಡುವ್ ಡುವ್.. ಡುವ್ ಡೆಕ್ ಡಿಕ್ ಡಿಕ್....
ಎಂದು ಬಡಿಯುವುದಕ್ಕೆ ಆರಂಭಿಸಿದರೆ ಎಂತವರ ತೊಡೆಗಳು ಅಲುಗಾಡುತ್ತಿದ್ದವು ಆ ನಾದಕ್ಕೆ ಮಣೇವಿನಲ್ಲಿ ಹೆಜ್ಜೆ ಹಾಕುವವರು ಕೇಕೆ ಹಾಕುತ್ತಾ ಸುತ್ತು ಹಾಕುತ್ತಿದ್ದರು. ಸುತ್ತಿನ ಕೊನೆಯಲ್ಲಿ ಇನ್ನೊಂದು ಮಟ್ಟಿಗೆ ಜಾರುವ ಆತನ ಬಡಿತ ಪ್ರಸಾದವನ್ನು ಬೊಗಸೆಯಲ್ಲಿ ಬಾಚಿಕೊಳ್ಳುವುದರೊಂದಿಗೆ ಕೊನೆಯಾಗುತ್ತಿತ್ತು.

ಆಗ ಏಳೆಂಟು ವರ್ಷದ ಬಾಲಕನಾಗಿದ್ದ ರಾಜೀವಪ್ಪ 'ಅಪ್ಪ ನೀನ್ಯಾಕೆ ಮಣೇವು ಇಕ್ಕಲ್ಲ ನೀನು ಬಾರ್ಸೋದಷ್ಟೇನಾ ಎಂದು ಕೇಳುತ್ತಿದ್ದ ಇಲ್ಲ ಮಗಾ ನಾವು ಕುಣೀಬಾರ್ದು ಅದು ನಮ್ಕೆಲ್ಸ ಅಲ್ಲ ಎನ್ನುತ್ತಿದ್ದ. ದೇವಿಗೆ ಎಲ್ರೂ ಒಂದೆ ಅಲ್ವೇನಪ್ಪ ಮತ್ಯಾಕೆ ನೀನು ಕುಣೀಬಾರ್ದು 'ಎಂದಾಗ ದೇವಿಗೆ ಎಲ್ರೂ ಒಂದೇನೆ ಆದ್ರೆ ಈ ಮನುಸ್ರುಗೆ ನಾವು ಬೇರೆ ಕಣಪ್ಪ ಅನ್ನುತ್ತಿದ್ದ ಇದರ ತಲೆಬುಡ ತಿಳಿಯದೆ ರಾಜೀವಪ್ಪ ತಲೆಕೆರೆದುಕೊಂಡು ಬುಗುರಿಯ ಚಾಟಿ ಹಿಡಿದು ಆಟವಾಡಲು ಓಡುತ್ತಿದ್ದ ಉಸರಾಗಿ ಹೋಗ್ ಮಗಾ ಎಂದವನ ಮುಖದಲ್ಲಿ ಸಾಯೋದ್ರೊಳಗೆ ಒಂದ್ಸಾರಿನಾದ್ರು ಮಣೇವಿಗೆ ಹೆಜ್ಜೆ ಹಾಕ್ಬೇಕು ಅಂದುಕೊಂಡವನ ಮನಸ್ಸಿನಲ್ಲಿ ಅದು ಸಾಧ್ಯವಾ ಎಂಬ ಪ್ರಶ್ನೆ ತಿರುಗಿ ಬಂದು ಎದೆಯ ಮೂಲೆ ಸೇರುತ್ತಿತ್ತು.

ಪ್ರತಿವರ್ಷದಂತೆ ಆ ವರ್ಷವೂ ಜಾತ್ರೆ ನಡೆಯುವುದೆಂದು ಟಾಂ ಟಾಂ ಹಾಕಿದ್ದರು. ಎಂದಿನಂತೆ ಊರು ಶೃಂಗಾರ ಗೊಂಡಿತ್ತು ದೂರದ ಸಂಬಂಧಿಗಳು ನೆಂಟರಿಷ್ಟರು ಎಲ್ಲರೂ ಊರಿನ ಜಾತ್ರೆಗೆ ಬಂದಿದ್ದರು. ನರಸಿಂಹಪ್ಪ ಹೊಸ ಮೇಕೆಯ ಚರ್ಮವೊಂದನ್ನು ತಂದು ಹದಮಾಡಿ ಬಿಸಿಲಿಗೆ ಒಣಗಿಸಿ ಅದನ್ನು ತೆಳುವಾಗಿ ಜತನದಿಂದ ಎರೆದು ವಾಲಗದ ಬಾಯಿಗೆ ಬಿಗಿಯಾಗಿ ಕಟ್ಟಿ ಅದಕ್ಕೆಂದೆ ತಯಾರಾದ ಕಡ್ಡಿಗಳಿಂದ ಬಡಿದು ತಯಾರಿ ಮಾಡಿಕೊಳ್ಳುತ್ತಿದ್ದ ಆತ ಬಡಿಯುವಾಗ ಇಡಿ ಹಟ್ಟಿಯ ಜನರೆಲ್ಲಾ ಅಲ್ಲಿ ಸೇರುತ್ತಿದ್ದರು. ಆತ ಬಡಿಯುತ್ತಲೆ ಆವೇಶಕ್ಕೆ ಒಳಗಾದಂತೆ ಯಾವ ಪರಿವೆಯೆ ಇಲ್ಲದಂತೆ ಬಡಿಯುತ್ತಿದ್ದ ಈ ಬಾರಿ ಜಾತ್ರೆ ಜೋರಾಗೆ ಇರುತ್ತೆ ಎಂದು ಜನ ಮಾತಾಡಿಕೊಳ್ಳುವಷ್ಟು ಅಥವಾ ಇಡಿ ಹಟ್ಟಿಗೆ ಜಾತ್ರೆ ಪರಿಚಯವಾಗುವಷ್ಟು ಅದರ ತಯಾರಿ ನಡೆಯುತ್ತಿತ್ತು. ಹೆಂಡತಿ ನರಸಮ್ಮ,ಇದಕ್ಕೇನು ಕ್ಯಾಮೆ ಇಲ್ಲ ಮೂರೊತ್ತು ಇದೆ ಕೆಲ್ಸ' ಎಂದು ಸಿಡಿಮಿಡಿಯಾಗುತ್ತಿದ್ದಳು. ರಾಜೀವಪ್ಪ ಸುಮ್ಮನೆ ಮಂತ್ರಮುಗ್ಧನಾಗಿ ನೋಡುತ್ತಿದ್ದ ಅವನ ತೆರೆದ ಬಾಯಿಗೆ ಸಿಂಬ್ಲ ಜಾರಿ ಹೋದಾಗ ವಾಸ್ತವಕ್ಕೆ ಬಂದಿದ್ದೆ ಹೆಚ್ಚು.

ಜಾತ್ರೆ ನಡೆಯುತ್ತಿತ್ತು ಊರ ಮುಂದೆ ದೇವಿಯ ಪಲ್ಲಕ್ಕಿಯನ್ನು ಹೊತ್ತವರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನ ಒಂದು ಕಡೆ ತಪ್ಪೆ ಸದ್ದು ಮತ್ತೊಂದು ಕಡೆ ವಿವಿದ ವೇಷ ಭೂಷಣ ತೊಟ್ಟ ಭೂತದ ವೇಷದವರು ಕುಣಿಯುತ್ತಿದ್ದರು. ಇನ್ನೇನು ದೇವಿಗೆ ಮಣೇವು ಇಡುವ ಸಿದ್ದತೆಯಲ್ಲಿ ಎಲ್ಲಾ ದೇವರ ಕೈವಾಡಸ್ಥರು ಸಾಲುಗಟ್ಟಿ ನಿಂತಿದ್ದಾರೆ. ನರಸಿಂಹಪ್ಪ ತನ್ನ ವಾಲ್ಗದ ಜೊತೆಗಾರರೊಂದಿಗೆ ಬಡಿಯುತ್ತಲೆ ಇದ್ದಾನೆ. ಡುವ್ ಡಕ್ ಡುವ್ ಡುವ್... ಶಬ್ದಕ್ಕೆ ಹೆಜ್ಜೆ ಹಾಕುತ್ತಿದ್ದಾರೆ ಒಂದು ಸುತ್ತು ಎರಡು ಸುತ್ತು ಕುಣಿತ ನಡೆಯುತ್ತಲೇ ಇದೆ. ಕಣ್ಣು ಮುಚ್ಚಿ ಬಡಿಯುತ್ತಲೆ ಇದ್ದಾನೆ. ಇದ್ದಕ್ಕಿದ್ದಂತೆ ಕಣ್ಣು ಬಿಟ್ಟವನಿಗೆ ಅಲ್ಲಿ ಮಣೇವಿನ ಹುಡುಗರ ಗುಂಪಿನಲ್ಲಿ ರಾಜೀವಪ್ಪ ಕುಣಿಯುತ್ತಿದ್ದಾನೆ. 'ಅರೆ ಇವನ್ಯಾವಾಗ ಬಂದ 'ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾನಲ್ಲ ಎನಿಸಿತು. ನನ್ನ ಮಗ ಕುಣಿತಿದ್ದಾನಲ್ಲ ಅವನನ್ನು ಯಾರು ತಡಿಲಿಲ್ವ ಅಂದ್ಕೊಂಡೆ ಇನ್ನಷ್ಟು ಜೋರಾಗಿ ಅರೆ ವಾದ್ಯದ ಮಟ್ಟುಗಳಲ್ಲಿ ಬಾರಿಸುತ್ತಿದ್ದಾನೆ.
ಕುಣಿಯುತ್ತಿದ್ದಾನೆ
ಬಾರಿಸುತ್ತಿದ್ದಾನೆ....
ಕುಣಿಯುತ್ತಿದ್ದಾನೆ
ಬಾರಿಸುತ್ತಿದ್ದಾನೆ...

ಇದ್ದಕ್ಕಿದ್ದಂತೆ ಯಾರೊ ರಾಜೀವಪ್ಪ ರೆಟ್ಟೆ ಹಿಡಿದಿದ್ದಾನೆ ಆತ ಕೊಸರಿ ಕೊಳ್ಳುತ್ತಿದ್ದಾನೆ.. ಹಿಡಿದ ಕೈಗಳು ಅಸ್ಪಷ್ಟ ಇಲ್ಲ ನಾನು ಕುಣಿಬೇಕು ಯಾಕೆ ನಾನು ಕುಣೀಬಾರ್ದ ನನಗೂ ಅದು ದೇವ್ರೆ ನಾನು ಕುಣಿದ್ರೆ ಏನಾಗುತ್ತೆ ನಾನು ಮನುಷ್ಯ ಬಿಡ್ರಿ ಬಿಡ್ರಿ... ಅಪ್ಪ ಅಪ್ಪ ನಾನು ಕುಣೀಬೇಕು ಅನ್ನುತ್ತಲೆ ಇದ್ದಾನೆ. ರೆಟ್ಟೆ ಹಿಡಿದ ಕೈಗಳು ಇನ್ನಷ್ಟು ಗಟ್ಟಿಯಾಗಿವೆ." ಬೋಳಿಮಗನೆ ಯಾವನ್ಲ ನಿನಗೆ ಕುಣಿಯಾಕ್ ಹೇಳ್ದನು ಇಡಿ ಊರಿಗೆ ದೇವರಿಗೆ ಮೈಲ್ಗೆ ಮಾಡಿಬಿಟ್ಯಲ್ಲ್ಯೋ ಸೂಳೆ ಮಗನೆ... ನಿನಗೆ ಇಷ್ಟೊಂದು ಧೈರ್ಯ ಬಂತ್ಯೇನ್ಲ ನೀನಿನ್ನು ಕೂಸು ನಿನ್ನ ಸುಮ್ನೆ ಬಿಡಬಾರ್ದು ಲೆ.. ಬರ್ರೋ ಈ ನನ್ಮಗನ್ನ ಕಂಬಕ್ಕೆ ಕಟ್ರೋ ಹೊದಿರೊ ತುಳಿರೋ ಈ ಸೂಳೆಮಗನ್ನಾ.... ಅಂದ ಬಾಯಿ ಊರಿನ ಗೌಡನ್ದು ಅಂತ ತಿಳಿಯುವಷ್ಟರಲ್ಲಿ ಅವನನ್ನು ಎತ್ತಿ ಜನಜಂಗುಳಿಯಿಂದ ಆಚೆ ಬಿಸಾಕಿದರು ಅಪ್ಪ ನಾನ್ ಸತ್ತೆ... ಅಪ್ಪಾ.. ನಾನ್ ಸತ್ತೆ ಅನ್ನುತ್ತಲೆ ಮರೆಯಾದ ಮಗನ್ನಾ ಮಗ.. ಮಗ.. ಮಗಾ.. ಅನ್ನುತ್ತಲೆ.. ಕಣ್ಣು ಬಿಟ್ಟ...

ಮೈಯೆಲ್ಲಾ ಬೆವರಿತ್ತು ಗಂಟಲು ಒಣಗಿತ್ತು ರಾಜೀವಪ್ಪ ಅಪ್ಪ ಎದ್ದೇಳು ಜಾತ್ರೆಗೆ ಹೋಗಲ್ವೆ ನೋಡು ನಾನು ಹೊಸಬಟ್ಟೆ ಹಾಕ್ಕೊಂಡೀನಿ ಎದ್ದೇಳಪ್ಪೊ.. ಎಂದು ಹಲ್ಕಿರಿಯುತ್ತಾ ನಿಂತಿದ್ದ ನರಸಮ್ಮ ಕೈತುಂಬಾ ಬಳೆತೊಟ್ಟು ತನ್ನ ಮದುವೇಲಿ ತಂದಿದ್ದ ಕಡುನೀಲಿ ಬಣ್ಣದ ಧಾರೆ ಸೀರೆ ಉಟ್ಕೊಂಡು ಸರಾಬರಾ ಓಡಾಡುತ್ತಿದ್ಲು ಸೂರ್ಯ ಆಗಲೆ ನೆತ್ತಿ ಹೇರಿದ್ದ ಹಟ್ಟಿತುಂಬಾ ಊದುಬತ್ತಿಯ ಘಮಘಮ ವಾಸನೆ ಹಟ್ಟಿಯ ಕೊಳಕನ್ನೆಲ್ಲಾ ನುಂಗಿ ನಡೆದಾಡುತ್ತಲೆ ಇತ್ತು. ಮೊದ್ಲು ಒಂದಿಷ್ಟು ನೀರ್ಕೊಡು ಮಗಾ.. ಎಂದ ಚೆಂಬಿನ ತುಂಬಾ ತಂದುಕೊಟ್ಟ ನೀರನ್ನು ಗಟಗಟನೆ ಕುಡಿದು ಛೆ.. ಇದು ಕನಸೆ.. ಎಂದು ಎದ್ದು ಲಗುಬಗೆಯಲ್ಲಿ ಜಾತ್ರೆಗೆ ಸಿದ್ಧನಾದ.

ಇಲ್ಲಿ ದೇವೀರಮ್ಮನ ಮೂರ್ತಿ ಅಲಂಕಾರಗೊಂಡು ಮೆರವಣಿಗೆಗೆ ಸಿದ್ಧವಾಗಿದ್ದಳು ಸುತ್ತ ಹದಿನಾರು ಊರಿನ ಅಣ್ತಮ್ಮಂದ್ರು ಸೇರಿದ್ದರು. ಒಂದುಕಡೆ ತಪ್ಡೆ ವಾಲ್ಗ ಡೋಲು ಬಾರಿಸುವವರು ಮೆರವಣಿಗೆಯ ಕುಣಿತದಲ್ಲಿ ಹೆಜ್ಜೆ ಹಾಕುವವರು ದಾರಿಯ ಇಕ್ಕೆಲದಲ್ಲಿಯೂ ತರತರದ ಅಂಗಡಿಗಳು ಓಡಾಡುವ ಜನ ಕ್ಕಿಕ್ಕಿರಿದ ಜನ ಕುತೂಹಲದಿಂದ ನೋಡುವ ಮಕ್ಕಳು ಸಡಗರದಿಂದ ಓಡಾಡುತ್ತಿದ್ದ ಹೆಂಗಳೆಯರು ಎಲ್ಲರೂ ಜಾತ್ರೆಯನ್ನು ಕಣ್ತುಂಬಿಕೊಂಡು ನಿಂತಿದ್ದರು. ದೇವಿಹೊತ್ತವರು ಅಲ್ಲಲ್ಲಿ ನಿಂತು ಸಾಗುತ್ತಿದ್ದರು

ವಾಲ್ಗ ಬಡಿಯುವ ಗುಂಪಿನಲ್ಲಿ ನರಸಿಂಹಪ್ಪನು ಸೇರಿ ಬಡಿಯುತ್ತಲೆ ಇದ್ದ ಆಗಾಗ ಮಗ ಎಲ್ಲಿದ್ದಾನೆ ಎಂದು ಕಣ್ಣಾಡಿಸುತ್ತಿದ್ದ ಅವನನ್ನು ನೋಡಿ ಸಮಾಧಾನವಾಗುತ್ತಿದ್ದ ದೇವಿ ಕಾಪಾಡಲಿ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದ ಅವನ ಮನಸ್ಸು ಜಿದ್ದಿಗೆ ಬಿದ್ದಿತ್ತು. ದೇವಿಯ ಮೆರವಣಿಗೆಯೂ ಸಾಗಿತ್ತು.ಈ ಜಾತ್ರೆಯಲ್ಲಿ ಮಣೇವಿಗೆ ವಿಶಿಷ್ಟ ಸ್ಥಾನ. ಕೆಲವು ಹರಕೆಹೊತ್ತವರು ಮಣೇವಿಟ್ಟು ತಮ್ಮ ಹರಕೆ ತೀರಿಸುತ್ತಿದ್ದರು.

ಊರಮುಂದಿನ ಜಗಲಿಕಟ್ಟೆಯ ಮೇಲೆ ದೇವಿರಮ್ಮನನ್ನು ಇಳಿಸಿ ದೇವರ ಮಣೇವು ಮೊದಲು ಮಾಡಿ ಹರಕೆಹೊತ್ತವರು ನಂತರ ಮಣೇವು ಇಡುವುದು ರೂಢಿ.ಒಂದೊಂದಾಗಿ ಮುಗಿಯುತ್ತಾ ಬಂತು.ಗುಂಪಿನಲ್ಲಿದ್ದ ನರಸಿಂಹಪ್ಪ ವಾಲ್ಗ ಬಡಿಯುತ್ತಲೆ ಇದ್ದ ಇದ್ದಕ್ಕಿದ್ದಂತೆ ಆವೇಶ ಬಂದವನಂತೆ ಬಡಿಯುತ್ತಾ ಮಣೇವಿಗಾಗಿ ಬಟ್ಟೆಯ ಮೇಲೆ ಇಟ್ಟಿದ್ದ ಪ್ರಸಾದವನ್ನು ಒಮ್ಮೆ ನೋಡಿದ ಹತ್ತಾರು ಜನ ಅದರ ಸುತ್ತ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದರು. 'ಅಪ್ಪ ನೀನು ಬರೆ ಬಡಿಯೋದೆ ಆತು ಎಂದೂ ಹೆಜ್ಜೆ ಹಾಕಿದ್ದು ನೋಡಲೆ ಇಲ್ಲ 'ಮಗನ ಮಾತು ಚೂರಿಯಿಂದ ತಿವಿದಂತೆ ಅನಿಸಿತು. ತಾನು ಬಡಿಯುತ್ತಿದ್ದ ವಾಲ್ಗದ ಹಗ್ಗವನ್ನು ಯಾವುದೊ ಮಾಯದಲ್ಲಿ ಬಿಚ್ಚಿ ಬಿಟ್ಟ ಹೆಂಡತಿ ನರಸಮ್ಮ ಮಗ ದೂರದಲ್ಲಿ ನಿಂತು ನೋಡುತ್ತಿದ್ದಾರೆ ಜನಜಂಗುಳಿ ಕೇಕೆ ಹರ್ಷೋದ್ಗಾರ ಕುಣಿತದ ನಡುವೆ ಚಂಗನೆ ನೆಗೆದವನೆ ಹೆಜ್ಜೆ ಹಾಕುವುದಕ್ಕೆ ಆರಂಭಿಸಿದ ಲೇ ಲೇ... ಏನಾಯ್ತು ಇವನಿಗೆ ಹಿಡಿರೊ ಅವನನ್ನು ಹಿಡಿ ಜಾತ್ರೆಯನ್ನೆಲ್ಲಾ ಮೈಲಿಗೆ ಮಾಡಿದ ಎಂದು ಗೌಡ ಅಬ್ಬರಿಸುತ್ತಲೆ ಇದ್ದ ನಾಲ್ಕಾರು ಜನ ಅವನನ್ನು ಬಿಗಿಯಾಗಿ ಹಿಡಿದರು ಕೊಸರಿಕೊಂಡೆ ಒಂದೊಂದೆ ಇಡುತ್ತಿದ್ದ ಯಾರೋ ಜಾಡಿಸಿ ಒದ್ದಂತಾಯಿತು ಕಣ್ಣು ಕಪ್ಪಿಟ್ಟಿತ್ತು ಸಿಗಿದಾಕ್ರೋ ಅವನನ್ನು ಅನ್ನುವಷ್ಟರಲ್ಲಿ ಗೋಣುಚೆಲ್ಲಿದ್ದ ಊರಿಗೆ ಊರೇ ಸ್ತಬ್ಧವಾಗಿತ್ತು ಅರ್ಧಕ್ಕೆ ನಿಂತ ದೇವಿರಮ್ಮನ ಮಣೇವು ಊರಿಗೆ ಗಂಡಾಂತರ ತರುತ್ತದೆ ಊರಿಗೆ ಅಪಶಕುನ ಬಡಿಯಿತು ಮುಂತಾದ ಮಾತುಗಳು ಅಲ್ಲಲ್ಲಿ ಕಿವಿಯಿಂದ ಕಿವಿಗೆ ತಾಕುತ್ತಿದ್ದವು. ದೇವರು ಅವನಿಗೆ ಸರ್ಯಾಗಿ ಮಾಡಿದ ಅವನಿಗೆ ಹೀಗೆ ಆಗಿದ್ದೆ ಸರಿ ಎಂದರು ಕೆಲವರು ಕೆಲವರದು ಮೌನ ಸಮ್ಮತಿ ರಾಜೀವಪ್ಪ ಅಪ್ಪನ ಹೆಣದ ಮೇಲೆ ಬಿದ್ದು ಒದ್ದಾಡಿದ ನರಸಮ್ಮನ ಗೋಳು ದೇವಿರಮ್ಮನ ಕಿವಿಗೆ ಮುಟ್ಟಿತೊ ಇಲ್ಲವೋ ಅವಳನ್ನು ಬಲುಬೇಗ ಗುಡಿ ತುಂಬಿಸಲಾಯಿತು. ಐದು ವರ್ಷ ಅವರನ್ನು ಊರಿಂದ ಬಹಿಷ್ಕಾರ ಹಾಕಲಾಯಿತು. ತಾಯಿ ಮಗ ತಮ್ಮ ಕುಟುಂಬದವರೊಂದಿಗೆ ಸೇರಿ ಆತನ ಅಂತ್ಯ ಸಂಸ್ಕಾರ ಮಾಡಿದರು. ಮಾರನೆ ದಿನವೆ ಊರುಬಿಟ್ಟವರು ಐದಾರು ವರ್ಷ ದೂರದ ಸಂಬಂಧಿಯೊಬ್ಬರ ಮನೆಯಲ್ಲಿ ಹೇಗೊ ಬದುಕಿದರು. ನಂತರವಷ್ಟೇ ಊರಿಗೆ ವಾಪಾಸ್ಸಾಗಿದ್ದರು. ರಾಜೀವಪ್ಪ ಅವರಿವರ ಹೊಲದಲ್ಲಿ ಉಳುಮೆ ಮಾಡುವುದನ್ನು ಕಲಿತುಕೊಂಡಿದ್ದ ಮತ್ತೆರಡು ವರ್ಷಗಳಲ್ಲಿ ಸಂಬಂಧದಲ್ಲೆ ನಂಜಮ್ಮನನ್ನು ತಂದು ಮದುವೆ ಮಾಡಿ ತಿಂಗಳೊಪ್ಪತ್ತಿನಲ್ಲಿಯೆ ನರಸಮ್ಮ ಕಣ್ಣು ಮುಚ್ಚಿದ್ದಳು. ರಾಜೀವಪ್ಪನಿಗೆ ಆಕಾಶವೆ ಕಳಚಿಬಿದ್ದಂತಾಯಿತು ಇನ್ನಷ್ಟು ಕುಡಿಯುವುದನ್ನು ಜಾಸ್ತಿ ಮಾಡಿದ ಒಮ್ಮೊಮ್ಮೆ ಕನಸ್ಸಿನಲ್ಲಿ ಏನೇನೊ ಕನವರಿಸುತ್ತಿದ್ದ ಅವಾಗೆಲ್ಲಾ ಗುಡಿಸಲ ಹೊರಬಂದು ನಕ್ಷತ್ರಗಳನ್ನು ನೋಡುತ್ತಿದ್ದ ದೂರದ ನಕ್ಷತ್ರಗಳಲ್ಲಿ ನರಸಿಂಹಪ್ಪನನ್ನು ನರಸಮ್ಮನನ್ನು ಕಂಡು 'ಮನುಷ್ರಾಗುವುದಕ್ಕಿಂತ ನಕ್ಷತ್ರವಾಗುವುದೆ ಮೇಲು' ಅಂದುಕೊಳ್ಳುತ್ತಿದ್ದ. ಮನೆತಲುಪುವಷ್ಟರಲ್ಲಿ ಎಲ್ಲವೂ ನೆನಪಾಗಿತ್ತು. ಎದುರಿಗೆ ಮಗಳು ಮಂಜಿ ನಿಂತಿದ್ದಳು.
*******************************************************************************
ಮಂಜಿ ತಿಂಗಳ ಹಿಂದಷ್ಟೇ ಹೆಣ್ಣಾಗಿದ್ದಳು ಅವಳದೂ ಥೇಟ್ ಅಜ್ಜಿಯ ರೂಪವೆ ಎತ್ತರ ನಿಲುವಿನ ಅವಳದು ಸಾಧಾರಣ ಗೋಧಿಬಣ್ಣ ಅವಳ ನೀಳಜಡೆ ಎಂಥವರನ್ನೂ ಆಕರ್ಷಿಸುವಂತಿತ್ತು. ಅವಳ ದುಂಡುಮುಖ ನೋಡಿದಾಗಲೆಲ್ಲಾ ರಾಜೀವಪ್ಪನ ಸಂಕಟವೆಲ್ಲಾ ಮರೆಯಾಗುತ್ತಿತ್ತು. ಆದರೆ ಇತ್ತೀಚೆಗೆ ಮುಖಕೊಟ್ಟು ಮಾತಾಡುತ್ತಿರಲಿಲ್ಲ ಇದು ಮಂಜಿಗೂ ಒಗಟಾಗಿತ್ತು. ಅಪ್ಪ ಎಲ್ಲಿಗೆ ಹೋಗಿದ್ದೆ ಕೇಳುತ್ತಲೆ ಇದ್ದಳು ಅವನು ಮಾತಾಡದೆ ಗುಡಿಸಲು ಸೇರಿದ. 'ಈಯಪ್ಪುಂದು ಯಾವಾಗ್ಲೂ ಈಟೇಯ ಯಾವಾಗ ನಗ್ತಾನೆ ಯಾವಾಗ ಅಳ್ತಾನೆ ಯಾವಾಗ ಮಾತಾಡುಸ್ತಾನೆ ತಿಳಿವಲ್ದು' ಅಂದು ಕೊಂಡಳು.

ಇನ್ನೇನು ಊರಿನ ಜಾತ್ರೆಗೆ ಇನ್ನೊಂದೆ ದಿನ ಬಾಕಿ ಇದ್ದದ್ದು ಊರು ಶೃಂಗಾರಗೊಳ್ಳುತ್ತಿತ್ತು. ಹಟ್ಟಿಯು ಶೃಂಗಾರಗೊಳ್ಳುತ್ತಿತ್ತು. ಮನಸ್ಸು ನೂರಾರು ದುಃಖಗಳನ್ನು ಒಳಗಿಟ್ಟುಕೊಂಡರು ಜಾತ್ರೆಯ ಗದ್ದಲ ಸಂಭ್ರಮದಲ್ಲಿ ಅವೆಲ್ಲ ಕರಗಿ ನೀರಾಗಿ ದೇವರಿಗೆ ಸೆಳೆ ಹೊಯ್ಯುವ ಉತ್ಸಾಹಕ್ಕೆ ಅಣಿಯಾಗಿತ್ತು. ಇಡಿ ರಾತ್ರಿ ಊರು ಮಲಗಿದ್ದರು ದೀಪಗಳು ಮಾತ್ರ ಬೆಳಗುತ್ತಿದ್ದವು. ಆ ರಾತ್ರಿ ತುಸು ಹೆಚ್ಚೆ ಕುಡಿದು ಮಲಗಿದ ರಾಜೀವಪ್ಪನಿಗೆ ನಿದ್ದೆಯೆ ಸುಳಿಯಲಿಲ್ಲ. ಅವನ ಮುಖಭಾವ ಕ್ಷಣ ಕ್ಷಣಕ್ಕೂ ಬದಲಾಗುತ್ತಿತ್ತು ನೆನಪಿನ ಸುಳಿಯೊಂದು ಎದೆಯ ತುಂಬ ಕುಳಿತು ಕುಣಿಯುತ್ತಿತ್ತು. ಅದರಲ್ಲಿ ಸಂಕಟಪ್ಪಗೌಡ ಇದ್ದ.

ಅದೊಂದಿನ ರಾಜೀವಪ್ಪ ಹೊಲದ ಕೆಲಸವನ್ನು ಮುಗಿಸಿ ಮಂಜಿಯೊಂದಿಗೆ ಹೆಜ್ಜೆಹಾಕುತ್ತಾ ಬರುತ್ತಿದ್ದ ಇಬ್ಬರ ಹೆಜ್ಜೆಗಳ ಶಬ್ದ ಒಬ್ಬರಿಗೊಬ್ಬರಿಗೆ ಕೇಳುತ್ತಿತ್ತು. ಕಣಿವೆಯೊಂದನ್ನು ದಾಟಿ ಬರುವಾಗ ಇದ್ದಕ್ಕಿದ್ದಂತೆ ಬೆನ್ನ ಹಿಂದೆ ನಡೆದು ಬರುತ್ತಿದ್ದ ಮಂಜಿ ಕಾಣದಾದಳು. ಗಾಬರಿಯಾದ ಒಂದೆರಡು ಬಾರಿ ಕೂಗಿದ ಪಕ್ಕದ ಜೋಳದ ಸೆಪ್ಪೆಯಲ್ಲಿ ಏನೊ ಸದ್ದಾಯಿತು. ರಭಸವಾಗಿ ನುಗ್ಗಿದ ಸೆಪ್ಪೆಯ ನಡುವಲ್ಲಿ ಮಂಜಿ ಪ್ರಜ್ಞೆ ತಪ್ಪಿ ಬಿದ್ದಿದ್ದಳು ಅವಳ ಬಾಯಿಗೆ ಬಟ್ಟೆಯೊಂದನ್ನು ಕಟ್ಟಲಾಗಿತ್ತು. ಅಲ್ಲಲ್ಲಿ ಸೆಪ್ಪೆಯ ತರಚಿದ ಗಾಯಗಳಿದ್ದವು. ಪಕ್ಕದ ಹೊಂಡದಲ್ಲಿದ್ದ ನೀರನ್ನು ಬೊಗಸೆಯಲ್ಲಿ ತಂದು ಚಿಮುಕಿಸಿದ ಎಚ್ಚರವಾದಳು ಗಾಬರಿಯಾದಳು ಅವಳ ಬಾಯಿಗೆ ಕಟ್ಟಿದ ಬಟ್ಟೆ ಬಿಚ್ಚಿದ ಏನಾಯಿತೆಂದು ಕೇಳಿದ ಅವಳಿಗೆ ಏನೊಂದು ನೆನಪಿರಲಿಲ್ಲ. 'ನಿನ್ನ ಹಿಂದೆಯೆ ಬರುತ್ತಿದ್ದೆ ಜೋಳದ ತೆನೆಗಳನ್ನು ನೋಡಿ ಸುಮ್ಮನಿರಲಾಗಲಿಲ್ಲ ನಾಲ್ಕಾರು ತೆನೆಗಳನ್ನು ಕಿತ್ಕೊಂಡು ಒಂದಿನ ಜೋಳದ ರೊಟ್ಟಿಯನ್ನಾದರೂ ಮಾಡ್ಬೌದು ಅಂದ್ಕೊಂಡೆ ಕೀಳ್ತಾ ಇದ್ದೆ ಅಷ್ಟರಲ್ಲಿ ಯಾರೊ ಹಿಂದಿನಿಂದ ಬಿಗಿಯಾಗಿ ಹಿಡಿದು ಮುಖ ಬಾಯಿಗೆ ಬಟ್ಟೆಕಟ್ಟಿದರು ನಾನು ಕಿರ್ಚ್ಕೊಳ್ಳೊಕು ಆಗ್ದೆ ಇರಂಗೆ ಬಿಗಿಯಾಗಿತ್ತು ದರದರನೆ ಎಳೆದ್ರು ಅಷ್ಟ್ರಾಗೆ ಗ್ಯಾನತಪ್ಪಿ ಬಿದ್ದೆ ಅಷ್ಟೆ ಗೊತ್ತಿರೋದು' ಅಂದಳು. ಅನತಿ ದೂರದಲ್ಲಿ ಸೆಪ್ಪೆ ಸದ್ದು ಮಾಡಿತು ನೋಡುವಷ್ಟರಲ್ಲಿ ಆಕೃತಿಯೊಂದು ನಾಲ್ಕಾರು ಗದ್ದೆಗಳನ್ನು ದಾಟಿ ಮರೆಯಾಯಿತು. ಈ ಊರ್ನಾಗೆ ಯಾರ್ ಅಂತರಿರ್ಬೇಕು ಅಂದ್ಕೊಂಡ ಆಕೃತಿಯನ್ನು ನೋಡಿ ಓ ಅವನೆ ಅಂದ್ಕೊಂಡು ಸಮಯ ಬರ್ಲಿ ಅವನ್ಗೊಂದು ಗತಿ ಕಾಣಿಸ್ತೀನಿ ಅಂದ್ಕೊಂಡು ನೀನೆದ್ದೇಳು ಮಗಾ.. ಇದನ್ನ ನಿಮ್ಮಮ್ಮಂತಾವ ಹೇಳ್ಬೇಡ ಏನೂ ಆಗಿಲ್ಲ ಅಂದು ಮಗಳ ಜತೆ ಮನೆ ಸೇರಿದ್ದ. ಸಂಕಟಪ್ಪಗೌಡನನ್ನ ನೋಡ್ದಾಗೆಲ್ಲಾ ಅವನ ಎದೆಯಲ್ಲಿ ಹಾವು ಬುಸುಗುಡುತ್ತಿತ್ತು. ಅದರ ನೆನಪಲ್ಲಿ ನಿದ್ದೆ ಹೋದ.

ಬೆಳ್ ಬೆಳಿಗ್ಗೆಯೆ ಹಲವಾರು ವಾದ್ಯಗಳ ಸದ್ದು ಗೊಂಬೆಗಳ ಕುಣಿತ ಆರಂಭವಾಗಿತ್ತು ದೇವಿರಮ್ಮ ಸಿಂಗಾರ ಗೊಂಡಿದ್ದಳು ಅವಳನ್ನು ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ಊರ ಜಗುಲಿ ಮೇಲೆ ಇಳಿಸಿದರು. ಮಣೇವು ಇಡುವ ಕಾರ್ಯಕ್ರಮ ನಡೆಯುತ್ತಿತ್ತು. ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಇಡೀ ಹಟ್ಟಿಯ ಜನವೆಲ್ಲಾ ಅದನ್ನು ಕಣ್ತುಂಬಿಕೊಳ್ಳಲು ಸುತ್ತುವರಿದಿದ್ದರು. ಡುವ್ ಡುವ್ ಡಕ್ ಡುವ್ ಡುವ್ ಡಕ್... ವಾಲ್ಗದ ಸದ್ದು ಎಲ್ಲೆಡೆ ಕೇಳಿಸುತ್ತಿತ್ತು. ಸಂಕಟಪ್ಪಗೌಡ ಅವನ ಜೊತೆ ಹತ್ತಾರು ಜನ ಮಣೇವು ಸುತ್ತುತ್ತಿದ್ದರು. ಒಂದು ಸುತ್ತು ಆಯ್ತು ಎರಡು ಸುತ್ತು ಆಯ್ತು ಕೇಕೆ ಉದ್ಘಾರ ದೇವಿಯ ಘೋಷಣೆ ಕೇಳುತ್ತಿತ್ತು. ರಾಜೀವಪ್ಪನು ಕುಣಿತವನ್ನೆ ನೋಡುತ್ತಿದ್ದ ತಂದೆ ನೆನಪಾದ ತಾಯಿಯ ಸಂಕಟ ಕಣ್ಣು ಮುಂದೆ ಬಂದಂತಾಯಿತು. ಮಂಜಿ ಅವನ ಕೈಯನ್ನು ಬಿಗಿಯಾಗಿ ಹಿಡಿದುಕೊಂಡಿದ್ದಳು. ಅವನಿಗೆ ಜೋಳದ ಹೊಲ ಕಣಿವೆ, ಬಾಯಿ ಕಟ್ಟಿದ್ದ ಮಂಜಿ ನೆನಪಾದಳು. ಇದ್ದಕ್ಕಿದ್ದಂತೆ ಆವೇಶದಿಂದ ಅವನು ಬುಸುಗುಡುತ್ತಿದ್ದ ಎದೆಯ ಕವಾಟದಲಿ ಉರಿ ಎದ್ದಂತಾಯಿತು ಅದು ಬೆಂಕಿಯಾಗಿ ನರನಾಡಿಯೆಲ್ಲಾ ಹರಿದಾಡಿತು. ದೇವೀರಮ್ಮನ ಮೂರ್ತಿಯನ್ನೊಮ್ಮೆ ನೋಡಿದ ವಿಚಿತ್ರ ಧೈರ್ಯ ತುಂಬಿತು ಚಂಗನೆ ನೆಗೆದವನೆ ಸಂಕಟಪ್ಪಗೌಡನ ಕುತ್ತಿಗೆಯನ್ನು ಹಿಡಿದ ಮಣೇವು ಮೂರನೆ ಸುತ್ತಿನಲ್ಲಿತ್ತು ಅಯ್ಯೋ ಬಿಡೊ ಬಿಡೊ ಎನ್ನುತ್ತಲೆ ಹೆಜ್ಜೆ ಇಡುತ್ತಿದ್ದವನಿಗೆ ಎಲ್ಲವೂ ಅರ್ಥವಾಗಿತ್ತು ಕೊಸರಾಡಿ ಬಿಡಿಸಿಕೊಳ್ಳಲು ನೋಡುತ್ತಿದ್ದ 'ಬೋಸುಡಿಕೆ ಹಟ್ಟಿ ಹೆಣ್ಮಕ್ಳು ಬೇಕೆನ್ಲ ನಿನಗೆ' ಇವತ್ತು ಮಣೇವು ಪೂರ್ತಿ ಆಗುತ್ತೆ ನೋಡು ಸೂಳೆ.. ಮಗನೆ... ಎನ್ನುತ್ತಾ ಅವನು ತಪ್ಪಿಸಿಕೊಂಡು ಓಡುತ್ತಿದ್ದರೆ ಹಿಂದೆಯೆ ರಾಜೀವಪ್ಪನು ಓಡುತ್ತಲೆ ಇದ್ದ ಹೇ... ಅವನನ್ನು ಹಿಡಿರೊ.. ಹಿಡಿರೊ ಕೊಂದ್ಬಿಟ್ಟಾನು ಎಂಬ ಧ್ವನಿ ಸುತ್ತಮುತ್ತಾ ಕೇಳುತ್ತಲೆ.. ಇತ್ತು ಅವನು ಓಡುತ್ತಲೆ ಇದ್ದ. ಮಣೇವಿನ ಪ್ರಸಾದಕ್ಕೆ ಅಲ್ಲಿದ್ದ ಜನ ಮುಗಿಸಿದ್ದರು.. ದೇವಿರಮ್ಮ ಪಲ್ಲಕ್ಕಿಯಲ್ಲಿ ಸುಮ್ಮನೆ ಕುಳಿತಿದ್ದಳು.. ಸುತ್ತಲೂ ಜಾತ್ರೆಯ ಗದ್ದಲ ಮತ್ತೆ ಮತ್ತೆ ಕೇಳಿಸುತ್ತಲೆ ಇತ್ತು.. ಅವರಿಬ್ಬರೂ ಓಡುತ್ತಲೆ.. ಇದ್ದರು ಅವರ ಹಿಂದೆ ಕೆಲವರು ಬೆನ್ನಟ್ಟಿದ್ದರು.. ನಂಜಮ್ಮ ಮಂಜಿ ಅವರು ಓಡಿಹೋದ ದಿಕ್ಕಿನತ್ತ ನೋಡುತ್ತ ನಿಂತಿದ್ದರು.

MORE FEATURES

ಮಹಾಭಾರತಕ್ಕೆ ಮಾತ್ರ ಸೀಮಿತವಾಗದೆ ಸಾರ್ವಕಾಲಿಕತೆಯ ಸ್ಪರ್ಶವನ್ನು ಹೊಂದಿದೆ

09-12-2025 ಬೆಂಗಳೂರು

"ಯಾವುದೋ ಒಂದು ಕ್ಷಣದಲ್ಲಿ ಈ ಕಾದಂಬರಿಯ ಕಥಾವಸ್ತುವಿಗೆ ಪ್ರೇರಣೆ ನೀಡಿತು. ಕೆಲವು ಕಾಲ ಮನಸ್ಸಿನಲ್ಲಿ ಮಥನವಾಗುತ್ತ...

ಅಂಬೇಡ್ಕರ್‌ ಪ್ರಸಕ್ತ ಸಮಾಜ, ರಾಜಕೀಯಕ್ಕೆ ಬಹು ಮುಖ್ಯ: ದೀಪಾ ಭಾಸ್ತಿ

09-12-2025 ಬೆಂಗಳೂರು

ಗುಲ್ಬರ್ಗಾ: ಸಪ್ನ ಬುಕ್ ಹೌಸ್, ಬೆಂಗಳೂರು ಮತ್ತು ಕುಟುಂಬ ಪ್ರಕಾಶನ, ಕಲಬುರಗಿ ವತಿಯಿಂದ ಪ್ರೊ. ಎಚ್ ಟಿ ಪೋತೆ ಅವರ ಡಾ ಬ...

ಈಗಿನ ಕಾಲದಲ್ಲಿ ಇದು ಎಲ್ಲರಿಗೂ ತಲುಪಬೇಕಾದಂತಹ ಪುಸ್ತಕ

09-12-2025 ಬೆಂಗಳೂರು

"ಕಲ್ಕತ್ತಾದ ಗೌರವಾನ್ವಿತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಹುಡುಗಿ, ತನ್ನ ಸಂಬಂಧಿ ಅಣ್ಣನ ಸ್ಥಾನದಲ್ಲಿ ಇದ್ದ ರಮೇ...