ನೋವಿನ ಭಾಷೆ ಎಲ್ಲಾ ಮನುಷ್ಯರಿಗೂ ಒಂದೇ..


ತುಂಬು ಕುಟುಂಬದೊಳಗೆ ಬದುಕುತ್ತಿರುವಾಗ ಹೀಯಾಳಿಕೆ, ಅವಮಾನ, ಕುಹಕ ಏನೇ ಎದುರಾದರೂ 'ಎಲ್ಲರಿಗೂ ಅವರವರದೇ ಆದ ಸಮಸ್ಯೆಗಳಿರುತ್ತವೆ. ಅದಕ್ಕೆ ತಕ್ಕಂತೆ ವರ್ತಿಸುತ್ತಾರೆ ಅಷ್ಟೇ. ' ಎನ್ನುತ್ತಾ ಅಂತಹ ಅನಿಶ್ಚಿತತೆಯ ಸಂದರ್ಭದಲ್ಲೂ ತನ್ನ ಮಗಳ ಮನಸಿನಲ್ಲಿ ಮಲ್ಲಿಗೆಯ ಗಿಡವನ್ನೇ ನೆಡುತ್ತಾ ಹೋಗುವ ತಾಯಿ ಆಯಿಷಾ ಓರ್ವ ತತ್ವಜ್ಞಾನಿಯಂತೆ ಕಾಣುತ್ತಾರೆ. ಅವರ ಈ ಒಳ್ಳೆಯತನವೇ ಅವರಿಗೆ ಕ್ಯಾನ್ಸರ್ ವಿರುದ್ಧ ಹೋರಾಡಲು ಬೇಕಾದ ಮಾನಸಿಕ ಶಕ್ತಿಯನ್ನು ಮೊಗೆ ಮೊಗೆದು ಕೊಟ್ಟಿರಬೇಕು. ಎನ್ನುತ್ತಾರೆ ಹಸೀನ ಮಲ್ನಾಡ್, ಅವರು ಲೇಖಕಿ ಫಾತಿಮಾ ರಲಿಯಾ ಅವರು ಬರೆದ 'ಕೀಮೋ' ಕೃತಿಯ ಕುರಿತ ಅನಿಸಿಕೆ ..

'ನೋವಿನ ಭಾಷೆ ಎಲ್ಲಾ ಮನುಷ್ಯರಿಗೂ ಒಂದೇ. ಅದನ್ನು ವ್ಯಕ್ತ ಪಡಿಸುವ ರೀತಿಯಲ್ಲೂ ಯಾವುದೇ ವ್ಯತ್ಯಾಸವಿರುವುದಿಲ್ಲ' .

ತಾಯಿಯೊಬ್ಬಳಿಗೆ ತನಗೆ ಸ್ತನದ ಕ್ಯಾನ್ಸರ್ ಇದೆ ಎಂದು ಖಚಿತವಾದಾಗ ' ತನ್ನ ಹದಿನಾರರ ಹರೆಯದ ಮಗಳೇ ತನ್ನನ್ನು ಆಸ್ಪತ್ರೆಯಲ್ಲಿ ನೋಡಿಕೊಳ್ಳಲಿ ' ಎನ್ನುವ ಆಕೆಯ ದೃಢ ನಿರ್ಧಾರವೇ ಈ ಅನುಭವ ಕಥನದ ಹುಟ್ಟು.

ತನ್ನ ತಾಯಿಯ ನಿರ್ಧಾರಕ್ಕೆ ಒಪ್ಪಿಕೊಂಡು ಆಗ ತಾನೇ ರೂಪ ಪರಿವರ್ತನೆಗೊಂಡು ಚಿಟ್ಟೆಯಂತೆ ಹಾರುತ್ತಿದ್ದ ಹುಡುಗಿ ಪುನಃ ಕೋಶಾವಸ್ಥೆಗೆ ಒಳಗಾಗಿ ಬದುಕಿನ ಬಗ್ಗೆ ತಾನು ಗೀಚಿದ್ದ ಕಲ್ಪನೆಯ ಚಿತ್ತಾರಗಳನ್ನೆಲ್ಲಾ ಒಂದೊಂದಾಗಿ ಅಳಿಸುತ್ತ, ಅಮ್ಮನ ಜೊತೆಯಾಗಲು ಬೇಕಾದ 'ಶಕ್ತಿ'ಯನ್ನು ಮಾತ್ರ ತನ್ನೊಳಗೆ ತುಂಬಿಕೊಳ್ಳುತ್ತಾ ಹೋಗುತ್ತಾಳಲ್ಲ ಅದೇ ಈ ಅನುಭವ ಕಥನದ ಅಧ್ಯಾಯಗಳು.

ತುಂಬು ಕುಟುಂಬದೊಳಗೆ ಬದುಕುತ್ತಿರುವಾಗ ಹೀಯಾಳಿಕೆ, ಅವಮಾನ, ಕುಹಕ ಏನೇ ಎದುರಾದರೂ 'ಎಲ್ಲರಿಗೂ ಅವರವರದೇ ಆದ ಸಮಸ್ಯೆಗಳಿರುತ್ತವೆ. ಅದಕ್ಕೆ ತಕ್ಕಂತೆ ವರ್ತಿಸುತ್ತಾರೆ ಅಷ್ಟೇ. ' ಎನ್ನುತ್ತಾ ಅಂತಹ ಅನಿಶ್ಚಿತತೆಯ ಸಂದರ್ಭದಲ್ಲೂ ತನ್ನ ಮಗಳ ಮನಸಿನಲ್ಲಿ ಮಲ್ಲಿಗೆಯ ಗಿಡವನ್ನೇ ನೆಡುತ್ತಾ ಹೋಗುವ ತಾಯಿ ಆಯಿಷಾ ಓರ್ವ ತತ್ವಜ್ಞಾನಿಯಂತೆ ಕಾಣುತ್ತಾರೆ. ಅವರ ಈ ಒಳ್ಳೆಯತನವೇ ಅವರಿಗೆ ಕ್ಯಾನ್ಸರ್ ವಿರುದ್ಧ ಹೋರಾಡಲು ಬೇಕಾದ ಮಾನಸಿಕ ಶಕ್ತಿಯನ್ನು ಮೊಗೆ ಮೊಗೆದು ಕೊಟ್ಟಿರಬೇಕು.

'ಇತರರ ಬಗ್ಗೆ ನಕಾರಾತ್ಮಕವಾಗಿ ಚಿಂತಿಸುವುದನ್ನು ಬಿಟ್ಟು ನಮ್ಮ ಈ ಹೊತ್ತಿನ ಅಗತ್ಯತೆಗಳ ಬಗ್ಗೆ, ನಮ್ಮ ಬದುಕಿನ ಖಾಲಿ ಹಾಳೆಗೆ ಬಣ್ಣ ತುಂಬಿಸುವ ಬಗ್ಗೆ ಮಾತ್ರ ಯೋಚಿಸಬೇಕು ಅದುವೇ ಜೀವನ' ಎನ್ನುತ್ತಾ ತನ್ನ ಹೋರಾಟದ ಉದ್ದಕ್ಕೂ ಮಗಳಿಗೆ ಪಾಠ ಕಲಿಸುತ್ತಾ ಹೋಗುವ ಅಮ್ಮ ಆಯಿಷಾ ಓರ್ವ ಅಸಾಮಾನ್ಯ ವ್ಯಕ್ತಿಯೇ ಸರಿ. ಆಕೆಯ ದಿಟ್ಟತನದ ಬಗ್ಗೆ ಓದುವಾಗೆಲ್ಲ ಅಭಿಮಾನದ ಅಪ್ಪುಗೆಯನ್ನು ಆಗಲೇ ಕೊಡಬೇಕೆನಿಸುತ್ತದೆ'

ಉಳಿದಂತೆ, ಹೆಣ್ಣು ಮಕ್ಕಳು ಇಷ್ಟೇ ಓದಬೇಕು. ಹೆಚ್ಚು ಓದಿದ್ರೆ ಹಾಳಾಗುತ್ತಾರೆ, ಗಂಡುಬೀರಿಗಳಾಗುತ್ತಾರೆ ಎಂಬಿತ್ಯಾದಿ ಈಡಿಯಮ್ಸ್, ಫ್ರೇಸಸ್ ಗಳೆಲ್ಲ Zen Y or Millennials ಕಾಲದ ನಮ್ಮ ಸಮುದಾಯದ ಹೆಚ್ಚಿನ ಹೆಣ್ಣು ಮಕ್ಕಳಿಗೆ ಮಾಮೂಲು. ಇದನ್ನು ಮೀರಿಯೂ ನಾವು ಒಂದೆರೆಡು ಡಿಗ್ರಿ ಪಡೆದಿದ್ದೇವೆ ಅಂದ್ರೆ ಅದರ ಮೊದಲ ಕ್ರೆಡಿಟ್ ಸಲ್ಲಬೇಕಾದದ್ದು ನಮ್ಮ ಅಮ್ಮಂದಿರಿಗೇ...!

ಏಕೆಂದರೆ ನಮ್ಮ ಅಮ್ಮಂದ್ರು ಭಯಂಕರ ಹುಷಾರು. ಹಾಡು, ಓದು, ಕಥೆ ಹೇಳೋದು, ಸ್ವಾವಲಂಬಿತನ, ವ್ಯವಹಾರ ಪ್ರಜ್ಞೆ ಹೀಗೆ ಅವರಿಗೆ ಗೊತ್ತಿಲ್ಲದೇ ಇದ್ದ ವಿಚಾರಗಳು ಕಡಿಮೆಯೇ. ಅವಕಾಶಗಳ ಕೊರತೆಯಿಂದಾಗಿ ಅವರು ಕಿಟಕಿಯ ಹಿಂದೆಯೇ ಮರೆಯಾಗಿ ಬಿಟ್ಟರು. ಆದರೆ ಅವರ ಕನಸುಗಳನ್ನು ತಮ್ಮ ಮಕ್ಕಳಲ್ಲಿ ಸಾಕಾರಗೊಳಿಸಲು ಅವರೆಂದೂ ಹಿಂದೇಟು ಹಾಕಲಿಲ್ಲ. ಅಂತಹ ಆಶಾವಾದಿ ಅಮ್ಮಂದಿರಿಗೆಲ್ಲ ಬಿಗ್ ಹಗ್ಸ್.

ಈ ಕಾಲದಲ್ಲಿ ಆಸ್ಪತ್ರೆವಾಸ ಎನ್ನೋದು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಎಲ್ಲರಿಗೂ ಅನಿವಾರ್ಯವಾಗಿ ಬಿಟ್ಟಿದೆ. ಒಂದು ಘಳಿಗೆ ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವವರ ಕಡೆ ದೃಷ್ಟಿ ಹರಿಸಿದರೆ, ಒಂದೆರೆಡು ನಿಮಿಷ ರೋಗಿಗಳ ಕಡೆಯವರಲ್ಲಿ ಮಾತನಾಡಿಸಿದರೆ ಆ ದಿನವಿಡೀ ನಾವು ಖಿನ್ನರಾಗಿಯೇ ಇರುತ್ತೇವೆ. ಈ ಸ್ವಾರ್ಥ ಪ್ರಪಂಚದ ಕಡೆಗೊಂದು ಅಸಹ್ಯದ ನೋಟವನ್ನು ಖಂಡಿತ ಬೀರುತ್ತೇವೆ. ಮತ್ತೆ ತಣ್ಣಗೆ ಅದನ್ನು ಮರೆತು ಬಿಡುತ್ತೇವೆ. ಆದರೆ ಹದಿನೇಳು ವರ್ಷಗಳ ಹಿಂದೆ ಆಸ್ಪತ್ರೆಯೊಳಗೆ ಹುಟ್ಟಿಕೊಂಡ ತನ್ನ ಪುಟ್ಟ ಮನಸ್ಸನ್ನು ಇರಿಯುವಂತಹ ತಲ್ಲಣಗಳು ತನ್ನ ಮನಸ್ಸಿನಿಂದ ಇನ್ನೂ ಮಾಸದೇ ಇರುವುದು ಏಕೆ? ಎಂಬ ಕುತೂಹಲಭರಿತ ಪ್ರಶ್ನೆಗೆ ಲೇಖಕಿಯ ಉತ್ತರವನ್ನು ಈ ಅನುಭವ ಕಥನದಲ್ಲಿ ನೀವೆಲ್ಲ ಓದಬೇಕು.

ಹೇಳದೇ ಇರಬಾರದು ಅಂದುಕೊಂಡ ಮಾತು:
ಬದುಕಿನಲ್ಲಿ ಅನಿರೀಕ್ಷಿತವಾಗಿ ಬೀಸಿದ ಬಿರುಗಾಳಿಯನ್ನು ಎದುರಿಸಲು ಒಬ್ಬಳೇ ಎದೆಗೊಟ್ಟು ನಿಂತಿದ್ದರೂ ನಾನಾ ರೀತಿಯ ಚುಚ್ಚು ಮಾತುಗಳನ್ನು ಅವರಿವರಿಂದ ಕೇಳುವಂತಾದಾಗ 'ಈ ಪ್ರಪಂಚದಲ್ಲಿ ನಾನೆಷ್ಟು ಒಂಟಿ, ನನ್ನ ಪರವಾಗಿ ಇವರಿಗೆಲ್ಲ ಉತ್ತರ ಕೊಡುವವರು ಒಬ್ಬರಾದರೂ ಇರಬೇಕಿತ್ತು' ಎಂದು ಲೇಖಕಿ ಬರೆಯುತ್ತಾಳೆ. ಇದನ್ನು ಓದಲೇ ಸಹಿಸದಾಗಿ ಈ ಪುಸ್ತಕದಲ್ಲಿ ಉಲ್ಲೇಖಿಸಿರುವ ಅಷ್ಟೂ ನೋವುಗಳನ್ನು ಒಮ್ಮೆಲೇ ಅನುಭವಿಸಿದಂತಾಯ್ತು.

MORE FEATURES

ಮಹಾಭಾರತಕ್ಕೆ ಮಾತ್ರ ಸೀಮಿತವಾಗದೆ ಸಾರ್ವಕಾಲಿಕತೆಯ ಸ್ಪರ್ಶವನ್ನು ಹೊಂದಿದೆ

09-12-2025 ಬೆಂಗಳೂರು

"ಯಾವುದೋ ಒಂದು ಕ್ಷಣದಲ್ಲಿ ಈ ಕಾದಂಬರಿಯ ಕಥಾವಸ್ತುವಿಗೆ ಪ್ರೇರಣೆ ನೀಡಿತು. ಕೆಲವು ಕಾಲ ಮನಸ್ಸಿನಲ್ಲಿ ಮಥನವಾಗುತ್ತ...

ಅಂಬೇಡ್ಕರ್‌ ಪ್ರಸಕ್ತ ಸಮಾಜ, ರಾಜಕೀಯಕ್ಕೆ ಬಹು ಮುಖ್ಯ: ದೀಪಾ ಭಾಸ್ತಿ

09-12-2025 ಬೆಂಗಳೂರು

ಗುಲ್ಬರ್ಗಾ: ಸಪ್ನ ಬುಕ್ ಹೌಸ್, ಬೆಂಗಳೂರು ಮತ್ತು ಕುಟುಂಬ ಪ್ರಕಾಶನ, ಕಲಬುರಗಿ ವತಿಯಿಂದ ಪ್ರೊ. ಎಚ್ ಟಿ ಪೋತೆ ಅವರ ಡಾ ಬ...

ಈಗಿನ ಕಾಲದಲ್ಲಿ ಇದು ಎಲ್ಲರಿಗೂ ತಲುಪಬೇಕಾದಂತಹ ಪುಸ್ತಕ

09-12-2025 ಬೆಂಗಳೂರು

"ಕಲ್ಕತ್ತಾದ ಗೌರವಾನ್ವಿತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಹುಡುಗಿ, ತನ್ನ ಸಂಬಂಧಿ ಅಣ್ಣನ ಸ್ಥಾನದಲ್ಲಿ ಇದ್ದ ರಮೇ...