"ಇಲ್ಲಿನ ಹದಿನೇಳು ಪ್ರಸಂಗಗಳು ಕತೆ ಮತ್ತು ಬದುಕಿನ ನಡುವಿನ ತೆಳುಗೆರೆಯಲ್ಲಿ ಸಂಭವಿಸುತ್ತವೆ. ಉತ್ತರ ಭಾರತದಿಂದ ಬಂದ ಒಬ್ಬ ಆಗಂತುಕ ಪಿಜಿಯಲ್ಲಿರುವವನ ರೂಮ್ ಮೆಟ್ ಆಗುತ್ತಾನೆ, ಕ್ರಮೇಣ ಅವನ ಉರ್ದು, ಹಿಂದಿ ಸಾಹಿತ್ಯದ ಓದು ಮತ್ತು ಪೊಯೆಟ್ರಿಯ ಸಂಸರ್ಗ ಈ ವ್ಯಕ್ತಿಗೆ ಹತ್ತಿರ ತರುತ್ತದೆ," ಎನ್ನುತ್ತಾರೆ ವಿಕಾಸ್ ನೆಗಿಲೋಣಿ. ಅವರು ದಾದಾಪೀರ್ ಜೈಮನ್ ಅವರ ʻಜಂಕ್ಷನ್ ಪಾಯಿಂಟ್ʼ ಕೃತಿ ಕುರಿತು ಬರೆದ ಅನಿಸಿಕೆ.
ಹೀಗೆ ನಮ್ಮೆಲ್ಲರ ಬದುಕಿನಲ್ಲಿ ಚಿತ್ರ ವಿಚಿತ್ರ ಸಂದರ್ಭಗಳು ಎದುರಾಗಿರುತ್ತವೆ, ಚಿತ್ರವಿಚಿತ್ರ ಜನರೂ ಎದುರಾಗಿರುತ್ತಾರೆ. ಒಬ್ಬ ಕತೆಗಾರ ಅಥವಾ ಕವಿ ಅದನ್ನೆಲ್ಲಾ ನೋಡುವ ಕೋನ ಬೇರೆ. ಅಂಥ ಪಾತ್ರಗಳ, ಸಂದರ್ಭಗಳ ದಾಖಲೀಕರಣವೇ ದಾದಾಫೀರ್ ಜೈಮನ್ ಬರೆದ ‘ಜಂಕ್ಷನ್ ಪಾಯಿಂಟ್’. ಓದಿ ಮುಗಿಸಿದಾಗ ಎಷ್ಟೊಂದು ಪಾತ್ರಗಳು, ವ್ಯಕ್ತಿಗಳು, ಸಂದರ್ಭಗಳು ಹಾದು ಹೋದವು, ಅವಕ್ಕೆ ಅಂಟಿದ ಪರಿಮಳವನ್ನೂ ಓದುಗನಿಗೆ ಅಂಟಿಸಿದವು. ಇಲ್ಲಿನ ಹದಿನೇಳು ಪ್ರಸಂಗಗಳು ಕತೆ ಮತ್ತು ಬದುಕಿನ ನಡುವಿನ ತೆಳುಗೆರೆಯಲ್ಲಿ ಸಂಭವಿಸುತ್ತವೆ. ಉತ್ತರ ಭಾರತದಿಂದ ಬಂದ ಒಬ್ಬ ಆಗಂತುಕ ಪಿಜಿಯಲ್ಲಿರುವವನ ರೂಮ್ ಮೆಟ್ ಆಗುತ್ತಾನೆ, ಕ್ರಮೇಣ ಅವನ ಉರ್ದು, ಹಿಂದಿ ಸಾಹಿತ್ಯದ ಓದು ಮತ್ತು ಪೊಯೆಟ್ರಿಯ ಸಂಸರ್ಗ ಈ ವ್ಯಕ್ತಿಗೆ ಹತ್ತಿರ ತರುತ್ತದೆ. ಬೇಂದ್ರೆ ಮತ್ತು ಫೈಜ್ ಅಹ್ಮದ್ ಇಬ್ಬರೂ ಒಂದಾಗುತ್ತಾರೆ. ಮತ್ತೊಂದೆಡೆ ಸಿನ್ಮಾದಲ್ಲಿ ವಿಲನ್ ಆಗಬೇಕೆಂದು ಬಂದ ಬಸವರಾಜ ಎನ್ನುವ ರೂಮ್ ಮೇಟ್, ಹೇಗೆ ಕ್ರಮೇಣ ತನ್ನ ಕನಸನ್ನು ಪಕ್ಕಕ್ಕಿಟ್ಟು, ಇಂಗ್ಲಿಷ್ ಕಲಿತು ವ್ಯಾವಹಾರಿಕತೆಯನ್ನು ಮೈಗೂಡಿಸಿಕೊಂಡು, ಕನಸು ಹಾಗೇ ಉಳಿದುಹೋಗುತ್ತದೆ ಅನ್ನುವ ವಿಷಾದ ಎದೆಗೆ ನಾಟುತ್ತದೆ. ಕನ್ನಡ ಬರದವರಿಗೆ ಕನ್ನಡ ಕಲಿಸುವ, ಗಂಡ ಅನುಮಾನದ ಪ್ರಾಣಿ ಅನ್ನುವ, ಆದರೂ ತನ್ನನ್ನು ತುಂಬಾ ಪ್ರೀತಿಸ್ತಾರೆ ಅಂತ ಆತುಕೊಳ್ಳುವ ಭುವನೇಶ್ವರಿ ಒಂದು ಲೇಖನದಲ್ಲಿದ್ದಾರೆ. ಪಿಜಿಗೆ ಅಡುಗೆ ಇತ್ಯಾದಿ ಕೆಲಸಕ್ಕೆ ಬಂದ ಒಬ್ಬಳು ಹೇಗೆ ಪರಿಚಿತಳಾದರೂ ಕ್ರಮೇಣ ನಿಗೂಢವಾಗಿಯೇ ಉಳಿದಳು ಅಂತ ಇನ್ನೊಂದು ಲೇಖನದಲ್ಲಿ ಹೇಳುತ್ತಾರೆ. ಯಾವನೋ ಒಬ್ಬ ಎಲೀಟ್ ಗಳ ಜೊತೆ ಸೇರಿ, ತನ್ನ ಒರಿಜಿನಾಲಿಟಿಯನ್ನು ಕಳಕೊಳ್ಳುವುದನ್ನು ಒಳನೋಟದಿಂದ ದಾದಾ ಲೇಖನವೊಂದರಲ್ಲಿ ಗ್ರಹಿಸುತ್ತಾರೆ. ಎಚ್ ಐವಿ ಪಾಸಿಟಿವ್ ಸಂಗಾತಿಯೊಡನೆ ಪ್ರೀತಿ ನಡೆಸುವ ಒಂದು ಪ್ರಸಂಗ ಇದರಲ್ಲಿದೆ. ಮುಸಲ್ಮಾನ ಹುಡುಗಿಯೊಬ್ಬಳನ್ನು ಪ್ರೀತಿಸಿದ ಬಸವನೆಂಬ ಪಿಡ್ಜಾ ಡೆಲಿವರಿ ಬಾಯ್ ಕತೆ ಈ ಸಂಕಲನದಲ್ಲಿದೆ. ಅದು ಎಷ್ಟು ಟ್ರಿಕ್ಕಿಯಾಗಿ ದಾದಾ ಬರೆದಿದ್ದಾರೆಂದರೆ ಈಗಿನ ಹುಡುಗರಿಗೆ ರಾಜಕೀಯ ಪ್ರಜ್ಞೆಯೇ ಇಲ್ಲ ಅಂತ ಶುರುವಾಗಿ, ಕ್ರಮೇಣ ಬಸವನ ಭಿನ್ನಕೋಮಿನ ಪ್ರೇಮದ ಕತೆಗೆ ತಿರುಗಿ, ಅದರ ಅಂತ್ಯವನ್ನು ಹೇಳಿ, ದಾದಾ ಒಂದು ಸಾಲು ಬರೀತಾರೆ: ಈ ಹುಡುಗರು ರಾಜಕೀಯದ ಬಗ್ಗೆ ಸಾಮಾಜಿಕ ಜ್ವಲಂತಗಳ ಬಗ್ಗೆ ಮಾತಾಡುವುದಿಲ್ಲ, ಸ್ವತಃ ಅವರೇ ಆ ಕತೆಗಳ, ಅದು ಒಯ್ಯುವ ದುರಂತಗಳ ನಾಯಕರೂ ಆಗುತ್ತಾರೆ.
ಝಲ್ಲೆನ್ನಿಸುವ ಒಂದು ಸಾಲು ಆ ಲೇಖನವನ್ನು ಒಂದು ಕತೆಯ ಎತ್ತರಕ್ಕೂ ಏರಿಸುತ್ತದೆ.
ಬಹಳ ಇಷ್ಟವಾದ ಹಲವು ಪಾತ್ರಗಳು ಈ ಲೇಖನದಲ್ಲಿವೆ, ಪರ್ಸನಲ್ ಫೇವರಿಟ್: ಪರೀಕ್ಷೆ. ಒಂದು ಅನ್ ಸೆಡ್ ಪೊಯಟ್ರಿಯಂತೆ ಕಾಣುವ ಇದು, ರೂಮ್ ಮೇಟ್ ಒಬ್ಬನ ತಳಮಳ, ಅದಕ್ಕೆ ಈತ ನೀಡುವ ಸಾಂತ್ವನ, ಕ್ರಮೇಣ ಆ ವ್ಯಕ್ತಿಯ ವಿಷಾದವನ್ನು ಈ ವ್ಯಕ್ತಿ ನೀಗುವ ರೀತಿ, ಆ ವ್ಯಕ್ತಿ ಹಂಚಿಕೊಳ್ಳುವ ಹೃದಯವಿದ್ರಾವಕ ಕೌಟುಂಬಿಕ ವ್ಯಥೆ- ಎಲ್ಲವನ್ನೂ ಹೆಚ್ಚು ಬಿಚ್ಚದೇ, ಕೊಂಚ ಮುಚ್ಚಿಟ್ಟೇ ಕವಿಯೊಬ್ಬ ಹ್ಯಾಂಡಲ್ ಮಾಡುವ ಸೂಕ್ಷ್ಮದಲ್ಲಿ, ಬಿಟ್ವಿನ್ ದಿ ಲೈನ್ಸ್ ಮಾದರಿಯಲ್ಲಿ ಸಾಗುತ್ತದೆ. ಆ ಕತೆ ಓದಿ ಹಲವು ಬೇರೆ ಲೇಖನಗಳನ್ನೂ ಓದಿದಮೇಲೂ ಆ ಮಂಜುವಿನ ನಿಟ್ಟುಸಿರು ತಾಗುತ್ತಿದೆ.
ಈ ಲೇಖನಗಳೆಲ್ಲಾ ಲೇಖಕ ಅಥವಾ ವೈಚಾರಿಕತೆ ಉಳ್ಳವನ ಲೆನ್ಸ್ ನಲ್ಲಿವೆ. ಹಾಗಾಗಿ ಅವನಿಗೆ ಎಲ್ಲಾ ಸಂದರ್ಭ, ಸಂಗತಿ, ವ್ಯಕ್ತಿ, ವ್ಯಥೆಗಳು ತುಸು ಹೆಚ್ಚೇ ಸಾಮಾಜಿಕ ನ್ಯಾಯದ ಕಣ್ಣಲ್ಲಿ ನೋಡಲು ಪ್ರೇರೇಪಿಸುತ್ತವೆ, ಹಾಗಂತ ಆತ ಮನುಷ್ಯನೇ. ಅವನಿಗೂ ಪೂರ್ವಗ್ರಹಗಳಿವೆ. ಉದಾಹರಣೆ, ಮನೆ ಕೆಲಸ ಮಾಡುವ ಚಾಕರಿಯವಳ ಹೆಸರು ಮಲ್ಲಿಕಾ ಅಂತ ಎಲ್ಲಿರತ್ತೆ ಅಂತ ಜಡ್ಜ್ ಮೆಂಟಲ್ ಆಗುವ ಒಂದು ಪ್ರಸಂಗವಿದೆ, ಹೌದು, ಸೀತಮ್ಮ, ಸಾಕಮ್ಮ, ಯಾವುದೋ ಬಾಯಿ ಅಂತ ಇರಬೇಕು ತಾನೇ ಅಂತ ಗ್ರಹಿಸಿ, ಛೇ, ಎಂಥ ಪೂರ್ವಗ್ರಹಿಕೆಯಪ್ಪಾ ನನ್ನದು ಅಂತ ಪೆಚ್ಚಾಗುತ್ತಾರೆ ದಾದಾ. ಹಾಗೇ, ಮುಸಲ್ಮಾನ ಅಂತ ಒಬ್ಬ ಮುಸಲ್ಮಾನನ ಪಿಜಿ ಕೋಣೆಗೇ ವ್ಯಕ್ತಿಯನ್ನು ಬಿಟ್ಟಾಗ, ಆತನ ಉಡುಗೆ, ತೊಡುಗೆ, ಚಹರೆ ನೋಡಿ ಅವನನ್ನು ‘ಅನುಮಾನ’ದಿಂದ ನೋಡಿ, ಕೊನೆಗೆ ಛೇ, ಅದು ಹೇಗೆ ನಾನು ಪೂರ್ವಗ್ರಹ ತಾಳಿಬಿಟ್ಟೆ ಅಂತ ಎಚ್ಚೆತ್ತುಕೊಳ್ಳುತ್ತಾರೆ ದಾದಾ. ಇಂಥ ಹಲವು ಗ್ರಹಿಕೆಗಳನ್ನೂ ಈ ಲೇಖನಗಳ ಗುಚ್ಛ ಹಿಡಿದಿಟ್ಟಿದೆ. ಹಾಗೇ, ಲೇಖಕರು ತಮ್ಮನ್ನು ತಾವು ಎಷ್ಟೇ ಸಾಮಾಜಿಕ ನ್ಯಾಯದ ಪರ ಅಂದುಕೊಂಡರೂ ಒಬ್ಬ ಕಾರ್ಪೆಂಟರ್ ಜೊತೆ ಕಾರ್ಪೆಂಟರ್ ನ ಜಾಗದಲ್ಲಿ ನಿಂತು ವ್ಯವಹರಿಸುವುದಕ್ಕೆ ಸಾಧ್ಯವೇ, ನಾವು ನಮ್ಮ ಅಹಮಿಕೆಯನ್ನು ಮೀರಬಲ್ಲೆವೇ ಅಂತ ಕೇಳಿಕೊಳ್ಳುತ್ತಾರೆ.
ದಾದಾ ಕತೆಗಾರರಿಗಿಂತ ಕವಿಯಾಗಿ ನನಗೆ ಹೆಚ್ಚು ಇಷ್ಟ. ಹಾಗಾಗಿಯೋ ಏನೋ ಅವರ ಯಾವುದೇ ಬರಹಗಳೂ ತುಸುಹೆಚ್ಚು ಕವಿತೆಯೇ ಆಗಿರುತ್ತವೆ. ಅಂಥ ಕವಿತ್ವದ ಈ ಲೇಖನ ಸಂಗ್ರಹ ಬಹಳ ಇಷ್ಟವಾಯಿತು. ಒಂದು ದೊಡ್ಡ ಆತ್ಮಕಥನದ ಬಿಡಿಚಿತ್ರದಂತಿರುವ ಈ ಸಂಗ್ರಹ ಪ್ರಾಮಾಣಿಕವಾಗಿವೆ, ಮಾನವೀಯವಾಗಿವೆ, ಜೀವನಪ್ರೀತಿ ಮತ್ತು ಬೆರಗುಗಳ ಸಮ್ಮಿಲನದಂತಿವೆ. ಈ ಥರದ ವ್ಯಕ್ತಿಚಿತ್ರಗಳನ್ನು ಹೆಚ್ಚೆಚ್ಚು ಬರೀರಿ ದಾದಾ, ಅಭಿನಂದನೆಗಳು!
"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...
ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...
"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...
©2025 Book Brahma Private Limited.