2025ನೇ ಸಾಲಿನ ಬುಕ್ ಬ್ರಹ್ಮ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನ ಪಡೆದ ಕಥೆಗಾರ ಸುಲ್ತಾನ್ ಮನ್ಸೂರ್ ಅವರ ʻಪೆರೇಡ್ ಪೊಡಿಮೋನುʼ ಕಥೆ ನಿಮ್ಮ ಓದಿಗಾಗಿ..
ಬಕ್ರೀದ್ ಹಬ್ಬದ ಮರುದಿನವೇ ಊರಿಡೀ ಬಹುಪಾಲು ಹಬ್ಬಿದ್ದ ಗುಸುಗುಸು ವಿಷಯಕ್ಕೆ ಧೋ ಎಂದು ಸುರಿದ ಜಡಿಮಳೆಯು ತಾತ್ಕಾಲಿಕ ವಿರಾಮ ಕೊಟ್ಟಿದ್ದರೂ, 108 ಅಂಬುಲೆನ್ಸೊಂದು ಮೊನ್ನೆ ಮೊನ್ನೆ ಪಿಯುಸಿಯಲ್ಲಿ ಮೊದಲ ಸ್ಥಾನಿಯಾದ ಹರೆಯದ ಹುಡುಗಿಯನ್ನೂ ಕರೆದುಕೊಂಡು ಹೋಗಿದ್ದು, ಬಳಿಕ ಹಲವು ದಿನಗಳ ಕಾಲ ಆ ಹುಡುಗಿಯ ತಾಯಿಯು ಪುತ್ತೊನಾಕರ ಬೀಡಿಯ ಬ್ರಾಂಚಿಗೂ ಬಾರದೆ ಇದ್ದದ್ದು ಮತ್ತು ಇದೀಗ ಖುದ್ದು ಮಸೀದಿಯ ಮುಕ್ರಿಕನವರು ಆ ಮನೆಗೆ ಬಂದಿದ್ದು – ಇವೆಲ್ಲಾ ಘಟನೆಗಳು ಊರವರಿಗೆಲ್ಲಾ ಕಲರ್ ಕಲರ್ ಕಥೆಗಳನ್ನು ಕೊಡುತ್ತಿರುವ ಹೊತ್ತಿಗೆ, ಊರಿನಲ್ಲಿ ಹೊಸದಾಗಿ ಆರಂಭವಾಗಲಿದ್ದ ಡಿಗ್ರಿ ಕಾಲೇಜಿಗೆ ಅಡ್ಮಿಷನ್ ಆಗಬೇಕೆಂದುಕೊಂಡಿದ್ದ ಹುಡುಗಿ ಹತ್ತಿರದ ದೊಡ್ಡಾಸ್ಪತ್ರೆಯ ಜನರಲ್ ವಾರ್ಡಿನಿಂದ ಡಿಸ್ಚಾರ್ಜ್ ಆಗಿ ಏಳೆಂಟು ದಿನಗಳಾಗಿತ್ತು. ತಾನಾಗಿಯೇ ಆತುರದಲ್ಲಿ ತೆಗೆದ ನಿರ್ಧಾರ ಹಾಗೂ ಬಳಿಕ ಪಟ್ಟ ಪಾಡಿನ ದೈಹಿಕ ನೋವಿಗಿಂತಲೂ, ಹೊಸ ಕಾಲೇಜಿನ ಕಟ್ಟಡದ ನಿರ್ಮಾಣ ಆದಾಗಿನಿಂದ ಕಾಣುತ್ತಿದ್ದ ಕನಸೊಂದು ನನಸಾಗದೇ ಉಳಿಯಲಿದೆಯೇ ಎಂದು ನರ್ಗೀಸಳಿಗೆ ತೀವ್ರ ವ್ಯಥೆಯಾಗತೊಡಗಿತು. ‘ಹೊಸ ಕಾಲೇಜಿನಲ್ಲಿ ನನ್ನದೇ ಊರಿನ ಓರಗೆಯವರಿರುತ್ತಾರೆ, ಅವರೆಲ್ಲರಿಗೂ ನಮ್ಮ ಕತೆಯೂ ಗೊತ್ತಿರುತ್ತದೆ, ಅವರೆಲ್ಲರ ಪ್ರಶ್ನೆಗೆ ಹೇಗೆ ಉತ್ತರಿಸುವುದು’ ಎಂದು ತೊಳಲಾಡತೊಡಗಿದಳು. ಈ ನಿತ್ಯನೂತನ ಸವಾಲಿಗಿಂತ ಮೊನ್ನೆಯ ಪ್ರಯತ್ನದಲ್ಲಿಯೇ ತಾನು ಸತ್ತುಹೋಗಿದ್ದರೆ ಚೆನ್ನಾಗಿತ್ತು ಎಂದುಕೊಳ್ಳುತ್ತಾ ಉಮ್ಮಳಿಸಿ ಬರುತ್ತಿದ್ದ ಅಳುವನ್ನು ಅಡಗಿಸುತ್ತಾ, ಅದವಳ ಉಮ್ಮಾ ಆಮಿನಾಳ ಕಣ್ಣಿಗೆ ಬೀಳದಿರಲಿ ಎಂಬ ವ್ಯರ್ಥ ಪ್ರಯತ್ನದಲ್ಲಿದ್ದಳು.
ಹೊಳೆಯೂರಿನ ನದೀ ತಟದ ದೊಡ್ಡ ದಿಬ್ಬದ ಮೇಲೆ ನಿಂತು ನೋಡಿದರೆ ಕಣ್ಣಳತೆಯ ದೂರದಲ್ಲಿ ಕಾಣುವ ಹೈವೇಗೂ, ಹಳೆ ಆಸ್ಪತ್ರೆಗೂ ಮತ್ತು ಈಗಿನ ಹೊಸ ಕಾಲೇಜಿಗೂ ಹೋಗಬೇಕೆಂದರೆ ಸುತ್ತು ಬಳಸಿನ ಕಚ್ಚಾರಸ್ತೆಯಲ್ಲಿ ಒಂದೂವರೆಗಂಟೆ ಪ್ರಯಾಣ ಮಾಡಬೇಕಿದ್ದ ಕಷ್ಟ ಕಂಡು ಹಿಂದಿನ ಎಮ್ಮೆಲ್ಲೆ ಸಾಹೇಬರು ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಹೊಳೆಯೂರು ಸೇತುವೆಗೆ ಅಡಿಗಲ್ಲು ಹಾಕಿದ್ದರು! ಆಮೇಲೆ ಎಲೆಕ್ಷನ್ನಿನ ಸಮಯದಲ್ಲಿ ಮಾತ್ರವೇ ಹೊಳೆಯೂರಿಗೆ ಬರುತ್ತಿದ್ದ ಸಾಹೇಬರು ಮಾತಿನಲ್ಲೇ ಸೇತುವೆ ಕಟ್ಟುತ್ತಿದ್ದರೂ, ಅಡಿಗಲ್ಲು ಹೊರತುಪಡಿಸಿ ಇನ್ನೊಂದು ಜಲ್ಲಿಕಲ್ಲೂ ಅದರ ಮೇಲೆ ಬಿದ್ದಿರಲಿಲ್ಲ. ಅವರ ಕಾಲಾನಂತರ ಅವರ ಮಗ ಹೊಸ ಎಮ್ಮೆಲ್ಲೆ ಸಾಹೇಬ ಹೊಳೆಯೂರಿನ ನದೀ ತಟದ ಮೂವತ್ತೆಕರೆ ಜಮೀನನ್ನು ರಿವರ್ ವ್ಯೂ ರೆಸಾರ್ಟಿಗೆಂದು ತನ್ನ ಖಾಸಾ ದೋಸ್ತನಿಗೆ ಕೊಡಿಸಿದ ನಂತರ ಸೇತುವೆಯ ಮೊದಲ ಪಿಲ್ಲರ್ ಎದ್ದು ನಿಲ್ಲತೊಡಗಿತ್ತು ಹಾಗೂ ಎರಡೇ ವರ್ಷದಲ್ಲಿ ಕಾಮಗಾರಿ ಮುಗಿದು ಮಳೆಗಾಲದ ಆರಂಭಕ್ಕೆ ಉದ್ಘಾಟನೆಯೂ ಆಗಿತ್ತು.
ಹೊಳೆಯೂರು ಸೇತುವೆ ಪಕ್ಕದ ಹೈವೇಗೂ ಕಾಣಬೇಕೆಂದು ಎಮ್ಮಲ್ಲೆ ಸಾಹೇಬನೇ ಮುತವರ್ಜಿಯಿಂದ ಸೇತುವೆ ತುಂಬಾ ಹೈಮಾಸ್ಟ್ ಬಲ್ಬುಗಳನ್ನು ಅಳವಡಿಸಿದ್ದರೂ, ಅದು ಉರಿದದ್ದು ಒಂದು ವಾರ ಮಾತ್ರ. ವಿರಾಮಕೊಡದೆ ಸುರಿಯುತ್ತಿದ್ದ ಮುಂಗಾರು ಮಳೆಗೆ – ಎಲ್ಲಾ ಮಳೆಗಾಲಗಳಂತೆಯೇ – ಹೋದ ಕರೆಂಟು ಮೂರು ದಿನ ಪತ್ತೆಯಿರಲಿಲ್ಲ. ಊರಿಡೀ ಕತ್ತಲಲ್ಲಿದ್ದ ಮೊದಲ ರಾತ್ರಿ ನರ್ಗೀಸಳ ಅಪ್ಪ ಪೊಡಿಮೋನು ನಾಪತ್ತೆಯಾಗಿದ್ದೂ, ಎರಡು ದಿನ ಕಳೆದು ರಾತ್ರಿಯ ಹೊತ್ತಿಗೆ ಹೊಸ ಸೇತುವೆಯಲ್ಲಿ ಕೆಂಪು ಲೈಟು ಉರಿಸುತ್ತಾ ಮೊದಲ ಸವಾರಿ ಮಾಡಿದ ಅಂಬುಲೆನ್ಸೊಂದು ಆಮಿನಾರ ಮನೆಯಂಗಳದಲ್ಲಿ ನಿಲ್ಲಿಸಿ ನರ್ಗೀಸಳನ್ನೂ, ಆಮೀನಾಳನ್ನೂ ಕರೆದುಕೊಂಡು ದೊಡ್ಡಾಸ್ಪತ್ರೆಗೆ ಹೋಗಿದ್ದನ್ನು ಊರೆಲ್ಲಾ ಕತ್ತಲಲ್ಲೇ ಕಣ್ಣುತುಂಬಿಕೊಂಡಿತ್ತು. “ಛೆ, ಇದೇ ಸಮಯದಲ್ಲಿ ಕರೆಂಟಿಲ್ಲದೆ ಆಗಬೇಕೆ? ಏನಾಗಿದೆ ಎಂದು ಯಾರಿಗಾದರೂ ಕೇಳೋಣವೆಂದರೂ ಮೊಬೈಲಿನಲ್ಲಿ ಚಾರ್ಜಿಲ್ಲದೇ ಆಯಿತಲ್ಲಾ” ಎಂದು ಊರಲ್ಲೆಲ್ಲಾ ‘ಪೇಪರ್ ಉಸಞ್ಞಿ’ ಎಂದು ಹೆಸರುವಾಸಿಯಾದ ಉಸ್ಮಾನ್ ಕತ್ತಲಲ್ಲಿಯೇ ತನ್ನ ಬಕ್ಕತಲೆಯನ್ನು ಜೋರಾಗಿ ಕೆರೆದುಕೊಂಡ!
*****
ಸೂರ್ಯೋದಯದ ಸಮಯವನ್ನು ಅವಲಂಬಿಸಿ ಬೆಳಗ್ಗಿನ ಸುಬುಹಿ ಬಾಂಗನ್ನು ಕೂಗುವ ಹೊಳೆಯೂರಿನ ಮಸೀದಿಯ ಮುಕ್ರಿಕರು ಕೂಡಾ ಬೆಳಗ್ಗೆ ಎದ್ದೇಳುವ ಸಮಯದಲ್ಲಿ ವ್ಯತ್ಯಯವಾಗಬಹುದು. ಆದರೆ, ತನ್ನ ಹಳೆಯ ಎಮ್ಮೆಯ್ಟಿಯ ಹಿಂದೆ ದೊಡ್ಡ ಬುಟ್ಟಿಯೊಂದನ್ನೂ, ಅದರೊಳಗೆ ಸಣ್ಣ ತಕ್ಕಡಿಯನ್ನೂ ಮತ್ತು ಅಗತ್ಯ ಇರುವಷ್ಟು ತೂಕದ ಕಲ್ಲುಗಳನ್ನು ತಂಗೀಸಿನ ಚೀಲವೊಂದರಲ್ಲಿ ಇರಿಸಿ ಅದನ್ನು ಎಮ್ಮೆಯ್ಟಿಯ ಹ್ಯಾಂಡಲ್ ಗೆ ನೇತುಹಾಕಿ ಒಂದೇ ಕಿಕ್ಕಿನಲ್ಲಿ ಸ್ಟಾರ್ಟ್ ಮಾಡಿ ಎರಡು ನಿಮಿಷಗಳ ಕಾಲ ಎಕ್ಸಲರೇಟರನ್ನು ತಿರುವಿ ಜೋರಾಗಿ ಸೌಂಡು ಮಾಡಿ ಪೊಡಿಮೋನು ಹೊರಟನೆಂದರೆ ಬೆಳಗ್ಗೆ ಸರಿಯಾಗಿ ನಾಲ್ಕೂವರೆ ಗಂಟೆಯಾಯಿತೆಂದು ಅರ್ಥ. ಈ ರುಟೀನಿಗೆ ಮಳೆ-ಬೇಸಿಗೆಯೆಂಬ ಯಾವುದೇ ಬೇಧವಿಲ್ಲ. ಶ್ರಮಜೀವಿಯಾದ ಪೊಡಿಮೋನು ಬೆಳ್ಳಂಬೆಳಗ್ಗೆ ಧಕ್ಕೆಯಲ್ಲಿ ಅಲ್ಲಿಂದಿಲ್ಲಿ ಓಡಾಡುತ್ತಾ ಆದಷ್ಟು ಕಡಿಮೆ ಬೆಲೆಗೆ ಒಳ್ಳೆಯ ಮೀನನ್ನು ತೆಗೆದುಕೊಂಡು, ತಕ್ಷಣವೇ ಅದನ್ನು ವಿವಿಧ ಗಾತ್ರಕ್ಕೆ ಹಾಗೂ ಮೀನಿನ ವರ್ಗಕ್ಕನುಗುಣವಾಗಿ ವಿಂಗಡಿಸಿ, ತಾನು ಕೊಟ್ಟ ಮೊತ್ತ ಮತ್ತು ತನ್ನ ಖರ್ಚಿನ ಕೂಡು-ಕಳೆಯನ್ನು ಮುಗಿಸಿ ಪ್ರತಿ ಮೀನಿಗೂ ಒಂದು ದರ ನಿಗದಿಮಾಡಿ ಧಕ್ಕೆಯಿಂದ ಹೊರಟರೆ ತನ್ನೂರಿನ ‘ಲೈನಿ’ಗೆ ಬಂದು ತಲುಪುವಾಗ ಗಂಟೆ ಎಂಟಾಗಿರುತ್ತದೆ.
ತನ್ನೆರಡು ರೆಗ್ಯುಲರ್ ಹೋಟೆಲ್ ಗಿರಾಕಿಗಳಿಗೆ ಮೊದಲು ಮೀನನ್ನು ತಲುಪಿಸಿ, ಅಲ್ಲೇ ಬೆಳಗ್ಗಿನ ನಾಸ್ಟಾ ಮುಗಿಸಿ ನಿಧಾನವಾಗಿ ತಾನು ಮೀನು ಮಾರಾಟ ಮಾಡುವ ಹೊಳೆಯೂರಿನ ಗಲ್ಲಿಗಳಲ್ಲಿ ಸಂಚರಿಸುವಾಗ “ಪೊಂ, ಪೊಂ, ಪೊಂ; ಪೊಂ, ಪೊಂ, ಪೊಂ, ಪೋಂ, ಪೋಂ, ಪೋಂ…” ಎಂದು ಶಾಲಾ ಮಕ್ಕಳ ಪೆರೇಡ್ ನ “ವನ್, ಟು, ತ್ರೀ.. ವನ್, ಟು, ತ್ರೀ..” ಟೋನಿನಲ್ಲಿ ಮೀನಿನ ಹಾರನ್ ಸೌಂಡು ಅದೆಷ್ಟು ದೂರದಿಂದ ಕೇಳಿದರೂ ಅದು ಪೊಡಿಮೋನು ಅಥವಾ ‘ಪೆರೇಡ್ ಪೊಡಿಮೋನು’ವಿನ ಮೀನಿನ ಗಾಡಿ ಬಂತು ಎಂದು ಮೀನು ಕೊಳ್ಳುವ ಮನೆಯ ಪುಟಾಣಿಗಳಿಗೂ ಗೊತ್ತಾಗುತ್ತದೆ. ತಾನು ತಂದ ಮೀನಿನಲ್ಲಿಯಾವುದೇ ಅಪರಿಚಿತ ಮೀನಿದ್ದರೆ ಅದಕ್ಕೆ ತಾನೇ ಒಂದು ಹೆಸರನ್ನೂ ಇಟ್ಟು, ಅದಕ್ಕೆ ಇಲ್ಲದ ರುಚಿಯನ್ನೂ ಆರೋಪಿಸಿ ಮುಗ್ಧ ಗಿರಾಕಿಗಳಿಂದ ಸ್ವಲ್ಪ ಜಾಸ್ತಿಯೇ ದುಡ್ಡು ಪೀಕಿಸುತ್ತಾನೆ ಎಂಬ ಕಂಪ್ಲೇಂಟು ಇದ್ದರೂ, ಯಾವತ್ತೂ ತಪ್ಪದಂತೆ ದಿನಾ ಬೆಳಗ್ಗೆ ಮನೆಬಾಗಿಲಿಗೆ ಮೀನು ತಂದು ಕೊಡುವ ಪೊಡಿಮೋನು ಊರಿನ ಹೆಂಗಸರಿಗೆ ಅಚ್ಚುಮೆಚ್ಚು. ಜೊತೆಗೆ, ಮೀನು ಸ್ವಲ್ಪ ಜಾಸ್ತಿ ಲಾಭ ಕೊಟ್ಟ ದಿನ ಇಲ್ಲವೇ ಬೇಗನೇ ಮೀನು ಖಾಲಿಯಾದ ದಿನ ಉಲ್ಲಾಸದಿಂದಿರುವ ಪೊಡಿಮೋನು, ಯಾವುದೋ ಮನೆಯಲ್ಲಿ ಏನಾದರೊಂದು ಹೊಸ ಕತೆ ಸಿಕ್ಕರೆ ಅದಕ್ಕೊಂದಿಷ್ಟು ಮಸಾಲೆ ಸೇರಿಸಿ ಮೀನಿನ ಜೊತೆಗೇ ಉಳಿದ ಮನೆಗೂ ಹಂಚುತ್ತಿದ್ದುದು ಹೆಂಗಸರಿಗೆ ಇನ್ನೊಂದು ವಾರದ ಕಾಡುಹರಟೆಗೆ ಆಹಾರವಾಗುತ್ತಿತ್ತು.
*****
ಹೊಳೆಯೂರಿನ ನದಿಯ ತಟದಲ್ಲಿಯೇ ಸಣ್ಣನೆಯ ಹೋಟೆಲನ್ನೂ, ನ್ಯೂಸ್ ಪೇಪರ್ ಸಬ್ ಏಜನ್ಸಿ ಮಾಡುತ್ತಿರುವ ‘ಪೇಪರ್ ಉಸಞ್ಞಿ’ ಪೊಡಿಮೋನುವಿನ ಚಡ್ಡಿದೋಸ್ತು. ಕೆಲವು ವರ್ಷಗಳ ಹಿಂದೆ ಊರಿನಲ್ಲಿ ನೆರೆಬರುವ ಸಂಭವ ಇದ್ದಾಗ ಬಂದಿದ್ದ ಹೋಂಗಾರ್ಡುಗಳನ್ನು ಕಂಡು, ಸುಮ್ಮನೇ ನೆರೆ ಬರುತ್ತಾ ಎಂದು ಕಾಯುತ್ತಿರುವುದಕ್ಕೂ ಕೂಲಿ ಸಿಗುತ್ತದೆ ಎಂದು ಅಂದಾಜಿಸಿ ತಾವೂ ಅಲ್ಲಿರುವ ಹೋಂಗಾರ್ಡುಗಳ ಜೊತೆ ಅದಕ್ಕೆ ಸೇರುವ ಮಾಹಿತಿ ಪಡೆದು, ಒಂದು ಅರ್ಜಿಫಾರಂ ತೆಗೆದುಕೊಂಡು, ಊರ ಪೋಸ್ಟ್ ಮ್ಯಾನಿನಲ್ಲಿ ಬರೆಯಿಸಿ, ಅವಶ್ಯಕತೆ ಇದ್ದಾಗ ಬರುತ್ತೇವೆ ಎಂಬ ವಾಗ್ದಾನದೊಂದಿಗೆ ಹೋಂಗಾರ್ಡಿಗೆ ಸೇರಿಕೊಂಡಿದ್ದರು. ಇಬ್ಬರೂ ಏಳನೆಯ ತರಗತಿವರೆಗೆ ಮಾತ್ರವೇ ಓದಿದ್ದರೂ, “ಮುಂದೊಂದು ದಿನ ಪೊಲೀಸಿಗೂ ಸೇರಲು ಕೂಡಾ ಹೋಂಗಾರ್ಡಿನಲ್ಲಿ ಚಾನ್ಸುಂಟು” ಅಂತ ಪೋಸ್ಟ್ ಮ್ಯಾನ್ ಹೇಳಿರುವುದು ಅವರ ಕನಸಿಗೆ ಇನ್ನಷ್ಟು ಇಂಬು ಕೊಟ್ಟಿತ್ತು. ಆದರೆ, ಸೇರಿದ ಹೊಸತರಲ್ಲೇ ಸ್ವಾತಂತ್ರ್ಯ ದಿನದಂದು ಡಿಸಿ ಮುಂದೆ ನಡೆಯುವ ಪೆರೇಡಿಗೆ ಎಲ್ಲರೂ ಬರಬೇಕೆಂದು ಆಜ್ಞೆಯಾದಾಗ ಇಬ್ಬರೂ ಮಾರ್ಚ್ ಫಾಸ್ಟ್ ತಾಲೀಮಿಗೆ ಹೋಗಿದ್ದರು. ಆದರೆ, ದಿನಾ ಕುಚಲಕ್ಕಿಯ ಊಟಮಾಡುತ್ತಿದ್ದ ಇಬ್ಬರಿಗೂ ಅಲ್ಲಿ ಒಂದು ವಾರ ತಿಂದ ಸಣ್ಣಕ್ಕಿ ಅನ್ನದಿಂದ ಬೇಧಿ ಶುರುವಾಗಿ ಪೆರೇಡಲ್ಲಿ ಭಾಗವಹಿಸದೇ ಊರಿಗೆ ಬಂದಿದ್ದೂ, ಮತ್ತೆಂದೂ ಹೋಂಗಾರ್ಡಿನ ಕಡೆ ತಲೆ ಹಾಕದ ಪ್ರಸಂಗ ಹೊಳೆಯೂರಿನಲ್ಲಿ ಹಲವು ವರ್ಷಗಳ ಕಾಲ ನಗು ಹೊಮ್ಮಿಸುತ್ತಿತ್ತು. ಈಗಲೂ ಅಂದಿನ ಪೆರೇಡ್ ನೆನಪಲ್ಲೇ ಪೊಡಿಮೋನು ಮೀನಿನ ಹಾರನ್ ಬಾರಿಸುತ್ತಾ ‘ಪೆರೇಡ್ ಪೊಡಿಮೋನು’ ಆಗಿದ್ದಾನೆ ಎಂದು ಎಲ್ಲರೂ ಅಂದುಕೊಂಡರೂ ಪೇಪರ್ ಉಸಞ್ಞಿ ಮಾತ್ರ ಹೋಟೆಲಿನಲ್ಲಿ ಗಿರಾಕಿ ಕಡಿಮೆ ಇದ್ದಾಗ ಬೇರೊಂದು ಕತೆ ಹೇಳುತ್ತಿದ್ದ.
ಅದೆಂದರೆ, ಹೊಳೆಯೂರಿನ ವರ್ಲ್ಡ್ ಫೇಮಸ್ ಪುತ್ತೊನಾಕರ ಬೀಡಿಯ ಬ್ರಾಂಚಿನಲ್ಲಿ ಒಂದು ಕಾಲದಲ್ಲಿ ಸುತ್ತಲಿನ ಎರಡು ಮೂರು ಗ್ರಾಮಗಳಿಂದಲೂ ಹಲವಾರು ಮಂದಿ ಅದರಲ್ಲೂ ಮಹಿಳೆಯರೇ ಅಧಿಕವಾಗಿ ಎಲೆತಂಬಾಕು ತೆಗೆದುಕೊಂಡು ಹೋಗಿ ಬೀಡಿ ಸುರುಟಿ, ಇಪ್ಪತ್ತೈದು ಬೀಡಿಗಳ ಇಪ್ಪತ್ತು ಕಟ್ಟುಗಳನ್ನಿಟ್ಟು ನೀಟಾಗಿ ಕಾಗದದ ಪ್ಯಾಕ್ ಮಾಡಿ ತರುತ್ತಿದ್ದರು. ಆ ಸಮಯದಲ್ಲಿ ಚಿಗುರುಮೀಸೆಯ ಪೊಡಿಮೋನು ಬೀಡಿ ಬ್ರಾಂಚಿನಲ್ಲಿ ಎಲೆ-ತಂಬಾಕು ತೂಕ ಮಾಡಿ ಕೊಡುವ ಕೆಲಸ ಮಾಡುತ್ತಿದ್ದ. ಆದರೆ, ಬೀಡಿ ಬ್ರಾಂಚಿನಲ್ಲಿ ಬೀಡಿ ಕೊಟ್ಟು ನಾಳೆಗಾಗಿ ಎಲೆತಂಬಾಕು ತೆಗೆದುಕೊಳ್ಳುವಾಗ ವೈಯಾರದಿಂದ ಮಾತನಾಡುತ್ತಾ ಕುಲುಕುಲು ನಗೆ ಚೆಲ್ಲಿದ ಲೇಡೀಸರಿಗೆ ತೂಕದ್ದಲ್ಲದೇ ಸ್ವಲ್ಪ ಜಾಸ್ತಿಯೇ ಎಲೆಯನ್ನು ಕೊಡುತ್ತಿದ್ದದ್ದು ಪುತ್ತೊನಾಕರಿಗೆ ಮೊದಲಿಗೆ ಗೊತ್ತಾಗದಿದ್ದರೂ ತಿಂಗಳ ಕೊನೆಗೆ ಬಂಡಲುಗಟ್ಟಲೆ ಎಲೆಯಲ್ಲಿ ಏರುಪೇರಾಗತೊಡಗಿದಾಗ ಇದಕ್ಕೆ ಮೂಲಕಾರಣವಾದ ಪೊಡಿಮೋನುವನ್ನು ಕೆಲಸದಿಂದ ಬಿಡಿಸಿ ಆ ಬ್ರಾಂಚಿನಲ್ಲಿ ಬೀಡಿಸುರುಟುವ ಹಸನ್ಮುಖಿ ಮಹಿಳೆಯರ ಮನನೋಯಿಸಿದ್ದರು. ಆ ಬಳಿಕ ಶುರುಮಾಡಿದ್ದ ಮೀನು ಮಾರುವ ಕೆಲಸ, ಪೊಡಿಮೋನುವನ್ನು ಮೀನಿನ ಪೊಡಿಮೋನು ಅನ್ನುವಷ್ಟರ ಮಟ್ಟಿಗೆ ಗುರುತೂ ನೀಡಿತ್ತು. ಆದರೆ, ಮೀನು ತೆಗೆದುಕೊಳ್ಳುವಾಗ ಕೈಮುಟ್ಟಿಸಿಕೊಳ್ಳುವ ಹೆಂಗೆಳೆಯರಿಗೆ ಎರಡು ಮೀನನ್ನು ಜಾಸ್ತಿಯೇ ಕೊಡುವ ಪೊಡಿಮೋನುವಿನ ಹೆಂಗಸರ ವೀಕ್ನೆಸಿಗೆ ‘ಪೆರಡೆ’ ಅಥವಾ ತುಳುವಿನಲ್ಲಿ ‘ಹೇಂಟೆ’ಯನ್ನು ಕಂಡಾಗ ಸುತ್ತುವರಿಯುವ ಬೆದೆಗೆ ಬಂದ ಹುಂಜದ ಬುದ್ದಿಯಂತೆ ಎಂದೂ, ಅದಕ್ಕಾಗಿ ಅವನಿಗೆ ‘ಪೆರೇಡ್ ಪೊಡಿಮೋನು’ ಬದಲಾಗಿ ‘ಪೆರಡೆ ಪೊಡಿಮೋನು’ ಎಂದು ಹೆಸರಿಡಬೇಕೆಂದೂ ಹೇಳುವ ಪೊಡಿಮೋನಿನ ಚಡ್ಡಿ ದೋಸ್ತಿನ ವಾದಕ್ಕೂ ಹೊಳೆಯೂರಿನ ಉಸಞ್ಞಿಯ ಹೋಟಲ್ಲಿನ ರೆಗ್ಯುಲರ್ ಗಿರಾಕಿಗಳು ಹೌದೌದೆಂದು ತಲೆದೂಗುತ್ತಾ ಹಳೆಯ ನೋಟುಬುಕ್ಕಿನಲ್ಲಿ ಅರ್ಧ ಚಾ ಮತ್ತು ಕಲ್ತಪ್ಪದ ಸಾಲವನ್ನು ಬರೆದಿಟ್ಟು, ರದ್ದಿ ಪೇಪರಿನ ತುಂಡಿನಲ್ಲಿ ಬಾಯೊರೆಸುತ್ತಿದ್ದರು!
*****
ಹೊಳೆಯೂರಿನ ಹಿಂದಿನ ಕಾಲದಿಂದಲೂ ಸಂಪರ್ಕ ಸೇತುವಾಗಿದ್ದ ಸುತ್ತು ಬಳಸು ರಸ್ತೆಯಲ್ಲಿ ಐದಾರು ಮೈಲಿ ಹೋದರೆ ಸಿಗುವ ಪುಟ್ಟ ಊರಾದ ದಂಡೆಗೋಳಿಯಲ್ಲಿರುವ ಏಕೈಕ ಜಿನಸು ಅಂಗಡಿಯ ಅವುದ್ರಾಮಾಕರಿಗೆ ಎರಡು ಹೆಣ್ಣುಮಕ್ಕಳು. ಮಕ್ಕಳಿಲ್ಲದೆ ಇದ್ದ ಅವುದ್ರಾಮಾಕ ದಂಪತಿಗೆ ಮದುವೆಯಾಗಿ ಆರೇಳು ವರ್ಷಗಳ ಬಳಿಕ ಹುಟ್ಟಿದ ಆಮಿನಾ ಮೊದಲನೆಯವಳಾದರೆ ಅವಳ ತಂಗಿ ಮೈಮೂನಾ ಹುಟ್ಟಿದ್ದು ಬರೋಬ್ಬರಿ ಹನ್ನೆರಡು ವರ್ಷಗಳ ಬಳಿಕ. ಸಣ್ಣವಳಿಗೆ ಮೂರುವರ್ಷ ಪ್ರಾಯವಿರುವಾಗಲೇ ಅವುದ್ರಾಮಾಕರ ಮಡದಿ ‘ನಿಮೋನಿಯಾ’ ಜಾಸ್ತಿಯಾಗಿ ತಲೆಗೆ ಹತ್ತಿ ತೀರಿಕೊಂಡಿದ್ದರು ಎಂಬುದು ಆ ಕಾಲಕ್ಕೆ ದೊಡ್ಡ ಸುದ್ದಿಯಾಗಿತ್ತು. ಮಗು ಸಣ್ಣದಿದ್ದರೂ ಈಗಾಗಲೇ ತನಗೆ ಮಧ್ಯವಯಸ್ಸು ದಾಟಿದ್ದು ಮತ್ತು ತಾನು ಮದುವೆಯಾದರೆ ಹೊಸತಾಗಿ ತನಗೆ ಹೆಂಡತಿಯಾಗಿ ಬರುವವಳ ಕಾರಣಕ್ಕೆ ತಾಯಿಯ ಜೊತೆಗೆ ತಂದೆಯ ಪ್ರೀತಿಯೂ ತನ್ನ ಮಕ್ಕಳಿಗೆ ಸಿಗದೆ ಇದ್ದರೆ ಎಂದು ಯೋಚಿಸುತ್ತಾ ಮತ್ತೊಂದು ಮದುವೆಯಾಗದೇ ಇಬ್ಬರು ಹೆಣ್ಣುಮಕ್ಕಳಿಗೂ ಅವುದ್ರಾಮಾಕ ತಂದೆಯೂ ತಾಯಿಯೂ ಆಗಿದ್ದರು. ಹಾಗಾಗಿಯೇ, ಶಾಲೆಯಲ್ಲಿ ಲೆಕ್ಕದಲ್ಲಿ ಚೂಟಿಯಾಗಿದ್ದ ಆಮಿನಾಳನ್ನು ಏಳನೆ ಕ್ಲಾಸಿಗಿಂತ ಜಾಸ್ತಿ ಓದಿದರೆ ಮದುವೆ ಮಾಡಲಿಕ್ಕೆ ಹುಡುಗ ಸಿಗಲಿಕ್ಕಿಲ್ಲ ಎಂದು ತಿಳಿದು ತನ್ನ ಪುಟ್ಟ ಅಂಗಡಿಯಲ್ಲಿ ವ್ಯಾಪಾರಕ್ಕೆ ಸಹಾಯ ಮಾಡಲೆಂದು ಇರಿಸಿಕೊಂಡರೂ ಚೂಟಿ ಆಮಿನಾಳಿಗೆ ಮಾತ್ರ ತನ್ನ ಕ್ಲಾಸಿನ ಹುಡುಗ-ಹುಡುಗಿಯರೆಲ್ಲ ತಮ್ಮ ಅಂಗಡಿಯ ಎದುರಿನಿಂದನಲೇ ಪಕ್ಕದೂರಾದ ಮಾರಾಜೆಗೆ ಹೈಸ್ಕೂಲು ಓದಲು ಹೋಗುತ್ತಿರುವುದನ್ನು ನೋಡುವಾಗ ದುಃಖ ಒತ್ತರಿಸಿಕೊಂಡು ಬರುತ್ತಿತ್ತು. ಕೆಲವೊಮ್ಮೆ ಹಳೇ ಓರಗೆಯವರು ನಕಾಶೆ ಪುಸ್ತಕ, ಗ್ರಾಫು ಪುಸ್ತಕವೆಂದು ಅವರದೇ ಅಂಗಡಿಗೆ ಬಂದಾಗ ಮನಸು ಮುದುಡುತ್ತಿತ್ತು. ಏನೇ ಆದರೂ ತನ್ನ ಉಮ್ಮಾ ಇದ್ದಿದ್ದರೆ ಜಗಳಾಡಿಯಾದರೂ ನಾನೂ ಹೈಸ್ಕೂಲಿಗೆ ಹೋಗುತ್ತಿದ್ದೆನೋ ಏನೋ ಎಂದು ಅನ್ನಿಸುವಾಗೆಲ್ಲ ಉಮ್ಮನ ಅಗಲಿಕೆ ಮತ್ತಷ್ಟು ತೀವ್ರವಾಗುತ್ತಿತ್ತು.
ವಯಸ್ಸಿಗೆ ಬಂದ ಮಗಳು, ಅದರಲ್ಲೂ ತಾಯಿಯಿಲ್ಲದ ಕೂಸು ಎಂದಿಗೂ ಸೆರಗಿನ ಕೆಂಡವೆಂದು ಭಾವಿಸಿದ್ದ ಅವುದ್ರಾಮಾಕ, ಆಮಿನಾಳಿಗೆ ಹದಿನಾರು ತುಂಬಿದಾಗಲೇ ವರನ ಹುಡುಕಾಟಕ್ಕೆ ಶುರುಮಾಡಿದ್ದರು. ಚೂಟಿಯಾಗಿದ್ದರೂ ಉಬ್ಬು ಹಲ್ಲಿನ, ಕಂದು ಮುಖದ, ಪೀಚಲು ದೇಹದ ಆಮಿನಾ ಅಷ್ಟು ಬೇಗನೇ ಹುಡುಗರಿಗೆ ‘ಪಸಂದಾಗು’ತ್ತಿರಲಿಲ್ಲ. ಮದುವೆಯಾದರೂ, ಮುಂದೆ ಬಾಣಂತನ ಮಾಡಲಿಕ್ಕೆ ತಾಯಿಯೂ ಇಲ್ಲದಿದ್ದುದು ಬಹುಪಾಲು ಹುಡುಗನ ಮನೆಯವರಿಗೆ ದೊಡ್ಡ ಕೊರತೆಯಾಗಿ ಕಂಡಿತ್ತು. ಆ ಸಮಯದಲ್ಲೇ ಯಾರೂ ಹಿಂದುಮುಂದಿಲ್ಲದ ಮೀನು ಮಾರುವ ಪೊಡಿಮೋನು ಅವುದ್ರಾಮಾಕರ ಕಣ್ಣಿಗೆ ಬಿದ್ದದ್ದೂ, ಊರ ಹತ್ತಿರದವನೇ ಆದ ಹುಡುಗನ ಜೊತೆ ಅಂದುಕೊಂಡದ್ದಕ್ಕಿಂತ ಬೇಗನೇ ಮದುವೆಯೂ ಆಗಿ ವರ್ಷದೊಳಗೆ ನರ್ಗೀಸಳೂ ಹುಟ್ಟಿದ್ದಳು.
ಮಗಳಿಗೆ ಮದುವೆಯಾಗಿ ಕೆಲವೇ ತಿಂಗಳುಗಳಲ್ಲಿ ಒಂದು ಶನಿವಾರದಂದು ಮಂಗಳೂರಿನ ಮಾರ್ಕೆಟ್ಟಿನಿಂದ ಅಂಗಡಿಗೆ ಬೇಕಾದ ವಸ್ತುಗಳನ್ನು ಹೇರಿಕೊಂಡು ಬಸ್ಸಿನಲ್ಲಿ ಕುಳಿತಿದ್ದ ಅವುದ್ರಾಮಾಕರಿಗೆ ಎಡಪಕ್ಕೆಲುಬಿನ ಕೆಳಗೆ ಶುರುವಾದ ನೋವೊಂದು ಕ್ಷಣಮಾತ್ರದಲ್ಲಿ ಎದೆಗೆ ಏರಿ, ಉಸಿರುಕಟ್ಟಿದಂತಾಗಿ ಬಸ್ಸಿನ ಕೊನೆಯ ಸೀಟಿನಿಂದ ಮುಗ್ಗರಿಸಿ ಬಿದ್ದರು. ಅಲ್ಲೇ ಇದ್ದವರು ವೆನ್ಲಾಕ್ ಆಸ್ಪತ್ರೆಗೆ ರಿಕ್ಷಾದಲ್ಲಿ ಕರೆದುಕೊಂಡು ಹೋದರೂ ಅಷ್ಟು ಹೊತ್ತಿಗಾಗಲೇ ಅವುದ್ರಾಮಾಕ ಕೊನೆಯುಸಿರೆಳೆದಿದ್ದರು. ಹತ್ತಿರದವರೆಂದು ಯಾರೂ ಇಲ್ಲದಿದ್ದರೂ ಕೂಡಾ ಅವುದ್ರಾಮಾಕರ ದಫನ ಮುಗಿದು ಮೂರನೇ ದುಆದ ವರೆಗೆ ದೂರದ ನೆಂಟರಿಷ್ಟರು ಮನೆಯಲ್ಲಿದ್ದರು. ಮೂರನೆಯ ದಿನಕ್ಕೆ ಉಳಿದದ್ದು ಆಮಿನಾ ದಂಪತಿ, ಅವಳ ತಂಗಿ ಮೈಮೂನ ಮತ್ತು ಹಸುಗೂಸು ಮಾತ್ರ. ಇನ್ನೂ ಆರನೆಯ ಕ್ಲಾಸನ್ನೂ ಮುಗಿಸದ ಮೈಮೂನಾಳ ಜವಾಬ್ದಾರಿ ತಮ್ಮ ಮೇಲೆ ಬೀಳಬಹುದು ಎಂಬ ಭಯದಿಂದ ಹತ್ತಿರದ ಬಂಧುಗಳೂ ಕಾಲ್ಕಿತ್ತರೂ, ಆಮಿನಾ ಮಾತ್ರ ಪುಟ್ಟ ತಂಗಿಯನ್ನೂ ತನ್ನ ದೊಡ್ಡ ಮಗಳೆಂದು ತಿಳಿದು ತನ್ನ ಜೊತೆಯೇ ಸೇರಿಸಿಕೊಂಡಳು. ಪುಟ್ಟ ಮೈಮೂನಾ, ಕೂಸು ನರ್ಗೀಸಳಿಗೆ ಚಿಕ್ಕಮ್ಮನಾದರೂ ಅಕ್ಕ-ತಂಗಿಯರಂತೆಯೇ ಬೆಳೆಯತೊಡಗಿದರು.
ಅವುದ್ರಾಮಕರ ತೀರಿಕೊಂಡ ಬಳಿಕ ಕೆಲವು ಸಮಯದ ವರೆಗೆ ಜಿನಸು ಅಂಗಡಿಯನ್ನು ಖುದ್ದು ಆಮೀನಾಳೆ ನೋಡಿಕೊಳ್ಳುತ್ತಿದ್ದಳು. ಅದಕ್ಕೆ ಬೇಕಾದ ವಸ್ತುಗಳನ್ನೂ ಪೊಡಿಮೋನು ಮಂಗಳೂರಿನಿಂದ ತಂದು ಕೊಡುತ್ತಿದ್ದ. ಆದರೆ, ಈ ಜಿನಸು ವ್ಯಾಪಾರದಿಂದ ತನಗೇನೂ ದಕ್ಕುತ್ತಿಲ್ಲವೆಂದು ಅಂದಾಜಿಸಿದ ಪೊಡಿಮೋನು, ಹಂತಹಂತವಾಗಿ ಅಂಗಡಿಯನ್ನೂ ಅದರ ಹಿಂದೆ ಹತ್ತು ಸೆಂಟ್ಸ್ ಜಾಗವಿದ್ದ ಸಣ್ಣಮನೆಯನ್ನೂ ಮಾರಿ ಹೊಳೆಯೂರಿನ ತನ್ನ ಹಳೆಯ ಪುಟ್ಟ ಬಿಡಾರವನ್ನೇ ಮತ್ತಷ್ಟು ನವೀಕರಿಸಿ ಮೀನಿನ ವ್ಯಾಪಾರವನ್ನೇ ಮುಂದುವರಿಸಿದ.
*****
ವರುಷಗಳು ಉರುಳಿ ಹೊಳೆಯೂರಿನ ಸೇತುವೆಗೆ ಅಡಿಗಲ್ಲು ಹಾಕಿದ್ದ ಹಳೆಯ ಎಮ್ಮೆಲ್ಲೆ ಸಾಹೇಬರೂ ವಯೋಸಹಜ ಖಾಯಿಲೆಯಿಂದ ತೀರಿಕೊಂಡು ಉಪಚುನಾವಣೆಯಲ್ಲಿ ಅವ ಮಗ ಹೊಸ ಎಮ್ಮೆಲ್ಲೆ ಆಗಿ ಮತ್ತೆ ಸೇತುವೆ ಮಾತು ಹೊಳೆಯೂರಲ್ಲಿ ಚಾಲ್ತಿಯಲ್ಲಿದ್ದ ಸಮಯ. ಎಲ್ಲವೂ ಸರಳವಾಗಿ ಹೋಗುತ್ತಿದೆ ಎಂದುಕೊಳ್ಳುತ್ತಿರುವಾಗಲೇ, ತನ್ನ ಪುಟ್ಟ ನಾದಿನಿ ಮೈತುಂಬಿಕೊಂಡು ಬೆಳೆಯುತ್ತಿರುವುದು ಪೊಡಿಮೋನುವಿನ ಒಳಗಿರುವ ಹಳೆಯ ‘ಪೆರಡೆ’ ಬುದ್ದಿಯನ್ನು ಕೆರಳಿಸತೊಡಗಿತು. ತನ್ನ ಹೆಂಡತಿ ಸುತ್ತಮುತ್ತಲಿಲ್ಲ ಎಂದು ಖಚಿತಪಡಿಸಿಕೊಳ್ಳುತ್ತಲೇ ನಾದಿನಿಯ ಮೈಯನ್ನು ಅಲ್ಲಲ್ಲಿ ಮುಟ್ಟುವುದೂ, ಸವರುವುದೂ ಮಾಡುತ್ತಿದ್ದ. ತಬ್ಬಲಿಯಾಗಿ ಬೆಳೆದ ಮೈಮೂನಾಳಿಗೆ ಮೊದಮೊದಲಿಗೆ ಇದೆಲ್ಲವೂ ಭಾವ ತನ್ನ ಮೇಲಿನ ಮಮತೆಯಿಂದ, ವಾತ್ಸಲ್ಯದಿಂದ ಮಾಡುತ್ತಿದ್ದಾರೆ ಎಂದೆನಿಸಿದರೂ, ಬರಬರುತ್ತಾ ಈ ಬಗೆಯ ವಿಚಿತ್ರ ‘ಕಾಳಜಿ’ಯನ್ನು ವಿರೋಧಿಸಬೇಕೆ ಅಥವಾ ಸುಮ್ಮನಿರಬೇಕೆ ಎಂಬುದರ ಬಗ್ಗೆ ಸ್ಪಷ್ಟತೆ ಸಿಗದೆ ಒಳಗೊಳಗೇ ಒದ್ದಾಡತೊಡಗಿದಳು.
ಅದೊಂದು ಘಟನೆ ಇನ್ನೂ ನರ್ಗೀಸಳಿಗೂ ಚೆನ್ನಾಗಿ ನೆನಪಿತ್ತು. ಚೆನ್ನಾಗಿ ನಿದ್ದೆ ಹತ್ತಿ ಇನ್ನೇನೋ ಮಧ್ಯರಾತ್ರಿಯಾಗಿರಬಹುದು, ಎಚ್ಚರಗೊಂದು ನೋಡುವಾಗ ಸಣ್ಣ ರೂಮಿನ ಗೋಡೆಯ ಬದಿಯಲ್ಲಿ ಅಂದರೆ ತನ್ನ ಎಡಗಡೆಗೆ ಮಲಗಿದ್ದ ಚಿಕ್ಕಮ್ಮ ಮೈಮೂನಾ, ಚಾಪೆಯ ಬಲಭಾಗದಲ್ಲಿದ್ದಳು. ಅಬ್ಬಾ ಅಲ್ಲೇ ರೂಮಿನೊಳಗೆ ಮೂಲೆಯಲ್ಲಿ ಕುಕ್ಕುರುಗಾಲಿನಲ್ಲಿ ಕುಳಿತಿದ್ದರು. ಉಮ್ಮಾ, ಅಬ್ಬಾನಿಗೆ ಜೋರು ದನಿಯಲ್ಲಿ ಬಯ್ಯುತ್ತಿದ್ದಳು, ಜೊತೆಗೆ ಅವಳೇ ಅಳುತ್ತಲೂ ಇದ್ದಳು. ಯಾವುದಕ್ಕೂ ತಿರುಗಿ ಮಾತನಡಾಡದ ಅಬ್ಬಾ ಪೆಚ್ಚುಮೋರೆಯಲ್ಲಿದ್ದರೆ ಮೈಮೂನಾ ಮಾತ್ರ ತನ್ನ ಅಕ್ಕನ ಹಾಗೆ ಅಳಬೇಕೋ ಅಥವಾ ಭಾವನ ಹಾಗೆ ಪೆಚ್ಚುಮೋರೆ ಹಾಕಿಕೊಂಡು ಇರಬೇಕೋ ಎಂಬ ಗೊಂದಲದಲ್ಲಿದ್ದಂತೆ ಕಂಡಿದ್ದಳು. ಆ ರಾತ್ರಿ ಬಳಿಕ ಉಮ್ಮಾ ನಿದ್ದೆ ಮಾಡಲಿಲ್ಲ. ತನ್ನನ್ನೂ, ಚಿಕ್ಕಮ್ಮ ಮೈಮೂನಾಳನ್ನೂ ಅಕ್ಕಪಕ್ಕದಲ್ಲಿ ಮಲಗಿಸಿ ರೂಮಿನ ಬಾಗಿಲು ಭದ್ರಪಡಿಸಿಕೊಂಡಿದ್ದಳು. ಉಮ್ಮಾ ಮೈಮೂನಾ ಜೊತೆ ಏನೇನೋ ಮಾತನಾಡುತ್ತಿದ್ದರೂ ನರ್ಗೀಸಳಿಗೆ ಅದ್ಯಾವುದೂ ಅರ್ಥವಾಗದೇ ಮತ್ತೆ ನಿದ್ದೆಗೆ ಜಾರಿದ್ದಳು.
ಈ ಘಟನೆ ನಡೆದ ಮರುದಿನ ಬೆಳಗ್ಗೆಯೇ ಆಮಿನಾ ಊರಿನ ಮಸೀದಿಯ ಪ್ರೆಸಿಡೆಂಟ್ ಹಾಜಿಯಾರರ ಮನೆಗೆ ತೆರಳಿದಳು. ನಗರದಲ್ಲಿ ಹೆಣ್ಣುಮಕ್ಕಳಿಗಾಗಿಯೇ ಹೊಸದಾಗಿ ಶರೀಯತ್ ಕಾಲೇಜೊಂದು ಆರಂಭವಾಗಿದೆಯೆಂಬ ಬೋರ್ಡೊಂದು ನದೀ ತಟದಲ್ಲಿ ಇರುವುದೆಂದೂ, ಅಲ್ಲಿ ಬಡ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣದ ಜೊತೆ ಹಾಸ್ಟೆಲ್ ಸೌಲಭ್ಯವಿದೆಯೆಂದೂ, ಮಸೀದಿಯ ಲೆಟರೊಂದು ಕೊಟ್ಟರೆ ತನ್ನ ತಂಗಿಯನ್ನು ಅಲ್ಲೇ ಶರೀಅತ್ ಕಾಲೇಜಿಗೆ ಸೇರಿಸುತ್ತೇನೆಂದೂ ಒಂದೇ ಉಸುರಿನಲ್ಲಿ ಹೇಳಿದ್ದಳು. ತಂಗಿಯನ್ನು ಶರೀಅತು ಕಾಲೇಜಿಗೆ ಸೇರಿಸುವುದರಿಂದ ತನ್ನ ಮನೆಯಲ್ಲಿ ಶುರುವಾಗಿದ್ದ ಹೊಸ ಸಮಸ್ಯೆಗೆ ತಕ್ಷಣದ ಪರಿಹಾರದ ಜೊತೆ, ಶರೀಅತ್ತು ಓದಿರುವ ಹೆಣ್ಣುಮಕ್ಕಳಿಗೆ ಒಳ್ಳೆಯ ಕಡೆ ಸಂಬಂಧ ಬಂದು ನಿಖಾ ಕೂಡ ಸುಲಭದಲ್ಲಿ ನಡೆಸಿಕೊಡಬಹುದು ಎಂಬ ದೂರಾಲೋಚನೆಯೂ ಆಮಿನಾಳಿಗಿತ್ತು. ಇದಕ್ಕೆ ಸ್ಪಂದಿಸಿದ ಹಾಜಿಯಾರರೂ, ತನ್ನ ಬಾಲ್ಯದ ಗೆಳೆಯ ಅವುದ್ರಾಮಾಕನ ಕುಟುಂಬಕ್ಕೆ ತಾನು ಮಾಡುವ ಸೇವೆಯಿದು ಎಂದು ತಿಳಿದು ತಾವೇ ಖುದ್ದಾಗಿ ಮಸೀದಿಯ ಲೆಟರ್ ಹೆಡ್ಡಿನಲ್ಲಿ ಬರೆದು ಕೊಟ್ಟು, ಆಮಿನಾಳ ಜೊತೆ ಮೈಮೂನಾಳನ್ನು ತನ್ನ ಹಳೆಯ ಅಂಬಾಸಡರ್ ಕಾರಿನಲ್ಲಿ ನಗರಕ್ಕೆ ಕರೆದುಕೊಂಡು ಹೋಗಿ ಹೊಸ ಶರೀಅತು ಕಾಲೇಜಿಗೆ ಮುತುವರ್ಜಿಯಿಂದ ನಿಂತು ಅಡ್ಮಿಷನ್ ಕೊಡಿಸಿದ್ದರು.
“ತಾನು ಅಂದುಕೊಂಡಂತೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತಲಿದ್ದರೆ ಮುಂದೆ ಮತ್ತೇನೋ ದೊಡ್ಡ ಗಂಡಾಂತರ ಕಾದಿದೆ” ಎಂಬ ಭಾವವೊಂದು ಆಮಿನಾಳಿಗೆ ಬಾಲ್ಯದಿಂದಲೂ ಚಿರಸ್ಥಾಯಿಯಾಗಿತ್ತು. ಶರೀಅತ್ತು ಓದುತ್ತಿದ್ದ ತಂಗಿಯನ್ನು ಅವಳ ಓದಿನ ಐದನೇ ವರ್ಷಕ್ಕೆ ಅಲ್ಲೇ ಕಲಿಸುತ್ತಿದ್ದ ಲಕ್ಷದ್ವೀಪದಿಂದ ಬಂದಂತಹ ಸ್ವತಃ ಅನಾಥನಾಗಿದ್ದ ಉಸ್ತಾದೊಬ್ಬರು ಮೆಚ್ಚಿ ಮದುವೆಯಾಗಿ ಶರೀಅತು ಕಾಲೇಜಿನ ಪಕ್ಕದಲ್ಲೇ ಸಣ್ಣ ಬಾಡಿಗೆ ಮನೆಯಲ್ಲಿ ಸಂಸಾರ ಶುರುಮಾಡಿದ್ದರು. ತಂದೆ ಚಿಕ್ಕಪ್ಪಂದಿರು ಯಾರೂ ಇಲ್ಲದಿದ್ದ ಅವಳನ್ನು ಊರಿನ ಖತೀಬರೇ ಮುಂದೆ ನಿಂತು ನಿಕಾಹ್ ನಡೆಸಿ ಕೊಟ್ಟ ದಿನದಿಂದ ತನ್ನ ದೊಡ್ಡ ತಲೆಬಿಸಿ ಮುಗಿಯಿತು, ಇನ್ನೇನಿದ್ದರೂ ಮಗಳು ನರ್ಗೀಸಳನ್ನು ಚೆನ್ನಾಗಿ ಓದಿಸಿ ಅವಳನ್ನೊಂದು ಟೀಚರನ್ನಾಗಿಯಾದರೂ ಮಾಡಬೇಕು ಎಂಬ ನಿರುಮ್ಮಳ ಕನಸುಗಳಿಂದ ದಿನದೂಡುತ್ತಿದ್ದ ಆಮಿನಾಳಿಗೆ ಒಂದೆರಡು ವರ್ಷ ಹಾಗೇ ಬಂದು ಹೀಗೆ ಕಳೆದಿತ್ತು. ಆದರೆ, ಅದೊಂದು ಬಕ್ರೀದ್ ಹಬ್ಬಕ್ಕೆ ತನ್ನ ಊರಿಗೆಂದು ಒಂಟಿಯಾಗಿ ಹೋದ ತಂಗಿ ಮೈಮೂನಳ ಗಂಡ, ಮತ್ತೆ ತಿರುಗಿಯೂ ಬರದೆ, ಯಾವ ಸುದ್ದಿಯನ್ನೂ ನೀಡದೆ ಮೈಮೂನಳ ಬದುಕನ್ನು ಮತ್ತೆ ಅತಂತ್ರವನ್ನಾಗಿದ ಎಂದು ಅಂದುಕೊಳ್ಳುವಾಗಲೇ, ಅತಂತ್ರವಾಗಿದ್ದು ತನ್ನದೇ ಬದುಕು ಎಂದು ಆಮಿನಾಳಿಗೆ ಅರಿವಾಗುವ ಹೊತ್ತಿಗೆ ಹೊಳೆಯೂರಿನ ಸೇತುವೆ ಉದ್ಘಾಟನೆಗೆ ತಯಾರಾಗಿತ್ತು.
*****
ಮದುವೆಯಾದ ಹೊಸತರಲ್ಲಿ ಎಲ್ಲವೂ ಸರಿಯಿದೆ ಎಂಬಂತೆ ನಡೆಯುತ್ತಿದ್ದ ಸಂಸಾರ, ತಿಂಗಳುಗಳು ಕಳೆದಂತೆಯೇ ಮೈಮೂನಾಳಿಗೆ ನೀರಸವೆನಿಸತೊಡಗಿತು. ಸದ್ಗುಣ ಸಂಪನ್ನನೂ, ಧಾರ್ಮಿಕ ಜ್ಞಾನಿಯೂ, ಮಿದುಭಾಷಿಯೂ ಆಗಿದ್ದ ಮಲಯಾಳಿ ಪತಿಯ ಮೇಲೆ ನಿಧಾನವಾಗಿ ನಿರಾಸಕ್ತಿ ಮೂಡತೊಡಗಿತು. ಹಿಂದೆಂದೋ ಗೊತ್ತಿಲ್ಲದ ಸಮಯದಲ್ಲಿ ತಟ್ಟಿ-ಮುಟ್ಟಾಡುತ್ತಿದ್ದ ಭಾವನ ಸ್ಪರ್ಶ ಕೊಡುತ್ತಿದ್ದಂತಹ ಯಾವುದೇ ಭಾವವೂ, ತನ್ನ ಗಂಡನೊಂದಿಗೆ ಬಲವಂತವಾಗಿಯೂ ಸ್ಪಂದಿಸುತ್ತಿಲ್ಲ ಎಂದು ಅರಿವಾಗುತ್ತಲೇ, ನಿತ್ಯ ಮಂಗಳೂರಿನ ಧಕ್ಕೆಗೆ ಬರುತ್ತಿದ್ದ ಭಾವ ಪೊಡಿಮೋನುವಿನ ಜೊತೆ ಮತ್ತೆ ಸಂಪರ್ಕ ಸಾಧಿಸಿದ್ದಳು. ಬಾಲ್ಯದಲ್ಲೇ ತನ್ನಂತೇ ಅನಾಥವಾದ ಹೆಣ್ಣುಮಗಳು ತನ್ನ ಭಾವನನ್ನು ಧಕ್ಕೆಯಲ್ಲಿ ಭೇಟಿಯಾಗಿ, ಬರುವಾಗ ವಾರಕ್ಕಾಗುವಷ್ಟು ಒಳ್ಳೆಮೀನನ್ನು ತರುತ್ತಿದ್ದಾಗ ‘ದೀಬುವಿನ ಹುಡುಗ’ನಿಗೆ ತನ್ನ ಪತ್ನಿಯ ಮೇಲೆ ಎಳ್ಳಷ್ಟೂ
ಸಂಶಯವಿರಲಿಲ್ಲ. ಆದರೆ ಬರಬರುತ್ತಾ ಮುಂಜಾನೆ ಹೊತ್ತು ಧಕ್ಕೆಯಲ್ಲಿ ತನ್ನ ಹೆಂಡತಿ ಭೆಟ್ಟಿಯಾಗುವುದು ಮೀನಿಗಲ್ಲ ಎಂಬ ಗುಮಾನಿ ಬರತೊಡಗಿದಾಗ ಅದನ್ನು ಜೋರು ದನಿಯಲ್ಲೇ ತಡೆಯಲು ಯತ್ನಿಸಿದವನು, ಬರಬರುತ್ತಾ ಹತ್ತಿರವೂ ಸೇರಿಸಿಕೊಳ್ಳದ ಪತ್ನಿಯ ಹಠ ಹೊರಗಡೆ ಯಾರಿಗೂ ಗೊತ್ತಾಗದಿದ್ದರೆ ಸಾಕಿತ್ತು ಎಂದು ತನ್ನದೇ ದೌರ್ಬಲ್ಯವೆಂಬಂತೆ ದಿನದೂಡತೊಡಗಿದ. ಆದರೆ, ಖುದ್ದು ಹಿಂದುಮುಂದಿಲ್ಲದ ಆತನಿಗೆ ಇನ್ನು ನನ್ನ ವಿದ್ಯೆಯ ಜೊತೆಗೆ ಬಂದಿರುವ ಗೌರವವೂ ಈ ಊರಿನಲ್ಲಿ ಮಣ್ಣುಪಾಲಾಗುತ್ತದೆ ಎಂದನಿಸತೊಡಗಿದಾಗ “ಇನ್ನು ಹಿಂದಿರುಗಿ ಬರುವುದಿಲ್ಲ”ವೆಂದು ಪತ್ನಿಗೆ ಹೇಳಿ ಲಕ್ಷದ್ವೀಪದಲ್ಲೆಲ್ಲೋ ಇದ್ದ ತನ್ನ ಹಿರೀಕರ ಮನೆಗೆ ಹೊರಟು ಹೋಗಿದ್ದ. ಇದರಿಂದಾಗಿ ಕಿಂಚಿತ್ತೂ ಘಾಸಿಗೊಳ್ಳದ ಮೈಮೂನ, ಅವನನ್ನು ನಿಲ್ಲಿಸುವದಿರಲಿ, ತನಗಿರುವ ತಡೆಯೊಂದು ಸುಲಭದಲ್ಲೇ ನಿವಾರಣೆಯಾಯಿತು ಎಂದು ನಿರಾಳವಾಗಿದ್ದಳು.
ಅದಾಗಿ ಎರಡನೆಯ ದಿನಕ್ಕೆ ಅಂದರೆ ಊರಲ್ಲಿ ತೀವ್ರವಾಗಿ ಸುರಿದ ಮಳೆಗೆ ಕರೆಂಟು ಹೋದ ಮೊದಲ ರಾತ್ರಿ ಪೊಡಿಮೋನು ಆಮಿನಾಳಿಗಾಗಲೀ ಮಗಳು ನರ್ಗೀಸಳಿಗಾಗಲೀ ಏನನ್ನೂ ಹೇಳದೆ ಮನೆಯಿಂದ ಹೊರಬಿದ್ದವನು ತಿರುಗಿ ಮನೆಗೆ ಬರಲಿಲ್ಲ. ಊರಿನ ಬಹುಪಾಲು ಮನೆಗೆ ಮೀನು ತಂದುಕೊಡುವುದೂ ನಿಂತಾಗ ಪೊಡಿಮೋನುವಿನ ನಾಪತ್ತೆ ಪ್ರಕರಣ ಊರಲ್ಲೆಲ್ಲಾ ಸುದ್ದಿಯಾಗಿ, ಅಂತೆಕಂತೆಗಳೆಲ್ಲಾ ಸೇರಿ ಹೊಳೆಯೂರಿನಲ್ಲಿ ರಂಗುರಂಗಿನ ಚರ್ಚೆಗೆ ನಾಂದಿ ಹಾಡಿತ್ತು. ಆಗಲೇ ಏನೋ ತೋಚಿದಂತಾದ ಆಮಿನಾ, ಮಗಳನ್ನೂ ಕರೆದುಕೊಂಡು ತಂಗಿಯ ಮನೆ ಕಡೆ ಧಾವಿಸಿದ್ದಳು. ಬಕ್ರೀದಿಗೆಂದು ಊರಿಗೆ ಹೋಗಿದ್ದಿರಬಹುದಾದ ಬಹುಪಾಲು ಮನೆಗಳು ಬೀಗ ಹಾಕಿರುವುದರಲ್ಲಿ, ತಂಗಿಯ ಮನೆಯೂ ಸೇರಿರುವುದು ಮನದಲ್ಲೇನೋ ಸುಟ್ಟ ವಾಸನೆ ಬೀರತೊಡಗಿತು. ಮೈಮೂನಾ ಎಲ್ಲಿ ಹೋದಳು ಎಂದು ಯಾರನ್ನು ಕೇಳುವುದೆಂದು ಯೋಚನೆಯಲ್ಲಿರುವಾಗಲೇ ದೂರದಿಂದ ಗಮನಿಸುತ್ತಿದ್ದ ಶರೀಅತ್ತು ಕಾಲೇಜಿನ ವೃದ್ಧ ಅಟೆಂಡರ್ – ಮೈಮೂನಳಿಗೆ ಸಂಬಂಧ ಕುದುರಿಸಿದ ಚಯ್ಯಬಾಕ - ಮೆತ್ತಗೆ ಬಂದು, “ನಾನು ಚಯ್ಯಬ, ಇಲ್ಲಿನ ಕಾಲೇಜಿನ ಅಟೆಂಡರ್. ನಮ್ಮ ಮನೆಗೆ ಬನ್ನಿ, ಸ್ವಲ್ಪ ಮಾತನಾಡಲಿಕ್ಕುಂಟು” ಎಂದು ಅವರ ಮನೆಕಡೆ ಕೈತೋರಿಸಿದರು. ಮಗಳ ಕೈಹಿಡಿದು ಚಯ್ಯಬಾಕರನ್ನು ಹಿಂಬಾಲಿಸಿದ ಆಮಿನಾ, “ನಾನಂದುಕೊಂಡದ್ದು ನಿಜವಾಗದಿರಲಿ ರಬ್ಬೇ” ಎಂದು ಮನಸ್ಸಲ್ಲೇ ಪ್ರಾರ್ಥಿಸಿದಳು.
ಮನೆಯೊಳಗೆ ಹೋದ ಕೂಡಲೇ ಇವರನ್ನು ಅಲ್ಲಿದ್ದ ಫೈಬರ್ ಕುರ್ಚಿಯ ಮೇಲೆ ಕುಳಿತುಕೊಳ್ಳುವಂತೆ ಹೇಳಿ ಒಳಗಿದ್ದ ತನ್ನ ಹೆಂಡತಿಯನ್ನು ಕರೆದು “ಈ ಮಕ್ಕಳಿಗೆ ಏನಾದರೂ ಕುಡಿಯಲು ಮಾಡಿಕೊಂಡು ಬಾ” ಎಂದು ಅಲ್ಲೇ ಮುಂಭಾಗದಲ್ಲಿ ಒಂದು ಹಳೆಯ ಅಲ್ಲಾಡುತ್ತಿರುವ ಕಾಲಿನ ಮರದ ಸ್ಟೂಲು ಹಾಕಿ ಕುಳಿತರು. ಹೇಗೆ ವಿಷಯವನ್ನು ಹೇಳಲು ಆರಂಭಿಸುವುದು ಎಂಬ ಬಗ್ಗೆ ಗೊಂದಲಕ್ಕೊಳಗಾದವರಂತೆ ಕಂಡುಬಂದ ಚಯ್ಯಬಾಕ ನಿಧಾನವಾಗಿ ಮಾತು ಶುರುವಿಟ್ಟರು. “ನಿಮ್ಮ ತಂಗಿ ಮೈಮೂನಳ ಗಂಡ ಇದ್ದಾರಲ್ಲ, ಅವರು ದೇವರಂತ ಮನುಷ್ಯ. ಇಲ್ಲೇ ಹತ್ತಿರದ ಹಳೆ ಮಸೀದಿಯ ದರ್ಸಿನಲ್ಲಿ ಓದಲೆಂದು ಸಣ್ಣ ಪ್ರಾಯದಲ್ಲೇ ಬಂದವರು. ಕಲಿಯುವಾಗಲೂ, ಕಲಿತ ಬಳಿಕ ಇದೇ ಕಾಲೇಜಿನಲ್ಲಿ ಕಲಿಸುತ್ತಿದ್ದ ಅಷ್ಟು ದಿನವೂ, ದೀನಿಯಾತು ಬಿಟ್ಟು ನಡೆದವರಲ್ಲ. ನಿಮ್ಮ ತಂಗಿ ಶರೀಅತ್ತು ಓದುತ್ತಿದ್ದಾಗ, ಈ ದೀಬುವಿನ ಹುಡುಗನಿಗೆ ಸಂಬಂಧ ಮಾಡುವ ಎಂದು ನಿಮ್ಮ ಗಂಡ ಪೊಡಿಮೋನುವಿನಲ್ಲಿ ನಾನೇ ಈ ವಿಷಯ ಪ್ರಸ್ತಾಪಿಸಿದ್ದೆ. ಗೊತ್ತಿರಬೇಕಲ್ಲಾ?” ಎಂದು ಹೆಂಡತಿ ತೆಗೆದುಕೊಂಡು ಬಂದಂತಹ ನಿಂಬೆಯ ಶರಬತ್ತನ್ನು ಇಬ್ಬರೂ
ಕುಡಿಯುವವರೆಗೆ ಕಾದರು. ಅಲ್ಲೇ ಇದ್ದ ಮಣೆಯೊಂದರಲ್ಲಿ ಅವರ ಹೆಂಡತಿಯೂ ಕುಳಿತರು. ಚಯ್ಯಬಾಕ ಮತ್ತೆ ಮುಂದುವರಿಸಿ, “ಕಳೆದ ಒಂದು ವರ್ಷದಿಂದ ನಿಮ್ಮ ತಂಗಿ ಮತ್ತು ಉಸ್ತಾದರಿಗೆ ಸರಿ ಹೋಗುತ್ತಿರಲಿಲ್ಲವಂತೆ ಕೊನೆಯ ಬಾರಿ ಊರಿಗೆ ಹೋಗುವಾಗ ಹೇಳಿದ್ದರು. ಒಂಟಿಯಾಗಿ ಹಾಸ್ಟೆಲಿನಲ್ಲಿ ಬೆಳೆದ ಕಾರಣಕ್ಕೇನೋ ಎಂದು ಉಸ್ತಾದರು ಮೊದಮೊದಲು ಸಮಾಧಾನ ಮಾಡಿಕೊಂಡಿದ್ದರಂತೆ. ಆದರೆ, ಇದೆಲ್ಲವೂ ಭಾವ ಪೊಡಿಮೋನುವಿನ ಕಿತಾಪತಿಯಿಂದಲೇ ಹೀಗಾಗುತ್ತಿದೆ ಎಂದು ಎರಡು ಮೂರು ಸಲ ನನ್ನ ಜೊತೆ ಹೇಳಿದರೂ, ಏನು ಕಿತಾಪತಿ ಎಂದು ಕೇಳಿದ್ದಕ್ಕೆ ಉಸ್ತಾದರು ಹೇಳಲಿಲ್ಲ. ಆದರೆ…” ಎಂದು ಆಮಿನಾಳ ಪಕ್ಕ ಕುಳಿತಿದ್ದ ನರ್ಗೀಸಳ ಕಡೆಗೆ ನೋಡಿ, “ಇವಳೂ?” ಎಂದು ಕೇಳಿದರು. “ಮಗಳು” ಎಂದಾಗ ಮತ್ತೆ ಮುಂದುವರಿಸುತ್ತಾ, “ಈಗ ಹೇಗೆ ಹೇಳಬೇಕೋ ಗೊತ್ತಾಗುತ್ತಿಲ್ಲ. ಉಸ್ತಾದರು ಇನ್ನು ಬರುವುದಿಲ್ಲವೆಂದು ಹೋದ ಮರುದಿನಕ್ಕೇ ಪೊಡಿಮೋನುವಿನ ಜೊತೆ ಮೈಮೂನ ಹೊರಟಿದ್ದನ್ನು ನೋಡಿದ್ದೆ. ಮೊದಲಿಗೆ ನಿಮ್ಮ ಮನೆಗೇ ಹೋಗಿದ್ದಾಳೆ ಎಂದು ನಾನಂದುಕೊಂಡಿದ್ದೆ. ಆದರೆ, ಈಗ ಯಾಕೋ ಎಲ್ಲೋ ಏನೋ ಸರಿಯಿಲ್ಲ ಎಂದೆನಿಸುತ್ತಿದೆ” ಎಂದು ಹೇಳಿ ಮೌನವಾದರು. ವಿಷಯವೆಲ್ಲಾ ಅರ್ಥವಾಗಿದ್ದ ನರ್ಗೀಸಳು ಆಮಿನಾಳನ್ನು ತಬ್ಬಿಕೊಂಡು ತಾಯಿಮಗಳು ಪರಸ್ಪರ ಸಂತೈಸುತ್ತಿದ್ದರೆ, ಖುದ್ದು ತಮ್ಮ ಮಗಳಿಗೇ ಅನ್ಯಾಯವಾಗಿದೆ ಎಂಬಂತೆ ಚಯ್ಯಬಾಕ ಮತ್ತು ಅವರ ಹೆಂಡತಿಯೂ ಕಣ್ಣೀರಾದರು. ಉಮ್ಮಳಿಸುತ್ತಿದ್ದ ದುಃಖವನ್ನು ತಡೆಯುತ್ತಾ ನರ್ಗೀಸಳನ್ನೂ ಎಬ್ಬಿಸಿ ಆಮಿನಾ ಹಾಗೆಯೇ ಮನೆಗೆ ಮರಳಿದ್ದಳು. ಹಾಗೇ ಮನೆಗೆ ಬಂದ ನರ್ಗೀಸಳು ತನಗೇನು ಮಾಡಬೇಕೆಂಬ ಸ್ಪಷ್ಟತೆಯಿಲ್ಲದೇ, ಏನೋ ಮಾಡಬೇಕೆಂಬ ತಹತಹದಲ್ಲೇ ಸುಲಭಕ್ಕೆ ಸಿಕ್ಕ ಗುಡ್ ನೈಟಿನ ಲಿಕ್ವಿಡನ್ನು ಕುಡಿದು ಹೊಟ್ಟೆ ತೊಳೆಸಿದಂತಾಗಿ, ಕುಡಿದದ್ದರ ಜೊತೆಗೆ ಅಟೆಂಡರ್ ಮನೆಯ ನಿಂಬೆಯ ಶರಬತ್ತೂ ಹುಳಿಹುಳಿಯಾಗಿ ಹೊರಬಂದು, ಮತ್ತೆ ಮತ್ತೆ ವಾಕರಿಕೆ ಹೆಚ್ಚಾದಂತಾಗಿ ಯಾಕೋ ನಿಜವಾಗಲೂ ತಾನು ಸಾಯುತ್ತೇನೆ ಅಂತ ಅನಿಸಿದಾಗ ಉಮ್ಮ ಆಮೀನಾಳನ್ನು ಜೋರಾಗಿ ಕೂಗಿದಳು.
*****
ದೀಬು ಅಥವಾ ಲಕ್ಷದ್ವೀಪದವರೆಂದರೆ ಚಾಣಾಕ್ಷ ಮಾಂತ್ರಿಕರೆಂದೂ, ಅವರು ಈ ಹಿಂದೆ ಒಮ್ಮೆ ಶುಕ್ರವಾರದ ಖುತ್ಬಾ ಆಗುತ್ತಿರವಾಗಲೇ ಮಂಗಳೂರಿನ ದೊಡ್ಡ ಮಸೀದಿಯನ್ನೇ ಎತ್ತಿಕೊಂಡು ದೀಬುವಿಗೆ ಹೊರಟಾಗ ಬಂದರ್ ಸೂಫೀಯವರು ಖುತ್ಬಾ ಓದುವಾಗ ಹಿಡಿದಿದ್ದ ಮರದ ದೊಡ್ಡ ದೊಣ್ಣೆಯನ್ನೇ ನೆಲಕ್ಕೊಮ್ಮೆ ಬಾರಿಸಿ, ಮಸೀದಿಯನ್ನು ಅಲ್ಲೇ ಇರಿಸಿ, ದೀಬುವಿನ ಮಾಂತ್ರಿಕರನ್ನೇ ಬೆಚ್ಚಿಬೀಳಿಸಿದರೆಂಬ ಕಥೆಯನ್ನು ಸಣ್ಣದಿರುವಾಗ ಹೊಳೆಯೂರಿನ ಮದ್ರಸದಲ್ಲಿ ಕೇಳಿದ್ದ ಮೈಮೂನಾ, ಶರೀಅತ್ತು ಕಾಲೇಜಿಗೆ ಸೇರಿದ ಕೆಲವೇ ತಿಂಗಳುಗಳಲ್ಲಿ ಅದೇ ದೀಬುವಿನ ಹುಡುಗನ ಜೊತೆಗೆ ಮದುವೆ ಸಂಬಂಧವನ್ನು ಅಟೆಂಡರ್ ಚಯ್ಯಬಾಕ ತಂದಾಗ ಗೊಂದಲಕ್ಕೊಳಗಾದಳು. ಆದರೆ, ಖುದ್ದು ತನ್ನ ಭಾವ ಪೊಡಿಮೋನು ಕೂಡಾ ಅದಕ್ಕೆ ಸಹಮತಿ ಸೂಚಿರುವುದರಿಂದ ತಾನೂ ಮದುವೆಯಾಗಲು ಒಪ್ಪಿಕೊಂಡಿದ್ದಳು. ಆದರೂ, ಕಡು ಮಲಯಾಳಂ ಮಾತನಾಡುವ ಈ ದೀಬುವಿನ ಹುಡುಗ ಅದೇನು ಮಾಂತ್ರಿಕತೆಯನ್ನು ಹೊಂದಿದ್ದಾನೋ ಎಂಬ ಭಯ ಮತ್ತು ಕುತೂಹಲವೂ ಏಕಕಾಲಕ್ಕೇ ಆಗುತ್ತಿತ್ತು.
ತಂದೆ, ಚಿಕ್ಕಪ್ಪ ಯಾರೂ ಇಲ್ಲದ ಅನಾಥೆಯನ್ನು ಊರ ಖತೀಬರೇ ಸರಳವಾಗಿ ದೀಬುವಿನ ಹುಡುಗನಿಗೆ ‘ನಿಖಾ’ ಮಾಡಿಸಿ, ಹೊಳೆಯೂರಿನ ಹಾಜಿಯಾರರ ಖರ್ಚಿನಲ್ಲಿ ತೀರಾ ಹತ್ತಿರದವರಿಗೆ ತುಪ್ಪದೂಟ ಕೊಡಿಸಿದ್ದರು. ಶರೀಅತ್ತು ಕಾಲೇಜಿನವರೇ ಹೊಸದಾಗಿ ವಿವಾಹವಾದ ದೀಬುವಿನ ಉಸ್ತಾದರಿಗೆ ಅಲ್ಲೇ ಪಕ್ಕದಲ್ಲಿ ಸಣ್ಣ ಬಾಡಿಗೆ ಮನೆಯನ್ನೂ ಗೊತ್ತು ಮಾಡಿ, ಮದುವೆಯಾಗಿ ವಾರಕ್ಕೇ ದಂಪತಿಯನ್ನು ಹೊಸ ಮನೆಯಲ್ಲಿ ಸಂಸಾರ ಹೂಡಿಸಿದ್ದರು. ಮೊದಮೊದಲು ಕತ್ತಲಾಗುತ್ತಲೇ ಮೈಮೂನಾಳ ಸುತ್ತ ಮುತ್ತ ಠಳಾಯಿಸುತ್ತಿದ್ದ ದೀಬುವಿನ ಹುಡುಗನಿಗೆ ತಿಂಗಳಾಗುತ್ತಲೇ ಅಬ್ಬರ ಕಡಿಮೆಯಾಗುತ್ತದ್ದು ಮೈಮೂನಾಳಿಗೂ ಸಣ್ಣದಾಗಿ ಗೊತ್ತಾಗತೊಡಗಿತ್ತು. ಉತ್ಸಾಹದಲ್ಲೇ ಶುರುವಿಡುತ್ತಿದ್ದ ಹುಡುಗ, ಮೈಗೆ ಮೈ ಸೋಕುತ್ತಲೇ ತಣ್ಣಗಾಗುತ್ತಿದ್ದ. ಮುಜುಗರವಿರಬಹುದೆಂದುಕೊಂಡು, ಎಲ್ಲಾ ಸರಿಹೋಗಲೆಂದು ಮೈಮೂನಾ ತಾನಾಗಿಯೇ ಮತ್ತಷ್ಟು ಕೆಣಕಿದರೆ, ಹುಡುಗ ಮತ್ತಷ್ಟು ಮುದುಡತೊಡಗಿದಾಗ ಮೈಮೂನಾಳಿಗೆ ತನ್ನ ಬಗ್ಗೆಯೇ ಜಿಗುಪ್ಸೆ ಬರತೊಡಗಿತು. ಆದರೆ, ಬರಬರುತ್ತಾ ಹತ್ತಿರ ಸೇರುತ್ತಲೇ ಮಂಜುಗಡ್ಡೆಯಾಗುತ್ತಿದ್ದ ಹುಡುಗನನ್ನು ಕಂಡು ಖುದ್ದು ಅವಳೇ ಮಂಕಾಗತೊಡಗಿದಳು.
*****
ಹತ್ತು ಹನ್ನೆರಡರ ಸಣ್ಣ ವಯಸ್ಸಿನಲ್ಲಿಯೇ ದೀಬು ಬಿಟ್ಟು ಮಂಗಳೂರಿನ ಹೊರವಲಯದ ಬೆಳ್ತಂಗಡಿಗೆ ಹತ್ತಿರದ ‘ಮುಗಿಲಿನ ಹಳ್ಳಿ’ಯ ಯತೀಂಖಾನಕ್ಕೆ ಸೇರಿದ್ದ ಆರೀಫನಿಗೆ ಆ ಸಣ್ಣೂರಿನ, ಸುತ್ತಮುತ್ತಲೂ ಬೆಟ್ಟಗಳಿಂದಲೂ ಮೋಡಗಳಿಂದಲೂ ಆವರಿಸಿರುವ ಜಾಗ ಅವನನ್ನು ಖಿನ್ನವಾಗಿಸುತ್ತಿತ್ತು. ಬಿರುಬಿಸಿಲಿನಿಂದಲೂ, ನೀಲಿ ಕಡಲಿನಿಂದಲೂ ಆವೃತವಾಗಿದ್ದ ತನ್ನೂರು ಲಕ್ಷದ್ವೀಪ ಅವನನ್ನು ಕಾಡತೊಡಗಿತು. ಎಲ್ಲವನ್ನೂ ತೊರೆದು ಓಡಿಹೋಗೋಣವೆಂದು ಹಲವು ಬಾರಿ ಯೋಚನೆ ಬಂದರೂ, ಹೆತ್ತವರಿಲ್ಲದ ಊರಿನಲ್ಲಿ ಮಕ್ಕಳು ಮತ್ತಷ್ಟು ಅನಾಥರು ಎಂದೆನಿಸಿ ಹೊಸ ವಾತಾವರಣಕ್ಕೆ ಒಗ್ಗಿಕೊಳ್ಳುವ ಪ್ರಯತ್ನದಲ್ಲಿದ್ದ. ಬೆಳಗಿನಿಂದ ರಾತ್ರಿಯ ವರೆಗೆ ಹೇಗೋ ‘ಪತ್ತ್ ಕಿತಾಬು’ ಓದುತ್ತಲೋ, ಮೀಲಾದಿನ ಬೈತುಗಳನ್ನು ಹೊಸ ರಾಗಗಳಿಂದ ಹಾಡುತ್ತಲೋ ನೆಮ್ಮದಿಯಿಂದಲೇ ದಿನದೂಡುತ್ತಿದ್ದ ಅವನು, ರಾತ್ರಿಯೆಂದರೆ ಬೆಚ್ಚಿಬೀಳತೊಡಗಿದ್ದು ಯತೀಂಖಾನಕ್ಕೆ ತನಗಿಂತ ಐದಾರು ವರ್ಷ ದೊಡ್ಡವನಿರಬಹುದಾಗ ಮುಗಿಲಿನ ಹಳ್ಳಿಯ ಪಕ್ಕದೂರಿನ ಹುಡುಗನೊಬ್ಬ ಸೇರಿದ ಬಳಿಕ. ಐದನೇ ಕ್ಲಾಸು ಮದ್ರಸಾ ಮುಗಿದ ಬಳಿಕ, ಶಾಲೆಯಲ್ಲೂ ಫೇಲಾಗಿ, ಊರ ಪೋಲಿಮಕ್ಕಳ ಸಹವಾಸ ಮಾಡಿಕೊಂಡಿದ್ದ ಜಮಾಲನನ್ನು ಅವನ ತಾಯಿಯೇ ಕರೆತಂದು ಯತೀಂ ಖಾನದಲ್ಲೇ ಇದ್ದ ದರ್ಸಿಗೆ ಸೇರಿಸಿದ್ದರು. ವಯಸ್ಸಿನಲ್ಲಿ ದೊಡ್ಡವನಾದರೂ, ಪತ್ತು ಕಿತಾಬಿನಿಂದಲೇ ಕಲಿಕೆ ಶುರುಮಾಡಬೇಕಿದ್ದರಿಂದ ಓರಗೆಯಲ್ಲಿ ಆರೀಫನಿಗೆ ಜೊತೆಯಾಗಿದ್ದ. ಬೆಳಗ್ಗೆ ಸಾಮಾನ್ಯರಂತೆಯೇ ನಟಿಸುತ್ತಿದ್ದ ಆತ, ರಾತ್ರಿಮಾತ್ರ ಜೊತೆಯಲ್ಲಿ ಮಲಗುತ್ತಿದ್ದ ಆರೀಫನಿಗೆ ನಿದ್ದೆ ಹತ್ತಿದೆ ಎಂದಾಗ ಅವನ ಮೈಮೇಲೆ ಎಲ್ಲೆಲ್ಲೋ ತಡಕಾಡುತ್ತಿದ್ದ. ಅಲ್ಲದೆ, ಆರೀಫನ ಕೈಯನ್ನು ತನ್ನ ಮುಂಡಿನ ಒಳಗೆ ಬಿಡಿಸಿಕೊಳ್ಳುತ್ತಿದ್ದ ಜಮಾಲನ ಈ ಕ್ರಿಯೆಯಿಂದ ಥಟ್ಟನೆ ಎಚ್ಚರಗೊಳ್ಳುತ್ತಿದ್ದ ಆರೀಫನಿಗೆ ಹಿಂಸೆಯೆನಿಸುತ್ತಿತ್ತು. ಯಾರಲ್ಲಿ ಹೇಳುವುದೆಂದು ತೊಳಲಾಡುತ್ತಿದ್ದ ಆರೀಫನಿಗೆ, ಎರಡು ತಿಂಗಳಿಗೊಮ್ಮೆ ತಲೆ ಬೋಳಿಸಲು ಹೋಗುತ್ತಿದ್ದ ಸಲೂನಿನ ಅಣ್ಣಾಚಿಯೂ ಕೂಡಾ, ಅರ್ಧ ತಲೆ ಬೋಳಿಸಿದ ನಂತರ, ಯಾರ ಜೊತೆಯೋ ಮಾತನಾಡುವಂತೆ ನಟಿಸಿ ಕೂದಲು ಬೀಳಬಾರದೆಂದು ಹಾಕುವ ಬಟ್ಟೆಯ ಒಳಗೆ ಕೈಹಾಕಿ ಜಮಾಲನಂತೆಯೇ ಮಾಡುತ್ತಿದ್ದ! ಅದಲ್ಲದೆ, ದರ್ಸಿನಲ್ಲಿದ್ದ ಹಿರಿಯ ಹುಡುಗರೂ - ಅದೂ ಅವನೊಂದಿಗೆ ಸರಿಯಾಗಿ ಮಾತೂ ಆಡದವರು – ಹೊಸದಾಗಿ ಬಂದ ಜಮಾಲನ ಜೊತೆ ಸೇರಿಕೊಂಡು ತನ್ನನ್ನೇ ನೋಡಿ ನಗುತ್ತಿದ್ದಾರೆ ಅಂತ ಅನ್ನಿಸಿ, ಬಹುಷಃ ಅವರೂ ಹೀಗೆಯೇ ಎಂದು ಭಯಬೀಳತೊಡಗಿದ. ಅದುವರೆಗೆ ದೀಬು ಬಿಟ್ಟು ಎಲ್ಲೂ ಹೋಗದಿದ್ದ ಆರೀಫ, ಮುಗಿಲಿನ ಹಳ್ಳಿಯಲ್ಲಿ ಬಹುಪಾಲು ಎಲ್ಲರೂ ಹೀಗೆಯೇ, ಮುಂಡಿನೊಳಗಿನ ಚೇಷ್ಟೆ ಮಾಡುವವರೇ ಇದ್ದಾರೆ ಎಂದು ಮನದಲ್ಲೇ ಷರಾ ಬರೆದಿದ್ದ.
“ವ್ಯಭಿಚಾರ ಎನ್ನುವುದು ಪಾಪ ಮಕ್ಕಳೇ, ಎಲ್ಲಾ ವಿವಾಹೇತರ ಸಂಬಂಧಗಳೂ ಪಾಪದ ಕೂಪ. ಅದರಲ್ಲೂ ಸಲಿಂಗ ಕಾಮವೆನ್ನುವುದು ಮಹಾಪಾಪ. ಅದರಲ್ಲಿ ಒಳಪೆಡುವವರನ್ನು ನರಕದಲ್ಲಿ ಬೆಂಕಿಯುಂಡೆ ಜೊತೆ ಸರಸವಾಡುವ ಶಿಕ್ಷೆಯನ್ನು ಇಲಾಹನು ನೀಡುತ್ತಾನೆ….” ಎಂದು ತರಗತಿಯಲ್ಲಿ ಘನಘಂಭೀರವಾಗಿ ಕಿತಾಬಿನ ಅರ್ಥ ಹೇಳಿಕೊಡುತ್ತಿದ್ದ ಉಸ್ತಾದರ ಮಾತು ಕೇಳಿ, ‘ಹಾಗಾದರೆ, ಕಿತಾಬು ಬರುವುದಕ್ಕೂ ಮೊದಲೇ ಸಲಿಂಗ ಕಾಮ ಜಾರಿಯಲ್ಲಿತ್ತೇ? ಉಸ್ತಾದರಿಗೆ ನಮ್ಮ ದರ್ಸಿನಲ್ಲೇ ಆಗುತ್ತಿದ್ದ ವಿಷಯ ತಿಳಿದಿದೆಯೇ? ಅಥವಾ, ಉಸ್ತಾದರೂ ಇದರ ಬಲಿಪಶುವೇ?’ ಮೊದಲಾದ ಸಂಶಯಗಳನ್ನು ಕೇಳಬೇಕೆಂದುಕೊಂಡರೂ ತುಟಿಬಿಚ್ಚದೇ ಸುಮ್ಮನಾದ. ಆದರೆ, ಬರಬರುತ್ತಾ, ವರ್ಷಗಳು ಕಳೆದ ಹಾಗೆ, ಹೊಸದಾಗಿ ಬರುವ ‘ಆರೀಫನಂತ ಹುಡುಗ’ರ ಮೇಲೆ ತಾನೇ ‘ಜಮಾಲ’ನಂತೆ ನಿದ್ದೆಗಣ್ಣಲ್ಲಿ ವರ್ತಿಸತೊಡಗಿದಾಗ, ಎಲ್ಲವೂ ಸಹಜವೆಂಬಂತೆ ಅನಿಸತೊಡಗಿತು.
*****
ಮುಗಿಲಿನ ಹಳ್ಳಿಯಲ್ಲಿ ಓದು ಮುಗಿಸಿ, ನಗರದ ದೊಡ್ಡ ಮಸೀದಿಯ ದರ್ಸಿನಲ್ಲಿ ಮತ್ತಷ್ಟು ಕಿತಾಬುಗಳನ್ನು ಅಧ್ಯಯನ ನಡೆಸುವುದರ ಜೊತೆಜೊತೆಗೇ ಬದ್ರಿಯಾ ಕಾಲೇಜಿನಲ್ಲಿ ಪದವಿಯನ್ನೂ ಮುಗಿಸಿದ ಆರೀಫ, ಹೊಸದಾಗಿ ಆರಂಭಗೊಂಡ ಹೆಣ್ಮಕ್ಕಳ ಶರೀಅತ್ತು ಕಾಲೇಜಿನ ಏಕೈಕ ಪುರುಷ ಅಧ್ಯಾಪಕನಾಗಿದ್ದ. ಹೆಣ್ಣುಮಕ್ಕಳ ಬಗ್ಗೆ ‘ಅಷ್ಟೊಂದು’ ಆಸಕ್ತಿಯಿಲ್ಲದ ಕಾರಣ ಮೆನೇಜುಮೆಂಟಿನಿಂದಲೂ, ವಿದ್ಯಾರ್ಥಿನಿಯರ ಪೋಷಕರಿಂದಲೂ ಶಭಾಸ್ ಗಿರಿಯೂ ಬಂದಿತ್ತು. ಹಾಗಾಗಿಯೇ, ಅಟೆಂಡರ್ ಚಯ್ಯಬಾಕನಿಗೂ ಇಷ್ಟವಾಗಿ ಮೀನಿನ ಪೊಡಿಮೋನಿನ ಹಳೆಯ ಸ್ನೇಹದಿಂದ ಅವನ ನಾದಿನಿಗೆ ಸಂಬಂಧ ಕುದುರಿಸಿ, ನಿಕಾಹನ್ನೂ ಮಾಡಿಸಿದ್ದರು. ಮದುವೆಯಾದ ಹೊಸದರಲ್ಲಿ , ಇದುವರೆಗೂ ಇರದ ಸಹಜ ಕುತೂಹಲದಿಂದಾಗಿ ಪತ್ನಿಯ ಸುತ್ತಮುತ್ತಲೇ ಠಳಾಯಿಸುತ್ತಿದ್ದ ಆರೀಫನಿಗೆ, ಬರಬರುತ್ತಾ ಹೆಂಡತಿಯ ಮೇಲೆ ಆಸಕ್ತಿ ಕಡಿಮೆಯಾಗ ತೊಡಗಿತು. ಬರಬರುತ್ತಾ ಹೆಂಡತಿಯ ಜೊತೆ ಕೆರಳಬೇಕೆಂದರೆ, ಯಾವುದಾದರೂ ತನ್ನ ಜೂನಿಯರ್ ಹುಡುಗರ ‘ಮುಂಡಿನ ಪ್ರಸಂಗ’ವನ್ನು ನೆನೆಸಬೇಕಾದ ಅನಿವಾರ್ಯತೆ ಬರತೊಡಗಿದಾಗ, ಆರೀಫ ವಿಚಿತ್ರವಾಗಿ ಆಡತೊಡಗಿದ. ಇದುವರೆಗೂ ಶರೀಅತ್ತು ಕಾಲೇಜಿನಲ್ಲಿ ‘ಅತ್ಯುತ್ತಮ ಇಮೇಜ್’ ಬೆಳೆಸಿಕೊಂಡಿದ್ದ ಆತ, ಹೆಂಡತಿಯ ಮುಂದೆ ಮಾನಸಿಕವಾಗಿ ಬೆತ್ತಲಾಗಲು ಕಷ್ಟವಾಗತೊಡಗಿತು. ಬರಬರುತ್ತಾ ಖುದ್ದು ಪತ್ನಿ ಮೈಮೂನಾಳೇ ಹತ್ತಿರ ಬಂದರೂ ಅವಳನ್ನು ಹೀಯಾಳಿಸಿ, ಆಕೆಯೇ ಮರ್ಯಾದೆಗೆಟ್ಟವಳು ಎಂದು ಪರೋಕ್ಷವಾಗಿ ವ್ಯಕ್ತಪಡಿಸತೊಡಗಿದ. ಆದರೆ, ಮೊದಮೊದಲು ಈ ಬಗೆಯ ವಿಷಯದಿಂದಲೇ ತಪ್ಪಿತಸ್ಥಳಂತೆ ಮಂಕಾಗಿರುತ್ತಿದ್ದ ಪತ್ನಿ, ಬರಬರುತ್ತಾ ಮೊದಲಿಗಿಂತಲೂ ಗೆಲುವಾಗತೊಡಗಿದಾಗ ಆರೀಫನಿಗೆ ಸಂಶಯ ಹೆಡೆಯತ್ತತೊಡಗಿತು. ಈಗೀಗ ಮನೆಗೆ ಬರುತ್ತಿದ್ದ ಬಗೆಬಗೆಯ ಮೀನುಗಳಂತೆಯೇ ಪತ್ನಿಯ ಮೂಡಿನ ಹಿಂದೆಯೂ ಆಕೆಯ ಭಾವನಿರಬಹುದೇ ಎಂಬ ಗುಮಾನಿ ಹತ್ತತೊಡಗಿತು. ಪತ್ನಿಯನ್ನು ರೆಡ್ ಹ್ಯಾಂಡಾಗಿ ಹಿಡಿಯಬೇಕೆಂದು ಪ್ಲಾನ್ ಮಾಡುವ ಹೊತ್ತಿಗೇ, “ಮರದ ಕೊರಡಿನಂತೆ ಬಿದ್ದಿರುವುದಕ್ಕಿಂತಲೂ, ಮೀನಿನಂತೆ ಒದ್ದಾಡುವುದು ನನಗಿಷ್ಟ” ಎಂದು ಮೈಮೂನಾ ಆತನ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ ಮರುದಿನವೇ ಆರೀಫ ದೀಬುವಿಗೆ ಹೊರಟಿದ್ದ!
*****
ಪೊಡಿಮೋನು ನಾದಿನಿಯ ಜೊತೆ ಓಡಿಹೋದದ್ದೂ, ಆತನ ಮಗಳು ಇದೇ ಕಾರಣಕ್ಕೆ ಕುಗ್ಗಿ ಆತ್ಮಹತ್ಯೆಗೆ ಯತ್ನಿಸಿದ್ದೂ ಊರಿಗೆಲ್ಲಾ ಹಬ್ಬಿದ್ದು ಊರಲ್ಲಿ ಕೆಲವರಿಗೆ ಆಡುವ ವಿಷಯವಾಗಿದ್ದರೆ, ಇನ್ನೂ ಕೆಲವರು ಪೊಡಿಮೋನುವಿನ ಅದೃಷ್ಟ– ಬೈ
ವನ್ ಗೆಟ್ ವನ್ ಫ್ರೀ – ಎಂದು ಅವರಿಗಿಲ್ಲದ ‘ಚಾನ್ಸಿ’ಗೆ ಮರುಕ ಪಡುತ್ತಲೂ ಇದ್ದರು. ಇಂಥದ್ದೇ ಒಂದು ಸಂಜೆ ಮಸೀದಿಯ ಮುಕ್ರಿಕ ಆಮಿನಾರ ಮನೆಗೆ ಬಂದು, “ನೀವೊಮ್ಮೆ ಬೆಲಿಯೆ ಉಸ್ತಾದರನ್ನು ಕಾಣಬೇಕಂತೆ” ಎಂದು ಹೇಳಿ ಹಿಂದಿರುಗಿದ್ದರು. ಬೆಲಿಯೆ ಉಸ್ತಾದರು ಅಂದರೆ ಊರ ಮಸೀದಿಯ ಖತೀಬರ ಬಗ್ಗೆ ಆಮಿನಾಳಿಗೆ ತುಂಬು ಗೌರವ. ತಂದೆತಾಯಿಲ್ಲದ, ಹಿಂದುಮುಂದಿಲ್ಲದ ತನ್ನ ತಂಗಿಯನ್ನು ಯಾರು ನಿಖಾ ಮಾಡಿಸಿ ಕೊಡುವುದು ಎಂಬ ಪ್ರಶ್ನೆ ಎದ್ದಿದ್ದಾಗ, ಶರೀಅತ್ತಿನ ಪ್ರಕಾರ ಖುದ್ದು ತಾನೇ ಆ ಜವಾಬ್ದಾರಿ ಹೊತ್ತು ಆರೀಫನಿಗೆ ನಿಖಾ ಮಾಡಿಕೊಟ್ಟಿದ್ದರು. ಅವರೇ ಕರೆದಾಗ, ಏನೋ ಗಹನವಾದ ವಿಷಯವಿದೆ ಎಂದು ಬುರ್ಕಾ ತೊಟ್ಟು, ಹತ್ತು ನಿಮಿಷದಲ್ಲಿ ಮಸೀದಿಯ ಅಂಗಳದಲ್ಲಿದ್ದಳು. ಆದ ಘಟನೆಯ ಬಗ್ಗೆ, ಮಗಳ ಆರೋಗ್ಯದ ಬಗ್ಗೆ ಮಾತನಾಡಿದ ಖತೀಬರು ಬಳಿಕ ವಿಷಯಕ್ಕೆ ಬಂದರು. “ಶರೀಅತ್ತಿನ ಪ್ರಕಾರ ಇಬ್ಬರು ಸಹೋದರಿಯರನ್ನು ಏಕಕಾಲದಲ್ಲಿ ಒಬ್ಬ ಪುರುಷ ಮದುವೆಯಾಗುವಂತಿಲ್ಲ. ಒಬ್ಬಳು ತೀರಿಕೊಂಡರೆ ಇಲ್ಲವೇ ತಲಾಖಾದರೆ ಮಾತ್ರ ಇನ್ನೊಬ್ಬಳನ್ನು ವರಿಸಬಹುದು. ಎರಡನೆಯವಳನ್ನು ಮದುವೆಯಾದರೆ, ಮೊದಲನೆಯ ನಿಖಾಹ್ ಅನೂರ್ಜಿತಗೊಳ್ಳುತ್ತದೆ. ಹಾಗಾಗಿ, ನಾನು ಏನು ಹೇಳ್ತಾ ಇದ್ದೀನೆಂದರೆ, ಶರೀಅತ್ತಿನ ಪ್ರಕಾರ…..”. ಅದುವರೆಗೆ ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದ ಆಮಿನಾಳಿಗೆ ಒಳಗಿನ ರೋಷವೆಲ್ಲಾ ಒಮ್ಮೆಲೇ ಬಂದಂತಾಗಿ, ಖತೀಬರ ಮಾತನ್ನು ಅಲ್ಲೇ ತುಂಡರಿಸಿ, “ಉಸ್ತಾದರೇ, ನೀವು ಹೇಳಿದ ಶರೀಅತ್ತು ನನ್ನ ತಂಗಿಯನ್ನು ನನ್ನ ಗಂಡನಾದವನು ‘ನಿಖಾ’ ಆದರೆ ಮಾತ್ರವಲ್ಲವೇ ಅನ್ವಯಿಸುವುದು? ಅಂದರೆ, ನಿಖಾ ಆಗದೆ ಇದ್ದರೆ ಏನೂ ಸಮಸ್ಯೆ ಇಲ್ಲ ಅಲ್ಲವೇ? ಈಗ ನನ್ನ ಸಮಸ್ಯೆ ನನ್ನ ನಿಖಾ ಊರ್ಜಿತವೋ ಅನೂರ್ಜಿತವೋ ಎಂಬುದಲ್ಲ. ಒಂದು ವೇಳೆ ಆತ ನನ್ನ ತಂಗಿಯನ್ನು ಮದುವೆಯಾದರೂ, ನನ್ನ ಮಗಳ ಮದುವೆಯ ಸಂದರ್ಭದಲ್ಲಿ, ಆತನೇ ನನ್ನ ಮಗಳಿಗೆ ನಿಖಾ ಮಾಡಿಸಬಹುದೇ? ನನ್ನ ಮಗಳಿಗೆ ಆತ ತಂದೆಯಾಗಿಯೇ ಇರುತ್ತಾನೆಯೇ ಅಥವಾ ಅದೂ ಅನೂರ್ಜಿತಗೊಳ್ಳುತ್ತದೆಯೇ?” ಎಂದು ಒಂದೇ ಉಸಿರಿನಲ್ಲಿ ಕೇಳಿ ಉಸ್ತಾದರ ಎದುರೇ ಬಿಕ್ಕಳಿಸತೊಡಗಿದಳು. ಅನಿರೀಕ್ಷಿತ ಪ್ರಶ್ನೆಯೆನ್ನೆದುರಿಸಿದ ಖತೀಬರು ಆ ಸನ್ನಿವೇಶವನ್ನು ಹೇಗೆ ತಹಬದಿಗೆ ತರುವುದೆಂದು ನಿಶ್ಚಯಿಸಲಾಗದೆ, “ನೀನೀಗ ಹೋಗಮ್ಮ, ನಾನು ಮತ್ತೆ ಹೇಳಿ ಕಳುಹಿಸುತ್ತೇನೆ” ಎಂದು ತಸ್ಬೀಹ್ ಹೇಳುತ್ತಾ ಮಸೀದಿಯ ಒಳಗೆ ಹೋದರು.
*****
ಈ ಊರಿನಲ್ಲಿದ್ದರೆ ತನಗೆ ಹಾಗೂ ಮಗಳು ನರ್ಗೀಸಳಿಗೆ ನೆಮ್ಮದಿಯಿಲ್ಲವೆಂದು ತಿಳಿದು ಆಮಿನಾ ಮತ್ತೆ ಹಾಜಿಯಾರರ ಮನೆಯ ಕದ ತಟ್ಟಿದಳು. ತಿಂಗಳ ಹಿಂದೆಂದೋ ಬೆಂಗಳೂರಿನಲ್ಲಿರುವ ತನ್ನ ಮಗಳ ಮನೆಗೆ ಕೆಲಸದಾಳೊಂದು ಸಿಗಬಹುದೇ ಎಂದು ಹಾಜಿಯಾರರು ಕೇಳಿದ್ದ ವಿಚಾರಕ್ಕೆ ಈಗ ತಾನೇ ಕೆಲಸದಾಳಾಗಿ ಹೋಗಲು ತಯಾರಾಗಿದ್ದಳು. ಜೊತೆಗೆ, ಈ ಊರಿನಲ್ಲಿ ಇರಲು ಸಾಧ್ಯವಾಗದ ಮಗಳೂ ಈಗಾಗಲೇ ಬರೆದಿದ್ದ ನೀಟೋ, ಸಿಇಟಿಯೋ ಯಾವುದರಲ್ಲೋ ಫ್ರೀ ಸೀಟು ಸಿಗುವ ಸಾಧ್ಯತೆಯನ್ನೂ ಹೇಳಿದ್ದಳು. ತಕ್ಷಣ ಒಪ್ಪಿಕೊಂಡ ದೊಡ್ಡ ಮನಸ್ಸಿನ ಹಾಜಿಯಾರರು ಮಗಳಿಗೆ ಬೇಕಾದರೆ ಮೈನಾರಿಟಿ ಹಾಸ್ಟೆಲಿನಲ್ಲಿ ಓದುವ ವ್ಯವಸ್ಥೆಯನ್ನೂ ಮಾಡಿಕೊಡುವ ಎನ್ನುತ್ತಲೇ ಅಂದೇ ರಾತ್ರಿ ಆಮಿನಾ ಮತ್ತು ನರ್ಗೀಸಳನ್ನು ಬೆಂಗಳೂರಿನ ಟ್ರೈನು ಹತ್ತಿಸಿದ್ದರು.
ಬೆಂಗಳೂರಿನ ಬದುಕು ಸಹ್ಯವಾಗುತ್ತಿದ್ದಂತೆಯೇ ನರ್ಗೀಸಳ ರಿಸಲ್ಟು ಬಂದು ಮೈನಾರಿಟಿ ಕೋಟಾದಲ್ಲಿ ಇಎಸ್ಐ ಕಾಲೇಜಿನಲ್ಲಿ ಮೆಡಿಕಲ್ ಸೀಟು ದಕ್ಕಿತ್ತು. ಮೊದಲ ಬಾರಿಗೆ ವೈಟ್ ಕೋಟು ಧರಿಸಿ ನರ್ಗೀಸಳು ರಾಜಾಜಿನಗರದ ಬಸ್ಸು
ಹತ್ತಿದಾಗ, ಆಮಿನಾ ಖುಷಿಯಲ್ಲಿ ಕಣ್ಣೀರಾಗಿದ್ದಳು. ಉಮ್ಮಾನ ಕನಸು ನನಸಾಗಿಸಬೇಕೆಂಬ ಹಠದಲ್ಲಿ, ಹಾಸ್ಟೆಲಿನಲ್ಲಿ ಇದ್ದುಕೊಂಡು ಓದುತ್ತಿದ್ದ ನರ್ಗೀಸಳಿಗೆ ದಿನಗಳೆದದ್ದೇ ಗೊತ್ತಾಗಲಿಲ್ಲ. ಆಗಾಗ ಊರಿನಿಂದ ಬರುತ್ತಿದ್ದ ಹಾಜಿಯಾರರು ತರುತ್ತಿದ್ದ ಸುದ್ದಿಯನ್ನು, ರವಿವಾರ ಮಾತ್ರವೇ ಹಾಸ್ಟೆಲಿಗೆ ಬಂದು ತಲುಪಿಸುತ್ತಿದ್ದ ಉಮ್ಮಾ - ತಪ್ಪಿಯೂ ಅಬ್ಬಾನ ಬಗ್ಗೆ, ಚಿಕ್ಕಮ್ಮಳ ಬಗ್ಗೆ ಪ್ರಸ್ತಾಪಿಸುತ್ತಲೇ ಇರಲಿಲ್ಲ.
*****
ನರ್ಗೀಸ್ ಫೈನಲ್ ಇಯರ್ ಇಂಟರ್ನ್ ಶಿಪ್ಪಿನಲ್ಲಿರುವಾಗ ಚೈನಾದವನಂತೆ ಕಾಣುವ ಅಸ್ಸಾಮಿನ ಡಾ.ಅಮೀರ್ ಹಸನ್ ಭೇಟಿಯಾಗಿದ್ದ. ಅಗತ್ಯ ಮಾತುಕತೆಯಲ್ಲಾ ಇಂಗ್ಲಿಷಿನಲ್ಲೇ ನಡೆಯುತ್ತಿದ್ದರೂ, ಒಂದು ದಿನ ಶುದ್ಧ ಬ್ಯಾರಿ ಭಾಷೆಯಲ್ಲಿ “ಮೈಕಾಲ್ತ್ ನಿಙಲೊ ಅಗ ಓಡೆ? (ಮಂಗಳೂರಿನಲ್ಲಿ ನಿಮ್ಮ ಮನೆ ಎಲ್ಲಿ?)” ಎಂದು ತನ್ನೂರಿನ ಬಗ್ಗೆ ಆತನ ಬ್ಯಾರಿ ಭಾಷೆಯ ಪ್ರಶ್ನೆಗೆ ನರ್ಗೀಸ್ ಶಾಕ್ ಆಗಿದ್ದಳು. “ತಾನು ಮಂಗಳೂರಿನ ಕೆಎಂಸಿಯಲ್ಲಿ ಓದಿದ್ದೆಂದೂ, ವೆನ್ಲಾಕಿನಲ್ಲಿ ಕೆಲವು ಸಮಯ ಇದ್ದೆನೆಂದೂ, ನಿನ್ನ ಇಂಟರ್ನ್ಶಿಪ್ ಪ್ರೊಫೈಲ್ ನೋಡಿ ಬ್ಯಾರಿ ಭಾಷೆಯಲ್ಲೇ ಮಾತನಾಡಿಸಿದ್ದೆಂದೂ” ಹೇಳಿದ್ದ ಡಾ.ಅಮೀರ್, ತನಗಾಗಿ ಆಗಾಗ ಕ್ಯಾಂಟೀನಿನ ತನಕ ಬರುವುದೂ, ಸಂಜೆ ಪಾಳಿ ಲೇಟಾದರೂ ತನಗಾಗಿ ಕಾಯುತ್ತಲಿರುವುದನ್ನು ನರ್ಗೀಸ್ ಗಮನಿಸಿದ್ದಳು. ಅದಾದ ಬಳಿಕ ಡಾ.ಅಮೀರ್ ಹಸನ್ ಹೆಸರು ನರ್ಗೀಸಳ ಮೊಬೈಲಿನಲ್ಲಿ “ಡಾ. ಚೈನೀಸ್ ಬ್ಯಾರಿ” ಎಂದು ಸೇವಾಗಿತ್ತು. ಮಗಳನ್ನು ಭೇಟಿಯಾದಗಲೆಲ್ಲಾ ಮಾತುಕತೆಯಲ್ಲಿ ಹೊಸ ಡಾಕ್ಟರ್ ಹೆಸರು ಆಗಾಗ ಬರುವುದನ್ನು ಗಮನಿಸಿದ್ದ ಆಮಿನಾ, “ನಿನ್ನ ಕನಸನ್ನು ಮರೆಯಬೇಡಾ ಮೋಳೇ” ಎಂದು ಸೂಚ್ಯವಾಗಿ ತಿಳಿಸಿದ್ದಳು.
ಇಂಟರ್ನ್ ಶಿಪ್ಪಿನ ಕೊನೆಯದಾಗಿ ಟ್ಯಾನರಿ ರೋಡಿನ ಸ್ಲಮ್ಮಿನಲ್ಲಿ ಮೆಡಿಕಲ್ ಕ್ಯಾಂಪ್ ಮುಗಿಸಿ ಹಾಸ್ಟೆಲ್ ಸೇರಿದ ನರ್ಗೀಸಳಿಗೆ, ತನ್ನ ಮತ್ತು ಚೈನೀಸ್ ಬ್ಯಾರಿಯ ಮಧ್ಯೆ ಏನೋ ಭಾವನೆ ಮೂಡುತ್ತಲಿದೆಯೇ ಅಥವಾ ಅದು ಕೇವಲ ಪ್ರೊಫೆಶನಲ್ ಬಂಧವೇ ಎಂದು ಯೋಚಿಸುತ್ತಾ ಹಾಗೆಯೇ ನಿದ್ದೆಗೆ ಜಾರಿದ್ದಳು. ನಿದ್ದೆಯಲ್ಲೊಂದು ಕನಸು, ಅಥವಾ ಮತ್ತೆ ಮತ್ತೆ ತಾಕುತ್ತಿದ್ದ ಹಳೆಯ ಗಾಯ. ‘ಡಾ.ಅಮೀರ್ ಹಸನ್ ಜೊತೆ ಹೊಳೆಯೂರಿನ ಪೇಪರ್ ಉಸಞ್ಞಾಕರ ಹೋಟೆಲ್ಲಿನ ಪಕ್ಕದಲ್ಲಿ ಮೆಡಿಕಲ್ ಕ್ಯಾಂಪ್ ಮಾಡಿದ ಹಾಗೇ; ತನ್ನ ಬಿಳಿಯ ಕೋಟನ್ನೂ, ತಾನು ಪದೇ ಪದೇ ಬೇರೆ ಡಾಕ್ಟರ್ – ನರ್ಸುಗಳ ಜೊತೆ ಮಾತನಾಡುತ್ತಿದ್ದ ಇಂಗ್ಲೀಷನ್ನೂ ಊರವರೆಲ್ಲಾ ಮೆಚ್ಚುತ್ತಿದ್ದ ಹಾಗೇ; ಅದನ್ನೆಲ್ಲಾ ಕಣ್ಣ ಸಂದಿಯಲ್ಲೇ ಗಮನಿಸಿ ಹೆಮ್ಮೆಯಿಂದಲೇ “ಎಲ್ಲರೂ ಸಾಲಾಗಿ ಬನ್ನಿ” ಎಂದು ತನ್ನ ತಾಯಿ ಆಮಿನಾ ಜೋರಾಗಿ ಕೂಗುತ್ತಿದ್ದ ಹಾಗೇ; ಉಸಞ್ಞಾಕ, ಅವರ ಹೋಟೆಲ್ಲಿನ ಗಿರಾಕಿಗಳೂ, ಖತೀಬರೂ, ಹಾಜಿಯಾರರೂ, ಅಟೆಂಡರ್ ಚಯ್ಯಬಾಕ ದಂಪತಿಯೆಲ್ಲರೂ ಹೊಸ ಹೊಸ ರೋಗಗಳನ್ನು ಹೇಳಿ ದವಾಯಿ ತೆಗೆದುಕೊಂಡ ಹಾಗೇ; ದೂರದಲ್ಲೆಲ್ಲೋ ತನ್ನ ತಂದೆ ಪೊಡಿಮೋನು ಚಿಕ್ಕಮ್ಮ ಮೈಮೂನಳ ಜೊತೆ ಬಂದ ಹಾಗೆ; ಅವರನ್ನು ಕಂಡ ತಕ್ಷಣ ತಲೆತಿರುಗಿದಂತಾಗಿ ಅಲ್ಲೇ ಕುಸಿದ ನರ್ಗೀಸಳನ್ನು ಡಾ.ಅಮೀರ್ ತೋಳಲ್ಲಿ ಎತ್ತಿಕೊಂಡ ಹಾಗೇ; ಆತನ ಹಿಡಿತ ಗಟ್ಟಿಯಾಗುತ್ತಿದ್ದಂತೆಯೇ ಅಮೀರ್ ಹಸನ್ ಓತಿಕ್ಯಾತನಾದ ಹಾಗೇ; ಅದನ್ನು ಕಂಡ ಅಬ್ಬ ಪೊಡಿಮೋನು, ಪೇಪರ್ ಉಸಞ್ಞಿ ಎಲ್ಲರೂ ಹತ್ತಿರ ಬರುತ್ತಿದ್ದಂತೆಯೇ ಅವರೂ ಕ್ಷಣಕ್ಕೊಂದರಂತೆ ಸರದಿಯಲ್ಲಿ ಓತಿಕ್ಯಾತನೂ, ನರಿಯೂ, ತೋಳವೂ, ಹುಚ್ಚು ನಾಯಿಯೂ ಮೊದಲಾದ ಬೇರೆಬೇರೆ ಪ್ರಾಣಿಗಳಾಗಿ ಬದಲಾದಂತೆ, ಅದೇ ಪಟ್ಟಿಗೆ ಖತೀಬ್ ಉಸ್ತಾದರೂ ಸೇರಿಕೊಂಡ ಹಾಗೇ;
ಹಾಜಿಯಾರು, ಆಮಿನಾ ಮತ್ತು ನರ್ಗೀಸಳನ್ನು ಬಿಟ್ಟರೆ ಊರಿಗೆ ಊರೇ ಪ್ರಾಣಿಗಳ ಮತ್ತು ಸಸ್ತನಿಗಳ ಬೀಡಾದ ಹಾಗೇ; ಹಾಜಿಯಾರರು ಮುಟ್ಟಿದಾಗ ಮಾತ್ರ ಅವರೆಲ್ಲರೂ ಮತ್ತೆ ಮನುಷ್ಯರಾದ ಹಾಗೆ; ಅವರೆಲ್ಲರನ್ನೂ ತಪ್ಪಿಸಿಕೊಳ್ಳಲು ಈ ಮೂವರೂ ಹೊಳೆಯೂರನ್ನು, ಕ್ಯಾಂಪನ್ನೂ ಬಿಟ್ಟು ಓಡಿಹೋಗುತ್ತಿರುವ ಹಾಗೇ; ಓಡೋಡುತ್ತಲೇ ಹೊಳೆಯೂರಿನ ಸೇತುವೆ ಮುರಿದು ಬಿದ್ದು, ತಮ್ಮ ಜೊತೆ ಹೊಸ ಎಮ್ಮೆಲ್ಲೆ ಸಾಹೇಬನೂ ನದಿಯಲ್ಲಿ ಒದ್ದಾಡುತ್ತಿರುವ ಹಾಗೇ; ಆ ಹಿಂದಿನ ಕ್ಷಣ, ತೋಳವೋ, ನರಿಯೋ, ಓತಿಯೋ ಆಗಿದ್ದ ಡಾ. ಅಮೀರ್ ಹಸನ್ ದೋಣಿಯಾದ ಹಾಗೇ ಮತ್ತು ಹಾಜಿಯಾರರು ಹಳೆ ಮಾಸಿದ ಮುಂಡಾಸು ಕಟ್ಟಿ ಅಂಬಿಗನಾಗಿ ತಮ್ಮಲ್ಲಿಗೆ ಬಂದ ಹಾಗೇ….’
ಬೆಚ್ಚಿ ಬಿದ್ದು ನರ್ಗೀಸಳಿಗೆ ಎಚ್ಚರವಾದಾಗ ದೂರದಲ್ಲಿ ಸುಬುಹಿ ಬಾಂಗಿನ ಧ್ವನಿಯು ರಾಗವಾಗಿ ಕೇಳಿಬರುತ್ತಿತ್ತು.
"ಯಾವುದೋ ಒಂದು ಕ್ಷಣದಲ್ಲಿ ಈ ಕಾದಂಬರಿಯ ಕಥಾವಸ್ತುವಿಗೆ ಪ್ರೇರಣೆ ನೀಡಿತು. ಕೆಲವು ಕಾಲ ಮನಸ್ಸಿನಲ್ಲಿ ಮಥನವಾಗುತ್ತ...
ಗುಲ್ಬರ್ಗಾ: ಸಪ್ನ ಬುಕ್ ಹೌಸ್, ಬೆಂಗಳೂರು ಮತ್ತು ಕುಟುಂಬ ಪ್ರಕಾಶನ, ಕಲಬುರಗಿ ವತಿಯಿಂದ ಪ್ರೊ. ಎಚ್ ಟಿ ಪೋತೆ ಅವರ ಡಾ ಬ...
"ಕಲ್ಕತ್ತಾದ ಗೌರವಾನ್ವಿತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಹುಡುಗಿ, ತನ್ನ ಸಂಬಂಧಿ ಅಣ್ಣನ ಸ್ಥಾನದಲ್ಲಿ ಇದ್ದ ರಮೇ...
©2025 Book Brahma Private Limited.