“ಮಹಿಳೆಯ ಜೀವನ ಹೋರಾಟ ಸಂಘರ್ಷಗಳಿಗೆ ಮೀಸಲಾದದ್ದು ಅಲ್ಲ. ಅವಳ ಇತಿಹಾಸ ಅಧೀನತೆಯಲ್ಲಿ ಕೊರಗಿದೆ. ತನ್ನ ಅಧೀನತೆಯಿಂದ ಹೊರಬಂದು ತನ್ನ ಅಸ್ತಿತ್ವವನ್ನು ನಿರೂಪಿಸಿಕೊಳ್ಳುವಲ್ಲಿ ಸ್ವತಂತ್ರ ಸಮಾನತೆಯ ಹಾದಿಯಲ್ಲಿ ನಡೆಯಬೇಕಾಗಿದೆ. ತನ್ನ ಸ್ವತಂತ್ರ ಸಮಾನತೆ ಹಾಗೂ ಸ್ವಾಭಿಮಾನಕ್ಕೆ ಅಡ್ಡಿಯಾದಾಗ ಪ್ರತಿಯೊಬ್ಬ ಹೆಣ್ಣು ಅವುಗಳನ್ನು ಪಡೆಯಲು ಅವಳದೇ ಆದ ಸ್ಥಿತಿಯಲ್ಲಿ ಹೋರಾಟ ಮಾಡುವ ವಾತಾವರಣ ಸೃಷ್ಟಿಯಾಗಬೇಕು,” ಎನ್ನುತ್ತಾರೆ ಲೇಖಕಿ ಡಾ. ಸುನೀತ ಬಿ.ವಿ. ಅವರು ಅಕ್ಕಮಹಾದೇವಿ ಕುರಿತು ಬರೆದಿರುವ ‘ಅಕ್ಕನ ವಿಮೋಚನೆಯ ಸೂತ್ರದಲ್ಲಿ ದಾಂಪತ್ಯ’ ಲೇಖನ.
‘ಸಂಪ್ರದಾಯ’ಗಳು ನಿಂತ ನೀರಲ್ಲ. ಇವು ನಿರಂತರವಾಗಿ ತಂತಾನೇ ಬದಲಾಗುತ್ತಿರುತ್ತವೆ. ಕಾಲಕಾಲಕ್ಕೆ ಬದಲಾವಣೆ ಕಾಣುವ ಈ ಸಂಪ್ರದಾಯಗಳು ವ್ಯಕ್ತಿ ಹಾಗೂ ಸಮಾಜವನ್ನು ಬಿಟ್ಟು ಇರಲಾರವು. ಆದರೆ, ಸಂಪ್ರದಾಯಗಳನ್ನು ವ್ಯಕ್ತಿನೆಲೆಯಲ್ಲಿ ಅರ್ಥೈಸಿಕೊಳ್ಳಬೇಕು. ಒಂದು ಅಂತರದಲ್ಲಿ ಸ್ವೀಕಾರಗೊಳ್ಳದೇ ಹೋದಾಗ ಅನೇಕ ಸವಾಲುಗಳು ಸೃಷ್ಟಿಯಾಗುತ್ತವೆ. ಕಾಲಕಾಲಕ್ಕೆ ಪರಂಪರೆಯಿಂದ ರೂಢಿಸಿಕೊಂಡ ಬಂದ ಈ ಸಂಪ್ರದಾಯಗಳು ಬದಲಾವಣೆಗೆ ಒಪ್ಪದಾಗ ಹಲವು ಸವಾಲುಗಳು ಎದುರಾಗುತ್ತವೆ. ಸಂಪ್ರದಾಯಗಳಿಂದ ವ್ಯಕ್ತಿಯು ತನಗೆ ತಾನು ಬದಲಾವಣೆಗೆ ತೆರೆದುಕೊಳ್ಳುವುದು ಸಹಜ ಪ್ರಕ್ರಿಯೆ. ಒಂದು ಕಾಲದಲ್ಲಿ ಬಳಕೆಯಲ್ಲಿದ್ದ ಅನೇಕ ರೀತಿ ರಿವಾಜುಗಳು ಮತ್ತೊಂದು ಕಾಲದಲ್ಲಿ ಅರ್ಥ ಕಳೆದುಕೊಳ್ಳುತ್ತವೆ. ನಿರಂತರ ಚಲನಶೀಲವಾಗಿರುವ ಸಂಪ್ರದಾಯಗಳನ್ನು ಸ್ವೀಕರಿಸುವ ಅಥವಾ ವಿರೋಧಿಸುವ ಮೂಲಕ ವ್ಯಕ್ತಿಯ ಪ್ರಜ್ಞೆ ವಿಸ್ತಾರವಾಗುತ್ತದೆ. ಬೌದ್ಧಿಕ ಹಾಗೂ ವಿಮರ್ಶಾತ್ಮಕ ನೆಲೆಯಲ್ಲಿ ಸಂಪ್ರದಾಯಗಳನ್ನು ಅರ್ಥಮಾಡಿಕೊಳ್ಳಬೇಕು. ಸ್ವೋಪಜ್ಞತೆಯಿಂದ ಸಂಪ್ರದಾಯಗಳನ್ನು ಗ್ರಹಿಸಿಕೊಳ್ಳಬೇಕು. ಸಂಪ್ರದಾಯ ಎಂದರೇನು? ಸಂಪ್ರದಾಯಗಳ ಅಗತ್ಯಗಳೇನು? ಎಂಬ ಪ್ರಶ್ನೆಗಳಿಗೆ ಉತ್ತರಿಸಿಕೊಳ್ಳುವ ಮೂಲಕ ವ್ಯಕ್ತಿ ತನ್ನ ಅಸ್ಮಿತೆ ಅರಿತುಕೊಳ್ಳಬೇಕು. ಸಂಪ್ರದಾಯ ಎನ್ನುವುದು ಭೂತದ ನಿಧಿಯಲ್ಲ. ಭವಿಷ್ಯತ್ತಿನಲ್ಲಿ ಸ್ವಾಧೀನಪಡಿಸಿಕೊಳ್ಳಬೇಕಾದ ಆಸ್ತಿಯಾಗಬೇಕು. ಆದರೆ ಇವೆಲ್ಲಕ್ಕೂ ಮುಖ್ಯವಾಗಿ ಈ ತೆರೆದುಕೊಳ್ಳುವಿಕೆ ಇನ್ನೊಬ್ಬರ ಅಸ್ಮಿತೆಯನ್ನು ತುಳಿಯದಂತಿದ್ದರೆ ಸಂಪ್ರದಾಯಗಳು ತನ್ನ ಸಕಾರಾತ್ಮಕತೆ ಪಡೆದುಕೊಳ್ಳುತ್ತದೆ.
‘ಹೆಂಗೂಸೆಂಬ’ ಲೌಕಿಕ ಸಂಬಂಧವನ್ನು, ಹಸಿವು-ತೃಷೆಗಳನ್ನು ಒಳಗೊಂಡಂತೆ ಮನುಷ್ಯ-ಸಮಾಜದ ಸಂಬಂಧ ಹಾಗೂ ಲೋಕ ಸಂಪ್ರದಾಯಗಳೆಲ್ಲವನ್ನೂ ನಿರಾಕರಿಸಿ ಇವುಗಳಿಂದ ಕಳಚಿಕೊಂಡು ‘ಲೋಕ ವಿಮೋಚನೆ’ಯ ಮಾರ್ಗದಲ್ಲಿ ನಡೆದವಳು ಅಕ್ಕಮಹಾದೇವಿ. ಬದುಕಿನ ಆಸೆಗಳಿಗೆ ತಳವಿಲ್ಲ ಅನಿಸಿದಾಗ ಮನಸ್ಸು ಹೊರಳುವುದು ಆಸೆಗಳಿಲ್ಲದ ವಿಮೋಚನೆಯಡೆಗೆ. ತಾನು ಜ್ಞಾನಿಯಾಗಿ ಸುತ್ತಲೂ ಅಜ್ಞಾನದ ಕತ್ತಲೇ ಆವರಿಸಿದಾಗ ತನಗೆ ಬೇಕಾದ ಜ್ಞಾನವನ್ನು ಪಡೆಯಲು ಅಜ್ಞಾನದ ವಾತಾವರಣದಿಂದ ಹೊರಬರಬೇಕಾದರೆ, ಜ್ಞಾನದ ಕಡೆಗೆ ಗುರಿಯಿಟ್ಟು ನಡೆದ ನಡೆಯೆ ವಿಮೋಚನೆ. ಅಕ್ಕ ಜಗತ್ತಿನ ಅಸಮಾನತೆ, ಶೋಷಣೆಗಳನ್ನು ಮೆಟ್ಟಿ ವಿಮೋಚನೆಯ ಹಾದಿಗೆ ನಡೆದಳು. ಭಯ ಮರೆತು, ದಬ್ಬಾಳಿಕೆಯ ವಿರುದ್ಧ ದನಿ ಎತ್ತಿ, ಚೆನ್ನಮಲ್ಲಿಕಾರ್ಜುನನಲ್ಲಿ ವಿಶ್ವಾಸವಿಟ್ಟಳು. ಹೀಗೆ ಬದುಕಿನಲ್ಲಿ ಪ್ರತಿಕ್ಷಣದ ದ್ವಂದ್ವದಲ್ಲಿ ಸಂಪ್ರದಾಯ ಬಳಲಿ ಸೋತು ತನ್ನ ವಿಮುಕ್ತಿ ಅಥವಾ ವಿಮೋಚನೆ ಗೆದ್ದಿದೆ. ನನ್ನ ಮೇಲೆ ತಾನಿರಿಸಿಕೊಂಡ ವಿಶ್ವಾಸ ವಿಮೋಚನೆಂಬುದು ದೂರದ ಮಾತಾಗಲಿಲ್ಲ, ತಲುಪದ ಸ್ಥಳವಾಗಲಿಲ್ಲ, ಆಕೆಯ ಈ ಗೆಲುವು ಮಹಿಳಾ ಸಮೂಹದ ಗೆಲುವಾಗಿದೆ.
ಚಾರಿತ್ರಿಕ ಪರಂಪರೆಯಲ್ಲಿನ ಮಹಿಳೆಯ ಜಡಮೌನದ ಹಾದಿಯಲ್ಲಿ ಅವಳ ಹೆಜ್ಜೆಯ ಗುರುತುಗಳು ಸಾಹಿತ್ಯದಲ್ಲೂ ಇದ್ದು ಈ ಹುಡುಕಾಟ ಒಂದು ಸಂಕೀರ್ಣತೆಯ ವೃತ್ತವನ್ನು ಸುತ್ತುವ ಕೆಲಸವೆನಿಸುತ್ತದೆ. ಮಹಿಳಾಪರ ಚಿಂತನೆಗಳು ಬಲಗೊಳ್ಳುತ್ತಿರುವ ಇಂದಿನ ಸಂದರ್ಭದಲ್ಲಿ ಮಹಿಳಾವಾದ, ಸ್ತ್ರೀವಾದ, ಮಹಿಳಾ ವಿಮೋಚನೆಗಳು ಹಾಗೂ ವಿವಿಧ ಮಹಿಳಾ ಜಾಗೃತಿಗಳು ಸೃಷ್ಟಿಸಿಕೊಂಡಿರುವ ಹಲವು ಚಿಂತನೆಗಳು ವಿಭಿನ್ನ ವಿಚಾರಗಳೊಂದಿಗೆ ತನ್ನ ಅಸ್ತಿತ್ವವನ್ನು ಸಮಾನತೆ ಹಾಗೂ ಸ್ವತಂತ್ರ್ಯ ನೆಲೆಯಿಂದ ರೂಪಿಸಿಕೊಳ್ಳುವ ತವಕದಲ್ಲಿ ಕಳೆದ ಮರ‍್ನಾಕು ದಶಕಗಳಿಂದ ಅಧಿಕೃತಗೊಳಿಸಿಕೊಂಡು ಬಹುಶಿಸ್ತೀಯ ಮಹಿಳಾ ಅಧ್ಯಯನಗಳು ಹಾಗೂ ಮಹಿಳಾ ಸಾಹಿತ್ಯದಲ್ಲಿ ಅನ್ವಯಗೊಂಡು ಬೆಳೆಯುತ್ತಿವೆ. ಮಹಿಳಾಪರ ವಿಚಾರಗಳು ತಾತ್ವಿಕ ನೆಲೆಗಟ್ಟಿನಲ್ಲಿ ಸಾಹಿತ್ಯ, ಚಳುವಳಿ, ಹೋರಾಟಗಳಲ್ಲಿ ಮಹಿಳಾಪರ ಚಿಂತನೆಗಳು ಬೆಳೆಯುತ್ತಿವೆ. ಕನ್ನಡ ಮಹಿಳಾ ಸಾಹಿತ್ಯದಲ್ಲಿ ಅತಿಮುಖ್ಯವಾದ ಸಾಂಸ್ಕೃತಿಕ ನೆಲೆಯಲ್ಲಿ ಮಹಿಳಾವಾದವನ್ನು ಬದಲಾದ ಸಾಂಸ್ಕೃತಿಕ ನೆಲೆಯಾಗಿ ರೂಪಗೊಳಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಮಹಿಳೆ ತನ್ನನ್ನು ಕುರಿತಾದ ಸಾಹಿತ್ಯ ಹಾಗೂ ಚರಿತ್ರೆಯಲ್ಲಿನ ಪಿಸುಮಾತು
ಹೆಚ್ಚು ಪ್ರಮುಖವೆ ಎನಿಸಿಕೊಳ್ಳುತ್ತದೆ. ಜನಪದ ಹಾಗೂ ಶಿಷ್ಟ ಪರಂಪರೆಗಳಲ್ಲಿನ ಮಹಿಳೆಯ ಕುರಿತಾದ ಹೆಣ್ಣಿನ ಧ್ವನಿಯನ್ನು ಕಳೆದು ಹೋದ ಹೆಣ್ಣಿನ ಅವಸ್ಥೆಯನ್ನು, ಪುರುಷ ಚರಿತ್ರೆಯಿಂದ ಹೊರತೆಗೆದು ಮಹಿಳಾ ನೆಲೆಯಲ್ಲಿ ಅಧ್ಯಯನ ಮಾಡುವ ಕಾರ್ಯ ಈಗಾಗಲೇ ನಡೆಯುತ್ತಿದೆ. ಈ ನಿಟ್ಟಿನಲ್ಲಿ ನನ್ನದೊಂದು ಪ್ರಯತ್ನ ಪೂರಕ ಎನ್ನುವ ನಂಬಿಕೆಯಿದೆ.
ಮಹಿಳೆಯ ಜೀವನ ಹೋರಾಟ ಸಂಘರ್ಷಗಳಿಗೆ ಮೀಸಲಾದದ್ದು ಅಲ್ಲ. ಅವಳ ಇತಿಹಾಸ ಅಧೀನತೆಯಲ್ಲಿ ಕೊರಗಿದೆ. ತನ್ನ ಅಧೀನತೆಯಿಂದ ಹೊರಬಂದು ತನ್ನ ಅಸ್ತಿತ್ವವನ್ನು ನಿರೂಪಿಸಿಕೊಳ್ಳುವಲ್ಲಿ ಸ್ವತಂತ್ರ ಸಮಾನತೆಯ ಹಾದಿಯಲ್ಲಿ ನಡೆಯಬೇಕಾಗಿದೆ. ತನ್ನ ಸ್ವತಂತ್ರ ಸಮಾನತೆ ಹಾಗೂ ಸ್ವಾಭಿಮಾನಕ್ಕೆ ಅಡ್ಡಿಯಾದಾಗ ಪ್ರತಿಯೊಬ್ಬ ಹೆಣ್ಣು ಅವುಗಳನ್ನು ಪಡೆಯಲು ಅವಳದೇ ಆದ ಸ್ಥಿತಿಯಲ್ಲಿ ಹೋರಾಟ ಮಾಡುವ ವಾತಾವರಣ ಸೃಷ್ಟಿಯಾಗಬೇಕು. ಇನ್ನು ಅಕ್ಕನ ಬದುಕೇ ಒಂದು ಹೋರಾಟದ ಕಥನವಾಗಿದೆ. ಅಕ್ಕನ ವಚನಗಳಲ್ಲಿ ಮಾನವ ಸಹಜ ನಿಷ್ಠೆ, ಸತ್ಯಗಳು ಮಿಗಿಲಾಗಿ ದೈನ್ಯ, ಕೃತಜ್ಞತೆ ಈ ಎಲ್ಲಾ ಭಾವಗಳು ವ್ಯಕ್ತವಾಗಿವೆ. ಒಟ್ಟಾರೆ ಅಕ್ಕನ ವಚನಗಳು ಶಿವ ಪ್ರೇಮದಿಂದ ತುಂಬಿಕೊಂಡು ಸತ್ವಶಾಲಿಯೂ ಮಧುರವೂ ಆಗಿವೆ.
ಹೆಣ್ಣಿನ ಜೀವನ ಸಾರ್ಥಕವಾಗಬೇಕಾದರೆ ಮದುವೆ ಹಾಗೂ ದಾಂಪತ್ಯದಲ್ಲಿ ಎನ್ನುವ ಭಾವನೆ ಸಂಪ್ರದಾಯದಲ್ಲಿದೆ. ಹಾಹಾಗಿ ಹೆಣ್ಣಿನ ಬದುಕು ದಾಂಪತ್ಯದಲ್ಲಿಯೇ ಪರಿಪೂರ್ಣಗೊಳಿಸುತ್ತಾರೆ. ಸ್ವತಂತ್ರ ಹಾಗೂ ಸಮಾನತೆಗಾಗಿ ಹೋರಾಟ ನಡೆಸುತ್ತಿರುವ ಇಂದಿನ ಹೆಣ್ಣಿನ ದೃಷ್ಟಿಯಲ್ಲಿ ಈ ನಿಲುವಿನಲ್ಲಿ ವಿರೋಧವಿದೆ. ಕೆಲವು ಅಭಿಪ್ರಾಯಗಳಿಗೆ ವಿರೋಧಾತ್ಮಕವಾಗಿ ಪ್ರತಿಕ್ರಿಯಿಸುತ್ತಾ ಹೋದರೆ ಕೆಲವೊಂದು ವಿಚಾರಗಳು ಹೆಣ್ಣಿನ ನೈಜ ಸಮಸ್ಯೆಗಳತ್ತ ದೃಷ್ಟಿ ಸುತ್ತುತ್ತದೆ. ಸೂಚ್ಯವಾಗಿ ವ್ಯಕ್ತವಾದ ವಿಚಾರಗಳಿಗೆ ಸಂಪ್ರಾಯಿತ್ವದ ಬದುಕು ಹಾಗೂ ಅವಳಿದ್ದದ್ದು ಸಮಾಜ ವ್ಯವಸ್ಥೆಯ ಆದರ್ಶದ ನೈತಿಕತೆಯ ಪರಿಪಾಲನೆಯೇ ಆಗಿದೆ. ಸಾಹಿತ್ಯದ ನಿರೂಪಣೆಗಳಲ್ಲಿ ಅಂದಿನ ಹೆಣ್ಣಿನ ಜೀವಂತ ಚಿತ್ರಣವಾಗಿ, ಅಂದಿನ ಸಮಾಜದ ಹೆಣ್ಣಿನ ಸ್ಥಿತಿಗತಿಗಳ ಪ್ರತಿರೂಪದಂತಿವೆ. ಪತಿಯೇ ಪರದೈವ ಎಂಬ ಮೌಲ್ಯಪಾಲನೆ ಅಂದಿನ ಸಂಪ್ರದಾಯ ಸಮಾಜದ ನಿರೀಕ್ಷೆಯಾಗಿತ್ತು.
ಸಂಪ್ರದಾಯ ಸಮಾಜದ ನಿರೀಕ್ಷೆಗಳನ್ನು ಗಾಳಿಗೆ ತೂರಿದ ವೈಚಾರಿಕ ಪ್ರಜ್ಞೆಯುಳ್ಳ ಮಹಾದೇವಿಯಕ್ಕ ಸಂಸಾರವನ್ನು ತೊರೆದ ವೈಯಕ್ತಿಕ ಸಾಧನೆಯ ಕುರುಹಾಗಿ ಆಧ್ಯಾತ್ಮದ ತುತ್ತ ತುದಿಯಲ್ಲಿ ಶೋಭಿದ ಸ್ತ್ರೀಶಕ್ತಿ. ಅಕ್ಕ ತನ್ನ ಹೋರಾಟದ ಬದುಕಲ್ಲಿ ತೋರಿದ ದಿಟ್ಟತನ, ಏರಿದ ಆಧ್ಯಾತ್ಮತಿಕ ಎತ್ತರ ಹಾಗೂ ಅನುಭಾವಕ್ಕೆ ಗೌರವ, ಅತೀತವಾದದು.
ಅಕ್ಕನಿಗೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸತಿಧರ್ಮ ಮುಖ್ಯವಾಗಿ ವ್ಯಕ್ತಿ ಸ್ವಾತಂತ್ರ ಪ್ರಿಯವಾಯಿತು. ಅಕ್ಕನ ದಿಟ್ಟತನ ನಿಲುವು ಸ್ವಾಭಾತಃ ಕುಟುಂಬಕ್ಕೆ ಅಂಟಿದ ಸಾಧ್ವಿಯಾಗಿ ಬದುಕಲು ಸಾಧ್ಯವಿಲ್ಲ. ಇಪ್ಪತ್ತರ ಎಳೆಹರಿಯದಲ್ಲಯೇ ಉನ್ನವಾದ ಆಧ್ಯಾತ್ಮಿಕ ತತ್ವಗಳನ್ನು ಪ್ರತಿಪಾದಿಸಿದ್ದಾಳೆ. ಈಕೆ ಎಲ್ಲರಂತೆ ಪತಿ, ಮನೆ, ಮಕ್ಕಳು ಇದಕ್ಕಾಗಿ ಹುಟ್ಟಿದವಳಲ್ಲ. ಅವಳ ಬಾಳು ಸಮಾಜವನ್ನು ಮುನ್ನಡೆಸಲಿಕ್ಕಾಗಿ ಅಂದಿನವರೆಗೆ ತುಳಿಯಲ್ಪಟ್ಟ ಮಹಿಳಾ ಕುಲದ ಸ್ವಾತಂತ್ರಕ್ಕಾಗಿ ಹೋರಾಟ ನಡೆಸಲು ಮೀಸಲಾಗಿರುವಂತೆ ಅನಿಸುತ್ತದೆ. ಲೋಕಪತಿಯಿಂದ ದೂರವಾಗಿ ಶ್ರೀಶೈಲ ಮಲ್ಲಿಕಾರ್ಜುನನನ್ನು ಆರಿಸಿಕೊಳ್ಳುವಲ್ಲಿಯೇ ಅವಳಗೆ ಪರಮಾನಂದವಿದೆ, ಅವಳ ಬಂಡಾಯವೂ ಇದೆ. ಜೀವ ನೊಂದಾಗ ಬೆಂದಾಗ ಆ ನೋವು ಸಾಹಿತ್ಯವಾದಾಗ ಅದು ಅಮರ ಕೃತಿಯಾಗುತ್ತದೆ. ಅಕ್ಕನ ವಚನಗಳು ವಿಶ್ವ ಸಾಹಿತ್ಯದ ಶ್ರೇಷ್ಟ ಕವಿತೆಗಳ ಸಾಲಿನಲ್ಲಿ ನಿಲ್ಲುವಂಥವು. ಅಕ್ಕನ ಅಲೌಕಿಕ ಪತಿಪ್ರೇಮ ಭಕ್ತಿ, ಕಾಯರಹಿತ ಚೆನ್ನಮಲ್ಲಿಕಾರ್ಜುನನಲ್ಲಿಟ್ಟು ಅನುರಾಗವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾಳೆ.
ಅಕ್ಕ ಈ ದೇಹವನ್ನು ಕುರಿತು ಹೇಳುವಾಗ ‘ಅಮೇಧ್ಯದ ಮಡಿಕೆ, ಮೂತ್ರದ ಕುಡಿಕೆ, ಎಲುಬಿನ ತಡಿಕೆ,’ ಇದು ಅಕ್ಕನ ವೈರಾಗ್ಯಕ್ಕೆ ಹಿಡಿದ ಕನ್ನಡಿ. ಅಕ್ಕನ ಈ ಭಕ್ತಿ ಸಾಮಾನ್ಯ ಮಹಿಳೆಯರ ಊಹೆಗೂ ನಿಲುಕದ ವಿರಾಗಿನೆಲೆಯ ಆಧ್ಯಾತ್ಮಿಕ ಭಕ್ತಿ. ಅಕ್ಕಮಹಾದೇವಿ ತಾನು ಬರೆಯಬೇಕೆಂದು ಬರೆದವಳಲ್ಲ. ಇನ್ನೊಬ್ಬರ ಉಪಯೋಗಕ್ಕೊ, ನಿರ್ದೇಶನ ಮಾಡವ ಉದ್ದೇಶ ಇಟ್ಟುಕೊಂಡವಳಲ್ಲ. ಅಕ್ಕನ ರಚನೆಗಳು ಅವಳ ಬದುಕಿನ ಕ್ರಮವಾಗಿದೆ. ಅವು ಅವಳ ಬದುಕಿನ ವಿಧಾನದ ವಿಶ್ಲೇಷಣೆಯೇ ಆಗಿದೆ.
ಕುಟುಂಬದ ಬಗೆಗಿನ ಹಾಗೂ ದಾಂಪತ್ಯ ವಿಚಾರಳಗಲ್ಲಿನ ಅಕ್ಕನ ನಿಲುವುಗಳು ಸತಿಪತಿಭಾವವಿದ್ದಂತೆ ಭಾವ-ಬಂಧನದಲ್ಲಿ ಅಧೀನತೆಯಿದೆ. ಅಕ್ಕ ಅಂತರಂಗಿಕ ನೆಲೆಯಲ್ಲಿ ಅಧೀನತೆ ಶವನನ್ನೆ ಪತಿಯೆಂದು ಭಾವಿಸಿದಳು. ಅಕ್ಕನ ನಿಲುವುಗಳು ಪ್ರಸ್ತುತ ಸಾಂದರ್ಭಿಕ ಸ್ತ್ರೀ ಒಲುವುಗಳಿಗೆ ತಾತ್ವಿಕವಾಗಿ ಒಗ್ಗಿಕೊಳ್ಳುತ್ತವೆ. ಪುರುಷ ಪ್ರಧಾನ ನಿಲುವುಗಳಿಗೆ ಆಕೆಯಲ್ಲಿನ ಒಪ್ಪಿಗೆಯೇ ಈ ವಿರೋಧಕ್ಕೆ ಮೊದಲ ಕಾರಣ. ಪುರುಷ ಪ್ರಧಾನ ವೈದಿಕ ಸಂಪ್ರದಾಯಗಳ ಮಧ್ಯೆ ತನ್ನ ಆಸ್ಮಿತೆ ಉಳಿಸಿಕೊಂಡ ಅಕ್ಕ ಸ್ತ್ರಿವಾದದ ನೆಲೆಯ ವಿವೇಚನೆಯಲ್ಲಿ ಸ್ತ್ರೀಯಾತ್ಮಕ ಮಾದರಿಯಲ್ಲಿ ಕಾಣುತ್ತಾಳೆ. ಆದರೆ ಲಿಂಗಬೇಧ, ಲಿಂಗತಾರತಮ್ಯಗಳಿಗೆ ವಿರೋಧವಿದೆ. ಅಕ್ಕನಲ್ಲಿ ಸಮಾಜವನ್ನು ಎದುರಿಸುವ ಧೈರ್ಯವಿದೆ. ಸಮಾಜಕೇಂದ್ರಿತ ನಿಲುವುಗಳು ‘ವಿವೋಚನೆ’ ಮಾದರಿಯಾಗಿವೆ. ಈ ವಿಚಾರಗಳನ್ನು ವಿಶ್ಲೇಷಣೆ ಮಾಡುವಾಗ ಕೆಲವು ವಿಚಾರಗಳಲ್ಲಿ ಸಮಾನವಾಗಿಯೂ ವಿರುದ್ಧವಾಗಿಯೂ ಕಾಣುತ್ತವೆ.
ಕೌಟುಂಬಿಕ, ಧಾರ್ಮಿಕ, ಸಾಮಾಜಿಕ, ರಾಜಕೀಯ ರಚನೆ-ಸಂಸ್ಥೆಗಳೆಲ್ಲದರಲ್ಲು ಅಂತರ್ಗತವಾಗಿರುವ ಲಿಂಗತಾರತಮ್ಯ, ಹಿಂಸೆ ಅಸಮಾನತೆ ತುಂಬಿಕೊಂಡಿದೆ. ಇದು ವಾಸ್ತವ. ಆದರೆ ಆಧುನಿಕ, ಪ್ರಜಾಪ್ರಭುತ್ವದಲ್ಲಿ ಲಿಂಗಾಧಾರಿತ ಹಿಂಸೆ ಅಸಮಾನತೆ ಇನ್ನೂ ಜೀವಂತವಾಗಿರಲು ಕಾರಣಗಳೇನು? ಕುಟುಂಬವ್ಯವಸ್ಥೆಯ ರಾಚನಿಕ ಲೋಪಗಳು ಲಿಂಗಾಧಾರಿತ ಅಸಮಾನತೆಯ ಹಿಂಸೆಗಳಾಗಿ ಜೀವಂತವಾಗಿಲು ಪ್ರಮುಖ ಕಾರಣಗಳು
ಕುಟುಂಬ ವ್ಯವಸ್ಥೆಯಿಂದ ‘ವಿಮೋಚನೆ’ ಪಡೆದು, ವೈಯಕ್ತಿಕ ಸ್ವತಂತ್ರದ ಆಧುನಿಕ ಬೀಜ ಬಿತ್ತಿದ ಅಕ್ಕನ ರೋಚಕ ಬದುಕು, ಹೆಣ್ಣಿನ ಕುಲಕ್ಕೆ ಒಂದು ಇತಿಹಾಸ. ಈ ಗಟ್ಟಿತನದ ರೋಚಕತೆಯಲ್ಲಿ ದೈಹಿಕ ಹಾಗೂ ಮಾನಸಿಕವಾದ ಹಿಂಸೆ, ಕ್ರೌರ್ಯ, ನೋವು, ಯಾತನೆ, ಅವಮಾನಗಳ ವಿರುದ್ಧದ ಹೋರಾಟವಿದೆ. ಮತ್ತು ಇವುಗಳಿಗೆ ತನ್ನ ಪ್ರತಿಭಟನೆಯೂ ಇದೆ. ಸಂಪ್ರದಾಯಿಕ ಸಂಬಂಧಗಳಿಂದ ಹೊರಬಂದು ಪರ್ಯಾಯ ನೆಲೆಯಲ್ಲಿ ತನ್ನ ಅಸ್ತಿತ್ವವನ್ನು ರೂಪಿಸಿಕೊಂಡ ಹೊಸತನವಿದೆ. ಇಲ್ಲಿ ಅಕ್ಕ ತನ್ನ ನಿಲುವುಗಳಿಗೆ ಅಚಲವಾಗಿ ಅಂಟಿಕೊಳ್ಳುವಿಕೆಯಿದೆ. ಹಾಗೆಯೇ, ತೀರಾ ಅಡ್ಡಿಯಾದಂತೆ ಅನಿವಾರ್ಯತೆಯೊಂದಿಗೆ ಅವುಗಳಿಂದ ವಿಮೋಚನೆ ಪಡೆಯುವ ಧೈರ್ಯ ಮತ್ತು ವಿವೇಚನೆಯ ಜ್ಞಾನವೂ ಇದೆ. ಹೆಣ್ಣಿನ ಅಸ್ಮಿತೆಯ ವಿಚಾರ ಬಂದಾಗ ಅಕ್ಕನ ‘ವಿಮೋಚನೆ’ಗಾಗಿ ತಳೆದ ಮಾನಸಿಕ ಹಾಗೂ ಆಕೆಯ ಹೋರಾಟದ ನಿಲುವುಗಳು ಸ್ಫೂರ್ತಿಯಾದರೂ, ಅಕ್ಕನ ಆರಿಸಿಕೊಂಡ ದಾರಿ ಮಾತ್ರ ತುಂಬಾ ಕಠಿಣ.
ಕಾಯಾ ವಾಚಾ ಮನಸಾ ತ್ರಿಕರಣ ಲಿಂಗಕ್ಕೆ ಅರ್ಪಿಸಿ ರತಿ ಸುಖ ಪಡೆಯುವ ಅಕ್ಕನ ಧೋರಣೆ. ದಾಂಪತ್ಯ ಸುಖದ ಹೊನಲಿದೆ. ತನ್ನೆಲ್ಲಾ ಸೌಂದರ್ಯವನ್ನು ಇಷ್ಟದೈವಕ್ಕೆ (ಶಿವನಿಗೆ) ಮೀಸಲಿಡುವ ಈ ನಿಲುವಿನಲ್ಲಿ ಪ್ರೇಮದ ಆರ್ಕಣೆಯಿದೆ, ಅರ್ಪಣೆಯಿದೆ. ಕಾಲ ಬದಲಾದರೂ ಇತಿಹಾಸ-ಋತುಗಳ ಮಗ್ಗಲುಗಳು ಬದಲಾದರೂ ಪ್ರೇಮದ ಹೊನಲು ಮನಸ್ಸಿನ ಭಾವನೆಗಳಾಗಿ ಪರಸ್ಪರ ಜೊತೆಗೂಡಿ ಹೊರಳುತ್ತದೆ. ಸಹೃದಯದ ಪ್ರೇಮವು ಎತ್ತಲೆಲ್ಲಾ ಚಾಚಿಕೊಂಡಿದೆ ಎನ್ನುವ ಸೋಜಿಗ ಜೀವನ ಪ್ರೀತಿ, ಮುಗ್ಧತೆ ಒಂದೇ ಎಂಬ ಭಾವ, ಪರಸ್ಪರ ತಿಳುವಳಿಕೆಗಳು ಪ್ರೇಮದ ಕಾಂತಿಯನ್ನು ಹಿಗ್ಗಿಸುತ್ತವೆ. ಒಲುಮೆಯ ಕೋಡಿ ಏರಿ ಹರಿದಾಗ ಪ್ರೇಮ ಸೊಗಸಾಗಿ ಮುದನೀಡಿ ಕಾರುಣ್ಯ ಚಿಲುಮೆಯಾಗುತ್ತದೆ. ಈ ಪ್ರೇಮ ಎನ್ನುವುದು ಕರೆದರೆ ಬರುವ, ಅರಿದರೆ ಹುಟ್ಟುವ ಭಾವನೆಯಲ್ಲ. ಕಾಲ ಬದಲಾದರೂ ಪ್ರೇಮದ ಮಹಿಮೆಗೆ ಪ್ರೇಮವೇ ಶರಣಾಗಬೇಕು. ಯಾವೂದೇ ಅಡ್ಡಿಗಳು ಕ್ಷಣವಷ್ಟೇ ಆಗಿಬಿಡುತ್ತವೆ. ತನ್ನದೇ ಬಾವಲಹರಿಯಲ್ಲಿ ಹರಿಯುವ ಈ ಪ್ರೇಮ ನದಿಗೆ ಅದೆಷ್ಟೋ ಸಂಕಷ್ಟಗಳು ಸೇರಿಕೊಂಡರೂ ತಿಳಿಯಾಗಿ ಬಿಡುತ್ತದೆ. ಹೆದರಿ ತನ್ನ ಪಥವನ್ನು ಬದಲಾಯಿಸುವುದಿಲ್ಲ.
ಹೀಗೆ ಪ್ರೇಮ ತನ್ನ ಕಾಂತಿಯನ್ನು ಕೊನೆಯವರೆಗೂ ಧನಾತ್ಮಕ ಯೋಜನೆಗಳು ಕಳಚಿಕೊಳ್ಳುತ್ತಾ ಋಣಾತ್ಮಕ ಚಿಂತನೆಗಳು ಎದ್ದು ಕುಳಿತು ಬದುಕನ್ನು ಬದುಕಿಸುತ್ತದೆ. ಅಲ್ಲಿನ ಮುಗ್ಧತೆಯ ಭಾವದೊಂದಿದೆ ತಿಳುವಳಿಕೆಯ ಒಪ್ಪಂದಗಳು ತಾವು ಒಂದೇ ಎಂಬ ಭಾವದೊಡಗೂಡಿರಬೇಕು. ನಾನು ನನ್ನದೆಂಬ ಸ್ವ-ಪ್ರತಿಷ್ಟೆಯ ಹಮ್ಮು ಪ್ರೇಮವನ್ನು ಅಲಂಕರಿಸದೆ ಮೆಲ್ಲುಸಿರನ ಪ್ರೇಮವು ಅಹಂಕಾರಿಕ ವರ್ತುಲಗಳನ್ನು ದಾಟಿ ಹೋಗುತ್ತದೆ. ಒಳಮನಸ್ಸಿನ ಭಾವನೆಗಳನ್ನು ಕೇಳುವ ಕಿವಿಗಳನ್ನು ಇಡಿದಿಟ್ಟುಕೊಳ್ಳುಬೇಕು. ನಿರಾಭರಣದಂತಿರುವ ಈ ಪ್ರೇಮ ಆಡಂಬರದ ಸುಪ್ಪತಿಗೆ ಏರಿದರೆ, ದಾಂಪತ್ಯದಲ್ಲಿ ಮಾತು ಮಾತಿಗೊಂದು ಪ್ರತಿಮಾತು, ತರ್ಕಕ್ಕೆ ವಿತರ್ಕ, ವಾದಕ್ಕೆ ಪ್ರತಿವಾದ ವಿತಂಡವಾದ, ಸೋಲೊಪ್ಪಿಕೊಳ್ಳದ ಮನಸ್ಥಿತಿ, ನಾನೇನು ಕಡಿಮೆಯೇ ಎಂಬ ಅಹಂ, ಹಣಿಸಲು ಕಾಯುವ ಮನಸ್ಸು, ಚುಚ್ಚಲು ಹೊಂಚು, ಹೀಗೆ ಹಲವು ಸಮರ್ಥನೆಗಳು ದಾಂಪತ್ಯ ಪ್ರೇಮದ ಭಾವ ಜಗತ್ತಿನೊಳಗೆ ವಿಷಬೀಜವಾಗಿ ಜೀವನ ನರಕವಾಗುತ್ತದೆ. ಗಂಡು-ಹೆಣ್ಣು ಎನ್ನುವುದು ಕೇವಲ ದೇಹಗಳಷ್ಟೇ ಅಲ್ಲ. ಅವು ಒಂದರೊಳಗೊಂದು ಬದುಕನ್ನು ಹುಡುಕುತ್ತಾ ಕಟ್ಟುತ್ತಾ, ಕೆಡವಿತ್ತಾ ಮತ್ತೆ ಕಟ್ಟುವ ಕಾಯಕದಲ್ಲಿ ನಿರತವಾಗಿರುತ್ತವೆ. ದಾಂಪತ್ಯ ಪ್ರೇಮದ ಸುಖವು ಸುಂದರವೂ ಆಗಿರಬೇಕಿದ್ದರೆ, ಒಂದಿಷ್ಟು ಬಾಗಬೇಕು ಆಗಲೇ ಒಬ್ಬರ ಬೆನ್ನು ಮತ್ತೊಬ್ಬರಿಗೆ ಕಾಣುವುದು. ಆ ಬಾಗುವಿಕೆಯಲ್ಲಿ ಪರಸ್ಪರ ದಾಂಪತ್ಯ ಪ್ರೇಮ ಅಸ್ವಾಧಿತವಾಗುವುದು. ಹೀಗೆ ಅಸ್ವಾದಿಸಿದಾಗ ಸಮರ್ಥ ಬದುಕಿನ ಅರ್ಥವು ತಾನಾಗಿಯೇ ಪ್ರಾಪ್ತಿಸುತ್ತದೆ. ಹಾಗಾಗಿ ಪರಸ್ಪರ ಬಾಗುವಿಕೆಗಿಂತ ಬೇರೆ ತಪವಿಲ್ಲ.
ದಾಂಪತ್ಯದ ಎರಡು ಮನಸ್ಸುಗಳು ಪರಸ್ಪರ ಮಾಸದಂತೆ ಏಕೀಭನವಿಸುಕೆಯ ಅಬೇಧತೆ ಸುಖಮತೆಯ ದಾಂಪತ್ಯ. ಶೂನ್ಯದ ಬಿಂದುವಿನಿಂದ ಆರಂಭಿಸಿ ಪುನಃ ಅದೇ ಬಿಂದುವಿನಲ್ಲಿ ತಂದು ನಿಲ್ಲಿಸುವಂತೆ ಅಕ್ಕನ ಆಧ್ಯಾತ್ಮಿಕ
ವಿಚಾರಗಳು ಅದ್ವೈತ ನಮ್ಮ ಲೌಕಿಕವಾಗಿ ಸಮರ್ಪಣೆಯ ಭಾವದಲ್ಲೇ ದಾಂಪತ್ಯ ಸಾಗಬೇಕು. ಪರಸ್ಪರ ಅವಲಂಬನೆಯಿದ್ದರೆ ಸಾಕು ಆದರೆ, ಅದು ಇಬ್ಬರಿಗೂ ಹೊರೆಯಾಗಬಾರದು. ಹಾಗೆಯೇ, ಪರಸ್ಪರ ಸಮಾನತೆಯಡಿಯಲ್ಲಿ ಸ್ವಾತಂತ್ರ, ಸ್ವಾಭಿಮಾನ, ಗೌರವ ಉಳಿಸಿಕೊಂಡಾಗಷ್ಟೇ ದಾಂಪತ್ಯಕ್ಕೆ ನಿಜವಾದ ಅರ್ಥದಲ್ಲಿ ಪರಿಪೂರ್ಣತೆ ಸಿಗುವುದು.
"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...
ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...
"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...
©2025 Book Brahma Private Limited.