ಅಪರೂಪದ ಕವಿ-ವಾಗ್ಮಿ ನಮ್ಮ ಪ್ರೊ.ಜಿ.ಎಸ್. ಸಿದ್ಧಲಿಂಗಯ್ಯ


"ಸಾಹಿತ್ಯ ವಲಯದ ಗುಂಪುಗಾರಿಕೆಯಿಂದ ಬಲುದೂರ ಉಳಿದಿರುವ ಸಿದ್ಧಲಿಂಗಯ್ಯನವರದು ಬಹುತೇಕ ಒಂಟಿ ಪಯಣವೇ. ಇವರಿಗೆ ಆಪ್ತರೆನ್ನುವವರಿದ್ದಾರೆಯೇ ಎಂದು ಅನುಮಾನ ಬರುವಷ್ಟು ಮಿತ ಅವರ ಗೆಳೆಯರ ಸಂಖ್ಯೆ. ಇದಕ್ಕೆ ಮುಖ್ಯ ಕಾರಣವೆಂದರೆ ಸಿದ್ಧಲಿಂಗಯ್ಯನವರ ಶಿಸ್ತು ಮತ್ತು ನೇರ ನಿಷ್ಠುರವಾದ ಗುಣ," ಎನ್ನುತ್ತಾರೆ ಎಚ್.ಎಸ್. ಸತ್ಯನಾರಾಯಣ. ಅವರು ಇಂದು ನಿಧನರಾದ ಜಿ.ಎಸ್. ಸಿದ್ಧಲಿಂಗಯ್ಯನವರ ಕುರಿತು ಬರೆದ ನೆನಪಿನ ನುಡಿಗಳಿವು..

ಪುಟ್ಟಶಾಲೆಯೊಂದರ ಆವರಣದಲ್ಲಿ ಕುವೆಂಪು ಸಾಹಿತ್ಯ ಕುರಿತ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಸಚಿವರಾಗಿದ್ದ ವೈ ಕೆ ರಾಮಯ್ಯನವರು ಅದ್ಭುತವಾಗಿ ಮಾತಾಡಿದರು. ರಾಜಕಾರಣಿಯೊಬ್ಬರ ಸಾಹಿತ್ಯಜ್ಞಾನವನ್ನು ಕಂಡು ಅಚ್ಚರಿಪಡುತ್ತಿರುವಾಗಲೇ ಕುವೆಂಪು ಕಾವ್ಯವನ್ನು ಕುರಿತು ಜಿ ಎಸ್ ಸಿದ್ಧಲಿಂಗಯ್ಯನವರು ಎಂಥ ಸೊಗಸಾಗಿ ಮಾತಾಡಿದರೆಂದರೆ ಮೂವತ್ತೆಂಟು ವರುಷಗಳ ನಂತರವೂ ಅವರಾಡಿದ ಮಾತುಗಳು ಅಚ್ಚಳಿಯದೆ ಉಳಿದುಬಿಟ್ಟಿದೆ! ಅಂಥ ಅಪರೂಪದ ಮಾತುಗಾರಿಕೆ ಅವರದು. ‘ಕನ್ನಡ ಕಾವ್ಯ ಪರಂಪರೆ ಮತ್ತು ಕುವೆಂಪು’ ಎಂಬ ವಿಷಯವನ್ನು ಕುರಿತು ಅವರಂದು ಮಾತಾಡಿದ್ದು. ಅವರ ಒಂದೂ ಪುಸ್ತಕವನ್ನು ಓದದೆಯೂ ನಾನು ಅವರ ‘ಮಾತುಗಾರಿಕೆಯ’ ಕಾರಣ ಮಾತ್ರದಿಂದಲೇ ಅವರ ಅಭಿಮಾನಿಯಾಗಿಬಿಟ್ಟಿದ್ದೆ!

ನಾನು ಮತ್ತು ಗೆಳೆಯ ಡಾ ಬಿ ಎಂ ಪುಟ್ಟಯ್ಯ ಐದು ವರ್ಷಗಳ ಕಾಲ ಸಹಪಾಠಿಗಳು. ಎಲ್ಲಿ ಜಿ ಎಸ್ ಸಿದ್ಧಲಿಂಗಯ್ಯನವರ ಭಾಷಣವಿದ್ದರೂ ಓಡಿಹೋಗಿ ಮುಂದೆ ಕುಳಿತು ಇವರ ಮಾತುಗಳನ್ನಾಲಿಸುತ್ತಿದ್ದೆವು! ಎಷ್ಟೋ ದಿನಗಳವರೆಗೂ ಅವರ ಮಾತನ್ನು ಮಧ್ಯೆ ಮಧ್ಯೆ ತೂರಿಬರುತ್ತಿದ್ದ ನಗೆಚಾಟಿಕೆಗಳನ್ನು ನೆನಪಿಸಿಕೊಂಡು ಸುಖಿಸುತ್ತಿದ್ದೆವು. ಈಗಲೂ ಒಟ್ಟಾದಾಗ ಅವನ್ನೆಲ್ಲ ಮೆಲುಕುಹಾಕುತ್ತಿರುತ್ತೇವೆ.

ಅದೃಷ್ಟವೆಂದರೆ ಇವರು ಪದೇ ಪದೇ ಚಿಕ್ಕಮಗಳೂರಿಗೆ ಬರುತ್ತಿದುದು. ಡಿವಿಜಿ ಕುವೆಂಪು ಮಾಸ್ತಿ ಹಾಮಾನಾ ವೀ ಸಿ ಮುಂತಾದವರ ಬಗ್ಗೆ ಇವರು ಮಾತಾಡಿದ್ದರು. ಅಲ್ಲದೆ ನಮ್ಮ ಪದವಿ ಕಾಲೇಜಿನ ಕನ್ನಡ ಸಂಘದ ಉದ್ಘಾಟನಾ ಸಮಾರಂಭದ ಅತಿಥಿಯಾಗಿ ಬಂದಾಗಲೂ ವಿದ್ಯಾರ್ಥಿಗಳನ್ನು ನಗೆಗಡಲಲ್ಲಿ ತೇಲಿಸಿದ್ದರು. ನಾನು ಅವರಿಂದ ಬಹುಮಾನ ಸ್ವೀಕರಿಸಲು ವೇದಿಕೆಗೆ ಹೋದಾಗ “ಏನ್ ಕಿಸ್ದಿದೀಯ ಅಂತ ಪ್ರೈಜ್ ಬಂದಿದೆ?” ಅಂತ ನಗಾಡಿದ್ದರು. ಸಾಮಾನ್ಯವಾಗಿ ಬಹುಮಾನ ವಿತರಿಸುವ ಅತಿಥಿಗಳು ಅಭಿನಂದನೆ ಹೇಳಿವುದು ಸಾಮಾನ್ಯ. ಆದರೆ ಈ ಕವಿ ಅತಿಥಿ ಕಿಚಾಯಿಸಿದ್ದನ್ನು ಮರೆಯಲಾಗಿಲ್ಲ! ಅವರಿಂದ ಬಹುಮಾನ ಪಡೆಯುತ್ತಿರುವ ಫೋಟೊ ನೋಡಿದಾಗಲೆಲ್ಲ ನಗುಬರುತ್ತಿರುತ್ತದೆ.

ಒಮ್ಮೆ ಪ್ರವಾಸಿ ಮಂದಿರದಲ್ಲಿ ಉಳಿದುಕೊಂಡಿದ್ದ ಈ ಕವಿಯ ಉಪಚಾರಕ್ಕಾಗಿ ನಾನು ನಿಯೋಜಿತನಾಗಿದ್ದೆ. ಆಗ “ಪಚಬಾಳೆ ಹಣ್ಣು ತಂದುಕೊಡಲು ಸಾಧ್ಯವೇ? ಕಾರಲ್ಲಿದ್ದೊವನ್ನ ಕಪಿಗಳು ಧ್ವಂಸ ಮಾಡಿಬಿಟ್ಟಿವೆ” ಅಂದರು. “ಕೋತಿಗಳು ದಾಳಿ ಮಾಡಿದವೇ ಸರ್, ಎಲ್ಲಿ ಸರ್?” ಎಂದೆ. “ಅಯ್ಯೊ ನನ್ನ ಜೊತೆ ಬಂದ ಕಪಿಗಳು ಕಣ್ರೀ!” ಅಂತ ಜೋರಾಗಿ ನಗಾಡಿದರು. ಆಮೇಲೆ ಅರ್ಥವಾಯ್ತು ಸಹಕವಿಗಳನ್ನು ಅವರು ಕಪಿಗಳೆಂದಿದ್ದೆಂದು!

ಮಾತಾಡುವಾಗ ಎಷ್ಟು ಹಾಸ್ಯ ಮಾಡಬಲ್ಲರೋ ಅಷ್ಟೇ ಗಂಭೀರ ಕೆಲಸದಲ್ಲಿ! ತುಂಬಾ ಅಚ್ಚುಕಟ್ಟು, ಶಿಸ್ತು ಅವರ ವ್ಯಕ್ತಿತ್ವದಲ್ಲಿ! ಹಾಗಾಗಿ, ಇತರರಿಂದಲೂ ಆ ಪರಿಪೂರ್ಣತೆಯನ್ನು ನಿರೀಕ್ಷಿಸುತ್ತಿದ್ದರು.

ಅನಂತಮೂರ್ತಿಯವರಿಗೆ ಜ್ಞಾನಪೀಠ ಬಂದಾಗ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಅದೆಷ್ಟು ಸೊಗಸಾಗಿ ಅಭಿನಂದನಾ ಭಾಷಣ ಮಾಡಿದ್ದರು! ಅನಂತಮೂರ್ತಿ ಸಂತೋಷವನ್ನು ಹತ್ತಿಕ್ಕಿಕೊಳ್ಳಲಾಗದೆ ಎದ್ದುಹೋಗಿ ಅಪ್ಪಿಕೊಂಡುಬಿಟ್ಟಿದ್ದರು! ವಿದ್ವತ್ಪೂರ್ಣ ವಿಚಾರ ಮಂಡನೆಯ ಜೊತೆಜೊತೆಯಲ್ಲೇ ನವಿರಾದ ಹಾಸ್ಯ ಬೆರೆತ ನಿರೂಪಣಾ ಕ್ರಮ ಇವರದು. ಪಂಪ, ರನ್ನ, ಹರಿಹರ ಯಾರ ಬಗ್ಗೆ ಮಾತನಾಡಿದರೂ ಇದೇ ಕ್ರಮ ಅವರು ಅನುಸರಿಸುವುದು. ವಚನಕಾರರ ಬಗ್ಗೆ ಇವರ ಮಾತುಗಳನ್ನು ಕೇಳುವುದಂತೂ ಅಪೂರ್ವಾನುಭವ! ಯಾವುದೇ ವಿಚಾರವನ್ನೂ ಆಕರ್ಷಕವಾಗಿ ಮಂಡಿಸುವ ಇವರ ಭಾಷಣ ಕಲೆಯನ್ನು ಇನ್ನಾರಲ್ಲೂ ಕಂಡ ಅನುಭವ ನನಗಿಲ್ಲ!

ಇತ್ತೀಚೆಗೆ ವೃದ್ಧಾಪ್ಯದ ಕಾರಣ ಉಪನ್ಯಾಸಗಳಿಗೆ ಸುಲಭವಾಗಿ ಸಮ್ಮತಿಸುವುದಿಲ್ಲ. ಕೋಲೂರಿಕೊಂಡು ನಡೆಯಬೇಕಾದ ಹಿಂಸೆ. ಹೀಗೆ ನಡೆದುಕೊಂಡೇ ಸಾಹಿತ್ಯ ಅಕಾಡೆಮಿಯ ಕವಿಗೋಷ್ಠಿ ಉದ್ಘಾಟಿಸಲು ಬಂದಿದ್ದರು. ನಿರೂಪಣೆ ಮಾಡುತ್ತಿದ್ದ ನಾನು ಅವರ ಕೃತಿಗಳ ಪಟ್ಟಿ ಹೇಳಲು ಆರಂಭಿಸಿದೊಡನೆ ಕಿರಿಕಿರಿಯಿಂದ “ನಾನೇನ್ ಹೊಸಬನೇನ್ರಿ, ಎಲ್ಲಾರ್ಗೂ ಗೊತ್ತೀರೋದನ್ನೆ ಮತ್ತೆ ಯಾಕೆ ಹೇಳಿ ಟೈಂ ವೇಸ್ಟ್ ಮಾಡ್ತೀರ?” ಎಂದವರೇ ಎದ್ದುನಿಂತು ಭಾಷಣ ಆರಂಭಿಸಿಯೇ ಬಿಟ್ಟರು! ನಿಘಂಟು ರಚನಾ ಸಭೆಗೆ ಬಂದಾಗಲೂ ಸಮಯ ಪರಿಪಾಲನೆಗೆ ತುಂಬಾ ಒತ್ತು ನೀಡಿದ್ದರು. “ನಮ್ ದೇಶ ಅರ್ಧ ಹಾಳಾಗಿರೋದೆ ಟೈಮ್ ಸೆನ್ಸ್ ಇಲ್ಲದೇ ಇರೋದರಿಂದ” ಅಂತ ಸಿಟ್ಟಿನಲ್ಲಿ ಮುಖ ಊದಿಸಿಕೊಂಡೇ ಹೇಳಿದ್ದರು!

ಕಾವ್ಯ ಮತ್ತು ವಿಮರ್ಶೆ ಎರಡೂ ಇವರಿಗೆ ತುಂಬ ಪ್ರಿಯವಾದ ಕ್ಷೇತ್ರಗಳು. ರಸಗಂಗೆ, ಋಷ್ಯಶೃಂಗ, ಐವತ್ತರ ನೆರಳು, ಬಿಂದು, ಮುಖಾಮುಖಿ, ಮಣ್ಣಿಗಿಳಿದ ಆಕಾಶ ಮುಂತಾಗಿ ಒಂಬತ್ತು ಕವನ ಸಂಕಲನಗಳನ್ನೂ ಲಕ್ಮೀಶ, ರತ್ನಾಕರವರ್ಣಿ, ಶೂನ್ಯಸಂಪಾದನೆಯಿಂದ ಹಿಡಿದು ನವ್ಯ ಕಾವ್ಯದವರೆಗೆ ಸುಮಾರು ಇಪ್ಪತ್ತೈದು ವಿಮರ್ಶಾ ಕೃತಿಗಳನ್ನು ಕನ್ನಡಕ್ಕೆ ನೀಡಿದ್ದಾರೆ. ಜೀವನಚರಿತ್ರೆ ಹಾಗೂ ಸಂಪಾದಿತ ಕೃತಿಗಳ ಸಂಖೆಯೂ ಕಡಿಮೆ ಇಲ್ಲ. ಆದರೂ ಜಿ ಎಸ್ ಸಿದ್ಧಲಿಂಗಯ್ಯನವರು ಗುರುತಿಸಲ್ಪಡುವುದು ಕವಿ ಮತ್ತು ವಾಗ್ಮಿಯೆಂದೆ!

ಸಾಹಿತ್ಯ ವಲಯದ ಗುಂಪುಗಾರಿಕೆಯಿಂದ ಬಲುದೂರ ಉಳಿದಿರುವ ಸಿದ್ಧಲಿಂಗಯ್ಯನವರದು ಬಹುತೇಕ ಒಂಟಿ ಪಯಣವೇ. ಇವರಿಗೆ ಆಪ್ತರೆನ್ನುವವರಿದ್ದಾರೆಯೇ ಎಂದು ಅನುಮಾನ ಬರುವಷ್ಟು ಮಿತ ಅವರ ಗೆಳೆಯರ ಸಂಖ್ಯೆ. ಇದಕ್ಕೆ ಮುಖ್ಯ ಕಾರಣವೆಂದರೆ ಸಿದ್ಧಲಿಂಗಯ್ಯನವರ ಶಿಸ್ತು ಮತ್ತು ನೇರ ನಿಷ್ಠುರವಾದ ಗುಣ. ತಮಗೆ ಸರಿಕಂಡಿದನ್ನು ಮುಖಮೂತಿ ನೋಡದೆ ಹೇಳಿ, ಆತ್ಮವಂಚನೆಯಿಲ್ಲದೆ ಬದುಕುವ ಬಗೆ ಕೆಲವರಿಗೆ ಅಪಥ್ಯ. ಪ್ರಾಧ್ಯಾಪಕರಾಗಿದ್ದಾಗ, ಕೊಲಿಜಿಯೇಟ್ ನಿರ್ದೇಶಕರಾಗಿದ್ದಾಗ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ಗಾಗ ಅತ್ಯಂತ ಪ್ರಾಮಾಣಿಕವಾಗಿ ನಡೆದುಕೊಂಡರಲ್ಲದೆ, ಇವರ ಕಾಳಜಿಯನ್ನು ಅರ್ಥಮಾಡಿಕೊಂಡ ಮಂತ್ರಿ ಮಹೋದಯರು ಇವರ ಮಾತಿಗೆ ಅಪಾರವಾದ ಗೌರವ ತೋರುವಂತೆ ಬದುಕಿದವರು.

ಜಿ ಎಸ್ ಸಿದ್ಧಲಿಂಗಯ್ಯನವರ ವಾಗ್ವಿಲಾಸದ ಬಗ್ಗೆ ಮಾತ್ರ ಹೇಳಿ ಅವರ ಕಾವ್ಯದ ಕುರಿತು ಮಾತನಾಡದಿದ್ದರೆ ಹೇಗೆ? ಯಾವ ಸಂಕಲನದಲ್ಲೆಂಬುದು ನೆನಪಾಗುತ್ತಿಲ್ಲ(ಬಹುಶಃ ‘ಚಿತ್ರ-ವಿಚಿತ್ರ’ ಸಂಕಲನವಿರಬೇಕು) “ಮಿಥಿಲೆಗಿಲ್ಲಿಂದಲೇ ಮಾರ್ಗವೇನು ಗುರು?” ಎಂಬ ಕವಿತೆಯೊಂದು ಬಹು ದಿನದವರೆಗೆ ಮನವನ್ನು ಕಾಡಿತ್ತು. ನವ್ಯ ಧೋರಣೆಯ ಈ ಕವಿತೆಯಲ್ಲಿ ಕವಿಯು ಭಾಷೆಯನ್ನು ನಿರ್ವಹಿಸಿರುವ ರೀತಿ ಅನನ್ಯವಾಗಿದೆ. ‘ಐವತ್ತರ ನೆರಳು’ ಪಠ್ಯವಾಗಿತ್ತಾದ್ದರಿಂದ ಪರೀಕ್ಷೆ ದೃಷ್ಟಿಯಿಂದ ಓದಿದ್ದೇ ಜಾಸ್ತಿ. ಅನೇಕ ವಿಮರ್ಶಕರು ಇದೇ ಇವರ ಶ್ರೇಷ್ಠ ಸಂಕಲನವೆಂದು ಕೊಂಡಾಡಿದ್ದನ್ನು ಆಮೇಲಷ್ಟೇ ನಾನು ಗಮನಿಸಿದ್ದು! ನವೋದಯ, ನವ್ಯ, ದಲಿತ, ಬಂಡಾಯ ಎಲ್ಲದರ ಪ್ರಭಾವಕ್ಕೂ ಪಕ್ಕಾಗಿ ಬೆಳೆದ ಕವಿ ಇವರು. ‘ಗಾಂಧಿ ಮತ್ತು ನಾನು’ ಸೊಗಸಾದ ವಿಡಂಬನಾತ್ಮಕ ಗುಣವುಳ್ಳ ಕವಿತೆ. ಸಾಮಾಜಿಕ ವೈರುಧ್ಯಗಳನ್ನು ಅವರ ಕವಿತೆ ಎಷ್ಟು ಮೊನಚಾಗಿ ತೋರಿಸುತ್ತದೆಂಬುದಕ್ಕೆ ಈ ಕೆಳಗಿನ ಸಾಲುಗಳನ್ನು ಗಮನಿಸಬಹುದು:

“ಮಿತ್ರರು ಕೇಳಿದರು: ಗಾಂಧಿ ನೋಡಿದ್ದೀಯಾ?
ಇಂದಿರಾ ಗಾಂಧಿಯೋ ರಾಜೀವ ಗಾಂಧಿಯೋ......
ಉತ್ತರಿಸುವ ಮೊದಲೇ ನಕ್ಕರು
ಗೊಂದಲವಾಗಿ ಕೇಳಿದೆ: ಸತ್ತ ಸಂಜಯ ಗಾಂಧಿಯೇ?
ಪರದೇಶಿಗಳು ಮಾಡಿದ್ದ ಚಿತ್ರ:
ಮೇಲಿನ ಮೂವರೂ ಅಲ್ಲದ ಬೇರೆಯೇ ಒಬ್ಬ ಮುದುಕ.”

‘ಗಾಂಧಿ’ ಸಿನಿಮಾ ನೋಡಿದ ಚರ್ಚೆಯೊಂದಿಗೆ ಕವಿತೆ ಮುಗಿದೇ ಹೋಗುತ್ತದೆ. “ಇದು ತುಂಬಾ ವಾಚ್ಯವಾಯಿತಲ್ಲವೇ?” ಎಂದೊಮ್ಮೆ ಕೇಳಿದಕ್ಕೆ “ನಿಮಗೆ ಹೆಂಗೆ ಬರೆದರೂ ಕಷ್ಟಾನೇ ಕಣಪ್ಪ! ಅರ್ಥವಾಗೋಹಂಗೆ ಬರೆದರೆ ವಾಚ್ಯ ಅಂತೀರಾ! ಅರ್ಥವಾಗದಂಗೆ ಬರೆದರೆ ಕ್ಲಿಷ್ಟ ಅಂತೀರಾ!! ನಿಮ್ಮ ಹಣೇಬರಹವೇ ಇಷ್ಟು!! ಥೂ ನಿಮ್ಮ ಓದುಗಾರಿಕೆಗಿಷ್ಟು ಬೆಂಕಿಹಾಕ!!” ಅಂದುಬಿಟ್ಟರು! ಸಾಕಲ್ಲ ಮಂಗಳಾರತಿಯೆಂದು ತೆಪ್ಪಗಾದೆ!

ಇವರ ಅಗಾಧವಾದ ಓದನ್ನು ನೆನೆದರೆ ಅಚ್ಚರಿಯಾಗುತ್ತದೆ. ಹಳಗನ್ನಡ, ನಡುಗನ್ನಡ, ಹೊಸಗನ್ನಡ ಯಾವ ವಿಚಾರದ ಬಗ್ಗೆ ಬೇಕಾದರೂ ವಿಮರ್ಶಾತ್ಮಕವಾಗಿ ಮಾತಾಡಬಲ್ಲರು! ಈ ವಿದ್ವತ್ತಿನೊಂದಿಗೆ, ಆಡಳಿತದ ಪಾರದರ್ಶಕತೆ ಕೂಡ ಇವರಿಗೆ ಜನಪ್ರೀತಿಯನ್ನು ಗಳಿಸಿಕೊಟ್ಟಿದೆ. ಹೀಗಾಗಿಯೇ ಇವರು ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಬಹುಮತದಿಂದ ಆರಿಸಿ ಬಂದಿದ್ದರು.

ಇವರು ಮೈಸೂರಿನಲ್ಲಿ ನಡೆಸಿದ ಸಾಹಿತ್ಯ ಸಮ್ಮೇಳನಕ್ಕೆ ಕೆ ಎಸ್ ನರಸಿಂಹಸ್ವಾಮಿಯವರು ಅಧ್ಯಕ್ಷರಾಗಿದ್ದರು. ಸ್ಮರಣೀಯವಾದ ಆ ಸಮ್ಮೇಳನದ ಕೊನೆಯದಿನ ಕನ್ನಡವಿರೋಧಿಯೆಂಬ ಕಾರಣಕ್ಕೆ ಅಜೀಜ್ ಸೇಠರನ್ನು ಆಹ್ವಾನಿಸಿದ್ದೇಕೆಂದು ಸಾವಿರಾರು ಕನ್ನಡಿಗರು ಗಲಾಟೆ ಎಬ್ಬಿಸಿದರು. ಸಿದ್ಧಲಿಂಗಯ್ಯನವರು ಆ ವಿರೋಧವನ್ನು ಕಂಡು ಅಕ್ಷರಶಃ ಅಲ್ಲಾಡಿ ಹೋದರು!! ಹಾಮಾನಾ ಸಭೆಯನ್ನು ಅದ್ಭುತವಾಗಿ ಹತೋಟಿಗೆ ತಂದು, ಪರಿಷತ್ತಿನ ಅಧ್ಯಕ್ಷರು ಕನ್ನಡ ವಿರೋಧಿಗಳನ್ನು ಕರೆದಿದ್ದಕ್ಕೆ ಕ್ಷಮೆಯಾಚನೆ ಮಾಡಿಸಿದರಲ್ಲದೆ ಅಜೀಜ್ ಸೇಠರು ಬರದಂತೆ ತಡೆದರು. ಈ ಘಟನೆಯಿಂದ ಜಿ ಎಸ್ ಸಿದ್ಧಲಿಂಗಯ್ಯನವರು ತುಂಬಾ ನೊಂದುಕೊಂಡಿದ್ದಾಯ್ತು.

ನಾವೆಲ್ಲ ಅವರನ್ನು ರಾಷ್ಟ್ರಾಧ್ಯಕ್ಷರ ತರಹ ನೀವು ನಮ್ಮ ರಾಜ್ಯಾಧ್ಯಕ್ಷರೆಂದು ತಮಾಷೆ ಮಾಡುತ್ತಿದ್ದೆವು. ಸಮ್ಮೇಳನಗಳು ಮುಗಿದ ತಿಂಗಳೊಳಗೆ ಲೆಕ್ಕದ ವಿವರ ನೀಡುತ್ತಿದ್ದ ನಮ್ಮ ಸಿದ್ಧಲಿಂಗಯ್ಯನವರು, ಈಗ ಚಳುವಳಿ ಮಾಡಿ ಲೆಕ್ಕ ಕೇಳಬೇಕಾದ ಪರಿಸ್ಥಿತಿಯಲ್ಲಿ ತುಂಬಾ ಮಹತ್ತ್ವದವರಾಗಿ ಕಾಣುತ್ತಾರೆ! ಇವರ ಕೃತಿಯೊಂದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಲಿಲ್ಲ ಎಂಬ ನೋವು ಅವರ ಅಭಿಮಾನಿಗಳದ್ದು. ಪ್ರಶಸ್ತಿಗಳಿಂದ ಯಾರೂ ದೊಡ್ಡವರಾಗುವುದಿಲ್ಲ ನಿಜ! ಆದರೆ ಸಾಧನೆಯಲ್ಲಿ, ಹಿರಿತನದಲ್ಲಿ ಇವರಿಗಿಂತ ಎಷ್ಟೊ ಕಿರಿಯರಿಗೆ ಪಂಪ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಸಮ್ಮೇಳನಾಧ್ಯಕ್ಷ ಪದವಿಗಳೆಲ್ಲ ಲಭಿಸಿವೆ. ಕೆಲವರ ವಿಚಾರದಲ್ಲಿ ನಮ್ಮ ಸಾಮಾಜಿಕ ನ್ಯಾಯ ತುಂಬಾ ಕ್ರೂರವಾಗಿರುತ್ತದಲ್ಲವೆ?

MORE FEATURES

'ಹೆಗಲು': ತ್ಯಾಗ, ನಿಸ್ವಾರ್ಥತೆಯ ಅಪರೂಪದ ಜೀವನಗಾಥೆ

14-12-2025 Bengaluru

"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...

ಅನುಕ್ಷಣ ಅನುಭವಿಸಿ: ಸಮಯ ನಿರ್ವಹಣೆಯ ಮಾರ್ಗದರ್ಶಿ

14-12-2025 BENGALURU

ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...

ಮಕ್ಕಳ ಕಥಾಸಾಹಿತ್ಯ ಸಂವೇದನೆಯ ಹೊಸ ಹೆಜ್ಜೆಗಳು.......

13-12-2025 ಬೆಂಗಳೂರು

"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...