ಆತ್ಮಕತೆಗಳು ಆಯ್ದ ಸತ್ಯದ ಕತೆಗಳು: ಬರಗೂರು ರಾಮಚಂದ್ರಪ್ಪ


"ಆತ್ಮಕತೆಯ ರಚನಕಾರರು ಸತ್ಯವನ್ನೇ ಹೇಳಿರುತ್ತಾರೆಂದು ಕೊಂಡರೂ ತಮ್ಮ ಜೀವನದ ಸಮಸ್ತ ಸತ್ಯಗಳನ್ನೂ ಬರೆದಿರುವುದಿಲ್ಲ. ಓದುಗರೊಂದಿಗೆ ಹಂಚಿಕೊಳ್ಳಬಹುದಾದ ಸಂಗತಿಗಳು ಇರುವಂತೆಯೇ ಹಂಚಿಕೊಳ್ಳಲಾಗದ ಸಂಗತಿಗಳೂ ಇರುತ್ತವೆ" ಎನ್ನುತ್ತಾರೆ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ. ಅವರ ‘ಕಾಗೆ ಕಾರುಣ್ಯದ ಕಣ್ಣು’ ಆಯ್ದ ಅನುಭವಗಳ ಕಥನಕ್ಕೆ ಬರೆದ ಲೇಖಕರ ಮಾತು ನಿಮ್ಮ ಓದಿಗಾಗಿ...

ನಾನು ಆತ್ಮಕತೆಯನ್ನು ಬರೆಯಬೇಕೆಂಬ ಒತ್ತಾಯವನ್ನು ನನ್ನ ಹಳೆಯ ವಿದ್ಯಾರ್ಥಿಗಳಾದಿಯಾಗಿ ಸ್ನೇಹಿತರು, ಹಿತೈಷಿಗಳು ಮಾಡುತ್ತಲೇ ಇದ್ದರು. ನಾನು ಮನಸ್ಸು ಮಾಡಿರಲಿಲ್ಲ. ಆತ್ಮಕತೆಯೆಂಬುದು ಪೂರ್ಣ ಸತ್ಯದ ಕತೆಯಾಗಿರುತ್ತದೆಯೆ ಎಂಬ ಬಗ್ಗೆ ನನ್ನಲ್ಲಿ ಜಿಜ್ಞಾಸೆಯಿತ್ತು. ಆತ್ಮಕತೆಯ ರಚನಕಾರರು ಸತ್ಯವನ್ನೇ ಹೇಳಿರುತ್ತಾರೆಂದು ಕೊಂಡರೂ ತಮ್ಮ ಜೀವನದ ಸಮಸ್ತ ಸತ್ಯಗಳನ್ನೂ ಬರೆದಿರುವುದಿಲ್ಲ. ಓದುಗರೊಂದಿಗೆ ಹಂಚಿಕೊಳ್ಳಬಹುದಾದ ಸಂಗತಿಗಳು ಇರುವಂತೆಯೇ ಹಂಚಿಕೊಳ್ಳಲಾಗದ ಸಂಗತಿಗಳೂ ಇರುತ್ತವೆ.

ಯಾರೂ ಎಲ್ಲವನ್ನೂ ಹೇಳಿಕೊಳ್ಳುವುದಿಲ್ಲ ಅಥವಾ ಹೇಳಿಕೊಳ್ಳಲಾಗುವುದಿಲ್ಲ. ಹೀಗಾಗಿ ಆತ್ಮಕತೆಗಳು ಆಯ್ದ ಸತ್ಯದ ಕತೆಗಳಾಗಿರುತ್ತವೆ. ನಮ್ಮ ಸಾಮಾಜಿಕ ಸನ್ನಿವೇಶ ದಲ್ಲಿ ಇದು ಸಹಜವೂ ಹೌದು. ಆತ್ಮಕತೆಗಳು ಆಯ್ದ ಸತ್ಯದ ಕತೆಗಳಾದರೆ ತಪ್ಪೇನೂ ಇಲ್ಲ. ಆದರೆ ಅರ್ಧ ಸತ್ಯದ ಕತೆಗಳಾದರೆ ತಪ್ಪು. ಇಷ್ಟಕ್ಕೂ ನಮ್ಮ ಬದುಕಿನ ಸತ್ಯಗಳನ್ನು ಬಹಿರಂಗಪಡಿಸುವುದರಿಂದ ಸಮಾಜಕ್ಕೇನು ಪ್ರಯೋಜನವೆಂಬ ಪ್ರಶ್ನೆಯೂ ನನ್ನಲ್ಲಿತ್ತು. ಅದೇ ಸಂದರ್ಭದಲ್ಲಿ ರವೀಂದ್ರನಾಥ ಟಾಗೋರರ ಆತ್ಮಕತೆಯ ಭಾಗವಾದ ‘ನನ್ನ ಬಾಲ್ಯ’ ಎಂಬ ಪುಸ್ತಕವನ್ನು ಓದಿ ನಾನು ಸಾಹಿತಿಯಾಗಬೇಕೆಂಬ ಪ್ರೇರಣೆಯನ್ನು ಪಡೆದ ಸತ್ಯವೂ ನನ್ನೊಳಗೆ ಇತ್ತು. ಒಟ್ಟಾರೆ ಆತ್ಮಕತೆ ಬರೆಯುವುದರ ಬಗ್ಗೆ ನನ್ನೊಳಗಿನ ಜಿಜ್ಞಾಸೆ ಜಾಗೃತವಾಗಿಯೇ ಇತ್ತು.

ಹೀಗಿರುವಾಗ, ಕೆಲವು ವರ್ಷಗಳ ಹಿಂದೆ ಒಂದು ಪ್ರಸಂಗ ಜರುಗಿತು. ಗೆಳೆಯ ವೈ.ಬಿ. ಹಿಮ್ಮಡಿಯವರು ಕೆಲಸ ಮಾಡುತ್ತಿದ್ದ ಬೆಳಗಾವಿ ಜಿಲ್ಲೆಯ ರಾಯಭಾಗಕ್ಕೆ ನಾನು ಕಾರ್ಯಾಗಾರವೊಂದರ ಉದ್ಘಾಟನೆಗೆ ಹೋಗಿದ್ದೆ. ವೈ.ಬಿ. ಹಿಮ್ಮಡಿಯವರೇ ಆಹ್ವಾನಿಸಿದ್ದರು. ಕಾರ್ಯಕ್ರಮದ ನಂತರ ಹಿಮ್ಮಡಿ ನೇತೃತ್ವದ ಒಂದು ತಂಡ ನನ್ನ ಬಳಿ ಬಂದು ಸಾಂಸ್ಕೃತಿಕ ವಿಷಯಗಳ ವಿಚಾರ ವಿನಿಮಯ ಮಾಡಿಕೊಳ್ಳುತ್ತ, ಆತ್ಮಕತೆ ಬರೆಯಲು ಒತ್ತಾಯಿಸಿತು. ನನ್ನ ಬದುಕಿನ ಕೆಲವು ಸತ್ಯ ಸಂಗತಿಗಳು ಈ ಗೆಳೆಯರಿಗೆ ತಿಳಿದಿದ್ದರಿಂದಲೋ ಏನೋ ಅವರು ನನ್ನ ಆತ್ಮಕತೆ ರಚನೆಗೆ ಒತ್ತಾಯ ಮಾಡಲೆಂದೇ ಬಂದತಿತ್ತು. ಕಾರ್ಯಾಗಾರಕ್ಕೆ ಬಂದಿದ್ದ ಡಾ. ರಂಗರಾಜ ವನದುರ್ಗ ಅವರೂ ಈ ತಂಡದಲ್ಲಿ ಒಬ್ಬರಾಗಿದ್ದು ಒತ್ತಾಯ ಮಾಡಿದರು. ಅತಿಥಿಗಳಾಗಿ ಬಂದಿದ್ದ ಇತರರೂ ದನಿಗೂಡಿಸಿದರು. ನಾನು ಕೊನೆಗೊಂದು ಮಾತು ಹೇಳಿದೆ : ‘ಆತ್ಮಕತೆಯನ್ನು ಬರೆಯುವುದು ಸಾಮಾಜಿಕ ಅಪೇಕ್ಷೆಯೂ ಆಗಿರಬೇಕು’ - ಎಂದೆ. ಅವರೆಲ್ಲ ‘ನಾವೂ ಸಮಾಜದ ಭಾಗವಾಗಿಯೇ ಈ ಬೇಡಿಕೆ ಇಡ್ತಿದ್ದೇವೆ. ನಿಮ್ಮ ಬದುಕಿನ ಸತ್ಯಗಳನ್ನು ಓದಿ ಕೆಲವರಾದರೂ ಪ್ರೇರಣೆ ಪಡೀತಾರೆ’ ಎಂದರು. ಕಡೆಗೆ ‘ನನ್ನ ಆತ್ಮಕತೇಲಿ ಬೇರೆಯವರ ಆತ್ಮಗಳೇ ಹೆಚ್ಚು ಬಂದ್‌ಬಿಡಬಹುದು’ ಎಂದು ನಾನು ನಕ್ಕೆ. ಅವರಲ್ಲಿ ಕೆಲವರು ‘ನೀವು ಹಾಗೆಲ್ಲ ವಿನಾಕಾರಣ ಬೇರೆಯವರ ಕಾಲೆಳೆಯೊ ಕೆಲ್ಸ ಮಾಡಲ್ಲ ಅಂತ ನಮಿಗ್ ಗೊತ್ತು ಸಾರ್’ ಎಂದರು. ಒತ್ತಾಯವಂತೂ ನಿಲ್ಲಲಿಲ್ಲ. ಆಗ ಆತ್ಮಕತೆಯನ್ನು ಬರೆಯಲು ಸಣ್ಣ ಪ್ರೇರಣೆಯಂತೂ ಒದಗಿತ್ತು. ಸ್ವಲ್ಪಮಟ್ಟಿಗೆ ಮನಸ್ಸು ಒಪ್ಪಿಕೊಳ್ಳ ತೊಡಗಿತ್ತು.
ಆದರೆ ಆದಾದನಂತರ ನಾನು ಮೊದಲ ಮನಸ್ಥಿತಿಗೇ ಬಂದಿದ್ದೆ. ಈ ಮಧ್ಯೆ ಮಿತ್ರ ಡಾ. ಎಚ್.ಎಸ್. ರಾಘವೇಂದ್ರರಾವ್ ಅವರು ‘ನೀವು ಆತ್ಮಕತೆ ಬರೀಬೇಕು’ ಎಂದು ಒತ್ತಾಯಿಸಿದರು. ನಾನು ನನ್ನೊಳಗಿನ ಜಿಜ್ಞಾಸೆಯನ್ನು ವಿವರಿಸಿದೆ. ಆದರೂ ಅವರು ಸುಮ್ಮನಾಗಲಿಲ್ಲ. ನನ್ನನ್ನು ಹತ್ತಿರದಿಂದ ಬಲ್ಲವರಾಗಿದ್ದ ಇವರು ‘ನಿಮ್ಮ ಆತ್ಮಕತೆ ನಿಮ್ಮದು ಮಾತ್ರ ಆಗಿರೊಲ್ಲ. ಅದಕ್ಕೊಂದು ಚಾರಿತ್ರಿಕ ಮಹತ್ವವೂ ಇರುತ್ತೆ; ಅದಕ್ಕಾಗಿ ನೀವು ಬರೀಬೇಕು’ ಎಂದು ಮನವರಿಕೆ ಮಾಡಲು ಪ್ರಯತ್ನಿಸಿದರು. ಅವರು ಮುಖಸ್ತುತಿಯ ಮನುಷ್ಯರಲ್ಲ. ಹೀಗಾಗಿ ಮರು ಚಿಂತನೆ ಮಾಡತೊಡಗಿದೆ. ಈ ಮಧ್ಯೆ ಹಂ.ಗು. ರಾಜೇಶ್, ಪ್ರಕಾಶ್‌ಮೂರ್ತಿ, ಲಕ್ಷ್ಮೀ ನಾರಾಯಣ್, ರಾಜಪ್ಪ ದಳವಾಯಿ, ರಘು ಐ.ಡಿ. ಹಳ್ಳಿ, ತುಮಕೂರಿನ ಕೆಲ ಗೆಳೆಯರು, ಸಿರಾದ ಆತ್ಮೀಯರು ಮುಂತಾದವರ ಒತ್ತಾಯವೂ ಇತ್ತು. ಒತ್ತಾಯ ಮಾಡಿದ ಬಳಗದವರ ಸಂಖ್ಯೆ ದೊಡ್ಡದು.

ಇದೇ ಅವಧಿಯಲ್ಲಿ ಕೆಲವರು ‘ನೀವು ಆತ್ಮಕತೆ ಬರೆಯದಿದ್ದರೆ, ನಮಗೆ ನಿಮ್ಮ ಅನುಭವಗಳನ್ನು ಹೇಳಿ. ನಾವು ನಿರೂಪಿಸ್ತೇವೆ’ ಎಂದರು. ಇನ್ನು ಕೆಲವರು ‘ನಿಮ್ಮ ಜೀವನದ ವಿವರಗಳನ್ನು ಹೇಳಿದರೆ ಜೀವನ ಚರಿತ್ರೆ ಬರೀತೇವೆ’ ಎಂದರು. ಬೇರೆಯವರು ಜೀವನಚರಿತ್ರೆ ಬರೆಯುವಷ್ಟು ದೊಡ್ಡ ಮನುಷ್ಯ ನಾನಲ್ಲ ಎಂದು ನಾನು ಹೇಳಿದ್ದೆ. ಆದರೂ ಇಂಥವರ ಆತ್ಮೀಯ ಹಂಬಲ ಕೊನೆಗೊಂಡಿರಲಿಲ್ಲ. ಹೀಗಿರುವಾಗ ಒಮ್ಮೆ ನನ್ನ ಆತ್ಮೀಯ ಗೆಳೆಯರೂ ಒಂದಷ್ಟು ವರ್ಷ ಸಹೋದ್ಯೋಗಿ ಹಿತೈಷಿಯೂ ಆಗಿದ್ದ ಡಾ. ಕೆ.ವಿ. ನಾರಾಯಣ ಅವರು ನಾನು ಆತ್ಮಕತೆ ಬರೆಯಬೇಕೆಂದು ಬಯಸಿದರು. ನಾನು ಹಿಂದಿನಿಂದ ಬಂದ ಒತ್ತಾಯಗಳನ್ನು ವಿವರಿಸಿದೆ. ಅರೆಬರೆ ಮನಸ್ಸಿನಲ್ಲಿ ಇದ್ದೇನೆ ಎಂದೆ. ಅವರು ನನ್ನ ಆತ್ಮಕತೆ ರಚನೆಗೆ ಒತ್ತಾಸೆಯಾಗಿ ನೀಡಿದ ಕಾರಣ ವಿಶೇಷವಾಗಿತ್ತು : ‘ನೋಡಿ, ನಿಮ್ಮ ಆತ್ಮಕತೆಯಿಂದ ಸಮಾಜಕ್ಕೇನು ಪ್ರಯೋಜನ ಅಂತೆಲ್ಲ ಯೋಚಿಸಬೇಡಿ. ಅದು ಏನಿದ್ದರೂ ಬರೆದು ಪ್ರಕಟವಾದ ನಂತರದ ವಿಷಯ. ಅದನ್ನು ಈಗ್ಲೆ ಯೋಚನೆ ಮಾಡೋದ್ ಬೇಡ. ನನಗೇನ್ ಅನ್ಸುತ್ತೆ ಗೊತ್ತ? ನಿಮ್ಮೊಳಗೆ ಹೇಳಿಕೊಳ್ಳಬೇಕಾದ ಅನೇಕ ಅನುಭವಗಳಿವೆ. ಅವುಗಳನ್ನು ಹೇಳಿಕೊಳ್ಳದೆ ನೀವು ಒಳಗೇ ಇಟ್ಕೊಂಡು ಒಂಟಿತನ ಅನುಭವಿಸ್ತಿದ್ದೀರಿ ಅಂತ ನನಗನ್ಸುತ್ತೆ. ಒಂಟಿತನದಿಂದ ಹೊರಗಡೆ ಬರೋದಕ್ಕಾದರೂ ನೀವು ಆತ್ಮಕತೆ ಬರೀಬೇಕು.

ಆತ್ಮಕತೆ ಅಂತ ಅಲ್ಲದಿದ್ರೂ ಅನೇಕ ಅನುಭವಗಳನ್ನು ಬರೀಬೇಕು’ - ಹೀಗೆ ಹೇಳುತ್ತ ನನ್ನ ಮನಸ್ಸಿನ ಜೊತೆ ಮಾತಾಡಿದರು. ಅವರು ಹೀಗೆ ಮಾತಾಡುವುದಕ್ಕೆ ನಾಲ್ಕು ವರ್ಷ ಮುಂಚೆಯೇ ನನ್ನ ಪತ್ನಿಯನ್ನು ನಾನು ಕಳೆದುಕೊಂಡಿದ್ದೆ. ಅವರ ಮಾತಿನಲ್ಲಿ ಪತ್ನಿಯ ಸಾವಿನ ಒಂಟಿತನದ ಜೊತೆಗೆ ನಾನು ಸಾಮಾಜಿಕ ಒಂಟಿತನವನ್ನೂ ಅನುಭವಿಸುತ್ತಿದ್ದೇನೆಂಬ ಸೂಚನೆಯಿದ್ದಂತೆ ಅನ್ನಿಸಿತು. ಸದಾ ಚಳವಳಿಗಳ ಜೊತೆಗಿದ್ದು ಸಾಮಾಜಿಕ ಕ್ರಿಯಾಶೀಲತೆಯಲ್ಲಿ ತೊಡಗಿರುವ ನನಗೆ ಸಾಮಾಜಿಕ ಒಂಟಿತನವೆ? - ಎಂಬ ಪ್ರಶ್ನೆ ಕೆಲವರಲ್ಲಿ ಮೂಡಬಹುದು. ಮೆರವಣಿಗೆಯ ಮಧ್ಯೆಯೂ ‘ಮೌನ’ ಅನುಭವಿಸುವ, ಸಂತೆಗದ್ದಲದ ನಡುವೆ ಒಂಟಿಸಂತರಾಗುವ, ಸ್ಫೋಟಗುಣದೊಳಗೆ ಸ್ನೇಹಗುಣವೂ ಇರುವ ವಿಶೇಷಗಳು ಸಂವೇದನಾಶೀಲ ಮನಸ್ಸಿನ ಭಾಗವಾಗಿರುತ್ತವೆ. ಒಬ್ಬರೇ ಇದ್ದಾಗ ಒಳಗಿನ ಈ ಭಾವರೂಪಗಳು ಮಾತಾಡತೊಡಗುತ್ತವೆ. ಆದ್ದರಿಂದ ಸಾಮಾಜಿಕವೂ ಸಾಮುದಾಯಿಕವೂ ಆದ ಕ್ರಿಯಾಶೀಲತೆಯ ಜೊತೆಗೇ ಒಳಗೊಂದು ಒಂಟಿ ಪಯಣವೂ ಇರಲು ಸಾಧ್ಯ. ಬಹುಶಃ ಅದೇ ಅನುಭವ ಕಥನದ ಹಾದಿ ಹುಡುಕುವ ಒತ್ತಾಸೆಯಾಗಿರುತ್ತದೆ.
ಒಟ್ಟಿನಲ್ಲಿ ಒಂದಕ್ಕೊಂದು ವಿಭಿನ್ನವಾದ ಒತ್ತಾಯಗಳಿಂದ ನಾನು ‘ಆತ್ಮಕತೆ’ಯನ್ನಲ್ಲ ದಿದ್ದರೂ ‘ಆಯ್ದ’ ಅನುಭವಗಳನ್ನು ಬರೆಯೋಣವೆಂಬ ನಿರ್ಧಾರಕ್ಕೆ ಬಂದೆ. ಆದರೆ ಬರೆಯಲು ಸಮಯಾವಕಾಶವೇ ಆಗಲಿಲ್ಲ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮಧ್ಯ ಕರ್ನಾಟಕ - ಹೀಗೆ ವಿವಿಧ ಊರುಗಳನ್ನು ಸುತ್ತುತ್ತಲೇ ಇದ್ದೆ. ಸಂಘಟನೆ ಮತ್ತು ಸಮಾರಂಭಗಳ ಒತ್ತಡದಲ್ಲಿ ಅನುಭವ ಕಥನದ ರಚನೆಯನ್ನು ಕೈಗೆತ್ತಿಕೊಳ್ಳಲು ಆಗಲಿಲ್ಲ.
ಹೀಗಿರುವಾಗ ನನ್ನ ಆರೋಗ್ಯದಲ್ಲಿ ಏರುಪೇರಾಯಿತು. ಈ ಏರುಪೇರು ಮೊದಲು ಸಂಭವಿಸಿದ್ದು ಹರಿಹರದಲ್ಲಿ. ದಾವಣಗೆರೆ ಜಿಲ್ಲೆಯ ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕರಾದ ಗೆಳೆಯ ಶ್ರೀ ಬಿ.ಎನ್. ಮಲ್ಲೇಶ್ ಮತ್ತು ಮಿತ್ರ ಡಾ. ಎ.ಬಿ. ರಾಮಚಂದ್ರಪ್ಪ ನವರ ಅಪೇಕ್ಷೆಯಂತೆ ಹರಿಹರದಲ್ಲಿ ಶ್ರೀ ಕಲೀಂ ಬಾಷ ಮತ್ತು ಗೆಳೆಯರು ಒಂದು ದಿನದ ವಿಚಾರಸಂಕಿರಣವನ್ನು ಏರ್ಪಡಿಸಿದರು. ನಾನೇ ಉದ್ಘಾಟನೆಗೆ ಬರಬೇಕೆಂಬುದು ಇವರೆಲ್ಲರ ಒತ್ತಾಯ. ‘ನನ್ನನ್ನೇ ಎಲ್ಲಾ ಕಡೆ ಕರೆಯಬೇಡಿ. ಬಂಡಾಯದ ಬೇರೆ ಗೆಳೆಯರನ್ನು ಕರೆಯಿರಿ’ ಎಂಬುದು ನನ್ನ ಒತ್ತಾಯ. ಆದರೆ ಅವರ ಒತ್ತಾಯವೇ ಫಲಿಸಿತು. 2023ರ ಜನವರಿ 26ರಂದು ವಿಚಾರಸಂಕಿರಣ. ನನ್ನಿಂದ ಉದ್ಘಾಟನೆ.

ವಿಚಾರ ಸಂಕಿರಣದಲ್ಲಿ ರಾಜಪ್ಪ ದಳವಾಯಿ, ಸುಕನ್ಯಾ ಮಾರುತಿ, ಎಚ್.ಎಲ್. ಪುಷ್ಪ, ಭಕ್ತರಹಳ್ಳಿ ಕಾಮರಾಜ್, ಬಿ.ಎಂ. ಹನೀಫ್, ಬಿ.ಎನ್. ಮಲ್ಲೇಶ್, ಸಿ.ವಿ. ಪಾಟೀಲ ಮುಂತಾದವರು ಭಾಗವಹಿಸಲು ಬಂದಿದ್ದರು. ನಾನು ಉದ್ಘಾಟನಾ ಭಾಷಣ ಮಾಡಿ ಹೊರಬಂದೆ. ವಿಚಾರ ಗೋಷ್ಠಿ ಆರಂಭವಾಗಬೇಕಿತ್ತು. ನನ್ನೊಂದಿಗೆ ಅನೇಕರು ಹೊರಗಡೆ ಬಂದರು. ಆಗ ದಾವಣಗೆರೆಯ ಗೆಳೆಯ ಸುಭಾಷ್ ‘ನೀವು ಸ್ವಲ್ಪ ಹೊತ್ತು ಒಳಗೆ ಕೂತ್ಕೊಳ್ಳಿ ಸಾರ್. ಆಗ ಇಲ್ಲಿರೋರೆಲ್ಲ ಒಳಗೆರ‍್ತಾರೆ’ ಎಂದು ನಸುನಗುತ್ತ ಹೇಳಿದರು. ದಾವಣಗೆರೆಯಿಂದ ವಿಚಾರ ಸಂಕಿರಣಕ್ಕೆ ಸಭಿಕರಾಗಿ ಬಂದಿದ್ದ ಸ್ನೇಹಜೀವಿ ಎಂ.ಜಿ. ಈಶ್ವರಪ್ಪನವರೂ ಇದ್ದರು. ನಾನು ಒಳಗೆ ಹೋಗಿ ಸ್ವಲ್ಪಕಾಲ ಕೂತು ಹೊರಗೆ ಬಂದೆ. ಮತ್ತೆ ಬೆಂಗಳೂರಿಗೆ ಹೊರಡಬೇಕಿತ್ತು. ಅಷ್ಟರಲ್ಲಿ ಅಲ್ಲಿಗೆ ಬಂದ ಪ್ರಗತಿಪರ ವಿದ್ಯಾರ್ಥಿಗಳ ತಂಡವೊಂದು ತಮ್ಮ ಕಾರ್ಯಕ್ರಮದ ಒಂದು ಪೋಸ್ಟರ್ ಬಿಡುಗಡೆ ಮಾಡಲು ಕೇಳಿದರು. ನಿಂತಲ್ಲಿಯೇ ಐದಾರು ನಿಮಿಷದ ಕಾರ್ಯಕ್ರಮ. ಜೊತೆಗೆ ಎಂ.ಜಿ. ಈಶ್ವರಪ್ಪ, ಎ.ಬಿ. ರಾಮಚಂದ್ರಪ್ಪ, ಸುಭಾಷ್ ಮುಂತಾದವರು ಇದ್ದರು. ನಾನು ಪೋಸ್ಟರ್ ಬಿಡುಗಡೆ ಮಾಡುತ್ತಿರುವಾಗ ತಲೆಸುತ್ತು ಬಂತು. ಏನೂ ಕಾಣದಂತೆ ಕತ್ತಲೆ ಆವರಿಸಿತು. ಕುಸಿಯತೊಡಗಿದೆ. ನಾನು ಮೂರ್ಛೆಗೆ ಸಂದಿದ್ದೆ. ಎಚ್ಚರವಾದಾಗ ಮಿತ್ರ ಎ.ಬಿ. ರಾಮಚಂದ್ರಪ್ಪ ಮತ್ತು ನನ್ನ ಗನ್ ಮ್ಯಾನ್ ದೀಪಕ್ ನನ್ನನ್ನು ಅಕ್ಷಯ ಆಸ್ಪತ್ರೆಯೆದುರು ಕಾರಿನಿಂದ ಇಳಿಸುತ್ತಿದ್ದರು. ಹರಿಹರದ ಅಕ್ಷಯ ಆಸ್ಪತ್ರೆಯಲ್ಲಿ ಮೂರು ಗಂಟೆಗೂ ಹೆಚ್ಚು ಕಾಲ ಇದ್ದು ವೈದ್ಯರ ಚಿಕಿತ್ಸೆ ಪಡೆದು ಬೆಂಗಳೂರಿಗೆ ಹೊರಟೆ.

ವೈದ್ಯರು ಚಿಕಿತ್ಸೆಗಾಗಿ ಒಂದು ಪೈಸೆಯನ್ನೂ ಪಡೆಯದೆ ಸಿಬ್ಬಂದಿ ಸಮೇತ ನಿಂತು ಬೀಳ್ಕೊಟ್ಟರು. ರಾಜಪ್ಪ ದಳವಾಯಿ, ನನ್ನ ಜೊತೆ ಬಂದರು. ವಿಚಾರಸಂಕಿರಣಕ್ಕೆ ಬಂದಿದ್ದ ಗೆಳೆಯರಲ್ಲಿ ಭಕ್ತರಹಳ್ಳಿ ಕಾಮರಾಜ್ ಫೋನ್ ಮಾಡಿ ನನ್ನ ಆರೋಗ್ಯದ ಬಗ್ಗೆ ಕೇಳಿದರೆಂದು ಎ.ಬಿ. ರಾಮಚಂದ್ರಪ್ಪ ಹೇಳಿದರು. ಇದೇ ರೀತಿಯ ಘಟನೆಯು 2023 ರ ಫೆಬ್ರವರಿ 15ರಂದು ನನ್ನ ಹುಟ್ಟೂರು ಬರಗೂರಿನಲ್ಲಿ ಮರುಕಳಿಸಿತು. ಬರಗೂರಿನಲ್ಲಿ ನಾನು ಹುಟ್ಟಿದ ಪುಟ್ಟ ಮನೆಯೊಂದಿದೆ. ಪ್ರವೇಶದಲ್ಲಿ ಒಂದು ರೂಮು; ಅದನ್ನು ಹಾದು ಹೋದರೆ ಹಿತ್ತಲಿನಂತಹ ಒಂದು ಜಾಗ; ಅದಕ್ಕೆ ಮಾಳಿಗೆಯೇ ಇಲ್ಲ. ಇದನ್ನು ಜೀರ್ಣೋದ್ಧಾರ ಮಾಡಿ ನನ್ನ ಪುಸ್ತಕಗಳು, ಪ್ರಶಸ್ತಿಗಳು, ಫೋಟೋಗಳು - ಮುಂತಾದವನ್ನು ಅಲ್ಲಿಟ್ಟು ಒಂದು ಮಿನಿ ಮ್ಯೂಜಿಯಂ ಮಾಡಬೇಕು ಎನ್ನುವುದು ನನ್ನ ಹೆಸರಿನ ಪ್ರತಿಷ್ಠಾನದ (ಟ್ರಸ್ಟ್ನ) ಆತ್ಮೀಯರ ಹಂಬಲ. ಇದಕ್ಕೆ ಕೈ ಜೋಡಿಸಿದವರು ನನ್ನ ಇಬ್ಬರು ಪುತ್ರರಾದ ಮೈತ್ರಿ ಬರಗೂರ್ ಮತ್ತು ಸ್ಫೂರ್ತಿ ಬರಗೂರ್. ಮೈತ್ರಿ ಬರಗೂರ್ ಆರ್ಕಿಟೆಕ್ಟ್. ಆತನೇ ವಿನ್ಯಾಸ ಮಾಡಿ ತನ್ನ ಜೊತೆಯ ಶ್ರೀಕಂಠು ಅವರಿಗೆ ಮೇಲುಸ್ತುವಾರಿ ನೀಡಿ ಮನೆಗೆ ಹೊಸ ರೂಪ ಕೊಟ್ಟ. ಮಿನಿ ಮ್ಯೂಜಿಯಂ ಆದ ಮನೆಗೆ ‘ತೊಟ್ಟಿಲು’ ಎಂದು ಹೆಸರಿಟ್ಟು 2023 ರ ಫೆಬ್ರವರಿ 15ರಂದು ಈ ‘ತೊಟ್ಟಿಲು’ವಿನ ಉದ್ಘಾಟನಾ ಸಮಾರಂಭ.

ಸಿನಿಮಾ ಲೋಕದ ಸುಂದರರಾಜ್, ರೇಖಾ, ಕುಮಾರ್ ಗೋವಿಂದ್ ಅವರು ಅತಿಥಿಗಳಾಗಿ ಬಂದಿದ್ದರು. ನನ್ನ ಹೆಸರಿನ ಪ್ರತಿಷ್ಠಾನದಲ್ಲಿರುವ ಡಾ. ಶಮಿತಾ ಮಲ್ನಾಡ್ ಗೀತಗಾಯನ ನಡೆಸಿಕೊಟ್ಟರು. ರಾಜಪ್ಪ ದಳವಾಯಿ, ಸುಂದರರಾಜ ಅರಸು, ಲಕ್ಷಿ ನಾರಾಯಣ್, ರಾಜುಗುಂಡಾಪುರ,ಪಾಪಣ್ಣ, ಶಾಂತರಾಮ್, ಬೈರಮಂಗಲ ರಾಮೇಗೌಡ, ಶಾಂತರಾಜು ಮುಂತಾದವರೆಲ್ಲ ಬೆಂಗಳೂರಿಂದ ಬಂದಿದ್ದರು. ತುಮಕೂರಿನಿಂದ ಅನೇಕ ಗೆಳೆಯರು ಬಂದಿದ್ದರು. ಕಲಬುರ್ಗಿಯಿಂದ ಬಂದ ಅಶ್ವಿನಿ ಮದನಕರ್ ಬಗ್ಗೆ ಹೇಳಲೇಬೇಕು. ಈಕೆ ಕಲಬುರ್ಗಿಯಿಂದ ಬೆಂಗಳೂರಿಗೆ ಬಂದಿದ್ದಾರೆ. ಬರಗೂರಿಗೆ ಬರಲು ಸರಿಯಾದ ಸಮಯಕ್ಕೆ ಬಸ್ ಸಿಗದೆ, ಸ್ನೇಹಿತರ ಸ್ಕೂಟರ್‌ನಲ್ಲಿ ದೂರದ ಬರಗೂರಿಗೆ ಬಂದರು. ಇಂಥವರ ಪ್ರೀತಿ ವಿಶ್ವಾಸಗಳೇ ನನ್ನನ್ನು ಕಾಪಾಡುತ್ತಿವೆ. ಸಮಾರಂಭದ ಸಮಸ್ತ ವ್ಯವಸ್ಥೆಯನ್ನು ಬರಗೂರಿನ ಮಿತ್ರರು ಮುಂದೆ ನಿಂತು ಮಾಡಿದರು. ಸಮಾರಂಭ ಮುಗಿದ ಮೇಲೆ ಜನವರಿ 29 ರಂದು ಹರಿಹರದಲ್ಲಿ ಆದಂತೆಯೇ ಬರಗೂರಿನಲ್ಲೂ ಆಯಿತು. ನಾನು ಕೆಲ ನಿಮಿಷ ಮೂರ್ಛೆಗೆ ಸಂದಿದ್ದೆ. ಎಲ್ಲರಿಗೂ ಗಾಬರಿಯೋ ಗಾಬರಿ. ಬರಗೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ನಂದೀಶ್ ಚಿಕಿತ್ಸೆ ನೀಡಿದರು.

ಹದಿನಾರು ದಿನಗಳ ಅಂತರದಲ್ಲಿ ಎರಡು ಸಾರಿ ಹೀಗೆ ಆದದ್ದು ಸ್ನೇಹಿತರು ಹಾಗು ಮನೆ ಮಂದಿಯಲ್ಲಿ ಆತಂಕ ಮೂಡಿಸಿತ್ತು. ಬೆಂಗಳೂರಿಗೆ ಬಂದವನೇ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರಾದ ಡಾ. ಮಂಜುನಾಥ್ ಅವರಲ್ಲಿ ಮಕ್ಕಳ ಜೊತೆ ಹೋದೆ. ಮಂಜುನಾಥ್ ಅವರು ಈ ಸರ್ಕಾರಿ ಜಯದೇವ ಆಸ್ಪತ್ರೆಯನ್ನು ಯಾವುದೇ ಹೈಟೆಕ್ ಖಾಸಗಿ ಆಸ್ಪತ್ರೆಗೆ ಕಡಿಮೆ ಇಲ್ಲದಂತೆ ಬೆಳೆಸಿದ್ದಾರೆ. ಅನೇಕರಿಂದ ಹಣ ಸಂಗ್ರಹಿಸಿಟ್ಟು ಬಡರೋಗಿಗಳ ಚಿಕಿತ್ಸೆಗೆ ಬಳಸುತ್ತಿದ್ದಾರೆ. ಇವರು ನನ್ನ ಪತ್ನಿ ರಾಜಲಕ್ಷ್ಮಿ ಚಿಕಿತ್ಸೆ ನೀಡಿದವರು ಮತ್ತು ನಮಗೆ ವೈದ್ಯಕೀಯ ಮಾರ್ಗದರ್ಶಕರು. ನನಗೆ ಹೃದಯಕ್ಕೆ ಸಂಬಂಧಪಟ್ಟ ಎಲ್ಲಾ ಪರೀಕ್ಷೆಗಳನ್ನೂ ಮಾಡಿ, ಕಡೆಗೆ ಹೃದಯ ಬಡಿತದ ಲಯದಲ್ಲಿ ವ್ಯತ್ಯಾಸವಾಗುತ್ತಿರುವುದನ್ನು ಕಂಡುಹಿಡಿದರು. ಇದು ಮೊದಲ ಹಂತದ ವ್ಯತ್ಯಾಸವೆಂದೂ ಹೆಚ್ಚಾದರೆ ಮಾತ್ರ ಪೇಸ್ ಮೇಕರ್ ಹಾಕಬೇಕೆಂದು ತಿಳಿಸಿದರು. ಅಪೊಲೊ ಆಸ್ಪತ್ರೆಯಲ್ಲಿ ನನ್ನ ಪತ್ನಿಗೆ ಚಿಕಿತ್ಸೆ ನೀಡುತ್ತಿದ್ದ ತಂಡದಲ್ಲಿ ಒಬ್ಬರಾಗಿದ್ದ ಡಾ. ಮುರಳಿ ಈಗ ಕಾವೇರಿ ಆಸ್ಪತ್ರೆಯಲ್ಲಿದ್ದು, ನನ್ನನ್ನು ಆಹ್ವಾನಿಸಿ ಎಲ್ಲಾ ಪರೀಕ್ಷೆಗಳನ್ನೂ ಮಾಡಿಸಿದರು.

ಆಗ ಅವರ ಸ್ನೇಹಿತ ವೈದ್ಯರಾದ ವೀರೇಂದ್ರ ಸಂಡೂರು ಅವರು ನನಗೆ ಬಿ12 ಎಂಬ ವಿಟಮಿನ್ ಅತ್ಯಂತ ಎಂದರೆ - ತೀರಾ ತೀರಾ ಕಡಿಮೆಯಿರುವುದನ್ನು ಕಂಡುಹಿಡಿದು ಚಿಕಿತ್ಸೆ ಆರಂಭಿಸಿದರು. ಡಾ. ಮಂಜುನಾಥ್ ಮತ್ತು ಡಾ. ಮುರಳಿ ಅವರು ಕೆಲ ತಿಂಗಳು ವಿಶ್ರಾಂತಿ ಪಡೆಯಬೇಕೆಂದೂ ಬೆಂಗಳೂರಿನ ಹೊರಗೆ ಹೆಚ್ಚು ಪ್ರಯಾಣ ಮಾಡಬಾರದೆಂದೂ ಹೇಳಿದರು. ಹೀಗೆಲ್ಲ ಹೆಚ್ಚು ಕಾಲ ವಿಶ್ರಾಂತಿ ಪಡೆಯುವಂಥ ಖಾಯಿಲೆಗೆ ನಾನು ಎಂದೂ ತುತ್ತಾಗಿರಲಿಲ್ಲ. ಒಮ್ಮೆ ಮಾತ್ರ ವೆರಿಕೋಸ್ ವೈನ್ಸ್ಗೆ ಸರ್ಜರಿ ಮಾಡಿದ್ದಾದ ಮೇಲೆ ಸೂಕ್ತ ಚಿಕಿತ್ಸೆಯಿಲ್ಲದೆ ಹೃದಯಕ್ಕೆ ರಕ್ತ ಚಲನೆಯು ನಿಲ್ಲುವ ಸ್ಥಿತಿಗೆ ಬಂದು ಮರಣದ ಮನೆಯತ್ತ ಮುಖ ಮಾಡಿ ವಾಪಸ್ ಆಗಿದ್ದೆ. ಆಗಲೂ ಮಂಜುನಾಥ್ ಮತ್ತು ನರಸಿಂಹ ಸೆಟ್ಟಿಯವರು ಸಕಾಲಿಕ ಚಿಕಿತ್ಸೆ ನೀಡಿ ಉಳಿಸಿದ್ದರು (ಇಬ್ಬರೂ ಸರ್ಕಾರಿ ವೈದ್ಯರು ಎಂಬುದಿಲ್ಲಿ ಉಲ್ಲೇಖನೀಯ). ಹೀಗೆ ಗಂಭೀರ ಸ್ಥಿತಿ ತಲುಪಿ ಮತ್ತೆ ಸಹಜ ಸ್ಥಿತಿಗೆ ಬಂದಾಗ ನಾನು ಸ್ನೇಹಿತರಲ್ಲಿ ಒಂದು ಮಾತನ್ನು ಹೇಳುತ್ತಿದ್ದೆ: ‘ಎಲ್ಲರೂ ನನ್ನ ಆರೋಗ್ಯ ಸ್ಥಿತಿಯನ್ನು ಪ್ರಶಂಸೆ ಮಾಡ್ತಾ ಇದ್ದರು. ನಾನು ಅಕ್ಷರದ ಅಹಂಕಾರ, ಅಧಿಕಾರದ ಅಹಂಕಾರ ಇರಬಾರದು ಅಂತ ಹೇಳ್ತಾ ಬಂದವನು. ನನಗೇ ಅರಿವಾಗದಂತೆ ಆರೋಗ್ಯದ ಅಹಂಕಾರದಿಂದ ಇದ್ದೆ ಅಂತ ಕಾಣ್ಸುತ್ತೆ. ಅನಾರೋಗ್ಯ ಅನ್ನೋದು ಗಂಭೀರ ಸ್ಥಿತಿ ತಲುಪಿ ನನ್ನ ಆರೋಗ್ಯದ ಅಹಂಕಾರ ಭಂಗವಾಗಿದೆ! ಬುದ್ಧಿ ಕಲಿಸಿದೆ’. ನಸುನಗುತ್ತಲೇ ನಾನು ಹೇಳುತ್ತಿದ್ದ ಈ ಮಾತುಗಳು ಹರಿಹರ ಮತ್ತು ಬರಗೂರು ಘಟನೆಯಿಂದ ಮತ್ತೆ ನೆನಪಾಯಿತು.

ನನ್ನ ಅನಾರೋಗ್ಯಕ್ಕೆ ಸಂಬಂಧಿಸಿದ ಇಷ್ಟೆಲ್ಲ ವಿವರಗಳನ್ನು ಹೇಳಲು ಕಾರಣವಿದೆ. ಬರಗೂರಿನ ಘಟನೆಯಾದ ಮೇಲೆ ವೈದ್ಯರ ಸಲಹೆಯಂತೆ ವಿಶ್ರಾಂತಿಗಾಗಿ ಮನೆಯಲ್ಲೇ ಉಳಿದೆನಲ್ಲ, ಆಗ ಸ್ನೇಹಿತರು ಆತ್ಮಕತೆಯನ್ನು ಬರೆಯಲು ಒತ್ತಾಯಿಸಿದ್ದು ಒಳ ಒತ್ತಡ ವಾಯಿತು; ಸಮಯಾವಕಾಶವೂ ಸಿಕ್ಕಿತು. ನನ್ನ ಅನಾರೋಗ್ಯದ ಈ ದಿನಗಳಲ್ಲಿ ಗೆಳೆಯ ಬೂವನಹಳ್ಳಿ ನಾಗರಾಜ್ ಕಾಳಜಿ ವಹಿಸುವುದರ ಜೊತೆಗೆ ‘ನಿಮಗೆ ಅಪರೂಪಕ್ಕೆ ವಿಶ್ರಾಂತಿ ಸಿಕ್ಕಿದೆ; ಏನಾದ್ರೂ ಬರೀರಿ ಸಾರ್’ ಎಂದು ಒತ್ತಾಯಿಸಿದರು. ಈ ವಿಶ್ರಾಂತಿಯ ದಿನಗಳನ್ನು ಸದುಪಯೋಗ ಮಾಡಿಕೊಳ್ಳೋಣವೆಂದು ಕೆ.ವಿ. ನಾರಾಯಣ ಅವರು ಹೇಳಿದಂತೆ ಅನುಭವ ಕಥನವನ್ನು ಬರೆಯತೊಡಗಿದೆ. ಬರೆದು ಮುಗಿಸಿದೆ. ಇದು ನನ್ನ ಎಲ್ಲಾ ಅನುಭವಗಳ ಕಥನವಲ್ಲ; ಆಯ್ದ ಅನುಭವಗಳ ಕಥನ; ಹೇಳಲೇಬೇಕು ಅಂತ ಅನ್ನಿಸಿದ್ದನ್ನು ಹೇಳಿಕೊಂಡ, ಹಂಚಿಕೊಂಡ ಕಥನ. ಈ ಪುಸ್ತಕದ ಜೊತೆಗೆ ನಾನು ಹಿಂದೆ ಬರೆದು ವಿವಿಧ ಪುಸ್ತಕಗಳಲ್ಲಿ ಪ್ರಕಟಗೊಂಡಿದ್ದ ನನ್ನ ಅನುಭವ ಕೇಂದ್ರಿತ ಲೇಖನಗಳನ್ನು ಒಟ್ಟಿಗೆ ಸಂಕಲಿಸಿ ‘ಅನುಬಂಧ’ದಲ್ಲಿ ಸೇರಿಸಿದ್ದೇನೆ. ಈ ಲೇಖನಗಳು ನಿಸ್ಸಂದೇಹವಾಗಿ ನನ್ನ ಅನುಭವ ಕಥನದ ಭಾಗವೇ ಆಗಿವೆ. ಆದ್ದರಿಂದ ‘ಅನುಬಂಧ’ದ ಲೇಖನಗಳನ್ನು ಓದದೆ ಪುಸ್ತಕ ಪೂರ್ಣ ವಾಗುವುದಿಲ್ಲ. ಇನ್ನು ಈ ಪುಸ್ತಕಕ್ಕೆ ‘ಕಾಗೆ ಕಾರುಣ್ಯದ ಕಣ್ಣು’ ಎಂದು ಯಾಕೆ ಹೆಸರಿಟ್ಟೆ ಎಂಬುದನ್ನು ಇಲ್ಲಿ ವಿವರಿಸುವುದಿಲ್ಲ. ಪುಸ್ತಕವನ್ನು ಓದಿದಾಗ ಅದು ಸ್ವಯಂ ಸ್ಪಷ್ಟವಾಗುತ್ತದೆ. ನನ್ನ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದವರು ‘ಅಂಕಿತ ಪುಸ್ತಕ’ದ ಪ್ರಕಾಶ್ ಕಂಬತ್ತಳ್ಳಿ ಮತ್ತು ಅವರ ಪತ್ನಿ ಪ್ರಭಾ ಅವರು. ನನ್ನ ಆಯ್ದ ಅನುಭವಗಳ ಕಥನದ ಪುಸ್ತಕವನ್ನು ಅವರೇ ಪ್ರಕಟಿಸಬೇಕೆಂಬುದು ನನ್ನ ಅಪೇಕ್ಷೆಯಾಗಿತ್ತು. ಎಂದಿನಂತೆ ಪ್ರೀತಿ ವಿಶ್ವಾಸದಿಂದ ಪ್ರಕಟಿಸಿದ್ದಾರೆ. ಅವರಿಗೆ ಮನಸಾರೆ ವಂದನೆಗಳನ್ನು ಸಲ್ಲಿಸುತ್ತೇನೆ. ಡಿ.ಟಿ.ಪಿ. ಮಾಡಿದವರು, ಕರಡು ತಿದ್ದಿದವರು, ಅಚ್ಚು ಹಾಕಿದವರು, ಸ್ನೇಹಿತರು, ಓದುಗರು, ಊರಿನವರು, ಮನೆಯವರು, ಎಲ್ಲರಿಗೂ ನನ್ನ ನಮಸ್ಕಾರಗಳು.

MORE FEATURES

'ಹೆಗಲು': ತ್ಯಾಗ, ನಿಸ್ವಾರ್ಥತೆಯ ಅಪರೂಪದ ಜೀವನಗಾಥೆ

14-12-2025 Bengaluru

"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...

ಅನುಕ್ಷಣ ಅನುಭವಿಸಿ: ಸಮಯ ನಿರ್ವಹಣೆಯ ಮಾರ್ಗದರ್ಶಿ

14-12-2025 BENGALURU

ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...

ಮಕ್ಕಳ ಕಥಾಸಾಹಿತ್ಯ ಸಂವೇದನೆಯ ಹೊಸ ಹೆಜ್ಜೆಗಳು.......

13-12-2025 ಬೆಂಗಳೂರು

"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...