ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್

Date: 01-09-2020

Location: ಬೆಂಗಳೂರು


 

ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ ಇದು. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಇಂಗ್ಲೆಂಡ್‌ನ ಕಲಾವಿದ ಡೇಮಿಯನ್ ಹರ್ಸ್ಟ್‌ ಅವರ ಬಗ್ಗೆ ಬರೆದಿದ್ದಾರೆ.

 

 

ಕಲಾವಿದ: ಡೇಮಿಯನ್ ಹರ್ಸ್ಟ್ (Damien Hirst)

ಜನನ: 07 ಜೂನ್ 1965 (ಬ್ರಿಸ್ಟಲ್, ಇಂಗ್ಲಂಡ್)

ಶಿಕ್ಷಣ: ಬಿಎ ಫೈನ್ ಆರ್ಟ್ಸ್, ಗೋಲ್ಡ್ ಸ್ಮಿತ್ಸ್ ಕಾಲೇಜ್, ಇಂಗ್ಲಂಡ್

ವಾಸ: ಲಂಡನ್, ಗ್ಲಾಸ್ಟರ್ಷೈರ್ ಮತ್ತು ದೆವಾನ್, ಇಂಗ್ಲಂಡ್

ಕವಲು: ಎಕ್ಸೆಸಿವಿಸಂ

ವ್ಯವಸಾಯ: ಕಾನ್ಸೆಪ್ಚುವಲ್ ಆರ್ಟ್, ಇನ್ಸ್ಟಾಲೇಷನ್ ಗಳು, ಪೇಂಟಿಂಗ್ ಗಳು, ಶಿಲ್ಪಗಳು.

ಡೇಮಿಯನ್ ಹರ್ಸ್ಟ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ

ಡೇಮಿಯನ್ ಹರ್ಸ್ಟ್ ಅವರ ಅಧಿಕೃತ ವೆಬ್ ಸೈಟ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

1991ರಲ್ಲಿ ಅಂತಾರಾಷ್ಟ್ರೀಯ ಕಲಾಜಗತ್ತಿಗೆ ಡೇಮಿಯನ್ ಹರ್ಸ್ಟ್ ಅವರದು ಮಿಂಚಿನ ಪ್ರವೇಶ. ಆಸ್ಟ್ರೇಲಿಯನ್ ಮೀನುಗಾರರೊಬ್ಬರಿಂದ ಖರೀದಿಸಿದ 23ಟನ್ ತೂಕದ, 14ಅಡಿ ಉದ್ದದ ಟೈಗರ್ ಶಾರ್ಕ್ ಮೀನನ್ನು ಗಾಜಿನ ಪ್ರದರ್ಶನ ಪೆಟ್ಟಿಗೆಯೊಂದರಲ್ಲಿ ಹಾಕಿ, ಫಾರ್ಮಾಲ್ಡೆಹೈಡ್ ದ್ರಾವಣದಲ್ಲಿ ಅದ್ದಿ, ಅದು ಕೆಡದಂತೆ ಇರಿಸಿದ್ದರು. ಲಂಡನ್ ಉಡ್ ಸ್ಟಾಕ್ ಸ್ಟ್ರೀಟ್ ಕಲಾಗ್ಯಾಲರಿಯಲ್ಲಿ ಅವರ Natural History (1991–2013) ಸರಣಿಯ The Physical Impossibility of Death in the Mind of Someone Living ಹೆಸರಿನ ಕಲಾಕೃತಿ ಇದು (1991). ಸಾವು ಡೇಮಿಯನ್ ಹರ್ಸ್ಟ್ ಅವರ ಕಲಾಕೃತಿಗಳಲ್ಲಿ ಚಿಂತನೆಗೆ ಮೂಲ ವಸ್ತು. ನಾವೆಷ್ಟು ತಪ್ಪಿಸಿಕೊಳ್ಳಲು ಯತ್ನಿಸಿದರೂ ಸಾವು ತನ್ನ ರಾಕ್ಷಸಾಕಾರದಿಂದ ನಮ್ಮ ಸುತ್ತ ಇದ್ದು ನಮ್ಮನ್ನು ಕಾಡುತ್ತಿರುತ್ತದೆ ಎಂಬುದನ್ನು ಹರ್ಸ್ಟ್ ಕಲಾತ್ಮಕವಾಗಿ ಕಟ್ಟಿಕೊಟ್ಟದ್ದು ಹೀಗೆ.

ವಿದ್ಯಾರ್ಥಿ ದೆಸೆಯಲ್ಲೇ ತನ್ನ ಸಹವಿದ್ಯಾರ್ಥಿಗಳೊಂದಿಗೆ 1988ರಲ್ಲಿಫ್ರೀಝ್ಎಂಬ ಕಲಾ ಪ್ರದರ್ಶನ ಏರ್ಪಡಿಸುವ ಮೂಲಕ ಇಂಗ್ಲಂಡ್ ನಲ್ಲಿ ಎಳೆಯ ಬ್ರಿಟಿಷ್ ಕಲಾವಿದರು (YBA) ಎಂಬ ಚಳುವಳಿಯನ್ನೇ ಹುಟ್ಟುಹಾಕಿದ ಹರ್ಸ್ಟ್, ತನ್ನ ಕಲಾಕೃತಿಗಳು ಒಡ್ಡುವ ಗಾತ್ರ, ಆಘಾತ, ಅಚ್ಚರಿಗಳ ಕಾರಣದಿಂದಾಗಿ ಆರಂಭದಲ್ಲೇ ಜಗತ್ತಿನಾದ್ಯಂತ ಸುದ್ದಿಯಾದರು. ಶವಾಗಾರದಲ್ಲಿ ನಗುವ ಮನುಷ್ಯನ ತಲೆಯ ಜೊತೆ ತನ್ನ ಚಿತ್ರ, ಕುರಿ, ದನ, ಝೀಬ್ರಾದಂತಹ ಪ್ರಾಣಿಗಳನ್ನು ಅಡ್ಡಡ್ಡ ಕತ್ತರಿಸಿ ಫಾರ್ಮಾಲ್ಡೆಹೈಡ್ ದ್ರಾವಣದಲ್ಲಿರಿಸಿ ಗ್ಯಾಲರಿಯಲ್ಲಿ ಪ್ರದರ್ಶನಹೀಗೆ ನ್ಯಾಚುರಲ್ ಹಿಸ್ಟರಿ ಸರಣಿ ಹರ್ಸ್ಟ್ ಗೆ ಪ್ರಸಿದ್ಧಿ ತಂದುಕೊಟ್ಟಿತು. ಅದರೊಂದಿಗೇ, ಇಂಗ್ಲಂಡಿನ ಸಾಚಿ ಗ್ಯಾಲರಿ ಆರಂಭದಲ್ಲೇ ನೀಡಿದ ಬೆಂಬಲದಿಂದಾಗಿ ಮಾರುಕಟ್ಟೆಯಲ್ಲಿ ತನ್ನ ಕಲಾಕೃತಿಗಳಿಗೆ ಊಹಿಸಲೂ ಅಸಾಧ್ಯವಾದ ಬೆಲೆಗಳನ್ನು ಪಡೆಯಲು ಶಕ್ತರಾದ ಹರ್ಸ್ಟ್ 2000ನೇ ಇಸವಿಯ ಹೊತ್ತಿಗೆ ಜಗತ್ತಿನ ಅತಿ ಸಿರಿವಂತ ಸಮಕಾಲೀನ ಕಲಾವಿದರಾಗಿಬಿಟ್ಟಿದ್ದರು.

ಆದರೆ, ಹಣ, ಪ್ರಸಿದ್ಧಿಯೇ ಅವರಿಗೆ ಮುಳುವಾಯಿತು. ಸಾಚಿ ಗ್ಯಾಲರಿ ಜೊತೆ ವೈಮನಸ್ಸು ಮಾಡಿಕೊಂಡು ತನ್ನ ಕಲಾಕೃತಿಗಳನ್ನು ಮಾರಲು ಗ್ಯಾಲರಿ ಹಂಗು ತೊರೆದು ತಾನೇ ನೇರ ಹರಾಜುಕಟ್ಟೆಗೆ ತನ್ನ ಕಲಾಕೃತಿಗಳನ್ನು ಒಯ್ಯಲು ವ್ಯವಸ್ಥೆ ಮಾಡಿಕೊಂಡ ಹರ್ಸ್ಟ್, ತನ್ನ ಮಾರುಕಟ್ಟೆ ಕುದುರುತ್ತಿದ್ದ ಹಂತದಲ್ಲಿ ನೂರಾರು ಮಂದಿಯನ್ನು ತನ್ನ ಸಹಾಯಕರನ್ನಾಗಿ ಉದ್ಯೋಗಕ್ಕೆ ಇರಿಸಿಕೊಂಡು 2008ರಲ್ಲಿ ಸುಮಾರು 1200ಕೋಟಿ ರೂ (20ಕೋಟಿ ಡಾಲರ್) ಮೌಲ್ಯದ ಕಲಾಕೃತಿಗಳನ್ನು ನೇರವಾಗಿ ಸೂದ್ ಬೀಸ್ (Sotheby’s) ಹರಾಜುಕಟ್ಟೆಯಲ್ಲಿ ಮಾರಿದರು. ಇದರಿಂದಾಗಿ ಕಲಾಮಾರುಕಟ್ಟೆಗೂ ಅವರಿಗೂ ತಾಕಲಾಟ ಆರಂಭವಾಗಿ, ಅವರ ಕಲಾಕೃತಿಗಳ ಬೆಲೆ ಇಳಿಯಲಾರಂಭಿಸಿತು. ಹಿಂದೆ ಅವರ ಕಲಾಕೃತಿಗಳ ಮೇಲೆ ಹೂಡಿಕೆ ಮಾಡಿದ್ದವರಿಗೆ ನಷ್ಟ ಆಯಿತು.

ಕಾರ್ ಮ್ಯೆಕಾನಿಕ್ ಒಬ್ಬರ ಮಗನಾಗಿ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಹರ್ಸ್ಟ್ ಗೆ ರೋಗಗಳು ಮತ್ತು ಜಖಂಗಳ ಬಗ್ಗೆ ಬಹಳ ಕುತೂಹಲ ಇತ್ತು. ಅವು ಅವರ ಕಲಾಕೃತಿಗಳಲ್ಲೂ ಕಾಣಿಸಿಕೊಂಡಿವೆ. 1993ರಲ್ಲಿ ವೆನೀಸ್ ಬಯೆನ್ನಾಲ್ ನಲ್ಲಿ ಪ್ರದರ್ಶಿಸಿದ ಕತ್ತರಿಸಲಾದ ದನ ಮತ್ತು ಕರುವಿನ ದೇಹ Mother and Child Divided,” ಇನ್ಸ್ಟಾಲೇಷನ್ ಮತ್ತು ಬಳಿಕ 1995ರಲ್ಲಿ ಕೊಳೆಯುತ್ತಿರುವ ದನದ ದೇಹವನ್ನು ಅಮೆರಿಕದ ಗ್ಯಾಲರಿಯಲ್ಲಿ ಪ್ರದರ್ಶಿಸಲು ಪ್ರಯತ್ನಿಸಿದಾಗ ಅದಕ್ಕೆ ಅವಕಾಶ ಸಿಗದಿದ್ದುದುಹೀಗೆ ಹರ್ಸ್ಟ್ ಪ್ರಸಿದ್ಧಿಯ ಜೊತೆಗೆ ವಿವಾದಾಸ್ಪದರೂ ಆಗಿದ್ದರು.

ಅವರ ಇನ್ನೊಂದು ವಿವಾದಾಸ್ಪದ ಕಲಾಕೃತಿ, ಮನುಷ್ಯನ ತಲೆಬುರುಡೆಯ ಪ್ಲಾಟಿನಂ ಎರಕದ ಮೇಲೆ 8601 ಅಮೂಲ್ಯ ವಜ್ರಗಳನ್ನು ಬಳಸಿ, ವಜ್ರಖಚಿತಗೊಳಿಸಿ ಇಟಲಿಯ ನೇಪಲ್ಸ್ ನ್ಯಾಷನಲ್ ಆರ್ಕಿಯಾಲಜಿ ಮ್ಯೂಸಿಯಂ ಕಲಾಗ್ಯಾಲರಿಯಲ್ಲಿ ಪ್ರದರ್ಶಿಸಿದ್ದು. For the Love of God (2007) ಹೆಸರಿನ ಕಲಾಕೃತಿಯನ್ನು ಲಂಡನ್ ವೈಟ್ ಕ್ಯೂಬ್ ಗ್ಯಾಲರಿಯ ಹೆಸರಿನಲ್ಲಿ ಅಂದಾಜು 650ಕೋಟಿ ರೂ. (10ಕೋಟಿ ಡಾಲರ್) ಗಳಿಗೆ ಮಾರಲಾಯಿತು. ಖರೀದಿದಾರರ ತಂಡದಲ್ಲಿ ಸ್ವತಃ ಕಲಾವಿದನೂ ಇದ್ದರು!

ಜಗತ್ತಿನ ಅತ್ಯಂತ ದುಬಾರಿ ಕಲಾಕೃತಿ ಮಾರಾಟದ ದಾಖಲೆಯೂ ಹರ್ಸ್ಟ್ ಹೆಸರಲ್ಲೇ ಇದೆ. 2007ರಲ್ಲಿ ಅವರ Lullaby Spring ಕಲಾಕೃತಿಯನ್ನು ಕತಾರ್ ಅಮೀರ್ ಅಂದಾಜು 1150ಕೋಟಿ ರೂ. (19.2 ಮಿಲಿಯನ್ ಡಾಲರ್) ನೀಡಿ ಖರೀದಿಸಿದ್ದರು. ಹಾಗಾಗಿ ಇಂದಿಗೂ ಜೀವಂತ ಇರುವ ಅತ್ಯಂತ ಸಿರಿವಂತ ಕಲಾವಿದ ಹರ್ಸ್ಟ್.

ಔಷಧಿ- ವೈದ್ಯಕೀಯ ಸಲಕರಣೆಗಳು ತುಂಬಿದ ಕ್ಯಾಬಿನೆಟ್ ಗಳ ಸರಣಿ Pharmacy (1992), ದೇಹದ ಒಳಭಾಗಗಳ ಪಾಲಿಕ್ರೋಂ-ಹಿತ್ತಾಳೆ ಶಿಲ್ಪ Hymn (1999-2001), ಚಿಟ್ಟೆಯ ರೆಕ್ಕೆಗಳನ್ನು ದೃಶ್ಯ ಲಯಬದ್ಧವಾಗಿ ಅಂಟಿಸಿದ Entomology Paintings ಸರಣಿ, ಬಣ್ಣವನ್ನು ಸುರುಳಿಸುರುಳಿಯಾಗಿ ಕ್ಯಾನ್ವಾಸ್ ಮೇಲೆ ಸುರಿಯುವ spin paintings ಸರಣಿ (2012) ಬಣ್ಣದ ಚುಕ್ಕೆಗಳ Kaleidoscope Paintings (2013) ಹರ್ಸ್ಟ್ ಅವರ ಗಮನಾರ್ಹ ಕೃತಿಗಳಾಗಿದ್ದು, ಸದ್ಯ ಅವರು ಮಾರುಕಟ್ಟೆಯಬಿಸಿಕಲಾವಿದರಲ್ಲ; ಆದರೆ ಕೊರೊನಾ ಸಂಕಷ್ಟ ಕಾಲದಲ್ಲಿ ಇಂಗ್ಲಂಡಿನ ಆರೋಗ್ಯ ಸೇವಾ ವ್ಯವಸ್ಥೆ (NHS)ಗೆ ಬೆಂಬಲವಾಗಿ ನಿಧಿ ಸಂಗ್ರಹಿಸಲು Butterfly Rainbow ಸರಣಿ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ.

ಆರಂಭದಲ್ಲಿ ಹರ್ಸ್ಟ್ ಅವರಿಗೆ ಹೆಸರು-ದುಡ್ಡು ಮತ್ತು ಸಮಕಾಲೀನ ಕಲಾಜಗತ್ತಿನಲ್ಲಿ ಸ್ಥಾನ ತಂದುಕೊಟ್ಟ ಶಾರ್ಕ್ ಕಲಾಕೃತಿ ಒಂದು ತುದಿಯಾದರೆ, ಇಂದು ಮಾರುಕಟ್ಟೆಯ ಛವಿ ಕಳೆದುಕೊಂಡು, ತನ್ನ ಪೇಂಟಿಂಗ್ ಸರಣಿಗಳಿಗೆ ಸಾಮಾನ್ಯ ದರ್ಜೆಯ ಕಲಾವಿದ ಎಂದು ಕಲಾವಿಮರ್ಶಕರಿಂದ ಅನ್ನಿಸಿಕೊಳ್ಳುತ್ತಿರುವ ಹರ್ಸ್ಟ್ ಇನ್ನೊಂದು ತುದಿ. ಇದು ಹರ್ಸ್ಟ್ ಅತಿವೇಗಕ್ಕೆ ತೆತ್ತ ಬೆಲೆ.


ಡೇಮಿಯನ್ ಹರ್ಸ್ಟ್ ಅವರ ಪರಿಚಯ - ಸಂದರ್ಶನ (ಒಂದು ಹಳೆಯದು, ಒಂದು ಇತ್ತೀಚೆಗಿನದು) ಇಲ್ಲಿವೆ:

http://damienhirst.com/video/2007/newsnight

 

 


ಹರ್ಸ್ಟ್ ಅವರ . For the Love of God (2007)

ಹರ್ಸ್ಟ್ ಅವರ Mother and Child Divided (1993)

ಹರ್ಸ್ಟ್ ಅವರ The Physical Impossibility of Death in the Mind of Someone Living (1991)

ಹರ್ಸ್ಟ್ ಅವರ Kaleidoscope Paintings (2013) ಸರಣಿಯ ಕಲಾಕೃತಿ

ಹರ್ಸ್ಟ್ ಅವರ spin paintings (2012) ಸರಣಿಯ ಕಲಾಕೃತಿ

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...