ಅವರ ಅನೇಕ ಲೇಖನಗಳ ಮೊದಲ ಓದುಗನೂ ನಾನೇ ಆಗಿದ್ದೆ; ಸುಭಾಷ್ ರಾಜಮಾನೆ


"ಇಲ್ಲಿಯ ಬರಹಗಳು ಎರಡು ಕಾರಣಗಳಿಂದ ಮುಖ್ಯವಾಗಿವೆ. ಮೊದಲನೆಯದಾಗಿ, ಬರಹಗಳು ವೈವಿಧ್ಯಮಯ ಹೂರಣದಿಂದ ಓದುವವರ ಗಮನ ಸೆಳೆಯುತ್ತವೆ. ಲೇಖಕರು ವಿಷಯಗಳನ್ನು ತಾತ್ವಿಕವಾಗಿ ವಿಶ್ಲೇಷಣೆಗೆ ಒಳಪಡಿಸುವಾಗ ವರ್ತಮಾನದ ನೆಲೆಗಟ್ಟನ್ನು ಪ್ರಧಾನ ಭೂಮಿಕೆಯನ್ನಾಗಿ ರೂಪಿಸಿಕೊಂಡಿದ್ದಾರೆ," ಎನ್ನುತ್ತಾರೆ ಸುಭಾಷ್ ರಾಜಮಾನೆ. ಅವರು ಡಾ. ರಿಯಾಜ್ ಪಾಷ ಅವರ ‘ನಿಮ್ಮೊಡನಿದ್ದೂ’ ಕೃತಿಗೆ ಬರೆದ ಬೆನ್ನುಡಿ.

ಯಲಹಂಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಿಯಾಜ್ ಅವರೊಂದಿಗೆ ನಾಲ್ಕು ವರ್ಷಗಳ ಕಾಲ ಸಹೋದ್ಯೋಗಿಯಾಗಿದ್ದೆ. ನಂನಮ್ಮ ತರಗತಿಗಳು ಮುಗಿದ ನಂತರ ಸ್ಟಾö್ಯಫ್‌ರೂಮಿನಲ್ಲಿ, ಕಾಲೇಜು ಕ್ಯಾಂಪಸ್ಸಿನಲ್ಲಿ, ಕ್ಯಾಂಟೀನಿನಲ್ಲಿ ಬಹಳಷ್ಟು ವಿಷಯಗಳ ಬಗ್ಗೆ ಪರಸ್ಪರ ಚರ್ಚಿಸುತ್ತಿದ್ದೆವು. ನನ್ನ ಬರಹಗಳ ಮೊದಲ ಓದುಗರು ರಿಯಾಜ್‌ರೆ ಆಗಿದ್ದರು. ತಮ್ಮ ಸೂಕ್ಷ್ಮ ಗ್ರಾಹಿ ಗ್ರಹಿಕೆಯಿಂದ ತೆರೆದು ತೋರಿಸುತ್ತಿದ್ದ ಇತಿಮಿತಿಗಳು ನನ್ನ ಪಾಲಿಗೆ ತುಂಬಾ ಪ್ರಯೋಜನಕಾರಿಯಾಗಿದ್ದವು. ಅವರ ಅನೇಕ ಲೇಖನಗಳ ಮೊದಲ ಓದುಗನೂ ನಾನೇ ಆಗಿದ್ದೆ. ಆ ಬರಹಗಳಿಗೆ ಎಷ್ಟೇ ನಿಷ್ಠುರತೆಯಿಂದ ಪ್ರತಿಕ್ರಿಯಿಸಿದರೂ ಅದನ್ನು ಸ್ವೀಕರಿಸುವ ಮನೋಭಾವ ಅವರಲ್ಲಿತ್ತು. ಈಗ ಆ ಬರಹಗಳೇ ‘ನಿಮ್ಮೊಡನಿದ್ದೂ...’ ಕೃತಿಯಾಗಿ ಸಂಕಲನಗೊAಡಿದೆ.

ಇಲ್ಲಿಯ ಬರಹಗಳು ಎರಡು ಕಾರಣಗಳಿಂದ ಮುಖ್ಯವಾಗಿವೆ. ಮೊದಲನೆಯದಾಗಿ, ಬರಹಗಳು ವೈವಿಧ್ಯಮಯ ಹೂರಣದಿಂದ ಓದುವವರ ಗಮನ ಸೆಳೆಯುತ್ತವೆ. ಲೇಖಕರು ವಿಷಯಗಳನ್ನು ತಾತ್ವಿಕವಾಗಿ ವಿಶ್ಲೇಷಣೆಗೆ ಒಳಪಡಿಸುವಾಗ ವರ್ತಮಾನದ ನೆಲೆಗಟ್ಟನ್ನು ಪ್ರಧಾನ ಭೂಮಿಕೆಯನ್ನಾಗಿ ರೂಪಿಸಿಕೊಂಡಿದ್ದಾರೆ. ಆದ್ದರಿಂದ ಜಾನಪದ, ಶಿಕ್ಷಣ, ಭಾಷೆ, ಕ್ರಿಕೆಟ್, ಪುಸ್ತಕ ಹಾಗೂ ವ್ಯಕ್ತಿ-ಕೇಂದ್ರಿತ ಬರಹಗಳು ನಮ್ಮ ಕಾಲಕ್ಕೆ ಹೆಚ್ಚು ಪ್ರಸ್ತುತವಾಗಿ ತೋರುತ್ತವೆ. ಎರಡನೆಯದಾಗಿ, ಲೇಖಕರು ಸಾಮಾಜಿಕ, ಸಾಹಿತ್ಯಿಕ, ಸಾಂಸ್ಕೃತಿಕ ಸಂಗತಿಗಳ ಬಗ್ಗೆ ಮುಖಾಮುಖಿಯಾಗುವ ರೀತಿ ವಿಶಿಷ್ಟವಾಗಿದೆ; ವಾಸ್ತವವಾಗಿ ತಾವು ಕಂಡ ಲೋಕಾನುಭವದ ಜೊತೆಯಲ್ಲಿ ತಮ್ಮ ವೈಯಕ್ತಿಕ ಜೀವನಾನುಭವಗಳನ್ನು ಅಲ್ಲಲ್ಲಿ ಒರೆಗೆ ಹಚ್ಚಿ ನೋಡಿದ್ದಾರೆ. ಇದರಿಂದಾಗಿ ಅನೇಕ ಬರಹಗಳಿಗೆ ಆತ್ಮಾವಲೋಕನದ ಗುಣ ಪ್ರಾಪ್ತವಾಗಿದೆ.

ಕೃತಿಯ ಮತ್ತೊಂದು ಮಹತ್ವದ ವಿಚಾರವೆಂದರೆ, ನಮ್ಮ ಸಮಾಜದಲ್ಲಿ ಮುಸಲ್ಮಾನ ಸಮುದಾಯದವರ ಕುರಿತು ಆಳವಾಗಿ ಬೇರೂರಿರುವ ಪೂರ್ವಗ್ರಹಪೀಡಿತ ಮನಸ್ಥಿತಿಗಳ ಬಗ್ಗೆ ರಿಯಾಜ್ ಅವರು ಅಪಾರವಾದ ತಾಳ್ಮೆ, ಸಂಯಮದಿAದ ಎದುರುಗೊಂಡಿದ್ದಾರೆ. ರಿಯಾಜ್‌ರ ಬಹುತೇಕ ಬರಹಗಳಲ್ಲಿ ಜಾತ್ಯತೀತತೆ, ಸಾಂಸ್ಕೃತಿಕ ಬಹುತ್ವ ಹಾಗೂ ಧಾರ್ಮಿಕ ಸಹಿಷ್ಣುತೆಯ ಮೌಲ್ಯಗಳು ಹಾಸುಹೊಕ್ಕಾಗಿವೆ. ಸಂವೇದನಾಶೀಲ ಮಿತ್ರರಾದ ರಿಯಾಜ್‌ರ ‘ನಿಮ್ಮೊಡನಿದ್ದೂ...’ ಕೃತಿಯು ಹೆಚ್ಚು ಜನರಿಗೆ ತಲುಪುವಂತಾಗಲಿ ಎಂದು ಆಶಿಸುತ್ತೇನೆ.

- ಸುಭಾಷ್ ರಾಜಮಾನೆ

MORE FEATURES

ಮರೆತು ಹೋದ ವಾಸ್ತವಗಳಿಗೆ ಬರಹದ ರೂಪ ಕೊಟ್ಟಿರುವುದು ಆಕಸ್ಮಿಕ: ಶ್ರೀಧರ್ ನಾಯಕ್

21-10-2024 ಬೆಂಗಳೂರು

“ನಾನು ಹತ್ತು ಹಲವು ಹವ್ಯಾಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಪುಸ್ತಕಗಳ ಓದು, ಪ್ರವಾಸ, ಛಾಯಾಚಿತ್ರಗ್ರಹಣ, ಇಂಗ್ಲಿ...

'ಸದರಬಜಾ‌ರ್' ಕಾದಂಬರಿಯ ವಸ್ತು ಎಂಬತ್ತನೆಯ ದಶಕದ್ದು

21-10-2024 ಬೆಂಗಳೂರು

“ಬೃಹತ್ ಕಾದಂಬರಿಯ ರಚನೆಯನ್ನು ಕೈಗೆತ್ತಿಕೊಳ್ಳುವ ಮುನ್ನ ಕ್ರಿಕೆಟ್ ಪರಿಭಾಷೆಯಲ್ಲಿ ಹೇಳುವಂತೆ, ಟೆಸ್ಟ್ ಕ್ರಿಕೆಟ...

ಹೂವು-ಹಣ್ಣು-ಹಸಿರು ತರಕಾರಿಗಳಿಲ್ಲದ ಜೀವನ ಬೇಗೆಯ ಬರಡು..

20-10-2024 ಬೆಂಗಳೂರು

“ಕಾಡು ನಾಡಾಗುತ್ತಿದೆ, ಹೊಲಗದ್ದೆಗಳು ನಿವೇಶನಗಳಾಗುತ್ತಿವೆ. ನೆಲದ ಕಸುವು ಇಲ್ಲವಾಗುತ್ತಿದೆ. ಬಗೆಬಗೆಯ ಹಣ್ಣು, ತ...