ಜಾಗತಿಕ ಸಾಹಿತ್ಯಲೋಕದಲ್ಲಿ ಬೆಳಗಿದ ಕನ್ನಡದ `ಹೃದಯ ದೀಪ';ಬಾನು ಮುಷ್ತಾಕ್‌ ಮುಡಿಗೇರಿದ ಬೂಕರ್‌


ಲಂಡನ್: ನಾಲ್ಕೂವರೆ ಕೋಟಿ ಕನ್ನಡಿಗರ ಮನದಾಸೆ ಮತ್ತು ಎರಡು ಸಾವಿರದ ಐನೂರು ವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯ ಲೋಕ ಇಂದು ಅಕ್ಷರಶಃ ಸಿಮೋಲಂಘನ ಮಾಡಿ ಅಂತರ್‌ ರಾಷ್ಟ್ರೀಯ ಮಟ್ಟದಲ್ಲಿ ತನ್ನ ಬಲವಾದ ಹೆಜ್ಜೆ ಗುರುತನ್ನು ಮೂಡಿಸಿತು.

ಹಾಸನ ಮೂಲದ ಕನ್ನಡದ ಹಿರಿಯ ಲೇಖಕಿ ಬಾನು ಮುಷ್ತಾಕ್ ಅವರ ಆಯ್ದ ಹನ್ನೆರಡು ಕಥೆಗಳನ್ನು ದೀಪಾ ಭಸ್ತಿ ಅವರು ಇಂಗ್ಲಿಷ್‌ಗೆ ಭಾಷಾಂತರ ಮಾಡಿ ಪ್ರಕಟವಾಗಿರುವ ’ಹಾರ್ಟ್ ಲ್ಯಾಂಪ್’ ಕೃತಿ ಅಂತರ್‌ ರಾಷ್ಟ್ರೀಯ ಬೂಕರ್‌ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು. ಮಂಗಳವಾರ ರಾತ್ರಿ ಲಂಡನ್ ನಗರದ ಟೇಟ್ ಮಾಡರ್ನ್ ಆರ್ಟ್ ಗ್ಯಾಲರಿಯಲ್ಲಿ ನಡೆದ ಸಮಾರಂಭದಲ್ಲಿ ’ಹಾರ್ಟ್ ಲ್ಯಾಂಪ್’ ಕೃತಿಯನ್ನು ಈ ಬಾರಿಯ ಅಂತರ್‌ ರಾಷ್ಟ್ರೀಯ ಪ್ರಶಸ್ತಿ ಪಡೆದ ಕೃತಿ ಎಂದು ಘೋಷಿಸಲಾಯಿತು.

ಈ ಮೂಲಕ ಹಿಂದಿಯೇತರ ಭಾಷೆಗೆ ಮೊದಲ ಬಾರಿಗೆ ಅಂತರ್ ರಾಷ್ಟ್ರೀಯ ಬೂಕರ್‌ ಮನ್ನಣೆ ತಂದುಕೊಟ್ಟ ಹಿರಿಮೆ ಕನ್ನಡದ ಲೇಖಕಿ ಬಾನು ಮುಷ್ತಾಕ್‌ ಹಾಗೂ ಅನುವಾದಕಿ ದೀಪಾ ಭಸ್ತಿ ಅವರಿಗೆ ಸಂದಿತು. ಐವತ್ತು ಸಾವಿರ ಪೌಂಡ್‌ ಮೊತ್ತದ ಪ್ರಶಸ್ತಿಯನ್ನು ಲೇಖಕಿ ಮತ್ತು ಅನುವಾದಕಿಗೆ ಸಮನಾಗಿ ಹಂಚಲಾಯಿತು.


ಕನ್ನಡ ಮಾತ್ರವಲ್ಲದೇ ಹಿಂದಿಯೇತರ ಭಾರತೀಯ ಭಾಷೆಯ ಬರಹಕ್ಕೆ ಸಂದ ಅಪರೂಪದ- ಅಪೂರ್ವ ಗೌರವ ಇದಾಗಿದೆ. ಈ ಪ್ರತಿಷ್ಠಿತ ಪ್ರಶಸ್ತಿಯ ಮೂಲಕ ದಕ್ಷಿಣ ಭಾರತದ ಭಾಷೆಯಲ್ಲಿ ರಚನೆಯಾದ ಕಥೆಗಳು ಇಂಗ್ಲಿಷ್‌ ಕಿಟಕಿಯ ಮೂಲಕ ಜಗತ್ತಿನಾದ್ಯಂತ ಇರುವ ಓದುಗರಿಗೆ ಲಭ್ಯವಾಗಲಿವೆ. ಅಂತರ್‌ ರಾಷ್ಟ್ರೀಯ ಬೂಕರ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದ ಕನ್ನಡದ ಲೇಖಕಿ ಬಾನು ಮುಷ್ತಾಕ್‌ ಮತ್ತು ಅನುವಾದಕಿ ದೀಪಾ ಭಸ್ತಿ ಅವರು ಪ್ರಶಸ್ತಿ ಪಡೆದ ಗಳಿಯು ಕನ್ನಡಿಗರಿಗೆ ಹೆಮ್ಮೆ ಮತ್ತು ಅಭಿಮಾನವನ್ನುಂಟು ಮಾಡಿದ ಕ್ಷಣಗಳಾಗಿದ್ದವು.

ನೊಬೆಲ್ ನಂತರ, ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ ಎಂದೇ ಗುರುತಿಸಲಾಗುವ ಅಂತರ್‌ ರಾಷ್ಟ್ರೀಯ ಬೂಕರ್‌ ಪ್ರಶಸ್ತಿ ’ಹಾರ್ಟ್ ಲ್ಯಾಂಪ್’ ಕೃತಿಗೆ ಬರುವ ಮೂಲಕ ಹಾಸನ ಮೂಲದ ಕನ್ನಡದ ಅಪ್ಪಟ ಪ್ರತಿಭೆ, ಅದ್ಭುತ ಲೇಖಕಿ, ಹುಟ್ಟು ಹೋರಾಗಾರ್ತಿ ಬಾನು ಮುಷ್ತಾಕ್ ಅವರು ದಕ್ಷಿಣ ಭಾರತದ ಭಾಷೆಗಳಿಗೆ ಅಂತರ್‌ ರಾಷ್ಟ್ರೀಯ ಬೂಕರ್‌ ಪ್ರಶಸ್ತಿ ತಂದು ಕೊಟ್ಟ ಪ್ರಪ್ರಥಮ ಲೇಖಕಿ ಎಂಬ ಅಸಾಧಾರಣ ಸಾಧನೆಗೆ ಕಾರಣರಾಗಿದ್ದಾರೆ.


ಅಂತರ್‌ ರಾಷ್ಟ್ರೀಯ ಬೂಕರ್‌ ಪ್ರಶಸ್ತಿಯ ಕಿರು ಪಟ್ಟಿಯಲ್ಲಿರುವ ಆರು ಕೃತಿಗಳ ಪೈಕಿ ’ಹಾರ್ಟ್ ಲ್ಯಾಂಪ್’ ಕಥಾ ಸಂಕಲನವಾದರೆ, ಉಳಿದ ಐದು ಕೃತಿಗಳು ಕಾದಂಬರಿಗಳಾಗಿದ್ದವು. ಜಗತ್ತಿನ ಬೇರೆ, ಬೇರೆ ಭಾಷೆಗಳಿಂದ ಇಂಗ್ಲಿಷ್ ಗೆ ಭಾಷಾಂತರಗೊಂಡವುಗಳಾಗಿದ್ದವು. ಭಾರತೀಯ ಮುಸ್ಲಿಂ ಜಗತ್ತಿನ ಕುರಿತು ತೀವ್ರವಾದ ಒಳನೋಟಗಳನ್ನು ಹೊಂದಿರುವ ಭಾನು ಮುಷ್ತಾಕ್ ಅವರ ಆಯ್ದ ಹನ್ನೆರಡು ಕಥೆಗಳನ್ನು ದೀಪಾ ಭಸ್ತಿ ಅವರು ಅತ್ಯಂತ ಪರಿಣಾಮಕಾರಿಯಾಗಿ ಇಂಗ್ಲಿಷ್ ಭಾಷೆಗೆ ಅನುವಾದಿಸಿದ್ದರು.


ಅಂತಿಮಪಟ್ಟಿಯಲ್ಲಿದ್ದ ಇನ್ನಿತರ ಐದು ಕೃತಿಗಳೆಂದರೆ, ಮಾರ್ಕ್ ಹಚಿನ್ಸನ್ ಫ್ರೆಂಚ್ ಭಾಷೆಯಿಂದ ಇಂಗ್ಲಿಷ್ ಗೆ ಭಾಷಾಂತರ ಮಾಡಿದ ’ಅ ಲಿಯೊಪಾರ್ಡ್ ಸ್ಕಿನ್ ಹ್ಯಾಟ್’; ಸೋಫಿ ಹ್ಯೂಸ್ ಇಟಾಲಿಯನ್ ಭಾಷೆಯಿಂದ ಇಂಗ್ಲಿಷ್ ಗೆ ಭಾಷಾಂತರ ಮಾಡಿದ ವಿನ್ಸೆಂಜೊ ಲಾಟ್ರೊನಿಕೊ ಅವರ ’ಪರ್ಫೆಕ್ಷನ್’; ಅಸಾ ಯೊನೆಡಾ ಜಪಾನಿ ಭಾಷೆಯಿಂದ ಇಂಗ್ಲಿಷ್ ಗೆ ಭಾಷಾಂತರ ಮಾಡಿದ ಹಿರೊಮಿ ಕವಕಾಮಿ ಅವರ ’ಅಂಡರ್‌ ದಿ ಐ ಆಫ್ ಬಿಗ್ ಬರ್ಡ್’; ಹೆಲೆನ್ ಸ್ಟೆವೆನ್ಸನ್ ಅವರು ಫ್ರೆಂಚ್ ನಿಂದ ಇಂಗ್ಲಿಷ್ ಗೆ ಭಾಷಾಂತರ ಮಾಡಿದ ವಿನ್ಸೆಂಟ್ ಡೆಲೆಕ್ರೊಯಿಸ್ ಅವರ ’ಸ್ಮಾಲ್ ಬೋಟ್’ ಮತ್ತು ಬಾರ್ಬರಾ ಜೆ.ಹೆವ್ಲೆಂಡ್ ಅವರು ಡ್ಯಾನಿಷ್ ನಿಂದ ಇಂಗ್ಲಿಷ್ ಗೆ ಭಾಷಾಂತರ ಮಾಡಿದ ಸೊಲ್ವೆಜ್ ಬಾಲ್ಲೆ ಅವರ ’ಆನ್ ದಿ ಕ್ಯಾಲುಕ್ಯುಲೇಷನ್ ಆಫ್ ವಾಲ್ಯೂಂ’.


ಅಂತರ್‌ ರಾಷ್ಟ್ರೀಯ ಬೂಕರ್‌ ಪ್ರಶಸ್ತಿಗೆ ಭಾಜನರಾಗಿರುವ ಬಾನು ಮುಷ್ತಾಕ್ – ದೀಪಾ ಭಸ್ತಿ ಜೋಡಿಗೆ ’ಬುಕ್ ಬ್ರಹ್ಮ’ದ ಹೃದಯ ಪೂರ್ವಕ ಅಭಿನಂದನೆಗಳು.

MORE FEATURES

'ಹೆಗಲು': ತ್ಯಾಗ, ನಿಸ್ವಾರ್ಥತೆಯ ಅಪರೂಪದ ಜೀವನಗಾಥೆ

14-12-2025 Bengaluru

"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...

ಅನುಕ್ಷಣ ಅನುಭವಿಸಿ: ಸಮಯ ನಿರ್ವಹಣೆಯ ಮಾರ್ಗದರ್ಶಿ

14-12-2025 BENGALURU

ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...

ಮಕ್ಕಳ ಕಥಾಸಾಹಿತ್ಯ ಸಂವೇದನೆಯ ಹೊಸ ಹೆಜ್ಜೆಗಳು.......

13-12-2025 ಬೆಂಗಳೂರು

"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...