“ಆಲಿವರ್'ರ ಕವಿತೆಗಳನ್ನು ಆಂತರ್ಯದಲ್ಲಿ ಅನುಭವಿಸಿ, ಅನುವಾದಿಸುವದರ ಮೂಲಕ ಮೂಲ ಕವಿತೆಗಳ ಆಶಯಕ್ಕೆ ಮತ್ತಷ್ಟು ಮೆರಗು ತಂದುಕೊಡುವ ಪ್ರಯತ್ನದಲ್ಲಿ ಚೈತ್ರಾ ಗೆದ್ದಿರುವರು,” ಎನ್ನುತ್ತಾರೆ ಕಲ್ಲೇಶ್ ಕುಂಬಾರ್. ಅವರು ಚೈತ್ರಾ ಶಿವಯೋಗಿಮಠ ಅವರ “ಆಕಾಶ ನದಿ ಬಯಲು” ಕೃತಿ ಕುರಿತು ಬರೆದ ಅನಿಸಿಕೆ.
'ಆಕಾಶ ನದಿ ಬಯಲು' (ಮೇರಿ ಆಲಿವರ್'ರ ಕವಿತೆಗಳು) ಶೀರ್ಷಿಕೆಯ ಅನುವಾದಿತ ಕವನಸಂಕಲನವನ್ನು ಪದೆ ಪದೆ ಓದಿದೆ. ಆಲಿವರ್'ರ ಕವಿತೆಗಳನ್ನು ಆಂತರ್ಯದಲ್ಲಿ ಅನುಭವಿಸಿ, ಅನುವಾದಿಸುವದರ ಮೂಲಕ ಮೂಲ ಕವಿತೆಗಳ ಆಶಯಕ್ಕೆ ಮತ್ತಷ್ಟು ಮೆರಗು ತಂದುಕೊಡುವ ಪ್ರಯತ್ನದಲ್ಲಿ ಚೈತ್ರಾ ಗೆದ್ದಿರುವರು. ಈ ವಿಚಾರದಲ್ಲಿ ಅವರಿಗೆ ಅಭಿನಂದನೆಗಳು. ಹಾಗೆ ನೋಡಿದರೆ, ಆ ಸಂದರ್ಭದಲ್ಲಿ ಮೇರಿ ಆಲಿವರ್'ಳು ಅನುಭವಿಸಿದ ಸಂಘರ್ಷದ, ನೋವಿನ, ಸಂಕಟದ ಬದುಕಿನ ಕಾರಣವಾಗಿಯೇ ಆಕೆ ಪ್ರಕೃತಿಯನ್ನು ಮತ್ತೆ ಮತ್ತೆ ಎದುರುಗೊಳ್ಳುತ್ತ ಹೋಗುತ್ತಾಳೆ. ಏಕೆಂದರೆ ಪ್ರಕೃತಿಗೆ ಎಲ್ಲ ನೋವನ್ನು ಅಳಿಸಿ ಹಾಕುವ ಶಕ್ತಿ ಇದೆ. ಅಂತೆಯೇ ಆಕೆ ತನ್ನ ಬದುಕಿನ ಅನುಭವಗಳನ್ನು ಪ್ರಕೃತಿಯೊಂದಿಗೆ ಸಮೀಕರಿಸಿ ಕಾವ್ಯದ ಮೂಲಕ ಹೇಳುತ್ತಲೇ ತನ್ನ ಎದೆಯ ಬೇನೆಗೆ ಸ್ವಯಂ ತಾನೇ ಮುಲಾಮು ತೀಡಿಕೊಳ್ಳುವ ಕ್ರಿಯೆಗೆ ಒಳಗಾಗುತ್ತಾಳೆ! ಅತ್ಯಂತ ಘೋರ ಬಾಲ್ಯವನ್ನು ಕಳೆದ ಮೇರಿ ಆಲಿವರ್'ಳು ಕಾವ್ಯದ ಸಾಂಗತ್ಯಕ್ಕೆ ಹಾತೊರೆದದ್ದು ಸಹಜವಾಗಿದೆ. ಅಷ್ಟಕ್ಕೂ ಕಾವ್ಯದ ಮುಖ್ಯ ಉದ್ದೇಶವೇ ಮನುಷ್ಯ ಬದುಕನ್ನು ಸುತ್ತುವರೆದ ಸಂಘರ್ಷ, ತಿಕ್ಕಾಟ ಹಾಗೂ ದೌರ್ಜನ್ಯವನ್ನು ವಿರೋಧಿಸುವುದಷ್ಟೇ ಆಗಿರದೇ ಮನುಷ್ಯ ಪ್ರೀತಿ, ಅನುಕಂಪ, ಸಹೃದಯತೆಯನ್ನು ಇಡಿಯಾಗಿ ಮನುಷ್ಯ ಕುಲ ಎಲ್ಲ ಕಾಲಕ್ಕೂ ಹೊಂದಬೇಕು ಎನ್ನುವುದೇ ಆಗಿದೆ. ಈ ಕಾರಣವಾಗಿಯೇ ಅಂದರೆ ಸಹಜವಾಗಿ ಜೀವಿಸಲು ಮತ್ತು ಅಷ್ಟೇ ಸಹಜವಾಗಿ ಪ್ರೀತಿಸಲೆಂದು ಕವಿ ಮೇರಿ ಆಲಿವರ್ ಕಾಡಿನ ಲೋಕದೊಂದಿಗೆ ಒಡನಾಡಲು ಬಯಸುತ್ತಾಳೆ!
ಹಾಗೆ ಪ್ರಕೃತಿಯೊಂದಿಗೆ ಒಡನಾಡುತ್ತಲೇ ಕವಿ ಮೇರಿ ಆಲಿವರ್'ಳು, ತನ್ನ ಆತ್ಮವನ್ನು ತಿಳಿಗೊಳಿಸಿಕೊಳ್ಳುವ; ಅದರ ಸಾಮಿಪ್ಯದಲ್ಲಿ ತಾನೇ ಕಳೆದುಹೋಗುವ, ಹಾಗೆ ಕಳೆದುಹೋಗುವುದರ ಮೂಲಕ ಪ್ರಕೃತಿಯೊಂದಿಗಿನ ಮನುಷ್ಯ ಸಂಬಂಧಕ್ಕೆ ಹೊಸ ವ್ಯಾಖ್ಯಾನ ಬರೆಯುವ ಪ್ರಯತ್ನವನ್ನು ಇಲ್ಲಿನ ಕವಿತೆಗಳಲ್ಲಿ ಮಾಡಿದ್ದಾಳೆ. ಕವಿತೆಯ ಈ ಸಾಲುಗಳನ್ನು ನೋಡಿ:
ಈ ಹಕ್ಕಿ ನನಗಿಷ್ಟ
ಬೆಟ್ಟ ಗುಡ್ಡಗಳ ತೂಕಡಿಕೆ ನನಗಿಷ್ಟ.
ಸರಿ, ಹುಲುಮಾನವರ ಲೋಕದಲ್ಲಿ ಕಾಲ ಅಂದರೇನು?
ನನ್ನ ಮನಸ್ಸಿನಲ್ಲಿರುವ ರೂಮಿ ಥಕಥಕ ಕುಣಿಯುವನು
(ಪದ್ಯ: ಕಾಲದ ಕುರಿತು)
ಈ ಮೇಲಿನ ಸಾಲುಗಳು ಪ್ರಕೃತಿಯನ್ನು ಹೊರತುಪಡಿಸಿದ ಬದುಕು ನೀರಸ. ಹಾರುವ ಹಕ್ಕಿ, ಮುಗಿಲೆತ್ತರಕ್ಕೆ ನಿಂತ ಬೆಟ್ಟಗುಡ್ಡಗಳು, ಹಸಿರು ಚಿಮ್ಮುವ ಮರ ಗಿಡಗಳು –ಇವೆಲ್ಲ ಪ್ರಕೃತಿಯ ಕೊಡುಗೆ. ಇವುಗಳೊಂದಿಗೆ ಒಡನಾಡದಿದ್ದರೆ ಮನುಷ್ಯ ಬದುಕಿನಲ್ಲಿನ ಸಂಬಂಧಗಳಿಗೆ ಬೆಲೆಯೇ ಇಲ್ಲ ಎಂಬರ್ಥದಲ್ಲಿವೆ.
ಇನ್ನು, ಅನುವಾದವು ಒಂದು ಕಲೆ. ಅನುವಾದಕನು ಕವಿತೆಯ ಮೂಲ ಆಶಯಕ್ಕೆ ಧಕ್ಕೆ ಬರದಂತೆ, ಅದರ(ಕವಿತೆ )ವಿಚಾರದಲ್ಲಿನ ತನ್ನ ಹೊಸ ಆಲೋಚನೆಗಳನ್ನು ಸಹಜವೆನ್ನುವಂತೆ ಸಮೀಕರಿಸಿ ಹೇಳುವುದು. ಇದೂ ಸಹ ಒಂದು ತೆರದಲಿ ಸೃಜನಶೀಲ ಕಲೆಯೂ ಹೌದು. ಇಲ್ಲಿ, ಚೈತ್ರಾ ಮೇರಿ ಆಲಿವರ್'ಳ ಪ್ರಕೃತಿಯ ಕುರಿತಾದ, ಸಂಘರ್ಷದ ಬದುಕಿನ ಕುರಿತಾದ ದೃಷ್ಟಿಕೋನವನ್ನು ಕರಾರುವಾಕ್ಕಾಗಿ ಕನ್ನಡಕ್ಕೆ ತಂದಿರುವರು. ಈ ವಿಚಾರದಲ್ಲಿ ಅವರಿಗೆ ಮತ್ತೊಮ್ಮೆ ಅಭಿನಂದನೆಗಳು.
"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...
ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...
"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...
©2025 Book Brahma Private Limited.