ಸೃಜನಶೀಲ ಕ್ರಿಯೆಯಾದ ಕವನ ರಚನೆಯನ್ನು ವಾಹನ ಚಾಲನೆಯನ್ನು ಕಲಿಸಿದ ಹಾಗೆ ಕಲಿಸಲು ಮತ್ತು ಕಲಿಯಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ನಾನೂ ಒಪ್ಪುತ್ತೇನೆ. ಆದರೆ ಇಂಥ ಕೈಪಿಡಿಗಳಿಂದ ಯಾವುದು ಒಳ್ಳೆಯ ಕವಿತೆ ಮತ್ತು ಯಾವುದು ಕೆಟ್ಟ ಕವಿತೆ ಎಂಬುದನ್ನು ಗುರುತಿಸುವ ವಿವೇಕ ಬೆಳೆಯುತ್ತದೆ. ಒಳ್ಳೆಯ ಕವಿತೆ ಬರೆಯಬೇಕೆನ್ನುವವರು ಮಾಡಬೇಕಾದ ಮೊದಲ ಕೆಲಸವೆಂದರೆ ಕೆಟ್ಟ ಕವಿತೆಗಳನ್ನು ಬರೆಯುವುದನ್ನು ನಿಲ್ಲಿಸುವುದು! ಎನ್ನುತ್ತಾರೆ ಚುಟುಕು ಸಾಹಿತಿ ಎಚ್. ಡುಂಡಿರಾಜ್. ಅವರು ‘ಹನಿಗವನ ಏನು? ಏಕೆ? ಹೇಗೆ?’ ಎಂಬ ತಮ್ಮ ನೂತನ ಕೃತಿಯಲ್ಲಿ ಬರೆದ ಪ್ರಾಸ್ತಾವಿಕ ನುಡಿ ಹಾಗೂ ಕೃತಿಯ ಆಯ್ದ ಭಾಗ ನಿಮ್ಮ ಓದಿಗಾಗಿ...
(ಜನವರಿ 27, 2022ರ ಗುರುವಾರ ಸಂಜೆ 5.30ಕ್ಕೆ ಅಂಕಿತಾ ಪುಸ್ತಕ ಸಹಯೋಗದಲ್ಲಿ ಈ ಕೃತಿ ಲೋಕಾರ್ಪಣೆಗೊಳ್ಳಲಿದೆ)
ಪ್ರಾಸ್ತಾವಿಕ
ಚುಟುಕು, ಹನಿಗವನವೆಂದರೇನು? ಅದನ್ನು ಬರೆಯುವುದು ಹೇಗೆ? ಎಂದು ಅನೇಕರು, ಹೆಚ್ಚಾಗಿ ಯುವಕ ಯುವತಿಯರು ನನ್ನನ್ನು ಕೇಳುತ್ತಿರುತ್ತಾರೆ. ಈ ಪ್ರಶ್ನೆಗೆ ಚುಟುಕಾಗಿ ಉತ್ತರಿಸುವುದು ಕಷ್ಟ. ದೀರ್ಘವಾಗಿ ಉತ್ತರಿಸುವುದು ಇನ್ನೂ ಕಷ್ಟ. ಇದು ಇನ್ನೊಬ್ಬರು ಕಲಿಸಿಕೊಡುವ ಕೌಶಲವಲ್ಲ. ಪ್ರೀತಿ ಮಾಡುವುದು ಮತ್ತು ಕವನ ಬರೆಯುವುದು ನಾವೇ ಕಲಿತುಕೊಳ್ಳಬೇಕಾದ ವಿದ್ಯೆ ಎಂದು ನನ್ನ ಭಾವನೆ. ಆದ್ದರಿಂದಲೇ ನಾನೊಮ್ಮೆ ಹೀಗೊಂದು ಹನಿಗವನ ಬರೆದಿದ್ದೆ.
ಪ್ರೀತಿಸುವುದು
ಹೇಗೆ ಎಂದು
ಕಲಿಸಬೇಕಿಲ್ಲ ಯಾರೂ
ಲವ್ ವಿಷಯದಲ್ಲಿ
ನಾವೆಲ್ಲರೂ
ಏಕ‘ಲವ್’ಯರು!
ಹಾಗಾದರೆ ಈ ಪುಸ್ತಕ ಏಕೆ ಅನ್ನುವಿರಾ? ಅದನ್ನು ಸಂಕ್ಷಿಪ್ತವಾಗಿ ಹೀಗೆ ಹೇಳಬಹುದು:
1.ಹನಿಗವನ ಬರೆಯಲು ಆಸಕ್ತಿ ಇರುವವರಿಗೆ ಮತ್ತು ಈಗಾಗಲೇ ಬರೆಯುತ್ತಿರುವ ಹೊಸ ಕವಿಗಳಿಗೆ ಉಪಯೋಗವಾಗುವಂಥ ವಿಷಯಗಳನ್ನು ಸಂಕ್ಷಿಪ್ತವಾಗಿ ತಿಳಿಸುವುದು.
2.ಬರೆಯುವವರಿಗೆ ಮಾತ್ರವಲ್ಲದೆ ಹನಿಗವನಗಳ ಓದುಗರಿಗೆ ಅವುಗಳ ಸ್ವಾರಸ್ಯವನ್ನು ಇನ್ನಷ್ಟು ಚೆನ್ನಾಗಿ ಆಸ್ವಾದಿಸಲು ಅನುಕೂಲವಾಗುವಂಥ ಸಂಗತಿಗಳನ್ನು ಚರ್ಚಿಸುವುದು.
3.ಹನಿಗವನಗಳ ಬಗ್ಗೆ ಮಾತನಾಡುವವರಿಗೆ ಮತ್ತು ಲೇಖನ ಬರೆಯುವವರಿಗೆ ಅಗತ್ಯವಾದ ಮಾಹಿತಿ ಒಂದೆಡೆ ಸಿಗುವಂತೆ ಮಾಡುವುದು.
ರಾಜ್ಯ ಮಟ್ಟದಿಂದ ಹಿಡಿದು ತಾಲೂಕು, ಹೋಬಳಿ ಮಟ್ಟದವರೆಗಿನ ಚುಟುಕು ಕವಿಗೋಷ್ಠಿಗಳು ನಮ್ಮ ರಾಜ್ಯದ ಎಲ್ಲೆಡೆ ನಡೆಯುತ್ತಲೇ ಇರುತ್ತವೆ. ಆದರೆ ಚುಟುಕು/ಹನಿಗವನ ರಚನಾ ಕಮ್ಮಟಗಳು ನಡೆದದ್ದು ತೀರಾ ಕಡಿಮೆ. ಹೀಗಾಗಿ ಚುಟುಕು/ಹನಿಗವನವೆಂದರೆ ಏನೆಂಬ ತಿಳಿವಳಿಕೆ ಇ
ಲ್ಲದೆ ಚುಟುಕು ಗೋಷ್ಠಿಯಲ್ಲಿ ಕೆಲವರು ದೀರ್ಘ ಕವನ ಓದಿದ್ದನ್ನು, ಭಜನೆ ಹಾಡಿದ್ದನ್ನು ನಾನು ಕೇಳಿದ್ದೇನೆ. ಇಂದು ಪ್ರಕಟ ವಾಗುತ್ತಿರುವ ಚುಟುಕು/ಹನಿಗವನಗಳ ಗುಣಮಟ್ಟವನ್ನು ಗಮನಿಸಿದಾಗ ಹೊಸದಾಗಿ ಬರೆಯುವವರಿಗೆ ಮಾರ್ಗದರ್ಶನದ ಅಗತ್ಯವಿದೆ ಎಂದು ನನಗೆ ಅನ್ನಿಸಿದೆ. ನನ್ನ ಬಳಿ ಅನೇಕರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಪುಸ್ತಕದ ಓದು ಹೊಸದಾಗಿ ಹನಿಗವನ ಬರೆಯುವವರಿಗೆ ತಾವು ಮಾಡುತ್ತಿರುವ ತಪ್ಪುಗಳೇನು ಮತ್ತು ಅವುಗಳನ್ನು ಸರಿಪಡಿಸಿಕೊಳ್ಳುವುದು ಹೇಗೆ? ಎಂದು ಅರಿಯಲು ಸಹಾಯಕವಾಗಬಹುದು ಎಂದು ನಾನು ಭಾವಿಸುತ್ತೇನೆ.
ಸೃಜನಶೀಲ ಕ್ರಿಯೆಯಾದ ಕವನ ರಚನೆಯನ್ನು ವಾಹನ ಚಾಲನೆಯನ್ನು ಕಲಿಸಿದ ಹಾಗೆ ಕಲಿಸಲು ಮತ್ತು ಕಲಿಯಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ನಾನೂ ಒಪ್ಪುತ್ತೇನೆ. ಆದರೆ ಇಂಥ ಕೈಪಿಡಿಗಳಿಂದ ಯಾವುದು ಒಳ್ಳೆಯ ಕವಿತೆ ಮತ್ತು ಯಾವುದು ಕೆಟ್ಟ ಕವಿತೆ ಎಂಬುದನ್ನು ಗುರುತಿಸುವ ವಿವೇಕ ಬೆಳೆಯುತ್ತದೆ. ಒಳ್ಳೆಯ ಕವಿತೆ ಬರೆಯಬೇಕೆನ್ನುವವರು ಮಾಡಬೇಕಾದ ಮೊದಲ ಕೆಲಸವೆಂದರೆ ಕೆಟ್ಟ ಕವಿತೆಗಳನ್ನು ಬರೆಯುವುದನ್ನು ನಿಲ್ಲಿಸುವುದು!
ಈ ಪುಸ್ತಕದಲ್ಲಿ ನಾನು ಹನಿಗವನ ಎಂಬುದನ್ನು ಚುಟುಕು, ಮುಕ್ತಕ, ಚಾಟೂಕ್ತಿ, ಚೌಪದಿ, ತ್ರಿಪದಿ, ಎಪಿಗ್ರಾಮ್, ಲಿಮರಿಕ್, ಹೈಕು ಮುಂತಾದ ಎಲ್ಲ ಬಗೆಯ ಕಿರುಗವನಗಳನ್ನು ಒಳಗೊಳ್ಳುವ ಕಾವ್ಯ ಪ್ರಕಾರ ಎಂಬ ಅರ್ಥದಲ್ಲಿ ಬಳಸಿದ್ದೇನೆ. ಕೆಲವೆಡೆ ಚುಟುಕ, ಕವನ, ಕವಿತೆ, ಕಿರುಗವಿತೆ, ಮಿನಿಗವನ ಅಂತ ಬರೆದಿರುವೆನಾದರೂ ಅದನ್ನೂ ಹನಿಗವನವೆಂತಲೇ ತಿಳಿಯಬೇಕಾಗಿ ವಿನಂತಿ.
ಇದೊಂದು ಅಕಡೆಮಿಕ್ ಶೈಲಿಯ ಪಾಂಡಿತ್ಯಪೂರ್ಣ ಗ್ರಂಥವಾಗದೆ, ಎಲ್ಲರೂ ಆಸಕ್ತಿಯಿಂದ ಓದಿ ಸುಲಭವಾಗಿ ಅರ್ಥಮಾಡಿಕೊಳ್ಳುವ ಪುಸ್ತಕವಾಗಬೇಕೆಂಬ ದೃಷ್ಟಿಯಿಂದ ಈ ಕೃತಿಯನ್ನು ರಚಿಸಿರುವೆ. ಈ ಉದ್ದೇಶದಲ್ಲಿ ನಾನು ಎಷ್ಟರಮಟ್ಟಿಗೆ ಸಫಲನಾಗಿರುವೆ ಅನ್ನುವುದನ್ನು ಓದುಗರೇ ನಿರ್ಧರಿಸಬೇಕು. ಹೇಳಬೇಕಾದ ವಿಷಯಗಳನ್ನು ನನಗೆ ಸೂಕ್ತವೆನ್ನಿಸಿದ ಹನಿವನಗಳನ್ನು ಉಲ್ಲೇಖಿಸುವ ಮೂಲಕ ಹೇಳಿದ್ದೇನೆ. ಹಾಗೆ ಮಾಡುವಾಗ ನನಗೆ ತತ್‌ಕ್ಷಣಕ್ಕೆ ನೆನಪಾದ, ಸುಲಭದಲ್ಲಿ ಸಿಕ್ಕ ಹನಿಗವನಗಳನ್ನು ಆರಿಸಿಕೊಂಡಿರುವೆ. ಬರೆದ ಕವಿಗಳ ಹೆಸರನ್ನು ನಮೂದಿಸಿದ್ದೇನೆ. ಕವಿಗಳ ಹೆಸರು ಇಲ್ಲದ ಹನಿಗವನಗಳು ನನ್ನವು.
ಈ ಕೃತಿಯಲ್ಲಿ 75ಕ್ಕೂ ಹೆಚ್ಚು ಕವಿಗಳು ರಚಿಸಿದ 278 ಹನಿಗವನಗಳು ಒಂದೆಡೆ ದೊರೆಯುತ್ತವೆ. ಇವುಗಳನ್ನು ಓದುವುದರಿಂದ ಕಾವ್ಯಪ್ರಿಯರಿಗೆ ಸಿಗುವ ಆನಂದ ಈ ಕೃತಿಯ ಬೈ ಪ್ರಾಡಕ್ಟ್ ಅನ್ನಬಹುದು!
ಇಲ್ಲಿ ಉಲ್ಲೇಖಿಸಿರುವ ಹನಿಗವನಗಳಿಗಿಂತ ಹೆಚ್ಚು ಸೂಕ್ತವಾದ ಹನಿಗವನಗಳೂ ಇರಬಹುದು ಎನ್ನುವುದು ನನಗೆ ಗೊತ್ತಿದೆ. ಅವುಗಳನ್ನು ಉಲ್ಲೇಖಿಸದೆ ಇರುವುದಕ್ಕೆ ಅವು ನನಗೆ ಸಿಗಲಿಲ್ಲ ಅನ್ನುವುದನ್ನು ಬಿಟ್ಟು ಬೇರಾವ ಕಾರಣಗಳೂ ಇಲ್ಲ.
ಹನಿಗವನಗಳನ್ನು ಕುರಿತ ಪುಸ್ತಕ ಮಹಾಕಾವ್ಯ ಅಥವಾ ಕಾದಂಬರಿಯಷ್ಟು ಭಾರವಾಗಬಾರದು ಎಂದು ವಿಷಯಗಳನ್ನು ಆದಷ್ಟು ಚುಟುಕಾಗಿ ಹೇಳಿದ್ದೇನೆ. ಇದು ಹನಿಗವನಗಳಿಗೊಂದು ಮಿನಿ ಕೈಪಿಡಿ! ಇದನ್ನು ಉತ್ತಮ ಪಡಿಸಲು ಸಲಹೆ ಸೂಚನೆ ಗಳಿದ್ದರೆ ಸ್ವಾಗತಿಸುತ್ತೇನೆ.
-ಎಚ್. ಡುಂಡಿರಾಜ್
--
ಕೃತಿಯ ಆಯ್ದ ಭಾಗ
(ಭಾಗ-1)
ಹನಿಗವನಗಳ ವಿವರಣೆ, ಸಂಕ್ಷಿಪ್ತ
ಇತಿಹಾಸ, ಪ್ರಸ್ತುತತೆ
ಇತ್ತೀಚಿನ ವರ್ಷಗಳಲ್ಲಿ ಹನಿಗವನ, ಚುಟುಕು ಅನ್ನುವ ಹೆಸರಿನಲ್ಲಿ ಪ್ರಕಟವಾಗು ತ್ತಿರುವ ಚಿಕ್ಕ ಕವಿತೆಗಳು ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿವೆ. ಪತ್ರಿಕೆಗಳು, ಆಕಾಶವಾಣಿ, ಟಿ.ವಿ. ವಾಹಿನಿಗಳಲ್ಲದೆ ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟ್ವಿಟ್ಟರ್, ಯೂ ಟ್ಯೂಬ್, ಬ್ಲಾಗ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲೂ ಹನಿಗವನಗಳು ಹರಿದಾಡುತ್ತಿವೆ. ಅವುಗಳನ್ನು ಓದಿ ಮೆಚ್ಚಿಕೊಳ್ಳುವ ಅನೇಕರು ತಾವೂ ಅಂಥ ಹನಿಗವನಗಳನ್ನು ಬರೆಯಲು ಆಸಕ್ತಿ ತೋರಿಸುತ್ತಿದ್ದಾರೆ. ನಾನು ಫೇಸ್‌ಬುಕ್‌ನಲ್ಲಿ ದಿನವೂ ಹಂಚಿಕೊಳ್ಳುವ ಹನಿಗವನಗಳಿಗೆ ಕೆಲವರು ಚಿಕ್ಕ ಪದ್ಯದ ರೂಪದಲ್ಲೆ ಪ್ರತಿಕ್ರಿಯೆ ನೀಡುತ್ತಾರೆ.
ಹನಿಗವನಗಳು ಸಾಹಿತ್ಯದ ವಿದ್ಯಾರ್ಥಿಗಳಲ್ಲದ ಹಾಗೂ ಸಾಹಿತ್ಯೇತರ ಕ್ಷೇತ್ರಗಳಲ್ಲಿ ಕೆಲಸಮಾಡುತ್ತಿರುವವರನ್ನೂ ಆಕರ್ಷಿಸಿವೆ. ಹನಿಗವನಗಳನ್ನು ಓದುವವರಿಗೆ, ಬರೆಯುವ ಆಸಕ್ತಿ ಇರುವವರಿಗೆ ಅವುಗಳ ಬಗ್ಗೆ ಅನೇಕ ಸಂದೇಹಗಳು ಇರುವುದನ್ನು ನಾನು ಗಮನಿಸಿದ್ದೇನೆ. ಇಲ್ಲಿ ಅಂಥ ಪ್ರಶ್ನೆಗಳನ್ನು ಒಂದೊಂದಾಗಿ ಎತ್ತಿಕೊಂಡು ಅವುಗಳಿಗೆ ಉತ್ತರ ಹುಡುಕಲು ಪ್ರಯತ್ನಿಸೋಣ.
ಹನಿಗವನ ಮತ್ತು ಚುಟುಕುಗಳಿಗೆ ಏನು ವ್ಯತ್ಯಾಸ?
ಇದು ಚಿಕ್ಕ ಕವನಗಳನ್ನು ಬರೆಯುವ ಅನೇಕರು ಕೇಳುವ ಪ್ರಶ್ನೆ. ಹನಿ ಮತ್ತು ಚುಟುಕು ಎಂಬ ಎರಡೂ ಪದಗಳು ಗಾತ್ರವನ್ನು ಸೂಚಿಸುತ್ತವೆ. ಹೀಗಾಗಿ ಸ್ಥೂಲವಾಗಿ ನೋಡಿದರೆ ಹನಿಗವನ ಮತ್ತು ಚುಟುಕು ಎರಡೂ ಚಿಕ್ಕದಾಗಿರುವುದರಿಂದ ಎರಡೂ ಒಂದೇ ಅನ್ನಬಹುದು. ನಿಘಂಟಿನಲ್ಲಿ ಹನಿಗವನಕ್ಕೆ ಸಣ್ಣಕವನ; ಚುಟುಕು ಎಂಬ ಅರ್ಥವನ್ನು ನೀಡಿದ್ದಾರೆ. ಹನಿಗವನ ಎಂಬ ಶಬ್ದ ಹೆಚ್ಚು ಚಾಲ್ತಿಗೆ ಬಂದದ್ದು ಎಪ್ಪತ್ತರ ದಶಕದಲ್ಲಿ. ಅಲ್ಲಿಯವರೆಗೆ ಕನ್ನಡದಲ್ಲಿ ಚಿಕ್ಕ ಪದ್ಯಗಳನ್ನು ಮುಕ್ತಕ, ವಚನ, ಸೂಕ್ತಿ, ಚಾಟುಪದ್ಯ, ಚುಟುಕ, ಚುಟಕ ಮುಂತಾದ ಹೆಸರುಗಳಿಂದ ಕರೆಯುತ್ತಿದ್ದರು. ಜಿ.ಪಿ.ರಾಜರತ್ನಂ 1940ರಲ್ಲಿ ಪ್ರಕಟವಾದ ಅವರ ಚಿಕ್ಕ ಪದ್ಯಗಳನ್ನು ಪುಟಾಣಿಗಳು ಎಂದು ಕರೆದಿದ್ದರು. ದಿನಕರ ದೇಸಾಯಿಯವರ ಚುಟುಕುಗಳು ನಾಲ್ಕು ಸಾಲುಗಳ ನಿರ್ದಿಷ್ಟ ಛಂದಸ್ಸಿನಲ್ಲಿ ರಚಿತವಾದ್ದರಿಂದ ಚೌಪದಿಗಳೆಂದೇ ಪ್ರಸಿದ್ಧವಾದವು. ಎಲ್ಲಾ ರೀತಿಯ ಚಿಕ್ಕ ಪದ್ಯಗಳನ್ನು ಒಳಗೊಳ್ಳುವ, ಈ ಕೆಳಗಿನ ಲಕ್ಷಣಗಳನ್ನು ಹೊಂದಿರುವ ರಚನೆಗಳನ್ನು ಇಂದಿನ ಪರಿಭಾಷೆಯಲ್ಲಿ ಹನಿಗವನಗಳು ಅನ್ನಬಹುದು:
1.ಸಂಕಲನದಲ್ಲಿರುವ ಕವನಗಳ ಸಾಲುಗಳ ಸಂಖ್ಯೆ ಒಂದೇ ಆಗಿರುವುದಿಲ್ಲ.
2.ಕವನಗಳಲ್ಲಿ ಪ್ರಾಸ ಇರಬಹುದು ಅಥವಾ ಇಲ್ಲದಿರಬಹುದು.
3.ಕವಿತೆಗಳಲ್ಲಿ ಲಯ, ಛಂದಸ್ಸು ಇರಬಹುದು ಅಥವಾ ಇಲ್ಲದಿರಬಹುದು.
4.ಲಯ ಛಂದಸ್ಸು ಇದ್ದರೂ ಅವು ಎಲ್ಲಾ ಕವನಗಳಲ್ಲಿ ಒಂದೇ ರೀತಿ ಇರುವುದಿಲ್ಲ.
5.ಮಾತ್ರೆ ಗಣಗಳಿಗೆ ಕಟ್ಟು ಬೀಳದ ಮುಕ್ತ ಛಂದಸ್ಸು
6.ಆಡುಮಾತಿಗೆ ಹತ್ತಿರವಾದ ಗದ್ಯಲಯ
7.ಸಂವೇದನೆಯಲ್ಲಿ ಹೊಸತನ
ಉದಾಹರಣೆಯ ಮೂಲಕ ಇದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ. 1991ರಲ್ಲಿ ಪ್ರಕಟವಾದ ಬಿ.ಆರ್. ಲಕ್ಷ್ಮಣರಾವ್ ಅವರ ‘ಹನಿಗವಿತೆಗಳು’ ಎಂಬ ಸಂಕಲನದಲ್ಲಿರುವ ಈ ಕೆಳಗಿನ ಪದ್ಯವನ್ನು ಗಮನಿಸಿ:
ಸಿರಿ
ನರೆಗೂದಲು, ಬೊಚ್ಚುಬಾಯಿ
ಮುಖದ ತುಂಬ ನಿರಿಗೆ
ಆದರೇನು? ಯಾವುದು ಸಮ
ಅಜ್ಜಿಯ ನಗೆ ಸಿರಿಗೆ?
ಇದು ನಾಲ್ಕು ಸಾಲಿನ ಪ್ರಾಸಬದ್ಧ, ಛಂದೋಬದ್ಧ ರಚನೆಯಾದ್ದರಿಂದ ಚುಟುಕು ಅನ್ನಬಹುದು. ಲಕ್ಷ್ಮಣರಾಯರ ‘ಹನಿಗವಿತೆಗಳು’ ಸಂಕಲನದಲ್ಲಿ ಇಂಥ ಅನೇಕ ಚುಟುಕುಗಳಿವೆ. ಅವುಗಳ ಜೊತೆಗೆ ಪ್ರಾಸ, ಛಂದಸ್ಸು ಇಲ್ಲದ
ವಾರೆಂಟ್
ಚೆಲುವೆ,
ಮಾದಕ ವಸ್ತುಗಳ ನಿಷೇಧದ
ಕಾಯಿದೆ
ಪ್ರಕಾರ
ಈ ಕೂಡಲೇ
ನಿನ್ನನ್ನು
ಬಂಧಿಸಬೇಕಾಗಿದೆ.
ಇಂಥ ಧ್ವನಿಪೂರ್ಣವಾದ ಕವನಗಳೂ ಇವೆ. ಇದನ್ನು ಚುಟುಕು ಅನ್ನಲಾಗದು. ಆದರೆ ಹನಿಗವನ ಅನ್ನಬಹುದು. 
ಎಂಬತ್ತರ ದಶಕ ಮತ್ತು ಅನಂತರ ಪ್ರಕಟವಾದ ಬಹಳಷ್ಟು ಹನಿಗವನಗಳ ಸಂಕಲನದಲ್ಲಿರುವ ಕವನಗಳ ಶೈಲಿಯಲ್ಲಿ ಈ ಬಗೆಯ ಮಿಶ್ರಣವಿದೆ. ಹೀಗಾಗಿ
ಹನಿಗವನ ಅನ್ನುವುದು ಮುಕ್ತಕ, ವಚನ, ತ್ರಿಪದಿ, ಚುಟುಕು, ಚೌಪದಿ, ಎಪಿಗ್ರಾಮ್, ಲಿಮರಿಕ್, ಹೈಕು, ರುಬಾಯಿ, ಶಾಯಿರಿ ಮುಂತಾದ ಎಲ್ಲ ರೀತಿಯ ಚಿಕ್ಕ ಪದ್ಯಗಳನ್ನು ಒಳಗೊಳ್ಳುವ ವೈವಿಧ್ಯಮಯ ಮತ್ತು ವಿಶಾಲವಾದ ವ್ಯಾಪ್ತಿಯುಳ್ಳ ಕಾವ್ಯ ಪ್ರಕಾರ ಅನ್ನಬಹುದು. ಚುಟುಕು ಅಂದರೆ ಚಿಕ್ಕದು. ಹನಿ ಅಂದರೂ ಚಿಕ್ಕದು. ಎಲ್ಲ ಚುಟುಕುಗಳನ್ನು ಹನಿಗವನ ಅನ್ನಬಹುದು. ಆದರೆ ಎಲ್ಲ ಹನಿಗವನಗಳನ್ನೂ ಚುಟುಕುಗಳು ಅನ್ನುವಂತಿಲ್ಲ. ಹನಿಗವನದಲ್ಲಿ ಇಂಗ್ಲಿಷ್ ಭಾಷೆಯ Honeyಯೂ ಇದೆ. ಆದ್ದರಿಂದ ಜೇನಿನ ಸಿಹಿ ಮತ್ತು ಜೇನುನೊಣದ ಕುಟುಕುವ ಸ್ವಭಾವ ಎರಡೂ ಇರುವ ಇಂದಿನ ಕಿರುಗವನಗಳಿಗೆ ಚುಟುಕು ಅನ್ನುವುದಕ್ಕಿಂತ ಹನಿಗವನ ಎಂಬ ಹೆಸರೇ ಚೆನ್ನಾಗಿ ಹೊಂದುತ್ತದೆ.
ಹನಿಗವನದಲ್ಲಿ ಎಷ್ಟು ಸಾಲುಗಳಿರಬೇಕು?
ಇದು ಹೊಸದಾಗಿ ಹನಿಗವನ/ಚುಟುಕುಗಳನ್ನು ಬರೆಯುವವರು ಸಾಮಾನ್ಯವಾಗಿ ಕೇಳುವ ಇನ್ನೊಂದು ಪ್ರಶ್ನೆ. ಹನಿಗವನದಲ್ಲಿ ಇಂತಿಷ್ಟೇ ಸಾಲುಗಳಿರಬೇಕೆಂಬ ಕಟ್ಟುನಿಟ್ಟಾದ ನಿಯಮವಿಲ್ಲ. ಹನಿಗವನದ ಗಾತ್ರದ ಬಗ್ಗೆ ನಾನು ಇಂಗ್ಲಿಷ್‌ನಲ್ಲಿ ಓದಿದ ಒಂದು ವ್ಯಾಖ್ಯೆ ನೆನಪಾಗುತ್ತಿದೆ. ಅದನ್ನು ಕನ್ನಡದಲ್ಲಿ ಹೀಗೆ ಹೇಳಬಹುದು.
ಹನಿಗವನ ಅಥವಾ ಮಿನಿಗವನ
ಮಿನಿಗವನಿನ ಹಾಗೆ
ಕುತೂಹಲ ಕೆರಳಿಸುವಷ್ಟು ಗಿಡ್ಡ
ಮಾನ ಮುಚ್ಚುವಷ್ಟು ಉದ್ದ!
ಇಂಗ್ಲಿಷ್ ಭಾಷೆಯಲ್ಲಿ ಒಂದೇ ಸಾಲಲ್ಲಿ ಓದಿದಾಗ ವಾಹ್ ಅನ್ನಿಸುವ ಒನ್ ಲೈನರ್‌ಗಳು ಸಾಕಷ್ಟಿವೆ. ಕನ್ನಡದಲ್ಲೂ ‘ಬೆಳ್ಳಗಿರುವುದೆಲ್ಲ ಹಾಲಲ್ಲ’ ಎಂಬಂಥ ಒಂದೇ ಸಾಲಿನ ಗಾದೆಗಳು ಹನಿಗವನದಷ್ಟೇ ಚುರುಕಾಗಿವೆ. ವಿಶ್ವೇಶ್ವರ ಭಟ್ ಅವರ ವಕ್ರತುಂಡೋಕ್ತಿಗಳಲ್ಲಿ ಕೆಲವು ಒಂದು ಸಾಲಿನ ಕವಿತೆ ಅಥವಾ ಏಕಪದಿ ಅನ್ನಬಹುದು. ಉದಾಹರಣೆ:
‘‘ಎಲ್ಲ ಮಕ್ಕಳೂ ತಾಯಿಗೆ ಹೆದರುತ್ತಾರೆ, ಯಾಕೆಂದರೆ ತಂದೆಯೂ ಹೆದರುತ್ತಾನೆ.’’
ಎರಡು ಸಾಲಿನ ಹನಿಗವನಗಳೂ ಸಾಕಷ್ಟಿವೆ. ಉದಾ:
ಚಳಿಗಾಲ ಎಂದರೆ ವಿಂಟರು
ಬೇಸಿಗೆ ಬಂದರೆ ನೆಂಟರು!
ಈ ರೀತಿ ಹನಿಗವನದಲ್ಲಿ ಎರಡೇ ಸಾಲಿದ್ದರೆ ಅದು ದ್ವಿಪದಿ.
ಸಾಲವನು ಕೊಂಬಾಗ ಹಾಲೋಗರುಂಡಂತೆ
ಸಾಲಿಗರು ಬಂದು ಎಳೆವಾಗ ಕಿಬ್ಬದಿಯ
ಕೀಲು ಮುರಿದಂತೆ ಸರ್ವಜ್ಞ.
ಹೀಗೆ ಸರ್ವಜ್ಞನ ವಚನಗಳು ಮತ್ತು ಜನಪದ ಗೀತೆಗಳಲ್ಲಿ ಇರುವಂತೆ ಮೂರು ಸಾಲುಗಳಿದ್ದರೆ ಅದು ತ್ರಿಪದಿ.
ಅನುಭವದ ಹೊರಗೆ ನಾ ಬರೆಯಲಿಲ್ಲಣ್ಣ
ಹಚ್ಚಲಿಲ್ಲವೊ ಮತ್ತೆ ಯಾವುದೂ ಬಣ್ಣ
ಬರೆದದ್ದು ನುಡಿದದ್ದು ಎಲ್ಲವೂ ಸಾದಾ
ಹೀಗಾಗಿ ಮನದೊಳಗೆ ಹೋಗುವುದು ಸೀದಾ
ಎಂಬಂಥ ದಿನಕರ ದೇಸಾಯಿವರು ಬರೆದ ನಾಲ್ಕು ಸಾಲುಗಳ ಕಿರುಪದ್ಯಗಳು-ಚೌಪದಿ.
ಈಗಾಗಲೇ ಹೇಳಿರುವಂತೆ ಎರಡು ಸಾಲಿದ್ದರೆ ಅದು ದ್ವಿಪದಿ. ಮೂರು ಸಾಲುಗಳಿದ್ದರೆ ಅದು ತ್ರಿಪದಿ. ನಾಲ್ಕು ಸಾಲುಗಳಿದ್ದರೆ ಚೌಪದಿ. ಐದು ಸಾಲುಗಳಿದ್ದರೆ?
ಪಂಚಪದಿ ಅನ್ನುತ್ತೀರಾ? ಊಹುಂ. ಹಾಗೆಂದರೆ ಅದರಲ್ಲಿ ಪಂಚ್ ಇರುವುದಿಲ್ಲ. ವೈಎನ್‌ಕೆ ಹೇಳಿದಂತೆ ಐದು ಸಾಲುಗಳ ಕವಿತೆಯನ್ನು ಪಂಚಪದಿ ಅನ್ನುವ ಬದಲು ದ್ರೌಪದಿ ಅಂದರೆ ಅದು ಪಂಚ್!
ಇಂಗ್ಲಿಷ್ ಭಾಷೆಯಲ್ಲಿ ಐದುಸಾಲುಗಳ ಲಿಮರಿಕ್ ಬಹಳ ಪ್ರಸಿದ್ಧ. ಕನ್ನಡದಲ್ಲೂ ಕೆಲವರು ಲಿಮರಿಕ್‌ಗಳನ್ನು ಬರೆದಿದ್ದಾರೆ.
ಆರು ಸಾಲುಗಳ ಷಟ್ಪದಿಯಂತೂ ಕನ್ನಡಕ್ಕೆ ಚಿರಪರಿಚಿತ. ನಾನು ಬರೆದ ಬಹಳಷ್ಟು ಹನಿಗವನಗಳು ಆರು ಸಾಲುಗಳನ್ನು ಹೊಂದಿದ್ದು ಷಟ್ಪದಿಯ ನಡೆಗೆ ಹತ್ತಿರವಾಗಿವೆ. ಉದಾಹರಣೆಗೆ ಗಣೇಶನ ಬಗೆಗಿನ ಈ ಕವನ:
ಗರಿಕೆ ಪ್ರಿಯ ಬೆನಕ
ಸರಳತೆಯ ಪ್ರತೀಕ
ಕೇಳುವುದಿಲ್ಲ ಧನ ಕನಕ
ಕದ್ದು ನೋಡುವನು
ನೈವೇದ್ಯದ ಮೆನು
ಇದ್ದರೆ ಸಾಕು ಮೋದಕ!
ನಾನು ಗಮನಿಸಿದಂತೆ ಸಾಮಾನ್ಯವಾಗಿ ಹನಿಗವನಗಳು ಹೆಚ್ಚಾಗಿ ಏಳು ಅಥವಾ ಎಂಟು ಸಾಲುಗಳನ್ನು ಮೀರುವುದಿಲ್ಲ. ಅದಕ್ಕಿಂತ ಉದ್ದವಾದ ಕವನಗಳನ್ನು ಹನಿಗವನ ಗಳೆಂದು ಕರೆದರೆ ತಪ್ಪಾಗುತ್ತದೆ. ಏಕೆಂದರೆ ಹನಿಗವನಗಳ ಪ್ರಧಾನ ಲಕ್ಷಣವೆ ಸಂಕ್ಷಿಪ್ತತೆ. ಗ್ರೀಕ್ ಮತ್ತು ಲ್ಯಾಟಿನ್ ಭಾಷೆಯಿಂದ ಇಂಗ್ಲಿಷ್‌ಗೆ ಬಂದ ಕಿರುಗವನದ ಒಂದು ಶೈಲಿ ಎಪಿಗ್ರಾಂ. ಇದು ಕನ್ನಡದ ಹನಿಗವನವನ್ನು ಹೋಲುತ್ತದೆ.
ಎಚ್. ಡುಂಡಿರಾಜ್ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ...
‘ಹನಿಗವನ ಏನು? ಏಕೆ? ಹೇಗೆ?’ ಕೃತಿ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ...
"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...
ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...
"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...
©2025 Book Brahma Private Limited.