‘ದೇವರು ಸತ್ತ’ ಮತ್ತು ನಾಸ್ತಿಕವಾದಿಯ ದೇವರ ‘ಕವಿತೆ’ಗಳು


ಭಾಷೆ, ಶೈಲಿ, ಅಭಿವ್ಯಕ್ತಿಯ ದೃಷ್ಟಿಯಿಂದ ವಸುದೇವ ಭೂಪಾಲಂ ಅವರ ‘ದೇವರು ಸತ್ತ’ ಹಾಗೂ ಅವರ ಸಮಗ್ರ ಕವನ ಸಂಕಲನ ‘ಕವಿತೆಗಳು’ ಮೇಲ್ನೋಟಕ್ಕೆ ವಿಭಿನ್ನವಾಗಿ ಕಂಡರೂ ಮೂಲ ಆಶಯ ಒಂದೇ. ದೇವರ ಹೆಸರಿನಲ್ಲಿ ನಡೆಯುವ ಎಲ್ಲ ಬಗೆಯ ಆಡಂಬರಗಳ ವಿರೋಧ. ಆದರೆ, ಸಮಾಜ ಸ್ವೀಕೃತಿಯ ರೀತಿ ವಿಭಿನ್ನ. ಪ್ರಖರ ವೈಚಾರಿಕತೆಗೆ ತೆರೆದುಕೊಳ್ಳುವ ಗುಣ ಕನ್ನಡ ಸಾಹಿತ್ಯಕ್ಕೆ ಇದೆ. ಈ ಹಿನ್ನೆಲೆಯಲ್ಲಿ, ವಸುದೇವ ಭೂಪಾಲಂ ಸಾಹಿತ್ಯದ ಮರುಪರಿಶೀಲನೆ ಅಗತ್ಯ ಎಂದು ಪತ್ರಕರ್ತ ವೆಂಕಟೇಶ ಮಾನು ವಿಶ್ಲೇಷಿಸಿದ ಬರಹವಿದು.

ದೇವರನ್ನು ನಂಬುವವ ಆಸ್ತಿಕ; ನಂಬದವ ನಾಸ್ತಿಕ. ವ್ಯತ್ಯಾಸ ಇರುವುದು ಪ್ರಶ್ನೆಯಲ್ಲಿ. ದೇವರ ಅಸ್ತಿತ್ವ ಪ್ರಶ್ನಿಸಿದರೆ ನಾಸ್ತಿಕವಾದ. ಪ್ರಶ್ನಿಸಬಾರದು ಎಂಬುದು ಆಸ್ತಿಕತೆ. ವಿಪರ್ಯಾಸವೆಂದರೆ, ಪ್ರಶ್ನಿಸುತ್ತಲೇ, ದೇವರ ಸ್ವರೂಪವನ್ನು ಸರಿಯಾಗಿ ತಿಳಿದವರೇ ನಾಸ್ತಿಕವಾದಿಗಳು. ದೇವರ ಹೆಸರಿನಲ್ಲಿ ನಡೆಯುವ ಎಲ್ಲ ರೀತಿಯ ಡಂಭಾಚಾರ-ಆಡಂಬರ-ಆಚರಣೆಗಳ ವಿರೋಧಿಗಳು. ಪೂಜೆ- ಪೂಜಾರಿಯಂತಹ ಮಧ್ಯೆಸ್ಥಿಕೆ ಬೇಡ; ‘ದೇವರು ಮತ್ತು ತಮ್ಮ ಮಧ್ಯೆ ನಡೆಯುವ ಸಂವಾದ’ ಎಂಬಂತೆ ಇವರ ಪ್ರಾರ್ಥನೆ. ಬಹುತೇಕ ವೇಳೆ ‘ನೀನ್ಯಾಕೋ ನಿನ್ನ ಹಂಗ್ಯಾಕೋ…’ ಎಂಬ ದಿಟ್ಟತನ ಅವರದ್ದು. ಅಚ್ಚರಿಯ ಹಾಗೂ ಕುತೂಹಲಕರ ಸಂಗತಿ ಎಂದರೆ; ಪರಂಪರೆ-ಸಂಪ್ರದಾಯಿಕ ದೇವರ ಬೆಂಬಲದ ‘ಆಸ್ತಿಕತೆ’ಯು ‘ನಾಸ್ತಿಕತೆ’ಯನ್ನು ಹೊಡೆದುರುಳಿಸಿಲ್ಲ. ಬದಲಾಗಿ, ಎರಡು ಚಕ್ರಗಳಾಗಿ ಲೋಕದ ಬಂಡಿಯನ್ನು ಎಳೆಯುತ್ತಿರುವುದು ನಿಂತಿಲ್ಲ.

ತೀರಾ ಅಲೌಕಿಕದೆಡೆಗೆ ಓದುಗರನ್ನು ಸೆಳೆಯುವುದು ಈ ಬರಹದ ಉದ್ದೇಶವಲ್ಲ. ಆದರೆ, ಯಾವುದೇ ಪ್ರಶ್ನೆಯು ಉದ್ಧಟತನದ ಸಂಕೇತವಲ್ಲ, ಅಪಹಾಸ್ಯದ ಸಂಗತಿಯೂ ಅಲ್ಲ; ಸಾಮಾಜಿಕ ಗೌರವದ ಕಳಂಕವಲ್ಲ ಅದು, ವಿಚಾರ-ಭಾವ ಹಾಗೂ ವರ್ತನೆಗಳ ಜೀವಾಳ. ಆದ್ದರಿಂದ, ವಸುದೇವ ಭೂಪಾಲಂ ಅವರ ‘ದೇವರು ಸತ್ತ’ ಕೃತಿಯನ್ನು ಸಮಾಜ ಸ್ವೀಕರಿಸಿದ ರೀತಿಯು ಹಾಗೂ ದೇವರ ಅಸ್ತಿತ್ವವನ್ನು ಸಾಕಾರಗೊಳಿಸಿ ಬರೆದ ಅವರ ಕವಿತೆಗಳ ಸಾಲುಗಳು: ಈ ಎರಡನ್ನೂ ವಿಶ್ಲೇಷಣೆಗೆ ಒಳಪಡಿಸಿದೆ. ಉತ್ತಮವಾದದ್ದು, ಗಟ್ಟಿಯಾದದ್ದು, ವಿಚಾರವುಳ್ಳದ್ದು, ಸತ್ಯವಾಗಿರುವುದು-ಇವೆಲ್ಲವೂ ಆ ಕಾಲದ ವಿರೋಧ ಎದುರಿಸುತ್ತವೆ ಅಷ್ಟೆ! ಆದರೆ, ಇಂತಹ ಕೃತಿಯೇ, ಕಾಲದೊಂದಿಗೆ ಹೆಜ್ಜೆ ಹಾಕುತ್ತದೆ. ಉಳಿದವು ಮಾರ್ಗ ಮಧ್ಯೆಯೇ ಹೇಳಹೆಸರಿಲ್ಲದಂತೆ ಕಾಣೆಯಾಗುತ್ತವೆ ಎಂಬುದು.

ಆಸ್ತಿಕ-ನಾಸ್ತಿಕ ತಲೆ ಕೆಡಿಸಿಕೊಂಡಿಲ್ಲ

ಜಗತ್ತು ತನ್ನನ್ನು ಆಸ್ತಿಕ ಇಲ್ಲವೇ ನಾಸ್ತಿಕ ಎನ್ನುತ್ತದೋ, ಆ ಬಗ್ಗೆ ಕವಿ ವಸುದೇವ ಭೂಪಾಲಂ ತಲೆ ಕೆಡಿಸಿಕೊಂಡಿಲ್ಲ. ವೈಚಾರಿಕತೆಯೇ ಮುಖ್ಯ ಎಂಬುದು ಅವರ ಗಟ್ಟಿ ನಂಬಿಕೆ. ಅದರ ಸಮರ್ಥನೆಗಾಗಿ ‘ದೇವರು ಸತ್ತ’ ಕೃತಿ ಬರೆದಿದ್ದು, ಓದುಗರಿಗೆ ಈ ಕೃತಿಯು ವೈಚಾರಿಕತೆಯ ದರ್ಶನ ಮಾಡಿಸುತ್ತದೆ. ಎಷ್ಟೇ ಪ್ರಭಾವ ವ್ಯಕ್ತಿ ಇಲ್ಲವೇ ಧಾರ್ಮಿಕ ಮುಖಂಡ ಇಲ್ಲವೇ ಶಾಸ್ತ್ರಗಳು ಹೇಳಿವೆ ಎಂದ ಮಾತ್ರಕ್ಕೆ ಕುರುಡಾಗಿ ನಂಬಬಾರದು. ಅವುಗಳನ್ನು ಪ್ರಶ್ನಿಸಬೇಕು ಎಂಬ ಭಗವಾನ್ ಬುದ್ಧನ ಮಾತೇ ‘ದೇವರು ಸತ್ತ’ ಕೃತಿಯ ಒಟ್ಟು ಆಶಯ, ಉದ್ದೇಶ, ಅಪೇಕ್ಷಿತ ಮೌಲ್ಯ.

ವೇದ ಪುರಾಣಗಳನ್ನು ಬೆಂಕಿಗೆ ಬಿಸುಡಿ, ದೇವರು ಸತ್ತ, ದೇವರ ಬ್ಲಾಕ್ ಮಾರ್ಕೆಟ್, ದೇವರ ಚಟ್ಟ ಹೊರರಿ ಇಂತಹ ಅಧ್ಯಾಯಗಳ ಮೂಲಕ ತಮ್ಮ ಪ್ರಖರ ವೈಚಾರಿಕತೆಯನ್ನು ಮಂಡಿಸಿದ್ದರು. ಈ ಶೀರ್ಷಿಕೆಗಳು ಬರಹದ ಅಂತರಾಳವನ್ನು ತೋರುತ್ತವೆ ಎಂದು ಅಂದಕೊಂಡರೆ ಅದೊಂದು ಭ್ರಮೆ. ದೇವರ ಹೆಸರಿನಲ್ಲಿ ನಡೆಯುವ ಎಲ್ಲ ಮೌಢ್ಯಗಳನ್ನು ಈ ಬರಹಗಳು ತಿರಸ್ಕರಿಸುತ್ತವೆ ವಿನಃ ಮೂಲ ಶಕ್ತಿಯ ಅಸ್ತಿತ್ವವನ್ನು ಪ್ರಶ್ನಿಸುವುದಿಲ್ಲ. ದೇವರು-ಧರ್ಮದ ನೆಪದಲ್ಲಿ ಬುದ್ಧಿವಂತಿಕೆ ಹಾಳು ಮಾಡುವುದಾಗಲಿ, ವಿಚಾರಗಳನ್ನು ಕೊಂದು ಹಾಕುವುದಾಗಲಿ ಸಲ್ಲದು ಎಂದು ಪ್ರತಿ ಅಧ್ಯಾಯವೂ ಓದುಗರನ್ನು ಎಚ್ಚರಿಸುತ್ತದೆ.

ವಿಚಾರವಾದಿ ಡಾ. ಕೆ. ಕೃಷ್ಣಮೂರ್ತಿ ‘ದೇವರೆಂದರೆ ಕಲ್ಲಿನಲ್ಲೋ, ಮೂರ್ತಿಯಲ್ಲೋ, ಗುಡಿಯಲ್ಲೋ ಅಡಗಿ ಕುಳಿತ ಅದ್ಭುತ ಎಂದು ಯಾರು ಭ್ರಮಿಸುವರೋ ಅವರಿಗೆ ಈ ಗ್ರಂಥ ಅಧ್ಯಯನದಿಂದ ಭ್ರಮನಿರಸನವಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದರೆ, ‘ದೇವರ ಅಸ್ತಿತ್ವವನ್ನು ಪ್ರಶ್ನಿಸುವ ಈ ಪುಸ್ತಕದಲ್ಲಿ ವಾಸ್ತವಿಕವಾದ ಹಾಗೂ ಮಾನವೀಯ ಗುಣಗಳಿಗೆ ಮಹತ್ವ ಇತ್ತಿರುವುದು ಪ್ರಶಂಸಾರ್ಹ’ ಎಂದೂ ಸಂಯುಕ್ತ ಕರ್ನಾಟಕ ಶ್ಲಾಘಿಸಿತ್ತು. ನೂತನ ಶೈಲಿಯಲ್ಲಿ ರಚಿಸಿರುವ ಈ ಪುಸ್ತಕವು ಸಮಸ್ತ ವಾಚಕರಿಗೂ ರುಚಿಸದೇ ಇರದು (ಪ್ರಜಾವಾಣಿ), ಮೂಢನಂಬಿಕೆಗಳನ್ನು ಖಂಡಿಸುವುದಕ್ಕಾಗಿ ಇವರು ಉಪಯೋಗಿಸಿರುವ ಭಾಷೆ ಉಗ್ರವಾಗಿದೆ. ಆಕ್ರಮಣಶೀಲವಾಗಿದೆ. ಪ್ರಭಾವಿಶೈಲಿಯ ಭಾಷೆಯನ್ನು ಅವರು ನಿಯೋಜಿಸಿರುವುದು ಯುಕ್ತವೇ ಆಗಿದೆ. ವಿಚಾರ ವೈವಿಧ್ಯದ ದೃಷ್ಟಿಯಿಂದ, ಉಚಿತ ನಿರೂಪಣಾ ದೃಷ್ಟಿಯಿಂದ ಸೊಗಸಾದ ಶೈಲಿಯಿಂದ ಈ ಗ್ರಂಥವು ವಾಚನೀಯವಾಗಿದೆ (ಕರ್ಮವೀರ), ತಮ್ಮ ಸುದೀರ್ಘ ಅಧ್ಯಯನದಿಂದಲೂ, ವೈಮನಸ್ಸಕ್ಕೂ ಎಡೆಗೊಟ್ಟ ವಾದ-ವಿವಾದಗಳಿಂದಲೂ ನಿರೀಶ್ವರವಾದವನ್ನು ಕುರಿತ ಇಲ್ಲಿಯ ಬರಹಗಳು ಸರ್ವಗ್ರಾಹ್ಯವೂ, ಸವಾಲುಕಾರಿಯೂ ಆಗಿವೆ (ಜನಪ್ರಗತಿ) ಎಂದು ಕನ್ನಡ ಸಾಹಿತ್ಯ ಹಾಗೂ ಸಮಾಜ ‘ದೇವರು ಸತ್ತ’ ಕೃತಿಯನ್ನು ಸ್ವೀಕರಿಸಿದೆ. ವಸುದೇವ ಭೂಪಾಲಂ ಅವರು ತಮ್ಮ ಅಂತಿಮ ದಿನಗಳಲ್ಲಿ ‘ಲಕ್ವ’ ದಿಂದ ಬಳಲುತ್ತಾರೆ. ದೇವರು ಸತ್ತ ಕೃತಿ ಬರೆದಿದ್ದಕ್ಕೆ ದೇವರ ಈ ಶಿಕ್ಷೆ ಎಂದು ಒಂದು ವರ್ಗ ಆರೋಪಿಸುತ್ತದೆ. ಆದರೆ, ಅಷ್ಟೇ ಶಾಂತಚಿತ್ತರಾಗಿ ವಸುದೇವ ಭೂಪಾಲಂ ಅವರು ‘ಲಕ್ಷ ಹೊಡೆಯುವುದಕ್ಕೆ ಬೇರೆ ಬೇರೆ ಕಾರಣಗಳಿವೆ. ಅದೂ ಸಹ ನಿಮಗೆ ಗೊತ್ತಿಲ್ಲ’ ಎನ್ನುವ ಮೂಲಕ ಆ ವರ್ಗದ ಮೂರ್ಖತನವನ್ನು ಬಯಲು ಮಾಡಿದ್ದರು. ಆದರೆ, ತಾವು ಈ ಎಲ್ಲ ಆಸ್ತಿಕರಿಗಿಂತ ಹೆಚ್ಚಾಗಿ ದೇವರ ಬಗ್ಗೆ ತಿಳಿದುಕೊಂಡಿದ್ದು, ತಮ್ಮ ಕವಿತೆಗಳ ಮೂಲಕವೂ ತಿಳಿವಳಿಕೆ ನೀಡುವಂತೆ ಯತ್ನಿಸಿದ್ದಾರೆ.

ನಾಸ್ತಿಕವಾದಿಯ ದೇವರ ಕವಿತೆಗಳು

ರಂಜನ (1945), ಪ್ರಣಯ ದುಂದುಭಿ (1948), ಹೊಸ ಹಾಡು (1950) ಊರ್ವಶಿ (1951) ಹೀಗೆ ನಾಲ್ಕೂ ಕವನ ಸಂಕಲನಗಳ ಸಂಗ್ರಹ ಕೃತಿ-‘ಕವಿತೆಗಳು’ ಪ್ರಕಟಿಸಿ ‘ದೇವರು, ಪ್ರೀತಿ-ಪ್ರೇಮ, ಹೆಣ್ಣು, ಸೌಂದರ್ಯ ಹೀಗೆ ವಿಷಯಗಳತ್ತ ಓದುಗರ ಗಮನ ಸೆಳೆದಿದ್ದರು. ಮಾತ್ರವಲ್ಲ; ಒಲವಿನ ಸಿಡಿಲು, ಉಪವನ, ಆಳೌ ಕರ್ಣಾಟಕ ದೇವಿ, ಹೆಣ್ಣು (ಕಥೆ-ಕಾದಂಬರಿಗಳು), ತ್ರಿಶೂಲ, ಕಮ್ಮಡವಲ್ಲಭ ಹಾಗೂ ಕಾಲೇಜು ಹುಡುಗಿ (ನಾಟಕಗಳು), ಗೊಂಚಲ್ ಮಿಂಚು, ಸ್ವಾತಂತ್ಯ್ರವೀರರು (ಜೀವನ ಚರಿತ್ರೆ), ಹೊಸಹಾಡು, ರಂಜನ, ಪ್ರಣಯ ದುಂದುಭಿ, ಹೊಸ ಹಾಡು, ಊರ್ವಶಿ ಇವೆಲ್ಲವೂ ಕವಿತೆಗಳ ಸಂಕಲನಗಳು, ಹೂ, ಹಹಹ್ಹಾ, ಗುಮ್ಮ ಬಂತು (ಶಿಶುಗೀತೆಗಳು) ರಚಿಸಿದರು.

‘ದೇವರು ಸತ್ತ’ ಕೃತಿಯಲ್ಲಿ ಯಾವ ವಿಚಾರಕ್ಕೆ ಹೆಚ್ಚು ಒತ್ತು ನೀಡಿದ್ದರೋ ಅದೇ ವಿಚಾರವನ್ನು ‘ಕವಿತೆಗಳು’ ಸಂಗ್ರಹದಲ್ಲಿ ಕಾಣಿಸಿದರು. ವ್ಯತ್ಯಾಸವೆಂದರೆ; ‘ದೇವರ ಸತ್ತ’ ಕೃತಿಯ ಭಾಷೆ ಉಗ್ರ ಹಾಗೂ ಆಕ್ರಮಣಕಾರಿ. ‘ಕವಿತೆಗಳ ಭಾಷೆ ಸೌಮ್ಯ. ಎರಡರ ಉಸಿರು ಒಂದೇ; ದೇವರ ನೆಪದಲ್ಲಿ ನಡೆಯುವ ಎಲ್ಲ ಬಗೆಯ ಡಂಭಾಚಾರ-ಆಡಂಬರಗಳಿಗೆ ವಿರೋಧ. ದೇವರು-ಧರ್ಮ, ವಿಧಿ, ಹೆಣ್ಣು, ಪ್ರೀತಿ-ಪ್ರೇಮ, ಹೂವು, ರಸಿಕತನ, ನಿಸರ್ಗ ಪ್ರೇಮ, ಅಧ್ಯಾತ್ಮ, ವಿರಹ ಹೀಗೆ ಎಲ್ಲವನ್ನೂ ಇವರ ಕವಿತೆಗಳು ಒಳಗೊಂಡಿದೆ. ದೇವರನ್ನು ಬೈಯ್ಯುವುದಿಲ್ಲ; ದೇವರ ಹೆಸರಿನಲ್ಲಿಯ ಶೋಷಣೆಗೆ ಕಿಡಿಕಾರಿದ್ದಾರೆ. ಪ್ರಖರ ವೈಚಾರಿಕತೆಯ, ಮೃಧು- ಮಧುರ ಭಾವದ ಮಾನವೀಯತೆಯನ್ನು ಪ್ರೀತಿಸುವ ಸಾದಾ-ಸೀದಾ ಮನುಷ್ಯ; ಕವಿ ಎಂದು ತೋರಿಸಿಕೊಟ್ಟವರು.-ವಸುದೇವ ಭೂಪಾಲಂ. ಯಾರೂ ಸಹ ಅವರನ್ನು ‘ನಾಸ್ತಿಕವಾದಿ’ ಎಂದು ಜರಿದರೆ ವ್ಯತ್ಯಾಸವಾಗದು. ಅವರ ಸಾಹಿತ್ಯಕ ರಚನೆ, ವಿಚಾರ -ಭಾವದ ಹಿಂದಿನ ಸೂಕ್ಷ್ಮತೆ ಗಮನಿಸಬೇಕು.

ತಪ್ಪೇನಿದೆ ಈ ಸಾಲುಗಳಲ್ಲಿ?

ಮದುವೆ ಸಂಕೋಲೆ ಏಕೆ ಪ್ರೇಮ ಬಂಧನವಿರಲು
ಒಲವನರಿಯದ ಮದುವೆ ಸೆರೆಮನೆಯ ಸರಳು
(ಊರ್ವಶಿ: ಸಮಾಧಿ ಕವಿತೆ)

ಈ ಸಾಲುಗಳ ವಿಚಾರದಲ್ಲಿ ತಪ್ಪೇನಿದೆ? ಸಾಮಾಜಿಕ ಮಹತ್ವದ ಸಾಂಸ್ಕೃತಿಕ ಘಟ್ಟವಾದ ಈ ರೀತಿಯ ಮದುವೆಯು ಸಂಪ್ರದಾಯ ವಿರೋಧಿ ಎಂದೆ? ಒಲವು-ಪ್ರೇಮರಹಿತ ಬಂಧವೇ ಮದುವೆ ಎಂದೆ? ಪ್ರೇಮವಿರದ ಮದುವೆ ಸೆರೆಮನೆಯ ಸರಳು ಎಂದಿದ್ದು, ಅಷ್ಟಕ್ಕೆ, ಪುರೋಹಿತರು, ಮೂಲಭೂತವಾದಿಗಳ ಕಣ್ಣು ಕೆಂಪಾದವೇಕೆ? ಇಂತಹ ಕವಿತೆ ಬರೆದ ಮಾತ್ರಕ್ಕೆ ಆ ಕವಿಯನ್ನು ‘ನಾಸ್ತಿಕವಾದಿ’ ಎಂದು ಟೀಕಿಸುವುದೆ? ಸಂಪ್ರದಾಯ, ಪರಂಪರೆ, ದೇವರು, ಆಚಾರ-ವಿಚಾರದಲ್ಲಿ ನಂಬಿಕೆ ಇರದ ಜೀವಿ ಅಲ್ಲಲ್ಲ; ‘ಕ್ರಿಮಿ’ ಎನ್ನುವಷ್ಟು ಹೀನಾಯವಾಗಿ ಕಾಣುವಂತೆ ಜನಾಭಿಪ್ರಾಯ ರೂಪಿಸುವುದೆ? ದೇವರ ಅಸ್ತಿತ್ವ ನಂಬಿದರೆ ಮಾತ್ರ ಅವರು ಸಜ್ಜನರೆ, ಸುಸಂಸ್ಕೃತರೆ…?

ಕವಿ, ಲೇಖಕ ವಸುದೇವ ಭೂಪಾಲಂ ಅವರ ಬದುಕು-ಸಾಹಿತ್ಯಕ್ಕೆ ಸಂಬಂಧಿಸಿ, ಆಸ್ತಿಕರ ಹಾಗೂ ನಾಸ್ತಿಕರ ಉತ್ತರಗಳಿಗಿಂತ ಬರೀ ಪ್ರಶ್ನೆಗಳೇ ಹೆಚ್ಚು. ಅವರ ಸಮಗ್ರ ಸಾಹಿತ್ಯವನ್ನು ಸರಿಯಾಗಿ ಓದಬಲ್ಲವರು ಮಾತ್ರ ‘ವಸುದೇವ ಭೂಪಾಲಂ’ ಅವರನ್ನು ಹೃದಯದಾಳದಿಂದ ಅಪ್ಪಿಕೊಳ್ಳುತ್ತಾರೆ. ಲೋಕದ ಟೀಕೆಗೆ ಪ್ರತಿಕ್ರಿಯಿಸುವುದು ಅನಗತ್ಯ ಎಂಬುದು ಅವರ ವಿವೇಕ. ಆಸ್ತಿಕರೂ ಸಹ ನಾಚುವಷ್ಟು ದೇವರ ಅಸ್ತಿತ್ವವನ್ನು ನಂಬುವುದು ಮಾತ್ರವಲ್ಲ; ವಸುದೇವ ಭೂಪಾಲಂ ಪ್ರಶಂಸಿಸುತ್ತಾರೆ. ಈ ಸಾಲುಗಳನ್ನು ನೋಡಿ;

ದೇವನಿತ್ತಿಹ ಕುಸುಮ, ಸ್ವೀಕರಿಸು, ನಲಿದಾಡು
ನಾಳೆ ಉಳಿವುದೋ, ಅಳಿವುದೋ ಬಾಳಜಾಡು
(ಭವಿಷ್ಯತ್)

ನೀರು ಹರಿಯುವುದು
ಏತಕ್ಕೆಂದು ತಿಳಿವೆ ಇಲ್ಲ
ಸುಖ ಬಹುದೆ? ಶಿವನೇ ಬಲ್ಲ
(ನೀರು ಹರಿಯುವುದು)

ಪ್ರಕೃತಿಯಲ್ಲಿಯ ಪ್ರತಿಯೊಂದು ನೀಡಿದ್ದು ಆ ದೇವನ ಕೊಡುಗೆಯೇ ಆಗಿದೆ. ಅದನ್ನು ಸ್ವೀಕರಿಸಿ ಸಂಭ್ರಮಿಸು ಅನ್ನುವ ಸಲಹೆ ಇದ್ದರೆ, ಎರಡನೇ ಕವಿತೆಯಲ್ಲಿ ‘ಪ್ರಕೃತಿಯಲ್ಲಿಯ ಹತ್ತು ಹಲವು ವಿಸ್ಮಯಗಳಿಗೆ ‘ಶಿವನೇ ಬಲ್ಲ’ ಎಂಬ ಸಂಪೂರ್ಣ ಶರಣಾಗತಿ ಮನೋಧರ್ಮವಿದೆ. ಅಷ್ಟೇ ಅಲ್ಲ; ಕೆಟ್ಟ ಕರ್ಮಠ ಮನೋಭಾವವೂ ಹೀಗಿದೆ.
ಮಾನವ ಕರ್ಮವು ಸವೆಯುತ ಸಡಿಲಿಲು
ಮುಗಿಯಿತು ಜೀವನ ನಾಟಕವು
(ದೀನ ಕವಿ)

ಸತ್ಯದ ದರ್ಶನವೂ ಹೀಗಿದೆ ನೋಡಿ;

ಹುಸಿ ಕೀರ್ತಿಯಾರ್ಜನೆಯು ಅಂತಿಮದಿ ಬರೀ ಸೊನ್ನೆ
ಮಹಿಮನನು ಒಲಿದೆ ಒಲಿವಳು; ಜಸದ ಸಿರಿ ಕನ್ನೆ

ನಿಸರ್ಗದ ಬಣ್ಣನೆ:

ಎದುರು ದಡದಿ ಬನದ ಸೊಂಪು,
ಇರುವ ತಟದಿ ಸುಮದ ಕಂಪು,
ಶಾಂತಿ ಸುರಿದಿದೆ.
.(ತುಂಗಾ ತಟ),

ರಸಿಕತನ ತುಂಬಿದ ಕವಿತೆ

ನೀನೊಲಿದು ಬರೆ ಚೆಲುವೆ,
ಸ್ವರ್ಗವೆನ ಹಸ್ತದಲಿ;
ನೀನಿತ್ತ ಚುಂಬನವೆ
ಮಧುರ ಸುಧೆ ಅಧರದಲಿ
(ಆಸೆ),

ಪತ್ನಿಯ ಪ್ರಶಂಸೆ

ನಾ ನಿನ್ನ ಅರ್ಧ, ನೀ ನನ್ನ ಪೂರ್ಣತೆಯು; ನೀನೇ ಸರ್ವಸ್ವ (ಓ ಚೆಲುವೆ)

ಸೌಂದರ್ಯದ ವರ್ಣನೆ

ಹುಣ್ಣಿಮೆಯ ತಿಂಗಳಲ್ಲಿ
ಮೆರೆವ ಶಶಿ ಕಲೆಯಂತೆ ಕಾಣುತಿರುವವು ಕಣ್ಣು,
ಆವ ರಸಿಕನ ಎದೆಗೆ
ಉನ್ಮಾದವೂಡಿಸಲು ಬಳಕುತಿಹೆ ಓ ಹೆಣ್ಣೆ
(ಕಣ್ಣಿನ ಮಾಯೆ)

ವಿರಹವಿರಬೇಕೆ?

ಒಡೆಯಿತು ಚೆಲುವನು ಬಿಂಬಿತ ಕನ್ನಡಿ
ಉರುಳಿತು ಉನ್ನತ ಸೌಧವು ನೆಲದಡಿ
ಉಳಿಯಿತು ಸವಿ ನೆನಪು
(ಪ್ರೇಮಭಂಗ)

ನೀತಿ ಇರಬೇಕೆ?
ಚೆಲುವು ಚರ್ಮದಲಿಲ್ಲ
ಒಲವಿನೊರತೆಯಲಿ
ತಣಿವು ಕಂಗಳಲಿಲ್ಲ
ಎದೆಯಾಳದಲಲ್ಲಿ
(ಸೌಂದರ್ಯದ ಸತ್ಯ)

ಅಧ್ಯಾತ್ಮವಿರಬೇಕೆ?

ರೂಪದೊಳೇನುಂಟು ಎಲೆ ಮನುಜ, ಎಲುಬಿನ ಗೂಡು
ಮಾತು ಮಡಿಕೆಯ ತೂತು; ಮೌನ ಸ್ವರ್ಗದ ಹಾಡು
(ನಶ್ವರ)

ಲೋಕದ ಭ್ರಮೆಯನ್ನು ಹೀಗೆ ಸರಿಸಿದರೆ ತಪ್ಪೆ?

ಹೊಸತು ತಾನು ತಿಳಿದು ಬರಲು, ಹಳೆಯದಾಗಿದೆ
ಹಳೆಯದನ್ನು ಅರಿಯದಿರಲು, ಹೊಸತೇ ಆಗಿದೆ
(ನೂತನ)

ವಸುದೇವ ಭೂಪಾಲಂ ಅವರ ಸಾಹಿತ್ಯ ವಸ್ತು ವೈವಿಧ್ಯತೆಯಿಂದ ಕಂಗೊಳಿಸುತ್ತದೆ. ವೈಚಾರಿಕತೆಯ ಪ್ರಖರತೆಯನ್ನು ಬೆಳಗುತ್ತದೆ. ಭಾವದ ಗುರುತ್ವಾಕರ್ಷಣೆಯಿಂದ ಓದುಗರನ್ನು ಸೆಳೆಯುತ್ತವೆ. ಇವರ ಸಾಹಿತ್ಯ ಗುಣಮಟ್ಟದ ದೃಷ್ಟಿಯಿಂದ ಉತ್ತಮವೇ ಆಗಿದೆ. ಆದರೆ, ಅವರನ್ನು ‘ನಾಸ್ತಿಕವಾದ’ ದಡಿ ದೂರ ಇಡುವ ಹಾಗೂ ಅವರ ಸಾಹಿತ್ಯವನ್ನು ‘ಉಗ್ರವಾದ’ದಡಿ ತಳ್ಳುವ ಪರಿಪಾಟ ನಿಲ್ಲಬೇಕು. ಪ್ರಖರ ವೈಚಾರಿಕತೆಗೆ ತೆರೆದುಕೊಳ್ಳುವ ಗುಣ ಕನ್ನಡ ಸಾಹಿತ್ಯಕ್ಕೆ ಇದೆ. ಅವರ ಸಾಹಿತ್ಯದ ಮರು ಪರಿಶೀಲನೆಗೆ ಚಾಲನೆ ಸಿಗಬೇಕು.

MORE FEATURES

'ಹೆಗಲು': ತ್ಯಾಗ, ನಿಸ್ವಾರ್ಥತೆಯ ಅಪರೂಪದ ಜೀವನಗಾಥೆ

14-12-2025 Bengaluru

"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...

ಅನುಕ್ಷಣ ಅನುಭವಿಸಿ: ಸಮಯ ನಿರ್ವಹಣೆಯ ಮಾರ್ಗದರ್ಶಿ

14-12-2025 BENGALURU

ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...

ಮಕ್ಕಳ ಕಥಾಸಾಹಿತ್ಯ ಸಂವೇದನೆಯ ಹೊಸ ಹೆಜ್ಜೆಗಳು.......

13-12-2025 ಬೆಂಗಳೂರು

"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...