'ಗಿರ್ ಮಿಟ್'; ನಗೆಯ ಹೊಸ ದಾರಿ


ಆಟ, ಪ್ರಸಂಗಗಳೆಲ್ಲ ಓದುಗನನ್ನು ನಗಿಸುತ್ತವೆ. ಸಪ್ಪೆ ದೈನಿಕದ ನಡುವೆಯೂ ನಗೆಮಿಂಚು ಸಾಧ್ಯ ಅನ್ನುವುದನ್ನು ತೋರಿಸುತ್ತವೆ. ಎನ್ನುತ್ತಾರೆ ಲೇಖಕ ಜೋಗಿ. ಅವರು ಹಾಸ್ಯ ಬರಹಗಾರ ಪ್ರಶಾಂತ ಆಡೂರ ಬರೆದ 'ಗಿರ್ ಮಿಟ್' ಕೃತಿಗೆ ಬರೆದ ಬೆನ್ನುಡಿ...   

ಹಾಸ್ಯ ಎಂದರೆ ಹೆಂಡತಿಯನ್ನು ಆಡಿಕೊಳ್ಳುವುದು. ದಾಂಪತ್ಯವನ್ನು ಗೇಲಿ ಮಾಡುವುದು, ಸಂಸಾರದ ಸಂಗತಿಗಳನ್ನು ನಗೆಪಾಟಲು ಮಾಡುವುದು ಅಂತ ಬಹಳ ಕಾಲ ನಮ್ಮನ್ನು ಅನೇಕ ಹಾಸ್ಯಲೇಖಕರು ನಂಬಿಸಿದ್ದರು. ಹೆಣ್ಣನ್ನು ಗೇಲಿ ಮಾಡದೇ ಹಾಸ್ಯಹುಟ್ಟುವುದೇ ಇಲ್ಲ ಎಂದು ನಂಬಿದವರಿದ್ದರು. ಇವತ್ತಿಗೂ ಕನ್ನಡ ಸ್ಟಾಂಡಪ್ ಕಾಮಿಡಿಗಳಲ್ಲಿ ಹೆಂಡತಿ ಮತ್ತು ಮನೆ ಬೇಕೆ ಬೇಕು. ಸ್ವಂತದ್ದಾದಷ್ಟೂ ಒಳ್ಳೆಯದು ಎಂಬ ಹಳಸಲು ತಮಾಷೆಯನ್ನು ನಾಚಿಕೆಯಿಲ್ಲದೇ ಹೇಳುತ್ತಿರುತ್ತಾರೆ.

ಪ್ರಶಾಂತ ಆಡೂರ ಅವರ ಹಾಸ್ಯದಲ್ಲಿ ಇಂಥ Misogyny ಇಲ್ಲ. ಎಲ್ಲ ಒಳ್ಳೆಯ ಹಾಸ್ಯಪಟುಗಳಂತೆ ಅವರು ತನ್ನನ್ನು ತಾನೇ ಗೇಲಿಮಾಡಿಕೊಳ್ಳಬಲ್ಲವರು. ಸಂಸಾರದ ಸಂಕಟಗಳಲ್ಲಿ ಹುಟ್ಟುವ ಅವಿಸ್ಮರಣೀಯ ಕ್ಷಣಗಳನ್ನು ತಿಳಿನಗೆಯ ಬಟ್ಟಲಲ್ಲಿಟ್ಟು ಕುಡಿಸುವವರು, ಬದುಕಿನಲ್ಲಿ ಅತ್ಯಂತ ಕಷ್ಟದ ಮತ್ತು ಪರಂಪರಾನುಗತ ಸಂಗತಿ ಏನೆಂದರೆ ಕುಕ್ಕರಿನ ಸೀಟಿಯ ಲೆಕ್ಕ ಇಡುವುದು ಎಂದು ಹೇಳುತ್ತಾ ಆಧುನಿಕ ಬದುಕಿಗೊಂದು ಹಾಸ್ಯದ ರೂಪಕ ಕೊಡಬಲ್ಲವರು.

ಕನ್ನಡದ ಪ್ರತಿಯೊಂದು ಆಡುಭಾಷೆಗೂ ಅದರಲ್ಲೇ ಆದ್ದ ವಿನ್ಯಾಸವಿದೆ. ಭಾಷೆಯನ್ನು ಕೊಂಚ ಬಳುಕಿಸಿದರೆ ತುಟಿಯೂ ಕೊಂಕುವಂತೆ ಮಾಡುತ್ತದೆ. ಇಲ್ಲಿರುವ ಪ್ರಸಂಗಗಳಲ್ಲಿ ನಿರೂಪಕರೂ ಅವರ ಗೆಳೆಯರೂ ಸೇರಿ ಆಡುವ ಮಾತು. ಆಟ, ಪ್ರಸಂಗಗಳೆಲ್ಲ ಓದುಗನನ್ನು ನಗಿಸುತ್ತವೆ. ಸಪ್ಪೆ ದೈನಿಕದ ನಡುವೆಯೂ ನಗೆಮಿಂಚು ಸಾಧ್ಯ ಅನ್ನುವುದನ್ನು ತೋರಿಸುತ್ತವೆ.

ನಾನು ಹಾಸ್ಯದ ವಿಚಾರಕ್ಕೆ ಬಂದರೆ ಜಾರ್ಜ್ ಮೈಕ್ ಅಭಿಮಾನಿ. ಇಂಗ್ಲಿಷಿನಲ್ಲಿ ಆತ ಬರೆಯುತ್ತಿದ್ದ ಪ್ರಸಂಗಗಳು ನನ್ನನ್ನು ಅನೇಕ ವರ್ಷಗಳ ಕಾಲ ಹಿತಾನುಭವದಲ್ಲಿ ಸುಖವಾಗಿಟ್ಟಿದ್ದವು. ಪ್ರಶಾಂತ ಆಡೂರ ಕೂಡ ನನ್ನಿಷ್ಟದ ಹಾಸ್ಯ ಬರಹಗಾರರು. ಅವರ 'ಕುಟ್ಟವಲಕ್ಕಿ', 'ಗೊಜ್ಜವಲಕ್ಕಿ', 'ಅಳ್ಳಿಟ್ಟು', 'ತಂಬಿಟ್ಟ'ನ್ನು ತುಂಬಿಕೊಂಡು ಖುಷಿಯಾಗಿರುವ ನನಗೆ ಅವರೀಗ 'ಗಿರ್‌ಮಿಟ್ ಅನ್ನು ಕೊಟ್ಟಿದ್ದಾರೆ.

ಕೃತಿ : 'ಗಿರ್ ಮಿಟ್' 
ಲೇಖಕರು :ಪ್ರಶಾಂತ ಆಡೂರ
ಪ್ರಕಾಶನ : ಮನೋಹರ ಗ್ರಂಥ ಮಾಲ
ಬೆಲೆ : ₹223

 

MORE FEATURES

'ಪುನರ್ನವ': ಸರಳ ಕನ್ನಡದಲ್ಲಿ ಬೆರಗುಗೊಳಿಸುವ ಕಥನ

05-12-2025 ಬೆಂಗಳೂರು

ಸರಳ ಭಾಷೆಯಲ್ಲಿ ಓದುಗರನ್ನು ಮುಟ್ಟುವ ಬಲಂಧರೆಯಂತಹ ಮಹಾಭಾರತ  ನಿತ್ಯ ಓದುಗರಿಗೂ ಅಪರಿಚಿತವೆ ಎನ್ನಬಹುದಾದ ಆಕೆಯ ಪಾ...

'ಕೃಷ್ಣಯ್ಯನ ಕೊಳಲು': ಆಧುನಿಕ ರಾಜಕೀಯದ ಕನ್ನಡಿ!

04-12-2025 ಬೆಂಗಳೂರು

ಪುರಾಣದ ಕೃಷ್ಣನ ಕಥೆಯನ್ನು ನಮ್ಮ ಕಾಲದ ದೈನಂದಿನ ರಾಜಕೀಯದಿಂದ ಬಳಲುವ ಜನರ ಕಥೆಯಾಗಿಸಿ ಹೇಳುವ ಪ್ರಯೋಗವನ್ನು ಹಿರಿಯ ಲೇಖಕ...

ರಂಗದ ಮೇಲೆ ಪ್ರಯೋಗ ಕಂಡರೆ ಅತ್ಯಂತ ಸಂತೋಷ

04-12-2025 ಬೆಂಗಳೂರು

"ಈ ನಾಟಕ ಬರೆಸಿಕೊಳ್ಳುವಾಗ ಅತ್ಯಂತ ಖುಷಿ ಕೊಟ್ಟಿದೆ ಹಾಗೇ ಓದುಗರಾದ ನಿಮಗೂ ನೆಮ್ಮದಿ ಕೊಡಲೆಂಬ ಆಶಯ. ರಂಗದ ಮೇಲೆ ಪ...