Date: 07-04-2022
Location: ಕನ್ನಡ ವಿಶ್ವವಿದ್ಯಾಲಯ. ವಿದ್ಯಾರಣ್ಯ, ಹಂಪಿ (ಜಿಲ್ಲೆ: ವಿಜಯನಗರ)
ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಕೊಡಮಾಡುವ ಪ್ರತಿಷ್ಠಿತ ‘ನಾಡೋಜ’ ಗೌರವ ಪದವಿಗಾಗಿ ಕನ್ನಡದ ವಿದ್ವಾಂಸರಾದ ಡಾ. ಗೊ.ರು. ಚನ್ನಬಸಪ್ಪ, ಡಾ. ಭಾಷ್ಯಂ ಸ್ವಾಮಿ ಹಾಗೂ ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರೀ ಅವರನ್ನು ಆಯ್ಕೆ ಮಾಡಿದೆ.
ಕನ್ನಡ ವಿಶ್ವವಿದ್ಯಾಲಯದ ನವರಂಗ ಬಯಲು ರಂಗಮಂದಿರದಲ್ಲಿ 2022ರ ಏ. 12 ರಂದು ಸಂಜೆ 5:30ಕ್ಕೆ ಜರುಗಲಿರುವ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲ ಹಾಗೂ ಕನ್ನಡ ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆದ ಥಾವರ್ ಚಂದ್ ಗೆಹ್ಲೋಟ್ ಅವರು ಅಧ್ಯಕ್ಷತೆ ವಹಿಸಿ, ಗೌರವ ಪದವಿಗಳನ್ನು ಪ್ರದಾನ ಮಾಡುವರು ಎಂದು ಕನ್ನಡ ವಿ.ವಿ. ಕುಲಪತಿ ಡಾ. ಸ.ಚಿ. ರಮೇಶ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕರ್ನಾಟಕ ರಾಜ್ಯ ವಿಜ್ಞಾನ-ತಂತ್ರಜ್ಞಾನ ಇಲಾಖೆ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ವಿದ್ಯಾರ್ಥಿಗಳಿಗೆ ಡಿಲಿಟ್ ಹಾಗೂ ಪಿ.ಎಚ್.ಡಿ ಪದವಿಗಳನ್ನು ಪ್ರದಾನ ಮಾಡುವರು. ಆಂಧ್ರ ಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಡಾ. ತೇಜಸ್ವಿ ವಿ. ಕಟ್ಟಿಮನಿ ಅವರು ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ಗೊ.ರು. ಚನ್ನಬಸಪ್ಪ: ಜಾನಪದ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗೊ. ರು. ಚನ್ನಬಸಪ್ಪರವರು ಚಿಕ್ಕಮಗಳೂರು ಜಿಲ್ಲೆಯ ಗೊಂಡೇದಹಳ್ಳಿಯವರು. ಗ್ರಾಮೀಣ ಬದುಕಿನ ಬಗ್ಗೆ ಮತ್ತು ಜಾನಪದ ಕ್ಷೇತ್ರವು ಅವರ ಆಸಕ್ತಿ ಕ್ಷೇತ್ರ. 1967ರಲ್ಲಿ ತರೀಕೆರೆಯಲ್ಲಿ ನಡೆದ ಜಾನಪದ ಸಮ್ಮೇಳನದ ಸಂದರ್ಭದಲ್ಲಿ ಹೊರತಂದ ಕೃತಿ ‘ಹೊನ್ನ ಬಿತ್ತೇವು ಹೊಲಕೆಲ್ಲ’ ಗ್ರಂಥದ ಸಂಪಾದಕರು. ಕೆ.ಆರ್. ಲಿಂಗಪ್ಪ ಅಭಿನಂದನಾ ಸಮಿತಿ ಪ್ರಕಟಿಸಿದ ‘ಗ್ರಾಮಜ್ಯೋತಿ’ ಇವೆರಡೂ ಕೃತಿಗಳೂ ಗೊ. ರು. ಚನ್ನಬಸಪ್ಪ ಅವರು ಸಂಪಾದಿಸಿ ವಿಶಿಷ್ಟ ಆಕರಗ್ರಂಥಗಳು. ಜಾನಪದ ವಸ್ತುವನ್ನಾಧರಿಸಿ ಬರೆದ ’ಸಾಕ್ಷಿ ಕಲ್ಲು, ಬೆಳ್ಳಕ್ಕಿ ಹಿಂಡು ಬೆದರ‍್ಯಾವೋ’ ರಂಗಭೂಮಿಯ ಮೇಲೆ ಅಪೂರ್ವ ಯಶಸ್ಸು ಕಂಡ ನಾಟಕಗಳು.
’ವಿಭೂತಿ, ದಾಸೋಹ, ಸೇವಾ ಸಂಪದ’ ಮೊದಲಾದ ವಿಶಿಷ್ಟ ಕೃತಿರಚನೆ. ವಾರ್ತಾ ಇಲಾಖೆಯ ‘ಪಂಚಾಯತ್ ರಾಜ್ಯ’, ‘ಜನಪದ’ ಮಾಸಪತ್ರಿಕೆಗಳ ಸಹಾಯಕ ಸಂಪಾದಕರಾಗಿ ಪರಿಷತ್ ಪತ್ರಿಕೆ, ಜಾನಪದ ಜಗತ್ತು ಪತ್ರಿಕೆಗಳ ಸಂಪಾದಕರ ಜವಾಬ್ದಾರಿ. ಚಿತ್ರರಂಗದಲ್ಲೂ ಗಮನಾರ್ಹ ಸಾಧನೆ. ಕನ್ನಡ ಸಾಹಿತ್ಯ ಪರಿಷತ್ತು, ವಜ್ರಮಹೋತ್ಸವ, ಕರ್ನಾಟಕ ಜಾನಪದ ಕಲೆ, ಕನ್ನಡ ಪತ್ರಿಕೋದ್ಯಮ, ಸುತ್ತೂರ ಸಿರಿ, ಮೊದಲಾದ 40ಕ್ಕೂ ಹೆಚ್ಚು ಸಾಕ್ಷ್ಯ ಚಿತ್ರ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ನಾಡಿನಾದ್ಯಂತ ಪ್ರವಾಸ. ಸಾಹಿತ್ಯಾಭಿಮಾನಿಗಳಿಂದ ಏಳೆಂಟು ಲಕ್ಷರೂ ಸಂಗ್ರಹಣೆ. ಪರಿಷತ್ತಿನ ಸಿಬ್ಬಂದಿಯನ್ನು ಅನುದಾನದ ವ್ಯಾಪ್ತಿಗೆ ತಂದ ಕೀರ್ತಿ ಸಾಂಸ್ಕೃತಿಕ ಕಾರ‍್ಯಕ್ರಮ ಗೀತ-ಸಂಗೀತ, ಕಾವ್ಯ-ಕಾವೇರಿ ಪ್ರಾರಂಭಿಸಿದ ಹೆಗ್ಗಳಿಕೆ. ವಿದೇಶಿ ಕನ್ನಡಿಗರ ಆಹ್ವಾನದ ಮೇರೆಗೆ ಅಮೆರಿಕಾ ಭೇಟಿ. ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ಕರ್ನಾಟಕದ ರಾಜ್ಯೋತ್ಸವ ಪ್ರಶಸ್ತಿ ಮುಂತಾದವು ಸಂದಿವೆ.
ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರೀ: ಸಂಶೋಧಕ, ಪ್ರಾಧ್ಯಾಪಕ ಟಿ.ವಿ.ವೆಂಕಟಾಚಲ ಶಾಸ್ತ್ರೀ ಅವರು ಕನ್ನಡ ಭಾಷೆಯನ್ನು ಶ್ರೀಮಂತಿಕೆ ಹೆಚ್ಚಿಸಿದವರು. 1933ರ ಆಗಸ್ಟ್ 26 ರಂದು, ಬೆಂಗಳೂರು ಜಿಲ್ಲೆಯ ಕನಕಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿ ಜನಿಸಿದರು. ತಂದೆ ವೆಂಕಟಸುಬ್ಬಾಶಾಸ್ತ್ರಿಗಳು. ತಾಯಿ ಸುಬ್ಬಮ್ಮ. ಎಂ.ಎ. ಮತ್ತು ಪಿಎಚ್.ಡಿ. ಪದವಿ ಪಡೆದ ನಂತರ ವೆಂಕಟಾಚಲ ಶಾಸ್ತ್ರಿಗಳು ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ವೃತ್ತಿಯನ್ನು ಮಾಡಿ, ನಂತರ, ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಕನ್ನಡ ನಿಘಂಟು ರಚನಾ ಸಮಿತಿಯ ಸಂಪಾದಕ ಸಮಿತಿಯ ಸದಸ್ಯರಾಗಿದ್ದ ಅವರು ನಂತರ ನಿಘಂಟು ಪರಿಷ್ಕರಣ ಸಮಿತಿ ಪ್ರಧಾನ ಸಂಪಾದಕರಾಗಿದ್ದರು.
ವ್ಯಾಕರಣ, ಛಂದಸ್ಸು, ಕಾವ್ಯಮೀಮಾಂಸೆ, ನಿಘಂಟು, ಗ್ರಂಥಸಂಪಾದನೆ, ಸಾಹಿತ್ಯ ವಿಮರ್ಶೆ, ಸಂಶೋಧನೆ, ಜೀವನ ಚರಿತ್ರೆ, ಅನುವಾದ, ನಾಟಕ, ಪ್ರಬಂಧ ಪ್ರಕಾರಗಳಲ್ಲಿ ನೂರಕ್ಕೂ ಹೆಚ್ಚು ಗ್ರಂಥ ರಚಿಸಿ, ಪ್ರಕಟಿಸಿದ್ದಾರೆ. ಹಳಗನ್ನಡ ಸಾಹಿತ್ಯ ಪರಂಪರೆಯ ಕೊಂಡಿ ಎಂದೇ ಸಾಹಿತ್ಯವಲಯದಲ್ಲಿ ಅವರನ್ನು ಗುರುತಿಸಲಾಗುತ್ತದೆ.
ಶಾಸ್ತ್ರಿಗಳ ಸಂಶೋಧನಾ ಕೃತಿಗಳಲ್ಲಿ ‘ಕನ್ನಡ ನೇಮಿನಾಥ ಪುರಾಣ, ತೌಲನಿಕ ಅಧ್ಯಯನ’ (1973), ‘ಜೈನ ಸಾಹಿತ್ಯ, ಜೈನ ಭಾಗವತ ಭಾರತಗಳು-ಒಂದು ಸಮೀಕ್ಷೆ’ (1980), ‘ಹರಿವಂಶ ಪುರಾಣ ಸಾರ’ (1986) ಕರ್ಣ ಪಾರ‍್ಯ, ‘ನೇಮಿನಾಥ ಪುರಾಣ ಕಥಾಸಾರ’ 2001, ‘ಅರ್ಧ ನೇಮಿನಾಥ ಪುರಾಣ ಕಥಾಸಾರ ವಸ್ತು ವಿಮರ್ಶೆ’ (2000), ‘ಕನ್ನಡ ಜೈನ ಪುರಾಣಗಳಲ್ಲಿ ಸಿದ್ಧಾಂತ ವಿಷಯ’, ‘ಜೈನ ಭಾರತ ಕಥೆ ಮತ್ತು ಸ್ವರೂಪ ಜೈನ ಧರ್ಮ ಮತ್ತು ಕನ್ನಡ ಸಾಹಿತ್ಯ’,‘ಕಾವ್ಯ ಮೀಮಾಂಸೆ’, ‘ಕನ್ನಡ ಚಿತ್ರ ಕಾವ್ಯ'(1987), ‘ಶಾಸ್ತ್ರೀಯ : 4 ಸಂಪುಟಗಳು’, ‘ಮಹಾಕಾವ್ಯ ಲಕ್ಷಣ’ ಮುಂತಾದವು ಸೇರಿವೆ.
ಛಂದಃಶಾಸ್ತ್ರದಲ್ಲಿ ಅವರ ‘ಕನ್ನಡ ಛಂದ ಸ್ವರೂಪ;’ ‘ವ್ಯಾಕರಣ’ಗಳು, ನಿಘಂಟು ಕಾರ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಕಾರ್ಯದಲ್ಲಿ ನೀಡಿರುವ ಬೃಹತ್ ಕೊಡುಗೆ ಅಲ್ಲದೆ ‘ದರ್ಪಣ ವಿವರಣ’ ಕೃತಿಯನ್ನೂ ಪ್ರಕಟಿಸಿದ್ದಾರೆ. ಗ್ರಂಥ ಸಂಪಾದನೆಗಳಲ್ಲಿ ಶಾಸ್ತ್ರೀಯವರು ‘ಆದಿಪುರಾಣ’, ‘ಛಂದೋಂಬುಧಿ’, ‘ಶಬ್ದಮಣಿ ದರ್ಪಣ’, ‘ಮುದ್ರಾ ಮಂಜೂಷ’, ‘ಗೊಮ್ಮಟ ಜಿನಸ್ತುತಿ’, ‘ಪಂಪ ಸಂಪುಟ’, ‘ಸಮಯ ಪರೀಕ್ಷೆ’ ಮುಂತಾದ ಬೃಹತ್ ಕೃತಿಗಳು ಸೇರಿವೆ. ಗ್ರಂಥ ಸಂಪಾದನೆಯ ಪಾರಿಭಾಷಿಕ ಕೋಶ ಸೃಜಿಸಿದ್ದಾರೆ.
ಅವರು ರಚಿಸಿರುವ ಜೀವನ ಚರಿತ್ರೆಗಳಲ್ಲಿ ‘ಶ್ರೀ ಸಹಜಾನಂದ ಭಾರತಿ ಸ್ವಾಮಿಗಳು’ (2006) ಮತ್ತು ‘ಸರ್.ಎಂ.ವಿಶ್ವೇಶ್ವರಯ್ಯನವರ ಪೂರ್ವಜರು’ (2004) ಕೃತಿಗಳು ಸೇರಿವೆ. ‘ಮೆಲುಗಾಳಿಯ ಮಾತುಗಳು’ ಎಂಬುದು ಪ್ರಬಂಧ ಸಂಗ್ರಹ. ಸಾಹಿತ್ಯ ಶಿಲ್ಪಿಗಳು, ಆಪ್ತರು-ಆಚಾರ್ಯರು, ಮಾರ್ಗದರ್ಶಕ ಮಹನೀಯರು, ಉದಾರಚರಿತರು- ಉದಾತ್ತಪ್ರಸಂಗಗಳು ಕೃತಿಗಳನ್ನೂ ಅವರು ರಚಿಸಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದೇವರಾಜ ಬಹದ್ದೂರ್ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ, ತೀನಂ’ಶ್ರೀ ಸ್ಮಾರಕ ಬಹುಮಾನ, ಶಂಭಾ ಜೋಶಿ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ, ಚಿದಾನಂದ ಪ್ರಶಸ್ತಿ, ಕೇಂದ್ರ ಭಾಷಾ ಸಮ್ಮಾನ್ ಪ್ರಶಸ್ತಿ, ಮನುಶ್ರೀ ಪ್ರಶಸ್ತಿ, ಪಂಪ ಪ್ರಶಸ್ತಿ ಮತ್ತು 2015 ಸಾಲಿನ ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಪ್ರಶಸ್ತಿಗಳು ಸಂದಿವೆ.
ಭಾಷ್ಯಂ ಸ್ವಾಮಿ : ಭಾಷಾ ವಿಜ್ಞಾನಿಯಾಗಿರುವ ಡಾ. ಭಾಷ್ಯಂ ಸ್ವಾಮಿ ಅವರು ಮೈಸೂರಿನ ಯೋಗ ನರಸಿಂಹಸ್ವಾಮಿ ದೇಗುಲದ ಸಂಸ್ಥಾಪಕರು.
ಬಸವಕಲ್ಯಾಣ: ವಚನ ಸಾಹಿತ್ಯದಿಂದ ಈ ನೆಲದ ಭಾಷಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಾಗಿದೆ ಎಂದು ಅಂತರ್ ರಾಷ್ಟ್ರೀಯ ...
2026ನೇ ಸಾಲಿನ ಟೊಟೊ ಪುರಸ್ಕಾರಕ್ಕೆ ಕನ್ನಡ ವಿಭಾಗದಲ್ಲಿ ಒಂಭತ್ತು ಜನ ಯುವ ಸೃಜನಶೀಲ ಬರಹಗಾರರ ಹೆಸರನ್ನ ಮೊದಲನೇ ಪಟ್ಟಿಗ...
ಧಾರವಾಡ: ಮಕ್ಕಳಲ್ಲಿ ಕಲ್ಪನಾ ಶಕ್ತಿ ಬೆಳೆಸುವುದರ ಜೊತೆಗೆ ಓದಿನ ಅಭಿರುಚಿ ಹಿಗ್ಗಿಸಬೇಕಿದೆ. ಅಂದಾಗ ಅವರು ಓದಿನ ರುಚಿಯೊಂ...
©2025 Book Brahma Private Limited.