"ಪೂರ್ಣಚಂದ್ರ ತೇಜಸ್ವಿಯವರ ಅಭಿಮಾನಿಯಾಗಿರುವ ಚಿರಂಜೀವಿಯವರು ವೃತ್ತಿಯಲ್ಲಿ ಶಿಕ್ಷಕರು ಪ್ರವೃತ್ತಿಯಲ್ಲಿ ಬರಹಗಾರರು. "ಕೊಡಲಿ ಕಾವು" ಎನ್ನುವ ವಿಶಿಷ್ಟವಾದ ಶಿರೋನಾಮೆಯೊಂದಿಗೆ ಹೊರತಂದಿರುವ ಕಥಾ ಸಂಕಲನದಲ್ಲಿ ಭರ್ತಿ 7 ಕಥೆಗಳ ಹೂರಣವನ್ನು ಉಣಬಡಿಸಿದ್ದಾರೆ. ಒಂದೊಂದು ಕಥೆಗಳು ತನ್ನದೇ ಆದ ವಿಶೇಷತೆಗಳನ್ನು ಒಳಗೊಂಡು ಓದುಗನನ್ನು ಎಲ್ಲೆಲ್ಲಿಯೂ ಕರೆದುಕೊಂಡು ಹೋಗಿ ಬಂದು ಮತ್ತೆ ವಾಪಸ್ ಪ್ಯಾಜಾಕೆ ನಿಲ್ಲಿಸುತ್ತವೆ," ಎನ್ನುತ್ತಾರೆ ವೀರೇಶ್ ತೇರದಾಳ. ಅವರು ಚಿರಂಜೀವಿ ರೋಡಕರ್ ಅವರ ‘ಕೊಡಲಿ ಕಾವು’ ಕಥಾ ಸಂಕಲನದ ಕುರಿತು ಬರೆದ ವಿಮರ್ಶೆ.
ಒಂದೊಮ್ಮೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ನಾಗರಾಳ, ಮುದಗಲ್ ಭಾಗದಲ್ಲಿ ವಿಶಿಷ್ಟವಾದ ವಿಶೇಷ ಹೆಸರು ಎಂದರೆ ಚಿರಂಜೀವಿ ರೋಡಕರ್. ಶಿಕ್ಷಕರಾಗಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಯಾರಿಗೂ ಸಲಾಂ ಹೊಡೆಯದೆ, ಮಕ್ಕಳೇ ದೈವವೆಂದು ಭಾವಿಸಿ, ಮಕ್ಕಳ ಮನದಾಳದ ನೆಚ್ಚಿನ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಇವರ ಕೆಲಸ ಕಾರ್ಯಗಳನ್ನು ಮೆಚ್ಚುವವರಿಗಿಂತ ಉರಿದುಕೊಳ್ಳುವವರು ಹೆಚ್ಚಾದಾಗ ಆ ಉರಿದುಕೊಳ್ಳುವವರನ್ನು ಅತೀ ಹೆಚ್ಚು ತನ್ನ ಕೆಲಸಗಳಿಂದ ಉರಿದುಕೊಳ್ಳುವ ಹಾಗೆ ಮಾಡಿ ಸೈ ಎನಿಸಿಕೊಂಡು ಕೊನೆಗೆ 'ಚಿರಕ್ರಾಂತಿ' ಎಂಬ ಕವನ ಸಂಕಲನವನ್ನು ಹೊರತಂದು, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಯಚೂರು ಜಿಲ್ಲಾಧ್ಯಕ್ಷನಾಗಿ ದೊಡ್ಡ ಮಟ್ಟದ ಸಮ್ಮೇಳನವನ್ನು ಲಿಂಗಸಗೂರ ತಾಲೂಕಿನಲ್ಲಿ ಏರ್ಪಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ, ಇಡೀ ರಾಜ್ಯದ ವೈಜ್ಞಾನಿಕ ಮನಸ್ಸುಗಳು ಬೆಕ್ಕಸ ಬೆರಗಾಗುವಂತೆ ಮಾಡಿದ ಶಿಕ್ಷಕ ಚಿರಂಜೀವಿ ರೋಡಕರ್.
ಅವಮಾನಗಳೇ ಸನ್ಮಾನಗಳಾಗುತ್ತವೆ ಎಂಬುವ ಮಾತಿನಂತೆ ಅನೇಕ ಅವಮಾನ, ನಿಂದನೆಗಳನ್ನು ಅನುಭವಿಸಿ ಪುಟಿದೆದ್ದು ಹೊರ ಬಂದು ತಾನು ಕಂಡು ಅನುಭವಿಸಿದ ಎಲ್ಲಾ ಸನ್ನಿವೇಶಗಳನ್ನು ಕಥೆಯಾಗಿ ಕಟ್ಟುವಲ್ಲಿ ಚಿರಂಜೀವಿ ರೋಡಕರ್ 'ಕೊಡಲಿ ಕಾವು' ಎನ್ನುವ ಕಥಾ ಸಂಕಲನದಿಂದ ಗೆದ್ದಿದ್ದಾರೆ. ತಮಗೆ ಅನ್ನ ನೀಡಿದ ಚಿನ್ನದ ಭೂಮಿಯ ಋಣವನ್ನ ಎಂದೂ ಮರೆಯದೇ, ವರ್ಗಾವಣೆಯಾಗಿ ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಶಾಲೆಗೆ ಹೋದರೂ ರಾಯಚೂರಿನ ಬಳಗವನ್ನು ನೆನೆಹಿಕೊಂಡು, ಕೃತಜ್ಞತೆ ಸಲ್ಲಿಸಿದ್ದು ಅವರ ಸ್ನೇಹ ಪ್ರೀತಿಗೆ ಹಿಡಿದ ಕನ್ನಡಿ. ಬಂಡಾಯ ಕವನಗಳನ್ನು ಕ್ರಾಂತಿ ಗೀತೆಗಳಾಗಿ ಹೊರ ತಂದು ಬಹಳಷ್ಟು ಸಾಹಿತ್ಯಾಸಕ್ತರ ಪ್ರಶಂಸೆಗೆ ಒಳಗಾಗಿದ್ದ ಚಿರಂಜೀವಿ ಕಥಾ ಸಂಕಲನವನ್ನು ಹೊರ ತಂದು ಕಥೆಗಳನ್ನು ಕಟ್ಟಿ ಓದುಗರಿಗೆ ನೈಜ ಕಥೆಗಳನ್ನು ಹೆಣೆದು ಕಥೆಗಳಲ್ಲಿನ ಚಿತ್ರಗಳು ಕಣ್ಣಿಗೆ ಕಟ್ಟುವಂತೆ ಮಾಡಿ ಈ ಕಥಾ ಸಂಕಲನದಲ್ಲಿ ಚಿರಂಜೀವಿ ರೋಡಕರ್ ಗೆದ್ದಿದ್ದಾರೆ.
ಪೂರ್ಣಚಂದ್ರ ತೇಜಸ್ವಿಯವರ ಅಭಿಮಾನಿಯಾಗಿರುವ ಚಿರಂಜೀವಿಯವರು ವೃತ್ತಿಯಲ್ಲಿ ಶಿಕ್ಷಕರು ಪ್ರವೃತ್ತಿಯಲ್ಲಿ ಬರಹಗಾರರು. "ಕೊಡಲಿ ಕಾವು" ಎನ್ನುವ ವಿಶಿಷ್ಟವಾದ ಶಿರೋನಾಮೆಯೊಂದಿಗೆ ಹೊರತಂದಿರುವ ಕಥಾ ಸಂಕಲನದಲ್ಲಿ ಭರ್ತಿ 7 ಕಥೆಗಳ ಹೂರಣವನ್ನು ಉಣಬಡಿಸಿದ್ದಾರೆ. ಒಂದೊಂದು ಕಥೆಗಳು ತನ್ನದೇ ಆದ ವಿಶೇಷತೆಗಳನ್ನು ಒಳಗೊಂಡು ಓದುಗನನ್ನು ಎಲ್ಲೆಲ್ಲಿಯೂ ಕರೆದುಕೊಂಡು ಹೋಗಿ ಬಂದು ಮತ್ತೆ ವಾಪಸ್ ಪ್ಯಾಜಾಕೆ ನಿಲ್ಲಿಸುತ್ತವೆ.
'ಕುಸುಮ' ಕಥೆ ಸಮಾಜದಲ್ಲಿ ಹಿಂದುಳಿದ ವರ್ಗಗಳಲ್ಲಿನ ಅನಿಷ್ಠ ಪದ್ಧತಿ ರೂಢಿಯಾಗಿದ್ದುಕೊಂಡು ಬಂದು ಅದು ಈವರೆಗೂ ಮುಂದುವರೆದಿದ್ದರ ಭಾಗವಾಗಿ ಕುಸುಮಳ ಚಿತ್ರಣ ಮೂಡಿದೆ. ಬಡತನದ ಬೇಗೆಯಲ್ಲಿ ಬೆಂದು ಹೊರಳಾಡಿದ ರತ್ನಮ್ಮ ತಲತಲಾಂತರದಿಂದ ಅನಿಷ್ಠ ಪದ್ಧತಿಯಾಗಿ ಮುಂದುವರೆದುಕೊಂಡು ಬಂದ ದೇವದಾಸಿ ಪದ್ಧತಿಗೆ ಅವಳು ಒಗ್ಗಿಕೊಂಡಿರುತ್ತಾಳೆ. ದೈವದ ಇಚ್ಛೆಯಂತೆ ಆ ಪದ್ಧತಿಯನ್ನು ಮುಂದುವರೆಸಿಕೊಂಡು ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯವೆಂದೇ ಭಾವಿಸಿದ ರತ್ನಮ್ಮಳ ತಾಯಿಯು ರತ್ನಮ್ಮನನ್ನು ದೇವದಾಸಿಯನ್ನಾಗಿ ಮಾಡಿ ರತ್ನಮ್ಮಳಿಗೆ ಹುಟ್ಟಿದ ಒಬ್ಬಳೇ ಒಬ್ಬ ಮಗಳನ್ನು ಕೂಡ ಅದೇ ದಾರಿಯಲ್ಲಿ ಸಾಗಿಸಬೇಕೆಂದುಕೊಂಡು ಕುಳಿತುಕೊಂಡಿರುತ್ತಾಳೆ. ಮಗಳು ದೊಡ್ಡವಳಾಗಿದ್ದನ್ನು ಎದೆಯಾಂತರಾಳದಲ್ಲಿ ಬಚ್ಚಿಟ್ಟುಕೊಂಡು ಸಮಾಜಕ್ಕೆ ತಿಳಿಸದೆ ತನ್ನ ಮಗಳನ್ನ ಕೋಳಿಯ ಮರಿಗಳಂತೆ ಜತನ ಮಾಡುತ್ತಾಳೆ. ಸುರಸುಂದರಳಾಗಿ ಬೆಳೆದು ನಿಂತ ಕುಸುಮಾಳನ್ನ ಊರ ಹುಡುಗರೆಲ್ಲರೂ ಹದ್ದಿನ ಕಣ್ಣಿನಿಂದ ಜೊಲ್ಲು ಸುರಿಸುತ್ತಾ ನೋಡುತ್ತಿರುತ್ತಾರೆ. ಅವಳು ಏಕಾಏಕಿ ಹೆಣವಾಗಿ ಬಿದ್ದಾಗ ಕುಸುಮ ಕಥೆಯನ್ನು ಓದುವ ಓದುಗ ನಿಜವಾಗಿಯೂ ಕಣ್ಣೀರಾಗುತ್ತಾನೆ. ಕುಸುಮ ಕಥೆಯನ್ನು ಕಟ್ಟಿದ ಚಾಣಾಕ್ಷ ಚಿರಂಜೀವಿ ಅವಳ ಸಾವು ಹೇಗಾಯಿತು? ಎನ್ನುವುದನ್ನು ಓದುಗರ ವಿವೇಚನೆಗೆ ಬಿಟ್ಟು ತಲೆಯಲ್ಲಿ ಹುಳವನ್ನು ಬಿಡುತ್ತಾರೆ. ಕುಸುಮ ಕಥೆಯನ್ನು ಓದಿದ ಪ್ರತಿಯೊಬ್ಬ ಓದುಗನು ಕೂಡ ಅವನ ಕಲ್ಪನೆಯಲ್ಲಿ ಕುಸುಮಳ ಸಾವನ್ನು ಕುಸುಮಳ ಸಾವಿನ ಕಥೆಯನ್ನು ಕಟ್ಟುತ್ತಾ ಹೋಗುತ್ತಾನೆ.
ಎರಡನೇ ಕಥೆ 'ರೋಜ ಕಹಾನಿ' ಓದಿ ಲೇಖಕರಿಗೆ " ಪೂರ್ಣ ಇದು ಪಕ್ಕಾ ನಿಮ್ದೇ ಕತೀ, ನಂಗೊತ್ತೈತಿ, ನಿಜ ಹೇಳು" ಎಂದು ಹೇಳಿದ್ದು ನೆನಪಿದೆ. ಜಗತ್ತಿನಲ್ಲಿ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ಕೂಡ ಒಂದಿಲ್ಲ ಒಂದು ರೀತಿಯಲ್ಲಿ ಪ್ರೀತಿ ಪ್ರೇಮದಲ್ಲಿ ಬಿದ್ದವನೇ ಆಗಿದ್ದಾನೆ. ವಯೋಸಹಜ ಅಭಿಲಾಷೆಯಿಂದ ಯುವಕನಾದ ಕಾಲೇಜು ಹುಡುಗ ಉಡಾಳನಾಗಿದ್ದರೂ ಅವನಲ್ಲಿ ಒಂದು ಆ ಪ್ರೇಮದ ವಾಂಛೆ ಇದೆ. ಅದು ನಿಷ್ಕಲ್ಮಶ ಪ್ರೇಮ. ಎಲ್ಲರೂ ಹೇಳುವ ಹಾಗೆ ನಾವು ಪ್ರೀತಿಸುವ ಹುಡುಗಿಗೆ ನಾನು ಪ್ರೀತಿಸುತ್ತಿದ್ದೇನೆ ಎನ್ನುವ ವಿಷಯ ಗೊತ್ತಿಲ್ಲದಿದ್ದರೂ ಇಡೀ ಕಾಲೇಜಿಗೆ ಆ ಹುಡುಗ ಯಾವ ಹುಡುಗಿಯನ್ನ ಪ್ರೀತಿಸುತ್ತಿದ್ದಾನೆ ಎನ್ನುವ ವಿಷಯ ಗೊತ್ತಿರುತ್ತದೆ. ರೋಜ್ ಕಹಾನಿಯಲ್ಲಿಯೂ ಕೂಡ ಹುಡುಗಿಗೆ ವಿಷಯ ಗೊತ್ತಿರುವುದಿಲ್ಲ ಆದರೂ ಹುಡುಗನ ಸ್ನೇಹಿತರಿಗೆ ಎಲ್ಲರಿಗೂ ವಿಷಯ ಗೊತ್ತಿರುತ್ತದೆ. ಕುಡಿ ಮೀಸೆ ಚಿಗುರಿದಾಗ ಬಂಡೆಕಲ್ಲನ್ನು ಒದ್ದು ಒಡೆದು ಮರುಭೂಮಿಯಲ್ಲಿಯೂ ನೀರು ತರುತ್ತೇನೆ ಎಂಬ ಛಲದಂಕ ಮಲ್ಲನಾದ ಹುಡುಗ ಅವಳ ಪ್ರೇಮವನ್ನು ನಿವೇದನೆ ಮಾಡಲು ಏನೇನೋ ಹೆಣಗಾಡುತ್ತಾನೆ, ಪ್ರತಿದಿನವೂ ಗುಲಾಬಿ ಹೂವನ್ನು ತಂದು ಹೃದಯಂತರಾಳದಲ್ಲಿ ಬಚ್ಚಿಟುಕೊಂಡಿರುತ್ತಾನೆ . ಆದರೆ ಹೇಳುವ ಧೈರ್ಯ ಮಾತ್ರ ಆಗಿರುವುದಿಲ್ಲ ಅವಳ ಬರುವ ಹೋಗುವ ದಾರಿ ಉದ್ದಕ್ಕೂ ಅವಳನ್ನೇ ನೆನೆಸಿಕೊಂಡು ಸಾಗುವಂತಹ ಪ್ರೇಮಿ ಅವಳ ಊರಿಗೆ ಹೋಗಿ ಅವಳನ್ನು ಮಾತನಾಡಿಸಿ ಕೊನೆಗೊಂದು ದಿನ ನಿವೇದನೆಯನ್ನು ಮಾಡಿಕೊಂಡಾಗ, ಅವಳ ಪ್ರೇಮವನ್ನು ಹುಡುಗಿಯ ಬಾಯಿಂದ ಕೇಳಿ ಹತಾಶಗೊಂಡು ನಿಂತಿದ್ದಾಗ ತಂದೆ ತಾಯಿಗಳು ಸ್ನೇಹಿತರಿಂದ ಪರಿವರ್ತನೆಗೊಂಡು ಸರ್ಕಾರಿ ನೌಕರಿಯನ್ನು ಗಿಟ್ಟಿಸಿಕೊಳ್ಳುವಲ್ಲಿ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಾರೆ . ಪ್ರೇಮದ ನೆನವೇ ಅಂತದ್ದು, ಅದು ಮೊದಲ ಪ್ರೇಮ ಕೊನೆಯವರೆಗೂ ನಮ್ಮ ಜೊತೆ ಇರುತ್ತದೆ. ಜೀವನಕ್ಕಾಗಿ ನೌಕರಿಯನ್ನು ಅರಿಸಿಕೊಂಡು ದೂರದ ಊರಿನಲ್ಲಿದ್ದು ಕೊನೆಗೆ ತನ್ನ ಪ್ರೇಮವನ್ನ ಮರೆಯದೆ ಗೆದ್ದೇ ಗೆಲ್ಲಬೇಕು ಅವಳ ಮನ ಎನ್ನುವ ಛಲದಿಂದ ಊರಲ್ಲಿನ ಗೆಳೆಯನನ್ನು ವಿಚಾರಿಸಿದಾಗ ಕಾಲ ಮಿಂಚಿ ಹೋಗಿರುತ್ತದೆ. ದುಷ್ಟ ಗಂಡನ ತೆಕ್ಕೆಯಲ್ಲಿ ಅದಾಗಲೇ ತಾನು ಪ್ರೇಮಿಸಿದ ಹುಡುಗಿ ಬಿದ್ದು ಗಂಡನ ಕಿರುಕುಳವನ್ನು ತಾಳದೆ ಆತ್ಮಹತ್ಯೆಗೆ ಪ್ರಯತ್ನಿಸಿದಾಗ ಅಕಸ್ಮಾತಾಗಿ ಬದುಕುಳಿಯುತ್ತಾಳೆ. ಗೆಳೆಯರು ನಿನ್ನ ಪ್ರೀತಿ, ನಿನ್ನ ಪ್ರೇಮ, ನಿನ್ನ ಒಲವು ಅವಳನ್ನ ಬದುಕಿಸಿದೆ ಎಂದಾಗ ಮಮ್ಮಲ ಮರುಗಿದ ಪ್ರೇಮಿ ಅವಳು ಎಲ್ಲೇ ಇದ್ದರೂ ಚೆನ್ನಾಗಿರಲಿ ನೂರು ಕಾಲ ಸುಖವಾಗಿ ಬಾಳಲಿ ಎಂದು ಮನದಾಳದಲ್ಲಿ ಕಣ್ಣೀರನ್ನು ಹೃದಯದೊಳಗಡೆ ಸುರಿಸಿ ಹಾರೈಸುತ್ತಾನೆ ಪ್ರೇಮಿ. ಇಲ್ಲಿ ಪ್ರೀತಿ ಸೋತಿರಬಹುದು ಆದರೆ ಮಾನವೀಯತೆ ಗೆದ್ದಿದೆ.
'ಅಪ್ಪ ಬರ್ತಾನ್' ಈ ಕಥೆ ಕುಡುಕ ಸ್ನೇಹಿತರು ಕೊನೆಗೊಂದು ದಿನ ಹೊಡೆದಾಡಿ ಬಡಿದಾಡಿ ನಶೆಯಲ್ಲಿ ಆಗುವಂತಹ ಅದ್ವಾನಗಳ ಚಿತ್ರಣ ಇಲ್ಲಿದೆ. ಕುಡಿದ ನಶೆಯಲ್ಲಿ ವಿಪರೀತಕ್ಕೆ ಹೋಗಿ ಜೀವ ಹಾನಿಯಾದಾಗ ಮನೆಯಲ್ಲಿರುವಂತಹ ಮನೆ ಮಂದಿಗೆ ಆಗುವಂತಹ ನೋವು ಮನೆಯಲ್ಲಿರುವಂತಹ ಚಿಕ್ಕ ಮಕ್ಕಳಿಗೆ ಆಗುವಂತಹ ಮಾನಸಿಕ ಗಾಯ ಬಹಳ ದೊಡ್ಡದು. ಚಿನ್ನಮ್ಮ ರಂಗಪ್ಪನ ಮಕ್ಕಳು ರಂಗಪ್ಪನ ಸ್ನೇಹಿತ ಶಿವಪ್ಪ ಇವರಿರುವ ಪುಟ್ಟ ಜಗಳಕ್ಕೆ ಹತ್ತಿದ ಬೆಂಕಿ ಚೆನ್ನಮ್ಮನ ಮನೆಯ ಮುಂದೆ ಬೆಳೆದ ಗಾಂಜಾ ಗಿಡದ ಕೇಸಲ್ಲಿ ಹುದುಗಿ ಹೋಗುತ್ತದೆ. ರಂಗಪ್ಪ ಬರುವ ದಾರಿಯನ್ನ ಕಾಯುತ್ತಾ ಮಕ್ಕಳು ಪ್ರತಿದಿನವೂ ನಿಲ್ಲುತ್ತಾರೆ.
'ಹುಲಿಹೈದ' ದಕ್ಷಿಣ ಕರ್ನಾಟಕದ ಭಾಷೆಯನ್ನು ಕೂಡ ಆಳವಾಗಿ ಬಲ್ಲೆನೆಂಬುದನ್ನ ಹುಲಿ ಹೈದ ಕತೆಯಲ್ಲಿ ಚಿರಂಜೀವಿ ರೋಡಕರ್ ನಿರೂಪಿಸಿದ್ದಾರೆ. ಆ ಮೂಲಕ ಅವರು ಉತ್ತರ ದಕ್ಷಿಣವನ್ನು ಸಾಹಿತ್ಯಕವಾಗಿ ಕೂಡಿಸುವ ಪ್ರಯತ್ನವನ್ನು ಮಾಡಿದ್ದಾರೆಂದು ಹೇಳಬಹುದು. 'ಊರಿಗೆ ಒಡೆನಾದರೂ ಮನೆಗೆ ಮಗ' ಎನ್ನುವ ಗಾದೆಯಂತೆ ಊರಿಗೆ ಶಕ್ತಿವಂತರಾದರೂ ಹೆಂಡತಿಗೆ ಆತ ಯಾವತ್ತೂ ಇಲಿಯೇ ಎನ್ನುವ ಜಗತ್ ಜಾಹೀರಾದ ಮಾತು ಈ ಕಥೆಯಲ್ಲಿಯೂ ಆಗಿದೆ. ಭಾವಭಾಮೈದ ಇಬ್ಬರೂ ಪಬ್ಲಿಕ್ ಪ್ಲೇಸ್ನಲ್ಲಿ ತಿಳಿ ಸಂಜೆಯಲಿ ಕುಳಿತು ಕುಡಿಯುತ್ತಿರುವಾಗ ಪೊಲೀಸರ ಕೈಗೆ ಸಿಕ್ಕಿಹಾಕಿಕೊಳ್ಳುವುದು, ಊರ ಗೌಡ ಸ್ಟೇಷನ್ ತನಕ ಹೋಗಿ ಧಮ್ಕಿ ಹಾಕಿದ್ದು, ಅದು ಕುಡಿತದ ಕೇಸಿನಲ್ಲಿ ಸಿಕ್ಕಿವಿ ಎನ್ನುವ ಅವಮಾನ, ಅಲ್ಲಿನ ಸಿಸ್ಟಮು, ಲಂಚಾವತಾರದ ಪೊಲೀಸರ ನಿರ್ಬಂಧಿತ ಕಾನೂನುಗಳು ಇವೆಲ್ಲದರ ಚಿತ್ರಣ ಆ ಕತೆಯಲ್ಲಿದೆ.
'ಕೊಡಲಿ ಕಾವು’ ಶಿರೋನಾಮೆಯ ಕಥಾ ಪುಸ್ತಕವನ್ನು ಹೊಂದಿರುವ ಈ ಕಥೆ ಸಮಾಜದಲ್ಲಿ ಇವತ್ತಿಗೂ ಜೀವಂತವಾಗಿರುವ ಜಾತಿ ಪದ್ಧತಿ ಎಂಬ ಅನಿಷ್ಟ ಪದ್ದತಿಯ ವಿರುದ್ಧ ರೊಚ್ಚಿಗೆದ್ದು ಹೋರಾಟ ಮಾಡಿದ ಯುವಪುಂಡರ ಕಥೆಯಾಗಿದೆ. ಕ್ರಾಂತಿ ಗೀತೆಗಳ ಕ್ರಾಂತಿಕಾರಿ ಕವಿ ಎಂದೇ ನಾನು ಕರೆಯುವ ಚಿರಂಜೀವಿ ರೋಡಕರ್ ಈ ಕತೆಯಲ್ಲಿಯೂ ಕ್ರಾಂತಿಯನ್ನು ಮಾಡಿದ್ದಾರೆ. ಬಹುದಿನಗಳಿಂದ ಒಬ್ಬನ ಮನಸ್ಸಿನಲ್ಲಿ ಯಾರಿಗೂ ಇತರರಿಗೂ ಆಗಲಾರದ ನೋವು ತುಂಬಿಕೊಂಡಾಗ ಅದು ಒಮ್ಮೆ ಕಟ್ಟೆ ಹೊಡೆಯುತ್ತದೆ ಆ ಕಟ್ಟೆ ಹೊಡೆದಾಗ ಅವನ ಮುಂದಿರುವಂತಹ ಯಾರೇ ಆಗಲಿ ಅವನಿಗೆ ಕಾಣಿಸುವುದಿಲ್ಲ. ಅವನ ರೋಷಾವೇಶದ ಅಗ್ನಿಗೆ ಎಲ್ಲವನ್ನು ಬಲಿ ತೆಗೆದುಕೊಳ್ಳುತ್ತಾ ಹೋಗುತ್ತಾನೆ. ಕೊಡಲಿ ಕಾವ್ಯ ಕಥೆಯಲ್ಲಿಯೂ ಹಾಗೆ ಆಗಿದೆ.
'ಕೋಟೆ ಹೇಳಿದ ಕಥೆ: ಸೊಸೆಯಾದ ಅತ್ತೆ' ಈ ಕಥೆಗೆ ಕೋಟೆ ಹೇಳಿದ ಕಥೆ ಸೊಸೆಯಾದ ಅತ್ತೆ ಎನ್ನುವ ಕನ್ಫ್ಯೂಸ್ ಹೆಸರನ್ನಿಟ್ಟು ಇತಿಹಾಸವನ್ನು ಕೆದಕುವ ಪ್ರಯತ್ನ ಮಾಡಿದ್ದಾರೆ ಕತೆಗಾರ ರೋಡಕರ್. ರಾಯಚೂರ ಜಿಲ್ಲೆಯ ಮುದಗಲ್ಲಿನ ಸುತ್ತಮುತ್ತಲಿರುವ ಐತಿಹಾಸಿಕ ಕುರುಹುಗಳ ಅಧ್ಯಯನವನ್ನು ಮಾಡಿರುವಂತಹ ಶಿಕ್ಷಕ ಮಿತ್ರ ಪ್ರಖ್ಯಾತ ಮುದಗಲ್ ಕೋಟೆಯ ಕಲ್ಲು ಕಲ್ಲುಗಳನ್ನು ಹೆಕ್ಕಿ ಅದರ ಹಿಂದಿರುವ ಮಹಿಮೆಯನ್ನು ಅರಿತಿರುವಂತವರು. ಸ್ಥಳೀಯರಿಗೂ ಗೊತ್ತಿಲ್ಲದ ಮಾಹಿತಿಯನ್ನು ಅದೆಲ್ಲಿಯೂ ಹುಡುಕಿ ತಂದು ಈ ಕಥೆ ಈ ಕೋಟೆಯ ಒಳಗಡೆ ಇಂತಹ ಅನಿರ್ಭಾವ ಅವಿನಾಭಾವ ವಿಶೇಷವಾದ ವಿಶಿಷ್ಟತೆಯನ್ನು ಹೊಂದಿರುವಂಥದ್ದೇ ಎಂದು ನಿಬ್ಬೆರಗಾಗುವಂತೆ ಮಾಡುತ್ತದೆ. ಕೋಟೆ ಹೇಳಿದ ಕಥೆ ಸೊಸೆಯಾದ ಅತ್ತೆ ಕಥೆಯ ಮೂಲಕ ಹಾಳಾಗಿರುವ ಕೋಟೆಯ ಮಹತ್ವವನ್ನು ಸಾರುವುದರ ಜೊತೆಗೆ ಕೋಟೆಯ ಪ್ರತಿಯೊಂದು ಕಲ್ಲುಗಳ ಹಿಂದೆಯೂ ಒಂದೊಂದು ನಿಜವಾದ ಕಥೆ ಅಡಗಿದೆ ಎಂಬುದನ್ನು ಇಡೀ ರಾಜ್ಯಕ್ಕೆ ಇಡೀ ದೇಶಕ್ಕೆ ಮತ್ತೊಮ್ಮೆ ನೆನಪಿಸಿಕೊಟ್ಟಿದ್ದಾರೆ ಲೇಖಕರು.
'ಸಂಜೆ ಸಿಂಧೂರ 'ನಿಜವಾಗಿಯೂ ನನ್ನನ್ನ ಅತಿ ಹೆಚ್ಚು ಕಾಡಿದ್ದು ಸಂಜೆ ಸಿಂಧೂರ ಕಥೆ. ಕಾದಂಬರಿಯಾಗುವ ಲೆವೆಲ್ಲಿಗೆ ಇರುವಂತಹ ವಿಷಯವನ್ನು ಚಿರಂಜೀವಿ ರೋಡಕರ್ ಕತ್ತು ಹಿಚುಕಿ ಕಥೆಯನ್ನಾಗಿಸಿದ್ದಾರೆ. ಓದುತ್ತಾ ಹೋದಂತೆಲ್ಲ ಕಥೆಯಲ್ಲಿ ಬರುವಂತಹ ಪಾತ್ರಗಳು ಕಣ್ಣು ಮುಂದೆ ಬಂದು ನಿಲ್ಲುತ್ತವೆ. ಗಂಗಮ್ಮ, ಶಾಣಪ್ಪ ಬಸನಗೌಡ, ಬಸನಗೌಡನ ಮನೆ, ಮೊಮ್ಮಕ್ಕಳು ಎಲ್ಲವೂ ಓದುಗನ ಸ್ಮೃತಿ ಪಟದಾಳದಲ್ಲಿ ಮೂಡುವ ಚಿತ್ರಗಳಂತೆ ಎದುರಿಗೆ ನಿಲ್ಲುತ್ತವೆ. ಕಥೆಯ ದುರಂತ ನಾಯಕ ನಾದರ ಶಾಣಪ್ಪನ ಸಾವು ಮನಕ್ಕೆ ನೋವನ್ನುಂಟುಮಾಡುತ್ತದೆ. ದೊಡ್ಡ ಮನೆತನದ ಹೆಣ್ಣು ಮಗಳು ಗೌಡಶಾಣಿ ಗಂಗಮ್ಮ ನಡುವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡು ತಬ್ಬಲಿಯಾಗಿ ತನ್ನ ದೇಹದ ಕೇಳಿಗೆ ಆರಿಸಿಕೊಂಡದ್ದು ಬಸನಗೌಡನ ಶೇವ್ ಮಾಡಲು ಬರುತ್ತಿದ್ದ ನಾದರ ಶಾಣಪ್ಪನನ್ನ. ಇನ್ನೂ ಒಂದು ನಾಲ್ಕು ಪೇಜ್ ಕಥೆ ಬರಿಬಹುದಾಗಿತ್ತಲ್ಲೋ ಮಾರಾಯ! ಎಂದು ಕಥೆಯನ್ನು ಓದಿದ ತಕ್ಷಣ ನಾನು ಫೋನ್ ಮಾಡಿ ಕತೆಗಾರ ಚಿರಂಜೀವಿ ರೋಡಕರಿಗೆ ಹೇಳಿದೆ. ಯಾಕಂದ್ರೆ ಮುಂದೆ ಏನಾಗುತ್ತದೆಯೋ ಎಂದು ಓದುಗನ ಕುತೂಹಲವನ್ನು ಹೆಚ್ಚಿಸುವಂತಹ ಕಥೆ ಈ ಸಂಜೆ ಸಿಂಧೂರ. ಇದು ಕಥೆಯನ್ನು ಓದಿ ಅಭಿಪ್ರಾಯ ಬರೆಯುವವನಿಗೂ ನಿಲುಕದ ಕಥೆ ಎಂದು ನಾನು ಖಡಾಖಂಡಿತವಾಗಿ ಹೇಳಬಲ್ಲೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ಯಾವುದಕ್ಕೂ ರಾಜಿ ಮಾಡಿಕೊಳ್ಳದೇ ಸಣ್ಣ ಪುಟ್ಟ ವಿಷಯಗಳಿಗೆಲ್ಲ ತಲೆ ಕೆಡಿಸಿಕೊಳ್ಳದೇ ತನ್ನದೇ ಆದ ಹುಲಿ ಹೆಜ್ಜೆಯನ್ನು ಇಡುತ್ತಾ ಸಮಾಜದ ಕ್ಲಿಷ್ಟತೆಗಳನ್ನ, ಸಮಾಜದ ತನ್ನತನವನ್ನ, ಸಮಾಜದ ಅನಿಷ್ಟ ಪದ್ದತಿಗಳನ್ನು ತನ್ನದೇ ಆದ ಶೈಲಿಯಲ್ಲಿ ಬರಹಗಳ ಮೂಲಕ ಓದುಗನಿಗೆ ಸಾಣೆ ಹಚ್ಚುವಂತೆ ಮಾಡುವ ಯುವ ಮಿತ್ರ ಚಿರಂಜೀವಿ ರೋಡಕರ್ ‘ಕೊಡಲಿ ಕಾವಿ' ನಲ್ಲಿ ಬಹಳ ದೊಡ್ಡ ಪೆಟ್ಟನ್ನೇ ಓದುಗರ ಓದುವ ಮನಸ್ಸಿಗೆ ನೀಡಿದ್ದಾರೆ. ಕೊಡಲಿ ಕಾವಿನ ಮೂಲಕ ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಒಳ್ಳೆಯ ಕಥೆಗಾರರಾಗಿ ಬೆಳೆಯುವಂತಹ ಎಲ್ಲಾ ಗುಣಗಳನ್ನು ಅವರಲ್ಲಿ ಕಾಣಬಹುದು. ಇನ್ನಷ್ಟು ಅನೇಕ ಕನ್ನಡ ನಾಡಿನ ಕಥೆಗಾರರ ಕಥೆಗಳನ್ನು ಓದಿ ಕಥೆಯನ್ನ ಕಟ್ಟುವಲ್ಲಿ ಬಾಹ್ಯ ವಿಶಿಷ್ಟವಾದ ಶೈಲಿಯನ್ನು ಅಳವಡಿಸಿಕೊಂಡು ಮಾಡಿದ್ದೆ ಆದರೆ ಬಹಳ ದೊಡ್ಡ ಕಥೆಗಾರರ ಸಾಲಿನಲ್ಲಿ ಮುಂದಿನ ದಿನಮಾನಗಳಲ್ಲಿ ಚಿರಂಜೀವಿ ರೋಡಕರ್ ಅವರ ಹೆಸರು ಇರುತ್ತದೆ ಎಂದು ನಾನು ಹೇಳಬಲ್ಲೆ. 'ಚಿರಕ್ರಾಂತಿ' ಯಿಂದ ಗೆದ್ದ ಚಿರಂಜೀವಿ 'ಕೊಡಲಿ ಕಾವಿ' ನಿಂದಲೂ ಸೈ ಎನಿಸಿಕೊಂಡಿರುವುದು ಅಕ್ಷರಶಃ ಸತ್ಯ. ಪ್ರೀತಿಯ ಸಹೋದರನಿಗೆ ನನ್ನ ಅಭಿಮಾನದ ಶುಭಾಶಯಗಳು ನಿಮ್ಮ ಖಡ್ಗದಂತ ಹರಿತವಾದ ಲೇಖನಿಗಳಿಂದ ಇನ್ನೂ ಅನೇಕ ಕ್ರಾಂತಿ ಕಥೆಗಳು ಹೊರಬರಲಿ ಆ ಮೂಲಕ ನಿಮಗೆ ಸದಾ ಒಳ್ಳೆಯದಾಗಲಿ ನಿಮ್ಮ ಸಾಹಿತ್ಯದ ಪಯಣ ಯಾವತ್ತೂ ನಿಲ್ಲದೆ ಇರಲಿ ಎಂದು ಈ ಮೂಲಕ ನಾನು ಹಾರೈಸುತ್ತೇನೆ.
"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...
ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...
"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...
©2025 Book Brahma Private Limited.