ಬೂಕರ್‌ ಅಂಗಳದಲ್ಲಿ ಭಾರತ; ಗೀತಾಂಜಲಿಶ್ರೀ ದಾರಿಯಲ್ಲಿ ಬಾನು ಮುಷ್ತಾಕ್



ಅರುಂಧತಿ ರಾಯ್, 1997ರ ಬೂಕರ್‍ ಪ್ರಶಸ್ತಿ ಸಮಾರಂಭದಲ್ಲಿ.


2006 ರಲ್ಲಿ ಪ್ರಶಸ್ತಿ ಪಡೆದ ಕಿರಣ್ ದೇಸಾಯ್.


2008ರಲ್ಲಿ ಬೂಕರ್‌ ಪ್ರಶಸ್ತಿ ಪಡೆದ ಅರವಿಂದ ಅಡಿಗ


2022 ರಲ್ಲಿ ಅಂತರ್‌ ರಾಷ್ಟ್ರೀಯ ಬೂಕರ್‌ ಪ್ರಶಸ್ತಿ ಪಡೆದ ಗೀತಾಂಜಲಿ ಶ್ರೀ.

ಲಂಡನ್-
ಐವ್ವತ್ತಾರು ವರ್ಷಗಳ ಇತಿಹಾಸ ಇರುವ ಬೂಕರ್‌ ಪ್ರಶಸ್ತಿಗಳನ್ನು ಎರಡು ವಿಭಾಗಗಳಲ್ಲಿ ನೀಡಲಾಗುತ್ತದೆ. ಒಂದು, ಮ್ಯಾನ್ ಬೂಕರ್‌ ಪ್ರಶಸ್ತಿ ಅಥವಾ ಬೂಕರ್‌ ಪ್ರಶಸ್ತಿ. ಇನ್ನೊಂದು ಅಂತರ್‌ ರಾಷ್ಟ್ರೀಯ ಬೂಕರ್‌ ಪ್ರಶಸ್ತಿ.

ಈ ಪೈಕಿ ಮೊದಲು ಅಸ್ತಿತ್ವಕ್ಕೆ ಬಂದದ್ದು ಮ್ಯಾನ್ ಬೂಕರ್‌ ಅಥವಾ ಬೂಕರ್‌ ಪ್ರಶಸ್ತಿ. 1969 ರಲ್ಲಿ ಅಸ್ತಿತ್ವಕ್ಕೆ ಬಂದ ಬೂಕರ್‌ ಪ್ರಶಸ್ತಿಯ ಮೊದಲ ಪ್ರಾಯೋಜಕರು ಬ್ರಿಟನ್ ದೇಶದ ಅತಿ ದೊಡ್ಡ ಸೂಪರ್‌ ಮಾರ್ಕೆಟ್ ಸರಣಿಯನ್ನು ಹೊಂದಿರುವ ಟೆಸ್ಕೊ ಸಂಸ್ಥೆಗೆ ಸೇರಿದ ಬೂಕರ್‌, ಮೆಕಾನೆಲ್ ಲಿಮಿಟೆಡ್. 1969 ರಿಂದ 2001 ರವರೆಗೆ ಇವರು ಬೂಕರ್‌ ಪ್ರಶಸ್ತಿಯನ್ನು ಪ್ರಾಯೋಜಿಸಿದರು.

2002 ರಿಂದ 2019 ರವರೆಗೆ ಮ್ಯಾನ್ ಗ್ರೂಪ್ ಎಂಬ ಬಂಡವಾಳ ಹೂಡಿಕೆ ಸಂಸ್ಥೆ ಪ್ರಾಯೋಜಕತ್ವ ವಹಿಸಿಕೊಂಡಿತ್ತು. ಅದರ ಪರಿಣಾಮವಾಗಿ ಇದು ‘ಮ್ಯಾನ್ ಬೂಕರ್‌ ಪ್ರಶಸ್ತಿ’ ಎಂಬ ಹೆಸರು ಪಡೆಯಿತು. 2020 ರಿಂದ ಇದುವರೆಗೆ ಪ್ರಶಸ್ತಿಯನ್ನು ಪ್ರಾಯೋಜಿಸುತ್ತ ಬಂದಿರುವುದು ಕ್ರಾಂಕ್ ಸ್ಟಾರ್‌ ಎಂಬ ಸ್ವಯಂಸೇವಕ ಸಂಸ್ಥೆ. ಈ ಸಂಸ್ಥೆ ಪ್ರಾಯೋಜಕತ್ವ ವಹಿಸಿಕೊಂಡ ನಂತರ, ಪ್ರಶಸ್ತಿಯ ಹೆಸರನ್ನು ’ಬೂಕರ್‌ ಪ್ರಶಸ್ತಿ’ ಎಂದು ಮರು ನಾಮಕರಣ ಮಾಡಲಾಯಿತು.

ಈ ಪ್ರಶಸ್ತಿಯನ್ನು ಆರಂಭಿಸಿದಾಗ, ಕಾಮನ್ವೆಲ್ತ್, ಐರ್‍ಲೆಂಡ್ ಮತ್ತು ದಕ್ಷಿಣ ಆಫ್ರಿಕ ನಂತರ ಜಿಂಬಾಬ್ವೆ ಮೂಲದ ಲೇಖಕರು ಇಂಗ್ಲಿಷ್ ಭಾಷೆಯಲ್ಲಿ ಬರೆಯುವ ಕಾದಂಬರಿಗೆ ನೀಡುವುದು ಎಂಬ ನಿರ್ಧಾರಕ್ಕೆ ಬಂದಿದ್ದರು. ಅದರಂತೆ ಇಂದಿನವರೆಗೆ ಬೂಕರ್‌ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

1969 ರಿಂದ ಇಂದಿನವರೆಗೆ ಭಾರತ ಮೂಲದ ವಿ.ಎಸ್.ನೈಪಾಲ್ (ಇನ್ ಅ ಫ್ರೀ ಸ್ಟೇಟ್- 1971), ಸಲ್ಮಾನ್ ರಶ್ದಿ (ಮಿಡ್ ನೈಟ್ ಚಿಲ್ಡ್ರನ್ಸ್ – 1981), ಭಾರತೀಯ ಲೇಖಕರಾದ ಅರುಂಧತಿ ರಾಯ್ (ಗಾಡ್ ಆಫ್ ಸ್ಮಾಲ್ ಥಿಂಗ್ಸ್- 1997), ಕಿರಣ್ ದೇಸಾಯ್ (ದಿ ಇನ್ಹೆರಿಟೆನ್ಸ್ ಆಫ್ ಲಾಸ್- 2004) ಮತ್ತು ಅರವಿಂದ ಅಡಿಗ (ದಿ ವ್ಹೈಟ್ ಟೈಗರ್‍- 2008) ಮ್ಯಾನ್ ಬೂಕರ್‌ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಇನ್ನು, ಇದೇ ಮೂಲದ ಇನ್ನೊಂದು ಸಹ ಪ್ರಶಸ್ತಿಯೇ ’ಅಂತರ್‌ ರಾಷ್ಟ್ರೀಯ ಬೂಕರ್‌ ಪ್ರಶಸ್ತಿ’. ಮೂಲ ಇಂಗ್ಲಿಷ್ ಮತ್ತು ಜಗತ್ತಿನ ಬೇರೆ ಭಾಷೆಗಳಿಂದ ಇಂಗ್ಲಿಷ್ ಭಾಷೆಗೆ ಅನುವಾದಗೊಂಡ ಕಾದಂಬರಿ ಮತ್ತು ಕಥಾ ಸಂಕಲನ ಈ ಪ್ರಶಸ್ತಿಗೆ ಅರ್ಹ. ಆದರೆ, ಈ ಕೃತಿಗಳು ಇಂಗ್ಲೆಂಡ್ ಮತ್ತು ಐರ್‍ಲೆಂಡ್ ಗಳಲ್ಲಿ ಕಡ್ಡಾಯವಾಗಿ ಪ್ರಕಾಶನಗೊಂಡಿರಬೇಕು ಎಂಬ ನಿಯಮವಿದೆ. ’ಅಂತರ್‌ ರಾಷ್ಟ್ರೀಯ ಬೂಕರ್‌ ಪ್ರಶಸ್ತಿ’ ಕೊಡುವ ಸಂಪ್ರದಾಯ ಆರಂಭವಾಗಿದ್ದು 2005 ರಿಂದ.

ಅಂದಿನಿಂದ 2023 ರ ಅವಧಿಯ ನಡುವೆ ಭಾರತೀಯ ಮೂಲದ ಮತ್ತು ಭಾರತದ ಲೇಖಕರಾದ ಸಲ್ಮಾನ್ ರಶ್ದಿ (2007), ಮಹಾಶ್ವೇತಾ ದೇವಿ (2009), ವಿ.ಎಸ್.ನೈಪಾಲ್ (2009), ರೊಹಿಂಟಾನ್ ಮಿಸ್ತ್ರಿ (2011), ಯು.ಆರ್‌.ಅನಂತ ಮೂರ್ತಿ (2013), ಅಮಿತಾವ್ ಘೋಷ್ (2015) ಮತ್ತು ಪೆರುಮಾಳ್ ಮುರುಗನ್ (2023) ಅವರ ಕೃತಿಗಳು ಪ್ರಶಸ್ತಿಯ ದೊಡ್ಡ ಮತ್ತು ಕಿರುಪಟ್ಟಿಯಲ್ಲಿದ್ದವು.

2022 ರಲ್ಲಿ ಡೈಸಿ ರಾಕ್ವೆಲ್ ಅವರು ಹಿಂದಿಯಿಂದ ಇಂಗ್ಲಿಷ್ ಭಾಷೆಗೆ ಅನುವಾದ ಮಾಡಿದ ಗೀತಾಂಜಲಿ ಶ್ರೀ ಅವರ ’ಟೂಂಬ್ ಆಫ್ ಸ್ಯಾಂಡ್’ ಕೃತಿಗೆ ಅಂತರ್‌ ರಾಷ್ಟ್ರೀಯ ಬೂಕರ್‌ ಪ್ರಶಸ್ತಿ ಪ್ರಾಪ್ತವಾಗಿತ್ತು. ಅದಾದ ನಂತರ ಈಗ ಬಾನು ಮುಷ್ತಾಕ್ ಅವರ ’ಹಾರ್ಟ್ ಲ್ಯಾಂಪ್’ ಪ್ರಶಸ್ತಿಯ ಕಿರುಪಟ್ಟಿಯಲ್ಲಿ ಕಾಣಿಸಿಕೊಂಡು ಐತಿಹಾಸಿಕ ಹೆಜ್ಜೆ ಹಾಕಿದೆ.

ಅಂತರ್‌ ರಾಷ್ಟ್ರೀಯ ಬೂಕರ್‌ ಪ್ರಶಸ್ತಿಗೆ ಪಾತ್ರರಾಗುವ ಕೃತಿಗೆ 50,000 ನಗದು  (ಲೇಖಕ/ಲೇಖಕಿ ಮತ್ತು ಭಾಷಾಂತರಕಾರರು ಇಬ್ಬರಿಗೂ ತಲಾ 25,000 ಪೌಂಡ್ ನಗದು ಬಹುಮಾನ) ಮತ್ತು ಬೂಕರ್‌ ಪ್ರತಿಮೆ ನೀಡಲಾಗುತ್ತದೆ. ಲಂಡನ್ ನಗರದ ಹೃದಯ ಭಾಗದಲ್ಲಿರುವ ಟೇಟ್ ಮಾಡರ್ನ್ ಆರ್ಟ್ ಗ್ಯಾಲರಿಯ ಸಭಾಂಗಣದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಿರುಪಟ್ಟಿಯಲ್ಲಿ ಸ್ಥಾನ ಪಡೆದ ಲೇಖಕರು ಮತ್ತು ಭಾಷಾಂತರಕಾರರು ಭಾಗವಹಿಸುತ್ತಾರೆ. ಜೊತೆಗೆ ಆಯ್ಕೆ ಸಮಿತಿಯ ಸದಸ್ಯರೂ ಕೂಡ ಇರುತ್ತಾರೆ. 

ಈ ಬಾರಿ ಬಾನು ಮುಷ್ತಾಕ್ ಮತ್ತು ದೀಪಾ ಭಸ್ತಿ ಅವರ ಜೊತೆಯಲ್ಲಿ ಉಳಿದ ಐದು ಕೃತಿಗಳ ಲೇಖಕರು ಮತ್ತು ಭಾಷಾಂತರಕಾರರು ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಮಂಗಳವಾರ ರಾತ್ರಿ 10.30 (ಬ್ರಿಟಿಷ್ ಕಾಲಮಾನ) ಪ್ರಶಸ್ತಿ ಪ್ರದಾನ ಸಮಾರಂಭ ಆರಂಭವಾಗುತ್ತದೆ. ಅತ್ಯಂತ ವ್ಯವಸ್ಥಿತವಾಗಿ ನಡೆಯುವ ಈ ಸಮಾರಂಭದಲ್ಲಿ ಪ್ರಶಸ್ತಿಗೆ ಪಾತ್ರವಾದ ಕೃತಿಯ ಹೆಸರನ್ನು ಕಾರಣ ಸಹಿತ ಘೋಷಿಸಲಾಗುವುದು.

MORE FEATURES

'ಹೆಗಲು': ತ್ಯಾಗ, ನಿಸ್ವಾರ್ಥತೆಯ ಅಪರೂಪದ ಜೀವನಗಾಥೆ

14-12-2025 Bengaluru

"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...

ಅನುಕ್ಷಣ ಅನುಭವಿಸಿ: ಸಮಯ ನಿರ್ವಹಣೆಯ ಮಾರ್ಗದರ್ಶಿ

14-12-2025 BENGALURU

ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...

ಮಕ್ಕಳ ಕಥಾಸಾಹಿತ್ಯ ಸಂವೇದನೆಯ ಹೊಸ ಹೆಜ್ಜೆಗಳು.......

13-12-2025 ಬೆಂಗಳೂರು

"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...