ಇತಿಹಾಸದ ನೆನಪುಗಳನು ಮರುಕಳಿಸುವ ಕೃತಿ ‘ಸೂರ್ಯಸ್ತ’


"ಕನ್ನಡ ಸಾಹಿತ್ಯಲೋಕದಲ್ಲಿ ಬಹಳಷ್ಟು ಕಾದಂಬರಿಕಾರರು ತಮ್ಮದೇ ಶೈಲಿಯಲ್ಲಿ ಕಾದಂಬರಿಗಳನ್ನು ಬರೆದು ಪ್ರಸಿದ್ಧಿಯಾದರು. ಹಲವಾರು ಕಾದಂಬರಿಗಳು ವಿಧ್ಯಾರ್ಥಿಗಳಿಗೆ ಪಠ್ಯಪುಸ್ತಕಗಳಾಗಿ, ಹಲವು ಕಾದಂಬರಿಗಳು ಚಲನಚಿತ್ರಗಳಾಗಲಿ ಕನ್ನಡದ ಜನ-ಮಾನಸದಲ್ಲಿ ನೆಲೆ ನಿಂತಿವೆ" ಎನ್ನುತ್ತಾರೆ ನಾರಾಯಣಸ್ವಾಮಿ .ವಿ. ಅವರು ಲೇಖಕ ಪದ್ಮನಾಭ.ಡಿ ಅವರ ‘ಸೂರ್ಯಸ್ತ’ ಕಾದಂಬರಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ...

ಕನ್ನಡ ಸಾಹಿತ್ಯಲೋಕದಲ್ಲಿ ಬಹಳಷ್ಟು ಕಾದಂಬರಿಕಾರರು ತಮ್ಮದೇ ಶೈಲಿಯಲ್ಲಿ ಕಾದಂಬರಿಗಳನ್ನು ಬರೆದು ಪ್ರಸಿದ್ಧಿಯಾದರು. ಹಲವಾರು ಕಾದಂಬರಿಗಳು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳಾಗಿ, ಹಲವು ಕಾದಂಬರಿಗಳು ಚಲನಚಿತ್ರಗಳಾಗಿ ಕನ್ನಡ ಜನ-ಮಾನಸದಲ್ಲಿ ನೆಲೆ ನಿಂತಿವೆ.

ಪ್ರೇಮ ಕಾದಂಬರಿಯನ್ನು ಕಲ್ಪನೆಯ ಮೂಲಕ ಬರೆಯಬಹುದೇನೋ, ಒಂದು ಘಟನೆಯನ್ನು ಆಧಾರವಾಗಿ ಇಟ್ಟುಕೊಂಡು ರೋಚಕವಾದ ಕಾದಂಬರಿಯನ್ನು ಬರೆಯಬಹುದೋ, ಬದುಕು ಅಥವಾ ಜೀವನದ ಕುರಿತು ಎಳೆ ಎಳೆಯಾಗಿ ಬರೆಯಬೇಕೆಂದರೆ ಆ ಜೀವನವನ್ನು ಅನುಭವಿಸಿರಬೇಕು, ಇಲ್ಲ ತಾನು ಕಂಡಿರಬೇಕು. ಊಹಾತ್ಮಕವಾಗಿ ಬರೆದ ಬರಹವು ನೈಜತೆಗೆ ದೂರವಾಗುತ್ತದೆ.

ಆಳಿದು ಹೋದ ಇತಿಹಾಸದ ಬಗ್ಗೆ ಅಧ್ಯಯನ ಮಾಡದೇ ಗತಿಸಿದ ಚರಿತ್ರೆಯನ್ನು ತಿಳಿಯದೇ, ಹಿಂದಿನ ಚರಿತ್ರೆಯ ಬಗ್ಗೆ ಕಾದಂಬರಿ ಬರೆಯಲು ಸಾಧ್ಯವಿಲ್ಲ. ಹಲವಾರು ಲೇಖಕರ ಇತಿಹಾಸಕಾರರ ಬರಹವನ್ನು ಅಧ್ಯಯನ ಮಾಡಬೇಕು ಆಗ ಚರಿತ್ರಾತ್ಮಕ ಕಾದಂಬರಿಯನ್ನು ಬರೆಯಬಹುದು.

ಇತ್ತೀಚಿನ ನವ್ಯ ಸಾಹಿತ್ಯಲೋಕದಲ್ಲಿ ಬಹಳಷ್ಟು ಕಾದಂಬರಿಕಾರರು ಕಾದಂಬರಿಗಳನ್ನು ಬರೆಯುತ್ತಿದ್ದರೂ ಅವು ಒಂದು ಭಾವನಾತ್ಮಕ ಚಿಂತನೆಗಳಿಗೆ, ಪ್ರೇಮ ವಿರಹದ ವೇದನೆಗಳಿಗೆ ಸೀಮಿತವಾಗಿದೆ. ಗತಿಸಿ ಹೋದ ಸಾಮ್ರಾಜ್ಯಗಳ ರಾಜರ ಇತಿಹಾಸವನ್ನು ಅವರ ಜೀವನದ ಆಂತರಿಕ ಭಾವವನ್ನು ಬರೆದವರು ಬಹಳಷ್ಟು ವಿರಳ. ಇತ್ತೀಚೆಗೆ ಇಂತಹ ಒಂದು ಇತಿಹಾಸದ ಚರಿತ್ರೆಯನ್ನು ಬರೆದು ಯಶಸ್ವಿಯಾದವರು ಶ್ರೀ ಪದ್ಮನಾಭ .ಡಿ ರವರು.

ಪದ್ಮನಾಭ ಡಿ ರವರು ಮೊದಲ ಮೊದಲು ಗದ್ಯದ ಬರಹದ ಕಡೆಗೆ ವಾಲಿದ್ದರೂ ಸುಮಾರು ಆರು ಕವನಸಂಕಲನಗಳನ್ನು ಹೊರತಂದು ಉತ್ತಮ ಕವಿಯೆನಿಸಿಕೊಂಡವರು. ನಂತರದಲ್ಲಿ ಪ್ರೇಮಕ್ಕೆ ಜಯ ಎಂಬ ಕಾದಂಬರಿಯನ್ನು ಬರೆದು ಯಶಸ್ವಿಯಾಗಿದರು. ಈಗ ಸೂರ್ಯಾಸ್ತ ಕಾದಂಬರಿಯನ್ನು ಬರೆದು ಕನ್ನಡಮ್ಮನ ಮಡಿಲಿಗೆ ಅಪಿ೯ಸಿ, ಓದುಗರ ಮನೆ ಮನಗಳನ್ನು ತಲುಪಲು ಪ್ರಾರಂಭಿಸಿದ್ದಾರೆ.

ಈ ಸೂರ್ಯಸ್ತ ಕಾದಂಬರಿಯ ಕಡೆಗೆ ಬರುವುದಾದರೆ, ಇದೊಂದು ಐತಿಹಾಸಿಕ ಕಾದಂಬರಿ. ಕಳಿಂಗದ ಗಜಪತಿಯು ತನ್ನ ಸಾಮ್ರಾಜ್ಯ ವಿಸ್ತರಣೆಗೆ ಪ್ರಯತ್ನಿಸಿದಾಗ ವಿಜಯನಗರದ ರಾಜಕುಮಾರಿಯನ್ನು ಕಂಡು ಮೋಹಿತನಾಗಿ ಅವಳನ್ನು ರಾಜ ಮದುವೆ ಮಾಡಿಕೊಡಲು ಒಪ್ಪದಿರುವ ಕಾರಣಕ್ಕೆ ಗಜಪತಿಯು ವಿಜಯನಗರದ ದಂಡೆತ್ತಿ ಬರುವ ಸನ್ನಿವೇಶಗಳು ಕಾದಂಬರಿಯಲ್ಲಿ ಚಿತ್ರಿತವಾಗಿದೆ. ಈ ಕೃತಿಯನ್ನು ಲೇಖಕರು ತನ್ನೊಳಗೆ ಬರಹದ ಆಭಿಲಾಷೆಯನ್ನು ಮೂಡಿಸಿ ಬರೆಸುತ್ತಿರುವ ದೇವಿ ಶಾರದಾ ಮಾತೆಗೆ ಅಪಿ೯ಸಿದ್ದಾರೆ. ಈ ಕಾದಂಬರಿಗೆ ಮುನ್ನುಡಿಯನ್ನು ಆತ್ಮೀಯ ಹಿರಿಯ ಲೇಖಕರಾದ ಶ್ರೀ ಹರಿನರಸಿಂಹ ಉಪಾಧ್ಯಾಯರು ಬರೆದು ಇಂದೊಂದು ಐತಿಹಾಸಿಕ ಕಾದಂಬರಿಯಾಗಿದ್ದು, ಇಂತಹ ಕೃತಿಗಳು ಹೆಚ್ಚಾಗಲಿ ಕನ್ನಡಮ್ಮನ ಸಾಹಿತ್ಯ ಭಂಡಾರವು ಸಂವೃದ್ದಿಯಾಗಲಿ ಈ ಕೃತಿಯು ಲೇಖಕರಿಗೆ ಹೆಸರು ಕೀತಿ೯ಯನ್ನು ತಂದುಕೊಡಲಿ ಎಂದು ಹಾರೈಸಿದ್ದಾರೆ. ಕವಯತ್ರಿಯಾದಂತಹ ರೇಣುಕಾ ಶಿವಕುಮಾರ್ ರವರು ಆಶಯ ನುಡಿಯನ್ನು ಬರೆದು ಗತಕಾಲದ ಇತಿಹಾಸವನ್ನು ಚಿತ್ರಿಸಿರುವ ಈ ಕೃತಿಯು ಕನ್ನಡ ಸಾಹಿತ್ಯವಲಯದಲ್ಲಿ ಗುರುತಿಸಿಕೊಳ್ಳಲಿ ಎಂದು ಹೇಳಿ ಶುಭ ಹಾರೈಸಿದ್ದಾರೆ...

ಇತಿಹಾಸದ ಬಗ್ಗೆ ಕಲ್ಪಾನಿಕವಾಗಿ ಕಾದಂಬರಿಯನ್ನು ಬರೆಯಲು ಸಾಧ್ಯವಿಲ್ಲ. ಅದಕ್ಕಾಗಿ ಲೇಖಕರು ಹಲವಾರು ಕೃತಿಗಳನ್ನು ಅಭ್ಯಾಸಿಸಬೇಕಾಗುತ್ತದೆ. ಲೇಖಕರು ಈ ಕೃತಿಯನ್ನು ಬರೆಯಲು ಯಾವ ಯಾವ ಕೃತಿಗಳನ್ನು ಓದಬೇಕಾಯಿತು ಎಂದು ತಮ್ಮ ಲೇಖಕರ ಮಾತಿನಲ್ಲಿ ಹೇಳಿಕೊಂಡಿದ್ದಾರೆ. ನಾನು ಈ ಕೃತಿಯನ್ನು ಬರೆಯಲು ಹಲವಾರು ಕೃತಿಗಳನ್ನು ಓದಿರುವೆ ಅವುಗಳಲ್ಲಿ History of Keisha, ಶಿವಪ್ಪನವರು ಬರೆದ ಸಮಗ್ರ ಇತಿಹಾಸ, ವಿಜಯ ನಗರದ ಅವನತಿ ಮುಂತಾದ ಪುಸ್ತಕಗಳನ್ನು ಓದಿ ಮನನ ಮಾಡಿಕೊಂಡು ಶ್ರೀ ಪದ್ಮನಾಭ ಡಿ ರವರು ಈ ಕೃತಿಯನ್ನು ಬರೆದಿದ್ದಾರೆ.

ಈ ಸೂರ್ಯಸ್ತ ಕಾದಂಬರಿಯ ಮೊದಲ ಅಧ್ಯಾಯದಲ್ಲಿ ನಟರಾಜ ಗೀತೆಗೆ ರಾಜಕುಮಾರಿ ನೃತ್ಯದ ಅಭ್ಯಾಸವನ್ನು ಮಾಡುತ್ತಿರುತ್ತಾಳೆ. ಈ ನೃತ್ಯಕ್ಕೆ ತಕ್ಕನಾದ ಒಂದು ಪದ್ಯವನ್ನು ಕೂಡ ಲೇಖಕರು ಈ ಸನ್ನಿವೇಶದಲ್ಲಿ ಸೇರಿಸಿದ್ದಾರೆ. ಆ ರಾಜಕುಮಾರಿಯ ನೃತ್ಯವು ಸಭಿಕರನ್ನು ಮಂತ್ರ ಮುಗ್ಧರಾಗಿದನ್ನು ಕಂಡು ರಾಜಕುಮಾರಿಗೆ ನೃತ್ಯವನ್ನು ಕಲಿಸುತ್ತಿರುವ ಆಚಾರ್ಯರ ಹೇಳುತ್ತಾರೆ. ಇಂದಿಗೆ ನಿನ್ನ ಶ್ರಮ, ನನ್ನ ಶ್ರಮ ಸಾಥ೯ಕವಾಯಿತು. ನಿನ್ನ ನೃತ್ಯ ಸಭಿಕರನ್ನೆ ಅಲ್ಲಾ ಸಾಕ್ಷಾತ್ ಶಿವನನ್ನೆ ತಲೆ‍ದೂಗುವಂತೆ ಮಾಡಿದೆ. ಅಂದಾಗ ರಾಜಕುಮಾರಿ ನಾನು ಈ ವಿದ್ಯೆಯನ್ನು ಕಲಿತಿದ್ದು ನಿಮ್ಮಿಂದ, ನಿಮಗೆ ಎನನ್ನು ಗುರುಕಾಣಿಕೆಯಾಗಿ ನೀಡಲಿ ಅಂದಾಗ ಗುರು ಹೇಳುವ ಮಾತು ನನಗೆ ಕಾದಂಬರಿಯ ಮೊದಲ ಅಧ್ಯಾಯದಲ್ಲಿಯೇ ಮನವನ್ನು ಸೆಳೆಯುತ್ತದೆ. ಆ ಗುರುವಿನ ಮಾತು ಹೀಗಿದೆ" ನಿಜವಾದ ಗುರು ನಿಸ್ವಾರ್ಥದಿಂದ ವಿದ್ಯೆಯನ್ನು ದಾನ ಮಾಡುತ್ತಾನೆ. ಗುರುವಿಗಿರುವುದು ಒಂದೇ ಉದ್ದೇಶ ನಾನು ಕಲಿತಿರುವ ವಿದ್ಯೆಯನ್ನು ಶಿಷ್ಯರು ಸದುಪಯೋಗ ಪಡಿಸಿಕೊಳ್ಳಲಿ ಎಂದಷ್ಟೇ. ಶಿಷ್ಯರ ಕೀತಿ೯ ಪ್ರತಿಷ್ಟೆಗಳು ಹೆಚ್ಚಾದಂತೆ ಗುರುವಿಗೂ ಕೂಡ ಗುರುವಿಗೂ ಕೂಡ ಗೌರವ ಹೆಚ್ಚಾಗುತ್ತದೆ. ಈ ಸಾಲುಗಳನ್ನು ಓದುವಾಗ ನನಗೆ ಪುರಾಣ ಕಥೆಯಲ್ಲಿ ಬರುವ ಏಕಲವ್ಯನ ಕಥೆ ನೆನಪಾಯಿತು. ತನ್ನಿಂದ ವಿದ್ಯೆಯನ್ನು ಕಲಿಯದೇ ದ್ರೋಣಾಚಾರ್ಯರನ್ನೆ ಗುರುವಾಗಿಸಿಕೊಂಡು ಬಿಲ್ಲು ವಿದ್ಯೆಯನ್ನು ಕಲಿತದಾಗ, ತನ್ನ ಶಿಷ್ಯರಿಗಿಂತ ಇವನು ಬಿಲ್ಲುವಿದ್ಯೆಯಲ್ಲಿ ನಿಪುಣನಾಗಿ ನಾನು ವಿದ್ಯೆ ಕಲಿಸಿದ ಹಿಂದುಳಿಯಬಹುದು, ಇವನ ನನ್ನ ಶಿಷ್ಯರು ಮುಂದೆ ಸೋಲಬಹುದು ಅಂತ ಭಾವಿಸಿ ಏಕಲವ್ಯನ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಪಡೆದ ಗುರುವಿನ ಸ್ವಾಥ೯ವು ನೆನಪಾಯಿತು. ಮತ್ತೆ ಮುಂದುವರಿದು ಈ ಕಾದಂಬರಿಯಲ್ಲಿ ಹೇಳುತ್ತಾರೆ" ತಾಯಿ ತನ್ನ ಮಗುವಿಗೆ ಹಾಲುಣಿಸುವಾಗ ತನ್ನ ಮಗುವಿನಿಂದ ಏನಾದರೂ ಅಪೇಕ್ಷಿಸುವಳೆ? ಮಗುವಿನ ಆಟ ಪಾಠ ನೋಡಿ ನಲಿಯುವುದಿಲ್ಲವೆ? ದೇವರು ಭಕ್ತರಿಂದ ಭಕ್ತಿಯನ್ನು ನಿರೀಕ್ಷೆ ಮಾಡುತ್ತಾರೆಯೇ ವಿನ: ಇನ್ನು ಎನನ್ನು ಅಪೇಕ್ಷಿಸುವುದಿಲ್ಲ. ತಾಯಿಯು ಕೂಡ ದೇವರಂತೆ, ತನ್ನ ಮಗುವಿನ ಎಳಿಗೆಯನ್ನು ಬಿಟ್ಟು ಮತ್ತೇನು ಚಿಂತಿಸುವುದಿಲ್ಲ. ಈ ಅಧ್ಯಾಯದಲ್ಲಿ ಒಂದು ನಿಗೂಡತೆಯನ್ನು ಲೇಖಕರು ಹೇಳುತ್ತಾರೆ. ಅದೇನೆಂದರೆ ಗುರು ಶಿಷ್ಯೆಯು ಮಾತನಾಡುವಾಗ ತಾಯಿಯ ಪದವು ಬಳಕೆಯಾಗಬಾರದು ಎಂಬುದು ರಾಜನು ಗುರುವಯ೯ನಿಗೆ ಕಟ್ಟಾಜ್ಞೆಯನ್ನು ವಿಧಿಸಿರುತ್ತಾನೆ. ಆ ಸಮಯದಲ್ಲಿ ತಾಯಿ ಪದ ಗುರುವಿನ ಬಾಯಿಂದ ಹೊರಬರುತ್ತದೆ. ಆಗ ಆ ವಿಷಯ ತಕ್ಷಣ ಗುರುವಿಗೆ ಅರಿವಾಗಿ ಮತ್ತೆ ವಿಷಯ ಪ್ರಸ್ತಾಪವನ್ನು ಮಾಡದೇ ನೀನು ಈದಿನ ಬಹಳಷ್ಟು ಬಳಲಿರುವೆ ಹೋಗಿ ವಿಶ್ರಾಂತಿಯನ್ನು ಪಡೆದುಕೋ ಅಂತ ರಾಜಕುಮಾರಿಯನ್ನು ಕಳುಹಿಸಿ ಕೊಡುತ್ತಾರೆ.

ನಂತರದ ಅಧ್ಯಾಯಗಳಲ್ಲಿ ರಾಜಕುಮಾರಿ ಅಂತಃಪುರಕ್ಕೆ ಬರುತ್ತಾಳೆ. ಗೋಡೆಗೆ ತಗುಲಿ ಹಾಕಿದ್ದ ಚಿತ್ರಪಟ ಒಂದನ್ನು ನೋಡುತ್ತಾಳೆ. ಅದು ಆಕೆ ತಾಯಿ ಕಲಾವತಿಯವರದು. ಅವರ ಮುಂದೆ ನಿಂತಾಗ ಆಕೆಗೂ ಸಮಾಧಾನವಾಗುತ್ತದೆ.

ಒಂದು ಕಾಲದಲ್ಲಿ ವಿಶ್ವವಿಖ್ಯಾತಿಯನ್ನು ಪಡೆದಿದ್ದ ವಿಜಯನಗರ, ನಂತರದಲ್ಲಿ ಅದು ಹಲವಾರು ಸಮಸ್ಯೆಗಳನ್ನು ಎದುರಿಸಿ ಅತಂತ್ರವಾದ ಸ್ಥಿತಿಗೆ ಬರುತ್ತದೆ ಉತ್ಕಲ ರಾಜ ಕಪಿಲೇಂದ್ರದೇವ ಗಜಪತಿ ಕೊಂಡ ವೀಡು ಪ್ರದೇಶವನ್ನು ಆಕ್ರಮಿಸಿಕೊಂಡು ತಮ್ಮ ವಿಜಯದ ಮೇಲೆ ತನ್ನ ವಿಜಯದ ಪತಾಕೆಯನ್ನು ಹಾರಿಸಲು ಕಾಯುತ್ತಿರುತ್ತಾನೆ.

ಸಂತೋಷದಿಂದ ಕಳೆಯುತ್ತಿದ್ದ ರಾಜ ಕುಟುಂಬದ ಮೇಲೆ ವಿಧಿಯ ಕ್ರೂರ ದೃಷ್ಟಿ ಬೀಳುತ್ತದೆ. ರಾಣಿಗೆ ಹೊಟ್ಟೆ ನೋವು ಕಾಣಿಸಿಕೊಂಡು ನರಳುತ್ತಾರೆ. ಆ ಸಮಯದಲ್ಲಿ ರಾಜವೈದ್ಯರು ಊರಲ್ಲಿರಲಿಲ್ಲ. ಮನೆ ಮುದ್ದುಗಳು ಆಕೆಯ ಉದರಬಾಧೆಯನ್ನು ಉಪಶಮನಗೊಳಿಸಲಿಲ್ಲ. ನಂತರ ರಾಜ ವೈದ್ಯರನ್ನು ಕರೆಯಿಸಿ ಪ್ರಯತ್ನ ಪಟ್ಟರು ಸಾಧ್ಯವಾಗದೆ ಮರಣವನ್ನು ಹೊಂದುತ್ತಾರೆ.

ರಾಜನಿಗೆ ಕುಟುಂಬದ ನೋವು ಒಂದು ಕಡೆ, ಹೊರಗಿನ ಶತ್ರುಗಳನ್ನ ನಿಯಂತ್ರಣವುದು ಹರಸಾಹಸವಾಗುತ್ತದೆ. ತಾಯಿಯನ್ನು ಕಳೆದುಕೊಂಡ ಮಗಳ ಭವಿಷ್ಯವನ್ನು ರೂಪಿಸುವ ಹೊಣೆ ಮತ್ತೊಂದು ಕಡೆ ಕಾಡುತ್ತಿರುತ್ತದೆ. ಮಗಳು ಗಾನ ನಾಟ್ಯದಲ್ಲಿ ಬಹಳ ಆಸಕ್ತಿ ಇರುವುದನ್ನು ಗಮನಿಸಿ ಮಗಳಿಗೆ ತನ್ನ ತಾಯಿಯು ಜ್ಞಾಪಕವಾಗ ಬಾರದೆಂಬ ಉದ್ದೇಶದಿಂದ ರಾಜಾಚಾರ್ಯರ ಹತ್ತಿರ ಅವಳನ್ನು ಸಂಗೀತಾ ಮತ್ತು ನಾಟ್ಯವನ್ನು ಕಲಿಯಲು ಸೇರಿಸಿ, ಅವರ ಹತ್ತಿರವೇ ಬೆಳೆಯಲು ವ್ಯವಸ್ಥೆಯನ್ನು ಮಾಡುತ್ತಾರೆ. ಅವರ ಹಾರೈಕೆಯಲ್ಲಿ ದಷ್ಟಪುಷ್ಟವಾಗಿ ಚೆಲುವೆಯಾಗಿ ಬೆಳೆಯುತ್ತಿದ್ದಳು ರಾಜಕುಮಾರಿ.

ರಾಜಸಭೆ ನಡೆಯುತ್ತಿದೆ ಗಜಪತಿಯು ಇತರೆ ರಾಜ್ಯಗಳನ್ನು ವಶಪಡಿಸಿಕೊಳ್ಳಬೇಕೆಂದು ಆ ಸಭೆಯಲ್ಲಿ ಹೇಳುತ್ತಾನೆ. ಆಗ ಮಂತ್ರಿಗಳು ರಾಜನ ಉದ್ದೇಶವನ್ನು ಒಪ್ಪಿಕೊಳ್ಳುವುದಿಲ್ಲ. ರಾಜ್ಯವು ಈಗ ಗಂಭೀರವಾದ ಸ್ಥಿತಿಯಲ್ಲಿದೆ. ಯುದ್ದವನ್ನು ಮಾಡಲು ನಾವು ಬಹಳಷ್ಟು ಸಂಪನ್ಮೂಲಗಳನ್ನ ಮಾಡಿಕೊಳ್ಳಬೇಕು. ಆ ಸಂಪನ್ಮೂಲಗಳನ್ನು ಕ್ರೂಡಿಕರಿಸಲು ನಾವು ಜನರ ಮೇಲೆ ಹೆಚ್ಚಿನ ತೆರಿಗೆಯನ್ನು ವಿಧಿಸಬೇಕು. ಆಗ ಜನರು ರೊಚ್ಚಿಗೆಳುವ ಸಂಭವವಿದೆ. ಮೊದಲು ಮಾರುವೇಷದಲ್ಲಿ ಹೋಗಿ ವಿಜಯನಗರ ರಾಜ್ಯದ ಚಲನವಲನಗಳನ್ನು ಗಮನಿಸಿ ನಂತರ ದಂಡೆಕ್ತಿ ಹೋಗಲು ನಿರ್ಧರಿಸಲಾಯಿತು.

ಗಜಪತಿ ತಾನೇ ವಿಜಯನಗರಕ್ಕೆ ಮಾರುವೇಷದಲ್ಲಿ ಬರುತ್ತಾನೆ. ವಿಜಯ ನಗರದ ಶ್ರೀಮಂತಿಕೆಯನ್ನು ನೋಡಿ ಮಾರು ಹೋಗುತ್ತಾನೆ. ಬಂಗಾರ ವಜ್ರ ವೈಡೂರ್ಯವನ್ನ ಆಳತೆಯಲ್ಲಿ ತುಂಬಿ ಕೊಡುವ ಸನ್ನಿವೇಶ ಕಂಡು ಮೂಕವಿಸ್ಮಿತನಾಗುತ್ತಾನೆ. ಈ ವಿಜಯನಗರ ಸಾಮ್ರಾಜ್ಯದಲ್ಲಿ ಕಳ್ಳತನವೇ ಇಲ್ಲವೆಂದು ಮಾರುವೇಷದಲ್ಲಿ ವಿಜಯನಗರದ ಮೂಲೆ ಮೂಲೆಗಳಲ್ಲಿ ಜಾಗೃತಯಿಂದ ಓಡಾಡುತ್ತಾ ವಿಜಯನಗರದ ಬಗ್ಗೆ ಬಹಳಷ್ಟು ತಿಳಿದುಕೊಳ್ಳುತ್ತಾನೆ. ಈಗೆ ಹಾದಿ ಬೀದಿಗಳಲ್ಲಿ ಸಂಚರಿಸಿ ಬರುವಾಗ ರಂಗಮಂದಿರದ ಕಡೆ ಬರುತ್ತಾನೆ. ಆ ರಂಗಮಂಟಪದಲ್ಲಿ ನೃತ್ಯವನ್ನು ಮಾಡುತ್ತಿದ್ದ ರಾಜಕುಮಾರಿಯ ಚೆಲುವಿಗೆ ಮಾರು ಹೋಗುತ್ತಾನೆ. ಅವಳನ್ನ ಮದುವೆಯಾಗಬೇಕೆಂದು ಬಯಸುತ್ತಾನೆ. ಆದರೆ ಮಂತ್ರಿಗಳು ಈ ಸಮಯ ತಕ್ಕದಲ್ಲವೆಂದು ತಿಳಿಹೇಳಿ ಅವನನ್ನು ಕರೆದುಕೊಂಡು ಬರುತ್ತಾರೆ.

ನಂತರದಲ್ಲಿ ಗಜಪತಿ ತನ್ನ ಸೇವಕನ ಮೂಲಕ ಒಂದು ಸಂದೇಶ ಪತ್ರವನ್ನು ವಿಜಯನಗರದ ರಾಜರಿಗೆ ಕಳಿಸುತ್ತಾನೆ. ಉತ್ತರ ದಕ್ಷಿಣ ರಾಜ್ಯಗಳಲ್ಲಿ ಒಗ್ಗಟ್ಟು ಇಲ್ಲವಾಗಿದೆ. ಇಲ್ಲಿ ಪರಕೀಯರು ಅಕ್ರವಣವನ್ನ ಮಾಡಲು ಸುಲುಭವಾಗಿದೆ. ತಮ್ಮ ರಾಜಕುಮಾರಿಯನ್ನು ಕಳಿಂಗದ ರಾಜ ಗಜಪತಿಗೆ ಮದುವೆ ಮಾಡಿಕೊಟ್ಟು ಎರಡು ಸಂಬಂದ ಬೆಳೆಸಿದರೆ ಸಂತೋಷವಾಗುತ್ತದೆ. ಇಬ್ಬರೂ ಕೂಡಿ ನಮ್ಮ ನಾಡನ್ನು ಕಾಪಾಡಬಹುದೆಂದು ಸಂದೇಶ ತಿಳಿಸುತ್ತಾರೆ. ಆಗ ರಾಜ ಪುರೋಹಿತರು ಸದ್ಯದಲ್ಲಯೇ ಮದುವೆಯನ್ನು ನಿಶ್ಚಯ ಮಾಡಲು ಸಾಧ್ಯವಿಲ್ಲ ಅದಕ್ಕೆ ಕಾಲಾವಕಾಶ ಬೇಕೆಂದು ಹೇಳಿ ಧೂತರನ್ನ ಕಳಿಸುತ್ತಾರೆ.

ನಂತರದಲ್ಲಿ ರಾಜಸಭೆಯಲ್ಲಿ ರಾಜಕುಮಾರಿಯ ವಿವಾಹದ ಬಗ್ಗೆ ನಾನಾ ತರದ ಅಭಿಪ್ರಾಯಗಳು ಮೂಡುತ್ತವೆ. ಕೊನೆಗೆ ರಾಜಕುಮಾರಿಯಯ ಅಭಿಪ್ರಾಯವನ್ನು ಕೇಳುವ ಮಾತು ಬರುತ್ತದೆ. ಅದರೆ ಈ ವಿಷಯ ರಾಜಮರ್ಯಾದೆಗೆ ಆಭಾಸವಾಗುತ್ತದೆ ಅಂತ ಹೇಳುತ್ತಾರೆ.

ವಿಜಯನಗರದ ರಾಜರಿಂದ ಮರು ಸಂದೇಶ ಬಾರದ ಕಾರಣ ಮತ್ತೆ ಗಜಪತಿಯ ಕಡೆಯಿಂದ ಮತ್ತೊಂದು ಸಂದೇಶ ಕಳಿಸುತ್ತಾನೆ. ಮೊದಲನೆಯ ಪತ್ರಕ್ಕೆ ನಿಮ್ಮಿಂದ ಯಾವುದೇ ಉತ್ತರ ಸಿಗದ ಕಾರಣ ಮತ್ತೊಂದು ಪತ್ರ ಕಳಿಸಿದ್ದೇನೆ ಎಂದು ರಾಜಸಭೆಗೆ ತಿಳಿಯುತ್ತಾನೆ. ಹೇಗೋ ಮದುವೆಯ ವಿಷಯ ರಾಜಕುಮಾರಿಗೆ ತಿಳಿಯುತ್ತದೆ. ಮಹಾರಾಜರಿಗೆ ನನ್ನ ಮದುವೆಯ ಚಿಂತೆಯಾಗಿದೆ ಎಂಬ ಆತಂಕ ಅವಳಲ್ಲಿ ಮೂಡುತ್ತದೆ. ತನ್ನ ತಂದೆಯನ್ನು ಬಿಟ್ಟು ದೂರ ಹೋಗುವುದು ಹಿಂಸೆ ಎನಿಸುತ್ತದೆ. ಸಖಿಯರ ಸ್ನೇಹಿತೆಯರೊಂದಿಗೆ ಅವರ ಸ್ನೇಹದ ಮಾತುಗಳು ಅವಳ ಮನಸನ್ನು ಸ್ವಲ್ಪ ಹಗರುಗೊಳಿಸುತ್ತವೆ.

ತದನಂತರದಲ್ಲಿ ಮಗಳನ್ನು ನೋಡಲು ಅಂತ:ಪುರಕ್ಕೆ ಬಂದು ಹೇಳುತ್ತಾನೆ. ಗಾಬರಿಯಾಗಬೇಡ ಮಗಳೇ, ನಾನು ಕೂಡ ಒಬ್ಬ ಹೆಣ್ಣು ಮಗಳ ತಂದೆ, ಯೋಚನೆ ಮಾಡದೆ ಮುಂದೆ ಅಡಿ ಇಡಲಾರೆ ಅಂತ ಹೇಳಿ ಹೋಗುತ್ತಾರೆ.

ನಂತರದ ಅಧ್ಯಾಯಗಳಲ್ಲಿ ಗಜಪತಿಯ ವರ್ಣನೆ ಅವನು ದೇವರಿಗೆ ಹರಿಸುವ ನೈವೇದ್ಯ ಅವರ ರಾಜ್ಯದಲ್ಲಿ ನಡೆಸುವ ರಥದ ಬಗ್ಗೆ ಮತ್ತು ಅವನು ಕಸದ ಪೊರಕೆಯಿಡಿದು ಕಸ ಗುಡಿಸುವ ಕಾಯ೯ವನ್ನು ಮತ್ತು ಇದಕ್ಕೆ ಅನ್ವಯವಾಗುವ ಪದ್ಯಗಳನ್ನು ಸೇರಿಸಿ ಕಾದಂಬರಿಯ ತಿರುಳನ್ನು ವಿಸ್ಕೃತವಾಗಿ ಲೇಖಕರು ವಿವರಣೆಯನ್ನ ನೀಡುತ್ತಾ ಹೋಗುತ್ತಾರೆ.

ವಿಜಯನಗರದ ರಾಜ ಮಾರುವೇಷದಲ್ಲಿ ಗಜಪತಿಯ ರಾಜ್ಯಕ್ಕೆ ಬಂದು ಗಜಪತಿಯ ಬಗ್ಗೆ ತಿಳಿದು ವಾಪಸ್ ಹೋಗಿ ರಾಜಸಭೆಯನ್ನು ಮುಂದೂಡಿ ರಾಜಕುಮಾರಿಯನ್ನ ಕಾಣಲು ಹೋಗುತ್ತಾನೆ. ಗಜಪತಿ ಧೃಢಕಾಯನಾಗಿದ್ದರೂ ನಿನಗೂ ಅವರಿಗೂ ವಯಸ್ಸಿನ ಅಂತರವಿದೆ. ಅವನು ರಾಜನಾದರೂ ಕೂಡ ಕಸದ ಪೊರಕೆಯನ್ನು ಹಿಡಿದು ದೇವಸ್ಥಾನದ ಮುಂದೆ ಕಸವನ್ನು ಗುಡಿಸುತ್ತಾನೆ. ಈ ಸಂಸ್ಕಾರ ನಮ್ಮ ರಾಜ ಮನೆತನಕ್ಕೆ ಒಪ್ಪುವುದಿಲ್ಲ. ಆದ್ದರಿಂದ ನಿನಗೆ ಬೇರೆ ಕಡೆ ವರನನ್ನು ಹುಡುಕಿ ಮದುವೆ ಮಾಡುತ್ತೇನೆ ಎಂದು ಹೇಳಿ ಹೋಗುತ್ತಾನೆ.

ಅಧ್ಯಾಯಗಳಲ್ಲಿ ಗಜಪತಿಯ ರಾಜಸಭೆ ನಡೆಯುತ್ತದೆ. ವಿಜಯನಗರದ ರಾಜನು ನಮ್ಮ ರಾಜ್ಯದೊಳಗೆ ಮಾರುವೇಷದಲ್ಲಿ ಬಂದು ನಮ್ಮ ಚಲನವನಗಳನ್ನು ಗಮನಿಸಿ ಹೋಗಿದ್ದಾನೆ. ತಾವು ದೇವರ ಸನ್ನಿಧಿಯಲ್ಲಿ ಕಸಗುಡಿಸುತ್ತಿರುವುದನ್ನ ಕೀಳಾಗಿ ಕಂಡಿರಬಹುದು. ನಾವು ಅವನ ದುರಂಕಾರವನ್ನು ಆಡಿಗಿಸಿ ಅವನ ಸಾಮ್ರಾಜ್ಯವನ್ನು ವಶ ಮಾಡಿಕೊಳ್ಳಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಗುತ್ತದೆ

ಗಜಪತಿ ವಿಜಯನಗರದ ಮೇಲೆ ದಂಡೆತ್ತಿ ಬರುವ ವಿಷಯ ಬೇಹುಗಾರಿಕೆಯಿಂದ ತಿಳಿಯುತ್ತದೆ. ಯಾವುದೇ ಕ್ಷಣದಲ್ಲಿ ಗಜಪತಿ ತಮ್ಮ ಸಾಮ್ರಾಜ್ಯದ ದಂಡೆತ್ತಿ ಬರಬಹುದು ಅಂತ ಯೋಚಿಸಿ ತನ್ನ ಸಾಮ್ರಾಜ್ಯವನ್ನು ಕಾಪಾಡಿಕೊಳ್ಳಲು ವಿವಿಧ ಕಡೆಗಳಲ್ಲಿ ಸೈನಿಕರನ್ನು ಜಮಾ ಮಾಡುತ್ತಾನೆ. ನಂತರದಲ್ಲಿ ಗಜಪತಿ ಅಪಾರವಾದ ಸೈನ್ಯದೊಂದಿಗೆ ವಿಜಯನಗರ ಪ್ರವೇಶಿಸುತ್ತಾನೆ. ಈ ವಿಷಯ ತಿಳಿದ ರಾಜಕುಮಾರಿ ರಾಜನ ಹತ್ತಿರ ಬಂದು ರಾಜ್ಯದ ಸಂರಕ್ಷಣೆಯಲ್ಲಿ ನಾನು ಪಾಲ್ಗೊಳ್ಳಲು ಅಪ್ಪಣೆ ಕೇಳುತ್ತಾಳೆ. ಆಗ ರಾಜ ನೀವು ಯುದ್ಧದಲ್ಲಿ ಪಾಲ್ಗೊಳ್ಳುವುದು ಬೇಡ, ಯುದ್ಧದಲ್ಲಿ ಅನೇಕ ಯುವ ಸೈನಿಕರು ಹೋರಾಡುತ್ತಿದ್ದಾರೆ. ಆವರ ಒಳತಿಗಾಗಿ ನೀವು ಪ್ರಾಥಿ೯ಸಿ ಎಂದು ಹೇಳಿ ಹೊರಡುತ್ತಾರೆ.

ನಂತರ ರಾಜಕುಮಾರಿ ಮಾರುವೇಷದಲ್ಲಿ ಗಜಪತಿಯ ಬಳಿ ಬಂದು ನನಗಾಗಿ ನನ್ನ ದೇಶದ ಮೇಲೆ ನೀವು ಯುದ್ದ ಘೋಷಣೆ ಮಾಡಿದ್ದು ದುಃಖವಾಗುತಿದೆ. ನಾನು ನಿಮ್ಮನ್ನ ವಿವಾಹವಾಗುವೆ ಯುದ್ಧವನ್ನು ನಿಲ್ಲಿಸಿ ಎಂದು ಕೇಳಿಕೊಂಡಾಗ ನಿನ್ನ ಅಪ್ಪ ರಾಜನೇ ನಿನ್ನನ್ನು ಕಳಿಸಿದ್ದಾನೆ ಮೊದಲು ಅವನನ್ನು ಬಂಧಿಸಿ ನಂತರ ಅವನ ಮುಂದೆ ಈ ಕಸ ಗುಡಿಸುವ ರಾಜನು ಮದುವೆಯಾಗುತ್ತಾನೆ ಎಂದು ಹೇಳಿ ನಗುತ್ತಾನೆ. ನಂತರ ಕೆಲವು ಪ್ರದೇಶಗಳನ್ನು ಗಜಪತಿಗೆ ನೀಡಿ ಯುದ್ಧ ವಿರಾಮ ಘೋಷಿಸುತ್ತಾರೆ.

ಈ ಸೂರ್ಯಸ್ತ ಕಾದಂಬರಿಯನ್ನು ಓದುತ್ತಾ ಹೋದಾಗ ಬಾಲ್ಯದ ಶಿಕ್ಷಣದಲ್ಲಿ ಇತಿಹಾಸದ ಪುಸ್ತಕಗಳನ್ನು ಓದುವ ನೆನಪುಗಳು ಮನದೊಳಗೆ ಮೂಡುತ್ತವೆ. ಇದು ವಿಜಯನಗರ ಚರಿತ್ರೆಯನ್ನು ಮತ್ತೊಮ್ಮೆ ನಮ್ಮ ಕಣ್ಣ ಮುಂದೆ ತರುತ್ತದೆ. ಈ ಇತಿಹಾಸದ ಪುಸ್ತಕ ಬಹುಶಃ ಇತ್ತೀಚಿಗೆ ಹೊರಬಂದ ಮಾದರಿಯ ಪುಸ್ತಕಗಳ ಸಾಲಿನಲ್ಲಿ ಸೇರುತ್ತದೆ.

ಈ ಸೂರ್ಯಸ್ತ ಕೃತಿಯು ಭವಿಷ್ಯದಲ್ಲಿ ವಿಧ್ಯಾರ್ಥಿಗಳಿಗೆ ಇತಿಹಾಸ ಪಠ್ಯಪುಸ್ತಕವಾಗಿ ಹೊರಬರುವ ವಿಷಯ ದೂರವಿಲ್ಲ ಅಂತ ನನ್ನ ವೈಯುಕ್ತಿಕ ಭಾವನೆಯಾಗಿದೆ.

ಬಹುಶಃ ಇತ್ತೀಚಿನ ದಿನಗಳಲ್ಲಿ ನಾನು ಓದಿದ ಉತ್ತಮವಾದ ಕೃತಿ ಇದಾಗಿದೆ. ಗತಕಾಲದ ಇತಿಹಾಸವನ್ನು ನೆನಪಿಸುವಂತಹ ತಮ್ಮ ಕೃತಿಯನ್ನು ಕೊಟ್ಟು ಓದುವ ಭಾಗ್ಯ ನನ್ನದಾಗಿಸಿದಕ್ಕೆ ಧನ್ಯವಾದಗಳು ಲೇಖಕರೇ. ನಿಮ್ಮಿಂದ ಇನ್ನೂ ಹತ್ತಾರು ಕೃತಿಗಳು ಕನ್ನಡಮ್ಮನ ಮಡಿಲನ್ನು ಸೇರಲಿ. ಈ ಕೃತಿಯು ನಿಮಗೆ ಹೆಸರನ್ನು ತಂದುಕೊಡಲಿ ನಿಮಗೆ ಗೌರವಧಾರಗಳು ಲಭಿಸಲಿ ಎಂದು ಹಾರೈಸುವೆ.

MORE FEATURES

ಸಾಮಾನ್ಯ ಮಹಿಳೆಯರು ಯುದ್ಧ ಭೂಮಿಯಲ್ಲಿ ಕೆಚ್ಚೆದೆಯ ಕಲಿಗಳಂತೆ ಹೋರಾಡಿರುವುದನ್ನು ಕೃತಿ ದಾಖಲಿಸುತ್ತದೆ

28-11-2023 ಬೆಂಗಳೂರು

''ದೂರದ ಇಂಗ್ಲೆಂಡ್‌ನಲ್ಲಿದ್ದ, ಮಹಾನ್ ಹೋರಾಟಗಾರರು ಹಾಗೂ ವಿದ್ವಾಂಸರಾಗಿದ್ದ ಕಾರ್ಲ್ ಮಾರ್ಕ್ಸ್ ಮತ್ತು ...

ಸಾಹಿತ್ಯದ ವಿದ್ಯಾರ್ಥಿಯಲ್ಲದ ನನಗೆ ಅನುವಾದ ಸ್ವಲ್ಪ ತೊಡಕಿನ ಕೆಲಸವೆ: ಸುಧಾ ಆಡುಕಳ

28-11-2023 ಬೆಂಗಳೂರು

“ಸಾಹಿತ್ಯದ ವಿದ್ಯಾರ್ಥಿಯಲ್ಲದ ನನಗೆ ಅನುವಾದ ಸ್ವಲ್ಪ ತೊಡಕಿನ ಕೆಲಸವೆ. ಮೊದಲಿಗೆ ಅತ್ಯುತ್ಸಾಹದಿಂದ ಕೈಗೆತ್ತಿಕೊಂ...

ಎರಡೂ ಕತೆಗಳ ವಸ್ತು ಬಹಳ ಭಿನ್ನ: ವಿಕಾಸ್ ನೇಗಿಲೋಣಿ

28-11-2023 ಬೆಂಗಳೂರು

“ಬಹಳ ಮಜವಾದ, ಪ್ರೀತಿ ಅಂದತಕ್ಷಣ ತೀರಾ ರೊಮ್ಯಾಂಟಿಕ್ ಮಾಡದ ಆದರೆ ಪ್ರೀತಿಯ ಬೇರೆ ಬೇರೆ ಮಗ್ಗುಲುಗಳನ್ನು ಕಾಣಿಸುವ...