ಕಲಬುರಗಿಯ ಸಾಹಿತ್ಯ ಸಂಭ್ರಮ ಉಕ್ಕಿ ಹರಿದ ವಾತ್ಸಲ್ಯದ ಹೊನಲು

Date: 21-02-2024

Location: ಬೆಂಗಳೂರು


"ಮುಟ್ಟು ಎಂಬ ಪದ ಹೀಗೆ ಜೀವವಿರೋಧಿ ನೆಲೆಯ ಭಿನ್ನ ರೂಪಕಗಳಲ್ಲಿ ಬಳಕೆ ಆಗುತ್ತದೆ. ತನ್ಮೂಲಕ ಮನುಷ್ಯ ಸಮಾಜದ ಮನೋದೈಹಿಕ ಸಂಕೇತಿ ಸಂವೇದನೆಗಳನ್ನು ಉಂಟು ಮಾಡುವ ಪದ ಮತ್ತು ಪದಾರ್ಥ. ಪದಾರ್ಥ ಎನ್ನುವುದಿಲ್ಲಿ ವಸ್ತು ಪ್ರಭೇದಕ್ಕೆ ಬಳಕೆಯಾಗುವ ಸಮೀಕರಣ ಪದವಲ್ಲ," ಎನ್ನುತ್ತಾರೆ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ‘ರೊಟ್ಟಿಬುತ್ತಿ’ ಅಂಕಣದಲ್ಲಿ ‘ಕಲಬುರ್ಗಿಯ ಸಾಹಿತ್ಯ ಸಂಭ್ರಮ’ದ ಕುರಿತು ಬರೆದಿದ್ದಾರೆ.

ಮುಟ್ಟು ಹೆಸರಲ್ಲೇ 'ಅದೇನೋ' ವಿಭಿನ್ನ ಸಂವೇದನೆಗಳ ಧ್ವನ್ಯಾರ್ಥಗಳು ಗೂಡುಗಟ್ಟಿವೆ. ಮುಟ್ಟು ಎಂದೊಡನೆ ಥಟ್ಟನೆ ನೆನಪಿಗೆ ಬರುವುದು ಹೆಣ್ಣಿನ ಜೈವಿಕ ಕ್ರಿಯೆಯ ಮುಟ್ಟು. ಮಡುಗಟ್ಟಿದ ಮತ್ತೊಂದು ಕಹಿ ನೆನಪೆಂದರೆ ಮನುಷ್ಯ ಮನುಷ್ಯರನ್ನು ಮುಟ್ಟಿಸಿಕೊಳ್ಳದಿರುವ ಅಸ್ಪೃಶ್ಯತೆ. ಚಾತುರ್ವರ್ಣ ವ್ಯವಸ್ಥೆಯ ಕಂದಾಚಾರಗಳನ್ನು ಹೊರತು ಪಡಿಸಿಯೂ ಮುಟ್ಟು ಕುರಿತಂತೆ ಮತ್ತೆ ಕೆಲವು ಲೋಕಾನುಭವದ ರೂಢಿಗತ ನಿತ್ಯೋಕ್ತಿಗಳಿವೆ.

ಅವರು ನಮ್ಮನ್ನು ಹಚ್ಚಿಕೊಳ್ಳುವುದಿಲ್ಲ. ನಮ್ಮ ಬಗ್ಗೆ ಪ್ರಾಂಜಲವಾದ ಪ್ರೀತಿ ತೋರಿ ನೆರವಿಗೆ ಬರದಿರುವ ಅನಾಸಕ್ತಿ. "ಅದಕ್ಕಾಗಿ ಅವರು ನಮ್ಮನ್ನು ಮುಟ್ಟಿಸಿಕೊಳ್ಳುವುದಿಲ್ಲ" ಎಂಬಂತಹ ಆರೋಪ ಸ್ವರದಲ್ಲಿ ಕೇಳಿ ಬರುವ ಹಲವು ಹೇಳಿಕೆಗಳನ್ನು ನಿರೂಪಿಸುತ್ತೇವೆ. ಮುಟ್ಟು ಎಂಬ ಪದ ಹೀಗೆ ಜೀವವಿರೋಧಿ ನೆಲೆಯ ಭಿನ್ನ ರೂಪಕಗಳಲ್ಲಿ ಬಳಕೆ ಆಗುತ್ತದೆ. ತನ್ಮೂಲಕ ಮನುಷ್ಯ ಸಮಾಜದ ಮನೋದೈಹಿಕ ಸಂಕೇತಿ ಸಂವೇದನೆಗಳನ್ನು ಉಂಟು ಮಾಡುವ ಪದ ಮತ್ತು ಪದಾರ್ಥ. ಪದಾರ್ಥ ಎನ್ನುವುದಿಲ್ಲಿ ವಸ್ತು ಪ್ರಭೇದಕ್ಕೆ ಬಳಕೆಯಾಗುವ ಸಮೀಕರಣ ಪದವಲ್ಲ.

ಅಷ್ಟಕ್ಕೂ ನಾನು 'ಮುಟ್ಟು' ಕತೆ ಬರೆದುದು ನಲವತ್ತು ವರುಷಗಳ ಹಿಂದೆ. ಅದರಲ್ಲೂ ದೂರದ ಕರಾವಳಿ ತೀರದಿಂದ ಪ್ರಕಟವಾಗುವ 'ತುಷಾರ' ಮಾಸಿಕದ ಆಹ್ವಾನಿತ ಕತೆ ಅದಾಗಿತ್ತು. ಆಗ ನನ್ನಂಥ ಉದಯೋನ್ಮುಖ ಮತ್ತು ಊರ್ದ್ವಮುಖಿ ಚಿಂತನೆಗಳ ಕತೆಗಾರರಿಗೆ ಪ್ರೋತ್ಸಾಹ ನೀಡುತ್ತಿದ್ದುದು 'ಎ' ಇನಿಷಿಯಲ್ ಹೊಂದಿದ್ದ ಅನಂತಪುರದ ಈಶ್ವರಯ್ಯ. ಆಗ ಅವರು ತುಷಾರದ ಸಂಪಾದಕೀಯ ನಿರ್ವಹಣೆಯ ಹೊಣೆಗಾರರು. ವಿಶೇಷವೆಂದರೆ 'ಮುಟ್ಟು' ಕತೆ ಪ್ರಕಟವಾದುದು ೧೯೮೫ ರ ಯುಗಾದಿ ವಿಶೇಷಾಂಕದಲ್ಲಿ. ಮತ್ತೊಂದು ವಿಶೇಷವೆಂದರೆ ತುಷಾರದಲ್ಲಿ ಮುಟ್ಟು ಪ್ರಕಟವಾದ ನಂತರ ಕತೆಯ ಕುರಿತು ಐದಾರು ತಿಂಗಳ ಕಾಲ ಸಂವಾದಗಳೇ ಏರ್ಪಟ್ಟವು. ಹೆಸರಾಂತ ಕತೆಗಾರ ಡಾ. ಶಾಂತಿನಾಥ ದೇಸಾಯಿ ಅವರು ಅಂದಿನ ಚರ್ಚೆಗಳಿಗೆ ಆಗ ಸಮಾರೋಪದ ಮಾತುಗಳನ್ನು ಬರೆದಿದ್ದರು.

ಬುಡಕಟ್ಟು ಸಮುದಾಯವೊಂದರ ಕೆಲವು ಮೌಢ್ಯಾಚರಣೆಗಳ ಮೇಲೆ ತಿಳಿ ಬೆಳಕು ಚೆಲ್ಲುವ ಪ್ರಯತ್ನ. ಮುಖ್ಯವಾಗಿ ಮಹಿಳೆಯರ ಮುಟ್ಟು ಸೇರಿದಂತೆ ಕೆಲವು ಮೂಢ ನಂಬಿಕೆಗಳ ಸುತ್ತ ಅನಾವರಣಗೊಂಡದ್ದು ಈ ಕತೆ. ವರ್ತಮಾನದಲ್ಲೂ ಪ್ರಚಲಿತ ಇರುವ ಅಂಧಾಚರಣೆಗಳ ಮೇಲೆ ಈ ಕತೆ ಕ್ಷಕಿರಣ ಬೀರುವಂತಿದೆ. ಒಂದೆರಡು ತಿಂಗಳ ಹಿಂದೆ ತರೀಕೆರೆಯ ಗೇರುಮರಡಿ ಮತ್ತು ತುಮಕೂರು ಜಿಲ್ಲೆಗಳಲ್ಲಿ ಜರುಗಿದ ಕೆಲ ಘಟನೆಗಳೇ ಅದಕ್ಕೆ ಸಾಕ್ಷಿ ಎನ್ನುವಂತಿವೆ. ನಲವತ್ತು ವರುಷಗಳ ಹಿಂದೆ ಪ್ರಕಟವಾದ 'ಮುಟ್ಟು" ಕತೆ ಸಮುದಾಯವೊಂದರ ಮೌಢ್ಯಾಚರಣೆಗಳನ್ನು ಗಟ್ಟಿಯಾಗಿ ಹಿಡಿದಿಟ್ಟ ಸಶಕ್ತ ಕತೆ ಅದಾಗಿತ್ತು. ನೋವಿನ ವರ್ತಮಾನವೆಂದರೆ ಇವತ್ತಿಗೂ ಮುಟ್ಟು ಮತ್ತಿತರೆ ವಿಷಯಗಳ ಕುರಿತಾಗಿ ಆ ಸಮುದಾಯದಲ್ಲಿನ್ನೂ 'ಫಾಸಿಲ್' ತರಹ ಆಚರಣೆಗಳಾಗಿ ಉಳಿದಿವೆಯಲ್ಲ ಎಂಬುದೇ ಸಂಕಟದ ಸಂಗತಿ.

ಇದಿಷ್ಟು ಮುಟ್ಟು ಕತೆಯ ಪ್ರಮುಖ ಮತ್ತು ಸೂಕ್ಷ್ಮ ಎಳೆಗಳು. ಆದರೆ ಅದರ ಜೀವಾಳದಂತೆ ಒಳಹೇತುಗಳ ಬಾಹುಳ್ಯವೇ ಸಂಕಲನದಲ್ಲಿದ್ದು ಅದೆಲ್ಲ ಓದುಗ ದೊರೆಗೆ ಸೇರಿದ್ದು. ಮುಟ್ಟು ಕಥಾ ಸಂಕಲನದಲ್ಲಿ ಒಟ್ಟು ಹದಿನೈದು ಕತೆಗಳಿವೆ. ವಡ್ಡನಕೇರಿಯ 'ಅವ್ವ' ಪ್ರಶಸ್ತಿ ಮತ್ತು ಗುಲಬರ್ಗಾ ವಿ. ವಿ.ಯ ಅತ್ಯುತ್ತಮ ಗ್ರಂಥ ಪ್ರಶಸ್ತಿಗೆ ಭಾಜನಗೊಂಡ ಈ ಕೃತಿಗೆ ಇದೀಗ ಕನ್ನಡನಾಡು ಲೇಖಕರ ಮತ್ತು ಓದುಗರ ಪ್ರಶಸ್ತಿಯ ಪುಟ್ಟ ಕಿರೀಟ. ಕಿರೀಟ ನನಗಲ್ಲ ಕೃತಿಗೆ. ಕೃತಿಯೊಂದು ಬರೆದಾದ ಮೇಲೆ ಅದು ಓದುಗರ ಸ್ವಾಮ್ಯಕ್ಕೆ ಸೇರಿದ್ದು. ನಲವತ್ತು ವರ್ಷಗಳ ಹಿಂದೆ ಬರೆದ ಕತೆಗಳೊಂದಿಗೆ ತೀರ ಇತ್ತೀಚಿಗೆ ಪ್ರಕಟವಾದ ಕೆಲವು ಕತೆಗಳು ಮುಟ್ಟು ಸಂಕಲನದಲ್ಲಿವೆ.

ಕಡೇ ಗಳಿಗೆಯ ಅನಾರೋಗ್ಯದ ನಿಮಿತ್ತ ಮುಟ್ಟು ಸಂಕಲನಕ್ಕೆ ದೊರಕಿದ 'ಅವ್ವ' ಪ್ರಶಸ್ತಿ ಸ್ವೀಕರಿಸಲು ಸಾಧ್ಯವಾಗಲಿಲ್ಲ. ಈಗ್ಗೆ ದೀಡು ವಾರದ ಹಿಂದೆ ಹಿರಿಯರಾದ ಅಪ್ಪಾರಾವ ಅಕ್ಕೋಣಿಯವರು ಅವತ್ತು ಫೋನ್‌ ಮಾಡಿ ನಿಮ್ಮ 'ಮುಟ್ಟು' ಕಥಾ ಸಂಕಲನಕ್ಕೆ ಇದೀಗ ನಮ್ಮ ಕನ್ನಡನಾಡು ಸಂಘದಿಂದ ಪ್ರಶಸ್ತಿ ಲಭಿಸಿದೆ. ಎಂದು ಹಂಗೆ ತಿಳಿಸುತ್ತಲೇ ಇದೇ ಫೆಬ್ರವರಿ ಹದಿನೆಂಟರಂದು ಪ್ರಶಸ್ತಿ ಪ್ರದಾನ ಸಮಾರಂಭ‌ ಐತಿ. ತಪ್ಪಿಸಬಾರದು ಬರಲೇ ಬೇಕೆಂದರು. ಎಂಬತ್ತೈದರ ಹಿರಿಯಜೀವ ಅಕ್ಕೋಣಿ ಸರ್ ಮಾತು ಮೀರಲಾಗದು. ಅಷ್ಟಕ್ಕೂ ಕಲಬುರಗಿಗೆ ಹೋಗುವುದೆಂದರೆ ನನಗೆ ಕಣ್ಮನಗಳ ಮೈ ತುಂಬಾ ಖುಷಿ ಹೊಕ್ಯಾಡಿದ ಹುಲುಸು. ಹೆಣ್ಣೊಬ್ಬಳಿಗೆ ತವರು ಮನೆಗೆ ಹೋಗುವ ಸಂಭ್ರಮ. ಒಂದು ಅಮೂರ್ತ ಉಮೇದು. ಪ್ರಶಸ್ತಿ ಸ್ವೀಕರಿಸುವ ನೆವನದಲ್ಲಿ ಹಳೆಯ ಗೆಳೆಯ ಗೆಳತಿಯರ ಮುಖಾಮುಖಿ. ನಿವಾಂತ ಕುಂತು ಅವರೊಂದಿಗೆ ಮನದುಂಬಿ ಮಾತಾಡುವ ಸದವಕಾಶ. ಕಲಬುರ್ಗಿಯ ಉರಿಬಿಸಿಲು ಮೈತುಂಬಿಸಿಕೊಳ್ಳುವ ಕ್ಯುಟ್ ಪೇನ್ ಪ್ಲೇಸರ್ನೆಸ್. ಇನ್ನೂ ಏನೇನೋ ಅಮೂರ್ತ ಮುಲಾಖತ್ತುಗಳ ಸಂತೃಪ್ತ ಸೌಖ್ಯಭಾವ.

ಮತ್ತೊಂದಿಷ್ಟು ಸಂಭ್ರಮ ಸಡಗರಗಳಿವೆ. ಏನೆಂದರೆ ತೊಂಬತ್ತರ ಹೊಸ್ತಿಲಿನ ಡಾ. ಪಿ. ಎಸ್. ಶಂಕರ ಅವರ ಬಾಜೂಕೆ ಕುಂತು ಪ್ರಶಸ್ತಿ ಸ್ವೀಕರಿಸುವ ಸಂಪ್ರೀತಿಯ ಸದವಕಾಶ. ಪಾಟೀಲ ಪುಟ್ಟಪ್ಪನವರ ಸೋದರ ಡಾ. ಪಿ. ಎಸ್. ಶಂಕರ ಸರಳ, ಸಹೃದಯಿ ಸಾಹಿತಿ. ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದವರು. ಮೇಲಾಗಿ ಪ್ರಪಂಚ ಸುತ್ತಿ ಬಂದವರು. ಅವರ ಕುರಿತು ಮೂವತ್ತು ವರುಷಗಳ ಹಿಂದೆಯೇ ದಾವಣಗೇರಿಯ ಜನತಾವಾಣಿ ದೈನಿಕದ ''ಕಡಕೋಳ ಕಾಲಂ" ವಾರದ ಅಂಕಣದಲ್ಲಿ ಬರೆದಿದ್ದೆ. ಮೊನ್ನೆ ಅವರು ಅದನ್ನು ಮೆಲುಕಾಡಿದರು. ಹಿರಿಯ ಲೇಖಕಿ ಪ್ರೊ. ವಿಜಯಶ್ರೀ ಸಬರದ ಅವರು ಸಹ ಅಂದಿನ ಪ್ರಶಸ್ತಿ ಪುರಸ್ಕೃತರು ಎಂಬುದು ಮತ್ತೊಂದು ಹೆಮ್ಮೆ. ಮತ್ತು ವಾತ್ಸಲ್ಯದ ಗೆಳೆಯರಾದ ಮಹಿಪಾಲರೆಡ್ಡಿ, ಕಾಲಿಮಿರ್ಚಿ ಅಕ್ಬರ್, ಹಡಪದ ಮುರಿಗೆಪ್ಪ ಹೀಗೆ ಸಹಪುರಸ್ಕೃತರ ತೆಕ್ಕೆಗಟ್ಟಲೇ ಸರದಿ ಸಂತಸ.

ಅಚ್ಚುಕಟ್ಟಾದ ಕಾರ್ಯಕ್ರಮ ಅದಾಗಿತ್ತು. ವೀರಮ್ಮ ಗಂಗಸಿರಿ ಕಾಲೇಜಿನ ಸಭಾಂಗಣ ತುಂಬಿ ತುಳುಕಿತ್ತು. ತೊಂಬತ್ಮೂರರ ಏರುಪ್ರಾಯದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಾಹಿತ್ಯ ಚೇತನ ಅಲ್ಲಿತ್ತು. ಅವರೇ ನಮ್ಮ ನಡುವಿನ ಹಿರಿಯ ಸಾಹಿತಿ ಎ. ಕೆ. ರಾಮೇಶ್ವರರು. ಅವರು ಪ್ರೇಕ್ಷಕರ ಸಾಲಲ್ಲಿ ಕುಳಿತು ಕಾರ್ಯಕ್ರಮಕ್ಕೆ ಶೋಭೆ ತಂದುಕೊಟ್ಟರು. ಪ್ರಶಸ್ತಿ ಪ್ರದಾನ ಸಮಾರಂಭದ ಉದ್ದಕ್ಕೂ ಅವರದು ಪ್ರಾಂಜಲ ಪ್ರೀತಿ, ಲವಲವಿಕೆಯ ಸನ್ನೋಟ. ಸರಳ ಸಜ್ಜನಿಕೆಯ ಅಂತಹ ಹಿರಿಯ ಜೀವ ನಮ್ಮೊಂದಿಗೆ ಭೋಜನ ಸ್ವೀಕರಿಸಿದುದು ಎಲ್ಲರಿಗೂ ಖುಷಿಯ ವಿಷಯ. ವಿಶ್ರಾಂತ ಪ್ರಾಚಾರ್ಯ ಸ್ವಾಮಿರಾವ ಕುಲಕರ್ಣಿ ಎಪ್ಪತ್ಮೂರರ ತಮ್ಮ ವಯಸ್ಸಿನ ಹಿರಿತನ ಮರೆತು ನಮ್ಮನ್ನೆಲ್ಲ ವಿನೋದ ಸಾಹಿತ್ಯ ಲೋಕಕ್ಕೆ ಕರೆದೊಯ್ದು, ಕಚಗುಳಿ ಇಡುವ ನೆನಪುಗಳ ಮೂಲಕ ನಗೆಗಡಲಲ್ಲಿ ತೇಲಿಸಿದರು. ಇದೆಲ್ಲ ವೇದಿಕೆಗೆ ಹೊರತಾದ ಸಾಹಿತ್ಯ ಸಿಂಚನ.

ಬ್ರಾಹ್ಮಣ್ಯದ ಅಮಲೇರಿಸಿಕೊಳ್ಳದೇ ಕಲ್ಯಾಣ ಕರ್ನಾಟಕದ ಸಾಹಿತ್ಯ ಸಂಸ್ಕೃತಿ ಕಟ್ಟಿಬೆಳೆಸಿದ ಅನೇಕರಿದ್ದಾರೆ. ಅದರಲ್ಲೂ ಮುಖ್ಯವಾಗಿ ಶಾಂತರಸ, ಬೀಚಿ, ವಸಂತ ಕುಷ್ಟಗಿ, ಚೆನ್ನಣ್ಣ, ಗೀತಾ ನಾಗಭೂಷಣ ಹೀಗೆ ನಮ್ಮ ಭಾಗದ ಸಾಹಿತ್ಯ ದಿಗ್ಗಜರ ಬದುಕು ಸಾಧನೆ, ನಿತ್ಯ ಜೀವನದ ಅನೇಕ ಘಟನೆಗಳು ಪ್ರಾಸಂಗಿಕವಾಗಿ ಎಲ್ಲರ ಬಾಯಲ್ಲಿ ಅಂದು ಸುಳಿದು ಸೂಸಿದವು. ಜಮದರಖಾನಿ ಬಸರಾಜಣ್ಣ, ಕಲ್ಯಾಣರಾವ ಪಾಟೀಲ, ನಾಗಾಬಾಯಿ ಬುಳ್ಳಾ, ಬಸವರಾಜ ಸಬರದ, ಲಿಂಗಾರೆಡ್ಡಿ ಶೇರಿ, ಬಸವರಾಜ ಕೊನೇಕ, ಡಿ. ಎಂ. ನದಾಫ್, ಸುನೀಲ ಮಾನಪಡೆ, ಶರಣಬಸಪ್ಪ ವಡ್ಡನಕೇರಿ, ಸಿದ್ದಪ್ಪ ತಳ್ಳಳ್ಳಿ, ಕೆ. ಎಸ್. ನಾಯಕ್, ಕೆ. ಶಶಿಕಾಂತ, ಚಂದ್ರಕಲಾ, ಶಕುಂತಲಾ, ಮೈನಾ, ಶೈಲಜಾ, ಪ್ರಭಾಕರ ಜೋಶಿ, ಪ್ರಭು ಖಾನಾಪುರೆ, ಶೇಷಮೂರ್ತಿ ಅವಧಾನಿ, ಶ್ರೀನಿವಾಸ ಸಿರನೂರಕರ್, ಲಿಂಗಪ್ಪ ಗೋನಾಲ, ವಿಶ್ವರಾಜ ಪಾಟೀಲ, ಮಲ್ಲಿನಾಥ ತಳವಾರ ಹೀಗೆ ಕಲ್ಯಾಣ ಕರ್ನಾಟಕ ನಾಡಿನ ಪುಟ್ಟದೊಂದು ಸಾಂಸ್ಕೃತಿಕ ಲೋಕ ಸಮಾವೇಶವೇ ಅದಾಗಿತ್ತು. ಪ್ರಶಸ್ತಿ ಪ್ರದಾನದ ಜತೆಗೆ ಸಮಾರಂಭದಲ್ಲಿ ಒಂಬತ್ತು ಪುಸ್ತಕಗಳ ಬಿಡುಗಡೆ. ವಚನ ಗಾಯನ. ಪುಷ್ಕಳ ಭೋಜನ.

ಇಡೀ ಕರ್ನಾಟಕದಲ್ಲಿ ಪ್ರಾಯಶಃ ಇಂತಹದ್ದೊಂದು"ಲೇಖಕರ ಮತ್ತು ಓದುಗರ ಸಹಕಾರ ಸಂಘ" ಇನ್ನೊಂದು ಇರಲಿಕ್ಕಿಲ್ಲವೆಂಬ ಮಾಹಿತಿ ನನ್ನದು. ಸರಕಾರದ ನೆರವಿಲ್ಲದೆ ಸಹಕಾರ ತಳಹದಿ ಮೇಲೆ ಕಳೆದ ಹದಿನಾರು ವರುಷಗಳಿಂದ ನೂರೈವತ್ತಕ್ಕು ಹೆಚ್ಚು ಪುಸ್ತಕಗಳ ಪ್ರಕಟಣೆ. ಪುಸ್ತಕಗಳಿಗೆ ಪ್ರಶಸ್ತಿ ಮತ್ತು ಐದು ಸಾವಿರ ನಗದು. ಈ ಬಾರಿ ಅವರ ಪ್ರಮುಖ ಪ್ರಸ್ತಾವ ಹೀಗಿತ್ತು.

"ಜೈಪುರ ಫೆಸ್ಟ್ ಮಾದರಿಯಲ್ಲಿ ಕಲ್ಯಾಣ ಕರ್ನಾಟಕದ ಸಾಹಿತ್ಯ ಸಂಭ್ರಮ ನಮ್ಮ ಕಲಬುರಗಿಯಲ್ಲಿ ಜರುಗುವಂತಾಗಬೇಕು." ಈಗಾಗಲೇ ಬೆಂಗಳೂರು ಮತ್ತು ಧಾರವಾಡ ಸಾಹಿತ್ಯ ಸಂಭ್ರಮಗಳು ಜರುಗುತ್ತಿರುವುದನ್ನು ಉಲ್ಲೇಖಿಸಿ ಅಕ್ಕೋಣಿ ಮತ್ತು ಕುಲಕರ್ಣಿ ಸರ್ಕಾರಕ್ಕೆ ಆಗ್ರಹಿಸಿದರು. ಈ ಹಿಂದೆ ಆದಿತ್ಯ ಅಮ್ಲಾನ್ ಬಿಸ್ವಾಸ್ ಗುಲಬರ್ಗಾ ಪ್ರಾದೇಶಿಕ ಆಯುಕ್ತರಾಗಿದ್ದಾಗ ನಮ್ಮ ಭಾಗದ ಲೇಖಕರು, ಪ್ರಕಾಶಕರು ಮತ್ತು ಅವರ ಪುಸ್ತಕಗಳ ಸಗಟು ಖರೀದಿ ಮಾಡುತ್ತಿದ್ದರು. ಆ ಯೋಜನೆಯನ್ನು ಪುನಃ ಜಾರಿಗೆ ತರಬೇಕೆಂದು ಕೋರಿದರು. ಅದಕ್ಕೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಅಜಯಸಿಂಗ್ ಸಕಾರಾತ್ಮಕವಾಗಿ ಸ್ಪಂದಿಸಿ, ಮುಖ್ಯಮಂತ್ರಿ ಅವರನ್ನು ಸಂಪರ್ಕಿಸಿ ಆಗುಮಾಡುವ ಭರವಸೆಯ ಮಾತಾಡಿದರು. ಅದಕ್ಕೆ ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರು ಬೆಂಬಲ ವ್ಯಕ್ತ ಪಡಿಸಿದರು.

-ಮಲ್ಲಿಕಾರ್ಜುನ ಕಡಕೋಳ
9341010712

MORE NEWS

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...