`ಹಂಡೆ ಅರಸರ ಬದುಕಿನಲ್ಲಿ ನಾನು ಕಂಡಂತೆ ಸತ್ಯ, ಸೌಮ್ಯ, ಸಮಾಜಸೇವೆ, ನ್ಯಾಯ, ಸಾಂಸ್ಕೃತಿಕ ನೆಲೆ, ರಾಜಧರ್ಮ ಎದ್ದು ಕಾಣುತ್ತಿವೆ. ಹಂಡೆ ಹನುಮಪ್ಪ ನಾಯಕನಂತೂ ಎಲ್ಲ ಕ್ಷೇತ್ರಗಳಲ್ಲೂ ನಾಯಕನೆ' ಎನ್ನುತ್ತಾರೆ ಹಿರಿಯ ಪುರಾತತ್ವವಿದ ಡಾ.ಎಸ್ ಕೆ ಜೋಶಿ. ಅವರು ಲೇಖಕ ಪ್ರೊ. ಎಸ್. ಸಿ. ಪಾಟೀಲ ಅವರ `ಬಳ್ಳಾರಿ- ಅನಂತಪುರದ ಅರಸ ಹಂಡೆ ಹನುಮಪ್ಪನಾಯಕ' ಕೃತಿಯ ಬಗ್ಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ.
ಮಾನವನ ಇತಿಹಾಸ ಬಹಳ ದೀರ್ಘ ಇತಿಹಾಸ. ಎಷ್ಟೊಂದು ದಶಮಾನಗಳು, ಶತಮಾನಗಳು, ಸಹಸ್ರಮಾನಗಳು ಸಂದಿಹೋಗಿವೆ. ಈವರೆಗೂ ಪೂರ್ವ-ಪಶ್ಚಿಮ ಗೋಲಾರ್ಧಗಳಲ್ಲಿ ಪ್ರಾಚೀನ ಮನುಕುಲದ ತೊಟ್ಟಿಲುಗಳಾದ ಯುಫ್ರೆಟಿಸ್, ಟೈಗ್ರಿ ಸ್, ನಾಯಿಲ್, ಇಂದಸ್, ಹೋವಾಂಗಹೋ ನದಿ-ಕೊಳ್ಳಗಳು ಅನನ್ಯ ಹಾಗೂ ಅದ್ಭುತ ಸಂಸ್ಕೃತಿಗಳನ್ನು, ನಾಗರಿಕತೆಗಳನ್ನು ನೀಡಿವೆ.
River basins are the products of civilizations ಎಂಬ ಸತ್ಯಸ್ಯಸತ್ಯದ, ಸತ್ಯಾರ್ಥಕ ವಾಸ್ತವಕ್ಕೆ ಈ ವಾಕ್ಯ ದೃಢೀಕರಿಸುತ್ತದೆ. ಆಯಾ ಜನಾಂಗ ನೀಡಿದ ಬದುಕಿನ ಗುಣಮೌಲ್ಯಗಳೇ ನಿಯಮಬದ್ಧವಾದ ಸಾಮಾಜಿಕ ಹರವುಗಳಾಗಿ ಚೌಕಟ್ಟಿನ ಬಂಧ ನೀಡಿ, ಸುಮಾರ್ಗ, ರಾಜಮಾರ್ಗಗಳನ್ನು ರಚಿಸಿ, ಸಾಮ್ರಾಜ್ಯಗಳಾಗಿ ನಾಮ್ನಗೊಂಡು ಬೆಳೆದಿವೆ (ಡಾ. ಎಸ್.ಆರ್. ರಾವ್).
ರೋಮನ್ ಸಾಮ್ರಾಜ್ಯ, ಗ್ರೀಕ ಸಾಮ್ರಾಜ್ಯ, ಫ್ಯಾರಹೊ ಸಾಮ್ರಾಜ್ಯ, ಇಂದಸ್ ವೇದಿಕ್ ಸಾಮ್ರಾಜ್ಯ, ಮಿಂಗ ಸಾಮ್ರಾಜ್ಯ, ಮಾಯಾ-ಆತ್ಸೆಕ್ (maya-aztec) ಮ್ಯಾಕ್ಸಿಕನ್ ಸಾಮ್ರಾಜ್ಯ ಹೀಗೆ ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಬಲಿಷ್ಠ ಜನಾಂಗೀಯ ಶಕ್ತಿಗಳು ಬೆಳೆದು ನಿಂತವು. ಹಾಗೂ ಮಾನವನ ಇಡಿಯಾದ ಜಾಗತಿಕತೆ ನಿರ್ಮಿಸಿದವು
(Glimpses of World History - Jawaharlal Nehru).
ಪ್ರತಿಯೊಂದು ಸಾಮ್ರಾಜ್ಯವು ತನ್ನದೇ ಆದ ರಾಜವಂಶಗಳನ್ನು ಬೆಳೆಸಿತು, (kingly dynasties) ರಾಜವಂಶಗಳನ್ನು ಲಿಖಿತ ರೂಪದಲ್ಲಿ ಬರೆಯುವ ಇತಿಹಾಸಕಾರರೂ ಬೇಕಾದರೂ ಸಮಯದ ಅವಶ್ಯಕತೆಗೆ ಅನುಗುಣವಾಗಿ, ಅಂಥ ಇತಿಹಾಸಕಾರರೂ ಆಯಾ ರಾಜ್ಯ ಮೇರೆಗಳ ಒಳಗಡೆ ಬೆಳೆದರು ಹಾಗೂ ಅವರ ರಾಜಾಶ್ರಯವನ್ನು(Roval favour) ಪಡೆದರು. ಇಂಥ ಇತಿಹಾಸಕಾರರು ಆಗಾಗಿನ ಸಮಯೋಚಿತ ಐತಿಹಾಸಿಕ ಘಟನೆಗಳನ್ನು ತಮ್ಮ ಇತಿಹಾಸ ಹೊತ್ತಿಗೆಗಳಲ್ಲಿ ಅಳವಡಿಸಿದರು. ಹೀಗಾಗಿ ರಾಜ ಚರಿತ್ರೆಗಳು ವಂಶದಿಂದ ವಂಶಕ್ಕೆ ತಲೆತಲಾಂತರದಿಂದ ( Generation to Generation) ಈಗಿನ ನಮ್ಮ ಸಮಕಾಲೀನ ಕಾಲದವರೆಗೂ ಮುಂದುವರಿಸಿವೆ. ಅವುಗಳು (Historical Memories of Archival Value) ಎಂದು ಜನಮಾನಸಕ್ಕಾಗಿ ಜ್ಞಾಪಕಕ್ಕಾಗಿ ರಾಜರುಗಳ (ಗ್ರಂಥ ಸಂಗ್ರಹಾಲಯಗಳಲ್ಲಿ) ಸಂರಕ್ಷಿಸಲ್ಪಟ್ಟವು. ಎಲ್ಲಿ ಅಂಥ ಗ್ರಂಥಾಲಯಗಳೋ ಅಲ್ಲಿ ರಾಜವಂಶಾವಳಿಯ ದಾಖಲೆಗಳು, ಇತಿಹಾಸದ ಆಕರಗಳು ಲಭ್ಯ. ಅನೇಕ ರಾಜವಂಶಗಳು ಉದಯಾಸ್ತ ಮಾನಗಳಾಗಿವೆ. ಎಲ್ಲೆಡೆ ರಾಜವಿಪ್ಲವಗಳು ಘಟಿಸಿದಂತೆ ಇಲ್ಲಿಯೂ ಭವ್ಯ ಭಾರತದಲ್ಲಿಯೂ ಪ್ರಾದೇಶಿಕ ರಾಜ್ಯಗಳಾದ ಕರುನಾಡಿನಲ್ಲೂ ಪ್ರಾಚೀನ ಕಾಲದಿಂದ ಬದಲಾವಣೆಗಳು ಆಗಿವೆ. ಕಾಲಗರ್ಭದಲ್ಲಿ ವಿವಿಧ ಶಕ್ತಿಗಳು ಒಂದರ ಮೇಲೊಂದು ವರ್ತಿಸುತ್ತ, ಪ್ರವರ್ತಿಸುತ್ತ ಹೆಚ್ಚಿನ ಗೊಂದಲ ಹಾಗೂ ದಿಗ್ಬ್ರಮೆಗೊಳಿಸುವ ಐತಿಹಾಸಿಕ ಪ್ರಕ್ರಿಯೆಗಳು ನಡೆದಿವೆ, (historical events & drama) ಈ ಭೂಮಿಯಲ್ಲಿ ಸಮ್ಮಿಶ್ರ ಸಂಸ್ಕೃತಿ ರಚಿಸಲು ಅನೇಕ ರಾಜನಟರು(roles) ಮಹತ್ತ್ವದ ಪಾತ್ರ ವಹಿಸಿದ್ದಾರೆ(ಡಾ. ಬಿ. ಶೇಖ್ ಅಲಿ).
ಕದಂಬ, ಚಾಳುಕ್ಯ, ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ ಗಂಗ, ಹೊಯ್ಸಳ ವಿಜಯನಗರ ದಕ್ಷಿಣ ಸುಲ್ತಾನರು ರಾಜ್ಯಗಳ ರಾಜವೈಭವದ ಇತಿಹಾಸ ಮೆರೆದಿವೆ. ಏಳು-ಬೀಳುಗಳಿದ್ದರೂ ಕರುನಾಡಿನಂಥ ಅಂತಃಸತ್ತ್ವಗಳು ಅವಗಡಗಳನ್ನು, ಆಘಾತಗಳನ್ನು ಸಂಕೀರ್ಣ ರಾಜಕೀಯ ಬದುಕನ್ನು ತಂದು ಕೊಂಡಿವೆ, ಹಾಗು ಅವುಗಳನ್ನು ದಾಟಿವೆ, ಜಯಶಾಲಿಯಾಗಿವೆ ಹಾಗು ಇತಿಹಾಸ ದಾಖಲಿಸಿವೆ.
ಕಾಲಕ್ರಮೇಣ ರಾಜಧರ್ಮದ ಪಾರ್ಶ್ವದಲ್ಲಿ ಪ್ರವರ್ಧಮಾನ ನೀತಿ ನಡೆವಳಿಕೆಯಲ್ಲಿ ಸುಂದರ ವೈವಿಧ್ಯಪೂರ್ಣ ಸಮಾಜವನ್ನು ಕಟ್ಟುವ ಸಾಂಸ್ಕೃತಿಕ ಪ್ರಕ್ರಿಯೆಗಳನ್ನೂ ಕೈಗೊಂಡಿವೆ. ಈ ನಾಡು ಚಿತ್ತಾಕರ್ಷವಾಗಿರುವುದು ಕೇವಲ ರಾಜಕೀಯ ಇತಿಹಾಸ ಮಾತ್ರದಿಂದಲ್ಲ. ಮಾನವತೆ, ಲಾಕ್ಷ್ಯಣ್ಯದ ಸಮಾಜದ ಆಡಳಿತ ವ್ಯವಹರಣೆ, ಸಾಹಿತ್ಯ, ಹಬ್ಬ-ಹರಿದಿನಗಳ ವ್ಯವಸ್ಥೆ, ಸತ್ಯ, ನ್ಯಾಯ, ಸೌಖ್ಯ ನೆಮ್ಮದಿಗಳಿಂದ ಶ್ರೀಮಂತವಾದ ಜನತೆಯ ಬದುಕನ್ನು ರಾಜವಂಶಗಳು ನಿರ್ಮಿಸಿವೆ.
ಗುಣಮಟ್ಟದ ಹೋರಾಟಗಳು ಕರುನಾಡಿನಲ್ಲಿ ಕಾವೇರಿಯಿಂದ ಗೋದಾವರಿಯವರೆಗೆ ನಡೆದಿವೆ. ಮಾನವನ ಸರ್ವತೋಮುಖ ಅಭಿವೃದ್ಧಿಗೆ ಸದಾ ಸರ್ವದಾ ಇನ್ನುಳಿದ ಪ್ರದೇಶಗಳಿಗಿಂತ ಮುಂಚೂಣಿಯಲ್ಲಿದೆ ಈ ಪ್ರದೇಶ. ಶಿಲ್ಪಕಲೆ, ಚಿತ್ರಕಲೆ, ಸಂಗೀತ, ನೃತ್ಯಗಳೂ ಬೆಳೆದಿವೆ. ಶಂಕರ, ರಾಮಾನುಜ ಮಧ್ವ, ಬಸವೇಶ ಮುಂತಾದ ದಾರ್ಶನಿಕರು ಚಿಂತಕರು ಪ್ರವರ್ತಿಸಿದ ನುಡಿಗಳು ಮಾನವನ ಆತ್ಮದ ಆಳವನ್ನು ಅಗಲವನ್ನು ವಿಫುಲವಾಗಿ ಅನಾವರಣಗೊಳಿಸಿವೆ.
ಇಲ್ಲಿ ಅಧ್ಯಾತ್ಮವಿದೆ, ಸಾಹಿತ್ಯ ಮೂಡಿದೆ, ಮಾನವತೆಯ ಸುಂದರ ಸೌಧ ನಿರ್ಮಾಣವಾಗಿದೆ. ಸಾಂಸ್ಕೃತಿಕ ಪರಂಪರೆಯ ನೆಲೆಗಟ್ಟು ನಿರ್ಮಾಣವಾಗಿದೆ. ಈ ನಾಡ ನೆಲದಲ್ಲಿ ದೊಡ್ಡವರ ಮಾತು, ಹಿಂದಿನವರ ಬದುಕು, ಮುಂದಿನವರಿಗೆ ದಾರಿದೀಪ. ಭೂತದಿಂದ ವರ್ತಮಾನದ ನಿರ್ಮಾಣ ಭವಿಷ್ಯದ ಬದುಕಿನ ನಿರ್ಮಿತ ಬದುಕು ಕಟ್ಟಿಕೊಳ್ಳುವ ವಿಕ್ರಮ. ಕರ್ನಾಟಕದಲ್ಲಿ ಬೆಳೆದ ವೈವಿಧ್ಯ ದೈವ ಚಿಂತನೆಯು ಇಡೀ ಭಾರತ ಚೇತನಕ್ಕೆ ನೀಡಿದ ಮುನ್ನುಡಿ. ಅರ್ಥಪೂರ್ಣ ಬದುಕಿನ ಸಂವಿಧಾನ. ಕನ್ನಡ ನಾಡಿನ ಹಿರಿಯ ಸಾಮ್ರಾಜ್ಯವೇ ಇರಲಿ, ಅಥವಾ ಹಂಡೆ ಮನೆತನದಂಥ ರಾಜ್ಯಗಳೇ ಇರಲಿ ಅವುಗಳಿಂದ ಈ ಮುನ್ನುಡಿ ಈ ಸಂವಿಧಾನಗಳ ಬಾಗಿನ ದೊರೆಯುತ್ತದೆ ಎಂಬ ವ್ಯಾಖ್ಯಾನದಲ್ಲಿ ಎರಡು ಮಾತಿಲ್ಲ. ಬೇರೆ ಬೇರೆ ಐತಿಹಾಸಿಕ ಪಾತ್ರಗಳ ಅಧ್ಯಾತ್ಮಿಕ ಅವತಾರಗಳು ಎಲ್ಲಿಂದಲೋ ಹುಟ್ಟಿ ಎಂತಲೋ ಬೆಳೆದು, ಮನೋಭಾವ ಬೆಸೆದು ಸ್ನಿಗ್ಧರೂಪಗಳಾಗಿವೆ. ಬೇರೆ ಬೇರೆ ದಾರಿಗಳಿಂದ ನಡೆ ನಡೆದು, ನದಿಗಳು ಸಾಗರ ಸೇರುವಂತೆ, ಕೊನೆಗೊಂದು ತಾಣದಲ್ಲಿ ಒಂದುಗೂಡುತ್ತವೆ, ಕಥೆಗಳಾಗುತ್ತವೆ, ಕಥಾನಕಗಳಾಗುತ್ತವೆ, ಚರಿತ್ರೆಗಳಾಗುತ್ತವೆ, ಇತಿಹಾಸವಾಗುತ್ತವೆ. ಆ ಪಾತ್ರಗಳಲ್ಲಿ ಇತಿಹಾಸದುದ್ದಕ್ಕೂ ಎರಡು ಎದ್ದು ಕಾಣುವ ಪಾತ್ರಗಳ ಸಮ್ಮಿಲನವಿದೆ. ಒಂದನೆಯ ಪಾತ್ರ ದಾರ್ಶನಿಕರ ಪಾತ್ರ, ಅದಕ್ಕೆ ಜೋಡಣೆಗೊಂಡ ಎರಡನೆಯದು ಇತಿಹಾಸ ಕಟ್ಟಿದ ಶೂರ ರಾಜವಂಶದ ಅರಸರ ಪಾತ್ರ, ಇಬ್ಬರ ಪಾತ್ರಗಳು ಬೇಕೇ ಬೇಕು. ಇವರ ಪಾತ್ರಗಳಿಲ್ಲದಿದ್ದರೆ ನಾಡು ನಿರ್ಮಾಣವಾಗದು, ದೇಶ ನಿರ್ಮಾಣ ವಾಗದು, ರಾಷ್ಟ್ರ ನಿರ್ಮಾಣವಾಗದು (ಜಯತೀರ್ಥಾಚಾರ್ಯ ಮಳಗಿ).
“ಇತಿಹಾಸವೇ ನಮ್ಮ ಅತೀಗೂಢ ತತ್ವಗಳ
ಕತೆಯನ್ನು ಹೇಳುತ್ತ, ಮತಿಯನ್ನು ತಿಳಿಮಾಡಿ
ಹತರಾದ ಜನರೊಳುತ್ಸಾಹನ್ನೇರಿಸುತ್ತ ಮಾಡಿ ದೈಪುರುಷರನ್ನು
ಸ್ವರ್ಗ ಸಾಮಾಜ್ಯಗಳದೊಳಾಡುವೆನು, ಮನದ ಅರ್ಗಲೆಯು ಸರಿಯತೈ,
ಬಂತು ಕಲ್ಲಿಗೆ ಬಾಯಿ
ವೀರಗಲ್ಲುಗಳು ತಮ್ಮ ಬೋರ್ಗಲಭಾವವನ್ನು ಬಿಟ್ಟು
ಮಾತನಾಡುತಿಹವು, ಈ ನಾಡ ಕಥೆ ಹೇಳುತಿಹವು "
-(ಡಾ. ದ.ರಾ. ಬೇಂದ್ರೆ)
ಇತಿಹಾಸವು ನಮ್ಮ ಪ್ರಾಚೀನರ ಭೂತಕಾಲೀನ ಅತಿ ದೊಡ್ಡದಾದ ಹಾಗೂ ಇನ್ನೂ ನಮ್ಮ ಅರಿವಿಗೆ ಬರದಂಥ ತಿಳಿಯದಂಥ ತತ್ತ್ವಗಳ ನೀತಿಗಳನ್ನು ಹೊಕ್ಕ ಕಥಾನಾಯಕರ ಕತೆಗಳನ್ನು ಹೇಳುತ್ತದೆ. ನಮ್ಮ ಬುದ್ಧಿಯನ್ನು ಶುದ್ಧಮಾಡಿ, ತಿಳಿಮಾಡಿ ಇದ್ದೂ ಇಲ್ಲದಂತೆ ಹತಾಶ ನಿರ್ಜೀವರಂತಾದ ನಮ್ಮನ್ನು ಇಂದಿನ ದಿನಮಾನದ ಜನಸಾಗರವನ್ನು ಉತ್ಸಾಹಗೊಳಿಸುತ್ತದೆ. ಉಕ್ಕೇರಿಸುತ್ತದೆ ಹಾಗೂ ಅಂಥ ಉದಾಸೀನ ಜನರನ್ನು ಪೌರುಷದ ದಿಟ್ಟ ಧೈರ್ಯದ ಪುರುಷರನ್ನಾಗಿ ಮಾಡುತ್ತದೆ, ಗಟ್ಟಿ ಸಮಾಜವನ್ನು ಕಟ್ಟುತ್ತದೆ ಇತಿಹಾಸ.
ಈ ರೀತಿ ನಿರ್ಮಾಣವಾದ ಸ್ವರ್ಗ ಸಾಮ್ರಾಜ್ಯದಲ್ಲಿ ನಾನು ಸದಾ ವಿಹರಿಸುತ್ತೇನೆ. ಹೀಗಾಗಿ ಮನಸ್ಸಿನಲ್ಲಿ ಹುದುಗಿದ ಕತ್ತಲೆಯನ್ನು ಸರಿಸಿ ಬೆಳಕನ್ನು ಕಾಣುತ್ತೇನೆ. “ತಮಸೋಮಾ ಜ್ಯೋತಿರ್ಗಮಯ” ಎಂಬ ತತ್ತ್ವವೂ ನೀತಿಯೂ ನನ್ನದಾಗುತ್ತದೆ. ಅದಾಗಿ ಕತ್ತಲೆಯು ಕಳೆಯುತ್ತದೆ. ಮಳೆಯಲ್ಲಿ ಸುಮ್ಮನೆ ನೀರನ್ನು ಸುರಿಸಿಕೊಳ್ಳುತ್ತ ನಿಂತಂಥ ಬೋರ್ಗಲ್ಲುಗಳ ಮಳೆಯಲ್ಲಿ ನೆನೆವಂತೆ ವೀರಗಲ್ಲುಗಳು ಮಹಾಸತಿಕಲ್ಲುಗಳು, ಶಿಲಾಶಾಸನದ ಕಲ್ಲುಗಳು ಈಗ ಮೂಕವಾಗಿರದೇ ಅವುಗಳಿಗೆ ಮಾತುಗಳು, ಬಾಯಿನುಡಿಗಳು ಬಂದಿವೆ. ಮೂಕ ಭಾವವನ್ನು ಬಿಟ್ಟು ಶಿಲಾಶಾಸನ ಕಲ್ಲುಗಳು ಈಗ ಅವು ಮಾತಾಡ ತೊಡಗಿವೆ. ಪ್ರಾಚೀನರ ನಾಡಿನ ಕಥೆಯನ್ನು ಹೇಳ ತೊಡಗಿವೆ. ಇದೆಲ್ಲಾ ಪುರಾಭಿಲೇಖ ಶಾಸ್ತ್ರಜ್ಞರ ಪರಿಶ್ರಮದ ಪಠಣದಿಂದ ಸಾಧ್ಯವಾಗುತ್ತಿದೆ (Voice of Epigraphists), ಅದಕ್ಕಾಗಿ ಹೇಳಿದ್ದು ಮೂಕ ಕಲ್ಲುಗಳು ಮಾತಾಡ ತೊಡಗಿವೆಯೆಂದು.
ಇನ್ನು ಡಾ. ಎಸ್.ಸಿ. ಪಾಟೀಲರ ಕೃತಿ ಹಂಡೆ ಹನುಪ್ಪನಾಯಕನ ಬಗ್ಗೆ ಚಿಂತನೆಗೈಯುವ, ಬಳ್ಳಾರಿ ಅನಂತಪರ ದೊರೆ ಹಂಡೆ ಹನುಮಪ್ಪನಾಯಕ ಚಾರಿತ್ರಿಕ ಒಳನೋಟದ ಬಗ್ಗೆ ಒಂದು ಒಳ ನೋಟ. ಹಂಡೆ ಅರಸುಗಳ ಶೋಧನೆಗಳ ಹಿಂದೆ ಬಹು ಹಿಂದೆ (ಕ್ರಿ.ಶ. 1487-1583) ಪ್ರಾಮುಖ್ಯವಾಗಿ ಹಂಡೆ ಕುಲತಿಲಕ ರಾಜಾ ಹಂಡೆ ಹನುಮಪ್ಪನಾಯಕನ ವೈಭವೋಪೇತವಾದ ಕಾಲಕೀರ್ತಿಯ ಪರಿಕ್ರಮದಲ್ಲಿ ಡಾ. ಎಸ್.ಸಿ. ಪಾಟೀಲರು ನಮ್ಮನ್ನು ಕರೆದೊಯ್ಯುತ್ತಾರೆ. ಈ ಪ್ರಸ್ತುತ ಗ್ರಂಥದಲ್ಲಿ ಅನ್ವೇಷಣದ ತಿರುಗಾಟದಲ್ಲಿ ಕಾಲು ಸೋತಿರುವಾಗ ವಿಶ್ರಾಂತಿ ತೆಗೆದುಕೊಳ್ಳಲು ನೆರಳಿಗಾಗಿ ಆಸೆ ಪಡುವಾಗ ನಮಗೆ ದೊರೆಯುವುದು, ನೆರಳಿದ್ದ ಫಲಭರಿತ ಮರಗಳ ಬನ ಆ ಬನವೇ ಈ ಹಂಡೆ ಅರಸರ ಚರಿತ್ರೆ.
ಅಷ್ಟೊಂದು ಬೆಳಕಿಗೆ ಬಾರದ ಈ ಹಂಡೆ ಅರಸುಮನೆತನವನ್ನು ಹಾಗು ಅವರು ನಾಡಿಗೆ ನೀಡಿದ ಗಣನೀಯ ಕೊಡುಗೆಯನ್ನು ಜನಸಾಮಾನ್ಯರಿಗೆ, ಅಭ್ಯಾಸಿಗರಿಗೆ, ಸಂಶೋಧಕರಿಗೆ, ಇತಿಹಾಸಕಾರರಿಗೆ, ಪುರಾತತ್ವವಿದರಿಗೆ ಈ ಶಬ್ದ ನುಡಿಗುಚ್ಛದಲ್ಲಿ, ಗ್ರಂಥದಲ್ಲಿ ನೀಡಿದ್ದಾರೆ.
ಲೇಖಕರೇ ವಿಶ್ಲೇಷಿಸಿದಂತೆ ಸಣ್ಣ ಪುಟ್ಟ ಸಂಸ್ಥಾನಿಕರು, ಸಾಮಂತರು, ಮಾಂಡಲೀಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮಹಾರಾಜರಂತೆಯೇ ವೈಭವಪೂರ್ಣವಾಗಿ ಆಡಳಿತ ಮಾಡಿದ್ದಾರೆ. ಮಹಾರಾಜರು ಮಾಡುತ್ತಿದ್ದ ಪ್ರಜಾಹಿತದ ಎಲ್ಲ ಕಾರ್ಯಗಳನ್ನು ಹಂಡೆ ಅರಸರು ಸಹ ಅಷ್ಟೇ ನಿಷ್ಠೆಯಿಂದ, ಪ್ರಾಮಾಣಿಕವಾಗಿ ಮತ್ತು ಅನುಕರಣೀಯ ವಾಗುವಂತೆ ಮಾಡಿ ತೋರಿಸಿದ ಹೆಮ್ಮೆಗೂ ಕಾರಣೀಭೂತರಾಗಿದ್ದಾರೆ.
ಭೂಪ್ರದೇಶದ ಸೀಮಿತ ವಿಸ್ತರಣೆಯೊಂದಿಗೆ ಜನ ಸಾಮಾನ್ಯರಿಗೆ ತುಂಬ ಅವಶ್ಯಕವಾಗಿರುವ ಕೆರೆ, ಬಾವಿ, ಅರವಟ್ಟಿಗೆ, ಗುಡಿ, ಗುಂಡಾರ, ಕೋಟೆ-ಕೊತ್ತಲಗಳನ್ನು ನಿರ್ಮಿಸಿದ್ದಾರೆ. ಜನರಲ್ಲಿ ಸ್ವಾಭಿಮಾನ, ಆತ್ಮಪ್ರಜ್ಞೆ, ದೇಶಾಭಿಮಾನ, ಧೈರ್ಯ, ಉತ್ಸಾಹ, ತ್ಯಾಗ, ದಾನ, ಬಲಿದಾನ, ಧರ್ಮ, ಸಾಹಿತ್ಯ, ಕಲೆಗಳೊಂದಿಗೆ ಸಾಹಿತ್ಯಕ ಮೌಲ್ಯಗಳನ್ನು ಸಂರಕ್ಷಿಸಿಕೊಂಡು, ವೃದ್ಧಿಸಿಕೊಂಡು ಬಂದ ಹೆಮ್ಮೆ ಈ ಹಂಡೆ ನಾಯಕ ರಾಜಾಹನುಮಪ್ಪನಾಯಕನಿಗೂ ಹಾಗು ಚೆಲ್ಲುವರಿದು ಇತರೆ ನಾಯಕರಿಗೂ ಸಲ್ಲುತ್ತದೆ.
ಹಾಗೆ ನೋಡಿದಲ್ಲಿ ಡಾ. ಎಸ್.ಸಿ. ಪಾಟೀಲರು ಹಂಡೆ ಅರಸರ ಹುಡುಕುವಿಕೆಯಲ್ಲಿ ನಮ್ಮನ್ನು ಬಹಳ ಸುತ್ತಿಸಿದ್ದಾರೆ. ಕ್ಷೇತ್ರಸಮೀಕ್ಷೆಯಲ್ಲಿ ಹತ್ತು ಹಲವಾರು ತಾಣಗಳಿಗೆ ಕರೆದುಕೊಂಡು ಬೌದ್ಧಿಕವಾಗಿ ನಡೆಸುತ್ತ ಹೋಗಿದ್ದಾರೆ:
ಕೂಡ್ಲಗಿ ಶೃಂಗೇರಿಮಠ, ಜಗದ್ಗುರು ಕೊಟ್ಟೂರು ಪೀಠ, ಆಂಧ್ರದ ನಿಡಿಮಾಮಿಡಿ ಮಠ ಹೀಗೆ ಯರಗುಡ್ಡದ ಶಾಸನ(ಆಂಧ್ರ), ಕಾಂಚನಗಢ ಶಾಸನ(ಶಿರಗುಪ್ಪ ತಾ.), ಮರಳಿ(ತಾ ಲಿಂಗಸಗನೂರು), ಬಾದರ್ಲಿ(ಸಿಂಧನೂರು ತಾ), ಅಂದ್ರಾಳು (ಬಳ್ಳಾರಿ ಜಿಲ್ಲೆ), ಮುಕ್ಕುಂದ(ಸಿಂಧನೂರು ತಾ.), ಎಮ್ಮಿಗನೂರು(ಬಳ್ಳಾರಿ ಜಿಲ್ಲೆ) ಮುದಗಲ್ಲು (ರಾಯಚೂರು ಜಿಲ್ಲೆ), ಕಡದರಬೆಂಚಿ(ಆಂಧ್ರ), ಹೆಮ್ಮಡಗಿ(ಸುರಪುರ ತಾ), ಮುತ್ತಗಿ(ಬಸವನಬಾಗೇವಾಡಿ), ಬೇಲೂರು(ಮುದ್ದೇಬಿಹಾಳ ತಾ.), ಮನಗೂಳಿ (ವಿಜಯಪುರ ಜಿಲ್ಲೆ), ಹಂದರಕಿ(ಕಲಬುರ್ಗಿ ಜಿಲ್ಲೆ), ಚಿಂಚೋಳಿ (ಕಲಬುರ್ಗಿ ತಾ.), ಮಂಗಳವೇಢ(ಭುವನಗಿರಿ, ಆಂಧ್ರ), ಹಂಪಿ(ವಿಜಯನಗರ ಜಿಲ್ಲೆ), ಬೇವಿನಹಳ್ಳಿ(ಚಿತ್ರದುರ್ಗ), ಅನಂತಪುರ(ಆಂಧ್ರ), ಕೊತ್ತಚೆರುವು(ಆಂಧ್ರ), ನಿಡಿಮಾಮಿಡಿ(ಆಂಧ್ರ), ಕನಕದುರ್ಗಾದೇವಿ ದೇವಸ್ಥಾನ, (ಬಳ್ಳಾರಿ), ಅಮರಾಪುರ(ಈಶ್ವರ ದೇವಸ್ಥಾನ ಬಳ್ಳಾರಿ ಜಿ), ಗುತ್ತಗನೂರು(ಬಸವೇಶ್ವರ ದೇವಾಲಯ), ತೆಕ್ಕಲಕೋಟೆ(ಈಶ್ವರ ದೇವಾಲಯ), ತೆಗ್ಗಿನಹಳ್ಳಿ(ಈಶ್ವರ ಗುಡಿ), ಶಿರಿಗೇರಿ(ಹನುಮದೇವಸ್ಥಾನ), ಶಂಕರಬಂಡಿ(ಈಶ್ವರ), ಅಸುಂಡಿ (ಈಶ್ವರ), ಕಂಪ್ಲಿ(ನಾಗೇಶ್ವರ), ಎಮ್ಮಿಗನೂರು(ಮಲ್ಲಿಕಾರ್ಜುನ), ಬೈಲೂರು(ಈಶ್ವರ), ವೀರಾ ಪುರ(ಬಸವೇಶ್ವರ), ಹೊಳಲಗುಂದಿ(ಆಂಧ್ರಪ್ರದೇಶ), ಸೊನ್ನಲಾಪುರ(ಸಿದ್ಧ ರಾಮೇಶ್ವರ), ಮಹಾರಾಷ್ಟ್ರ, ಈ ರೀತಿ ಇನ್ನೂ ಹಲವಾರು ದೇವಾಲಯಗಳು ಹನುಮಪ್ಪನಾಯಕನ ಕೀರ್ತಿಯನ್ನು ಸಾರುತ್ತವೆ.
ದೇವಾಲಯ ವಿನ್ಯಾಸಗಳಲ್ಲಿ ವೈವಿಧ್ಯತೆಯನ್ನು ಏಕಕೂಟ, ದ್ವಿಕೂಟ, ತ್ರಿಕೂಟ, ಪಂಚಕೂಟಗಳನ್ನು ಹನುಮಪ್ಪನಾಯಕನು ತಾನು ನಿರ್ಮಿಸಿದ ದೇವಾಲಯಗಳಲ್ಲಿ ಬಹುವಾಗಿ ಉಪಯೋಗಿಸಿದ್ದಾನೆ. ಚಿತ್ರಕಲಾ ಶೈಲಿ, ಶಿಲ್ಪ, ದೀಪಸ್ತಂಭ, ಗರುಡಸ್ತಂಭ, ನಂದಿಮಂಟಪ, ಗೋಪುರಗಳು, ಪುಷ್ಕರಣಿಗಳು, ವಿವಿಧ ಮಠಗಳಿಗೆ ದಾನದತ್ತಿ ನೀಡಿಕೆ, ಕೆರೆಗಳು, ಬಾವಿಗಳು, ಕೋಟೆಗಳು, ಅಣೆಕಟ್ಟುಗಳು, ಸರೋವರಗಳು, ಕಾಲುವೆಗಳು, ಅರಮನೆಗಳು, ರಾಣಿಮಹಲುಗಳು, ಆಡಳಿತ, ನ್ಯಾಯ, ಸಾಹಿತ್ಯ, ಚಿತ್ರಕಲೆ, ಶಿಲ್ಪಕಲೆ ಇವುಗಳಿಗೂ ಮಹತ್ತ್ವ ನೀಡಿದ್ದಾನೆ.
ಹಂಡೆ ಹನುಮಪ್ಪನಾಯಕನು ವೈಭವೋಪೇತ ಆಡಳಿತ ಕೈಗೊಂಡು ಬೇರೆ ಬೇರೆ ಕಡೆಗಳಲ್ಲಿ ರಾಜಧಾನಿಗಳನ್ನು ನಿರ್ಮಿಸಿ, 16ನೆಯ ಶತಮಾನದ ಹಂಡೆ ಅರಸರ ಮೂಲ ಪುರುಷನಾಗಿ ಹಂಡೆ ಅರಸರ ಜೀವನದ ಕಾಮನಬಿಲ್ಲಿನ, ಸಪ್ತವರ್ಣದ ನಡುನೆತ್ತಿಯ ಮುಡಿಯಾಗಿ, ಕನ್ನಡ ನಾಡಿನ ಇತಿಹಾಸದಲ್ಲಿ ಅಂದಗೊಂಡಿದ್ದಾನೆ. ಬೆಳ್ಳಿಚುಕ್ಕಿಯಾಗಿ ಕಂಗೊಳಿಸಿದ್ದಾನೆ.
ಪ್ರೊ. ಎಸ್ ಸಿ ಪಾಟೀಲರ ಈ ಗಣನೀಯ ಗ್ರಂಥವು ಈವರೆಗೆ ಇತಿಹಾಸದಲ್ಲಿ ಅರಿಯದವರನ್ನು ಅರಿತವರನ್ನಾಗಿ ಮಾಡುತ್ತದೆ. ಇದು ಅವರ ಸಂಶೋಧನೆಯ ಹಲವಾರು ವರ್ಷಗಳ ಬಹುದೊಡ್ಡ ಅಧ್ಯಯನದ ತಪಸ್ಸಿನಫಲ, ಐತಿಹಾಸಿಕ ಸಾರಸ್ವತ ಲೋಕಕ್ಕೆ, ಇತಿಹಾಸಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಹಂಡೆ ಅರಸರನ್ನು ಉಪೇಕ್ಷಿಸುವುದು ಬೇಡ, ಅವರಿಂದ ಅಪೇಕ್ಷಿಸುವುದು ಬೇಕು.
ಹಂಡೆ ಅರಸರ ಬದುಕಿನಲ್ಲಿ ನಾನು ಕಂಡಂತೆ ಸತ್ಯ, ಸೌಮ್ಯ, ಸಮಾಜ ಸೇವೆ, ನ್ಯಾಯ, ಸಾಂಸ್ಕೃತಿಕ ನೆಲೆ, ರಾಜಧರ್ಮ ಎದ್ದು ಕಾಣುತ್ತಿವೆ. ಹಮಡೆ ಹನುಮಪ್ಪನಾಯಕನಂತೂ ಈ ಎಲ್ಲ ಕ್ಷೇತ್ರಗಳಲ್ಲೂ ನಾಯಕನೆ, ಡಾ. ಎಸ್. ಸಿ. ಪಾಟೀಲರು ಅವರ ಗ್ರಂಥಕ್ಕೆ ಮುನ್ನುಡಿ ಬರೆಯಲು ಕೇಳಿದ್ದು ನನ್ನ ಸೌಭಾಗ್ಯವೆಂದೇ ಗಣಿಸುವ ಡಿ.ವಿ.ಜಿ.ಯವರ ಮಾತನ್ನು ಇಲ್ಲಿ ಸ್ಮರಿಸುವೆ.
“ಮಾತಿಲ್ಲದೆ ಮುದ್ದಾದ ಮಲ್ಲಿಗೆಯಂತೆ ಸುಗಂಧವಿತ್ತ, ಕಣ್ಣು ಕುಕ್ಕದ ಮಂದ ಹಣತೆಯಂತೆ, ಹಿತವಾದ ಬೆಳಕಿನತ್ತ ಆರ್ಭಟವಿಲ್ಲದ ಪ್ರಶಾಂತ ನದಿಯ ಪ್ರವಹದಂತೆ” ಅವರ ಬದುಕು ನನಗೆ ಕಂಡಿದೆ. ಈ ಹಂಡೆ ಅರಸರ ಅಸ್ತಿತ್ವ, ಆದರ್ಶತೆಗೆ, ಇಷ್ಟು ಸಾಕು, ಭದ್ರಂ ಶುಭಂ ಮಂಗಲಮ್.
"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...
ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...
"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...
©2025 Book Brahma Private Limited.