ಕಲೆ ಒಂದು ಧ್ಯಾನವಾಗಿದೆ : ಮದನ್‌ ಸಿ.ಪಿ.


"ರವಿ ಕಾಣದ್ದನ್ನು ಕವಿ ಕಂಡ ; ಕವಿಯೂ ಕಾಣದನ್ನ ಶಿಲ್ಪಿ ಕಂಡ ಎನ್ನುವ ಮಾತಿದೆ. ಚಿತ್ರಕಲೆ ಅನ್ನುವುದು ಒಂದು ರೀತಿಯ ಶಾಂತ ಧ್ಯಾನ" ಎನ್ನುತ್ತಾರೆ ಸಾಧನಾ ಶಾಸ್ತ್ರಿ (ವಿದ್ಯಾರ್ಥಿನಿ) . ಅವರು ಕಲಾವಿದ ಮದನ್ ಸಿ.ಪಿ. ಅವರ ಜೊತೆ ನಡೆಸಿದ ಸಂದರ್ಶನ ನಿಮ್ಮ ಓದಿಗಾಗಿ...

ರವಿ ಕಾಣದ್ದನ್ನು ಕವಿ ಕಂಡ ; ಕವಿಯೂ ಕಾಣದನ್ನ ಶಿಲ್ಪಿ ಕಂಡ ಎನ್ನುವ ಮಾತಿದೆ. ಚಿತ್ರಕಲೆ ಅನ್ನುವುದು ಒಂದು ರೀತಿಯ ಶಾಂತ ಧ್ಯಾನ .ಕಲಾ ಕುಂಚ ಹಿಡಿದು ಕುಳಿತರೆ ಯಾವ ತಪಕ್ಕೂ ಕಡಿಮೆ ಎನಿಸುವುದಿಲ್ಲ. ಹಾಗೆಯೇ ಕುಂಚದಲ್ಲಿ ಬಣ್ಣ ತುಂಬಿ ಅದೆಷ್ಟೋ ಕಲಾಕೃತಿಗಳಿಗೆ ಜೀವಂತಿಕೆಯ ಭಾವ ತುಂಬಿಸಿದವರು ಮದನ್ ಸಿ ಪಿ.

ನಿಮ್ಮ ಬಗ್ಗೆ?
ನಾನು ಮದನ್ ಮೂಲತಃ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಚರಸಿಗೆರೆ ಎನ್ನುವ ಊರಿನವನು. ನನ್ನ ಬಾಲ್ಯ ಪ್ರಾಥಮಿಕ ಶಿಕ್ಷಣ ಎಲ್ಲವೂ ಅಲ್ಲಿಯ ಸರ್ಕಾರಿ ಶಾಲೆಯಲ್ಲಿ ಕಲಿತದ್ದು. ಕಲೆಯ ಕಾಲೇಜಿಗೆ ಸೇರಬೇಕು ಅನ್ನುವ ಆಸೆ ಇದ್ರೂ ಕೂಡ ಆಗ ಮನೆಯಲ್ಲಿ ಇರಬಹುದು ಅಥವಾ ಹಲವು ಕಾರಣದಿಂದ ಸೇರಲು ಆಗಿರಲಿಲ್ಲ. ಕೊನೆಗೆ ಡಿಪ್ಲೊಮಾ ಸೇರಿದೆ. ಅದಾದಮೇಲೆ ಕೆಲಸ ಅಥವಾ ಇಂಜಿನಿಯರಿಂಗ್ ಎನ್ನುವ ಆಯ್ಕೆ ಇತ್ತು. ಬೆಂಗಳೂರಿಗೆ ಬಂದೆ. ಅಲ್ಲೇ ಒಂದು ವರ್ಷ ಆಚೀಚೆ ಹಾಗೆ ಕಳೆದು ಹೋಯ್ತು. ಆ ಒಂದು ವರ್ಷದ ಅವಧಿಯಲ್ಲಿ ನಾನು ಬಿಡಿಸಿದ್ದ ಚಿತ್ರಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಾಕ್ತಾ ಇದ್ದೆ. ಆಗ ಒಳ್ಳೆಯ ಅಭಿಪ್ರಾಯ ಹಾಗೂ ಪ್ರೋತ್ಸಾಹ ಸಿಕ್ಕಿತ್ತು. ಬಹುಶಃ ಅಲ್ಲೇ ಒಂದು ತಿರುವು ನನಗೆ ಹಾಗೂ ಚಿತ್ರಕಲೆಗೆ ಸಿಕ್ತು ನಂತರ ನಾನು ಇಂಜಿನೀಯರಿಂಗ್ ಮಾಡಿದೆ. ಈಗ ಸದ್ಯಕ್ಕೆ ನಾನು ಏರೋಸ್ಪೇಸ್ ಕ್ಷೇತ್ರದ ವೃತ್ತಿಯಲ್ಲಿ ಇದ್ದರೂ ಕೂಡ ಅಲ್ಲಿಯೂ ವಿನ್ಯಾಸಗಾರ. ಉಳಿದ ಸಮಯದಲ್ಲಿ ನಾನೊಬ್ಬ ಕಲಾವಿದ. ಇಲ್ಲಿ ಹೇಗೆ ಅಂದ್ರೆ ವೃತ್ತಿ ಜೊತೆಗೆ ನನ್ನ ಹವ್ಯಾಸ ಇಷ್ಟಗಳು ಎರಡೂ ಕಡೆಗೂ ಒಂದೇ ಆಗಿದೆ. ಆದರೆ ಮಾಡುವ ರೀತಿ ಬೇರೆ ಅಷ್ಟೇ.

ಚಿತ್ರಕಲೆಯಲ್ಲಿ ನಿಮ್ಮ ಆಸಕ್ತಿ ಶುರುವಾದದ್ದು ಯಾವಾಗ ? ಹೇಗೆ ?
ಚಿತ್ರಕಲೆಯ ಮೇಲೆ ಆಸಕ್ತಿ ಚಿಕ್ಕ ವಯಸ್ಸಿನಲ್ಲಿಯೆ ಇತ್ತು. ಶಾಲೆಯಲ್ಲಿ ಪಠ್ಯದ ಚಿತ್ರಗಳು ; ಯಾವ್ದೋ ಚಾರ್ಟ್ ಮಾಡುವುದು ಹೀಗೇ ಸರ್ಕಾರಿ ಶಾಲೆ ಆಗಿದ್ರೂ ಕೂಡ ಚಿತ್ರಕಲೆಗೆ ಬಹಳ ಪ್ರೋತ್ಸಾಹ ನೀಡಿದ್ದಾರೆ. ಅಲ್ಲಿಂದ ಶುರುವಾದದ್ದು ಕಲಿಕೆ.ಯಾವುದೇ ಚಿತ್ರಕಲಾ ತರಗತಿ ತರಬೇತಿ ತೆಗೆದುಕೊಂಡಿಲ್ಲ. ನಾನೇ ಪ್ರಯತ್ನ ಮಾಡ್ತಾ ಮಾಡ್ತಾ ತಪ್ಪನ್ನ ತಿದ್ದುತ್ತಾ ಇವತ್ತಿನ ತನಕವೂ ಕಲಿತಾ ಇದ್ದೀನಿ.

ಯಾವ ಪ್ರಕಾರದ ಚಿತ್ರಗಳನ್ನ ನೀವು ಬಿಡಿಸುತ್ತೀರ?
ನಾನು ಮೊದಲಿಗೆ ಯಾವುದಾದ್ರೂ ಕಲಾಕೃತಿಗಳನ್ನು ನೋಡಿ ಮರು ಸೃಷ್ಟಿ ಮಾಡಲು ಪ್ರಯತ್ನ ಮಾಡ್ತಾ ಇದ್ದೆ. ಪ್ರಕೃತಿ ನೋಡಿ ಬಿಡಿಸೋದು. ಏನನ್ನೋ ನೋಡಿ ಕಲಿಯೋದು ಮಾಡ್ತಾ ಇದ್ದೆ. ಒಮ್ಮೆ ಇಂಟರ್ನೆಟ್ ಬಳಕೆ ಗೊತ್ತಾದ ಮೇಲೆ ಯಾವ ರೀತಿಯ ಕಲೆಗಳಿವೆ ಅನ್ನೋದು ಅರ್ಥ ಆಗ್ತಾ ಬಂತು. ನಾನು ಅದನ್ನೆಲ್ಲ ನೋಡಿ ಕಲಿತಾ ಇದ್ದೆ . ಇವತ್ತಿನ ತನಕ ನಾನು ಯಾವುದೇ ದೊಡ್ಡ ಕಲಾವಿರದನ್ನ ಪೂರ್ಣ ಅಧ್ಯಯನ ಉದ್ದೇಶ ಪೂರ್ವಕವಾಗಿ ಮಾಡಿಲ್ಲ. ಕಲೆಯನ್ನ ಕಲಿಯಲಿಕ್ಕೆ ಆಗಲ್ಲ ; ಸ್ಕಿಲ್ ಕಲಿತಾ ಹೋಗಬೇಕು. ನಾನು ಯಾರನ್ನೋ ಹೆಚ್ಚು ಓದಿದಾಗ ಅವರ ಪ್ರಭಾವ ನನ್ನಲ್ಲಿ ಹೆಚ್ಚಾಗಿ ಮೂಡಿ ಅವರನ್ನೇ ನಾನು ಅನುಕರಣೆ ಮಾಡಬಹುದು ಎನ್ನುವ ಭಯವಿದೆ.
ಮುಂದೆ ನನ್ನಲ್ಲಿ ಪ್ರಭುದ್ಧತೆ ಹೆಚ್ಚಾಗಿ ಅವರನ್ನ ನೋಡಿಯೂ ನಾನು ಅನುಕರಣೆ ಮಾಡುವುದಿಲ್ಲ ಎನ್ನುವ ಮನಸ್ಥಿತಿ ಬಂದಾಗ ನಿಜಕ್ಕೂ ಅವರ ಬಗ್ಗೆ ತಿಳಿಯುವೆ. ಹಾಗಂತ ಅವರ ಸ್ಕಿಲ್ ; ಯಾವ ರೀತಿ ಬರೀತಾರೆ ಅನ್ನೋದು ನೋಡ್ತೀನಿ ನಾನು.

ನಿಮ್ಮ ಪ್ರಕಾರ ಕಲೆ ಅಂದ್ರೇನು ?
ಕಲೆಗೆ ಯಾವುದೇ ವ್ಯಾಖ್ಯಾನ ಇಲ್ಲ. ಯಾವುದೇ ಒಂದು ಕಲೆ ಯಾರನ್ನೇ ಆದರೂ ತನ್ನೆಡೆಗೆ ಒಂದೆರಡು ಸೆಕೆಂಡ್ ತನ್ನತ್ತ ಗಮನ ಹರಿಸುವ ಹಾಗೆ ಮಾಡತ್ತೆ ಅಂದ್ರೆ ಅದನ್ನ ಕಲೆ ಅಂತ ಹೇಳಬಹುದು. ಪ್ರಕೃತಿ ಕೂಡ ಒಂದು ಕಲೆಯೇ ನಮ್ಮ ಗಮನ ತನ್ನೆಡೆಗೆ ಸೆಳೆಯುತ್ತದೆ. ಹಾಗಾಗಿ ನಾನು ಯಾವುದೇ ಒಂದು ಕಲೆ ಸೆಕೆಂಡ್ ತನ್ನತ್ತ ನೋಡುವ ಹಾಗೆ ಮಾಡಿದ್ರೆ ಅದನ್ನ ಕಲೆ ಅಂತ ಹೇಳ್ತೀನಿ ನಾನು.
ಪಿಕಾಸೋ ಲೈನ್ ಆರ್ಟ್ ನೋಡಿದ್ರೆ ವಾಹ್ ಅಂತೀವಿ ಅದೇ ಅವ್ರು ಯಾರೂ ಅಂತಾನೆ ಗೊತ್ತಿಲ್ಲದ ಜನಕ್ಕೆ ತೋರಿಸಿದರೆ ಯಾರೋ ಚೆನ್ನಾಗಿ ಬರೆದಿದ್ದಾರೆ ಯಾರೋ ಮಗು ಇರಬಹುದು ಅಂತ ಹೇಳ್ತಾರೆ . ಹಾಗೆ ಯಾರೊಬ್ಬ ಪ್ರಭಾವಿಗಳ ಹೆಸರೂ ಇರದೇ ಕಲೆ ತನ್ನನ್ನ ತಾನು ಬಿಂಬಿಸುತ್ತದೆ.

ಚಿತ್ರಕಲೆ ಎನ್ನುವುದು ಒಂದು ರೀತಿಯ ಏಕಾಂತ ಧ್ಯಾನ ಅಂತಾರೆ ಅದಕ್ಕೆ ನೀವು ಏನಂತೀರಾ?
ನಿಜಕ್ಕೂ ಕಲೆ ಒಂದು ಧ್ಯಾನ ; ನೀವು ಕೇಳಿರಬಹುದು ಮನಃಶಾಸ್ತ್ರದಲ್ಲಿ ಆರ್ಟ್ ಥೆರಪಿ ಕೂಡ ಕೊಡ್ತಾರೆ . ಕಲೆ ಒಬ್ಬನ ಮನಸ್ಸಿನ ತೊಳಲಾಟ ಯೋಚನೆಗಳು ಆಲೋಚನೆಗಳನ್ನ ಬಿಂಬಿಸುತ್ತದೆ. ಕೆಲವೊಮ್ಮೆ ಭಾವನೆಗಳನ್ನ ಕೆರಳಿಸುತ್ತದೆ. ಯಾವುದೋ ಚಿತ್ರಕಲೆ ಬಿಡಿಸುವಾಗ ಯಾವುದೋ ಆಲೋಚನೆಗೆ ಒಳಗಾಗಿ ನಮ್ಮನ್ನ ಹಿಡಿದಿಡುತ್ತದೆ. ಆದರೆ ಕೊನೆಯಲ್ಲಿ ನಮ್ಮಲ್ಲಿ ಒಂದು ರೀತಿಯ ತಟಸ್ಥ ಶಾಂತ ಮನೋಭಾವ ಬರುತ್ತದೆ.
ನೀವು ಕೊನೆಯ ಕಲೆ ನೋಡ್ತೀರಾ ಅಲ್ವೇ ಅದೇನೇನು ಅಲ್ಲ . ಒಬ್ಬ ಕಲಾವಿದನಿಗೆ ಒಂದು ಖಾಲಿ ಹಾಳೆಯಿಂದ ಕಲಾಕೃತಿ ಆಗುವ ನಡುವಿನ ಒಂದು ಪ್ರಯಾಣ ಇದೆ ಅಲ್ವೇ ಅದೇ ನಿಜವಾದ ಕಲೆ. ಅಲ್ಲಿ ನಮ್ಮ ಮನಸ್ಸಿನ ಜೊತೆಗೆ ನಾವು ಸಂಚಾರ ಮಾಡ್ತೀವಿ. ನಮ್ಮ ಯೋಚನೆಗಳು ಕೂಡಾ ಕೆಲವೊಮ್ಮೆ ಚಿತ್ರದಲ್ಲಿ ಬಿಂಬಿತ ಆಗತ್ತೆ.

ಚಿತ್ರ ಬಿಡಿಸುವಾಗ ಕಲಾವಿದನ ಮನಸ್ಥಿತಿ ಹೇಗಿರುತ್ತೆ?
ಇದು ನಾವು ಯಾವ ರೀತಿಯ ಆರ್ಟ್ ವರ್ಕ್ ಮಾಡ್ತೀವಿ ಅನ್ನೋದರ ಮೇಲೆ ನಿರ್ಧಾರ ಆಗತ್ತೆ . ನನ್ನ ಪರ್ಸನಲ್ ಆರ್ಟ್ ಆಗಿದ್ರೆ ನಾನೇ ಸುಮ್ನೆ ಶುರು ಮಾಡ್ತೀನಿ. ಯಾವುದೇ ಪ್ಲಾನ್ ಇರೋದಿಲ್ಲ. ಆಗಲೇ ಶುರು ಮಾಡೋದಕ್ಕೆ ಆಗಲ್ಲ ಅಂದ್ರೆ ಅಲ್ಲೇ ನೋಟ್ ಮಾಡಿ ನಂತರ ಅದನ್ನ ಬಿಡಿಸುತ್ತೇನೆ.
ಅದೇ ಕಮಿಟ್ಮೆಂಟ್ ಆದಾಗ ಮಾತ್ರ ಹೀಗೆಯೇ ಬರಬೇಕು ಇಂತಹ ದಿನಕ್ಕೆ ಬೇಕೂ ಎನ್ನುವ ಚೌಕಟ್ಟು ಇರತ್ತೆ. ಕೆಲವು ಕಥೆಗಳಿಗೆ ಚಿತ್ರ ಬಿಡಿಸುವಾಗ ಆ ಕಥೆಗಳು ತುಂಬಾ ನನ್ನನ್ನ ಚಿಂತೆಗೆ ದೂಡತ್ತೆ. ನಾನು ಮತ್ತೆ ಹೊರಗೆ ಬಂದು ನನ್ನನ್ನ ಶಾಂತವಾಗಿಸಿ ಇಲ್ಲಿ ನನ್ನ ವೈಯಕ್ತಿಕ ಅಭಿಪ್ರಾಯ ಬರಬಾರದು ಎನ್ನುವುದನ್ನ ಮತ್ತೆ ಮನನ ಮಾಡಿ ಶೂನ್ಯ ಭಾವದಿಂದ ಅಥವಾ ನಿರ್ಲಿಪ್ತ ಭಾವದಿಂದ ಯೋಚನೆ ಮಾಡಿ ಸಾಹಿತಿ ಯಾವ ಭಾವದಲ್ಲಿ ಬರೆದಿದ್ದಾರೆ ಅನ್ನೋದನ್ನ ಹಲವು ಆಯಾಮದಲ್ಲಿ ನೋಡಿ ಚಿತ್ರ ಬಿಡಿಸುತ್ತಿನಿ.ಕೆಲವೊಮ್ಮೆ ಆ ಕಥೆಗಾರನಿಗೆ ಕೆಲವು ನಿರೀಕ್ಷೆ ಇರತ್ತೆ ಅದನ್ನ ಕೇಳಿ ಅದನ್ನೇ ಕೂಡ ಮಾಡ್ತೀನಿ ಇಲ್ಲವೇ ಚೂರು ಬದಲಾವಣೆ ಮಾಡ್ತೀನಿ.

ಚಿತ್ರಕಲೆಯನ್ನು ನೀವು ಯಾವುದೇ ನಿರೀಕ್ಷೆ ಇಟ್ಟು ಬಿಡಿಸುವುದ ? ಅಥವಾ ನಿಮ್ಮ ತೃಪ್ತಿಗಾಗಿ ಬಿಡಿಸುವುದಾ?
ಯಾರಿಗೋ ಒಂದು ಕಮಿಟ್ಮೆಂಟ್ಗೆ ಬದ್ಧನಾಗಿ ಬಿಡಿಸುವಾಗ ಒಂದು ರೀತಿಯ ಚೌಕಟ್ಟು ಹಾಕಿಯೇ ಶುರು ಮಾಡಬೇಕು . ಯಾಕಂದ್ರೆ ಅವರಿಗೆ ಕಲೆ ಹೀಗೆ ಬರಬೇಕು ಅನ್ನುವ ನಿರೀಕ್ಷೆ ಇರತ್ತೆ ಅದಕ್ಕೆ ಸರಿಯಾಗಿ ನಾನು ಬಿಡಿಸಬೇಕು.
ನಾನೇ ನನ್ನ ಖುಷಿಗೆ ಬಿಡಿಸುವಾಗ ಯಾವುದೇ ಯೋಚನೆ ಇರೋದಿಲ್ಲ. ಶುರು ಒಮ್ಮೆ ಆಗತ್ತೆ ; ಅದರ ಕೊನೆ ಅದೇ ಹೇಗೋ ಆಗತ್ತೆ. ಕೊನೆಗೆ ಅಂದೊಂದು ಕಲೆ ಆಗತ್ತೆ. ಆದ್ರೆ ನಿತ್ಯದ ಜೀವನ ಯೋಚನೆ ಎಲ್ಲವೂ ಅದರಲ್ಲಿ ಬರಬಹುದು.

ಪುಸ್ತಕಗಳಿಗೆ ಮುಖಪುಟಗಳನ್ನ ಮಾಡಿದ್ದೀರಿ ; ಅದರ ಬಗ್ಗೆ ?
ನಾನು ಇದೆಲ್ಲ ಪಡೆದುಕೊಂಡದ್ದು ಸೋಶಿಯಲ್ ಮೀಡಿಯದಲ್ಲಿ. ನನ್ನ ಸ್ನೇಹಿತರಾದ ಗೋರವಿ ಆಲ್ದೂರು; ಪ್ರಸಾದ್ ವಿ ಮೂರ್ತಿ;ಸ್ವಾತಿ ; ರಾಜೇಂದ್ರ ಪ್ರಸಾದ್ ; ಸತೀಶ್ ವಿ ; ರೂಪ ಸತೀಶ್ ಇವ್ರೆಲ್ಲಾ ನನಗೆ ಬಹಳ ಪ್ರೋತ್ಸಾಹ ನೀಡಿದ್ದಾರೆ . ಸಂತೋಷ ಕುಮಾರ್ ಮೆಹಂದಳೆ ; ಅನಿಲ್ ಕುಮಾರ್ ಹೊಸೂರು;ಹೇಮಲತಾ ಮೂರ್ತಿ ಇವರು ಮೊದಲಿಗೆ ನನಗೆ ಬುಕ್ ಕವರ್ ಪೇಜ್ ಮಾಡಿಸಿದ್ದು ಹೀಗೆ ಶುರುವಾಗಿದ್ದು ಈಗ ಸುಮಾರು ಪುಸ್ತಕಗಳಿಗೆ ಮಾಡಿದ್ದೇನೆ.ಆರಂಭಿಕ ಹಂತದಲ್ಲಿ ನನ್ನಿಂದ ಚಿತ್ರಗಳನ್ನು ಬರೆಸಿಕೊಂಡು ಪ್ರೊತ್ಸಾಹ ಕೊಟ್ಟ ಕೆಲವು ಪ್ರಕಾಶಕರು / ಸಂಸ್ಥೆಗಳು ಪ್ರಜಾವಾಣಿ ಸಂಕಥನ One India ಕನ್ನಡ ಋತುಮಾನ ಸಮಾಜಮುಖಿ ಉತ್ತಾನ... ಮುಂತಾದವುಗಳಿಗೆ ನಾನು ಎಂದಿಗೂ ಧನ್ಯ ಆಗಿರುತ್ತೇನೆ.

ಕಲೆಯ ಜೊತೆಗಿನ ನಿಮ್ಮ ಬದುಕು ಹೇಗಿದೆ ?

ಸಂತೃಪ್ತಿ ಇದೆ ; ಮೊದಲಿಗೆ ಕೇವಲ ಚಿತ್ರಕಲೆ ಅಂತ ಶುರುವಾಗಿದ್ದು ಈಗ ಪುಸ್ತಕಗಳಿಗೆ ಮುಖ ಪುಟ ಜೊತೆಗೆ ಸಿನೆಮಾ ಪೋಸ್ಟರ್ ಹೀಗೆ ಪಯಣ ನಿಜಕ್ಕೂ ನನಗೆ ಖುಷಿ ಇದೆ. ಇನ್ನೂ ಕಲಿಯುವುದು ಹಲವು ಇದೆ. ನಿತ್ಯವೂ ಕಲಿಯುತ್ತಾ ಕಲೆಯಲ್ಲೆ ಬದುಕುವುದು ನನಗೂ ಖುಷಿಯೇ.ವಾಸ್ತವವನ್ನು ಹೇಗೆ ನಾವು ತೋರಿಸುತ್ತೇವೆ ನಮ್ಮ ಕಲೆಯಲ್ಲಿ ಅನ್ನುವುದು ಸಹ ಮುಖ್ಯ. ವಾಸ್ತವನ್ನು ಅರಿಯಲು ಕಲೆ ನಿಜಕ್ಕೂ ಸಹಕಾರಿ ಆಗತ್ತೆ.

- ಸಾಧನಾ ಶಾಸ್ತ್ರಿ

ಮದನ್‌ ಸಿ.ಪಿ ಅವರ ಕಲಾಕುಂಚದ ರೇಖೆ :

 

 

 

 

 

 

 

 

MORE FEATURES

ಸೈನ್ಸ್ ಫಿಕ್ಷನ್ ಸಿನಿಮಾ ನೋಡಿದ ಅನುಭವ ಈ ಕೃತಿ ನೀಡುತ್ತದೆ

29-03-2024 ಬೆಂಗಳೂರು

"ಕಾದಂಬರಿಯ ಒಂದಿಷ್ಟು ಭಾಗದಲ್ಲಿ ಹೇಳ ಹೊರಟಿರುವ ವಿಷಯವನ್ನು ಒಂದಿಷ್ಟು ಜಟಿಲವಾಗಿ ಹೇಳಿರುವುದು ಹಾಗೂ ಕಾದಂಬರಿಯ ಕ...

ವಚನಗಳ ಮೂಲಕ ಶರಣರ ಒಡನಾಟ ಅನುಭವಿಸಬಹುದು: ಡಿ.ಶಬ್ರಿನಾ ಮಹಮದ್ ಅಲಿ

29-03-2024 ಬೆಂಗಳೂರು

'ಬನ್ನಿರಿ ಶರಣರೇ' ಎಂಬುದು ಈ ಕವನ ಸಂಕಲನ ಮೊದಲ ಕವನವಾಗಿದ್ದು, ಈ ಕವಿತೆಯಲ್ಲಿ ಕವಿ ಸಮಾಜಕ್ಕೆ ಒಂದು ಕರೆಯನ್ನು...

ಪೂರ್ಣಿಮಾ ಮಾಳಗಿಮನಿ ಕಂಡ `ಗಿಣಿಬಾಗಿಲು' 

28-03-2024 ಬೆಂಗಳೂರು

"ಸಪ್ನ ಬುಕ್ಸ್ ಪ್ರಕಟಿಸಿದ ಹರೀಶ್ ಕೇರ ಅವರ ವಿಶಿಷ್ಟವಾದ ಶೀರ್ಷಿಕೆ ಇರುವ ಈ ಕೃತಿಯಲ್ಲಿನ ಒಂದೊಂದು ಅಧ್ಯಾಯವೂ ಒಂದ...