Date: 11-09-2025
Location: ಬೆಂಗಳೂರು
"ಬಾಶಿಕವಾಗಿ ಬಿನ್ನ ರಚನೆಯನ್ನು ಮತ್ತು ಬಿನ್ನ ಲಿಪಿವ್ಯವಸ್ತೆಯನ್ನು ಹೊಂದಿರುವ ಮತ್ತು ಬಿನ್ನ ಸಾಮಾಜಿಕ ಹಿನ್ನೆಲೆಯನ್ನು ಹೊಂದಿರುವ ಕನ್ನಡ ಮತ್ತು ಇಂಗ್ಲೀಶ್ ಬಾಶೆಗಳನ್ನು ಇಟ್ಟುಕೊಂಡು ಚರ‍್ಚೆಯನ್ನು ಮಾಡಲಾಯಿತು. ಹಾಗಾಗಿ ಬಿನ್ನತೆಗಳು ಹೆಚ್ಚು ಹೆಚ್ಚು ಗಾಡವಾಗಿ ಕಾಣಿಸುತ್ತವೆ," ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ಕಲಿಕೆ-ಬಾಶೆ-ಸಾಮಾಜಿಕತೆ-ಮಾನಸಿಕತೆ ’ ಕುರಿತು ಬರೆದಿದ್ದಾರೆ.
ಈ ಹಿಂದಿನ ಬರಹಗಳಲ್ಲಿ ಸಮಸ್ಯೆಯನ್ನು ಒಂದೆರಡು ಲಿಪಿಗಳ ಕಲಿಕೆ ಮತ್ತು ಒಂದು ಪದದ ಕಲಿಕೆ ಹಿನ್ನೆಲೆಯಲ್ಲಿ ಚರ‍್ಚಿಸಲಾಯಿತು. ಆದರೆ, ಮಗುವೊಂದಕ್ಕೆ ಹಲವಾರು ಲಿಪಿಗಳನ್ನು, ಪದಗಳನ್ನೂ ಕಲಿಸಲಾಗುತ್ತದೆ. ಹಾಗಾದರೆ ಮಗು ಪ್ರತಿಯೊಂದು ಪದದ ಕಲಿಕೆಯಲ್ಲಿಯೂ ಇದೆ ಸಮಸ್ಯೆಯನ್ನು ಅನುಬವಿಸಬೇಕಾಗುತ್ತದೆ. ಇವತ್ತು ಬಾರತದಲ್ಲಿ ಇಂಗ್ಲೀಶ್ ಮಾದ್ಯಮದ ಮೋಹ ವಿಪರೀತ ಹುಚ್ಚಾಗಿ ಬೆಳೆದಿರುವುದರಿಂದ ಇಂಗ್ಲೀಶ್ ಕೇಂದ್ರಿತವಾದ ಒಂದೆರಡು ಮಾತನ್ನ ಆಡಬಹುದು. ಈ ಕನ್ನಡ ಮಕ್ಕಳು ಇಂಗ್ಲೀಶ್ ಮಾದ್ಯಮದಲ್ಲಿ ಕಲಿಯುವಲ್ಲಿ ಆಗಬಹುದಾದ ಸಮಸ್ಯೆಗಳು ಬಾರತದ ಎಲ್ಲ ಆರೆಂಟುನೂರು ಬಾಶೆಗಳ ಮಕ್ಕಳು ಇಂಗ್ಲೀಶ್ ಮಾದ್ಯಮಕ್ಕೆ ಬಂದಾಗಲೂ ಆಗುತ್ತದೆ. ಇಂಗ್ಲೀಶ್ ಮಾದ್ಯಮಗಳ ಶಾಲೆ, ಶಿಕ್ಶಕರು ಮತ್ತು ಮಕ್ಕಳ ಬಗೆಗೆ ಈ ಚಿತ್ರಣವನ್ನ ಗಮನಿಸಬಹುದು. ಪಟ್ಯವನ್ನ ತಯಾರಿಸಿದವರು, ಪಾಟ ಹೇಳುವ ಶಿಕ್ಶಕರು, ಕಲಿಯುವ ಮಕ್ಕಳು, ಕಲಿಸುವುದಕ್ಕೆ ಕಳಿಸುವ ಪೋಶಕರು ಯಾರಿಗೂ ಇಂಗ್ಲೀಶು ಬರುವುದಿಲ್ಲ. ಆದರೆ ಮಕ್ಕಳಿಗೆ ಇಂಗ್ಲೀಶ್ ಮಾದ್ಯಮದಲ್ಲಿ ಶಿಕ್ಶಣ. ಇಂತಾ ಪರಿಸ್ತಿತಿ ಇಂದು ಇದೆ. ಇಂಗ್ಲೀಶ್ ಮಾದ್ಯಮ ಶಾಲೆಯ ಮಕ್ಕಳಿಗೆ ಶಾಲಾಕೊಟಡಿಯ ಒಳಗೆ ಮಾತ್ರ ಇಂಗ್ಲೀಶ್ ಬಳಕೆಯ ಅವಕಾಶ. ಹೊರಬಂದರೆ ಆ ಮಕ್ಕಳು ತಮ್ಮ ತಮ್ಮ ಬಾಶೆಯಲ್ಲಿ ಇಲ್ಲವೆ ಸ್ತಳೀಯ ಪ್ರದಾನ ಬಾಶೆ, ಸಂವಹನ ಬಾಶೆಗಳಲ್ಲಿ ಮಾತನಾಡುತ್ತಾರೆ. ಮನೆಯಲ್ಲಿ ಮನೆಮಾತುಗಳೆ ಇರುತ್ತವೆ. ಇಂಗ್ಲೀಶ್ ಬಾಶೆ ಮತ್ತು ಇಂಗ್ಲೀಶ್ ಬಾಶಾ ಮಾದ್ಯಮದ ಬಗೆಗೆ ಕೊನೆಯಲ್ಲಿ ಒಂದು ಸಣ್ಣ ಬರವಣಿಗೆ ಮಾಡಿರುವುದರಿಂದ ಇಲ್ಲಿ ಹೆಚ್ಚು ಮಾತನಾಡಬೇಕಿಲ್ಲ.
ಬಾಶಿಕವಾಗಿ ಬಿನ್ನ ರಚನೆಯನ್ನು ಮತ್ತು ಬಿನ್ನ ಲಿಪಿವ್ಯವಸ್ತೆಯನ್ನು ಹೊಂದಿರುವ ಮತ್ತು ಬಿನ್ನ ಸಾಮಾಜಿಕ ಹಿನ್ನೆಲೆಯನ್ನು ಹೊಂದಿರುವ ಕನ್ನಡ ಮತ್ತು ಇಂಗ್ಲೀಶ್ ಬಾಶೆಗಳನ್ನು ಇಟ್ಟುಕೊಂಡು ಚರ‍್ಚೆಯನ್ನು ಮಾಡಲಾಯಿತು. ಹಾಗಾಗಿ ಬಿನ್ನತೆಗಳು ಹೆಚ್ಚು ಹೆಚ್ಚು ಗಾಡವಾಗಿ ಕಾಣಿಸುತ್ತವೆ. ಆದರೆ ಇದು ಸಮಾನ ರಚನೆಯನ್ನು ಹೊಂದಿರುವ ಎರಡು ಬಾಶೆಗಳ ನಡುವೆ ತೆಗೆದುಕೊಂಡಾಗ ಸಮಸ್ಯೆಯ ಗಾಡತೆ ಬೇರೆಯಾಗಬಹುದು. ಆದರೆ ಸಮಸ್ಯೆ ಆಗಲಾರದು ಎಂದು ಹೇಳಲು ಸಾದ್ಯವಿಲ್ಲ. ಇಲ್ಲಿ ಇಂಗ್ಲೀಶು ಇಲ್ಲದ ಇತರ ಶಿಕ್ಶಣ ಮಾದ್ಯಮಗಳ ಸಂದರ‍್ಬಗಳನ್ನೂ ತೆಗೆದುಕೊಂಡು ಒಂದೆರಡು ಮಾತು ಬೆಳೆಸಬಹುದು. ಬಾರತದಲ್ಲಿನ ಬಹುಬಾಶಿಕತೆ ಬಗ್ಗೆ ಆನಂತರ ತುಸುವಾಗಿ ಚರ‍್ಚಿಸಿದೆ. ಇಲ್ಲಿ ಒಂದೆರಡು ನಿದರ‍್ಶನಗಳನ್ನು ಮಾತ್ರ ಮಾತಿಗೆತ್ತಿಕೊಂಡಿದೆ. ಬಾರತೀಯ ಪರಿಸರ ಎಂಬ ಸಾಮಾನ್ಯ ಕೊಡೆಯ ಕೆಳಗೆ ಇಲ್ಲಿರುವ ಹಲವಾರು ಬಾಶೆಗಳು ಹೆಚ್ಚು ಸಾಮಾಜಿಕ ವಿಚಾರಗಳನ್ನು ಹಂಚಿಕೊಳ್ಳುತ್ತವೆ, ಇನ್ನು ಕೆಲ ಸಾಮಾಜಿಕ ವಿಚಾರಗಳನ್ನು ಅರ‍್ತ ಮಾಡಿಕೊಳ್ಳುತ್ತವೆ.
ಹಾಗಾಗಿ ಕನ್ನಡ ಇಲ್ಲವೆ ಇತರ ‘ಪ್ರದಾನ’ ಬಾಶಾಮಾದ್ಯಮದಲ್ಲಿ ಶಿಕ್ಶಣವನ್ನು ಪಡೆಯುತ್ತಿದ್ದರೆ ಪರಿಸ್ತಿತಿ ತುಸು ಹಗುರವಾಗುತ್ತದೆ. ಇಂತಾ ಸಂದರ‍್ಬದಲ್ಲಿ ಈ ಮೇಲೆ ಮಾತನಾಡಿದಂತೆ ಕನ್ನಡ ಮಕ್ಕಳು ಇಂಗ್ಲೀಶ್ ಮಾದ್ಯಮದಲ್ಲಿ ಕಲಿಯುವಾಗಿನ ಸಮಸ್ಯೆಗಳು ಕಡಿಮೆಯಾಗುತ್ತವೆ. ಆದರೆ ಸಮಸ್ಯೆಗಳು ಇರುವುದಿಲ್ಲ ಎಂದು ಹೇಳಲಾಗದು. ಪ್ರತಿಯೊಂದು ಬಾಶೆಯೂ ಬಿನ್ನ ರಚನೆಯೆ ಆಗಿರುತ್ತದೆ. ಹಾಗಾಗಿ, ಆ ಬಿನ್ನತೆ ಸಹಜವಾಗಿಯೆ ಸಮಸ್ಯೆಯಾಗಿ ಕಾಡುತ್ತದೆ. ಬಾಶೆಯ ಬಿನ್ನತೆ ಸಾಮಾಜಿಕ ಬಿನ್ನತೆಯನ್ನೂ ಜೊತೆಗೊಂಡಿರುತ್ತದೆ ಎಂಬುದನ್ನು ಈ ಮೇಲೆ ಮಾತನಾಡಿದೆ. ಅದರಿಂದ ಸಮಸ್ಯೆಗಳು ಮಾನಸಿಕ ಮಾತ್ರವಲ್ಲದೆ ಸಾಮಾಜಿಕವೂ ಆಗಿರುತ್ತವೆ. ಆದರೆ ಈ ಸ್ತಿತಿಯನ್ನು ಬಾರತದ ಎಲ್ಲ ಬಾಶೆಗಳ ನಡುವೆ ಹೇಳಬಾರದು. ಉತ್ತರದ ಮತ್ತು ದಕ್ಶಿಣದ ಬಾಶೆಗಳ ನಡುವೆ ಹೆಚ್ಚು ಹೆಚ್ಚು ಅಂತರಗಳು ಇವೆ. ಈಶಾನ್ಯದ ಬಾಶೆಗಳೊಂದಿಗೆ ಇತರೆಲ್ಲ ಬಾಶೆಗಳು ಇನ್ನೂ ಹೆಚ್ಚು ಬಿನ್ನತೆಗಳನ್ನು ತೋರಿಸುತ್ತವೆ. ಸಾಮಾಜಿಕ ಬಿನ್ನತೆಗಳೂ ಸಾಕಶ್ಟು ಇವೆ.
ಕರ‍್ನಾಟಕದ ಸಂದರ‍್ಬವನ್ನು ತೆಗೆದುಕೊಳ್ಳುವುದಾದರೆ ಬಾಶಿಕವಾಗಿ ಕನ್ನಡಕ್ಕಿಂತ ಬಿನ್ನ ರಚನೆ ಹೊಂದಿರುವ ಉರ‍್ದು, ಹಿಂದಿ, ಕೊಡವ, ಲಂಬಾಣಿ ಮೊದಲಾಗಿ ಹಲವಾರು ಬಾಶೆಗಳ ಮಕ್ಕಳು ಇದ್ದಾರೆ. ಕನ್ನಡದ್ದೆ ಬಾಶಿಕ ಮನೆತನಕ್ಕೆ ಸೇರುವ ತೆಲುಗು, ತಮಿಳು, ಮಲಯಾಳಂ, ತುಳು ಮೊದಲಾದ ಬಾಶೆಗಳ ಮಕ್ಕಳೂ ಇದ್ದಾರೆ. ಇವುಗಳಲ್ಲದೆ ಸಣ್ಣ ಸಣ್ಣ ಬಾಶೆಗಳಾದ ಕೊರವ, ಕೊರಚ, ಇರುಳ ಮೊದಲಾದವೂ ಇವೆ. ಇವುಗಳ ಬಾಶಿಕ ಮತ್ತು ಸಾಮಾಜಿಕ ರಚನೆ ಕನ್ನಡದೊಂದಿಗೆ ಸಾಕಶ್ಟು ಬಿನ್ನತೆಗಳನ್ನೂ ಹೊಂದಿದೆ. ಬುಡಕಟ್ಟುಗಳ ಸಂದರ‍್ಬದಲ್ಲಿ ಸಾಮಾಜಿಕ ರಚನೆ ಹೆಚ್ಚು ಬಿನ್ನವಾಗುತ್ತದೆ. ಅಲ್ಲದೆ ಪರಿಸರ, ಬೂಗೋಳ ಹಿನ್ನೆಲೆಗಳೂ ಇದಕ್ಕೆ ಸೇರಿಕೊಳ್ಳುತ್ತವೆ. ಅಶ್ಟು ಮಾತ್ರವಲ್ಲದೆ ಕನ್ನಡದೊಳಗೇನೆ ಇರುವ ಹಲವಾರು ಒಳನುಡಿಗಳು ಸಾಕಶ್ಟು ಬಿನ್ನತೆಗಳನ್ನು ತೋರಿಸುತ್ತವೆ. ಇವುಗಳಲ್ಲಿ ಬಾಶಿಕ ಮಾತ್ರವಲ್ಲದೆ ಪ್ರಾದೇಶಿಕ ನಿಶ್ಟವಾದ ಹಲವು ಸಾಮಾಜಿಕ ಬಿನ್ನತೆಗಳೂ ಕೂಡ ಕಂಡುಬರುತ್ತವೆ. ಹಾಗಾಗಿ ಯಾವುದೆ ಎರಡು ಬಾಶೆಗಳನ್ನು ಸಮಾನ ಎಂದೆನ್ನುವುದು ಅಸಾದ್ಯ. ಕನ್ನಡದ ಒಳನುಡಿಗಳನ್ನೂ ಕೂಡ ಹೀಗೆ ಕರೆಯುವುದು ಕಶ್ಟ.
ಶಾಲೆಯಲ್ಲಿ ಶಿಕ್ಶಣ ಕಲಿಸುವುದು ಬಾಶೆಯ ವಿವಿದ ಬಗೆಯ, ವಿವಿದ ವಲಯಗಳಲ್ಲಿನ ಬಳಕೆಯನ್ನು ಕಲಿಸಿಕೊಡುತ್ತಿರುತ್ತದೆ. ಅಂದರೆ ಮಗುವಿಗೆ ಸಾಮಾಜಿಕ ವಲಯಗಳ ಪರಿಚಯ ಇರುವಲ್ಲಿ ಅದಕ್ಕೆ ಹೊಂದಿಕೊಳ್ಳುವ ಪದಗಳು, ಶಯ್ಲಿ, ಬಾಶಿಕ ಒತ್ತುಗಳು ಮೊದಲಾದವನ್ನು ಶಿಕ್ಶಣದಲ್ಲಿ ಹೇಳಿಕೊಡದಿದ್ದರೂ ಮಕ್ಕಳಿಗೆ ಅರ‍್ತವಾಗುತ್ತಿರುತ್ತವೆ. ವಾಸ್ತವದಲ್ಲಿ ಕನ್ನಡ ಸಾಹಿತ್ಯವನ್ನು ಕನ್ನಡ ಮಕ್ಕಳಿಗೆ ಕಲಿಸುವಾಗ ಬಾಶೆಯ ಮೂಲಕ ಅಬಿವ್ಯಕ್ತಿಸಬಹುದಾದ ಬಾವನೆಗಳನ್ನು ಹೇಳಿಕೊಡಬೇಕು. ಇದಕ್ಕೆಲ್ಲ ಆಯಾ ಬಾಶಿಕ ಸಮುದಾಯದ ಸಾಂಸ್ಕೃತಿಕ ಪ್ರಗ್ನೆ ಅವಶ್ಯ. ಅಂತದೊಂದು ಹಿನ್ನೆಲೆ ಮಗುವಿಗೆ ಇದ್ದರೆ ಆ ಬಾವನೆಗಳನ್ನು, ಆ ಬಾವನೆಗಳಿಗೆ ಸೂಕ್ತವಾದ ಬಾಶೆಯನ್ನು, ಆ ಬಾಶೆಯ ಬಳಕೆ, ಆ ಬಾಶಾಬಳಕೆಯ ವಿನ್ಯಾಸ, ಆ ಬಳಕೆಯ ಪ್ರಬಾವ ಇಲ್ಲವೆ ಮಹತ್ವ ಈ ಮೊದಲಾದವನ್ನು ಕಲಿಸುವಲ್ಲಿ ಹೆಚ್ಚು ಶ್ರಮದ ಅವಶ್ಯಕತೆ ಇಲ್ಲ. ಇವನ್ನು ಕಲಿತ ಮಕ್ಕಳು ಸಾಮಾಜಿಕತೆಯನ್ನು ಹೆಚ್ಚು ಅರಿತುಕೊಳ್ಳಲು ಸಾದ್ಯ, ಸಂಬಂದಗಳ ಬೆಲೆಯನ್ನು ಹೆಚ್ಚು ತಿಳಿದುಕೊಳ್ಳಲು ಸಾದ್ಯ. ಮಕ್ಕಳಲ್ಲಿ ಸ್ರುಜನಾತ್ಮಕ ಗುಣ ಬೆಳೆಯುವುದಕ್ಕೆ ಸಾದ್ಯ. ಇನ್ನೊಂದೆಡೆ ತರ‍್ಕಿಕ ವಲಯಗಳಲ್ಲಿ ಬಾಶೆಗೂ ಇಂತದೆ ರಚನೆ ಇರುತ್ತದೆ. ಮನೆಯೊಳಗಿನ, ದಿನಜೀವನದಲ್ಲಿ ಮಕ್ಕಳು ಕಂಡಿರಬಹುದಾದ ಹಲಬಗೆಯ ತರ‍್ಕಿಕತೆಗಳನ್ನು ಹೊಂದಿಸಿಕೊಂಡು ತರ‍್ಕಿಕ ವಿಶಯಗಳನ್ನು ಸುಲಬವಾಗಿ ಅರ‍್ತ ಮಾಡಿಕೊಳ್ಳುತ್ತವೆ. ಈ ಪ್ರಕ್ರಿಯೆಗೆ ಇಡಿಯಾಗಿ ಮಗುವಿನ ತಾಯ್ಮಾತಿನ ಅವಶ್ಯಕತೆ ಇದೆ. ತಾಯ್ಮಾತಿನಿಂದ ದೂರವಾದ ಪೆರಮಾತಿನ ಶಿಕ್ಶಣದಲ್ಲಿ ಮಕ್ಕಳಿಗೆ ಈ ಬೆಂಬಲ ಇರುವುದಿಲ್ಲ.
ಹಾಗಾಗಿ ಅಶ್ಟು ಮಟ್ಟಿಗೆ ಮಕ್ಕಳ ಕಲಿಕೆಯ ಗುಣಮಟ್ಟ ಕುಂಟಿತಗೊಳ್ಳುತ್ತದೆ. ಮಕ್ಕಳ ಸಾಮಾಜಿಕ ಹಿನ್ನೆಲೆ ಸುಲಬವಾಗಿ ಒದಗಿಸಬಹುದಾದ ಸಿದ್ದತೆ ಇಲ್ಲದಿದ್ದಾಗ ಕಲಿಕೆ ಹೆಚ್ಚು ಯಶಸ್ಸು ಪಡೆಯುವುದಿಲ್ಲ. ಬಾರತೀಯ ಎಂಬ ಸಾಮಾನ್ಯ ಸಾಮಾಜಿಕ ರಚನೆಯನ್ನು ಗಮನದಲ್ಲಿ ಇಟ್ಟುಕೊಳ್ಳುವುದಾದರೂ ಅದರೊಳಗೆ ಬೇಕಾದಶ್ಟು ಬಿನ್ನತೆಗಳು ಇರುವುದನ್ನು ಮರೆಯುವ ಹಾಗಿಲ್ಲ. ಬಿನ್ನ ಬಾಶಿಕ ಗುಂಪುಗಳ ನಡುವೆ ಮಾತ್ರವಲ್ಲದೆ ಇನ್ನೂ ಹಲವಾರು ಬಗೆಯ ಗುಂಪುಗಳ ನಡುವೆ ಸಾಮಾಜಿಕ ಬಿನ್ನತೆಗಳು ಕಂಡುಬರುತ್ತವೆ. ಬಾರತೀಯ ಸಮಾಜದಲ್ಲಿ ಜಾತಿ ತುಂಬಾ ತಳಮಟ್ಟದ ಮತ್ತು ಹೆಚ್ಚು ಗಟ್ಟಿಯಾದ ಗಟಕವಾಗಿ ಇಂದು ಇದೆ. ಕುತೂಹಲವೆಂದರೆ ಒಂದೆ ಜಾತಿಯ ನಡುವೆ ಬಿನ್ನ ಬಾಶಿಕ ಹಿನ್ನೆಲೆ ಕಾರಣವಾಗಿ ಸಾಮಾಜಿಕ ಬಿನ್ನತೆಗಳೂ ಇವೆ. ಹಾಗಾಗಿ ಬಾರತೀಯ ಸಾಮಾಜಿಕತೆ ಎನ್ನುವುದು ತುಂಬಾ ವಿಸ್ತಾರವಾದ ನೆಲೆಯ ಅಶ್ಟೆ ಆಳವಾದ ಸಂಕಿರ‍್ಣತೆಗಳನ್ನು ಹೊಂದಿರುವಂತದ್ದು ಎಂದು ತಿಳಿದುಕೊಳ್ಳಬೇಕು. ಹಾಗಾಗಿ ಕೊರವ, ಕೊರಚ, ಇರುಳ ಮೊದಲಾದ ಯಾವುದೆ ಬಾಶೆಯ ಮಕ್ಕಳು ಕನ್ನಡ ಇಲ್ಲವೆ ಇನ್ನಾವುದೆ ಬಾಶೆಯ ಮಾದ್ಯಮಕ್ಕೆ ಬಂದಾಗ ವಿವಿದ ಬಗೆಯ ಸಮಸ್ಯೆಗಳನ್ನು ಎದುರಿಸುತ್ತವೆ.
ಸಾಮಾಜಿಕ ಹಿನ್ನೆಲೆ ಬಗ್ಗೆ ಇನ್ನೂ ಒಂದೆರಡು ಮಾತುಗಳನ್ನು ಆಡಬೇಕು. ಶಿಕ್ಶಣ ಸಾಮಾಜಿಕ ರಚನೆಯನ್ನು, ಸಾಮಾಜಿಕ ನಿಯಮಗಳನ್ನು ಕೂಡ ಕಲಿಸುತ್ತಿರುತ್ತದೆ. ಅಂದರೆ ಇದರಲ್ಲಿ ಕುಟುಂಬ ವ್ಯವಸ್ತೆ, ಕುಟುಂಬದ ಸದಸ್ಯರು, ಕುಟುಂಬದ ಸದಸ್ಯರ ನಡುವಿನ ಸಂಬಂದ ಹೀಗೆ ಒಟ್ಟಾರೆ ಕುಟುಂಬದ ಪರಿಕಲ್ಪನೆಯನ್ನು ಶಿಕ್ಶಣ ಕೊಡುತ್ತಿರುತ್ತದೆ. ಕತೆ, ಕವನಗಳ ಮೂಲಕ ನಾವು ಮಕ್ಕಳಿಗೆ ಕೊಡುವುದು ಇದೆ ಪರಿಕಲ್ಪನೆ. ಪ್ರತಿಯೊಂದು ಬಾಶಿಕ ಹಿನ್ನೆಲೆಯ ಮಗು ತನ್ನದೆ ಬಾಶೆಯ ಸಾಮಾಜಿಕ ಹಿನ್ನೆಲೆಯಿಂದ ಬಂದಿರುತ್ತದೆ. ಕನ್ನಡ ಮತ್ತು ಇಂಗ್ಲೀಶ್ ಬಾಶೆಗಳ ನಡುವಿನ ಸಮಸ್ಯೆಯನ್ನೆ ಇಲ್ಲಿ ಚರ‍್ಚೆಗೆ ತೆಗೆದುಕೊಳ್ಳೋಣ. ಬಾರತೀಯ ಪರಿಸರದಲ್ಲಿ ಸ್ತೂಲ ಹಂತದಲ್ಲಿ ಮಾತನಾಡುವುದಾದರೆ ಕೂಡುಕುಟುಂಬದ ಪರಿಕಲ್ಪನೆ ಹಿನ್ನೆಲೆಯ ಮಕ್ಕಳು ಇರುತ್ತಾರೆ. ಇಂಗ್ಲೀಶ್ ಮಾದ್ಯಮದ ಶಿಕ್ಶಣಕ್ಕೆ ಹೋದಾಗ ಇಂಗ್ಲೀಶಿನಲ್ಲಿ ಈ ಸಾಮಾಜಿಕ, ಮತ್ತು ಕುಟುಂಬ ರಚನೆ ಕಾಣಿಸುವುದಿಲ್ಲ. ಇಂಡಿಯಾದಲ್ಲಿ ಇಂಗ್ಲೀಶ್ ಹೆಚ್ಚು ಹೆಚ್ಚು ಬಾರತೀಯವಾಗಿದೆ ಎಂಬ ವಾಸ್ತವವನ್ನು ಒಪ್ಪಿಕೊಂಡೂ ಇನ್ನೂ ಉಳಿಯುವ, ಅಸಾದ್ಯವಾಗುವ ಸಾಮಾಜಿಕ ಮತ್ತು ಕುಟುಂಬದ ರಚನೆಗಳನ್ನು ಕಾಣಬಹುದು. ಇವೆಲ್ಲವೂ ಕಲಿಕೆಗೆ ತಡೆಯನ್ನು ಉಂಟುಮಾಡುತ್ತಿರುತ್ತವೆ.
"ರಂಗಾಭ್ಯಾಸದಲ್ಲಿ ಮೊದ ಮೊದಲು ಅರ್ಥಾತ್ ಆರಂಭಕ್ಕೆ ಭಾಷಿಕವಾಗಿ ಸಣ್ಪುಟ್ಟ ತೊಡಕುಗಳು ಕಾಡಿದವು. ಪ್ರತಿಗಂಧರ್ವ ಹೆಸ...
"`ಪುರುಷಾವತಾರ’ ಕಾದಂಬರಿಯಲ್ಲಿ ಗೋಸಾಯಿ ಗುರು ಹನುಮಂತ ಒಂಟಿಮನಿ ಅವರಿಗೆ ಹೇಳುವ ಮಾತುಗಳಿವು. ಈ ಮಾತುಗಳು ಕ...
"ತಾಯ್ಮಾತು ಮತ್ತು ಶಿಕ್ಶಣ ಮಾದ್ಯಮ ಇವುಗಳ ನಡುವಿನ ರಾಚನಿಕ ಬಿನ್ನತೆಗಳೂ ಕೂಡ ಪೆರಮಾತಿನ ಶಿಕ್ಶಣದ ಸೋಲಿಗೆ ಕಾರಣವಾ...
©2025 Book Brahma Private Limited.