Date: 18-05-2025
Location: ಬೆಂಗಳೂರು
"ಮಗುವಿನ ಬಾಶೆ ಈ ಮೇಲೆ ಮಾತನಾಡಿದಂತೆ ಮಗುವಿನ ಮಾನಸಿಕತೆಯೂ, ಸಾಮಾಜಿಕ ಸ್ತಿತಿಯೂ ಆಗಿರುತ್ತದೆ. ಆದ್ದರಿಂದ ಮಗುವಿಗೆ ಶಿಕ್ಶಣವನ್ನು ಕೊಡುವಾಗ ಯಾವ ಬಾಶೆಯಲ್ಲಿ ಕೊಡಬೇಕು ಎಂಬುದನ್ನು ಹೆಚ್ಚು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಮಗುವಿಗೆ ಅರ‍್ತವಾಗುವ ಬಾಶೆಯಲ್ಲಿ ಶಿಕ್ಶಣವನ್ನು ಕೊಡಬೇಕು," ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ಕಲಿಕೆ ಮತ್ತು ಕಲಿಸುವ ಮಾದ್ಯಮ’ ಕುರಿತು ಬರೆದಿದ್ದಾರೆ.
ಯಾರೆ ಒಬ್ಬ ವ್ಯಕ್ತಿ ಒಂದು ಹೊಸದನ್ನು ಕೊಟ್ಟು ಕಲಿಯಲು ಹೇಳಿದಾಗ ಆ ವ್ಯಕ್ತಿ ಮೊದಲಿಗೆ ಅದಕ್ಕೆ ಸಮೀಪವೆನಿಸುವ ತನ್ನ ಅರಿವಿನೊಳಗೆ ಇರುವ ಇನ್ನಾವುದೊ ಒಂದಕ್ಕೆ ತಗುಲಿಸಿಕೊಂಡು ಆ ಹೊಸದನ್ನು ಅರ‍್ತ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತದೆ. ಅಂದರೆ ಇರುವ ಸರಕಿನ ಬೆಂಬಲವನ್ನು ಹೊಸದೊಂದನ್ನು ಕಲಿಯುವುದಕ್ಕೆ ಸಹಾಯಕವಾಗಿ ಪಡೆದುಕೊಳ್ಳುವುದು. ಶಿಕ್ಶಣ ಇದೆಲ್ಲವನ್ನೂ ಮಾಡುತ್ತದೆ. ಮಗು ತನ್ನ ತಾಯ್ಮಾತಿನಲ್ಲಿ ಹೀಗೆ ಆಲೋಚಿಸುವ, ಅರ‍್ತ ಮಾಡಿಕೊಳ್ಳುವ ಸಾಮರ್‍ತ್ಯವನ್ನು ಪಡೆದುಕೊಂಡಿರುತ್ತದೆ.
ಮಗುವಿನ ಬಾಶೆ ಈ ಮೇಲೆ ಮಾತನಾಡಿದಂತೆ ಮಗುವಿನ ಮಾನಸಿಕತೆಯೂ, ಸಾಮಾಜಿಕ ಸ್ತಿತಿಯೂ ಆಗಿರುತ್ತದೆ. ಆದ್ದರಿಂದ ಮಗುವಿಗೆ ಶಿಕ್ಶಣವನ್ನು ಕೊಡುವಾಗ ಯಾವ ಬಾಶೆಯಲ್ಲಿ ಕೊಡಬೇಕು ಎಂಬುದನ್ನು ಹೆಚ್ಚು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಮಗುವಿಗೆ ಅರ‍್ತವಾಗುವ ಬಾಶೆಯಲ್ಲಿ ಶಿಕ್ಶಣವನ್ನು ಕೊಡಬೇಕು. ಮಗುವಿಗೆ ಅರ‍್ತವಾಗುವ ಎಂದರೆ ಏನು ಎಂಬುದನ್ನೂ ಇಲ್ಲಿ ಗಮನಿಸಬೇಕು. ಪದಗಳನ್ನು ಅರ‍್ತ ಮಾಡಿಕೊಳ್ಳುವುದು ಇಲ್ಲವೆ ವಾಕ್ಯಗಳನ್ನು ಅರ‍್ತ ಮಾಡಿಕೊಳ್ಳುವುದು ಎಂಬ ಸರಳ ಅರ‍್ತದಲ್ಲಿ ಇದನ್ನು ತೆಗೆದುಕೊಳ್ಳಬಾರದು. ಮಕ್ಕಳು ಬಾಶೆಯನ್ನು ಸಮಗ್ರವಾಗಿ ರ‍್ತ ಮಾಡಿಕೊಳ್ಳಬೇಕಾಗುತ್ತದೆ. ಒಂದು ಸರಳ ಪಟ್ಯವನ್ನು ಮಗು ತಿಳಿದುಕೊಳ್ಳಬೇಕು ಎಂದರೆ ಅದರಲ್ಲಿ ಬಳಕೆ ಆಗಿರುವ ದ್ವನಿಗಳನ್ನು, ಪದಗಳನ್ನು, ಪ್ರತ್ಯಯಗಳನ್ನು, ವಾಕ್ಯಗಳನ್ನು, ಅರ‍್ತವನ್ನು ಇಡಿಯಾಗಿ ಈ ಎಲ್ಲವನ್ನೂ ಮಗುವೊಂದು ಅರ‍್ತ ಮಾಡಿಕೊಳ್ಳಬೇಕು. ಅಶ್ಟು ಮಾತ್ರವಲ್ಲದೆ ಸಾದ್ಯ ಇರುವ ಪದ ಮತ್ತು ವಾಕ್ಯದ ವಿವಿದ ಅಂಗಗಳ ಬಳಕೆಯ ವಿವಿದರ‍್ತ ಸಾದ್ಯತೆಗಳನ್ನೂ ಮಗು ಅರ‍್ತ ಮಾಡಿಕೊಳ್ಳುವಂತಿರಬೇಕು.
ಆ ಬಾಶೆಯ ಸಾಮಾಜಿಕತೆ, ಸಾಂಸ್ಕೃತಿಕ ಹಿನ್ನೆಲೆ ಮೊದಲಾದವನ್ನು ಮಗುವಿಗೆ ಹಿಡಿದುಕೊಳ್ಳುವುದಕ್ಕೆ ಸಾದ್ಯವಾಗಬೇಕು. ಇಶ್ಟು ಮಾತ್ರವಲ್ಲದೆ ಮಗು ಆ ಬಾಶೆಯನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳುವಂತಿರಬೇಕು. ಆ ಬಾಶೆಯನ್ನು ದಿನಜೀವನದಲ್ಲಿ ಬಳಸುವುದಕ್ಕೆ ಸಾದ್ಯವಾಗುವಂತಿರಬೇಕು. ಮಗುವಿಗೆ ಕೊಡುವ ಈ ಬಾಶೆ ಉತ್ಪಾದಕವಾಗಿರಬೇಕು. ಶಿಕ್ಶಣದ ಉದ್ದೇಶವೆ ಮಕ್ಕಳು ಅದನ್ನು ತಮ್ಮ ಜೀವನದಲ್ಲಿ ಬಳಸಿಕೊಳ್ಳಬೇಕು ಎಂಬುದಾಗಿರುತ್ತದೆ. ಅದರಿಂದ ಮುಂದುವರೆದು ಮಕ್ಕಳು ತಮಗೊದಗುವ ಶಿಕ್ಶಣವನ್ನು ಬಳಸಿಕೊಂಡು ಕುಶಲತೆಯನ್ನು ಬೆಳೆಸಿಕೊಳ್ಳಬೇಕು. ಬದುಕು, ಸಮಾಜ, ಸಂಸ್ಕೃತಿಗಳ ಸೂಕ್ಷ್ಮತೆಗಳನ್ನು ಬೆಳೆಸಿಕೊಳ್ಳಬೇಕು. ಅದರಂತೆ ಆ ಪಟ್ಯಗಳನ್ನು ಕೊಡುವ ಬಾಶೆಯೂ ಕೂಡ ಮಕ್ಕಳಲ್ಲಿ ಕುಶಲತೆಯನ್ನು, ಸೂಕ್ಷ್ಮತೆಯನ್ನು ಬೆಳೆಸಿಕೊಳ್ಳುವುದಕ್ಕೆ ಅನುವಾಗುವಂತಿರಬೇಕು.
ಕಳೆದು ಸುಮಾರು ನಲವತ್ತು-ಅಯವತ್ತು ವರುಶಗಳಿಂದ ಇದುವರೆಗೆ ಮಕ್ಕಳಿಗೆ ಶಿಕ್ಶಣವನ್ನು ಯಾವ ಬಾಶೆಯಲ್ಲಿ ಕೊಡಬೇಕು ಎಂಬುದನ್ನು ಸಾಕಶ್ಟು ಅದ್ಯಯನ ಮಾಡಲಾಗುತ್ತಿದೆ. ಹಲವಾರು ಕಾರಣಗಳಿಗಾಗಿ ಸಂಶೋದನೆಗಳು ಮೊದಲಾದವು. ಈ ಅದ್ಯಯನಗಳು ಮೂಲಬೂತವಾಗಿ ಶಿಕ್ಶಣ ಸುದಾರಣೆಯ ಬಾಗವಾಗಿ, ಆರ‍್ತಿಕ ಅಬಿರುದ್ದಿಯ ಬಾಗವಾಗಿ ಬಂದಿರುವುದನ್ನು ಗಮನಿಸಬೇಕು. ವಿಶ್ವಸಂಸ್ತೆ ಇಂತಾ ಹಲವು ಅದ್ಯಯನಗಳನ್ನು ಮಾಡಿದೆ ಮತ್ತು ಇಂತಾ ಹಲವು ಅದ್ಯಯನಗಳ ಸಾರವನ್ನು ಸಂಗ್ರಹಿಸಿ ಕೊಡುತ್ತದೆ ಕೂಡ. ಜಗತ್ತಿನ ಎಲ್ಲ ಬಾಗಗಳಲ್ಲಿಯೂ ಇಂತಾ ಅದ್ಯಯನಗಳು ನಡೆಯುತ್ತಿವೆ. ಶಿಕ್ಶಣದ ಸೋಲಿಗೆ ಕಾರಣವಾಗುವ ಅಂಶಗಳನ್ನು ತಿಳಿದುಕೊಳ್ಳುವುದಕ್ಕೆ ಮತ್ತು ಶಿಕ್ಶಣದ ಗುಣಾತ್ಮಕ ಬೆಳವಣಿಗೆಯ ಆಶಯವನ್ನು ಇಟ್ಟುಕೊಂಡು ಹಲವಾರು ಸಂಶೋದನೆಗಳು ಬಂದಿವೆ. ಶಿಕ್ಶಣ ಮಾದ್ಯಮವನ್ನು ಕುರಿತಾದ ಬಹುತೇಕ ಅದ್ಯಯನಗಳು ತಾಯ್ಮಾತಿನ ಶಿಕ್ಶಣ ಇಲ್ಲದಿರುವುದು ಮತ್ತು ಪೆರಮಾತಿನ ಶಿಕ್ಶಣ ಇರುವುದು ಶಿಕ್ಶಣದ ವಿಪಲತೆಗೆ ಒಂದು ಪ್ರದಾನ ಕಾರಣ ಎಂಬುದನ್ನು ಕಂಡುಕೊಂಡಿವೆ. ಮುಂದುವರೆದು ತಾಯ್ಮಾತಿನ ಶಿಕ್ಶಣ ಹೆಚ್ಚು ಯಶಸ್ಸನ್ನು ಪಡೆದುಕೊಂಡಿದೆ ಎಂಬುದನ್ನೂ ಈ ಅದ್ಯಯನಗಳು ತೋರಿಸುತ್ತವೆ.
ಕಲಿಕೆಯ ವಿವಿದ ಹಂತಗಳನ್ನು ಬಾಶೆಗೆ ಹೊಂದಿಸಿಕೊಂಡು ತುಸು ಮಾತನಾಡಬಹುದು. ಈ ಮೇಲೆ ಮಾತನಾಡಿದಂತೆ ಮ್ಕಕಳು ಶಾಲೆಗೆ ಬರುವ ವೇಳೆಗೆ ತಮ್ಮ ತಾಯ್ಮಾತಿನಲ್ಲಿ ಪ್ರವೀಣರಾಗಿರುತ್ತಾರೆ. ಈಗ ಶಾಲೆಯಲ್ಲಿ ಬಾಶೆಯನ್ನು ಕಲಿಸುವುದು ಅವರು ಈಗಾಗಲೆ ಕಲಿತ ಬಾಶಿಕ ಕವುಶಲಗಳನ್ನು ಇನ್ನಶ್ಟು ಗಟ್ಟಿಗೊಳಿಸುವ, ವಿಸ್ತರಿಸುವ ಆಶಯದಿಂದ. ಅದಲ್ಲದೆ ಸ್ರುಜನೆ ಮತ್ತು ಚಿಂತನೆಗಳನ್ನು ಮಕ್ಕಳು ಬೆಳೆಸಿಕೊಳ್ಳಲಿ ಎಂಬ ಆಶಯದಿಂದ ಬಾಶೆಯನ್ನು ಕಲಿಸಲಾಗುತ್ತದೆ.
ಮಗುವೊಂದು ತಾಯ್ಮಾತನ್ನು ಗಳಿಸುವ ಪ್ರಕ್ರಿಯೆ ಸಾಮಾನ್ಯವಾಗಿ ಮಗುವಿಗೆ ಎಂಟು-ಹತ್ತು ತಿಂಗಳು ತುಂಬಿದಾಗ ಇಲ್ಲವೆ ಆರು ತಿಂಗಳ ನಂತರ ಶುರುವಾಗುತ್ತದೆ. ಸಾಮಾನ್ಯವಾಗಿ ನಾಲ್ಕು ವರುಶ ತುಂಬವ ವೇಳೆಗೆ ಮಗು ತನ್ನ ಬಾಶೆಯ ಎಲ್ಲ ರಚನೆಗಳನ್ನೂ ಬಳಸುವ ಸಾಮರ್‍ತ್ಯವನ್ನು ಪಡೆದಿರುತ್ತದೆ. ಅಂದರೆ ಬಾಶೆಯ ಗಳಿಕೆ ಪ್ರಕ್ರಿಯೆ ನಾಲ್ಕು ವರುಶದ ವೇಳೆಗೆ ಒಂದು ಹಂತವನ್ನು ತಲುಪಿರುತ್ತದೆ. ಆದರೆ ಬಾಶೆಯ ಕಲಿಕಾ ಪ್ರಕ್ರಿಯೆ ಮುಗಿದಿರುವುದಿಲ್ಲ ಮತ್ತು ಅದು ಜೀವನದ ಕೊನೆವರೆಗೆ ನಡೆದಿರುತ್ತದೆ. ನಾಲ್ಕು ವರುಶದ ವೇಳೆಗೆ ಮಗುವೊಂದಕ್ಕೆ ತನ್ನ ಬಾಶೆಯ ಎಲ್ಲ ರಚನೆಗಳನ್ನು ಬಳಸುವ ಸಾಮರ್‍ತ್ಯ ಒದಗಿರುವುದು ನಿಜವಾದರೂ ಬಾಶೆಯನ್ನು ಬದುಕಿನ ಮತ್ತು ಸಮಾಜದ ವಿವಿದ ವಲಯಗಳಲ್ಲಿ ಬಳಸುವ ಕವುಶಲ ಅದಕ್ಕೆ ದಕ್ಕಿರುವುದಿಲ್ಲ. ಆ ವಯಸ್ಸಿಗೆ ಎಲ್ಲ ವಲಯಗಳ ಬಾಶೆಯ ಬಳಕೆಯ ಸಾಮರ್‍ತ್ಯವನ್ನು ಬೆಳೆಸಿಕೊಳ್ಳುವುದಕ್ಕೆ ಸಾದ್ಯವಿಲ್ಲ. ಹಾಗಾಗಿ ಆನಂತರವೂ ಇನ್ನೂ ಕೆಲವು ವರುಶಗಳ ಕಾಲ ಬಾಶಾ ಗಳಿಕೆ-ಕಲಿಕೆ ಪ್ರಕ್ರಿಯೆ ಮುಂದುವರೆಯುತ್ತದೆ. ಸುಮಾರು ಹತ್ತು-ಹನ್ನೆರಡು ವರುಶಗಳವರೆಗೆ ತಾಯ್ಮಾತಿನ ಗಳಿಕೆ-ಕಲಿಕೆ ಪ್ರಕ್ರಿಯೆ ಮುಂದುವರೆಯುತ್ತದೆ ಎಂದು ವಿದ್ವಾಂಸರು ನಂಬುತ್ತಾರೆ. ಅಂದರೆ ಮಗುವೊಂದು ಬಾಶಾಪರಿಣತ ಎನಿಸಿಕೊಳ್ಳಲು ಅದು ಬಾಶೆಯನ್ನು ವಿವಿದ ವಲಯಗಳಲ್ಲಿ, ವಿವಿದ ವಿಶಯಗಳಲ್ಲಿ ಬಳಸಲು ಸಾದ್ಯವಾಗುವಂತಿರಬೇಕು.
ಈ ಮೇಲೆ ಒಬ್ಬ ವ್ಯಕ್ತಿಗೆ ಒಂದು ವಿಶಯವನ್ನು ಕೊಡುವುದಕ್ಕೆ ಬಳಸಬಹುದಾದ ಬಾಶೆಯ ಬಗೆಗೆ ಮಾತನಾಡಿದೆವು. ಹಾಗೆಯೆ ಮಗುವಿಗೆ ಶಿಕ್ಶಣವನ್ನು ಕೊಡುವಾಗಲೂ ಈ ವಿಚಾರಗಳನ್ನು ಸೂಕ್ಷ್ಮವಾಗಿ ಯೋಚಿಸಬೇಕಾಗುತ್ತದೆ. ಮಗುವೊಂದು ಅದಾಗಲೆ ತನ್ನ ತಾಯ್ಮಾತಿನಲ್ಲಿ ತನ್ನದೆ ಆದ ಜಗತ್ತನ್ನು ರೂಪಿಸಿಕೊಂಡಿರುತ್ತದೆ. ಆ ಜಗತ್ತಿನಲ್ಲಿ ಸಂಬಂದಗಳು, ಕುಟುಂಬ ಅಲ್ಲಿಂದ ಮೊದಲ್ಗೊಂಡು ಸುತ್ತಲಿನ ಸಮಾಜ, ಪರಿಸರ ಮೊದಲಾದವುಗಳು ತುಂಬಿಕೊಂಡಿರುತ್ತವೆ. ಶಿಕ್ಶಣವು ಮಗುವಿನಲ್ಲಿ ಈಗಾಗಲೆ ಇರುವ ಸರಕನ್ನು ಆದಾರವಾಗಿಟ್ಟುಕೊಂಡು ಹೊಸ ವಿಶಯಗಳನ್ನು ಅವರಿಗೆ ಒದಗಿಸುವುದು ಎಂಬುದನ್ನೂ ಮಾತನಾಡಿದೆವು. ಮಗುವಿಗೆ ಆರಂಬದ ಶಿಕ್ಶಣದಲ್ಲಿ ಸಂಬಂದಗಳು, ಕುಟುಂಬ, ಪರಿಸರ, ಸಮಾಜ, ಸಂಸ್ಕೃತಿ, ಇತಿಹಾಸ ಮೊದಲಾದವನ್ನು ಕಲಿಸಿಕೊಡಲಾಗುವುದು. ಮಗು ಶಾಲೆಗೆ ಬರುವಾಗ ಈಗಾಗಲೆ ಈ ಎಲ್ಲವುಗಳೊಂದಿಗೆ ಒಂದು ಸಹಜ ನಂಟನ್ನು ಹೊಂದಿರುತ್ತದೆ. ಹಾಗಾಗಿ ಈ ಯಾವುದನ್ನೆ ಕಲಿಸುವಾಗಲೂ ಮಗು ಈಗಾಗಲೆ ಹೊಂದಿರುವ ಅನುಬವ ಮುಕ್ಯವಾಗುತ್ತದೆ. ಇದುವರೆಗಿನ ಅನುಬವವನ್ನೆ ಇಲ್ಲಿ ಬಿನ್ನ ಮತ್ತು ಸೂಕ್ತವಾದ ರೀತಿಯಲ್ಲಿ ಪರಿಚಯಿಸಲಾಗುತ್ತದೆ. ಇನ್ನು ಕೆಲವೊಮ್ಮೆ ಇದುವರೆಗಿನ ಅನುಬವಗಳ ಮುಂದುವರಿಕೆಯನ್ನು ಮಕ್ಕಳಿಗೆ ಕಲಿಸಿಕೊಡುತ್ತೇವೆ. ಈ ಎರಡೂ ಸಂದರ‍್ಬಗಳಲ್ಲಿಯೂ ಮಕ್ಕಳ ಇದುವರೆಗಿನ ಅನುಬವ ಸಹಾಯಕ. ಮಕ್ಕಳಿಗೆ ಕ್ರಮೇಣ ಇದುವರೆಗೆ ಗೊತ್ತಿಲ್ಲದ ಹಲವು ವಿಚಾರಗಳನ್ನು ಪರಿಚಯಿಸಲು ಮುಂದಾಗಬಹುದು.
ಹೀಗೆ ಮುಂದುವರಿಯುವಾಗ ಮಕ್ಕಳ ಇದುವರೆಗಿನ ಅನುಬವ ಆ ಮಗುವಿನ ತಾಯ್ಮಾತಿನಲ್ಲಿ ಇರುತ್ತದೆ. ಯಾವುದೆ ಒಂದು ವಿಶಯವನ್ನು ಮ್ಕಕಳಿಗೆ ಕೊಡುವುದು ಎಂದರೆ ಅದು ಒಂದು ಸಂಕರ‍್ಣ ಪ್ರಕ್ರಿಯೆಯನ್ನು ಹೊಂದಿರುತ್ತದೆ. ಒಂದು ವಿಶಯದ ಕಲಿಕೆ ಎಂದರೆ ಅದು ಮೂಲಬೂತವಾಗಿ ಒಂದು ಪರಿಕಲ್ಪನೆ. ಆ ಪರಿಕಲ್ಪನೆ ಬದುಕಿನ ಇಲ್ಲವೆ ಸಮಾಜದ ನರ‍್ದಿಶ್ಟ ವಲಯಕ್ಕೆ ಸಂಬಂದಪಡುವಂತದ್ದಾಗಿರುತ್ತದೆ. ಅವೆರಡರ ನಡುವೆ ಇರುವ ಸಾವಯವ ನಂಟನ್ನು ಮಗು ಮೊದಲು ಅರ‍್ತ ಮಾಡಿಕೊಳ್ಳಬೇಕು. ಮುಂದುವರೆದು ಅದಕ್ಕೆ ಪದ, ಅರ‍್ತ, ಬಳಕೆ, ಉಪಯೋಗ ಈ ಮೊದಲಾದವನ್ನು ತಿಳಿದುಕೊಳ್ಳಬೇಕು.
ಇವೆಲ್ಲ ಬಹು ಸಂಕರ‍್ಣವಾದ ಪ್ರಕ್ರಿಯೆ. ಮಗು ತನಗೆ ತಿಳಿದ ಅನುಬವದೊಂದಿಗೆ ಇದನ್ನು ಮೊದಲು ತಾಕಿಸಿಕೊಂಡು ಆನಂತರ ಅದರ ಮೇಲೆ ಹಿಡಿತ ಸಾದಿಸಬೇಕು. ಹಾಗಾದರೆ ಮಗು ತನಗೆ ತಿಳಿದಿರುವ ಅನುಬವ ಲೋಕಕ್ಕೆ ಹೊಸದೊಂದನ್ನು ನಂಟಿಸಿಕೊಳ್ಳುವುದಕ್ಕೆ ಅವಶ್ಯವಾಗಿ ಆಲೋಚಿಸಬೇಕು. ಈ ಎಲ್ಲ ಪ್ರಕ್ರಿಯೆಗಳಿಗೆ ಮಗುವಿನ ತಾಯ್ಮಾತು ಸಹಜವಾಗಿ ನೆಲೆ ಒದಗಿಸುತ್ತದೆ. ಮೊದಲಲ್ಲಿ ತಾಯ್ಮಾತು ಹೇಗೆ ಮಗುವಿನ ಮಾನಸಿಕ ಮತ್ತು ಸಾಮಾಜಿಕ ರಚನೆಯನ್ನು ರೂಪುಗೊಳಿಸುತ್ತದೆ ಎಂಬುದನ್ನು ನೋಡಿದೆ. ಈ ರೀತಿಯಲ್ಲಿ ಶಿಕ್ಶಣದ ಮೂಲಕ ಏನನ್ನು ಕೊಡಲಾಗುತ್ತದೆಯೊ ಅದು ಈ ಎಲ್ಲ ಸಂಕರ‍್ಣ ಪ್ರಕ್ರಿಯೆಯಲ್ಲಿ ಮಗುವಿನ ವಶವಾಗುತ್ತದೆ. ಆಗ ಮಗು ಅದನ್ನು ಸರಿಯಾಗಿ ಅರ‍್ತ ಮಾಡಿಕೊಳ್ಳಬಲ್ಲದು ಮತ್ತು ಆನಂತರವೆ ಅದನ್ನು ಬಳಸಲು ಸಾದ್ಯ. ಅಲ್ಲಿಗೆ ಶಿಕ್ಶಣದ ಯಶಸ್ಸು ಆಯಿತು. ಹೀಗೆ ಶಿಕ್ಶಣ ಎನ್ನುವಂತದ್ದು ಮಗುವೊಂದು ಶಾಲೆಗೆ ಬರುವುದಕ್ಕಿಂತ ಮೊದಲು ಇದ್ದ ಸ್ತಿತಿಯಿಂದ ಮುಂದಕ್ಕೆ ತೆಗೆದುಕೊಂಡು ಹೋಗುವುದು ಎಂದು ತಿಳಿದುಕೊಳ್ಳಬಹುದು.
“ಇದು ಶಾಮನೂರು ಶಿವಶಂಕರಪ್ಪ ಕುರಿತು ಅವರ ಬಹುಮುಖಿ ವ್ಯಕ್ತಿತ್ವ ದರ್ಶನದ ಪುಟ್ಟ ಪರಿಚಯ. ಅವರು ನಡೆದು ಬಂದ...
“ಮಜಬೂತಾದ ವೃತ್ತಿರಂಗ ಕಂಪನಿ ಕಟ್ಟಲು ಅನೇಕ ಅನುಭವಗಳ ಮಜಕೂರಗಳು ಎಸ್. ಎಮ್. ಖೇಡಗಿಯವರ ಮನೋರಂಗ ಕಣಜದಲ್ಲಿವೆ. ಫು...
"ಹೊಟ್ಟೆ ಪಾಡಿಗಾಗಿ ಬೆಂಗಳೂರಿಗೆ ಬಂದ ಉತ್ತರ ಕರ್ನಾಟಕದ ನಿಮಗೆಲ್ಲ " ಬೆಂಗಳೂರು ಹೊಟ್ಟೆಯ ಹಸಿವು ನೀಗಿಸುತ್ತ...
©2025 Book Brahma Private Limited.