ಕನ್ನಡ ವಿಮರ್ಶೆ 4 (ಮುಂದುವರೆದ 4ನೆ ಭಾಗ)  

Date: 24-01-2025

Location: ಬೆಂಗಳೂರು


"ನಾಡು ಕಟ್ಟುವ, ಸಂಸ್ಕೃತಿಯನ್ನು ಪುನರುಜ್ಜೀವಿಸುವ ಕೆಲಸವನ್ನು ಕೈಗೆತ್ತಿಗೊಂಡ ಬರಹಗಾರರಲ್ಲಿ ನಾವೆಲ್ಲರು ಒಂದಾಗಿ ಇರಬೇಕು ಎಂಬ ಭಾವನಾತ್ಮಕ ಏಕತೆಯ ಭಾವ ಇದ್ದ ಹಾಗೆಯೇ ಇಡೀ ಸಮಾಜವನ್ನು ವಿದ್ಯಾವಂತ-ಅವಿದ್ಯಾವಂತ ಎಂಬ ಎರಡು ತರತಮ ಬೌದ್ದಿಕ ವರ್ಗಗಳಾಗಿ ನೋಡುವ ದೃಷ್ಟಿಯೂ ಇದೆ," ಎನ್ನುತ್ತಾರೆ ಡಾ. ರಾಮಲಿಂಗಪ್ಪ ಟಿ. ಬೇಗೂರು. ಅವರು ತಮ್ಮ ‘ನೀರು ನೆರಳು’ ಅಂಕಣದಲ್ಲಿ ಬರೆದಿರುವ ‘ಕನ್ನಡ ವಿಮರ್ಶೆ ಭಾಗ-4’ (ಮುಂದುವರೆದ 4ನೆ ಭಾಗ) ವಿಮರ್ಶಾ ಸರಣಿ ನಿಮ್ಮ ಓದಿಗಾಗಿ..

1.14.2. ಧರ್ಮ ನಿರಪೇಕ್ಷೀಕರಣ

ವಿಜ್ಞಾನವಾದ, ವಿಚಾರವಾದ, ಸುಧಾರಣಾವಾದ, ರಾಷ್ಟ್ರೀಯತಾವಾದಗಳ ಪ್ರಭಾವದಿಂದಾಗಿ ಆಧುನಿಕ ಕನ್ನಡ ವಿಮರ್ಶೆಯು ಪಡೆದುಕೊಂಡ ಒಂದು ಮುಖ್ಯ ದೃಷ್ಟಿ ಧರ್ಮ ನಿರಪೇಕ್ಷೀಕರಣ. ವೈಚಾರಿಕ, ನೈತಿಕ ನೆಲೆಗಳಿಂದ ನಿಯಂತ್ರಿತವಾದ ಈ ಕಾಲದ ಬಹುಪಾಲು ವಿಮರ್ಶೆ ಧರ್ಮ ನಿರಪೇಕ್ಷ, ಮತಾತೀತ, ರಸನಿಷ್ಠ ಕಾವ್ಯಭಾಗಗಳನ್ನು ಶ್ರೇಷ್ಠ ಮತ್ತು ಅಧ್ಯಯನ ಯೋಗ್ಯ ಎಂದು ಭಾವಿಸಿತು. ಹಾಗೆ ಭಾವಿಸಿ ಅಂತಹ ರಸಘಟ್ಟದ ಭಾಗಗಳನ್ನು ಮಾತ್ರ ಸಂಗ್ರಹಿಸಿ, ಎಡಿಟ್ಟು ಮಾಡಿ ಹಲವಾರು ಸಂಪಾದನಾ (ಸಂಗ್ರಹ) ಕೃತಿಗಳನ್ನು ಪ್ರಕಟಿಸಿತು. ವಚನಗಳು, ಕೀರ್ತನೆಗಳು, ಕುಮಾರವ್ಯಾಸ ಭಾರತ, ಹರಿಶ್ಚಂದ್ರ ಕಾವ್ಯ ಇವುಗಳೆಲ್ಲವೂ ಧರ್ಮ ನಿರಪೇಕ್ಷೀಕರಣಕ್ಕೆ ಒಳಗಾದವು.ಮಠಗಳು, ಆಶ್ರಮಗಳು, ಧಾರ್ಮಿಕ ಸಂಸ್ಥೆಗಳಲ್ಲಿ ರಕ್ಷಣೆಗೆ, ಆಚರಣೆಗೆ ಗುರಿಯಾಗಿದ್ದ ಸಾಹಿತ್ಯಗಳು ಅಕಾಡೆಮಿಕ್ ವಲಯಗಳಲ್ಲಿ ಪಠ್ಯಾನುಸಂಧಾನಕ್ಕೆ ಗುರಿಯಾಗತೊಡಗಿದವು.

ಆದಿಪುರಾಣದ ಕುರಿತ ತಮ್ಮ ಲೇಖನದಲ್ಲಿ ತೀನಂಶ್ರೀ ಧರ್ಮದ ಕಸವನ್ನು ತೆಗೆದುಹಾಕಿದರೆ ಮಿಕ್ಕಂತೆ ಅದು ಶ್ರೇಷ್ಠ ಕಾವ್ಯ ಎಂದು ಬರೆದರು. ವಚನಗಳಿಗೇ ಒಂದು ಸಾರ್ವತ್ರಿಕ ಮಾನವಧರ್ಮ ಇದೆ ಎಂದು ಎಂ.ಆರ್.ಶ್ರೀನಿವಾಸಮೂರ್ತಿ, ಹಳಕಟ್ಟಿ ಆ ಹಿನ್ನೆಲೆಯಲ್ಲಿ ವಚನ ಸಂಪಾದನೆ ಮಾಡಿದರು. ಚರಿತ್ರೆ ರಚನೆಯಲ್ಲಿನ ವಿಭಾಗೀಕರಣದ ಚರಿತ್ರೆ ನೋಡಿದರೆ ಬಸವಯುಗ-ವೀರಶೈವಯುಗ-ನಡುಗನ್ನಡ ಯುಗ, ಜೈನಯುಗ-ಪಂಪಯುಗ-ಹಳಗನ್ನಡ ಯುಗ ಇತ್ಯಾದಿಯಾದ ವಿಭಾಗೀಕರಣಗಳನ್ನು ನೋಡಿದರೆ ಈ ಕರ್ಷಣಗಳು ಚೆನ್ನಾಗಿ ಅಲ್ಲಿ ಕಾಣುತ್ತವೆ. ವಿಂಗಡಣೆ, ವ್ಯಾಖ್ಯಾನ, ಪರಿಷ್ಕರಣೆ, ಸಂಗ್ರಹ, ಶ್ರೇಷ್ಠತೆಯ ಪ್ರಶ್ನೆ ಹೀಗೆ ಹಲವು ಬಗೆಗಳಲ್ಲಿ ಈ ಕರ್ಷಣವು ಪ್ರಕಟವಾಗಿದೆ. ಧರ್ಮಬದ್ಧ ವ್ಯಾಖ್ಯಾನ, ಧರ್ಮನಿರಪೇಕ್ಷ ವಾಖ್ಯಾನಗಳೆರಡೂ ಇಲ್ಲಿ ಇದ್ದರೂ ಅವುಗಳಲ್ಲಿ ಧರ್ಮ ನಿರಪೇಕ್ಷತೆಯ ಕಡೆಗೆ ಹೆಚ್ಚು ಒಲವಿರುವುದನ್ನು ಕಾಣಬಹುದು.

1.14.3. ಎನ್‌ಲೈಟನ್‌ಮೆಂಟ್ ದೃಷ್ಟಿ-ವೈಟ್‌ಮ್ಯಾನ್ಸ್ ಬರ್ಡನ್ ಧೋರಣೆ

ಸಾಮಾನ್ಯರ ಸಮಾಜ ಮೌಢ್ಯದಿಂದ ತುಂಬಿದೆ, ಅದನ್ನು ನಾವು ತಿಳುವಳಿಕೆ ನೀಡಿ ಆಧುನೀಕರಿಸಬೇಕಾಗಿದೆ. ಇಡೀ ಸ್ಥಳೀಯ (ನೇಟಿವ್) ಸಮುದಾಯ ಅಜ್ಞಾನ, ಅಂಧಕಾರಗಳಿಂದ ತುಂಬಿದೆ. ಅದನ್ನು ವಿಜ್ಞಾನದ ದೀವಿಗೆಯಿಂದ ಬೆಳಗಬೇಕಾಗಿದೆ. ಅಂಥ ಜನರನ್ನು ಎಚ್ಚರಿಸಬೇಕಾದ ಹೊಣೆ (ಬರ್ಡನ್ ಅಲ್ಲ ರೆಸ್ಪಾನ್ಸಿಬಲಿಟಿ) ನಮ್ಮ ಮೇಲಿದೆ ಎಂಬ ತಿಳುವಳಿಕೆ ನಮ್ಮವರಿಗೂ ಇದ್ದಂತೆ ಕಾಣುತ್ತದೆ. ಈ ಧೋರಣೆಯು ಪರಂಪರೆಯ ಪರಿಷ್ಕರಣ ಮತ್ತು ಪ್ರಚಾರಗಳಲ್ಲಿ ಕೆಲಸ ಮಾಡಿದೆ. ವಿಮರ್ಶೆಯಲ್ಲಿ ಈ ಧೋರಣೆಯು ವಿಶ್ಲೇಷಣೆ ವ್ಯಾಖ್ಯಾನಗಳಿಗಿಂತ ವಿವರಣೆಯ ಕಡೆಗೆ ಹೊರಳಲು ಕಾರಣವಾಗಿದೆ. ಸಾಹಿತ್ಯ ಪ್ರಚಾರ ಕರ‍್ಯದಲ್ಲೂ ಸರಿಸುಮಾರು ಇದೇ ಧೋರಣೆ ಕೆಲಸ ಮಾಡಿದೆ. ಸಾಹಿತ್ಯ ತತ್ವ, ವಿಮರ್ಶಾ ಕಾರ‍್ಯಗಳ, ವಿಮರ್ಶಾ ತತ್ವಗಳ ನಿರ್ಮಾಣದಲ್ಲೂ ಈ ಧೋರಣೆ ಕೆಲಸ ಮಾಡಿರುವುದನ್ನು ಕಾಣಬಹುದು.

1.14.4. ಜಾನಪದ-ಶಿಷ್ಠ/ವಿದ್ಯಾವಂತ-ಅವಿದ್ಯಾವಂತ

ನಾಡು ಕಟ್ಟುವ, ಸಂಸ್ಕೃತಿಯನ್ನು ಪುನರುಜ್ಜೀವಿಸುವ ಕೆಲಸವನ್ನು ಕೈಗೆತ್ತಿಗೊಂಡ ಬರಹಗಾರರಲ್ಲಿ ನಾವೆಲ್ಲರು ಒಂದಾಗಿ ಇರಬೇಕು ಎಂಬ ಭಾವನಾತ್ಮಕ ಏಕತೆಯ ಭಾವ ಇದ್ದ ಹಾಗೆಯೇ ಇಡೀ ಸಮಾಜವನ್ನು ವಿದ್ಯಾವಂತ-ಅವಿದ್ಯಾವಂತ ಎಂಬ ಎರಡು ತರತಮ ಬೌದ್ದಿಕ ವರ್ಗಗಳಾಗಿ ನೋಡುವ ದೃಷ್ಟಿಯೂ ಇದೆ. ಇದೇ ತರತಮ ದೃಷ್ಟಿ ಸಾಹಿತ್ಯ ವಲಯದಲ್ಲೂ ಬೇರೊಂದು ರೀತಿಯಲ್ಲಿ ಇದೆ. ಸಾಹಿತ್ಯವನ್ನು ಶಿಷ್ಟ ಸಾಹಿತ್ಯ ಮತ್ತು ಜಾನಪದ ಸಾಹಿತ್ಯವೆಂದು ನೋಡುವ ದೃಷ್ಟಿ ಇದು. ವಿಮರ್ಶೆಯಲ್ಲಿ ಸ್ವಷ್ಟವಾಗಿ ಈ ಎರಡಕ್ಕೂ ಭಿನ್ನ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ. ಇದನ್ನೇ “ನವೋದಯದ ವಿಮರ್ಶೆಯಲ್ಲಿ ‘ಕೃತಿ ಮತ್ತು ಸಹೃದಯ’ ಎನ್ನುವ ಪ್ರಶ್ನೆಯನ್ನು ‘ರಸಾನುಭವ’ ದ ಹಿನ್ನೆಲೆಯಲ್ಲಿ ಗ್ರಹಿಸಿದರೆ ಅದಕ್ಕೊಂದು ರೀತಿಯ ಅರ್ಥ ಮಾತ್ರವೇ ದೊರೆಯುತ್ತದೆ. ಬುದ್ಧಿ ಜೀವಿವರ್ಗವೊಂದು ತನಗೆ ಬೇಕಾದ ರೀತಿಯಲ್ಲಿ ಭಾರತೀಯ ಕಾವ್ಯಮೀಮಾಂಸೆಗೆ ಪ್ರತಿಕ್ರಿಯಿಸುವ ವಿಧಾನವನ್ನು ರೂಪಿಸಿಕೊಂಡರೆ ಅಲ್ಲಿ ‘ಏಕಮುಖ’ವಾದ ಓದು ಮಾತ್ರ ಸಿದ್ಧವಾಗುತ್ತದೆ. ಕನ್ನಡ ಜಾನಪದ ಕಾವ್ಯಗಳ ಚರ್ಚೆಯಲ್ಲಿ ಯಾವತ್ತಾದರೂ ಈ ‘ರಸಸಿದ್ಧಾಂತ’ ಸಹೃದಯ ಸಿದ್ಧಾಂತದ ಪರಿಕಲ್ಪನೆಗಳು ಮೂಡಿಬಂದಿವೆಯೇ? ನವೋದಯದ ವಿಮರ್ಶಕರು ಅನೇಕ ಸಂದರ್ಭಗಳಲ್ಲಿ ಜಾನಪದದ ಬಗೆಗೆ ಬರೆದ ಅನೇಕ ಲೇಖನಗಳಲ್ಲಿ ಶಿಷ್ಟ ಮತ್ತು ಜಾನಪದವೆಂಬ ವರ್ಗೀಕರಣವಿದ್ದು ಎರಡೂ ಪ್ರಸ್ಥಾನಗಳ ಬಗೆಗೆ ಬೇರೆ ಬೇರೆ ರೀತಿಯ ಸಾಹಿತ್ಯದ ವಿಮರ್ಶೆಯ ಪರಿಕರವನ್ನು ಬಳಸಿಕೊಂಡರು”25 ಎಂದು ಕೇಶವರ‍್ಮರು ಹೇಳಿದ್ದಾರೆ.

1.14.5. ಪಾಂಡಿತ್ಯ-ವ್ಯುತ್ಪತ್ತಿ

ಅಕ್ಷರಸ್ಥ, ಅನಕ್ಷರಸ್ಥ ಎಂದು ಇಡೀ ಸಮಾಜವನ್ನು ಶಿಕ್ಷಣ ವ್ಯವಸ್ಥೆಯು ವಿಂಗಡಿಸಿ ಶ್ರೇಣೀಕರಿಸಿದುದು ಪುನರುಜ್ಜೀವನ ಯುಗದ ಒಂದು ಮುಖ್ಯ ವಿದ್ಯಮಾನ. ಹೊಸ ಅಸಮಾನ ವರ್ಗೀಕರಣವನ್ನು ಶಿಕ್ಷಣ ವ್ಯವಸ್ಥೆಯು ಜಾರಿಗೊಳಿಸಿದ್ದರಿಂದ ಸಾಹಿತ್ಯವನ್ನು ಕೇಳುವ, ನೋಡುವ, ಹಾಡುವ ಮುಂತಾದ ಬಹುಮುಖಿ ಅನುಸಂಧಾನಗಳು ವಿಮರ್ಶೆಯಲ್ಲಿ ಪ್ರಾಶಸ್ತ್ಯ ಕಳೆದುಕೊಂಡದ್ದು ಈಗ ಇತಿಹಾಸ. ವಿಮರ್ಶೆ ಎಂದರೆ ವ್ಯಾಸಂಗಪೂರ್ಣ ವಿಶ್ಲೇಷಣೆ ಎಂಬ ಪಶ್ಚಿಮ ಪ್ರಣೀತ ನಿರ್ವಚನ ಸಾರ್ವತ್ರಿಕವಾಗಿದೆ. ಸಾಹಿತ್ಯದ ಬಹುಮುಖಿ ಅನುಸಂಧಾನಗಳಿಗೂ ಮತ್ತು ವಿಮರ್ಶೆಗೂ ನಡುವೆ ಕಂದರ ಹೆಚ್ಚಾಗುತ್ತ: ವಿಮರ್ಶಕ ಆಗುವವನಿಗೆ ಅಗಾಧವಾದ ಪಾಂಡಿತ್ಯ ಇರಬೇಕು; ಅವನು ಸಾಮಾನ್ಯರಿಗಿಂತ ಸಾಕಷ್ಟು ಭಿನ್ನವಾದ ಬೌದ್ಧಿಕ ಉನ್ನತಿಯನ್ನು ಹೊಂದಿರಬೇಕು; ಪ್ರಾಮಾಣಿಕವಾಗಿ, ಖಚಿತವಾಗಿ, ವಸ್ತುನಿಷ್ಟವಾಗಿ, ತರ್ಕಬದ್ಧವಾಗಿ ವಿಮರ್ಶೆ ಬರೆಯಬೇಕು ಎಂಬಂತಹ ನಂಬಿಕೆಗಳು ರೂಡಿಗೆ ಬಂದಂತೆ ಈ ಕಾಲದ ವಿಮರ್ಶೆಯನ್ನು ನೋಡಿದರೆ ತಿಳಿಯುತ್ತದೆ.

ಡಿ.ಎಲ್.ನರಸಿಂಹಾಚಾರ್, ಎ.ಆರ್.ಕೃ, ಎಸ್.ವಿ.ರಂಗಣ್ಣ, ತೀ.ನಂ.ಶ್ರೀಕಂಠಯ್ಯ, ವೀ.ಸೀ. ಇಂಥವರ ಬರವಣಿಗೆ ನೋಡಿದರೆ ಸಾಕು ಇವರೆಲ್ಲ ಪ್ರಕಾಂಡ ಪಂಡಿತರು ಎಂಬುದು ವ್ಯಕ್ತವಾಗುತ್ತದೆ. ಇವರಲ್ಲಿ ಕಲ್ಪನೆಗಳಿಲ್ಲದ, ಆಧಾರ-ನಿದರ್ಶನಗಳ ಸಮೇತ ಸಾಬೀತು ಮಾಡಬಹುದಾದ ಬೌದ್ಧಿಕ ವ್ಯಾಪಾರ ಎಂಬ ತಿಳುವಳಿಕೆಯಿಂದ ವಿಮರ್ಶೆ ಹುಟ್ಟಿ ಬೆಳೆದಂತೆ ಕಾಣುತ್ತದೆ. ವಿಮರ್ಶೆಯು ಸೃಜನಶೀಲವೋ ಸೃಜನೇತರವೋ ಎಂಬಂತಹ ಚರ್ಚೆಯೊಂದು ಚಾಲನೆಯಾಗಲು ಇಂತಹ ಬರವಣಿಗೆ-ಧೋರಣೆಗಳೇ ಕಾರಣವಾಗಿರಬಹುದು. ಹಳೆ ಕಾವ್ಯಮೀಮಾಂಸೆಗಳು, ಕೃತಿಪರೀಕ್ಷೆ ಹಾಗೂ ರಾಜಾಶ್ರಿತ ಪಂಡಿತವರ್ಗಗಳ ‘ಗೊಟ್ಟಿ’ಗಳು ಕೂಡ ಇಂಥದೇ ರೀತಿಯಲ್ಲಿ ಸಾಹಿತ್ಯದ ಜೊತೆಗೆ ಅನುಸಂಧಾನ ನಡೆಸುತ್ತ ಪಂಡಿತ ಪಾಮರ ಬೇಧವನ್ನು ನಿತ್ಯ ಜಾರಿಯಲ್ಲಿ ಇರಿಸಿದಂತೆ ಆಧುನಿಕ ಕಾಲದಲ್ಲೂ ಆದುದು ಚರಿತ್ರೆಯ ಮರುಕಳಿಕೆಯಾಗಿದೆ. ಈ ಕಾಲದಲ್ಲಿ ಸಾಹಿತ್ಯದ ಬಹುಮುಖಿ ಅನುಸಂಧಾನಗಳ ಬದಲಿಗೆ ವಿಶ್ಲೇಷಣೆ; ದೋಷನಿರ್ಣಯ; ಸ್ಥಾನ ನಿರ್ಣಯ; ವಸ್ತು-ಆಶಯಗಳ ಬಗೆಗೆ ತೀರ್ಪು ನೀಡುವ ನ್ಯಾಯ ನಿರ್ಣಯ ಧಾಟಿಗಳು ವಿಮರ್ಶೆಗೆ ತಗಲಿಕೊಂಡುವು. ಸಾಹಿತ್ಯದ ಪಾಂಡಿತ್ಯಪೂರ್ಣವಾದ ವಿಶ್ಲೇಷಕ ಶಕ್ತಿ ಇಲ್ಲದ ಸಾಹಿತ್ಯದ ಅನುಸಂಧಾನವು ವಿಮರ್ಶೆ ಅಲ್ಲ ಎಂಬ ನಂಬಿಕೆಯು ವ್ಯಾಪಕವಾಗಿ ಶಿಕ್ಷಿತ ವಲಯದಲ್ಲಿ ಈ ಕಾಲದಲ್ಲಿ ಬೆಳೆಯುತ್ತ ಬಂದಿತು. ವಿಮರ್ಶೆಯ ಉದ್ದೇಶ, ಕರ‍್ಯ, ಸ್ವರೂಪ, ವಿಧಾನ, ತಾತ್ವಿಕತೆಗಳಲ್ಲಿ ಪರಂಪರೆಗಿಂತ ಭಿನ್ನವಾದ ಪಲ್ಲಟಗಳು ಈ ಕಾಲದಲ್ಲಿ ಸಂಭವಿಸಿದವು. ಹೊಸನೀರಿನ ಕಾಲದಲ್ಲಿ ವಿಮರ್ಶೆಯಲ್ಲಿ ಆದ ಬಹು ಗುರುತರವಾದ ಬದಲಾವಣೆ ಇದು.

ವಾಚನ, ಕೀರ್ತನೆ, ಅಧ್ಯಯನ, ಪಾರಾಯಣ ಮೊದಲಾದ ಅನುಸಂಧಾನಗಳೂ ನಮ್ಮ ಪ್ರಾಚೀನರಲ್ಲಿ ಸಾಕಷ್ಟು ನಡೆದಿವೆ. ಆದರೆ ಆಧುನಿಕ ಕಾಲದಲ್ಲಿ ಆರಂಭಕ್ಕೆ ಇವಕ್ಕೆ ಪ್ರಾಶಸ್ತ್ಯ ಕಡಿಮೆಯಾಗಿದೆ. ಈಗೀಗ ಇವು ಹೆಚ್ಚು ಹೆಚ್ಚು ಆಚಾರಕ್ಕೆ ಬರುತ್ತಿವೆ.

ನಮ್ಮ ಪ್ರಾಚೀನರಲ್ಲಿ ವಿಮರ್ಶೆಯು ಇರಲಿಲ್ಲ ಎಂಬ ನಂಬಿಕೆಯೊಂದು ಈ ಕಾಲದಲ್ಲಿ ಚಾಲ್ತಿಗೆ ಬಂದಿತು. ಆಧುನಿಕ ವಿಮರ್ಶೆಯ ಕಾರ‍್ಯ-ಸ್ವರೂಪ-ವಿಧಾನಗಳನ್ನೆ ಅಂತಿಮವೆಂದು ಭಾವಿಸಿ ಹೊಸನೀರಿನ ಕಾಲದವರು ನಮ್ಮ ವಿಮರ್ಶೆಯ ಪ್ರಾಗ್ರೂಪಗಳನ್ನು, ಸಾಹಿತ್ಯದ ಅನುಸಂಧಾನಗಳನ್ನು ತಮ್ಮದೇ ಆದ ‘ವಿಮರ್ಶೆ’ ಕಲ್ಪನೆಯ ಆಚೆಗೆ ಇಟ್ಟರು. ಮಾಸ್ತಿಯವರು ವಿಮರ್ಶೆಯ ಕಾರ‍್ಯ ಎಂಬ ತಮ್ಮ ಬರಹದಲ್ಲಿ ಪ್ರಾಚೀನರಲ್ಲಿ ವಿಮರ್ಶೆಯು ಇರಲಿಲ್ಲ ಎಂದು ನಂಬಿ ಹಾಗೆ ಇರದುದಕ್ಕೆ ಕಾರಣಗಳೇನು ಎಂದು ಅನ್ವೇಷಿಸಿದ್ದಾರೆ. ಇದನ್ನೇ ಮುಂದುವರಿಸಿದಂತೆ ಜಿ.ಎಸ್.ಶಿವರುದ್ರಪ್ಪನವರೂ ಕೂಡ ತಮ್ಮ ಕಾವ್ಯಾರ್ಥ ಚಿಂತನದಲ್ಲಿ ಈ ಬಗ್ಗೆ ಇನ್ನಷ್ಟು ಚರ್ಚೆ ನಡೆಸಿದ್ದಾರೆ. ಕಾರಣಗಳನ್ನು ಅನ್ವೇಷಿಸುವ ಕಾರಣ ಮೀಮಾಂಸೆಯನ್ನು ಕಟ್ಟಿದ್ದಾರೆ. 26

1.15. ಪರಂಪರೆಯ ಪ್ರಶಂಸೆ ಮತ್ತು ನಿಷ್ಠುರ ವಸ್ತುನಿಷ್ಠತೆ

ಹೊಸನೀರಿನ ಕಾಲದಲ್ಲಿ ನಿರ್ವಸಾಹತೀಕರಣ ಪ್ರಜ್ಞೆ ಮತ್ತು ಅನ್ಯಗಾಳಿ ಬೆಳಕುಗಳನ್ನು ಹೀರಿ ಸತ್ವಶಾಲಿಯಾಗುವ ಹಂಬಲವು ಆತ್ಮರತಿ ಮತ್ತು ಆತ್ಮವಿಮರ್ಶೆಗಳ ರೂಪದಲ್ಲಿ ಪ್ರಕಟಗೊಂಡಿತು. ಸಾಹಿತ್ಯ ವಿಮರ್ಶೆಯಲ್ಲಿ ಈ ಎರಡೂ ರೂಪಗಳು ಸಹಬಾಳ್ವೆ ನಡೆಸಿರುವುದನ್ನು ಕಾಣಬಹುದು. ಒಂದೇ ವ್ಯಕ್ತಿಯಲ್ಲಿ ಈ ಎರಡೂ ರೂಪಗಳು ಕಾಣಿಸಿಕೊಂಡಾಗ ಇವುಗಳ ಮಿಳಿತ ರೂಪವು ಪರಿಷ್ಕರಣ ಪ್ರಜ್ಞೆಯಾಗಿ ಕುವೆಂಪು ಅವರಲ್ಲಿ ಪ್ರಕಟಗೊಂಡರೆ ದೇಸಿ ಪುನರುತ್ತಾನ ಪ್ರಜ್ಞೆಯಾಗಿ ಬೇಂದ್ರೆಯವರಲ್ಲಿ ಪ್ರಕಟಗೊಂಡಿದೆ. ಬಿ.ಎಂ.ಶ್ರೀ ಮಾಸ್ತಿ ಅಂಥವರ ವಿಮರ್ಶೆಯಲ್ಲಿ ಸ್ವೀಕರಣ ಪ್ರಜ್ಞೆಯಾಗಿ ಪ್ರಕಟಗೊಂಡಿದೆ. ಅನ್ಯಸ್ವೀಕರಣವು ಆತ್ಮವಿಮರ್ಶೆಯಂತೆಯೂ ನಿರ್ವಸಾಹತೀಕರಣವು ಆತ್ಮರತಿಯಂತೆಯೂ ಪ್ರಕಟಗೊಂಡಿರುವುದು ಮೇಲ್ನೋಟಕ್ಕೆ ಕಾಣುತ್ತದಾದರೂ ಇದೊಂದು ಸರ್ವೆಸಾಮಾನ್ಯ ವಿನ್ಯಾಸವೆಂದು ನಾವು ತಿಳಿಯಬೇಕಿಲ್ಲ. ಆದರೆ ಎಸ್.ವಿ.ರಂಗಣ್ಣನವರಲ್ಲಿ ನಿರ್ವಸಾಹತೀಕರಣದ ಯಾವ ಲಕ್ಷಣಗಳೂ ಕಾಣಿಸಿಕೊಳ್ಳುವುದಿಲ್ಲ. ಆದರೂ ಆತ್ಮವಿಮರ್ಶೆ ಮಾತ್ರ ಹೆಚ್ಚು ಪ್ರಕಟವಾಗಿದೆ.

ಭಾರತೀಯ ಕಾವ್ಯಮೀಮಾಂಸಾ ಮಾದರಿಗೆ ತಮ್ಮದೇ ಶೈಲಿ ಸಿದ್ಧಾಂತ ಮಾದರಿಯೊಂದನ್ನು ಕಾಣಿಕೆಯಾಗಿ ನೀಡಿರುವ ಎಸ್.ವಿ.ರಂಗಣ್ಣ ಕೃತಿನಿಷ್ಠ ವಿಮರ್ಶೆಯ ಅತ್ಯುತ್ತಮ ವಿಮರ್ಶಾ ಮಾದರಿಯನ್ನು ತಮ್ಮ ಬರವಣಿಗೆಯಲ್ಲಿ ರೂಪಿಸಿದ್ದಾರೆ. ಹೊನ್ನಶೂಲ ಪುಸ್ತಕದ ‘ಪ್ರಶಂಸೆ ಸಾಕೋ ಪರೀಕ್ಷೆ ಬೇಕೋ’ ಲೇಖನದಲ್ಲಿ ಮತ್ತು ಕಾಳಿದಾಸನ ಕುರಿತ ಕವಿಕುಲಗುರು ಲೇಖನದಲ್ಲಿ ನಮ್ಮ ವಿಮರ್ಶೆಯು ಹೆಚ್ಚು ವಸ್ತುನಿಷ್ಠವಾಗಿ ಇರಬೇಕಾಗಿರುವ ಬಗ್ಗೆ ಎಚ್ಚರ ನೀಡುತ್ತಾರೆ. 30ರ ದಶಕದಲ್ಲಿ ವಿ.ಸೀ ಬರೆದ ಕವಿಕಾವ್ಯದೃಷ್ಟಿ, ಕಲಾಪ್ರಪಂಚ ಇಂಥ ಲೇಖನಗಳಲ್ಲಿ ‘ಸಾಹಿತ್ಯ ವಿಮರ್ಶೆಯಲ್ಲಿ ಅರ್ಥ ಮತ್ತು ಮೌಲ್ಯ’ ಇಂಥ (1961) ಕೃತಿಯಲ್ಲಿ; ಕೃತಿಯನ್ನು ಅರ್ಥಮಾಡಿಕೊಳ್ಳುವುದು-ಅನುಭವಿಸುವುದು-ವ್ಯಾಖ್ಯಾನಿಸುವುದು-ಬೆಲೆಕಟ್ಟುವುದು-ಮೌಲ್ಯಮಾಪನ ಮಾಡುವುದು ಹೀಗೆ ವಿಮರ್ಶೆಯು ಬೆಳೆಯಬೇಕಾದ ನೆಲೆಗಳನ್ನು ಗುರ್ತಿಸಿದ್ದಾರೆ.

“19ನೆಯ ಶತಮಾನದ ಅಂತ್ಯ ಮತ್ತು 20ನೆಯ ಸತಮಾನದ ಆರಂಭದ ಕಾಲಧರ್ಮವನ್ನು ಭಾರತ ತನ್ನನ್ನು ತಾನು ಕನ್ನಡಿಯಲ್ಲಿ ನೋಡಿಕೊಳ್ಳುತ್ತಿದ್ದ ಸ್ವಯಂ ಜಾಗೃತಿಯ ಕಾಲಘಟ್ಟವೆಂದು ಗುರುತಿಸಬಹುದು…....ಭಾರತದ ದೀರ್ಘ ಇತಿಹಾಸ, ಸಂಸ್ಕೃತಿಗಳ ಸ್ಮೃತಿಯ ಬಗ್ಗೆ ಸ್ವಯಂಪ್ರಜ್ಞೆಯುಳ್ಳ ಚಿಂತಕರ, ಸಾಹಿತಿಗಳ ಒಂದು ವರ್ಗ ಭಾರತವನ್ನು ರೋಮಾಂಚನದಿಂದ, ವಿಸ್ಮಯದಿಂದ ಆತ್ಮರತಿಯಿಂದ ನೋಡುತ್ತಿದ್ದರೆ, ಜತೆಜತೆಗೇ ಇನ್ನೊಂದು ವರ್ಗ ಭಾರತವನ್ನು ಹಸಿವು, ರೋಗ, ಅಜ್ಞಾನ, ಧಾರ್ಮಿಕ ಅಂಧಶ್ರದ್ಧೆಗಳ ಕೂಪವೆಂದು ಗುರುತಿಸುತ್ತಾ ಅಸಹ್ಯಪಟ್ಟುಕೊಂಡು ಆತ್ಮಾವಹೇಳನದ ಮೂಲಕ ನೋಡುತ್ತಿತ್ತು…....ಆತ್ಮರತಿ, ಆತ್ಮಾವಹೇಳನಗಳನ್ನು ಜತೆಜತೆಗೇ ಗ್ರಹಿಸುವ ರೀತಿಯನ್ನು ಆ ಕಾಲದ ಪ್ರಮುಖ ಚಿಂತಕರಲ್ಲಿ, ಸಾಹಿತಿಗಳಲ್ಲಿ ನಾವು ಗಮನಿಸಬಹುದು”೨೭ ಹೀಗಾಗಿ ಈ ಕಾಲದ ವಿಮರ್ಶೆಯು ಪ್ರಶಂಸೆಯ ಜೊತೆಗೆ ನಿಷ್ಠುರ ವಸ್ತುನಿಷ್ಠತೆಯನ್ನು ಮೈಗೂಡಿಸಿಕೊಳ್ಳುವ ಹಂಬಲವನ್ನು ಪ್ರಕಟಿಸಿದ ಕಾಲವಾಗಿದೆ.

1.16. ವಿಧಾನ-ಪರಿಕರ-ಪರಿಕಲ್ಪನೆಗಳ ಹುಡುಕಾಟ

ಹೊಸ ಸಾಹಿತ್ಯ ಸೃಷ್ಟಿಯ ವಿಧಾನ ಮತ್ತು ಪರಿಕರಗಳ ಹುಡುಕಾಟ ಈ ಕಾಲಮಾನದಲ್ಲಿ ತೀವ್ರವಾಗಿ ನಡೆಯಿತು. ಹಾಗೇ ವಿಮರ್ಶೆಯ ತತ್ವ, ಪರಿಕರಗಳ ಮತ್ತು ಪರಿಕಲ್ಪನೆಗಳ ಹುಡುಕಾಟ ಕೂಡ ಈ ಕಾಲದ ವಿಮರ್ಶೆ ಮತ್ತು ಸಾಹಿತ್ಯಗಳಲ್ಲಿನ ಒಂದು ಮುಖ್ಯ ಚಹರೆಯಾಗಿತ್ತು. 1. ಕುವೆಂಪು ಅವರ ಭಾಷಾ ರೂಪಗಳ ಹುಡುಕಾಟ, ವಿಮರ್ಶಾ ಪರಿಕಲ್ಪನೆಗಳ ಹುಡುಕಾಟ. 2. ಮಾಸ್ತಿಯವರ ವಿಮರ್ಶೆಯ ಕರ‍್ಯದ ಚರ್ಚೆ, ಸಾಹಿತ್ಯ ತತ್ವಗಳ ಚರ್ಚೆ. 3. ಡಿ.ವಿ.ಜಿ.ಯವರ ಜೀವನ ಸೌಂರ‍್ಯ ಮತ್ತು ಸಾಹಿತ್ಯ, ಸಾಹಿತ್ಯ ಶಕ್ತಿ. 4. ಶ್ರೀಯವರ ಹೊಸ ಸಾಹಿತ್ಯ ರೂಪಗಳ ಹುಡುಕಾಟ. 5. ಬೇಂದ್ರೆಯವರ ಹೊಸ ರಸಗಳ ಚರ್ಚೆ ಹಾಗೂ ಅವಿದ್ಧ ಮತ್ತು ಸುಕುಮಾರ ನಾಟಕಗಳ ಪರಿಕಲ್ಪನೆ. 6. ರಂಗಣ್ಣ ಅವರ ಶೈಲಿ, ಪಾಶ್ಚಾತ್ಯ ಗಂಭೀರ ನಾಟಕಗಳು ಮತ್ತು ಕಾಳಿದಾಸನ ನಾಟಕಗಳ ವಿಮರ್ಶೆಯ ಸಂದರ್ಭದಲ್ಲಿ ಬಳಸಿದ ಕೃತಿನಿಷ್ಠ ವಿಧಾನಗಳ ಅನ್ವೇಷಣೆ. 7. ತೀ.ನಂ.ಶ್ರೀಯವರ ಧ್ವನಿ, ರಸ, ಔಚಿತ್ಯಾದಿಗಳ ಚರ್ಚೆ, ಕನ್ನಡದಲ್ಲಿ ಹೊಸಮಟ್ಟುಗಳ ಅವಶ್ಯಕತೆ (1931) ಹೊಸ ಛಂದಸ್ಸಿನ ಲಯಗಳು (1931) ಹೀಗೆ ಎಲ್ಲವೂ ಆಧುನಿಕ ವಿಧಾನ, ಪರಿಕರ, ಪರಿಕಲ್ಪನೆಗಳ ಹುಡುಕಾಟವೇ ಆಗಿವೆೆ.28

ಹೊಸ ಸಾಹಿತ್ಯ ಹೇಗಿರಬೇಕೆಂಬ ತತ್ವಚರ್ಚೆ ಮತ್ತು ಅಂಥ ಹೊಸ ಸಾಹಿತ್ಯ ಪರಂಪರೆಯ ನಿರ್ಮಾಣ ಕಾರ‍್ಯ, ಹೊಸ ವಿಮರ್ಶೆಯು ಹೇಗಿರಬೇಕೆಂಬ ತತ್ವ ಚರ್ಚೆ ಮತ್ತು ಅಂಥ ಹೊಸ ವಿಮರ್ಶೆಯ ಸೃಷ್ಟಿಕಾರ‍್ಯ, ಹೀಗೆ ಈ ಎರಡೂ ಕಾರ‍್ಯಗಳು ಮತ್ತು ನಿಲುವುಗಳು ನವೋದಯ ಕಾಲದ ಬಹುತೇಕ ಎಲ್ಲಾ ಪ್ರಮುಖ ಲೇಖಕರಲ್ಲೂ ಕಂಡುಬರುತ್ತವೆ. ಹಾಗೇ ಈ ಎರಡೂ ಕರ‍್ಯಗಳೂ ಎರಡೂ ರೀತಿಯ ಬರಹಗಳಲ್ಲಿ ಬೆರೆತು ನಡೆದಿರುವುದೂ ಉಂಟು. ರಂ.ಶ್ರೀ ಮುಗಳಿಯವರ ಸರಸ್ವತಿ ತತ್ವ, ಕಡೆಂಗೋಡ್ಲು ಅವರ ಕವಿಕಾವ್ಯ ತತ್ವ ಮೀಮಾಂಸೆ, ಕೆ.ಕೃಷ್ಣಮೂರ್ತಿ, ಜಿ.ಎಸ್.ಶಿವರುದ್ರಪ್ಪನವರಲ್ಲಿ ಕಾವ್ಯತತ್ವ ಚರ್ಚೆಯಾಗಿ ಬೆಳೆದು ಇಂಥ ವಿಮರ್ಶೆಯ ಮಾರ್ಗವೊಂದು ನಿರ್ಮಾಣವಾಗಬಹುದಾದ ಲಕ್ಷಣಗಳು ನಮ್ಮಲ್ಲಿ ತಲೆದೋರಿವೆ. ಆಧುನಿಕ ಕವಿತೆಯ ಮೂಲಕ ಕಾವ್ಯತತ್ವ ಪ್ರಕಟವಾಗಿರುವ ಬಗೆಯನ್ನೇ ಒಂದು ಪ್ರತ್ಯೇಕ ಅಧ್ಯಯನವಾಗಿ ನಡೆಸುವಷ್ಟು ಈ ಕಾವ್ಯರೂಪಿ ಕಾವ್ಯತತ್ವ ಮಂಡನೆ ನಮ್ಮಲ್ಲಿ ಬೃಹದಾಕಾರವಾಗಿ ಬೆಳೆದಿದೆ ಕೂಡ.

ಅಷ್ಟೆ ಅಲ್ಲ ಆಧುನಿಕ ಸಂದರ್ಭದಲ್ಲಿ ಎಲ್ಲ ಪ್ರಕಾರಗಳಿಗೂ ಪ್ರಕಾರತತ್ವಗಳು ಪ್ರಕಟವಾಗಿವೆ ಕೂಡ. ಹೀಗಾಗಿ ಕಾದಂಬರಿ ಮೀಮಾಂಸೆ. ಕಥನ ಮೀಮಾಂಸೆ, ನಾಟಕ ಮೀಮಾಂಸೆ ಹೀಗೆ ಬಹುಪಾಲು ಎಲ್ಲ ಪ್ರಕಾರಗಳಿಗು ಮೀಮಾಂಸೆ - ತತ್ವಗಳನ್ನು ಕಟ್ಟಿಕೊಳ್ಳುವ, ವ್ಯಾಖ್ಯಾನಿಸಿಕೊಳ್ಳುವ ಕೆಲಸಗಳು ಇತ್ತೀಚೆಗೆ ನಡೆಯುತ್ತಿವೆ.

1.17. ಪರಿಕರ ವಿಮರ್ಶೆ

ಹೊಸ ವಿಮರ್ಶಾ ಪರಿಕರಗಳ ಶೋಧವು ನಡೆದಷ್ಟೇ ತೀವ್ರವಾಗಿ ಸಾಹಿತ್ಯ ಪರಿಕರಗಳ ಕುರಿತ ವಿಮರ್ಶೆಯೂ ಈ ಕಾಲದಲ್ಲಿ ಭರಾಟೆಯಿಂದ ನಡೆದಿದೆ. ರಂಗಣ್ಣನವರ ಶೈಲಿ, ತೀನಂಶ್ರೀಯವರ ವಾಸ್ತವವಾದದ ಪರೀಕ್ಷೆ ಹಾಗೂ ಛಂದಸ್ಸಿನ ಕುರಿತಾದ ನಿಖರವಾದ ವಿವೇಚನೆಗಳು ಹೀಗೆ ಇದಕ್ಕೆ ಹಲವು ಉದಾರಣೆಗಳನ್ನು ನೀಡಬಹುದು. 1. ಕಾವ್ಯದ ಧ್ವನಿಶಕ್ತಿ, ರಸಾನುಭವಗಳ ಹಿನ್ನೆಲೆಯಲ್ಲಿ ಪ್ರಾಚೀನ ಸಾಹಿತ್ಯವನ್ನು ವಿಮರ್ಶಿಸುವ ಜೊತೆ ಜೊತೆಗೆ2. ಹೊಸಛಂದೋ ಪ್ರಕಾರಗಳ ವಿಮರ್ಶೆಯು 3. ಹಳೇ ಛಂದಸ್ಸುಗಳ ನಿರ್ವಚನ-ವ್ಯಾಖ್ಯಾನವೂ ಆ ಮೂಲಕ 4. ಛಂದಸ್ಸು ಶಾಸ್ತ್ರವೊಂದನ್ನು ಅಧ್ಯಯನ ಶಿಸ್ತಾಗಿ ರೂಪಿಸುವ ಕೆಲಸವೂ ಹಾಗೇ 5. ಕನ್ನಡ-ಸಂಸ್ಕೃತ-ಇಂಗ್ಲಿಷ್ ಛಂದಸ್ಸುಗಳ ವಿಂಗಡಣಾ ಕಾರ‍್ಯವೂ ಜೋರಾಗಿ ಈ ಕಾಲದಲ್ಲಿ ನಡೆದಿದೆ. ಒಟ್ಟಾರೆ ಛಂದಸ್ಸಿನ ಕುರಿತಾದ ಚರ್ಚೆ ಈ ಕಾಲದ ವಿಮರ್ಶೆಯ ಒಂದು ಬಹುಮುಖ್ಯವಾದ ಅಂಗವಾಗಿತ್ತು.

ಕಾವ್ಯಶಾಸ್ತ್ರ ಪರಿಭಾಷೆ, ಛಂದಸ್ಸು, ಅಲಂಕಾರ, ಮೀಮಾಂಸೆ, ಭಾಷೆ, ವ್ಯಾಕರಣ ಹೀಗೆ ಹಲವು ಅಧ್ಯಯನ ವಲಯಗಳಿಗೆ ಸಂಬಂಧಿಸಿದ ವಿಚಾರಗಳನ್ನು ಒಂದೇ ಕಡೆ ನಿರ್ವಚಿಸಿಕೊಳ್ಳುವ ಕಾರ‍್ಯ ಕೂಡ ಶೈಕ್ಷಣಿಕ ಅಗತ್ಯವಾಗಿ ಈ ಕಾಲದಲ್ಲಿ ಸಂಭವಿಸಿದೆ. ಕನ್ನಡ ಕೈಪಿಡಿಗಳ ರಚನೆ ಇದಕ್ಕೆ ಉದಾಹರಣೆ. ಇದನ್ನು ಕೈಪಿಡಿ ರೂಪಿ ವಿಮರ್ಶಾ ಮಾರ್ಗ ಎಂದರೂ ನಡೆಯುತ್ತದೆ. ಇದು ಆಧುನಿಕ ವಿಮರ್ಶೆಯ ಆದಿ ಲಕ್ಷಣಗಳಲ್ಲೊಂದು. ಇವತ್ತಿಗೂ ಈ ಮಾರ್ಗದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ಕೃತಿಗಳು ರಚನೆಯಾಗುತ್ತಿವೆ.

ಆದರೆ ಇಂದಿನ ವಿಮರ್ಶೆಯಲ್ಲಿ ಛಂದೋಚರ್ಚೆ ಮತ್ತು ಕೈಪಿಡಿ ರೂಪಿ ಚರ್ಚೆ ಹಿನ್ನೆಲೆಗೆ ಸರಿದಿದೆ. ಆಧುನಿಕ ಕಾಲದ ಸಾಹಿತ್ಯ ಪ್ರಕಾರಗಳನ್ನು ಛಂದಸ್ಸಿನ ಮೂಲಕ ನೋಡುವ ಪ್ರಯತ್ನಗಳು ಅಲ್ಲಲ್ಲಿ ಶೈಕ್ಷಣಿಕವಾಗಿ ನಡೆಯುತ್ತಿವೆಯಾದರು ಹೆಚ್ಚಿನ ಪ್ರಮಾಣದಲ್ಲಿ ಕಾವ್ಯದ ಛಂದಸ್ಸನ್ನು ಕೇಂದ್ರೀಕರಿಸಿದ ಅಧ್ಯಯನಗಳು, ವಿಮರ್ಶೆಗಳು ಸಂಭವಿಸುತ್ತಿಲ್ಲ. ಅದೊಂದು ಹಿಂದೆ ಎಂದೋ ಆಗಿ ಹೋಗಿರುವ ಚರ್ಚೆ ಮತ್ತು ಈಗ ಅದೊಂದು ಮ್ಯೂಸಿಯಂ ಶಿಸ್ತಾದ ಡೆಡ್ ಲೋಡ್ ಎಂಬAತೆಯೆ ಇಂದು ಛಂದಸ್ಸನ್ನು ನೋಡಲಾಗುತ್ತಿದೆ.

1.17.1. ಸಾಹಿತ್ಯ ತತ್ವ ಮತ್ತು ವಿಮರ್ಶೆಯ ತತ್ವ

ಹೊಸ ಸಾಹಿತ್ಯದ ಸ್ವರೂಪ, ಹೊಸ ವಿಮರ್ಶೆಯ ಸ್ವರೂಪ ಹೇಗಿರಬೇಕೆಂಬ ಬಗ್ಗೆ ಹಲವಾರು ಜನ ತಮ್ಮದೆ ಚಿಂತನೆಗಳನ್ನು ಮಂಡಿಸಿದ್ದಾರೆ. ಕನ್ನಡ - ಸಂಸ್ಕೃತ ಅಭಿಜಾತ ಪರಂಪರೆ, ಎನ್ಲೆಂಟನ್‌ಮೆಂಟ್ ಜ್ಞಾನಶಾಸ್ತ್ರ, ಇಂಗ್ಲಿಶ್ ಸಾಹಿತ್ಯ ಲೋಕ ಇವೆಲ್ಲವುಗಳಿಂದ ಹೊಸ ಸಾಹಿತ್ಯದ ಪುನರುಜ್ಜೀವನ ಸಂಭವಿಸಬೇಕೆಂದು ಬಯಸಿ ಕಾರ‍್ಯಶೀಲರಾಗಿದ್ದಾರೆ. ‘ಕನ್ನಡ ಭಾಷೆಯು ಇಂಗ್ಲಿಶ್ ಭಾಷೆಯಂತೆ ಬೆಳೆಯಬೇಕು. ಕನ್ನಡ ಸಾಹಿತ್ಯವು ಇಂಗ್ಲಿಶ್ ಸಾಹಿತ್ಯದಂತೆ ಬೆಳೆಯಬೇಕು’ ಎಂಬ ಬಿ.ಎಂ.ಶ್ರೀ ಮಾದರಿ ಕನಸಿನಂತೆ ಕನ್ನಡವನ್ನು ಕಟ್ಟಲು ಹಲವು ಜನ ಯತ್ನಿಸಿದ್ದಾರೆ. ಷೇಕ್ಸ್ಪಿಯರ್, ಬ್ರಾಡ್ಲೆ, ಮ್ಯಾಥ್ಯೂ ಆರ್ನಾಲ್ಡ್, ಐ.ಎ.ರಿಚಡ್ಸ್, ಎಫ್.ಆರ್.ಲೀವಿಸ್ ಇಂಥವರ ಸಾಹಿತ್ಯ ಮತ್ತು ಚಿಂತನೆಗಳು ನಮ್ಮ ಹೊಸನೀರಿನ ಕಾಲದ ವಿಮರ್ಶಕರನ್ನು ಪ್ರಭಾವಿಸಿವೆ. ಕುವೆಂಪು, ಬಿ.ಎಂ.ಶ್ರೀ, ತಿ.ನಂ.ಶ್ರೀ, ಮಾಸ್ತಿ, ಎ.ಆರ್.ಕೃ ಮೊದಲಾದ ಹಲವು ಆಧುನಿಕ ವಿಮರ್ಶಕರೆಲ್ಲರು ಒಂದಲ್ಲ ಒಂದು ರೀತಿಯಲ್ಲಿ ತಮ್ಮದೆ ಆದ ಸಾಹಿತ್ಯ ತತ್ವವನ್ನು, ವಿಮರ್ಶಾ ತತ್ವವನ್ನು ಸೃಷ್ಟಿಸಿದ್ದಾರೆ. ಹೀಗಾಗಿ ಹೊಸ ಸಾಹಿತ್ಯವು, ವಿಮರ್ಶೆಯು ಹೇಗಿರಬೇಕೆಂಬ ಜಿಜ್ಞಾಸೆ ಆಧುನಿಕ ವಿಮರ್ಶೆಯ ಒಂದು ಮುಖ್ಯ ಭಾಗವಾಗಿದೆ.29

1. ಸಾಹಿತ್ಯ ತತ್ವದ ಚರ್ಚೆಯಲ್ಲಿ ಪ್ರಕಟವಾಗುವ ತತ್ವಕ್ಕೂ ಮತ್ತು ಸಾಹಿತ್ಯ ಸೃಷ್ಟಿಯಲ್ಲಿ ಪ್ರಕಟವಾಗುವ ತತ್ವಕ್ಕೂ ಕೆಲವೊಮ್ಮೆ ಅಂತರ ಇರುವುದು ಉಂಟು. ಹಾಗೆಯೇ ೨. ವಿಮರ್ಶೆಯ ತತ್ವ ಚರ್ಚೆಯಲ್ಲಿ ಪ್ರಕಟವಾಗುವ ತತ್ವಕ್ಕೂ ಸ್ವತಃ ವಿಮರ್ಶಾ ಕೃತಿಗಳು (ಲೇಖನಗಳು) ಬಳಸುವ ತತ್ವಗಳಿಗೂ ವ್ಯತ್ಯಾಸವಿರುವ ಸಾಧ್ಯತೆ ಇದೆ. ೩. ಅದೇ ರೀತಿ ವಿಮರ್ಶೆ-ಮೀಮಾಂಸೆ ಬರಹಗಳಲ್ಲಿ ಪ್ರತಿಪಾದಿಸುವ ತತ್ವಕ್ಕೂ ಮತ್ತು ಆಚಾರಕ್ಕೂ ವ್ಯತ್ಯಾಸಗಳಿರುವ ಸಾಧ್ಯತೆಗಳಿವೆ. ಉದಾ: “ಕುವೆಂಪು ಅವರ ಸಾಹಿತ್ಯ ತತ್ವಗಳು ಅವರದೇ ಪ್ರಾಯೋಗಿಕ ನೆಲೆಯಲ್ಲಿ ಸಫಲವಾಗಲಿಲ್ಲ... ಪ್ರತಿಕೃತಿ ದೃಷ್ಟಿಯ ಅಭಿವ್ಯಕ್ತಿ ಪ್ರಥಮದರ್ಜೆಯದಲ್ಲವೆಂದು ಇವರು ವಾದಿಸುತ್ತಾರಾದರೂ ಇವರ ಕಥಾಸಾಹಿತ್ಯ ಈ ವಾದವನ್ನು ನಿರಾಕರಿಸುತ್ತದೆ.” ಹಾಗೆಯೇ “ವಿಮರ್ಶಕನೊಬ್ಬ ಪೂರ್ವನಿಶ್ಚಿತ ತಾತ್ವಿಕ ಚೌಕಟ್ಟಿನೊಂದಿಗೆ ಕೃತಿಯನ್ನು ಪ್ರವೇಶಿಸುವುದನ್ನು ಕುವೆಂಪು ಒಪ್ಪುವುದಿಲ್ಲ. ಆದರೆ ಸ್ವತಃ ತಮ್ಮ ವಿಮರ್ಶೆಗಳಲ್ಲಿ ಇವರು ಇದೇ ಕೆಲಸವನ್ನು ಮಾಡಿದ್ದಾರೆ.”೩೦ ಇದೇ ರೀತಿ ಮಾಸ್ತಿಯವರ ‘ವಿಮರ್ಶೆಯ ಕರ‍್ಯ’ ಕೃತಿಯ ತಾತ್ವಿಕತೆಗೂ ಮತ್ತು ಅವರ ಕತೆಗಳಲ್ಲಿ ಬಿಂಬಿತವಾಗುವ ಸಾಹಿತ್ಯ ತತ್ವಕ್ಕೂ ಇರುವ ಸಂಬAಧ ನೋಡಿದರೂ ಈ ಅಂಶ ಸ್ಪಷ್ಟವಾಗುತ್ತದೆ. ತೀ.ನಂ.ಶ್ರೀ ಭಾರತೀಯ ಕಾವ್ಯಮೀಮಾಂಸೆ ಸಿದ್ಧಾಂತಗಳನ್ನು ತಮ್ಮ ಸಾಹಿತ್ಯ ವಿಮರ್ಶೆಯಲ್ಲಿ ಬಳಸುತ್ತಾರಾ ಎಂದು ನೋಡಿದರೂ ಇದು ಸ್ಪಷ್ಟವಾಗುತ್ತದೆ. ಇದರ ಅರ್ಥ ಆಧುನಿಕ ವಿಮರ್ಶೆಯು ಸಂಭವಗೊಳ್ಳುತ್ತಿದ್ದ ಕಾಲದ ವಿಮರ್ಶಾತತ್ವಗಳಿಗೂ ವಿಮರ್ಶೆಯ ಆಚರಣೆಗೂ ಹಾಗೇ ವಿಮರ್ಶಾತತ್ವ ಮತ್ತು ಸಾಹಿತ್ಯಗಳಿಗೂ ಮತ್ತು ಸಾಹಿತ್ಯ ರಚನೆಗೂ ಒಂದು ರೀತಿಯ ಒಡಕುಗಳು ಇದ್ದವು ಎಂಬುದು ಮಾತ್ರ ನಿಜ.

ತೀ.ನಂ.ಶ್ರೀ.ಯವರ ಭಾರತೀಯ ಕಾವ್ಯಮೀಮಾಂಸೆ (1959), ಇನಾಂದಾರರ ಪಾಶ್ಚಾತ್ಯ ಕಾವ್ಯಮೀಮಾಂಸೆ (1982), ತಿಪ್ಪೇರುದ್ರಸ್ವಾಮಿಯವರ ತೌಲನಿಕ ಕಾವ್ಯಮೀಮಾಂಸೆ (1985), ಶಿವರುದ್ರಪ್ಪನವರ ಕಾವ್ಯಾರ್ಥ ಚಿಂತನ (1983) ಇಂತಹ ಕೃತಿಗಳಲ್ಲಿ ಬಾರತೀಯ (ಸಂಸ್ಕೃತ), ಪಾಶ್ಚಾತ್ಯ, ಕನ್ನಡ ಮೀಮಾಂಸಾ ಮಾರ್ಗಗಳ ಚಾರಿತ್ರಿಕ ಮತ್ತು ತೌಲನಿಕ ಚರ್ಚೆಗಳು ನಡೆದಿವೆ. ಮೀಮಾಂಸೆಯ ಸಿದ್ಧಾಂತಗಳು ಮತ್ತು ಪರಿಭಾಷೆಗಳನ್ನು ಉದಾಹರಣೆಗಳ ಮೂಲಕ ಶೈಕ್ಷಣಿಕ ನೆಲೆಗಟ್ಟಿನಲ್ಲಿ ನಿರ್ವಚಿಸಿಕೊಳ್ಳುವ, ವಿವರಿಸಿಕೊಳ್ಳುವ ಯತ್ನಗಳು ಇಲ್ಲಿ ನಡೆದಿವೆ. ಸಾಹಿತ್ಯದ ತತ್ವ, ವಿಮರ್ಶೆಯ ತತ್ವ, ಕಾವ್ಯತತ್ವಾದಿ ಪ್ರಕಾರ ತತ್ವಗಳನ್ನು ಒಳಗೊಂಂತೆ ಕನ್ನಡದ್ದೇ ಆದ ಸಾಹಿತ್ಯ ಮೀಮಾಂಸೆಯನ್ನು ಕ್ರೋಡೀಕರಿಸಿಕೊಳ್ಳುವ; ಜೊತೆಗೆ ದ್ರಾವಿಡ ಹಾಗೂ ಜನಪದ ಕಾವ್ಯಮೀಮಾಂಸೆಗಳನ್ನು ಕ್ರೋಡೀಕರಿಸಿಕೊಳ್ಳುವ ಯತ್ನಗಳೂ ಇತ್ತೀಚೆಗೆ ನಡೆಯುತ್ತಿವೆ.

ಸಾಹಿತ್ಯ ತತ್ವ, ವಿಮರ್ಶೆಯ ತತ್ವವನ್ನೂ ಒಳಗೊಂಡಂತೆ ಸಾಹಿತ್ಯ ಮೀಮಾಂಸೆಯ ಕವಲೊಂದು ನಮ್ಮಲ್ಲಿ ನಿಚ್ಚಳವಾಗಿ ಮೂಡಿದೆ. ಕೆ. ಕೃಷ್ಣಮೂರ್ತಿ (ಕನ್ನಡ ಕಾವ್ಯತತ್ವ), ಜಿ.ಎಸ್. ಶಿವರುದ್ರಪ್ಪ (ಕನ್ನಡ ಕವಿಗಳ ಕಾವ್ಯ ಕಲ್ಪನೆ), ಓ. ಎಲ್. ನಾಗಭೂಷಣ ಸ್ವಾಮಿ (ವಿಮರ್ಶೆಯ ಪರಿಭಾಷೆ), ಎಚ್.ಎಸ್. ಶ್ರೀಮತಿ (ಸ್ತ್ರೀವಾದ: ಪದವಿವರಣ ಕೋಶ), ಎಚ್.ತಿಪ್ಪೇರುದ್ರಸ್ವಾಮಿ (ಸಾಹಿತ್ಯ ವಿಮರ್ಶೆಯ ತತ್ವಗಳು), ರಹಮತ್ ತರೀಕೆರೆ (ಕನ್ನಡ ಸಾಹಿತ್ಯ ಮೀಮಾಂಸೆ), ಕೆ. ಕೇಶವ ಶರ್ಮ (ನೀಲನಕ್ಷೆ: ಕನ್ನಡ ವಿಮರ್ಶೆ ಇಟ್ಟ ಹೆಜ್ಜೆ ತೊಟ್ಟ ರೂಪ), ಸಿ.ಎನ್. ರಾಮಚಂದ್ರನ್ (ಸಾಹಿತ್ಯ ವಿಮರ್ಶೆ), ಎಸ್. ನಟರಾಜ ಬೂದಾಳು (ಕನ್ನಡ ಕಾವ್ಯ ಮೀಮಾಂಸೆ), ವೀರಣ್ಣ ದಂಡೆ (ಜನಪದ ಕಾವ್ಯಮೀಮಾಂಸೆ ಹಾಗೂ ವಿಮರ್ಶಾ ಪ್ರಸ್ಥಾನಗಳು), ಎಸ್. ಎಂ. ಹಿರೇಮಠ (ಭಾರತೀಯ ಕಾವ್ಯಮೀಮಾಂಸೆ: ಸೃಷ್ಟಿ ದೃಷ್ಟಿ) ಮೊದಲಾದವರು ತಮ್ಮದೆ ನೆಲೆಯಲ್ಲಿ ಈ ಬಗ್ಗೆ ಗ್ರಂಥಗಳನ್ನು ಬರೆದು ಪ್ರಕಟಿಸಿದ್ದಾರೆ. ಹೀಗಾಗಿ ಇದೊಂದು ಸಾಹಿತ್ಯ ತತ್ವ, ಮೀಮಾಂಸೆಯ ಮಾರ್ಗವಾಗಿ ಕನ್ನಡದಲ್ಲಿ ಒಂದು ಸ್ವತಂತ್ರ ಪಂಥವಾಗಿ ಬೆಳೆದಿದೆ.

1.17.2. ಪಾರಿಭಾಷೆಯ ಕಗ್ಗಾಡು

ಹೊಸದೊಂದು ಶಿಸ್ತು ರೂಪಗೊಳ್ಳುವಾಗ ವಿಧಾನ-ಪರಿಕರಗಳ-ಪರಿಕಲ್ಪನೆಗಳ ಹುಡುಕಾಟದಂತೆಯೇ ಪರಿಭಾಷೆಗಳ ಶೋಧವೂ ನಡೆಯುತ್ತಿರುತ್ತದೆ. ಹೊಸನೀರಿನ ಕಾಲದಲ್ಲಿ ವಿಮರ್ಶೆಯ ಪರಿಭಾಷೆಗಳನ್ನು ಎಲ್ಲ ಸಾಧ್ಯ-ಸಾಧು ದಿಕ್ಕುಗಳಿಂದಲೂ ಶೋಧಿಸಿಕೊಳ್ಳಲಾಗಿದೆ. ಪಾರಿಭಾಷಿಕ ಪ್ರಮಾಣಗಳಿಗಾಗಿ ತುಡಿಯುವ ಮತ್ತು ಪ್ರಮಾಣಗಳನ್ನು ಮೀರುವ ಯತ್ನಗಳೂ ನಡೆದಿವೆ. ಸಾಹಿತ್ಯ ಸೃಷ್ಟಿಯಲ್ಲಿ ಅನುವಾದಿತ ಸ್ವೀಕರಣ, ತತ್ಸಮ ಸ್ವೀಕರಣ, ತದ್ಭವ ಸ್ವೀಕರಣ, ಅಳವಡಿಕೆಗಳು, ನವೀನ ಸೃಷ್ಟಿಗಳು ಹೇಗೆ ನಡೆದವೋ ಹಾಗೆ ವಿಮರ್ಶೆಯ ಪರಿಭಾಷೆಯಲ್ಲೂ ಇವೆಲ್ಲ ನಡೆದಿವೆ.

ಭವನಿಮಜ್ಜನ ಚಾತರ‍್ಯ, ಲಘಿಮಾಕೌಶಲ, ಮಹೋಪಮೆ, ದರ್ಶನವಿಮರ್ಶೆ, ಭೂಮಾನುಭೂತಿ, ದರ್ಶನ ಧ್ವನಿ ಇಂಥವು ನವೀನ ಸೃಷ್ಟಿಗಳಾದರ ದುರಂತ ವಸ್ತುವಿನ್ಯಾಸ, ಮಾನಸಿಕ ದೂರ, ವಾಸ್ತವವಾದ, ರಮ್ಯವಾದ ಇಂಥವು ಸ್ವೀಕರಣಗಳಾಗಿವೆ. ಕೆಲವು ಪರಿಭಾಷೆಗಳನ್ನು ಇವು ಹೀಗೇ ಎಂದು ನಿರ್ದಿಷ್ಟವಾಗಿ ವರ್ಗೀಕರಿಸಲು ಬರುವುದಿಲ್ಲ. ಹಲವರಲ್ಲಿ ಹಲವು ಕಾಲಗಳಲ್ಲಿ ಒಂದೇ ಪರಿಭಾಷೆ ಬಳಕೆಯಾಗಿರುವುದೂ ಉಂಟು. ಒಂದೇ ವಿಚಾರಕ್ಕೆ ಭಿನ್ನ ಪರಿಭಾಷೆಗಳನ್ನು ಬಳಸಿರುವುದೂ ಉಂಟು. ಹೀಗಾಗಿ ಪರಿಭಾಷೆಗಳ ಕಗ್ಗಾಡೊಂದೇ ನಮ್ಮಲ್ಲಿ ನಿರ್ಮಾಣವಾಗಿದೆ. ಅದನ್ನು ಪ್ರವೇಶಿಸುವ ಹೊಸ ವಿದ್ಯಾರ್ಥಿಗಳಿಗೆ ತಾವೇ ಅಲ್ಲಿ ಕಳೆದುಹೋದಂತಹ ಅನುಭವವೂ ಆಗಬಹುದು. (ಈ ಮಾತು ಈ ಬರಹಕ್ಕೂ ಅನ್ವಯಿಸಬಹುದಾ?) ಅಲ್ಲದೆ ಪಂಥಗಳ ವಿಚಾರದಲ್ಲೂ ಇದು ನಿಜ. ಅಂದರೆ ಅಂತರ್‌ಶಿಸ್ತೀಯ ಅಧ್ಯಯನ (ಸಮಾಜಶಾಸ್ತ್ರ, ಮನಶಾಸ್ತ್ರ, ತತ್ವಶಾಸ್ತ್ರ, ಚರಿತ್ರೆ, ಭಾಷಾಶಾಸ್ತ್ರ ಇತ್ಯಾದಿಗಳ ಮೂಲಕ) ಚಾರಿತ್ರಿಕ ವಿಮರ್ಶೆ, ವಿವರಣಾತ್ಮಕ ವಿಮರ್ಶೆ, ಅಭಿಜಾತ ವಿಮರ್ಶೆ, ರೂಪನಿಷ್ಠ ವಿಮರ್ಶೆ, ರಸನಿಷ್ಠ ವಿಮರ್ಶೆ, ಕೃತಿನಿಷ್ಠ, ಪ್ರಕಾರನಿಷ್ಠ, ಲೇಖಕ ಕೇಂದ್ರಿತ, ಪಾತ್ರ ಕೇಂದ್ರಿತ, ಲಿಂಗಾಧಾರಿತ, ತೌಲನಿಕ ವಿಮರ್ಶೆಗಳು ಹೀಗೆ ವಿಮರ್ಶೆಗಳ ಪಂಥ, ದೃಷ್ಟಿ, ವಿಧಾನಗಳ ಕಗ್ಗಾಡೇ ಸೃಷ್ಟಿಯಾಗಿದೆ. ಮಾರ್ಕ್ಸ್ವಾದಿ ವಿಮರ್ಶೆ, ಮನಸ್ಶಾಸ್ತ್ರೀಯ ವಿಮರ್ಶೆ, ಚಾರಿತ್ರಿಕ ವಿಮರ್ಶೆ, ಆಧುನಿಕೋತ್ತರ ವಿಮರ್ಶೆ, ರಾಚನಿಕ ವಿಮರ್ಶೆ, ರಾಚನಿಕೋತ್ತರ ವಿಮರ್ಶೆ, ನವ್ಯ ವಿಮರ್ಶೆ, ನವೋದಯ ವಿಮರ್ಶೆ, ದಲಿತ ಬಂಡಾಯ ವಿಮರ್ಶೆ. ಸ್ತ್ರೀವಾದಿ ವಿಮರ್ಶೆ ಹೀಗೆ ಹಲವು ವಿಮರ್ಶಾ ಪ್ರಬೇಧಗಳ ಸೃಷ್ಟಿಯೂ ಆಗಿದೆ. ಇಂಥ ಪಾಂಥಿಕತೆಯ ಸೃಷ್ಟಿಗೆ ಮಿತಿಯೂ ಇಲ್ಲವಾಗಿದೆ. ವಿಮರ್ಶೆಯ ತತ್ವ, ಸ್ವರೂಪ, ಕರ‍್ಯದ ಕುರಿತ ಬರವಣಿಗೆಯೂ ನಿರಂತರ ನಡೆದಿದೆ. ಆದರೆ ಇವನ್ನೆಲ್ಲ ನಿರ್ಧಿಷ್ಟವಾದ ಚೌಕಟ್ಟುಗಳಿಗೆ ಒಳಪಡಿಸುವ; ಸೈದ್ಧಾಂತೀಕರಿಸುವ; ಪಂಥೀಕರಿಸುವ ಕರ‍್ಯ ಹೊಸನೀರಿನ ಕಾಲದಲ್ಲಿ ಜರುಗಲಿಲ್ಲ (ಆದರು ಆನಂತರ ಈ ಕಾರ‍್ಯ ಅಲ್ಪಸ್ವಲ್ಪ ಜರುಗಿದೆ) ಹಾಗಾಗಿ ವಿಮರ್ಶಾ ದೃಷ್ಟಿ, ಪಂಥಗಳ ಕಗ್ಗಾಡೊಂದೇ ಈ ಹೊಸನೀರಿನ ಕಾಲದಲ್ಲಿ ಸೃಷ್ಟಿಯಾಗಿದೆ; ಆಗುತ್ತಿದೆ.

1.18. ವಿಮರ್ಶಾ ದಾರಿಗಳ ಹರಿದ ಬಲೆ

ನದಿಯಂತೆ ಚರಿತ್ರೆಯು ಹರಿದಿದೆ ಎಂದು ನಮ್ಮ ಹೊಸನೀರಿನ ಕಾಲೀನ ವಿದ್ವಾಂಸರು ಭಾವಿಸಿರುವುದುಂಟು. ಹಾಗೆ ವಿಮರ್ಶೆಯನ್ನು ನೋಡುವ ಸಾಧ್ಯತೆ ಇದೆಯಾದರೂ ವಸ್ತುಸ್ಥಿತಿ ಹಾಗಿಲ್ಲ. ನಮ್ಮಲ್ಲಿ ಪರಿಭಾಷೆಗಳ ಕಗ್ಗಾಡು ಸೃಷ್ಟಿಯಾಗಿರುವಂತೆಯೇ ಮಾರ್ಗಗಳ ಹರಕಲು ಬಲೆಯೊಂದು ಕೂಡ ಸೃಷ್ಟಿಯಾಗಿದೆ. ಕೆಲವೊಮ್ಮೆ ಯಾವ ದಾರಿಗಳು ಎಲ್ಲಿಗೆ ತಲುಪುತ್ತವೆ ಎಂದು ನಡೆದು ಅನುಭವ ಇರುವವರಿಗೆ ತಿಳಿದಿರುತ್ತದೆ. ಆದರೆ ಹೊಸಬರು ನಡೆಯವಾಗ ದಾರಿ ಕರೆದುಕೊಂಡು ಹೋದತ್ತ ಹೋಗಬೇಕಾಗುತ್ತದೆ. ಆನೆಗಳಿಗಾದರೆ ಅವು ನಡೆದದ್ದೇ ದಾರಿ. ಆದರೆ ಇತರೆ ಜೀವಿಗಳಿಗೆ ದಾರಿ ಹೋದತ್ತಲೇ ಹೋಗಬೇಕಾಗಬಹುದು. ದಾರಿಗಳು ನದಿಗಳಂತೆ ಹರಿದರೆ ಎಲ್ಲೋ ಒಂದು ಕಡೆ ಎಲ್ಲರೂ ಸಂಧಿಸುತ್ತಾರೆ ಸರಿ. ದಾರಿಗಳು ಹರಕಲು ಬಲೆಯಂತೆ ಹೆಣಕೊಂಡಿದ್ದರೆ ಯಾವ ದಾರಿ ಎಲ್ಲಿಗೆ ಒಯ್ಯುತ್ತದೆ? ಯಾವುದು ಯಾವ ದಾರಿ? ಯಾವ ದಾರಿಯ ಸ್ವರೂಪ ಏನೆಂದು ತಿಳಿಯಲಾಗುವುದಿಲ್ಲ. ಅಲ್ಲದೆ ದಾರಿಗಳೇ ದಾರಿ ತಪ್ಪಿಸುವ ಸಾಧ್ಯತೆಯೂ ಇರುತ್ತದೆ. ದಿಕ್ಕು ತಪ್ಪುವ ಮತ್ತು ತಪ್ಪು ದಾರಿಗಳಲ್ಲಿ ದಿಕ್ಕು ಕಾಣದೇ ಹೋಗುವ ಸಾಧ್ಯತೆಯೂ ಇರುತ್ತದೆ.

ನಮ್ಮಲ್ಲಿ ಅಭಿಜಾತ ವಿಮರ್ಶೆ, ರಮ್ಯವಿಮರ್ಶೆ, ವಿವರಣಾತ್ಮಕ ವಿಮರ್ಶೆ, ವಿಶ್ಲೇಷಣಾತ್ಮಕ ವಿಮರ್ಶೆ, ಮಾರ್ಕ್ಸ್ವಾದಿ ವಿಮರ್ಶೆ, ರಸನಿಷ್ಠ ವಿಮರ್ಶೆ, ಸ್ತ್ರೀವಾದಿ ವಿಮರ್ಶೆ, ಹೊರ ವಿಮರ್ಶೆ, ಒಳ ವಿಮರ್ಶೆ, ಕೃತಿನಿಷ್ಠ ವಿಮರ್ಶೆ, ರೂಪನಿಷ್ಠ ವಿಮರ್ಶೆ, ವಾಚಕ ಸ್ಪಂದನ ಸಿದ್ಧಾಂತ ಇತ್ಯಾದಿ ಇತ್ಯಾದಿ ಆಚಾರದಲ್ಲಿರುವ ಆದರೆ ನಿರ್ವಚನಗೊಳ್ಳದ ಅನೇಕ ಮಾರ್ಗಗಳಿವೆ. ಇವೆಲ್ಲ ಪರಸ್ಪರ ಹೆಣೆದುಕೊಂಡ ಆದರೆ ಹರಕಲಾದ ಬಲೆಯಂತೆ ನಮ್ಮಲ್ಲಿ ಆಚರಣೆಯಲ್ಲಿ ಇವೆ. ಈ ಹೆಣಿಗೆಯ ಆರಂಭ ಆದುದೂ ಹೊಸನೀರಿನ ಕಾಲದಲ್ಲೇ. ನಮ್ಮಲ್ಲಿ ಆಚರಣೆಯಲ್ಲಿ ಬಳಕೆಯಾಗಿರುವ ವಿಮರ್ಶೆಯ ಪರಿಭಾಷೆಗಳು ಮತ್ತು ಮಾರ್ಗಗಳನ್ನು ಆಚರಣೆಯ ಅಭ್ಯಾಸದ ಮೂಲಕವೇ ಕ್ರೋಡೀಕರಿಸಿ ಕಟ್ಟಿಕೊಳ್ಳುವ ಅಗತ್ಯವಿದೆ. ಇವುಗಳನ್ನೆಲ್ಲ ತಾತ್ವಿಕವಾಗಿ ಹೊಸಬರಿಗೆ ಅಭ್ಯಾಸ ಮಾಡಿ ಎಂದರೆ ಅವರು ಕಳೆದೆಹೋಗುವ ಸಂಭವವೂ ಇರುತ್ತದೆ.

1.19. ಛಂದೋ ಚರ್ಚೆ ಮತ್ತು ವಿಮರ್ಶಾ ವಿವೇಕ

‘ಹೊಸನೀರಿನ ಕಾಲ’ದ ಹಲವು ವಿಮರ್ಶಾ ರೀತಿಗಳಲ್ಲಿ ಹೊಸ ಛಂದೋ ಪ್ರಕಾರಗಳ ಚರ್ಚೆ ಕೂಡ ಮುಖ್ಯವಾದದ್ದು. ಇಂಗ್ಲಿಶಿನ ಸಾನೆಟ್, ಭಾವಗೀತೆ, ಪ್ರಗಾಥ, ಕಥನಕವನ ಮಾದರಿಗಳನ್ನು ಕನ್ನಡ ಸ್ವೀಕರಿಸಿತ್ತಾದರೂ ತನ್ನದೇ ಆದ ರೀತಿಯಲ್ಲಿ ಅವುಗಳನ್ನು ರೂಪಾಂತರಿಸಿಕೊಂಡಿತು. ರಗಳೆ, ಕಂದ, ಷಟ್ಪದಿ, ಕೀರ್ತನ, ವಚನ, ಸ್ವರವಚನ, ತತ್ವಪದ, ಲಾವಣಿ, ದೇವರನಾಮ ಇತ್ಯಾದಿಗಳ ರೂಪಾಂತರಿತ ರೂಪಗಳನ್ನು ಆವಿಷ್ಕರಿಸಿಕೊಂಡಿತು. ಹೊಸ ಛಂದಸ್ಸಿನ ಸ್ವರೂಪ ಹೇಗಿರಬೇಕು? ಹೊಸ ಕವಿತೆಯಲ್ಲಿ ಪ್ರಾಸ, ನಾದಾದಿ ವಿಚಾರಗಳು ಎಷ್ಟರಮಟ್ಟಿಗೆ ಇರಬೇಕು? ಹೊಸ ರೀತಿಯ ಛಂದೋರೂಪಗಳನ್ನು ಹೇಗೆ ರೂಪಿಸಿಕೊಳ್ಳಬೇಕು? ಇದರಿಂದ ಉಂಟಾಗುವ ಲಾಭ ಹಾನಿಗಳೆಷ್ಟು? ಎಂಬ ದೊಡ್ಡ ಚರ್ಚೆಯೇ ಹೊಸನೀರಿನ ಕಾಲದಲ್ಲಿ ಜರುಗಿತು. ಮೇವುಂಡಿ ಮಲ್ಲಾರಿ ಅವರ ಜಯಕರ್ನಾಟಕದ ಬರಹಗಳು, ತೀ.ನಂ.ಶ್ರೀ.ಯವರ ‘ಕನ್ನಡದಲ್ಲಿ ಹೊಸ ಮಟ್ಟುಗಳಿಗಿರುವ ಅವಶ್ಯಕತೆ’(1931), ‘ಹೊಸ ಛಂದಸ್ಸಿನ ಲಯಗಳು’(1931) ಇಂಥವು ಇದಕ್ಕೆ ಉದಾಹರಣೆ. ಈ ರೀತಿಯ ಛಂದೋಮೀಮಾAಸೆ ನಮ್ಮ ಹೊಸನೀರಿನ ಕಾಲದ ವಿಮರ್ಶೆಯ ಒಂದು ಭಾಗವೇ ಆಗಿದೆ.

ಇದಲ್ಲದೆ ಹೊಸ ಸಾಹಿತ್ಯ ಪ್ರಕಾರಗಳೆ ಈ ಕಾಲದಲ್ಲಿ ಸಂಭವಿಸುತ್ತ ಇದ್ದವಾದ್ದರಿಂದ ಆಯಾ ಪ್ರಕಾರಗಳ ಸ್ವರೂಪ ವಿನ್ಯಾಸಕ್ಕೆ ಸಂಬಂಧಿಸಿದ ಚರ್ಚೆಗಳು ಈ ಕಾಲದ ವಿಮರ್ಶೆಯಲ್ಲಿ ಸಾಕಷ್ಟು ನಡೆದಿವೆ. ಕಾದಂಬರಿ ಉಪನ್ಯಾಸ, ನಾವೆಲ, ವಚನಗದ್ಯ, ವಚನ ಪ್ರಬಂಧ ಮೊದಲಾದ ಹಲವಾರು ಪರಿಭಾಷೆಗಳು ಕಾದಂಬರಿ ಪ್ರಕಾರಕ್ಕೆ ಆ ಕಾಲದ ವಿಮರ್ಶೆಯಲ್ಲಿ ಸೂಚಿತವಾಗಿವೆ. ಇಲ್ಲಿ ಪ್ರಬಂಧ, ವಿಮರ್ಶೆ, ಮಹಾಕಾವ್ಯ ಇತ್ಯಾದಿ ಪ್ರಕಾರಗಳ ಪ್ರಕಾರತತ್ವ ವಿಚಾರಗಳು ಕೂಡ ಸಾಕಷ್ಟು ಚರ್ಚೆಯಾಗಿವೆ. ಇಂತದ್ದನ್ನು ಪ್ರಕಾರ ಮೀಮಾಂಸೆಯ ಜಿಜ್ಞಾಸೆ ಎಂದು ಕರೆಯಬಹುದು.

1.19.1. ಪಾಶ್ಚಾತ್ಯ ಮಾದರಿಗಳ ಪರೀಕ್ಷೆ-ಪ್ರಯೋಗ

ಇಂಗ್ಲಿಶ್ ಮತ್ತು ಗ್ರೀಕ್ ದುರಂತ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿಕೊಂಡ ನಮ್ಮವರು ಅದೇ ಮಾದರಿಯ ವಸ್ತು ವಿನ್ಯಾಸವನ್ನು ನಮ್ಮ ಪ್ರಾಚೀನ ಸಾಹಿತ್ಯದಲ್ಲಿಯೂ ಹುಡುಕುವ ಯತ್ನ ಮಾಡಿದರು. ನಾಟಕೀಯ ಪ್ರಜ್ಞೆಯ ಹುಡುಕಾಟದ ಜೊತೆಗೆ ದುರಂತನಾಯಕ ವಸ್ತು ವಿನ್ಯಾಸದ ಹುಡುಕಾಟವನ್ನೂ ನಡೆಸಿದರು. ರನ್ನನ ದುರ್ಯೋಧನ, ಪಂಪನ ಕರ್ಣ, ನಾಗಚಂದ್ರನ ರಾವಣರನ್ನು ದುರಂತ ನಾಯಕ ಕಲ್ಪನೆಯ ಮೂಲಕ ಹಲವರು ನೋಡಿದರು. ಅಶ್ವತ್ಥಾಮನ್, ರಕ್ತಾಕ್ಷಿ, ಪ್ರತಾಪರುದ್ರದೇವ ರೀತಿಯ ನಾಟಕಗಳೂ ರಚಿತವಾದವು. (ವಿಮರ್ಶೆ-ಸಾಹಿತ್ಯಗಳು ಇಂಥಲ್ಲಿ ಕಲಸಿಕೊಳ್ಳುತ್ತವೆ) ಅಲ್ಲದೆ ವಿಮರ್ಶೆಯ ಕರ‍್ಯದಲ್ಲಿ ಮಾಸ್ತಿ, ವಿಮರ್ಶೆಯ ವಸ್ತುನಿಷ್ಠತೆಯಲ್ಲಿ ಎಸ್.ವಿ.ರಂಗಣ್ಣನವರು, ಇಂಗ್ಲಿಶಿನ ವಿಮರ್ಶಾ ತತ್ವಗಳನ್ನು ಕನ್ನಡದಲ್ಲಿ ಪ್ರಯೋಗಿಸಿ ನೋಡಿದರು. ಸಾಹಿತ್ಯ ರಚನಾ ತತ್ವದಲ್ಲೂ ಹಲವರಲ್ಲಿ ಈ ಪ್ರಯೋಗ ಕಾಣಬಹುದು.

1.20. ತೌಲನಿಕತೆ

ನಮ್ಮ ಬಹುಪಾಲು ಎಲ್ಲ ವಿಮರ್ಶಕರಲ್ಲು ತೌಲನಿಕತೆ ಒಂದು ವಿಮರ್ಶೆಯ ದೃಷ್ಟಿಕೋನವಾಗಿ ಮತ್ತು ವಿಮರ್ಶೆಯ ವಿಧಾನವಾಗಿ ಎರಡು ರೀತಿಯಲ್ಲು ಬಳಕೆಯಾಗಿದೆ. ಪರಂಪರೆಯಲ್ಲೇ ಇರಬಹುದಾದ ವಸ್ತು, ಪಾತ್ರ, ಶೈಲಿ ಸಾಮ್ಯ ಕೇಂದ್ರಿತವಾಗಿ ತುಲನೆ ಮಾಡುವ ದೃಷ್ಟಿಕೋನವೊಂದು ಹೊಸನೀರಿನ ಕಾಲೀನ ವಿಮರ್ಶೆಯಲ್ಲಿ ಕಾಣಿಸಿಕೊಂಡಿದೆ. ಇದು ಪಶ್ಚಿಮದ (ಇಂಗ್ಲಿಶಿನ) ಮತ್ತು ಕನ್ನಡದ ನಡುವಿನ ತುಲನೆಯಾಗಿಯೂ ಸಾಕಷ್ಟು ಚಾಚಿಕೊಂಡಿದೆ. ಇಂಗ್ಲಿಶ್ ವಿದ್ಯಾಬ್ಯಾಸ, ಇಂಗ್ಲಿಶ್ ಸಾಹಿತ್ಯ ಸಂಪರ್ಕ, ಅನುವಾದಗಳು ಇದಕ್ಕೆ ನೀರೆರೆದಿವೆ. ದುರಂತ ಕಲ್ಪನೆಯ ಪಾಶ್ಚಾತ್ಯ ಮಾದರಿಗಳ ಹುಡುಕಾಟವು ಇಂಥ ತೌಲನಿಕತೆಯ ಪರಿಣಾಮವೇ ಆಗಿದೆ. ಕಾವ್ಯತತ್ವ ಕಾವ್ಯಮೀಮಾಂಸೆಗಳ ವಿಚಾರದಲ್ಲೂ ನಮ್ಮಲ್ಲಿ ತೌಲನಿಕ ಕಾವ್ಯಮೀಮಾಂಸೆಯ ದೊಡ್ಡ ಬೆಳೆಯೇ ನಿರ್ಮಾಣವಾಗಿದೆ. ಉದಾಹರಣೆಗೆ ಎಸ್.ವಿ.ರಂಗಣ್ಣನವರ ಕರ್ಣಪಾತ್ರದ ತೊಡಕು ಲೇಖನ (ಹೊನ್ನಶೂಲ) ಹೊಸನೀರಿನ ಕಾಲದ ಒಂದು ತೌಲನಿಕ ಅಧ್ಯಯನವಾಗಿದೆ. ವ್ಯಾಸ, ಭಾಸ, ಪಂಪ, ಕುಮಾರವ್ಯಾಸ. ಮೂರನೆಯ ಮಂಗರಸ, ಬ್ರಹ್ಮಣಾಂಕರ ಕರ್ಣರನ್ನು ತೌಲನಿಕವಾಗಿ ಇಲ್ಲಿ ಅಭ್ಯಾಸಕ್ಕೆ ಗುರಿಪಡಿಸಲಾಗಿದೆ. ಹಾಗೇ ಕವಿಕುಲಗುರು ಎಂಬ ಲೇಖನದಲ್ಲಿ ವಿಶ್ವಕವಿಗಳ ಜೊತೆ ಕಾಳಿದಾಸನನ್ನೂ ಇಟ್ಟು ತೂಗಿ ನೋಡುವ ಪ್ರಯತ್ನವಿದೆ. ಇಂಥ ಅನೇಕ ತೌಲನಿಕ ವಿಮರ್ಶೆಗಳ ಉದಾಹರಣೆಯನ್ನು ಹಲವರಿಂದ ಎತ್ತಿ ಕೊಡಬಹುದು.

ತೌಲನಿಕತೆಯಲ್ಲಿ ಅವಳಿ (ಬೈನರಿ) ವ್ಶೆರುದ್ಯಗಳ ತುಲನೆ ಒಂದು ಮುಖ್ಯವಾದ ಮಾದರಿ. ಹೊಸನೀರಿನ ಕಾಲದಲ್ಲಿ ಜರುಗಿದ ಬಹುಪಾಲು ಎಲ್ಲ ಅವಳಿ ತೌಲನಿಕತೆಗಳೂ ಅಂತಿಮವಾಗಿ ತರತಮ ಶ್ರೇಣೀಕರಣಗಳನ್ನು ನಿರ್ಮಿಸುವ ಕಡೆಗೇ ಚಲಿಸಿವೆ. ಸ್ಥಳೀಯ- ಭಾರತೀಯ, ಕನ್ನಡ-ಸಂಸ್ಕೃತ, ಕನ್ನಡ-ಇಂಗ್ಲೀಶ್, ಆಧುನಿಕ-ಪ್ರಾಚೀನ, ಹೊಸಗನ್ನಡ-ಹಳಗನ್ನಡ, ಇಂಥವುಗಳ ನಡುವೆ ನಡೆದಿರುವ ತೌಲನಿಕ ಅಧ್ಯಯನಗಳು ಭಿನ್ನತೆಗಳ ನೆಲೆಯಿಂದಲೋ, ವಿಶೇಷತೆಗಳ ನೆಲೆಯಿಂದಲೋ, ಸಾಮ್ಯತೆಗಳ ನೆಲೆಯಿಂದಲೋ ಚಲಿಸಿರುವುದು ತುಂಬಾ ಕಡಿಮೆ. ಅಸಮಾನ ಸ್ತರವಿನ್ಯಾಸವನ್ನು ನಿರ್ಮಿಸುವ ಕಡೆಗೇ ಈ ತೌಲನಿಕ ವಿಮರ್ಶೆಯು ಚಲಿಸಿರುವಂತೆ ಕಾಣುತ್ತದೆ.

(ಎಲ್ಲ ವ್ಶೆರುದ್ಯಗಳೂ ಅವಳಿ ವ್ಶೆರುದ್ಯಗಳೇ ಆಗಿರುವುದಿಲ್ಲ. ಕೆಲವೊಮ್ಮೆ ಅವಳಿ ವೈರುದ್ಯಗಳಂತೆ ಕಾಣುವ ಜೋಡಿಗಳು ಪೂರಕ ಜೋಡಿಗಳೂ, ಸಮಾನ ಭಿನ್ನತೆಗಳೂ ಆಗಿರಬಹುದು. ತರತಮ ನೆಲೆ ಮತ್ತು ಭಿನ್ನತೆಗಳ ನೆಲೆಗಳನ್ನು ಎರಡು ಬೈನರಿ ವ್ಶೆರುದ್ಯಗಳಂತೆ ಎನೂ ಭಾವಿಸಬೇಕಿಲ್ಲ. ಇವು ಎರಡು ಭಿನ್ನ ನೆಲೆಗಳಷ್ಟೆ. ಇವುಗಳಲ್ಲಿ ತರತಮ ನೆಲೆಯನ್ನು ಕನಿಷ್ಟವೆಂದೂ, ತಪ್ಪಾದುದೆಂದೂ, ಭಿನ್ನತೆಗಳ ನೆಲೆಯನ್ನು ಶ್ರೇಷ್ಠವೆಂದೂ, ಸರಿಯಾದುದೆಂದೂ ಭಾವಿಸಬೇಕಿಲ್ಲ.)

1.20.1. ಸ್ವ ಮತ್ತು ಅನ್ಯ

ವಿಮರ್ಶೆಯಲ್ಲಿ ಅದರಲ್ಲೂ ಮುಖ್ಯವಾಗಿ ತೌಲನಿಕ ವಿಧಾನದಲ್ಲಿ ಕನ್ನಡವನ್ನು ಅನ್ಯದೊಂದಿಗೆ ತೂಗಿ ನೋಡುವಾಗ ಕನ್ನಡದ ಒಳಗೆ ಹಲವು ರೀತಿಯ ವ್ಶೆರುಧ್ಯಗಳಿದ್ದರೂ ಅವೆಲ್ಲವನ್ನು ಒಂದೇ ‘ಸ್ವ’ ಆಗಿ ಕಲ್ಪಿಸಿಕೊಳ್ಳಲಾಗಿದೆ. ಹಲವು ರೀತಿಯ ಸ್ವಗಳನ್ನು ಒಂದೇ ಸ್ವ ಆಗಿ ಕಾಣುವ ವಿಮರ್ಶೆಯು ಅನ್ಯವನ್ನು ಇಂಗ್ಲಿಶ್ ಮತ್ತು ಸಂಸ್ಕೃತ ಎಂದು ಎರಡಾಗಿ ಕಲ್ಪಿಸಿಕೊಂಡಿದೆ. ಪ್ರಾಚೀನ ಸಾಹಿತ್ಯದ ಅನುಸಂಧಾನದಲ್ಲಿ ಹಲವು ಅನ್ಯಗಳಿದ್ದರೂ ಸಂಸ್ಕೃತವನ್ನು ಮಾತ್ರವೇ ಏಕೈಕ ಅನ್ಯವನ್ನಾಗಿ ಕಲ್ಪಿಸಿಕೊಂಡಿರುವ ನಮ್ಮ ವಿಮರ್ಶೆ ಆಧುನಿಕ ಸಂದರ್ಭದಲ್ಲಿ ಸಂಸ್ಕೃತದ ಜೊತೆಗೆ ಇಂಗ್ಲಿಶನ್ನು ಇನ್ನೊಂದು ಅನ್ಯವಾಗಿ ಗ್ರಹಿಸಿದೆ. ವಿಮರ್ಶೆಯು ಪ್ರಧಾನವಾಗಿ ಭಾಷೆಯ ಮೂಲಕ ಅನುಸಂಧಾನಕ್ಕೆ ಹೆಚ್ಚು ಸೀಮಿತಗೊಂಡಿದ್ದರಿಂದ ಅದರಲ್ಲೂ ಲಿಪಿಕ ಪಠ್ಯಗಳಿಗೆ ತನ್ನನ್ನು ಹೆಚ್ಚು ಸೀಮಿತ ಮಾಡಿಕೊಂಡದ್ದರಿಂದ ಇಂಥ ಸ್ವ ಮತ್ತು ಅನ್ಯಗಳು ನಿರ್ಮಾಣಗೊಂಡಿವೆ. ಬ್ರಾಹ್ಮಣ-ಬ್ರಾಹ್ಮಣೇತರ, ಹಿಂದೂ-ಮುಸ್ಲಿಂ-ಕ್ರೆಸ್ತ, ಭಾರತೀಯ-ವಿದೇಶೀಯ, ಪೌರ್ವಾತ್ಯ-ಪಾಶ್ಚಿಮಾತ್ಯ ಇಂಥ ಕಡೆ ಕೂಡ ಹಲವು ಅನ್ಯಗಳು ಮತ್ತು ಹಲವು ಸ್ವಗಳು ಒಂದೊಂದೇ ಅನ್ಯ ಸ್ವಗಳಾಗಿ (ಏಕರೂಪಿಯಾಗಿ) ಕಲ್ಪಿತಗೊಂಡಿವೆ. ರಾಷ್ಟ್ರೀಯ ಹೋರಾಟದ ಸಂದರ್ಭದಲ್ಲಿ ಇವು ನಮ್ಮ ಅನನ್ಯತೆಯ ಚಹರೆಗಳಾಗಿಯೂ ಕೆಲಸ ಮಾಡುತ್ತ: ಕೆಲವೊಂದು ಸಂದರ್ಭಗಳ ರಾಜಕಾರಣಕ್ಕೆ ತಕ್ಕಂತೆ ಕೆಲವೊಂದು ಚಹರೆಗಳು ಮಾತ್ರವೇ ಮುನ್ನೆಲೆಗೆ ಬರುತ್ತ: ಮಿಕ್ಕವು ಹಿನ್ನೆಲೆಗೆ ಸರಿಯುತ್ತ ಬಂದಿವೆ. (ಐಡೆಂಟಿಟಿ ರಾಜಕಾರಣ ಚರ್ಚೆ ಇದನ್ನು ಸರಿಯಾಗಿ ಗ್ರಹಿಸಬಲ್ಲುದು)

1.21. ದರ್ಶನ ಮೀಮಾಂಸೆ

ಮಹೋಪಮೆ, ಭವ್ಯತೆ, ಪ್ರತಿಮಾದೃಷ್ಟಿ, ಪೂರ್ಣದೃಷ್ಟಿ, ದರ್ಶನ, ಭೂಮಾನುಭೂತಿ ಇಂಥ ಹಲವಾರು ಮೀಮಾಂಸೆಯ ಪರಿಕಲ್ಪನೆಗಳನ್ನು ನೀಡಿದ ಕುವೆಂಪು ತಮ್ಮದೇ ಆದ ದಾರ್ಶನಿಕ ಕಾವ್ಯ ಮೀಮಾಂಸೆಯೊಂದನ್ನು ಕನ್ನಡಕ್ಕೆ ನೀಡಿದ್ದಾರೆ. ಪಾಶ್ಚಾತ್ಯ ಮೀಮಾಂಸೆ ಮತ್ತು ವಿಮರ್ಶೆ ಹಾಗೂ ಭಾರತೀಯ ಕಾವ್ಯ ಮೀಮಾಂಸೆಗಳನ್ನು ಕಸಿ ಮಾಡಿ ಅದಕ್ಕೆ ಯೋಗ ವಿಜ್ಞಾನ, ತತ್ವಜ್ಞಾನ ಇತ್ಯಾದಿಗಳಿಂದ ಪ್ರೇರಣೆ ಪಡೆದು ತಮ್ಮದೇ ಆದ ದರ್ಶನ ದೃಷ್ಟಿಯ ಮೀಮಾಂಸೆಯೊಂದನ್ನು ರೂಪಿಸಿದ್ದಾರೆ.31 ‘ಬುದ್ಧಿಪೂರ್ವಕ, ಹೃದಯ ತೃಪ್ತಿಕರ ವಿಚಾರಸಮ್ಮತವಾದ ಸತ್ಯ ಸ್ವರೂಪ ಮೀಮಾಂಸೆ’ಯನ್ನು ಪ್ರಯೋಗಿಸಿದ್ದಾರೆ. ಹೀಗೆ ಹೊಸನೀರಿನ ಕಾಲದ ವಿಮರ್ಶೆಯು ಬರೀ ಪಶ್ಚಿಮದ ಪ್ರಭಾವಗಳಿಂದ ಮಾತ್ರ ಸಿದ್ಧವಾಗಿಲ್ಲ. ಅದು ಪೂರ್ವ ಮತ್ತು ಪಶ್ಚಿಮಗಳ ಹಲವು ಜ್ಞಾನ ಶಾಖೆಗಳ ದೃಷ್ಟಿ ಧೋರಣೆಗಳನ್ನು ಹೀರಿ ಸಂಕರಗೊಂಡ ಸ್ಥಿತಿ. ಸಂಕರತೆಯೇ ಆದರ ಪ್ರಧಾನ ಲಕ್ಷಣ. ಅದರಲ್ಲಿ ಕನ್ನಡತನ, ಭಾರತೀಯತೆ, ಇಂಗ್ಲಿಶ್ ಜಗತ್ತುಗಳೆಲ್ಲಾ ವಿಂಗಡಿಸಲಾಗದಂತೆ ಬೆರೆತಿವೆ.

1.22. ಕೃತಿ-ಕರ್ತೃ-ರಸಕೇಂದ್ರಿತ ವಿಮರ್ಶೆಗಳು

ಕೃತಿಗಳನ್ನು ಸಂಪಾದಿಸಿ ಪೀಠಿಕೆ, ಪ್ರಸ್ತಾವನೆಗಳಲ್ಲಿ ವಿವರಿಸುವ, ಮೆಚ್ಚುವ, ಮುಖ್ಯ ಕಾವ್ಯಭಾಗಗಳನ್ನು ಉಲ್ಲೇಖಿಸಿ ವಿಶ್ಲೇಷಿಸುವ ಪರಿಪಾಠವು ಆಧುನಿಕ ಕೃತಿಗಳ ಮುನ್ನುಡಿ, ಮೊದಲ ನುಡಿಗಳಲ್ಲಿ ಹಾರೈಕೆ, ಹರಕೆ, ಪ್ರೋತ್ಸಾಹ, ಸಮರ್ಥನೆ, ಗುಣಗ್ರಹಣ, ಇತ್ಯಾದಿಗಳಿಗಿಂತ ಭಿನ್ನವಾದ ವಿಮರ್ಶೆಗಳಿಗೆ ತೆರೆದುಕೊಂಡಿತು. ಒಂದು ಉದಾ: ನೀಡುವುದಾದರೆ: ಎ.ಆರ್.ಕೃ, ಮಾಡಿದ ‘ಪ್ರಣಯವಾರ್ತಾ’ ಕಾದಂಬರಿಯ ವಿಮರ್ಶೆ ಇಂಥ ಭಿನ್ನ ವಿಮರ್ಶೆಗೆ ಒಂದು ಮಾದರಿ. ವಿಮರ್ಶೆಯು ಇಲ್ಲಿ ಪ್ರಕಾರ ವಿಶ್ಲೇಷಣೆಗೆ ತನ್ನ ಸ್ವರೂಪವನ್ನು ಬದಲಿಸಿಕೊಂಡಂತೆ ಕಾಣುತ್ತದೆ. ಕೃತಿನಿಷ್ಠತೆಯು ವಸ್ತುನಿಷ್ಠತೆಯ ಕಡೆಗೆ ಚಲಿಸಿದಂತೆ ಕಾಣುತ್ತದೆ. ಹಾಗೇ ಕೈಲಾಸಂ ಅವರ ಟೊಳ್ಳು ಗಟ್ಟಿ, ಮಾಸ್ತಿಯವರ ಕತೆಗಳ ಕುರಿತ ಎ.ಆರ್.ಕೃ. ವಿಮರ್ಶೆಯಲ್ಲಿ ತೌಲನಿಕತೆ, ಹಾಗೂ ವಾಸ್ತವಾದದ ಚರ್ಚೆಗಳು ಬರುತ್ತವೆ. ಇಲ್ಲೆಲ್ಲ ವಿಮರ್ಶೆಯು ನಿರ್ಣಯಗಳನ್ನು ನೀಡುವ ಕಡೆಗೆ ಚಲಿಸಿದೆ. ಎ.ಆರ್.ಕೃ ಮಾಸ್ತಿಯವರ ಕತೆಗಳನ್ನು ‘ಬೆಣ್ಣೆಯಿಂದ ಮಾಡಿದ ಸಿಂಹಗಳು’ ಎಂದು ಕರೆಯುತ್ತಾರೆ. ಎಸ್.ವಿ.ರಂಗಣ್ಣ ಅವರ ಕಾಳಿದಾಸನ ನಾಟಕಗಳ ವಿಮರ್ಶೆ (1969) ವೀ.ಸೀ.ಅವರ ವಾಲ್ಮೀಕಿ ರಾಮಾಯಣ (1977) ಎ.ಎನ್.ಮೂರ್ತಿರಾಯರ ಸೀತಾ ಪರಿತ್ಯಾಗ ಪ್ರಸಂಗ (1977) ಇಂಥ ಕೃತಿಗಳಲ್ಲಿ ಕೃತಿ ವಿಮರ್ಶೆಯ ಬಿಡಿ ಮತ್ತು ಇಡಿ ಮಾದರಿಗಳನ್ನು ಕಾಣಬಹುದು. ಇಲ್ಲಿ ಕೃತಿ, ಕೃತಿಕಾರರ ಪರಂಪರೆ-ಪ್ರಕಾರಗಳ ಪ್ರತ್ಯೇಕ ಚರ್ಚೆ ಮತ್ತು ಪರಸ್ಪರ ಅಂತಃಸಂಬಂಧಗಳ ಚರ್ಚೆಗಳೆರಡೂ ಇವೆ.

ಮುಳಿಯರ ನಾಡೋಜ ಪಂಪ; ಎ.ಆರ್.ಕೃ ಅವರ ಬಂಕಿಮಚಂದ್ರ, ಭಾಸಕವಿ; ಎಂ.ಆರ್‌ಶ್ರೀ ಅವರ ಷಡಕ್ಷರಕವಿಯ ಸ್ಥಾನ ನಿರ್ದೇಶನ ಇತ್ಯಾದಿ ಕೃತಿಗಳಲ್ಲಿ ಪ್ರಧಾನವಾಗಿ ಕರ್ತೃಕೇಂದ್ರಿತ ವಿಮರ್ಶೆಯನ್ನು ಗುರ್ತಿಸಿಕೊಳ್ಳಬಹುದು. ಹಾಗೇ ಕುವೆಂಪು ಅವರ ಭೂಮಾನುಭೂತಿ, ರಸಯಾತ್ರೆ, ಕಾವ್ಯವಿಹಾರ, ಭವ್ಯತೆ ಇಂಥ ಪರಿಭಾಷೆಗಳಲ್ಲಿ, ಪುತಿನರವರ ಬಹುಪಾಲು ಎಲ್ಲ ವಿಮರ್ಶೆಗಳಲ್ಲಿ, ಎಸ್.ವಿ.ರಂಗಣ್ಣ, ತೀನಂಶ್ರೀ, ವೆಂಕಣ್ಣಯ್ಯ, ಕುರ್ತಕೋಟಿಯವರ ಕೆಲವು ವಿಮರ್ಶೆಗಳಲ್ಲಿ ರಸನಿಷ್ಠ ವಿಮರ್ಶಾ ಧಾರೆಯನ್ನು ಗುರ್ತಿಸಬಹುದು.

1.23. ವರ್ಗೀಕರಣ, ಲಕ್ಷಣ ನಿರ್ವಚನ, ಪ್ರಶಸ್ತಿ ವಾಚನ...

ಶಾಸ್ತ್ರಕವಿ, ಕಾವ್ಯಕವಿ, ಉಭಯಕವಿ ಹೀಗೆ ಕವಿಗಳನ್ನು ವರ್ಗೀಕರಿಸುವುದು ಮತ್ತು ಗುಣವರ್ಮನೈಸಿರಿ, ಪಂಪನೋಜೆ, ಪೊನ್ನನ ಪೊಸ ದೇಸೆ, ರನ್ನನ ಗುಣೋನ್ನತಿ ಹೀಗೆ ಒಂದೊಂದು ಮಾತಿನಲ್ಲಿ ಕವಿಲಕ್ಷಣವನ್ನು ನಿರ್ವಚಿಸುವುದು ಪ್ರಾಚೀನ ಗ್ರಂಥಗಳಲ್ಲಿ ನಡೆಯುತ್ತ ಬಂದಂತೆ ಹೊಸನೀರಿನ ಕಾಲದ ವಿಮರ್ಶೆಯಲ್ಲೂ ನಡೆದಿದೆ. ತನ್ನ ವಿಶ್ವಕೃತಿ ಪರೀಕ್ಷಣದಲ್ಲಿ ಹಿರಣ್ಯಗರ್ಭ ಕವಿಗಳನ್ನು ಐದು ರೀತಿಯಾಗಿ ವರ್ಗೀಕರಿಸುತ್ತಾನೆ ಮತ್ತು ಅವರ ಲಕ್ಷಣಗಳನ್ನು ಹೇಳಿದ್ದಾನೆ. ಹಾಗೇ ಹೊಸನೀರಿನ ಕಾಲದಲ್ಲಿ ಕವಿಗಳನ್ನು ಒಂದೊಂದು ಮಾತುಗಳಲ್ಲಿ ನಿರ್ವಚಿಸಲು ರೂಪಕ ಸಾಮ್ರಾಜ್ಯ ಚಕ್ರವರ್ತಿ, ಉಪಮಾಲೋಲ, ಆದಿಕವಿ ಇತ್ಯಾದಿ ಮಾತುಗಳನ್ನೂ ಬಳಸಲಾಗಿದೆ. ಇಂಥ ಪದಪ್ರಯೋಗಗಳ ಜೊತೆಗೆ ಕವಿ, ಕೃತಿಗಳ ಸ್ಥಾನ ನಿರ್ದೇಶನದ ಕೆಲಸವೂ ನಡೆದಿದೆ. ಮುಗಳಿಯವರ ಸಾಹಿತ್ಯ ಚರಿತ್ರೆಯಿಂದಲೇ ಎಂ.ವಿ.ಸೀ.ಯವರು ಕೆಲವು ಉದಾಹರಣೆಗಳನ್ನು ಕೊಟ್ಟಿದ್ದಾರೆ. “ಪಂಪನು ಮಹಾಕವಿಯೆಂಬುದು ಎಂದಿಗೂ ವಾದಗ್ರಸ್ಥವಾಗಿಲ್ಲ. (ಪುಟ-101) ಗದಾಯುದ್ಧವು ಪಂಪಭಾರತಕ್ಕಿಂತ ಗಾತ್ರದಲ್ಲಿ ಸಣ್ಣದಾದರೂ ಅದರಂತೆ ಮಹಾಕೃತಿಯೆಂದು ಮೆರೆದಿದೆ. (ಪುಟ-104) ಪಂಪರಾಮಾಯಣ ಮಹಾಕಾವ್ಯದ ಸತ್ವವುಳ್ಳ ಸತ್ಕಾವ್ಯ. (ಪುಟ-131) ನಯಸೇನ ನಿರುಪಮ ಸಹಜ ಕವಿ. ಹರಿಹರನ ಗಿರಿಜಾಕಲ್ಯಾಣವು ಮಹಾಕವಿಯ ಸತ್ಕಾವ್ಯ, ಮಹಾಕಾವ್ಯವಲ್ಲ. (ಪುಟ-179) ಬಸವರಾಜದೇವರ ರಗಳೆ ಹರಿಹರನ ಶ್ರೇಷ್ಠ ಕೃತಿ; ಅಲ್ಪಗಾತ್ರದಲ್ಲಿರುವ ಮಹಾಕೃತಿ. (ಪುಟ-180) ಹರಿಶ್ಚಂದ್ರ ಕಾವ್ಯ ರಾಘವಾಂಕನ ಮಹಾಕೃತಿ. (ಪುಟ-189) ವೀರೇಶ ಚರಿತೆ ಮೇಲ್ತರಗತಿಯ ಕಾವ್ಯ. (ಪುಟ-189) ಜನ್ನನ ಯಶೋಧರ ಚರಿತೆ ಮಹಾಕೃತಿ. (ಪುಟ-212) ಕುಮಾರವ್ಯಾಸ ಭಾರತವು ಮಹಾಕವಿಯ ಮಹಾಕೃತಿ ಎಂಬುದೀಗ ಒಪ್ಪಿದ ಮಾತಾಗಿದೆ. (ಪುಟ-270) (ಪುಟ-286)”32

ಇದೇ ರೀತಿ ಪ್ರಶಸ್ತಿವಾಚನದ ಧಾಟಿಯಲ್ಲಿ ಕವಿ, ಕೃತಿಗಳನ್ನು ವಿಮರ್ಶಿಸಿರುವುದೂ ಉಂಟು. ಇದಕ್ಕೂ ಎಂ.ವಿ.ಸೀ ಅವರ ಮಾತುಗಳನ್ನೇ ಉದಾಹರಣೆಯಾಗಿ ನೋಡಬಹುದು. “ಕವಿ ನಾಗರಾಜ ಪಂಪನನ್ನು ‘ಪಸರಿಪ ಕನ್ನಡಕ್ಕೊಡೆಯನೊರ್ವನೆ ಸತ್ಕವಿ ಪಂಪನಾವಗ’ ಎಂದು ಹೊಗಳಿದನು. ಇದರ ಪ್ರತಿಧ್ವನಿಯನ್ನು ‘ಕನ್ನಡಕ್ಕೊಬ್ಬನೆ ಕೈಲಾಸಂ, ಎಂಬ ಪ್ರಶಸ್ತಿಯಲ್ಲಿ ಕಾಣಬಹುದು. ತೀನಂಶ್ರೀಯವರು ಪಂಪ ಕನ್ನಡದ ಕಾಳಿದಾಸ ಎಂದಿದ್ದಾರೆ. ಎಂ.ವೀ.ಸೀ ದೇ.ಜವರೇಗೌಡರನ್ನು ಕನ್ನಡದ ಬಾಸ್ವೆಲ್ ಎಂದಿದ್ದಾರೆ. ಕಾದಂಬರೀ ಸಾರ್ವಭೌಮ, ವಚನ ಪಿತಾಮಹ, ರಸ ಋಷಿ, ಗಾರುಡಿಗ, ಅಭಿನವ ಕಾಳಿದಾಸ, ಇತ್ಯಾದಿ ಪ್ರಶಸ್ತಿವಾಚಕಗಳು ವಿಮರ್ಶಕರಿಂದ ಪ್ರಯೋಗವಾಗಿ ಜನಪ್ರಿಯವಾಗಿವೆ. ನಾಡೋಜ ಪಂಪ, ಕನ್ನಡದ ಆಸ್ತಿ, ಕನ್ನಡದ ಆಶ್ವಿನೀ ದೇವತೆಗಳು ಇಂಥ ಮಾತುಗಳೂ ರೂಡಿಗೆ ಬಂದಿವೆ. ಒಬ್ಬ ಕವಿಯ ವಿಷಯದಲ್ಲಿ ನಮ್ಮ ಹೃತ್ಪೂರ್ವಕವಾದ ಮೆಚ್ಚಿಗೆಯನ್ನು, ಅಭಿಮಾನವನ್ನು ತಿಳಿಸುವಾಗ ಹೀಗಲ್ಲದೆ ಬೇರೆಯ ರೀತಿಯಲ್ಲಿ ತಿಳಿಸುವುದು ಬಹುಶಃ ಸಾಧ್ಯವಾಗಲಾರದು.”33 ಇಂಥ ಪದಪ್ರಯೋಗ ಮತ್ತು ಭಾಷಾ ಬಳಕೆ ಹೊಸನೀರಿನ ಕಾಲದ ವಿಮರ್ಶೆಯ ಒಂದು ಲಕ್ಷಣವಾಗಿದೆ.

1.24. ವ್ಯಕ್ತಿಪ್ರಧಾನತೆ

ಧರ್ಮ, ಕಾಲ, ದೇಶಗಳ ಆಚೆಗೆ ಕೃತಿಗಳನ್ನು ಚರ್ಚಿಸುವ ಜೊತೆ ಜೊತೆಯಲ್ಲೆ ಕೃತಿಯ ಕಾಲ. ಕೃತಿಕಾರನ ಕಾಲ ಮತ್ತು ಕೃತಿಕಾರನ ಜಾತಿ, ಧರ್ಮಗಳ ಕುರಿತ ಚರ್ಚೆಯು ಸಾಹಿತ್ಯ ಚರಿತ್ರೆ ಮತ್ತು ಸಂಶೋಧನೆಗಳಲ್ಲಿ ನಿಲ್ಲದೆ ನಡೆದಿದೆ. ಆದರೂ ಕಾಲ, ದೇಶ, ಧರ್ಮಗಳಿಂದ ಕೃತಿಯನ್ನು ಬಿಡುಗಡೆಗೊಳಿಸಿ ತನ್ನದೇ ಮಾನದಂಡಗಳಿಂದ ಕೃತಿ ಪರಿಚಯ-ಕೃತಿ ಪರೀಕ್ಷೆಗೆ ತೊಡಗಿದ ವಿಮರ್ಶೆಯು ಕೃತಿಯನ್ನು ಕೃತಿಕಾರನಿಂದ ಬಿಡುಗಡೆ ಮಾಡಲಿಲ್ಲ. ಬಿಡುಗಡೆಯ ಪ್ರಶ್ನೆ ಹಾಗಿರಲಿ; ಆಧುನಿಕ ವಿಮರ್ಶೆಯು ಸಾಹಿತ್ಯದ ಕೃತಿ, ಕಾಲ, ಧರ್ಮಗಳ ಕೇಂದ್ರವನ್ನು ಪಲ್ಲಟಿಸಿ ಕೃತಿಕಾರನ ಕೇಂದ್ರವನ್ನೇ ಮುಖ್ಯವಾಗಿ ಸ್ಥಾಪಿಸಿತು. ಕಾಲ, ಧರ್ಮಗಳು ಅಷ್ಟೇ ಅಲ್ಲ, ಕೃತಿಯೂ ಕೂಡ ಹಿನ್ನೆಲೆಗೆ ಸರಿದು ಕೃತಿಕಾರನೆ ಮುನ್ನೆಲೆಗೆ ಬಂದದ್ದು ಆಧುನಿಕ ವಿಮರ್ಶೆಯ ಒಂದು ಮುಖ್ಯ ಪಲ್ಲಟವಾಗಿದೆ. ಓದುಗ ಕೇಂದ್ರಿತ, ಸಮಾಜ ಕೇಂದ್ರಿತ ದೃಷ್ಟಿಗಿಂತ ಲೇಖಕ ಕೇಂದ್ರಿತ ದೃಷ್ಟಿ ‘ಹೊಸನೀರಿನ ಕಾಲ’ದ ಮುಖ್ಯ ದೃಷ್ಟಿಯಾಗಿದೆ.

ಲೇಖಕನೇ ವಿಮರ್ಶೆಯಲ್ಲಿ ಪ್ರಧಾನವಾದದ್ದು ಸರಿಯೋ ತಪ್ಪೋ ಎಂಬುದು ಬೇರೆ ಚರ್ಚೆ. ಆದರೆ ಹೀಗೆ ಆಗಲು ಕಾರಣವೇನಿರಬಹುದು? ಎನ್ಲೆöಟನ್ಮೆಂಟ್ ಕಾಲದ ಪುನರುಜ್ಜೀವಿತ ಬದುಕಿನಲ್ಲಿ ದೇವರು, ಧರ್ಮ, ಸಮುದಾಯ ಶಕ್ತಿ, ಸ್ವರ್ಗ-ನರಕ ಎಲ್ಲವೂ ನಿರಾಕರಣೆಗೆ ಗುರಿಯಾದವು. ಆಗ ಮನುಷ್ಯನೇ ಶ್ರೇಷ್ಠ, ಅವನೇ ಸೃಷ್ಟಿ-ಸ್ಥಿತಿ-ಲಯಕರ್ತ ಎಂಬ ನಂಬಿಕೆಯೊಂದು ಬೆಳೆಯತೊಡಗಿತು. ಇಂಥ ವ್ಯಕ್ತಿವಾದವೇ ವಿಜೃಂಭಿಸಿತೊಡಗಿದ್ದ ವ್ಶೆಜ್ಞಾನಿಕ-ವೈಚಾರಿಕ-ಮಾನವತಾವಾದಿ ಕಾಲಧರ್ಮವು ವಿಮರ್ಶೆಯಲ್ಲಿಯೂ ವ್ಯಕ್ತಿವಾದವು ತಲೆ ಹಾಕಲು ಬಹುಶಃ ಕಾರಣವಾಗಿರಬಹುದು. ಇಡೀ ಲೋಕದ ಮುಖ್ಯ ಘಟಕ ವ್ಯಕ್ತಿ ಎಂಬ ವ್ಯಕ್ತಿವಾದದ ದೃಷ್ಟಿಯು ಸಾಹಿತ್ಯದ ಅನುಸಂಧಾನಗಳಲ್ಲಿ ವ್ಯಕ್ತಿಯನ್ನೆ ಮುಖ್ಯವಾಗಿ ಭಾವಿಸುವಂತೆ ಮಾಡಿರಬಹುದು. ರಮ್ಯಕಾವ್ಯದಲ್ಲಿ ಪ್ರಕೃತಿ ಅಥವಾ ದೈವವೇ ಪರಮೋನ್ನತ ಶಕ್ತಿ ಎಂಬ ತಿಳುವಳಿಕೆ ಇದ್ದರೂ ಎನ್ಲೆöಟನ್ಮೆಂಟ್ ಯುಗವು ವ್ಯಕ್ತಿಯನ್ನು ಪ್ರಧಾನ ಶಕ್ತಿಯಾಗಿ ಸ್ವೀಕರಿಸಿದ ಭಾವವೇ ಹೊಸನೀರಿನ ಕಾಲದ ವಿಮರ್ಶೆಯಲ್ಲು ಸ್ವೀಕೃತವಾಗಿದೆ. (ಆನಂತರದಲ್ಲಿ ಇದು ಕಡಿಮೆಯಾದರೂ ಇಗೀಗ ಮತ್ತೆ ಹೆಚ್ಚಾಗಿದೆ)

1.25. ಪಾತ್ರ ಮತ್ತು ಪ್ರಕಾರಗಳ ಶ್ರೇಣೀಕರಣ

‘ಹೊಸನೀರಿನ ಕಾಲ’ದಲ್ಲಿ ಅನೇಕ ಪ್ರಕಾರಗಳು ಸಂಭವಿಸಿವೆ, ಸಮಾಜವನ್ನು ವರ್ಗೀಕರಿಸಿ ಶ್ರೇಣೀಕರಿಸುವ ದೃಷ್ಟಿಯು ಈ ಸಾಹಿತ್ಯ ಪ್ರಕಾರಗಳನ್ನೆಲ್ಲ ಶ್ರೇಣೀಕರಿಸಿ ನೋಡಲು ಪ್ರೇರಿಸಿರಬಹುದು. ಹೀಗಾಗಿ ವಿಮರ್ಶೆಯಲ್ಲಿ ನಿರುದ್ಧಿಶ್ಯವಾಗಿ ಲೇಖಕರ ಮತ್ತು ಲಿಖಿತ ಪ್ರಕಾರಗಳ ಶ್ರೇಣೀಕರಣವು ನಿರ್ವಹಣೆಯಾಗಿದೆ. ಕಾವ್ಯವು ಶ್ರೇಷ್ಠವೆಂದು ಇತರ ಪ್ರಕಾರಗಳು ಕನಿಷ್ಠವೆಂದು; ಕವಿಯ ದೊಡ್ಡವನು, ಪ್ರತಿಭೆ ದೊಡ್ಡದು, ವಿಮರ್ಶಕ ಚಿಕ್ಕವನು, ಪಾಂಡಿತ್ಯ ಚಿಕ್ಕದು ಎಂದು ತಳಬುಡವಿಲ್ಲದ ಶ್ರೇಣೀಕರಣವನ್ನು ಸಾಹಿತ್ಯದ ಅನುಸಂಧಾನದಲ್ಲಿ ಸೃಷ್ಟಿಸಿಕೊಳ್ಳಲಾಗಿದೆ. ನ್ಯಾಯಾಧೀಶನಂತೆ ವರ್ತಿಸುವ ವಿಮರ್ಶಕ ಮತ್ತು ಸೃಷ್ಟಿಕರ್ತರಂತೆ ವರ್ತಿಸುವ ಕವಿಗಳ ನಡುವೆ ತಮ್ಮ ಸ್ಥಾನಮಾನ ಕುರಿತ ಸಂಘರ್ಷವು ಸಾಹಿತ್ಯ ಮತ್ತು ವಿಮರ್ಶೆ ಎರಡಲ್ಲೂ ನಡೆಯುತ್ತಲೇ ಬಂದಿದೆ. ಸ್ತರವಿನ್ಯಾಸ ನಿರ್ಮಾಣ ಕಾರ‍್ಯವು ವಿಮರ್ಶೆಯ ತತ್ವದಲ್ಲಿ ಎಲ್ಲೂ ಹೇಳಲ್ಪಟ್ಟಿಲ್ಲ. ಇದನ್ನೊಂದು ವಿಮರ್ಶೆಯ ಕರ‍್ಯ ಎಂದು ನಮ್ಮವರು ಭಾವಿಸದಿದ್ದರೂ; ಆಚರಣೆಯಲ್ಲಿ ಇದೊಂದು ವಿಮರ್ಶೆಯ ಕಾರ‍್ಯವೆಂಬಂತೆ ಪಾಲಿತವಾಗಿದೆ.

1.26. ಪರಿಭಾಷೆಯ ಬಹುಳತೆ

ಒಂದೇ ಪರಿಭಾಷೆ ಬಳಸಬಹುದಾದ ಕಡೆ ಹಲವು ರೀತಿಯ ಪರಿಭಾಷೆಗಳನ್ನು ಬಳಸಿರುವುದು ಈ ಕಾಲದ ಒಂದು ಲಕ್ಷಣ. ಉದಾ:ಗೆ ರಸಪ್ರಸ್ಥಾನ, ರಸಪ್ರಕರಣ, ರಸ ಸಿದ್ಧಾಂತ, ರಸವಿಚಾರ, ಇಂಥ ಪದಗಳನ್ನು ಸರಿಸುಮಾರು ಒಂದೇ ಅರ್ಥದಲ್ಲಿ ಬಳಸಿದ್ದಾರೆ. ಒಬ್ಬೊಬ್ಬರು ಒಂದೊಂದು ಪರಿಭಾಷೆ ಬಳಸುವುದೂ ಒಬ್ಬರೇ ಹಲವಾರು ರೀತಿ ಪರಿಭಾಷೆ ಬಳಸುವುದೂ ಇದೆ. ಸೈದ್ಧಾಂತಿಕ ಖಚಿತತೆ, ಪರಿಭಾಷೆಯ ಏಕಸೂತ್ರತೆ ಇಲ್ಲದಿರುವುದೇ ಈ ವಿಮರ್ಶೆಯ ಲಕ್ಷಣ. ಇದು ಯಾಕೆ ಹೀಗೆ? ಇದೊಂದು ರೂಪಗೊಳ್ಳುತ್ತಿರುವ ಪ್ರಕಾರ ಆದ್ದರಿಂದ ಇಂಥ ಘಟ್ಟಗಳಲ್ಲಿ ಈ ಲಕ್ಷಣ ಸಾಮಾನ್ಯ. (ಜೊತೆಗೆ ಗಮನಿಸಿ ಪರಿಭಾಷೆಯ ಕಗ್ಗಾಡು)

1.27. ನಿಲುವುಗಳ ಭಿನ್ನತೆ-ನಿಲ್ದಾಣಗಳ ಬದಲಿಕೆ

ಒಬ್ಬನೇ ವಿಮರ್ಶಕ ತದ್ವಿರುದ್ಧವೆಂದು ಕಾಣಬಹುದಾದ, ಭಿನ್ನವೆಂದು ಕಾಣಬಹುದಾದ, ನಿಲುವು, ದೃಷ್ಟಿಗಳನ್ನು ಪ್ರತಿಪಾದಿಸುವುದು ಹೊಸನೀರಿನ ಕಾಲದ ವಿಮರ್ಶೆಯಲ್ಲಿ ಸರ್ವೇಸಾಮಾನ್ಯವಾಗಿವೆ. ಭಿನ್ನ ನಿಲ್ದಾಣಗಳಲ್ಲಿ ನಿಂತು ಭಿನ್ನ ನಿಲುವುಗಳನ್ನು ಭಿನ್ನ ಭಿನ್ನ ಸಂದರ್ಭಗಳಲ್ಲಿ ತಳೆಯುವುದೂ ಸಾಮಾನ್ಯವಾಗಿದೆ. ಹಾಗೇ ತನ್ನ ನಿಲುವುಗಳನ್ನು ತಾನೇ ಮುರಿದು ಭಿನ್ನ ನಿಲುವುಗಳನ್ನು ಪ್ರತಿಪಾದಿಸುವ ಸಂದರ್ಭಮುಖಿ ವಿಮರ್ಶೆಯೂ ಇಲ್ಲಿ ಸಾಮಾನ್ಯವಾಗಿದೆ. ಇದು ಬಹುಪಾಲು ಎಲ್ಲ ವಿಮರ್ಶಕರ ವಿಮರ್ಶೆಯಲ್ಲು ಕಂಡು ಬರುವ ವಿದ್ಯಮಾನ. ಒಂದು ಉದಾಹರಣೆಯನ್ನು ಮಾತ್ರ ಇಲ್ಲಿ ನಿದರ್ಶನಕ್ಕಾಗಿ ನೋಡಬಹುದು. “ಪ್ರಾಚೀನ ಗ್ರಂಥಗಳ ವಿಮರ್ಶೆಯ ಸಮಯದಲ್ಲಿ ಆ ಕಾಲದ ರಸಿಕರ, ವಿದ್ವಜ್ಜನರ ದೃಷ್ಟಿ, ರೀತಿ, ಅಭಿರುಚಿಗಳು ಯಾವ ರೀತಿಯಾಗಿದ್ದವು ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅದರ ಪರೀಕ್ಷಣವನ್ನು ನಡೆಸಬೇಕು. ಈಚಿನ ವಿಮರ್ಶೆಗಾರರ ಮೌಲ್ಯಗಳನ್ನೂ ತೂಕಗಳನ್ನೂ ಆ ಕಾರ‍್ಯಕ್ಕೆ ಪ್ರಯೋಗಿಸಿ ಅವುಗಳ ಯೋಗ್ಯತೆಗಳನ್ನು ನಿರ್ಣಯಿಸುವುದು ಅನ್ಯಾಯವಾಗಬಲ್ಲುದು”34 “ನಮ್ಮ ಕಾಲದ ವಿಮರ್ಶೆ ನಮ್ಮ ಕಾಲದ ಬೆಲೆಗಳನ್ನು ನಿವೇದಿಸಲಿ; ಬೆಳೆಸಲಿ. ನಮ್ಮ ವಿಮರ್ಶೆ ನಮ್ಮ ಕಾಲದ ವಿಮರ್ಶೆಗಳನ್ನು ರೂಢಿಸಿ, ಶುಚಿಗೊಳಿಸಿ ಸ್ಥಾಪಿಸಲಿ”35

ಒಂದೊಂದು ಪ್ರಕಾರಕ್ಕೆ ಕೃತಿಗೆ, ದೃಷ್ಟಿಕೋನಗಳಿಗೆ ವಿಮರ್ಶೆಯ ನಿಲುವುಗಳನ್ನು ರೂಪಿಸುವ ಶಕ್ತಿ ಇರುತ್ತದೆ. ಹಾಗೇ ಭಿನ್ನ ಸಂದರ್ಭಗಳಲ್ಲಿ ಬರೆದ ವಿಮರ್ಶೆ ತನ್ನ ಸಾಂದರ್ಭಿಕತೆಯಿಂದಲೂ, ವಿಮರ್ಶಕನ ದೃಷ್ಟಿ ಧೋರಣೆಗಳಲ್ಲಾದ ಪಲ್ಲಟಗಳಿಂದಲೂ ರೂಪ ಪಡೆಯುತ್ತಿರುತ್ತದೆ. ಹಾಗಾಗಿ ಪರಸ್ಪರ ದ್ವಂದ್ವವೆಂದು ಕಾಣುವ, ವಿರೋಧಿಯೆಂದು, ಪೂರಕವೆಂದು, ಭಿನ್ನವೆಂದು ಕಾಣುವ ನಿಲುವುಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಇದು ವಿಮರ್ಶೆಯ ದೌರ್ಬಲ್ಯವಲ್ಲ. ಲಕ್ಷಣ. ‘ನೂರು ಮರ ನೂರ ಸ್ವರ’ ಎನ್ನುವುದು ಭಿನ್ನ ಭಿನ್ನ ವಿಮರ್ಶಕರಿಗೇ ಅನ್ವಯವಾಗುತ್ತದೆ ಎಂದೇನೂ ಅಲ್ಲ. ಒಬ್ಬನೇ ವಿಮರ್ಶಕನ ಭಿನ್ನ ನಿರ್ಮಿತಿಗಳಿಗೂ ಅನ್ವಯವಾಗಬಹುದು.

1.28. ವ್ಯಾಖ್ಯಾನ-ಟೀಕು-ವಚನಗದ್ಯ-ವಿಶ್ವಕೋಶ

ಹೊಸನೀರಿನ ಕಾಲದಲ್ಲಿ ಆಧುನಿಕ ವಿಮರ್ಶೆಯು ಸಂಭವಿಸಿತು ಎಂದರೆ ಪ್ರಾಚೀನ ವಿಮರ್ಶೆಯ ಬೇರುಗಳೆಲ್ಲ ನಷ್ಟವಾದವು ಎಂದೇನೂ ಅಲ್ಲ. (ಪ್ರಾಗ್ರೂಪಗಳ ವಿವರಗಳಿಗೆ ನೋಡಿ; ಮೊದಲ ಬಾಗ) ಕೆಲವು ಪ್ರಾಗ್ರೂಪಗಳು ಇಲ್ಲವಾಗಿರಬಹುದು. ಆದರೆ ಹಲವು ಹಾಗೇ ಉಳಿದಿವೆ ಮತ್ತು ಹಲವು ರೂಪಾಂತರಗೊಂಡಿವೆ ಕೂಡ. ಟೀಕು, ವ್ಯಾಖ್ಯಾನ, ವಚನಗದ್ಯ, ಅಧ್ಯಯನ, ಪಾರಾಯಣ, ವಾಚನ, ಕೇಳಿಕೆ ಮೊದಲಾದುವು ಹಿಂದಿಗಿಂತಲು ಸಮೃದ್ಧವಾಗಿಯೇ ಹೊಸನೀರಿನ ಕಾಲದಲ್ಲಿ ಪ್ರಕಟವಾಗಿವೆ. 1840ರ ದಶಕದಲ್ಲಿ ಮೈಸೂರಿನ ಮುದ್ರಣಾಲಯದಿಂದ ಮುಮ್ಮಡಿಯವರ ವಲಯದ ಹಲವಾರು ಗ್ರಂಥಗಳು ಪ್ರಕಟವಾದುವು. ಇವುಗಳಲ್ಲಿ ಬಹುಪಾಲು ಟೀಕೆ, ವಚನಗದ್ಯ, ವ್ಯಾಖ್ಯಾನಗಳೇ ಆಗಿವೆ. ಆದರೆ ಇಂಥವುಗಳ ಬಗ್ಗೆ ನಮ್ಮ ವಿದ್ಯಾವಂತ ವಿಮರ್ಶಕರು ಹೆಚ್ಚಿನ ಮಾನ್ಯತೆ ನೀಡಿಲ್ಲ.

ದೇವಚಂದ್ರನ ರಾಜಾವಳಿ ಕತೆ, ಮತ್ತು ಹಿರಣ್ಯಗರ್ಭನ ವಿಶ್ವಕೃತಿ ಪರೀಕ್ಷಣಂ (1873) ಕೃತಿಗಳು ಆಧುನಿಕ ವಿಮರ್ಶೆ ಮತ್ತು ವಿಮರ್ಶೆಯ ಪ್ರಾಗ್ರೂಪಗಳು ಹಾಗೂ ಕಾವ್ಯಪರಂಪರೆಗಳು ಪರಸ್ಪರ ಒಂದರೊಳಗೊಂದು ಹೆಣೆದುಕೊಂಡ ರಚನೆಗಳಾಗಿವೆ. ಕಾವ್ಯ ವಿಮರ್ಶೆ, ವ್ಯಾಖ್ಯಾನ ಪ್ರಕಾರಗಳು ಹೆಣೆದುಕೊಂಡ ಹೊಸನೀರಿನ ಕಾಲದ ಕೃತಿಗಳಿವು. ಪ್ರಕಾರಗಳು ಕಲಸಿಕೊಂಡ ಮತ್ತು ಅಪ್ರಕಾರರೂಪಿಯಾದ ರಚನೆಗಳ ಸಂಭವವೂ ಇಲ್ಲಿನ ವಿಮರ್ಶೆಯ ಒಂದು ಲಕ್ಷಣವಾಗಿದೆ.

ಕಿಟ್ಟೆಲನ ಗಾಥಾಮೃತ ಕಲಶ (1875), ನಿಜಗುಣ ಶಿವಯೋಗಿಯ ವಿವೇಕ ಚಿಂತಾಮಣಿ (1884), ಗಂಗಾಧರ ಮಡಿವಾಳೇಶ್ವರ ತುರಮರಿಯವರ ಶಬ್ದಮಣಿದರ್ಪಣ ವ್ಯಾಖ್ಯಾನ (1886), ಕಾದಂಬರಿಯ ಗದ್ಯರೂಪವಾದ ಕಾದಂಬರಿ ‘ವಚನಗದ್ಯ’ (1876), ಎಂ.ಎಸ್.ಪುಟ್ಟಣ್ಣ ಮತ್ತು ಶ್ರೀನಿವಾಸ ಐಯ್ಯಂಗಾರರ ನೀತಿಚಿಂತಾಮಣಿ (1884) ಮುಂತಾದ ಕೃತಿಗಳು ಹೊಸನೀರಿನ ಕಾಲದಲ್ಲಿ ಸಂಗ್ರಹ, ವಿಶ್ವಕೋಶ ರಚನೆ, ವ್ಯಾಖ್ಯಾನ, ಟೀಕು, ವಚನಗದ್ಯಗಳ ರೂಪದಲ್ಲಿ ಪ್ರಕಟವಾದ ವಿಮರ್ಶೆಯ ವಿನ್ಯಾಸಗಳಿಗೆ ಕೆಲವು ಉದಾಹರಣೆಗಳಾಗಿವೆ.

***

ಅಡಿಟಿಪ್ಪಣಿಗಳು
ಸಾಹಿತ್ಯ ವಿಮರ್ಶೆ ಮತ್ತು ರಾಜಕಾರಣ -ಕೆ.ಕೇಶವರ‍್ಮ, ಸಾಹಿತ್ಯ ವಿಮರ್ಶೆ-ಸಂ.ಪಂಡಿತಾರಾಧ್ಯ, 1999, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, 1998, ಪುಟ 42
ಹೆಚ್ಚಿನ ವಿವರಗಳಿಗೆ ನೋಡಿ: ಹಳಗನ್ನಡ ಸಾಹಿತ್ಯಾದ್ಯಯನ ಸಮೀಕ್ಷೆ: ಡಾ.ಎಚ್.ಎಸ್.ಶ್ರೀಮತಿ, ಅಜಂತ ಪ್ರಕಾಶನ, ಹೊಸಪೇಟೆ, 1993: ಪುಟ: 3-6
ಸಾಹಿತ್ಯ ಸಮ್ಮುಖ -ನಿ.ಮುರಾರಿ ಬಲ್ಲಾಳ, ಕರ್ನಾಟಕ ಸಂಘ, ಪುತ್ತೂರು, 2001, ಪುಟ 44-46
ಜೊತೆಗೆ ನೋಡಿ: ಮಾತು ಸೋತ ಭಾರತ -ಯು.ಆರ್.ಅನಂತಮೂರ್ತಿ, ಅಭಿನವ ಪ್ರಕಾಶನ, ಬೆಂಗಳೂರು, 2007: ಪುಟ 162-163
‘ಮಾಸ್ತಿಯವರ ಸಾಹಿತ್ಯ 1924, ಕೃತಿ ಬಹುಶಃ ಆಧುನಿಕ ಕನ್ನಡದಲ್ಲಿ ಪ್ರಕಟವಾದ ಸಾಹಿತ್ಯ ಮೀಮಾಂಸೆಯನ್ನು ಕುರಿತ ಪ್ರಥಮ ಗ್ರಂಥವಾಗಿದೆ’ ವಿವರಗಳಿಗೆ ನೋಡಿ: ಕೃತಿ ಸಂಸ್ಕೃತಿ, ಎಂ.ಜಿ.ಕೆ, ಪೂರ್ವೋಕ್ತ, ಪು:295
ಬೇರು ಕಾಂಡ ಚಿಗುರು -ಕೆ.ವಿ.ನಾರಾಯಣ, ವಿವೇಕ ಪ್ರಕಾಶನ, ಬೆಂಗಳೂರು, 1997, ಪುಟ 85
ಕುವೆಂಪು ಸಮಗ್ರ ಗದ್ಯ, ಸಂಪುಟ 2 -ಸಂ.ಕೆ.ಸಿ.ಶಿವಾರೆಡ್ಡಿ, ಕನ್ನಡ ವಿ.ವಿ. ಹಂಪಿ, 2001, ಪುಟ 491
ವಿಮರ್ಶೆಯ ಭಾಷೆ ಪರಿಭಾಷೆ -ಎಂ.ವೀ.ಸೀ: ಕನ್ನಡ ವಿಮರ್ಶೆಯ ನೆಲೆ ಬೆಲೆ-ಪೂರ್ವೋಕ್ತ
ಅದೇ ಪುಟ 71
ಸಾಹಿತ್ಯ ವಿಮರ್ಶೆಗಳಲ್ಲಿ ಅರ್ಥ ಮತ್ತು ಮೌಲ್ಯ -ವೀ.ಸೀ, 1972, ಪುಟ 65
ಅದೇ, ಪುಟ: 92
(ಮುಂದುವರೆಯುವುದು)

 

 

 

MORE NEWS

ಮೊದಲ ನಾಟಕದ ಮೊದಲ ಟೀಮ್ ಸ್ಪಿರಿಟ್

08-12-2025 ಬೆಂಗಳೂರು

"ರಂಗಾಭ್ಯಾಸದಲ್ಲಿ ಮೊದ ಮೊದಲು ಅರ್ಥಾತ್ ಆರಂಭಕ್ಕೆ ಭಾಷಿಕವಾಗಿ ಸಣ್ಪುಟ್ಟ ತೊಡಕುಗಳು ಕಾಡಿದವು. ಪ್ರತಿಗಂಧರ್ವ ಹೆಸ...

ಪುರುಷವತಾರ- ದೇಹ ಮೀಮಾಂಸೆಯ ಕಥನ 

05-12-2025 ಬೆಂಗಳೂರು

"`ಪುರುಷಾವತಾರ’ ಕಾದಂಬರಿಯಲ್ಲಿ ಗೋಸಾಯಿ ಗುರು ಹನುಮಂತ ಒಂಟಿಮನಿ ಅವರಿಗೆ ಹೇಳುವ ಮಾತುಗಳಿವು. ಈ ಮಾತುಗಳು ಕ...

DAILY COLUMN: ಮಗುವಿನ ಪ್ರಾಗ್ನಿಕ ರಚನೆ, ಕಲಿಕೆ ಮತ್ತು ಬಾಶೆ

04-12-2025 ಬೆಂಗಳೂರು

"ತಾಯ್ಮಾತು ಮತ್ತು ಶಿಕ್ಶಣ ಮಾದ್ಯಮ ಇವುಗಳ ನಡುವಿನ ರಾಚನಿಕ ಬಿನ್ನತೆಗಳೂ ಕೂಡ ಪೆರಮಾತಿನ ಶಿಕ್ಶಣದ ಸೋಲಿಗೆ ಕಾರಣವಾ...