ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ

Date: 10-09-2022

Location: ಬೆಂಗಳೂರು


“ಕೆಲವು ದ್ವನಿಗಳು ‘ಅ್ಯ’, ‘ಆ್ಯ’ ದ್ವನಿಗಳ ಹಾಗೆ ಎಲ್ಲ ಕನ್ನಡಗಳಲ್ಲೂ ಬಳಕೆಯಲ್ಲಿವೆ ಮತ್ತು ಮೂಲಕನ್ನಡದಿಂದಲೂ ಬಳಕೆಯಲ್ಲಿವೆ. ಆದರೆ ಇನ್ನು ಕೆಲವು ದ್ವನಿಗಳು ಕೆಲವು ಒಳನುಡಿಗಳಲ್ಲಿ ಮಾತ್ರ ಬಳಕೆಯಲ್ಲಿವೆ. ಇನ್ನು ಕೆಲವು ದ್ವನಿಗಳು ಮೂಲಕನ್ನಡದಲ್ಲಿ ಇಲ್ಲದೆ ಆನಂತರ ಬೆಳೆದವು ಆಗಿವೆ” ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ಕನ್ನಡದಲ್ಲಿ ಬಳಕೆಯಲ್ಲಿರುವ ವಿಶಿಷ್ಟ ಧ್ವನಿಗಳ ಬಗ್ಗೆ ಚರ್ಚಿಸಿದ್ದಾರೆ.

ಕನ್ನಡ ಬಾಶೆಯ ಲಿಪಿಯಲ್ಲಿ ಕೆಲವು ದ್ವನಿಮಾಗಳಿಗೆ ಲಿಪಿಯನ್ನು ಅಳವಡಿಸಿದೆ. ಇವುಗಳಲ್ಲದೆ ಇನ್ನೂ ಹಲವು ’ದ್ವನಿ’ಗಳು ಕನ್ನಡ ಬಾಶೆಯಲ್ಲಿ ಎಲ್ಲೆಡೆ ಸಹಜವಾಗಿ ಬಳಕೆಯಲ್ಲಿವೆ. ಇವುಗಳೆಲ್ಲವೂ ದ್ವನಿಗಳು ಮಾತ್ರ ಆಗಿವೆಯೆ, ದ್ವನಿಮಾ ಕೂಡ ಆಗಿವೆಯೆ ಎಂಬುದು ಅಸ್ಪಶ್ಟ. ಯಾಕೆಂದರೆ ಇವುಗಳ ಬಗೆಗೆ ಹೇಳಿಕೊಳ್ಳುವಂತ ಅದ್ಯಯನಗಳು ಆಗಿಲ್ಲ. ಹೀಗೆ ಲಿಪಿಯಲ್ಲಿ ಇಲ್ಲದ, ದ್ವನಿಮಾ ಎಂದು ಇದುವರೆಗೆ ಗುರುತಿಸಿಲ್ಲದ ಹಲವಾರು ದ್ವನಿಗಳು ವಿವಿದ ಕನ್ನಡಗಳಲ್ಲಿ ಬಳಕೆಯಲ್ಲಿ ಇವೆ. ಕೆಲವು ದ್ವನಿಗಳು ಕೆಲವು ಒಳನುಡಿಗಳಲ್ಲಿ ಮಾತ್ರ ಬಳಕೆಯಲ್ಲಿದ್ದರೆ, ಇನ್ನು ಕೆಲವು ಎಲ್ಲ ಇಲ್ಲವೆ ಹೆಚ್ಚಿನ ಕನ್ನಡ ಒಳನುಡಿಗಳಲ್ಲಿ ಕಂಡುಬರುತ್ತವೆ. ಕೆಲವು ದ್ವನಿಗಳು ಇತಿಹಾಸದ ಒಂದು ಕಾಲಗಟ್ಟದಲ್ಲಿ ಬಳಕೆಯಾಗಿದ್ದು ಇಂದು ಕಳೆದುಹೋಗಿರುವವೂ ಇವೆ. ಇನ್ನು ಕೆಲವು ಇತಿಹಾಸ ಕಾಲದಿಂದ ಇಂದಿನವರೆಗೂ ಬಳಕೆಯಲ್ಲಿವರವವೂ ಇವೆ. ಇನ್ನೊಂದೆಡೆ ಕನ್ನಡದ್ದೆ ದ್ವನಿಗಳು ಹಲವು ಇವೆ ಮತ್ತು ಬೇರೆ ಬಾಶೆಯಿಂದ ಬಂದಿರುವ ಇಲ್ಲವೆ ಬೇರೆ ಬಾಶೆಗಳ ಪ್ರಬಾವದಿಂದ ಬಂದಿರುವ ದ್ವನಿಗಳೂ ಇವೆ. ಇವುಗಳಲ್ಲಿ ಸ್ವರದ್ವನಿಗಳೂ ವ್ಯಂಜನದ್ವನಿಗಳೂ ಇವೆ. ಈಗಿನ ಬರಹದಲ್ಲಿ ಇಂತ ಅಪರೂಪದ ಎರಡು ದ್ವನಿಗಳನ್ನು ಮಾತನಾಡಬಹುದು.

ಕನ್ನಡದ ಬಹುತೇಕ ಎಲ್ಲ ಮಾತುಗರೂ ಬಳಸುವ ದ್ವನಿ ‘ಆ್ಯ’ ‘ಮ್ಯಾಲೆ’, ‘ಬ್ಯಾಳಿ’ ಮೊದಲಾದ ಪದಗಳಲ್ಲಿ ಇದನ್ನು ಬಳಸಲಾಗುತ್ತದೆ. ಈ ದ್ವನಿಗೆ ಲಿಪಿ ಇಲ್ಲದಿರುವುದರಿಂದ ಬರಹದಲ್ಲಿ ಇದನ್ನು ‘ಮೇಲೆ’, ‘ಬೇಳೆ’ ಎಂದು ಬರೆಯಲಾಗುವುದು. ಕನ್ನಡದ ಹಲವಾರು ಒಳನುಡಿ ವ್ಯಾಕರಣಗಳು ಈ ದ್ವನಿಯನ್ನು ಗುರುತಿಸಿ ವರದಿ ಮಾಡಿವೆ. ಈ ದ್ವನಿಯು ಇಂಗ್ಲೀಶಿನಿಂದ ಬಂದಿದೆ ಎಂಬ ವಿಚಿತ್ರವಾದ ಅದರೊಟ್ಟಿಗೆ ಅತ್ಯಂತ ಕುತೂಹಲಕರವಾದ ವಿವರಣೆಯೊಂದು ಅನೇಕ ಕಡೆ ಸಿಗುತ್ತದೆ. ದುರಂತವೊ ಏನೊ ಹಲವಾರು ವ್ಯಾಕರಣಗಳೂ ಕೂಡ ಹೀಗೆ ಬರೆದಿವೆ. ಇಂಗ್ಲೀಶಿನ ‘ಬ್ಯಾಂಕ್’ ಮೊದಲಾದ ಪದಗಳಿಂದ ಈ ದ್ವನಿ ಬಂದಿದೆ ಎಂದು ಹೇಳುತ್ತಾರೆ. ಆದರೆ, ಇಂಗ್ಲೀಶಿನ ಸಂಪರ‍್ಕ ಕನ್ನಡಕ್ಕೆ ಒದಗಿದುದಕ್ಕೆ ಹೆಚ್ಚೆಂದರೂ ಮೂರು ನೂರು ವರುಶಗಳು ಮಾತ್ರ. ‘ಬ್ಯಾಳಿ’, ‘ಕ್ಯಾಲ’, ‘ಆ್ಯಸಿ’ ಮೊದಲಾದ ನೂರಾರು ಇಂತ ಪದಗಳು ಕನ್ನಡದ ಬಹುತೇಕ ಒಳನುಡಿಗಳಲ್ಲಿ ಬಳಕೆಯಲ್ಲಿವೆ. ಹೀಗೆ ಇಡಿಯಾಗಿ ಮತ್ತು ವ್ಯಾಪಕವಾಗಿ ಬಳಕೆಯಲ್ಲಿರುವುದು ಇಂಗ್ಲೀಶಿನ ಪ್ರಬಾವ ಎನ್ನುವುದಕ್ಕೆ ತುಸು ಅನುಮಾನವನ್ನು ಸಹಜವಾಗಿಯೆ ತರುತ್ತದೆ. ಇದರೊಟ್ಟಿಗೆ ಇಂಗ್ಲೀಶಿನ ಸಂಪರ‍್ಕ ಕನ್ನಡಕ್ಕೆ ಒದಗುವುದಕ್ಕಿಂತ ಮೊದಲೆ ಹುಟ್ಟಿರುವ ಜನಪದ ಸಾಹಿತ್ಯದಲ್ಲಿ ಈ ದ್ವನಿಯ ಪ್ರಯೋಗ ವೆಗ್ಗಳವಾಗಿ

ಕಂಡುಬರುವುದು ಇದನ್ನು ಇನ್ನಶ್ಟು ಎತ್ತಿ ಹಿಡಿಯುತ್ತದೆ. ಅಲ್ಲದೆ ಇಂಗ್ಲೀಶಿನ ದ್ವನಿಯೊಂದು ಇಶ್ಟು ವ್ಯಾಪಕವಾಗಿ ಕನ್ನಡದೊಳಕ್ಕೆ ಸೇರಿಕೊಂಡಿದೆ ಎಂದು ಹೇಳುವುದಕ್ಕೆ ಇನ್ನೂ ಹೆಚ್ಚಿನ ಆದಾರಗಳು ಬೇಕಾಗಬಹುದು. ಕನಿಶ್ಟ ಎರಡು ಸಾವಿರ ವರುಶಗಳಶ್ಟು ಹಿಂದೆ ಕನ್ನಡದ ಸಂಪರ‍್ಕಕ್ಕೆ ಬಂದ ಪ್ರಾಕ್ರುತ-ಸಂಸ್ಕ್ರುತಗಳ ಮೂಲಕ ಕನ್ನಡಕ್ಕೆ ಬಂದ ಶ್ ದ್ವನಿಯು ಇಂದಿಗೂ ಕನ್ನಡದ ಎಲ್ಲ ಒಳನುಡಿಗಳಲ್ಲಿ ಸಮಾನವಾಗಿ ಬಳಕೆಯಲ್ಲಿ ಇಲ್ಲ ಮತ್ತು ಕೆಲವು ಕನ್ನಡಗಳಲ್ಲಿ ಇದು

ಇಡಿಯಾಗಿ ಇಲ್ಲ. ಹಲವಾರು ಕನ್ನಡಗಳಲ್ಲಿ ಇಂದಿಗೂ ಶ್ ದ್ವನಿ ಸ್ ದ್ವನಿಯೊಂದಿಗೆ ವ್ಯತ್ಯಯದಲ್ಲಿ ಬಳಕೆಯಾಗುತ್ತದೆ. ಹಾಗಾದರೆ, ಮೂರು ನೂರು ವರುಶಗಳ ಹಿಂದೆಯಶ್ಟೆ ಕನ್ನಡದ ಸಂಪರ‍್ಕಕ್ಕೆ ಬಂದ ಇಂಗ್ಲೀಶಿನ ದ್ವನಿಯೊಂದು ಕನ್ನಡದೊಳಗೆ ಇಶ್ಟು ಆಳವಾಗಿ, ವ್ಯಾಪಕವಾಗಿ ಬಳಕೆಯಲ್ಲಿ ಸೇರಿಕೊಳ್ಳುತ್ತದೆ ಎನ್ನುವುದು ನಂಬಲು ತುಂಬ ಕಶ್ಟದ ವಿಚಾರ.

ಹಾಗಾದರೆ, ಕನ್ನಡದಲ್ಲಿ ಈ ದ್ವನಿ ಎಶ್ಟು ಹಿಂದಿನಿಂದ ಇದ್ದಿರಬಹುದು ಎಂದು ಯೋಚಿಸಬೇಕು. ಇತಿಹಾಸಿಕ ಮತ್ತು ತುಲನಿಕ ಬಾಶಾವಿಗ್ನಾನಿಗಳು ‘ಆ್ಯ’ ದ್ವನಿಯನ್ನು ಅದ್ಯಯನ ಮಾಡಿದರೆ, ಇದು ಎಲ್ಲ ಒಳನುಡಿಗಳಲ್ಲಿ ಬಳಕೆಯಲ್ಲಿರುವುದು, ಬಳಕೆಯ ಪರಿಸರದಲ್ಲಿ ಹೆಚ್ಚು ನಿಕರತೆ ಇರುವುದು ಮೊದಲಾದ ಅಂಶಗಳನ್ನು ಆದರಿಸಿ ಈ ದ್ವನಿಯನ್ನು ಮೂಲಕನ್ನಡಕ್ಕೆ ಅವಶ್ಯವಾಗಿ ಮತ್ತೆ ಕಟ್ಟಬೇಕಾಗುತ್ತದೆ. ಅಂದರೆ ದ್ರಾವಿಡದಿಂದ ಕನ್ನಡವು ಸ್ವತಂತ್ರಗೊಂಡ ಕಾಲದಿಂದಲೂ ಈ ದ್ವನಿ ಕನ್ನಡದಲ್ಲಿ ಬಳಕೆಯಲ್ಲಿದೆ ಎಂದಾಗುತ್ತದೆ. ಇದಕ್ಕೆ ಪೂರಕವಾಗಿ ಒಂದು ವಿಚಾರವನ್ನು

ಮಾತಾಡಬಹುದು. ‘ಮೇಲೆ’ ಎಂಬುದು ಕನ್ನಡದಲ್ಲಿ ಒಂದು ಪದೋತ್ತರ ರೂಪ. ಇದು ಎರಡು ರೂಪಗಳು ಸೇರಿರುವ ಒಂದು ರಚನೆ. ಇದರಲ್ಲಿ ‘ಮೇ’ ಎಂಬುದು ಪದೋತ್ತರ ರೂಪ ಮತ್ತು ಇದಕ್ಕೆ ‘ಅಲ್’ ಎಂಬ ನೆಲೆ ಹೇಳುವ ವಿಬಕ್ತಿ ರೂಪವೊಂದು ಬಂದು ಸೇರಿ ‘ಮೇಲ್’ ಎಂಬ ರೂಪ ಸಾದಿಸಿದೆ. ‘ಮೇಲ್’ ಎಂಬುದು ಹಳಗನ್ನಡದಲ್ಲಿ ಹೆಚ್ಚಾಗಿ ಬಳಕೆಯಲ್ಲಿದ್ದಿತು, ಆನಂತರ ಇದು ‘ಮೇಲೆ’ ಎಂಬ ಸ್ವರಕೊನೆ ರೂಪವನ್ನು ಪಡೆದುಕೊಂಡಿದೆ. ‘ಮೇಲೆ’ ಎಂಬ ಈ ರೂಪವು ಎಂಟನೆಯ ಶತಮಾನದ ಶಾಸನವೊಂದರಲ್ಲಿ ಬಳಕೆಯಾಗಿದೆ. ಅಂದರೆ ‘ಮೇಲೆ’ ಎಂಬುದು ಕನಿಶ್ಟ ಹನ್ನೆರಡು-ಹದಿಮೂರು ನೂರು ವರುಶಗಳಶ್ಟು ಹಿಂದೆಯೆ ಬೆಳೆದಿದೆ ಎಂದಾಯಿತು.

ಇಲ್ಲಿ, ‘ಆ್ಯ’ ದ್ವನಿಯ ಮಾತನಾಡ ಹೊರಟು ‘ಮೇಲೆ’ ಪದದ ಚರಿತ್ರೆಯನ್ನು ಹೇಳುವುದಕ್ಕೆ ಮುಕ್ಯವಾದ ಕಾರಣವೊಂದಿದೆ. ‘ಮೇಲೆ’ ಎಂಬುದು ಹೆಚ್ಚಾಗಿ ಶಿಶ್ಟಕನ್ನಡದಲ್ಲಿ ಕಂಡುಬರುವ ರೂಪ. ಇದಕ್ಕೆ ಹಲವಾರು ಒಳನುಡಿಗಳಲ್ಲಿ ‘ಮ್ಯಾಲ’, ‘ಮ್ಯಾಲೆ’ ಎಂಬ ರೂಪಗಳು ಬಳಕೆಯಲ್ಲಿವೆ. ಅಂದರೆ ‘ಆ್ಯ’ ದ್ವನಿ ಇರುವ ರೂಪಗಳು ಬಳಕೆಯಲ್ಲಿವೆ. ಅದರೊಟ್ಟಿಗೆ ‘ಮೇಲೆ’, ‘ಮ್ಯಾಲೆ’ ಇದರ ಸಂವಾದಿ ರೂಪಗಳಾದ ‘ಮ್ಯಾಕ’, ‘ಮ್ಯಾಕೆ’, ‘ಮ್ಯಾಗ’, ‘ಮ್ಯಾಗೆ’ ಮೊದಲಾದ ರೂಪಗಳೂ ‘ಮೇಲೆ’ ಇದಕ್ಕೆ ಸಂವಾದಿಯಾಗಿ ಬಿನ್ನ ಒಳನುಡಿಗಳಲ್ಲಿ ಬಳಕೆಯಲ್ಲಿವೆ. ಇಲ್ಲಿ ಇವುಗಳ ರಚನೆಯನ್ನು ತೋರಿಸಿದೆ,

ಮೇಲ್+-ಅಲ್=ಮೇಲ್>ಮೇಲೆ
ಮೇ+-ಅಕ=ಮ್ಯಾಕ
ಮೇ+-ಅಗ=ಮ್ಯಾಗ

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಏ ಎಂಬ ದ್ವನಿಯು ಮೊದಲ ಪದದ ಕೊನೆಯಲ್ಲಿ ಇದೆ ಮತ್ತು ಎರಡನೆಯ ಪದದ ಮೊದಲಲ್ಲಿ ಅ ದ್ವನಿ ಇದೆ. ಇವೆರಡರ ನಡುವೆ ಸಂದಿ ನಡೆದು ಆ್ಯ ಎಂಬ ದ್ವನಿಯು ಆಗಮವಾಗಿ ಬರುತ್ತಿದೆ. ‘ಮೇಲೆ’ ಎಂಬ ಪದವು ಸುಮಾರು ಎಂಟನೆ ಶತಮಾನಕ್ಕಿಂತ ಮೊದಲೆ ರಚನೆಗೊಂಡಿದೆ ಎಂದಾದರೆ ಸಹಜವಾಗಿಯೆ ಇನ್ನುಳಿದ ರೂಪಗಳಾದ ‘ಮ್ಯಾಕ’, ‘ಮ್ಯಾಕೆ’, ‘ಮ್ಯಾಗ’, ‘ಮ್ಯಾಗೆ’ ಮೊದಲಾದ ರೂಪಗಳೂ ಅಶ್ಟು ಹಿಂದೆಯೆ ರಚನೆಗೊಂಡಿರಬೇಕು. ವಿಬಿನ್ನ ಒಳನುಡಿಗಳಲ್ಲಿ ಅತ್ಯಂತ ವ್ಯಾಪಕವಾಗಿ ಈ ಪದಗಳು ಬಳಕೆಯಲ್ಲಿರುವುದು ಇದನ್ನು ಸ್ಪಶ್ಟವಾಗಿ ಎತ್ತಿ ತೋರಿಸುತ್ತದೆ. ಹಾಗಾದರೆ, ‘ಆ್ಯ’ ದ್ವನಿಯು ಕನ್ನಡದಲ್ಲಿ ಕನಿಶ್ಟ ಒಂದೂವರೆ ಸಾವಿರ ವರುಶಗಳಿಂದ ಬಳಕೆಯಲ್ಲಿದೆ ಎನ್ನುವುದಕ್ಕೆ ಇವೆಲ್ಲ ಆದಾರಗಳಾಗುತ್ತವೆ. ವಾಸ್ತವದಲ್ಲಿ ಈ ದ್ವನಿಯ ವ್ಯಾಪಕ ಬಳಕೆ, ಎಲ್ಲ ಒಳನುಡಿಗಳಲ್ಲಿ ಬಳಕೆಯಲ್ಲಿರುವುದು, ಬಳಕೆಯ ಪರಿಸರ ನಿಕರವಾಗಿ ಇರುವುದು ಮೊದಲಾದ ಅಂಶಗಳು ‘ಆ್ಯ’ ದ್ವನಿಯನ್ನು ಮೂಲಕನ್ನಡಕ್ಕೆ ಕಟ್ಟುವುದಕ್ಕೆ ಕರೆ ಕೊಡುತ್ತವೆ. ಅಂದರೆ ಮೂಲಕನ್ನಡದ ಸಂದರ‍್ಬದಲ್ಲಿಯೆ ಈ ದ್ವನಿ ಕನ್ನಡದಲ್ಲಿ ಇದ್ದಿತು ಎಂದು ಹೇಳಬಹುದು. ಇದಕ್ಕೆ ಇನ್ನೊಂದು ಮಹತ್ವದ ಅಂಶವೂ ಪೂರಕವಾಗಿ ದೊರೆಯುತ್ತದೆ. ತಮಿಳು, ತೆಲುಗು ಮೊದಲಾದ ಹಲವು ದ್ರಾವಿಡ ಬಾಶೆಗಳಲ್ಲಿ ಈ ದ್ವನಿಯು ಸಹಜವಾಗಿ ಬಳಕೆಯಲ್ಲಿದೆ. ಅಂದರೆ, ಮೂಲಕನ್ನಡಕ್ಕೆ ಈ ದ್ವನಿ ಮೂಲದ್ರಾವಿಡದಿಂದಲೆ ಬಂದಿರಬೇಕು. ಇದೆಲ್ಲ ಲೆಕ್ಕ ಹಿಡಿದರೆ ಕನ್ನಡದಲ್ಲಿ ಈ ದ್ವನಿ ಮೂರ‍್ನಾಲ್ಕು ಸಾವಿರ ವರುಶಗಳಿಂದ ಬಳಕೆಯಲ್ಲಿದೆ ಎಂದು ಹೇಳಬೇಕಾಗುತ್ತದೆ.

‘ಆ್ಯ’ ದ್ವನಿಯ ಇನ್ನೊಂದು ಅಂಶವನ್ನು ಇಲ್ಲಿ ಮಾತಾಡಬಹುದು. ಕನ್ನಡದಲ್ಲಿ ಲಿಪಿಯನ್ನು ಪಡೆದುಕೊಂಡಿರುವ ವಿಬಿನ್ನ ಸ್ವರದ್ವನಿಗಳು ಜೋಡಿಯಲ್ಲಿವೆ. ಅಂದರೆ, ‘ಅ-ಆ’, ‘ಇ-ಈ’ ಹೀಗೆ ಜೋಡಿಯಲ್ಲಿವೆ. ಉಚ್ಚರಣೆಯ ಸಮಯವನ್ನು ಆದರಿಸಿ ಅವು ಎರಡು ಬಿನ್ನ ದ್ವನಿಗಳು ಎನಿಸಿಕೊಳ್ಳುತ್ತವೆ. ಈಗ ಮಾತನಾಡುತ್ತಿರುವ ‘ಆ್ಯ’ ದ್ವನಿಯನ್ನು ಉದ್ದಸ್ವರದಂತೆ ವಿದ್ವಾಂಸರು ಗುರುತಿಸಿದ್ದಾರೆ. ಆದರೆ, ಈ ದ್ವನಿಯೂ ಕೂಡ ಸಣ್ಣಕ್ಕರ ಜೋಡಿಯನ್ನು ಹೊಂದಿದೆ. ಅಂದರೆ ‘ಅ್ಯ’ ಮತ್ತು ‘ಆ್ಯ’ ಎರಡೂ ದ್ವನಿಗಳು ಕನ್ನಡದಲ್ಲಿ ಬಳಕೆಯಲ್ಲಿವೆ. ಕೆಳಗಿನ ಒಂದೆರಡು ಉದಾಹರಣೆಗಳನ್ನು ಗಮನಿಸಿ,

‘ಅ್ಯ’ ‘ಆ್ಯ’
ಕ್ಯಡುವು ‘ಕೆಡುವು’ ಕ್ಯಾದಿಗಿ ‘ಕೇದಗೆ’
ಕ್ಯಮ್ಮು ‘ಕೆಮ್ಮು’ ಕ್ಯಾಮೆ ‘ಕೆಲಸ’
ಕ್ಯರ ‘ಕೆರ’ ಕ್ಯಾರಿ ಹಾವು ‘ಕೆರೆ ಹಾವು’
ಕ್ಯಲ್ಸ ‘ಕೆಲಸ’ ಕ್ಯಾಲ ‘ಚಿತ್ತ’

ಹೀಗೆ ಕನ್ನಡದ ಸಾವಿರಾರು ಪದಗಳಲ್ಲಿ ಈ ಎರಡೂ ದ್ವನಿಗಳು ಬಳಕೆಯಲ್ಲಿವೆ. ಆದರೆ ಇವು ದ್ವನಿಮಾಗಳು ಆಗಿವೆಯೆ ಎಂಬುದು ನನಗಿನ್ನೂ ಸ್ಪಶ್ಟವಿಲ್ಲ, ಇದಕ್ಕೆ ಹೆಚ್ಚಿನ ಅದ್ಯಯನ ಬೇಕು. ಆದರೆ, ಇದೊಂದು ಕನ್ನಡದ ಸಹಜವಾದ ದ್ವನಿ ಎಂಬುದನ್ನು ಗಮನಿಸಬೇಕು. ಇದರಂತೆ ಇನ್ನೂ ಹಲವಾರು ದ್ವನಿಗಳು ಕನ್ನಡದಲ್ಲಿ ಬಳಕೆಯಲ್ಲಿವೆ. ಕೆಲವು ದ್ವನಿಗಳು ‘ಅ್ಯ’, ‘ಆ್ಯ’ ದ್ವನಿಗಳ ಹಾಗೆ ಎಲ್ಲ ಕನ್ನಡಗಳಲ್ಲೂ ಬಳಕೆಯಲ್ಲಿವೆ ಮತ್ತು ಮೂಲಕನ್ನಡದಿಂದಲೂ ಬಳಕೆಯಲ್ಲಿವೆ. ಆದರೆ ಇನ್ನು ಕೆಲವು ದ್ವನಿಗಳು ಕೆಲವು ಒಳನುಡಿಗಳಲ್ಲಿ ಮಾತ್ರ ಬಳಕೆಯಲ್ಲಿವೆ. ಇನ್ನು ಕೆಲವು ದ್ವನಿಗಳು ಮೂಲಕನ್ನಡದಲ್ಲಿ ಇಲ್ಲದೆ ಆನಂತರ ಬೆಳೆದವು ಆಗಿವೆ.

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...