Date: 10-08-2025
Location: ಬೆಂಗಳೂರು
ಬೆಂಗಳೂರು: "ಚಿಂತನ ಕ್ರಮವನ್ನು ಭಾಷೆಯ ಆಧಾರದ ಮೇಲೆ ವಿಂಗಡಿಸುತ್ತೇವೆ. ಕಾಲದಿಂದ ಕಾಲಕ್ಕೆ ಕನ್ನಡ ಚಿಂತನ ಕ್ರಮ ಬದಲಾಗುತ್ತಿದೆ. ಯಾಕೆಂದರೆ ಕನ್ನಡ ಭಾಷೆ ನಿಂತ ನೀರಲ್ಲ. ಇದು ಸದಾ ಹರಿಯುತ್ತಿರುತ್ತದೆ," ಎಂದು ಲೇಖಕ ವಿ.ಬಿ ತಾರಕೇಶ್ವರ್ ಅವರು ಹೇಳಿದರು
ಅವರು ಬುಕ್ ಬ್ರಹ್ಮ ವತಿಯಿಂದ ಕೋರಮಂಗಲದ ಸೇಂಟ್ ಜಾನ್ಸ್ ಆಡಿಟೋರಿಯಂನಲ್ಲಿ ಆ. 8 ರಿಂದ ಆ. 10ರ ತನಕ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಪ್ರಸ್ತುತಪಡಿಸಿದ ʻಬುಕ್ ಬ್ರಹ್ಮ ಸಾಹಿತ್ಯ ಉತ್ಸವ 2025ʼರ ಕೊನೇಯ ದಿನದ ʻಅಂಗಳʼ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ʻಕನ್ನಡದ್ದೇ ಚಿಂತನ ಕ್ರಮ ಇದೆಯೇ?ʼ ಗೋಷ್ಠಿಯಲ್ಲಿ ಮಾತನಾಡಿದರು.
"ಭಾಷೆಯ ಆಧಾರದ ಮೇಲೆಯೇ ನಮ್ಮ ಸಂಸ್ಕೃತಿ ರೂಪುಗೊಂಡಿರುವುದು. ಎಲ್ಲಾ ಭಾರತೀಯ ಭಾಷೆಗಳಿಗೆ ತನ್ನದೇ ಆದ ಚಿಂತನ ಕ್ರಮ ಇದೆ. ಚಿಂತನ ಕ್ರಮವನ್ನು ಭಾಷೆಯ ಆಧಾರದ ಮೇಲೆ ವಿಂಗಡಿಸುತ್ತೇವೆ. ಕಾಲದಿಂದ ಕಾಲಕ್ಕೆ ಕನ್ನಡ ಚಿಂತನ ಕ್ರಮ ಬದಲಾಗುತ್ತಿದೆ. ಯಾಕೆಂದರೆ ಕನ್ನಡ ಭಾಷೆ ನಿಂತ ನೀರಲ್ಲ. ಇದು ಸದಾ ಹರಿಯುತ್ತಿರುತ್ತದೆ. ಕನ್ನಡ ಭಾಷೆ ತನ್ನ ಆಯಾಮಕ್ಕೆ ತಕ್ಕಂತೆ ಬದಲಾಗುವುದರ ಜೊತೆಗೆ ಹಲವು ಭಾಷೆಯ ಸಂಸ್ಕೃತಿ ಪರಿಕರಗಳನ್ನು ಅನುಸರಿಸುತ್ತದೆ. ಪ್ರಜಾ ಪ್ರಭುತ್ವದ ಪರಿಕಲ್ಪನೆ ಭಾರತದ ಎಲ್ಲಾ ಭಾಷೆಗಳಿಗೆ ಬಂತು. ಆದರೆ ನಾವು ಇಲ್ಲಿ ಬಳಸಿರುವ ಪರಿಕಲ್ಪನೆಗಳು ಬೇರೆ ಬೇರೆ ಆಯಾಮಗಳಿಂದ ಕೂಡಿದೆ. ಯಾವುದೇ ಒಂದು ಚಿಂತನೆಯನ್ನು ಇದು ಕನ್ನಡಕ್ಕೆ ಮಾತ್ರ ಸೀಮಿತವಾದ ಚಿಂತನೆ ಅಂತ ನಿರ್ಧಾರ ಮಾಡಲು ಸಾಧ್ಯವಿಲ್ಲ," ಎಂದರು.
"ಕನ್ನಡ ಸಾಹಿತ್ಯದ ಚಂಪೂ ಕಾವ್ಯವನ್ನು ಗಮನಿಸಿದಾಗ ಅಲ್ಲಿ ಒಂದು ಚಿಂತನೆ ಕಂಡು ಬರುತ್ತದೆ. ಆದರೆ ಅದು ಕನ್ನಡಕ್ಕೆ ಮಾತ್ರ ಸೀಮತವಲ್ಲ. ಅದನ್ನು ನಾವು ಸಂಸ್ಕೃತ ಸಾಹಿತ್ಯದಲ್ಲಿ ಕೂಡ ಕಾಣಬಹುದು. ಇನ್ನು ಸಂಸ್ಕೃತ ಮತ್ತು ಪ್ರಾಕೃತ ಭಾಷೆಯಿಂದಲೂ ಕನ್ನಡಕ್ಕೆ ಕೆಲವು ಚಿಂತನೆಗಳು ಬಂದಿವೆ. ಹೊಸ ಚಿಂತನೆಯ ಬೆಳವಣಿಗೆಯನ್ನು ನೋಡಿದಾಗ ಅಲ್ಲಿ ಆಂತರಿಕ ಸಂಘರ್ಷದಿಂದ ಹೊಸ ಚಿಂತನೆಯ ಹುಟ್ಟಿಗೆ ಕಾರಣವಾಯಿತು ಎನ್ನುವುದನ್ನು ಗಮನಿಸಬಹುದು. ಭಾಷಾವಾರು ಪ್ರಾಂತ್ಯಗಳು ರಚನೆಯಾದಾಗ ಒಂದಷ್ಟು ಅಲ್ಲಿ ಜನಸಾಮಾನ್ಯರ ಚಿಂತನೆಗಳು ಪ್ರಭಾವ ಬೀರಿದವು. ರಾಮ ಮನೋಹರ ಲೋಹಿಯವರ ಎಡಪಂಕ್ತಿಯವಾದ ಭಾಷಾಂತರವಾದಾಗಲೂ ಕನ್ನಡ ಚಿಂತನೆ ಒಂದಷ್ಟು ಬದಲಾವಣೆ ಕಂಡಿತು," ಎಂದು ಹೇಳಿದರು.
ಲೇಖಕ ಕಮಲಾಕರ್ ಭಟ್ ತಮ್ಮ ಚರ್ಚೆಯನ್ನು ಮುಂದಿಟ್ಟು, "ಕನ್ನಡಕ್ಕೆ ಇರುವ ಚಿಂತನ ಕ್ರಮ, ಬೇರೆಲ್ಲೂ ಕಾಣುವುದಿಲ್ಲ ಎನ್ನುವುದಾಗಿ ಬಿಂಬಿಸುವ ಅಗತ್ಯವಿಲ್ಲ. ಭಾಷೆಯನ್ನು ನಾವು ಬಳಸುವುದರ ಜೊತೆಗೆ ಅದರಲ್ಲಿರುವ ಚಿಂತನೆಗಳನ್ನು ಕೂಡ ನಾವು ಅಳವಡಿಸಿಕೊಳ್ಳುತ್ತೇವೆ. ಬೇರೆಲ್ಲಾ ಭಾಷೆಯಂತೆ ಕನ್ನಡ ಭಾಷೆಗಿರುವ ಚಿಂತನೆ ಕೇವಲ ಸಂವಾದ, ಸಂಭಾಷಣೆಗೆ ಮಾತ್ರ ಸೀಮಿತವಲ್ಲ. ಅದು ನಮ್ಮ ಸಾಂಸ್ಕೃತಿಕ ನೆಲೆಗಟ್ಟನ್ನು ಕಟ್ಟಿಕೊಡುತ್ತದೆ. ನಾವು ಭಾಷೆಯಲ್ಲಿರುವ ಭಿನ್ನತೆಗಳನ್ನು ಹೈದರಾಬಾದ್ ಕರ್ನಾಟಕದಲ್ಲಿ ಗಮನಿಸಬಹುದು. ಕನ್ನಡದಲ್ಲಿ ವಿವಿಧ ಪ್ರಕಾರಗಳನ್ನು ಅಧ್ಯಯನ ಮಾಡಿದಾಗ ನಮಗೆ ಕನ್ನಡದ್ದೇ ಆದ ಏಕೀಕೃತ ಚಿಂತನೆ," ಇದೆ ಎಂದು ಹೇಳಿದರು.
ಲೇಖಕ ಕೆ.ಎಲ್ ಹನುಮಂತಯ್ಯ ಮಾತನಾಡುತ್ತಾ, "ಕನ್ನಡಕ್ಕೆ ತನ್ನದೇ ಆದ ಚಿಂತನಾ ಕ್ರಮ ಇದೆ. ಈ ಹಿಂದೆ ಮೈಸೂರು ಸಾಮ್ರಾಜ್ಯವನ್ನು ಗಮನಿಸಿದಾಗ ಅಲ್ಲಿ ಸ್ವತಂತ್ರ ಪೂರ್ವದಲ್ಲೇ ಒಂದು ಚಿಂತನೆಯಿತ್ತು. ಅದು ಸ್ವಾತಂತ್ಯ್ರದ ನಂತರ ಕನ್ನಡ ಚಿಂತನೆಯಾಗಿ ಬದಲಾಯಿತು. ಸ್ವಾತಂತ್ರ್ಯ ನಂತರದಲ್ಲಿ ಬಂದಿರುವ ಕನ್ನಡ ಚಿಂತನೆ ತುಂಬಾ ವಿಶಿಷ್ಟವಾದದ್ದಾಗಿದೆ. ಇದಕ್ಕೆ ಮುಖ್ಯ ಕಾರಣ ದಲಿತ ʻಪ್ಯಾಂತರ್ಸ್ ಚಳುವಳಿʼ. ದಲಿತ ಚಳುವಳಿಗೆ ಮಹತ್ವದ ಪ್ರೇರಣೆ ನೀಡಿದ್ದು ಮಾರ್ಕ್ಸ್ ವಾದ. ಹೀಗಾಗಿ ಕನ್ನಡ ಚಿಂತಮೆ ಲೋಹಿಯಮ ಮಾರ್ಕ್ಸ್ ಮತ್ತು ಅಂಬೇಡ್ಕರ್ ಚಿಂತನೆ ಹೊಂದಿದೆ. ಗೋಕಾಕ್ ಚಳುವಳಿ ಕಮ್ಯೂನಿಸ್ಟ್ ಕನ್ನಡ ಹೋರಾಟಗಾರರ ಚಿಂತನೆಯನ್ನು ಎದುರಿಸಿತು. ಈ ದೃಷ್ಠಿಯಿಂದ ನೋಡಿದರೆ ಕನ್ನಡ ಚಿಂತನೆ ವಿಶ್ವದ ಹಲವಾರು ಅಂಶಗಳಿಂದ ರೂಪುಗೊಂಡು ಒಂದು ವಿಶಿಷ್ಟ ಚಿಂತನೆಯಾಗಿದೆ," ಎಂದು ಹೇಳಿದರು.
ಕಾರ್ಯಕ್ರಮವನ್ನು ಎನ್ ಎಸ್ ಗುಂಡೂರ್ ಅವರು ನಿರ್ವಹಿಸಿದರು.
- ಕೆ ಎನ್ ರಂಗು ಚಿತ್ರದುರ್ಗ
ಎಸ್.ಡಿ.ಎಂ ಕಾಲೇಜು, ವಿದ್ಯಾರ್ಥಿ
ಬಸವಕಲ್ಯಾಣ: ವಚನ ಸಾಹಿತ್ಯದಿಂದ ಈ ನೆಲದ ಭಾಷಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಾಗಿದೆ ಎಂದು ಅಂತರ್ ರಾಷ್ಟ್ರೀಯ ...
2026ನೇ ಸಾಲಿನ ಟೊಟೊ ಪುರಸ್ಕಾರಕ್ಕೆ ಕನ್ನಡ ವಿಭಾಗದಲ್ಲಿ ಒಂಭತ್ತು ಜನ ಯುವ ಸೃಜನಶೀಲ ಬರಹಗಾರರ ಹೆಸರನ್ನ ಮೊದಲನೇ ಪಟ್ಟಿಗ...
ಧಾರವಾಡ: ಮಕ್ಕಳಲ್ಲಿ ಕಲ್ಪನಾ ಶಕ್ತಿ ಬೆಳೆಸುವುದರ ಜೊತೆಗೆ ಓದಿನ ಅಭಿರುಚಿ ಹಿಗ್ಗಿಸಬೇಕಿದೆ. ಅಂದಾಗ ಅವರು ಓದಿನ ರುಚಿಯೊಂ...
©2025 Book Brahma Private Limited.