ಕರಾವಳಿಯ ಜೀವನಾನುಭವಗಳನ್ನು ತಿಳಿಸುವ ಕಾದಂಬರಿ ‘ಮರ್ಮರ’


"ಈ ಕಾದಂಬರಿ ದಕ್ಷಿಣ ಕನ್ನಡ ಅಥವಾ ಕರಾವಳಿಯ ದಟ್ಟ ಜೀವನಾನುಭವಗಳ ಮೂಲಕ ಮತ್ತು ಬದುಕಿನ ರೀತಿಗಳ ಮೂಲಕ ಓದುಗರನ್ನು ಸೆಳೆಯುತ್ತದೆ. ಇನ್ನೂ ಸರಿಯಾದ ರಸ್ತೆ ಇಲ್ಲದ, ದೂರದರ್ಶನವಿನ್ನೂ ಕಾಲಿಡದ, ದೂರವಾಣಿ ಇರದ,ಬಹುತೇಕ ಕೃಷಿಕರನ್ನೇ ಒಳಗೊಂಡ ಜತ್ತೂರು ಎಂಬ ಹಳ್ಳಿಯೇ ಇಲ್ಲಿನ ಪ್ರಧಾನ ಭೂಮಿಕೆ " ಎನ್ನುತ್ತಾರೆ ರಶ್ಮಿ ಉಳಿಯಾರು. ಅವರು ಲೇಖಕ ತಿಲಕನಾಥ ಮಂಜೇಶ್ವರ ಅವರ ‘ಮರ್ಮರ’ ಕಾದಂಬರಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ.

ಇದು ಲೇಖಕರ ನಾಲ್ಕನೇ ಕಾದಂಬರಿ. ಆದರೆ ಪುಸ್ತಕ ರೂಪದಲ್ಲಿ ಪ್ರಕಟಿತವಾದ ಅವರ ಮೊದಲ ಕಾದಂಬರಿ. ಪತ್ರಕರ್ತರಾದ ತಿಲಕನಾಥರು ತರಂಗ ವಾರಪತ್ರಿಕೆಯ ಹಿರಿಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು. ಈ ಮರ್ಮರವು ತರಂಗದಲ್ಲಿ ಧಾರಾವಾಹಿಯಾಗಿ ಬರುತ್ತಿದ್ದಾಗ ಆಗೀಗ ಪುಟ ತಿರುವಿ ಓದಿದ ಅಸ್ಪಷ್ಟ ನೆನಪಿದೆ. ಪುಸ್ತಕಕ್ಕೆ ಡಾ. ಸಿ.ಆರ್. ರಾಮಚಂದ್ರನ್ ಅವರ ಪ್ರಬುದ್ಧ ಮುನ್ನುಡಿಯಿದೆ. ಹಾಗೂ ಡಾ. ನಾ. ದಾಮೋದರ ಶೆಟ್ಟಿಯವರ ಬೆನ್ನುಡಿಯಿದೆ. 'ಮುಂಗಾರಿನ ಕರೆ' ಪುಸ್ತಕ ಓದಿದ ಮೇಲೆ ನನ್ನ ತಂದೆಯ ಸಂಗ್ರಹದಿಂದ ನನ್ನಲ್ಲಿಗೆ ಬಂದ ಈ ಪುಸ್ತಕದ ನೆನಪಾಯಿತು. ಅದೆಂದೋ ಬೆನ್ನುಡಿ ಓದಿ ಮುಚ್ಚಿಟ್ಟಿದ್ದೆ. ಅದು ಮರಳಿ ಮಣ್ಣಿಗೆ ಹೊರಟವಳ ಕಥೆಯಾದರೆ ಇದು ಮರಳಿ ಮಣ್ಣಿಗೆ ಬರಲಾಗದವನ ಕಥೆ. ಒಂದು ಪುಸ್ತಕ ಇನ್ನೊಂದು ಪುಸ್ತಕದ ಓದಿನತ್ತ ತಾನಾಗಿಯೇ ಕರೆದುಕೊಂಡು ಹೋಗುವುದೊಂದು ಸೋಜಿಗ!ನಾನಿಲ್ಲಿ ಕಥೆಯನ್ನು ವಿವರಿಸದೇ ನನ್ನ ಅನಿಸಿಕೆಗಳನ್ನು ವ್ಯಕ್ತಪಡಿಸಲು ಬಯಸುವೆ.

ಈ ಕಾದಂಬರಿ ದಕ್ಷಿಣ ಕನ್ನಡ ಅಥವಾ ಕರಾವಳಿಯ ದಟ್ಟ ಜೀವನಾನುಭವಗಳ ಮೂಲಕ ಮತ್ತು ಬದುಕಿನ ರೀತಿಗಳ ಮೂಲಕ ಓದುಗರನ್ನು ಸೆಳೆಯುತ್ತದೆ. ಇನ್ನೂ ಸರಿಯಾದ ರಸ್ತೆ ಇಲ್ಲದ, ದೂರದರ್ಶನವಿನ್ನೂ ಕಾಲಿಡದ, ದೂರವಾಣಿ ಇರದ,ಬಹುತೇಕ ಕೃಷಿಕರನ್ನೇ ಒಳಗೊಂಡ ಜತ್ತೂರು ಎಂಬ ಹಳ್ಳಿಯೇ ಇಲ್ಲಿನ ಪ್ರಧಾನ ಭೂಮಿಕೆ. ಬಹುಶಃ ಕಾಲಮಾನ ಈಗ್ಗೆ ಮೂವತ್ತು, ನಲವತ್ತು ವರ್ಷಗಳ ಹಿಂದಿನದ್ದು. ಅಪಾರ ಭೂಮಿ ಕಾಣಿ ಹೊಂದಿರುವ ರಾಮಣ್ಣನ ಮಗ ಗಿರಿಯೇ ಇಲ್ಲಿ ಕಥಾ ನಾಯಕ. ಕರಾವಳಿಯವಳಾದರೂ ಅಷ್ಟಾಗಿ ಭತ್ತದ ಬೇಸಾಯದ ಬಗ್ಗೆ ಆಳವಾದ ಮಾಹಿತಿಯಿಲ್ಲದ ನನಗೆ ಇಲ್ಲಿನ ಸಾಂದ್ರ ವಿವರಣೆ ಖುಷಿ ಕೊಟ್ಟಿತು. ಅಷ್ಟಲ್ಲದೇ ಕಥೆಯೊಳಗೆ ಬೆರೆತು ಹೋಗಿರುವ ಕರಾವಳಿಯ ಸಮುದ್ರ ತೀರಗಳು, ಕೆಲವು ಸಾಂಪ್ರದಾಯಿಕ ಅಡುಗೆಗಳ ತಯಾರಿಯ ರೀತಿ, ಯಕ್ಷಗಾನ ಪ್ರಸಂಗಗಳು, ಕಂಬಳ, ಮಳೆಗಾಲದ ರೈತಾಪಿ ಬದುಕು, ಕೃಷಿಯ ಬವಣೆ, ಊರಿನವರ ಸಹಜ ಅಂತಃಕರಣ, ಮನುಷ್ಯ ಸಹಜವಾದ ಕೆಲವು ಕೆಟ್ಟ ಬುದ್ಧಿಗಳು... ಎಲ್ಲವನ್ನೂ ಇದು ಒಳಗೊಂಡಿದೆ. ಹಾಗಾಗಿ ಊರಿಂದ ದೂರವಿರುವ ನಾನು ಮತ್ತೆ ಅಲ್ಲಿ ವಿಹರಿಸಿದಂತೆ ಭಾಸವಾಯಿತು. ಇನ್ನು ಬೇರೆ ಪ್ರದೇಶದವರಿಗೆ ಈ ಓದು ಹೊಸ ಅನುಭೂತಿ ನೀಡುವಲ್ಲಿ ಅನುಮಾನವೇ ಇಲ್ಲ. ಇಲ್ಲಿ ಗಿರಿ ಹಾಗೂ ಬಂಗಾರಿ/ವಾರಿಜಾಳ ಪ್ರೇಮಕಥೆಯೂ ಇದೆ. ಹಲವು ಕಡೆ ತುಳು ಶಬ್ದಗಳನ್ನು ಬಳಸಿದ್ದು ಲೇಖಕರು ಅದರ ಅರ್ಥವನ್ನು ಕೆಳಗಡೆ ಚಿಕ್ಕ ಅಕ್ಷರಗಳಲ್ಲಿ ಕೊಟ್ಟಿದ್ದಾರೆ. ಅದು ಬಹಳ ಸಹಾಯ ಮಾಡುತ್ತದೆ. ಮುಖ್ಯವಾಗಿ ಭತ್ತದ ಕೃಷಿಗೆ ಸಂಬಂಧಪಟ್ಟಂತೆ ಹಲವು ಹೊಸ ಶಬ್ದಗಳನ್ನು ಕಲಿತೆ. ಕಾದಂಬರಿಯು ಅಲ್ಲಲ್ಲಿ ಭೂತಕಾಲದ ವಿದ್ಯಮಾನಗಳನ್ನೂ ಹಾಗೂ ಪ್ರಸ್ತುತ ಘಟನೆಗಳನ್ನೂ ಒಂದಾದ ಮೇಲೆ ಒಂದರಂತೆ ವಿವರಿಸುತ್ತದೆ.

ಒಂದು ರೀತಿಯಲ್ಲಿ ಕಥೆಯ ಅಂತ್ಯವನ್ನು ಮೊದಲ ಕೆಲವು ಪುಟಗಳ ಓದಿನಲ್ಲಿ ಗಿರಿಯು ಹೆಂಡತಿ ಹಾಗೂ ಮಗಳೊಂದಿಗೆ ಊರಿಗೆ ಬರುವ ಉದ್ದೇಶದ ಹಿಂದಿನ‌ ನಿರ್ಧಾರದಲ್ಲೇ ಊಹಿಸಬಹುದು. ಹಾಗಿದ್ದರೂ ಕೃಷಿಯ ಸಕಲವನ್ನೂ ಮತ್ತೆ ನೆನಪಿಗೆ ತಂದುಕೊಂಡು ಶ್ರಮ ಪಡುವ ಅವನ ಪ್ರಾಮಾಣಿಕ ಪ್ರಯತ್ನ ಮೆಚ್ಚುಗೆ ಮೂಡಿಸುತ್ತದೆ. ಅವನ ಹೆಂಡತಿ ಸಾಧ್ಯವಾದಷ್ಟು ಸಹಕಾರ ನೀಡುತ್ತಾಳೆ. ತಂದೆ ತೀರಿ ಹೋಗಿ, ತಾಯಿಯಿಂದ ಎಲ್ಲವನ್ನೂ ಸಂಭಾಳಿಸಲಾಗದೇ, ಒಂದು ವರ್ಷದ ಮಟ್ಟಿಗೆಂದು ಉದ್ಯೋಗಕ್ಕೆ ದೀರ್ಘ ರಜಾ ಹಾಕಿ, ಕುಟುಂಬದೊಡನೆ ಬರುವ ಅವನು ಊರಿನಲ್ಲೇ ಇರುವ ಅನಿವಾರ್ಯತೆಗೆ ಸಿಲುಕಲಿಲ್ಲ. ಕೃಷಿಯ ತಾಪತ್ರಯ ಬೇಡವೆಂದು ಮಗನನ್ನು ಓದಿಸಿ ನಗರಕ್ಕೆ ಕಳಿಸಿದ ತಾಯಿ ಮತ್ತೆ ಮಗನನ್ನು ಊರಿಗೆ ಬರಲು ವರಾತ ತೆಗೆದು ಕೊನೆಗೆ ಇನ್ನೇನು ಈ ಬೇಸಾಯದಲ್ಲಿ ಸುಖವಿಲ್ಲ, ಕೂಲಿಯಾಳುಗಳನ್ನು ನಂಬಿಕೊಂಡು ಮಾಡುವುದು ಗಿಟ್ಟದು ಎಂಬ ನಿರ್ಧಾರಕ್ಕೆ ಬಂದು ಎಲ್ಲವನ್ನೂ ಮಾರಿ ಹಾಕುವ ಎಂದು ಅಂದುಕೊಂಡ ಘಟ್ಟಕ್ಕೆ ಕಥೆಯ ಉತ್ತರಾರ್ಧದಲ್ಲಿ ಬರುವಾಗ ಓದುಗರಾದ ನಮ್ಮ ಮನಸ್ಸಿಗೆ ಏನಾದರೂ ಆಗಿ ಅವನು ಊರಲ್ಲೇ ಉಳಿಯುವಂತಾಗಿದ್ದರೆ ಚೆನ್ನಾಗಿತ್ತು. ಅಂತಹ ತಿರುವೊಂದು ಬೇಕಾಗಿತ್ತು ಎಂದು ಅಂದುಕೊಳ್ಳುವಂತೆ ಆಗುತ್ತದೆ. ಒಂದು ರೀತಿಯಲ್ಲಿ ಕಥಾನಾಯಕನಿಗೆ ಇದು ನಿರೀಕ್ಷಿತವೇ ಆದರೂ ಅವನ ತಾಯಿ ರತ್ನಮ್ಮನಂತೆ ಓದುಗರಲ್ಲೂ ಅಂತ್ಯವು ವಿಷಾದ ತರುತ್ತದೆ. ಕೃಷಿಯಲ್ಲೇ ಬದುಕು ಕಂಡುಕೊಳ್ಳಲು ಗಿರಿಗೆ ಪ್ರೇರಣೆಯಾಗುವಂತೆ ಆಗಿದ್ದರೆ ಅದು ಬಹಳ ಜನರಿಗೆ ದಾರಿದೀಪದಂತಾಗುತ್ತಿತ್ತು.

ವಿದ್ಯಾವಂತ ಮಕ್ಕಳು ಉತ್ತಮ ಕೆಲಸದಲ್ಲಿ ನಗರದಲ್ಲಿ ಇರುವಾಗ ಊರಿನಲ್ಲಿ ಜಮೀನು ಸಂಭಾಳಿಸಲು ಸಾಧ್ಯವಾಗದ ಅಸಹಾಯಕ ಹಿರಿಯರು... ಆಗ ಅಂತಿಮ ಪರಿಹಾರವೇ ಬದುಕಿ ಬಾಳಿದ ಮನೆ, ಭೂಮಿ ಎಲ್ಲವನ್ನೂ ಮಾರಿ ಊರಿನ ಬೇರುಗಳನ್ನು ಶಾಶ್ವತವಾಗಿ ಕತ್ತರಿಸಿಕೊಳ್ಳುವುದು. ಮತ್ತೆ ಗುರುತಿಲ್ಲದವರಂತೆ ನಗರ ಸೇರುವುದು. ಗತ ವೈಭವವನ್ನು ನೆನಸುತ್ತಾ ಕಾಲಯಾಪನೆ ಮಾಡುವುದು. ಇದಕ್ಕೆ ಪರಿಹಾರ ಇಲ್ಲವೇ ಎಂದು ತೋರಿತು. ಈಗಾಗಲೇ ಊರಲ್ಲಿ ಹಡೀಲು ಬಿದ್ದ ಗದ್ದೆಗಳೇ ಇದಕ್ಕೆ ಸಾಕ್ಷಿ. ಖಾಲಿ ಜಾಗಗಳಲ್ಲಿ ಕೃಷಿಗಿಂತಲೂ ಕಟ್ಟಡ ಕಟ್ಟುವುದಕ್ಕೇ ಹೆಚ್ಚು ಆಸಕ್ತಿ. ಊರಿನಲ್ಲಿ ಗದ್ದೆ ಇರುವವರಾದರೂ ಉದ್ಯೋಗದತ್ತ ಒಲವಿರುವವರೇ ಹೆಚ್ಚು. ಕೊನೆಗೆ ಮದುವೆಗೆ ಹೆಣ್ಣು ಸಿಗುವುದಿಲ್ಲ ಎಂಬ ಅಳಲು. ಬಹುಶಃ ಕಾದಂಬರಿಯ ಕಾಲಕ್ಕೆ ಇವೆಲ್ಲವೂ ಪ್ರಾರಂಭದ ಹಂತದಲ್ಲಿರಬೇಕು. ಈಗ ಸಮಸ್ಯೆಗಳು ಇನ್ನಷ್ಟು ಹೆಚ್ಚಿವೆ.

ಕಾದಂಬರಿಯನ್ನು ಲೇಖಕರು ತಮ್ಮಿಷ್ಟದಂತೆ ಅಂತ್ಯಗೊಳಿಸಿದರೂ ಕರಾವಳಿಯ ಸಂಸ್ಕ್ರತಿಯ ದೃಷ್ಟಿಯಿಂದ ಇದೊಂದು ಉತ್ತಮ ಕಾದಂಬರಿ. ಆದರ್ಶ ಬದುಕಿಗೆ ರಾಮಣ್ಣ ರತ್ನಮ್ಮನವರ ಜೀವನವೇ ಮಾದರಿ.‌ ಅವರ ಮೂರು ಮಕ್ಕಳಲ್ಲಿ ಕಿರಿಯ ಮಗನಾದ ಗಿರಿಯದೂ ಉತ್ತಮ ಪಾತ್ರ. ಅವನ ಹೆಂಡತಿ ನಗರದ ವಾರಿಜಾ ಹಾಗೂ ಅವಳ ಅತ್ತೆಯ ನಡುವಿನ ಬಾಂಧವ್ಯ ಖುಷಿ ಕೊಡುತ್ತದೆ. ಗಿರಿ ಹಾಗೂ ವಾರಿಜಾ ನಡುವಿನ ದಾಂಪತ್ಯದ ರಸ ಘಳಿಗೆಗಳು, ತುಂಟತನ ನಗುವರಳಿಸುತ್ತದೆ. ಅವಳ ಮಗಳು ಪುಟ್ಟ ಸಿರಿಯ ಚಿನಕುರುಳಿ ಮಾತುಗಳು ಇಷ್ಟವಾಗುತ್ತವೆ.ನೀವು ಓದಲೇಬೇಕಾದ ಕೃತಿಯಿದು.

ರಶ್ಮಿ ಉಳಿಯಾರು.

MORE FEATURES

'ಹೆಗಲು': ತ್ಯಾಗ, ನಿಸ್ವಾರ್ಥತೆಯ ಅಪರೂಪದ ಜೀವನಗಾಥೆ

14-12-2025 Bengaluru

"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...

ಅನುಕ್ಷಣ ಅನುಭವಿಸಿ: ಸಮಯ ನಿರ್ವಹಣೆಯ ಮಾರ್ಗದರ್ಶಿ

14-12-2025 BENGALURU

ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...

ಮಕ್ಕಳ ಕಥಾಸಾಹಿತ್ಯ ಸಂವೇದನೆಯ ಹೊಸ ಹೆಜ್ಜೆಗಳು.......

13-12-2025 ಬೆಂಗಳೂರು

"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...