ಕವಿಹೃದಯದ ಕವಿಯಿತ್ರಿ ಬರೆದ ಈ ಕೃತಿ ಗದ್ಯಕಾವ್ಯದಂತಿದೆ!


"ಈ ಪುಸ್ತಕವನ್ನು ಅವರ ಹಸ್ತಾಕ್ಷರ ಸಹಿತ ಲೇಖಕಿಯವರಿಂದಲೇ ತರಿಸಿಕೊಂಡು ಬಹಳ ದಿನಗಳಾಗಿವೆ‌ ಓದಲು ಈಗ ಕಾಲ ಕೂಡಿಬಂದಿತು. ಓದಲು ಶುರು ಮಾಡಿದಮೇಲೆ ಇಷ್ಟು ದಿನಗಳಾದರೂ ಈ ಪುಸ್ತಕವನ್ನು ಓದದಿದ್ದಕ್ಕಾಗಿ ನನ್ನನ್ನೇ ದೂರಿಕೊಂಡೆ!," ಎನ್ನುತ್ತಾರೆ ಶೋಭಾ ಮೂರ್ತಿ. ಅವರು ಎಂ.ಆರ್. ಕಮಲ ಅವರ ʻಕಸೂತಿಯಾದ ನೆನಪುʼ ಕೃತಿ ಕುರಿತು ಬರೆದ ಅನಿಸಿಕೆ.

ಇದರ ಸೊಬಗನ್ನು ಅಕ್ಷರಗಳಲ್ಲಿ ಹಿಡಿದಿಟ್ಟು ವರ್ಣಿಸುವುದು ನನಗಂತೂ ಬಲುಕಷ್ಟ. ಸುಂದರವಾದ ಮುಖಪುಟ, ಅದಕ್ಕಿಂತ ಸುಂದರವಾದ‌ ತುಂಬುನಗೆ ಚೆಲ್ಲುವ ಕಮಲಾ ಮೇಡಂ ಫೋಟೊ ಇರುವ ಹಿಂಪುಟ, ಒಳಪುಟಗಳಲ್ಲಿ ಅಡಕವಾಗಿರುವ ಸವಿನೆನಪಿನ ಎಳೆಗಳಿಂದ ನೇಯ್ದ ಕಸೂತಿ ಕಲಾಕೃತಿ. ಇದನ್ನೋದಿದ ಮೇಲೆ ಅನಿಸಿದ್ದು... ಕಸೂತಿ ಹಾಕುವಾಗ ಇರಬೇಕಾದ ತಾದಾತ್ಮ್ಯತೆ ಸಾಹಿತ್ಯ ರಚನೆಯಲ್ಲಿಯೂ ಇದ್ದಾಗ...ಅದೊಂದು ಸುಂದರ ಕಲಾಕೃತಿಯಾಗಿ ಹೊರಹೊಮ್ಮುತ್ತದೆ.

ನನಗೊಂದು ಅಭ್ಯಾಸವಿದೆ....ಊಟ ಮಾಡುವಾಗ ಅತಿ ರುಚಿ ಎನಿಸಿದ್ದನ್ನು ಕಡೆಯಲ್ಲಿ ತಿನ್ನಲು ಇಟ್ಟುಕೊಳ್ಳುವುದು. ಪುಸ್ತಕ ಅವಲೋಕನದಲ್ಲಿ ಊಟದ ವಿಷಯವೇಕೆ ಎನ್ನದಿರಿ. ಹೇಳುತ್ತೇನೆ... ನಾನೋದುವ ಪುಸ್ತಕದ ಗುರುತಿಗಾಗಿ ಪುಟದ ತುದಿಯನ್ನು ಮಡಚುವುದಾಗಲಿ, ಇಷ್ಟವಾದ ಓದನ್ನು ಅಂಡರ್‌ಲೈನ್ ಮಾಡುವುದಾಗಲಿ ಎಂದೂ ಮಾಡುವುದಿಲ್ಲ. ಅಂತಹ ವಾಕ್ಯಗಳನ್ನು ಮತ್ತೆ ಮತ್ತೆ ಓದಲೆಂದು ಪುಟ ಸಂಖ್ಯೆಯೊಡನೆ ಟಿಪ್ಪಣಿ ಮಾಡಿಕೊಳ್ಳುತ್ತೇನೆ. ಆದರೆ ಮೊದಲಸಲ ಈ ಪುಸ್ತಕದ ಪುಟಗಳಲ್ಲಿ ಅಂಡರ್‌ಲೈನ್ ಮಾಡಿದೆ. ಪೂರ್ತಿ ಓದಿಯಾದಮೇಲೆ ಪುಟಗಳನ್ನು ತಿರುಗಿಸಿ ನೋಡುತ್ತೇನೆ...ಅಂಡರ್‌ಲೈನ್ ಮಾಡದ ಪುಟವೇ ಇಲ್ಲ!

ಬಾಲ್ಯದ ನೆನಪುಗಳನ್ನು ಹೆಕ್ಕಿ ಬರೆದ ಪ್ರಬಂಧ ಅಥವಾ ಲಲಿತ ಪ್ರಬಂಧಗಳ ಸಂಕಲನಗಳು ಒಂದು ಸಾಹಿತ್ಯಪ್ರಕಾರವೇ ಆಗಿದೆ. ಇದು ಅಂತಹದ್ದಲ್ಲ, ಕಳೆದುಹೋದ ಬಾಲ್ಯದ ದಿನಗಳನ್ನು ನೆನೆಯುವ ಲೊಚಗುಟ್ಟುವಿಕೆ ಇಲ್ಲಿಲ್ಲ. ಬದಲಿಗೆ ಲೇಖಕಿಯ ಅರವತ್ತು ವರ್ಷಗಳ ಸುದೀರ್ಘ ಬದುಕಿನ ಹಿನ್ನೋಟವಿದೆ. ಅವರ ಬಾಲ್ಯ, ಶೈಕ್ಷಣಿಕ, ವೃತ್ತಿ ಬದುಕಿನ ನೆನಪುಗಳು ಬಣ್ಣದ ದಾರಗಳ ಎಳೆಗಳಾಗಿವೆ.

ಜೀವನವಿರುವುದು ಜೀವಿಸಲು ಎನ್ನುವ ಲೇಖಕಿ, ಅರ್ಥಹೀನ ನಿಯಮಗಳ ಸರಪಳಿಯಿಂದ ತಮ್ಮನ್ನು ಬಂಧಿಸಿಕೊಂಡು ಮಿಡುಕುವ ಮಹಿಳೆಯರಿಗೆ ಧ್ವನಿಯಾಗುತ್ತಾರೆ.

ಅವರ ಗಾಢ ಅನುಭವಗಳನ್ನು ಓದುತ್ತಾ 'ನಾನೂ ಹೀಗೆಯೇ ಯೋಚಿಸಿದ್ದೆ, ಇಂತಹ ಅನುಭವ ನನಗೂ ಆಗಿದೆ, ನನ್ನ ಆ ದಿನಗಳು ಹೀಗೆಯೇ ಇದ್ದವು' ಎನ್ನಿಸುತ್ತಾ ಹೋಗುತ್ತದೆ.

ಚಂದದ ಕಸೂತಿಯ ನಡುವೆ ರೇಷ್ಮೆಯ ಝರಿಯ ನೇಯ್ಗೆಯನ್ನು ಸೇರಿಸಿ ಮತ್ತಷ್ಟು ಸುಂದರವಾಗಿಸುವಂತೆ.....

ಕವಿವಾಣಿಗಳು, ವಚನಗಳಿಂದ ಕೃತಿಯನ್ನು ಚಪ್ಪರಿಸಿ ಓದುವಂತೆ ಮಾಡಿದ್ದಾರೆ. ಓದಿನ ನಡುವೆ ಆಗಾಗ ತುಟಿಯರಳದೇ ಇರುವುದಿಲ್ಲ.

ಖುಷಿಪಡಲು ವಯಸ್ಸಿನ ಮಿತಿಯೇಕೆ ಎನ್ನುವ ಲೇಖಕಿ ಬದುಕನ್ನು ಇಡಿಯಾಗಿ ಅನುಭವಿಸುವ ಆನಂದದಿಂದ ವಂಚಿತರಾಗುವ ಮಹಿಳೆಯರಿಗೆ ಸ್ಪೂರ್ತಿ ತುಂಬುತ್ತಾರೆ.

ನೀರೆಗೆ ಸೀರೆಯ ಮೇಲಿರುವ ವ್ಯಾಮೋಹ ಇಂದು ನಿನ್ನೆಯದಲ್ಲ. ಬಹುಶಃ ಇದು ಭಾರತೀಯ ಮಹಿಳೆಯ ವಂಶವಾಹಿನಿಯಲ್ಲೇ ಇರಬಹುದೇನೊ. ಅದೆಷ್ಟು ವೆರೈಟಿ ಸೀರೆಗಳನ್ನು ಹೆಸರಿಸಿದ್ದಾರೆಂದರೆ ನಾನು ಮರೆತಿದ್ದ ಹೆಸರುಗಳೆಲ್ಲ ಮರುಕಳಿಸಿದವು.

ಸಾಮಾಜಿಕ ಕಳಕಳಿ, ಪರಿಸರಪ್ರಜ್ಞೆ, ಜೀವನಪ್ರೀತಿ, ಮಾನವೀಯ ಮೌಲ್ಯಗಳು, ನಿಸರ್ಗಪ್ರೇಮ ಎಲ್ಲವೂ ಇರುವ ಲೇಖನಗಳ ಗುಚ್ಛವು ತಜ್ಞ ಬಾಣಸಿಗನಿಂದ ತಯಾರಾದ ರಸಪಾಕದಂತಿದೆ. ನೇರವಂತಿಕೆ,ಪ್ರಾಮಾಣಿಕತೆ ಇರುವಲ್ಲಿ ಹಿಂಜರಿಕೆ ಇರುವುದಿಲ್ಲ ಎನ್ನುವ ಮಾತಂತೂ ಸತ್ಯವಾಗಿದೆ. ತೆರೆದ ಮನದವರಿಗೆ ಜೀವನದಲ್ಲಿ ಸೋಲಿರುವುದಿಲ್ಲ ಎನ್ನುತ್ತಾ ಪ್ರವಾಹದ ಜೊತೆ ಈಜಿದರೆ ಹಗುರಾಗುವ ಸುಖವಿದೆ ಎನ್ನುತ್ತಾರೆ.

ಪ್ರತಿ ಪ್ರಬಂಧಕ್ಕೂ ಕೊಟ್ಟಿರುವ ಶೀರ್ಷಿಕೆ ಸುಂದರ ಮತ್ತು ಅರ್ಥಪೂರ್ಣವಾಗಿದೆ. ಕವಿಹೃದಯದ ಕವಿಯಿತ್ರಿ ಬರೆದ ಈ ಕೃತಿ ಗದ್ಯಕಾವ್ಯದಂತಿದೆ!

ಮತ್ತೆ ಓದಬೇಕು ಎಂದುಕೊಳ್ಳುತ್ತಾ ಕೊನೆಯ ಪುಟವನ್ನು ಮುಚ್ಚಿದಮೇಲೂ ಪುಸ್ತಕ ಮೂಡಿಸಿದ ಭಾವಲಹರಿಯಲ್ಲಿ ಬಹಳ ಹೊತ್ತು ತೇಲುತ್ತಲೇ ಇದ್ದೆ.

MORE FEATURES

'ಹೆಗಲು': ತ್ಯಾಗ, ನಿಸ್ವಾರ್ಥತೆಯ ಅಪರೂಪದ ಜೀವನಗಾಥೆ

14-12-2025 Bengaluru

"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...

ಅನುಕ್ಷಣ ಅನುಭವಿಸಿ: ಸಮಯ ನಿರ್ವಹಣೆಯ ಮಾರ್ಗದರ್ಶಿ

14-12-2025 BENGALURU

ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...

ಮಕ್ಕಳ ಕಥಾಸಾಹಿತ್ಯ ಸಂವೇದನೆಯ ಹೊಸ ಹೆಜ್ಜೆಗಳು.......

13-12-2025 ಬೆಂಗಳೂರು

"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...