ಕವಿತೆಯನ್ನು ಹೇಗೆ ಬರೆಯಬೇಕು ಅಥವಾ ಹೇಗೆ ಬರೆಯಬಾರದು? ಕಾವ್ಯ ಹೀಗೆ ರಚನೆಯಾಗಬೇಕು ಅಥವಾ ಹೇಗೆ ಬರೆಯಲ್ಪಡಬೇಕು? ಎಂಬುದರ ಕುರಿತಾಗಿ ಯಾವ ಅಡೆತಡೆಗಳು ಇಲ್ಲ. ಯಾರು ಹೇಳಲೂ ಇಲ್ಲ(ಹೀಗೆ ಬರೆದರೆ ಚಂದ ಅಂದಿರಬಹುದಷ್ಟೇ). ಅದು ಕವಿಯ ಕವಿತೆಯ ಭಾವಕ್ಕೆ ಬಿಟ್ಟದ್ದು! ಹಾಗಾಗಿ ಕವಿತೆ ಸರ್ವ ಸ್ವತಂತ್ರ ಹಾಗೂ ಮುಕ್ತ ಎನ್ನುತ್ತಾರೆ ಜಬೀವುಲ್ಲಾ ಎಮ್. ಅಸದ್ ಮೊಳಕಾಲ್ಮುರು. ಅವರು ಕವಿ-ಕಾವ್ಯದ ಒಂದು ಅವಲೋಕನದ ಬಗ್ಗೆ ಬರೆದಿರುವ ಲೇಖನ ನಿಮ್ಮ ಓದಿಗಾಗಿ..
ರವಿ ಕಾಣದನ್ನು ಕವಿ ಕಾಣುತ್ತಾನೆ. ತಾನು ಕಂಡಿದ್ದನ್ನು ಲೋಕದ ಕಣ್ಣಿಗೂ ಕಾಣಿಸುತ್ತಾನೆ. ಸತ್ಯವಲ್ಲದ ಸತ್ಯವನ್ನು ಸಹ ಎತ್ತಿ ಹಿಡಿಯುತ್ತಾನೆ. ಸಾವನ್ನು ಸಹ ಸುಂದರವಾಗಿ ವರ್ಣಿಸುತ್ತಾನೆ. ಸಮಷ್ಠಿಯೇ ಶೂನ್ಯದಲ್ಲಿ ಅಡಗಿದೆ ಎಂಬುದನ್ನು ಗ್ರಹಿಸುತ್ತಾನೆ. ಒಡಲಾಳದ ನೋವನು ಸಹ ನಲಿವಿನ ಗೀತೆಯಂತೆ ರಚಿಸುತ್ತಾನೆ.
ಕವಿ, ತಾನು ಕಂಡದ್ದನ್ನು ಇತರರಿಗೂ ಕಾಣಿಸುವಂತೆ.... ಗ್ರಹಿಸಿದ್ದನ್ನೇ ಪದವಾಗಿಸುತ್ತಾನೆ. ಅನುಭವಿಸಿದ್ದನ್ನೇ ಅನುವಾದಿಸುತ್ತಾನೆ. ಪ್ರೀತಿಸಿದ್ದನ್ನೇ ಪೋಷಿಸುತ್ತಾನೆ. ಸಿದ್ಧಿಸಿದನ್ನೇ ಹಂಚುತ್ತಾನೆ. ಸುಖಿಸಿದ್ದನ್ನೇ ಸ್ಖಲಿಸುತ್ತಾನೆ. ಒಳ್ಳೆಯದನ್ನೇ ಬೆಳೆಸುತ್ತಾನೆ. ಅನಿಸಿದ್ದನ್ನೇ ವ್ಯಕ್ತಪಡಿಸುತ್ತಾನೆ. ಗುರುತಿಸಿದನ್ನೇ ಪರಿಚಯಿಸುತ್ತಾನೆ. ಸರಿ ಅನಿಸಿದ್ದನ್ನೇ ಪ್ರಮಾಣಿಕರಿಸುತ್ತಾನೆ. ಬದುಕಿಗೆ ಹತ್ತಿರವಾದುದನ್ನೇ ದಾಖಲಿಸುತ್ತಾನೆ. ಮೋಹಿಸಿದ್ದನ್ನೇ ಪರವಶಗೊಳಿಸುತ್ತಾನೆ. ದ್ವೇಷವನ್ನೇ ದೂಷಿಸುತ್ತಾನೆ. ಮರೆತದನ್ನು ನೆನಪಿಸುತ್ತಾನೆ. ಗತಿಸಿದ್ದನ್ನು ಭವಿಷ್ಯತ್ತಿಕರಿಸುತ್ತಾನೆ. ಸಂಪಾದಿಸಿದನ್ನೇ ವ್ಯಯಿಸುತ್ತಾನೆ. ಪ್ರಚೋದಿಸಿದ್ದನ್ನೇ ವಿವರಿಸುತ್ತಾನೆ. ಮನಸಿದ್ದನ್ನೇ ಮಾಡುತ್ತಾನೆ. ಕನಸಿದ್ದನ್ನೇ ಕವಿತೆಯಾಗಿಸುತ್ತಾನೆ. ನಿಂತಲ್ಲೆ ಚಲಿಸುತ್ತಾನೆ. ಅನುಗ್ರಹಿಸಿದ್ದನ್ನೇ ಆರಾಧಿಸುತ್ತಾನೆ. ಮುಟ್ಟಿದರೆ ಸುಡುತ್ತಾನೆ. ಮೆಟ್ಟಿದರೆ ಎದ್ದು ನಿಲ್ಲುತ್ತಾನೆ. ---- ಮಿತಿಮೀರುವುದೇ ಕವಿಯ ಗುಣ; ಪರಿಮಿತಿಗಲಿಲ್ಲದ ಅಪರಿಮಿತಿಯ ಸ್ವತಂತ್ರ ಬದುಕು ಕವಿಯದು.
ಯಾವ ಬರಹಗಾರನೆ ಇರಲಿ, ತಾನು ಏನನ್ನೂ ತೀವ್ರವಾಗಿ ಅನುಭವಿಸದೆ, ತಲ್ಲಣಗಳಿಗೆ ಒಳಗಾಗದೆ ಒಂದು ವಾಕ್ಯವನ್ನು ಸಹ ಪ್ರಾಮಾಣಿಕವಾಗಿ ಬರೆಯಲಾರ; ತೀವ್ರ ತುಡಿತಕ್ಕೊಳಗಾಗದೆ ಏನನ್ನೂ ಕಂಡುಕೊಳ್ಳಲಾರ!!
ಹಾಗಾಗಿಯೇ ಸಾಹಿತ್ಯ ಲೋಕದಲ್ಲಿಯೇ ಕವಿಗೆ ಉತ್ಕೃಷ್ಟ ಸ್ಥಾನವಿದೆ. ಕವಿಯಿಂದ ಕವಿತೆಹುಟ್ಟುವುದಿಲ್ಲ ಬದಲಿಗೆ ತಾನು ರಚಿಸುವ ಕಾವ್ಯದಿಂದ ಕವಿ ಜನ್ಮಿಸುತ್ತಾನೆ
ಹಾಗಾದರೆ, ಕವಿತೆ ಎಂದರೇನು?
ಕವಿತೆಯನ್ನು ಹೇಗೆ ಬರೆಯಬೇಕು ಅಥವಾ ಹೇಗೆ ಬರೆಯಬಾರದು? ಕಾವ್ಯ ಹೀಗೆ ರಚನೆಯಾಗಬೇಕು ಅಥವಾ ಹೇಗೆ ಬರೆಯಲ್ಪಡಬೇಕು? ಎಂಬುದರ ಕುರಿತಾಗಿ ಯಾವ ಅಡೆತಡೆಗಳು ಇಲ್ಲ. ಯಾರು ಹೇಳಲೂ ಇಲ್ಲ(ಹೀಗೆ ಬರೆದರೆ ಚಂದ ಅಂದಿರಬಹುದಷ್ಟೇ). ಅದು ಕವಿಯ ಕವಿತೆಯ ಭಾವಕ್ಕೆ ಬಿಟ್ಟದ್ದು! ಹಾಗಾಗಿ ಕವಿತೆ ಸರ್ವ ಸ್ವತಂತ್ರ ಹಾಗೂ ಮುಕ್ತ.
ಕಾವ್ಯ ಎಂಬುದು, ಒಟ್ಟು ಸಾಹಿತ್ಯ ಪ್ರಾಕಾರಗಳಲ್ಲೇ ಮಹೋನ್ನತವಾದುದಾಗಿದೆ. ಹಲವಾರು ಪುಟಗಳ ಮುಖಾಂತರ ಒಂದು ಕಾದಂಬರಿಯಲ್ಲಿ ಹೇಳಲಾಗದನ್ನು ಸಹ ಒಬ್ಬ ಆನುಭಾವಿ ಕವಿ ತನ್ನ ಅನುಭವದಿಂದ ಕೆಲವೆ ಪದಗಳಲ್ಲಿ ಕವಿತೆಯ ಮೂಲಕ ಸಶಕ್ತವಾಗಿ, ಅರ್ಥಪೂರ್ಣವಾಗಿ ಹೇಳಬಲ್ಲ!! ಅದು ಒಬ್ಬ ಕವಿಗೆ ಹಾಗೂ ಅವನ ಕಲಾಂಗಿರುವ ತಾಕತ್ತು ಎಂದರೆ ಬಹುಶಃ ಅತಿಶಯೋಕ್ತಿ ಆಗಲಾರದು.
ಇಂದಿನ ದಿನಗಳಲ್ಲಿ ಕವಿತೆ ಓದುವವರ ಸಂಖ್ಯೆಗಿಂತಲು, ಬರೆಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದು ಒಂದು ರೀತಿಯಲ್ಲಿ ಆರೋಗ್ಯಕಾರಿಯಲ್ಲದ ಬೆಳವಣಿಗೆ ಎನ್ನಬಹುದು. ಹಾಗಾದರೆ ಇದಕ್ಕೆ ಪರಿಹಾರೋಪಾಯಗಳೇನು?
ಪ್ರಾಯಶಃ ನಾವೆಲ್ಲಾ ಸತ್ವಯುತವಾದ, ಸಶಕ್ತವಾದ ಕಾವ್ಯವನ್ನು ಕಟ್ಟುವಲ್ಲಿ ಸೋಲುತ್ತಿದ್ದೇವೆ ಅನಿಸುತ್ತಿದೆ. ಕಾವ್ಯವೆಂದರೆ ಕೇವಲ ಪ್ರೀತಿ, ವಿರಹ, ಪ್ರಣಯವಷ್ಟೆ ಅಲ್ಲವಲ್ಲ; ನಾವು ರಚಿಸುವ ಕಾವ್ಯ ನಮ್ಮ ಅಂತರಂಗವನ್ನು ಪರಿಚಯಿಸುವಂತಿರಬೇಕು. ಇತರರ ಅಂಥಕರಣವನ್ನು ಬೆಳಗುವಂತಿರಬೇಕು. ಸಮಾಜದ ಓರೆ-ಕೋರೆಗಳನ್ನು ಜಗದರಿವಿನ ಕಣ್ಣಿಗೆ ಕಾಣಿಸಿ ತಿದ್ದುವಂತಿರಬೇಕು. ಪ್ರಕೃತಿಯ ನಿಗೂಢತೆಯನ್ನೂ ಪ್ರದರ್ಶಿಸುವಂತಿರಬೇಕು. ಕೆಂಡ ಮುಚ್ಚಿದ ಸತ್ಯವನ್ನು ಅನಾವರಣಗೊಳಿಸುವಂತಿರಬೇಕು, ಸರಿಯನ್ನು ಸರಿ ಎಂದು, ತಪ್ಪನ್ನು ತಪ್ಪೆಂದು ಬೊಬ್ಬಿಡುವ ಧ್ವನಿಯಾಗಬೇಕು. ಒಳಿತು ಕೆಡುಕುಗಳ ನಡುವಿನ ವ್ಯಾತ್ಯಾಸಗಳನ್ನು ಗುರುತಿಸುವಂತಿರಬೇಕು. ಕಾವ್ಯಕೃಷಿಯಲ್ಲಿ ತೊಡಗಿಸಿಕೊಂಡಂತೆಲ್ಲಾ , ತನ್ನನ್ನು ತಾನು ಕಂಡುಕೊಳ್ಳುತ್ತಿರಬೇಕು. ಎಲ್ಲದಕ್ಕೂ ಮುಖ್ಯವಾಗಿ ಕವಿಗೆ/ ಲೇಖಕನಿಗೆ ತಾನೇಕೆ ಬರೆಯುತ್ತಿನಿ ಎಂಬುವುದು ತಿಳಿದಿರಬೇಕು.
ಇತ್ಯಾದಿ....
***
"ಮಗುವ ಮುಷ್ಠಿಯೊಳಗಿನ ತಾಯ ಸೆರಗಿನ ನೂಲು ಕವಿತೆ" ಅನ್ನುತ್ತಾರೆ ನಮ್ಮ ಬೇಂದ್ರೆ ಮಾಸ್ತರು.
ಹಾಗೆ....
"ಚಿಟ್ಟೆ ರೆಕ್ಕೆಯ ಧೂಳು ಅಂಟಿದ ಹಾಗೆ ಕೈಗೆ ಕವಿತೆ" ಅನ್ನುತ್ತಾರೆ ಕೆ.ವಿ.ತಿರುಮಲೇಶರು.
ಹಾಗಾದರೆ, ಇಂದಿನ ಕವಿಗಳಿಗೆ ಕವಿತೆ ಎಂದರೆ ಏನು? ಎಂಬುದನ್ನು ಅಸ್ಮಿತೆಗಳನ್ನು ದಾಟಿ, ನವ ಕಾಣ್ಕೆ, ಹೊಸ ಹೊಳಹುಗಳನ್ನು ಸೃಷ್ಟಿಸಲು.... ವಿಭಿನ್ನ ವಿಚಾರಧಾರೆ, ಗಹನವಾದ ಗ್ರಹಿಕೆ, ಅತೀತವಾದ ರಸಾನುಭವ, ಅನನ್ಯವಾದ ಭಾವಭಿವ್ಯಕ್ತಿಯ ಮೂಲಕ " ಕವಿತೆ ಎಂದರೆ ಏನು? " ಎಂಬುದನ್ನು , ಕವಿತೆಯನ್ನು ಕಟ್ಟುವ ಮುಖಾಂತರವೆ ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ.
ಕಾಯಬೇಕು ಕಾದಂತೆ ಮಾಗಬೇಕು
ಪದಗಳ ಮೆರವಣಿಗೆ ಅಲ್ಲ ಕವಿತೆ
ಪದಗಳ ವೃಥಾ ಹತ್ಯೆ ಅಲ್ಲ ಕವಿತೆ
ಕವಿತೆ ಎಂದರೆ
ಕಾದ ಪದಗಳು ಹೆಣೆದ ಆತ್ಮದ ಬಟ್ಟೆ.
ಎಂದು ತಮ್ಮದೊಂದು ಕವಿತೆಯಲ್ಲಿ ವಾಸುದೇವ ನಾಡಿಗ್ ಹೇಳುತ್ತಾರೆ.
ಒಬ್ಬ ಕವಿ/ಕವಯಿತ್ರಿ ಏನನ್ನಾದರೂ ಬರೆಯುತ್ತಿದ್ದಾನೆ/ಳೆ ಎಂದರೆ, ಆ ಕವಿತೆ ಏನನ್ನಾದರೂ ಮಹತ್ತರವಾದುದನ್ನು ಒಳಗೊಂಡಿರಬೇಕು. ಮರಿಚಿಕೆಯಾಗಿರುವುದನ್ನು ಕಾಣಿಸುವಂತಿರಬೇಕು. ಏನನ್ನಾದರೂ ನಿರ್ದಿಷ್ಟವಾಗಿ ನಿರ್ದೇಶಿಸುವಂತಿರಬೇಕು.ತಾನು ಏನನ್ನು ಹೇಳಲು ಹೊರಟಿದ್ದೇನೆ ಎಂಬುವುದರ ಅರಿವಿರಬೇಕು. ತನ್ನ ಮಿತಿಗಳನ್ನು ದಾಟಿ ಮುಂದುವರಿಯುವಂತಿರಬೇಕು. ತಾನು ಕಂಡದ್ದನ್ನು, ಚಿಂತಿಸಿದ್ದನ್ನು, ಕಲ್ಪಿಸಿಕೊಂಡದ್ದನ್ನು, ಕನಸಿದ್ದನ್ನು ಇತರರೊಂದಿಗೆ ಹಂಚಿಕೊಳ್ಳುವ, ಚರ್ಚಿಸುವ ಮುಕ್ತವಾದ ಅವಕಾಶಗಳಿರಬೇಕು. ಯಾವುದೇ ನಿರ್ಬಂಧಗಳು, ಬಂಧನಗಳು ಜ್ಞಾನದ ಹರಿವನ್ನು ತಡೆದು ನಿಲ್ಲಿಸಬಾರದು. ತಪ್ಪನ್ನು ತಪ್ಪು ಎಂದು ಹೇಳುವ , ಸತ್ಯದ ಬೆರಳ್ ಪಿಡಿದು ಅದರೊಂದಿಗೆ ಹೆಜ್ಜೆ ಹಾಕುವ ಮನಸ್ತತ್ವ ಸೃಷ್ಟಿಯಾಗಬೇಕು. ನೋವಿಗೆ ಮಿಡಿಯುವ, ದುಃಖಕೆ ಸ್ಪಂದಿಸುವ, ಕಷ್ಟಕ್ಕೆ ಹೆಗಲಾಗುವ, ನಗುವಿಗೆ ಮಗುವಾಗುವ, ಸೃಷ್ಟಿ-ಸ್ಥಿತಿ-ಲಯಗಳ ಗೌರವಿಸುವ, ಪ್ರಕೃತಿಯನ್ನು ಆರಾಧಿಸುವ ಗುಣ ಕವಿಯದಾಗಬೇಕು. ಕವಿ ಲೋಕದ ತಪ್ಪುಗಳನ್ನು ಕಾಣಿಸುವ ಕನ್ನಡಿಯಾಗಬೇಕು. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಮಾರ್ಗದರ್ಶಿಯಾಗಬೇಕು.ಒಳಿತು ಕೆಡುಕಿನ ನಡುವಿನ ಅಂತರದ ಅರಿವಿರಬೇಕು. ಆಕಾಶಕ್ಕೆ ಮುತ್ತು ಕೊಡುವ, ಕಡಲನ್ನು ತೋಳ ತೆಕ್ಕೆಯಲ್ಲಿ ತಬ್ಬಿಕೊಂಡು ಸಂಭ್ರಮಿಸುವ ಹುಚ್ಚಿರಬೇಕು.
ಕಾವ್ಯದ ಬಗ್ಗೆ ಒಬ್ಬೊಬ್ಬರದು ಒಂದೊಂದು ವ್ಯಾಖ್ಯಾನವಿದೆ.
ಕವಿ ಕಾವ್ಯದ ಬೆಳಕಿನಲ್ಲಿ ಅನುರಕ್ತನಾದಾಗ ತನ್ನಲ್ಲೊಂದು ಕಿರಣ ಮೂಡುತ್ತದೆ, ಅದು ಅರಿವಿನ ಕೋಶದಿ ಅರಳಿ ಹೂವಾಗಿ ಸುಜ್ಞಾನದ ಸುಗಂಧ ಬೀರುವ ಸಮಯಕೆ ಚಿಂತನೆಗಳು ಮಾಗಿ ಪರಿಪಕ್ವತೆ ಪಡೆದುಕೊಂಡಾಗ, ಕವಿಯಲ್ಲಿ ಕವಿತ್ವದ ಕುರಿತಾದ ಹೊಳಹುಗಳು ಸೃಷ್ಟಿಯಾಗಿ ಅವು ಇತರರ ಅಧ್ಯಯನಕ್ಕೆ ಆಹಾರವಾಗುತ್ತವೆ. ಕವಿಯಾದವನು ಅವಶ್ಯಕತೆ ಇದ್ದಲ್ಲಿ ಕವಿತೆಯಲ್ಲಿ ಮೂಗಿನ ನೇರಕೆ ಹೇಳುವ ಧೈರ್ಯವಿರಬೇಕು. ಇಲ್ಲವೇ ರೂಪಕ, ಪ್ರತಿಮೆ, ಅಲಂಕಾರಗಳ ಮುಖೇನವೂ ಹೇಳಬಹುದು, ಅದು ಅವನ ಸಾಮರ್ಥ್ಯ. ಆ ಸಾಮರ್ಥ್ಯವನ್ನು ಬಳಸಿಕೊಂಡು ಇಡಿಯನ್ನು ಹಿಡಿಯಲ್ಲಿ ತೋರುವ, ಆಗಸವನ್ನು ಅಂಗೈಲಿ ಕಾಣಿಸುವ ಸಾಮರ್ಥ್ಯ ಹೊಂದಿರಬೇಕು.
ಅಲಂಕಾರ ಗ್ರಂಥಗಳಲ್ಲಿ ಕಾವ್ಯಕ್ಕೆ ಒಬ್ಬೊಬ್ಬರು ಒಂದೊಂದು ಲಕ್ಷಣವನ್ನು ಹೇಳಿದ್ದಾರೆ. ಅವುಗಳಲ್ಲಿ ಮುಖ್ಯವಾದವರು
1. ಭರತ - ಭರತನು ಕಾವ್ಯ ಲಕ್ಷಣವನ್ನು ಹೇಳಿಲ್ಲ. ಕಾವ್ಯದಲ್ಲಿ ರಸಕ್ಕೆ ಪ್ರಾಶಸ್ತ್ಯವನ್ನು ಹೇಳಿದ್ದಾನೆ. ಇವನ ಪ್ರಕಾರ ಕಾವ್ಯವೆಂದರೆ ದೃಶ್ಯ ಕಾವ್ಯವೆಂದೇ ಅರ್ಥ.
2. ಭಾಮಹ - ಸಾಲಂಕಾರವಾಗಿಯೂ ನಿರ್ದುಷ್ಟವಾಗಿಯೂ ಇರುವ ಶಬ್ದರ್ಥಗಳ ಸಮೂಹವೇ ಕಾವ್ಯ.
3. ದಂಡಿ - ಇಷ್ಟವಾದ ಅರ್ಥದಿಂದ ಕೂಡಿದ ಪದ ಸಮೂಹವೇ ಕಾವ್ಯಾಶರೀರ. ಹತ್ತು ಗುಣಗಳೇ ಪ್ರಾಣ.
4. ವಾಮನ - ಗುಣಾಲಂಕಾರಗಳಿಂದ ಶೋಭಿತವಾದ ಶಬ್ದರ್ಥಗಳೇ ಕಾವ್ಯ. 'ರೀತಿ'ಯು ಕಾವ್ಯದ ಆತ್ಮ.
5. ಹೇಮಚಂದ್ರ, ವಿದ್ಯಾನಾಥ - ಗುಣಾಲಂಕಾರಗಳಿಂದ ಕೂಡಿಯೂ ದೋಷಗಳಿಲ್ಲದೆಯೂ ಇರುವ ಶಬ್ದಾರ್ಥಗಳೇ ಕಾವ್ಯ.
6. ಮಮ್ಮಟ - ದೋಷವಿಲ್ಲದೆಯೂ ಗುಣಾಲಂಕಾರಗಳಿಂದ ಕೂಡಿಯೂ ಇರುವ ಶಬ್ದಾರ್ಥಗಳೇ ಕಾವ್ಯ. ಕೆಲವು ಕಡೆ ಅಲಂಕಾರವಿಲ್ಲದೇ ಇದ್ದರೂ ಕಾವ್ಯವಾಗುತ್ತದೆ.
7. ಕುಂತಕ - ವಕ್ತೋಕ್ತಿಯುಳ್ಳ ವಾಕ್ಯವಿನ್ಯಾಸದಲ್ಲಿ ಸೇರಿರುವ ಶಬ್ದಾರ್ಥಗಳು ( ಒಟ್ಟಿಗೆ )ಕಾವ್ಯ.
8. ಆನಂದವರ್ಧನ - ಕಾವ್ಯಕ್ಕೆ ಧ್ವನಿಯೇ ಆತ್ಮ; ರಸವೇ ಪ್ರಾಣ.
9. ವಾಗ್ಬಟ, ಜಯದೇವ, ಭೋಜ - ದೋಷವಿಲ್ಲದೆಯೂ ಗುಣ ಅಲಂಕಾರ ರೀತಿ ಇವುಗಳಿಂದ ಕೂಡಿಯೂ ಇರುವ ಶಬ್ದಾರ್ಥಗಳು ಕಾವ್ಯ.
ಪ್ರಸ್ತುತ ದಿನಗಳಲ್ಲಿ ಮನಸ್ಸಿಗೆ ತೋಚಿದನ್ನು ಕೇವಲ ಪದಕ್ಕೆ ಪದ ಜೋಡಿಸಿ ಗೋಡೆ ಕಟ್ಟಿದಂತೆ ಕವಿತೆ ಗೀಚಿ ಎನ್ನುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಹಾಗಾಗಿಯೇ....
ರಾಷ್ಟಕವಿ ಜಿ. ಎಸ್. ಶಿವರುದ್ರಪ್ಪ ನವರು ತಮ್ಮ ಪ್ರೀತಿಯಿಲ್ಲದ ಮೇಲೆ ಎಂಬ ಕವಿತೆಯಲ್ಲಿ....
ಬರೀ ಪದಕ್ಕೆ ಪದ ಜತೆಗಿದ್ದ ಮಾತ್ರಕ್ಕೆ ಪದ್ಯವಾದೀತು ಹೇಗೆ..? ಅರ್ಥಹುಟ್ಟಿತು ಹೇಗೆ..? ಎಂದು ಪ್ರಶ್ನಿಸುವುದು ಸಮಂಜಸವಾಗಿದೆ ಹಾಗು ಇಂದಿಗೂ ಪ್ರಸ್ತುತವಾಗುತ್ತದೆ.
ಮತ್ತೊಂದು ಕಡೆ ಲೇಬನಾನಿನ ದಾರ್ಶನಿಕ ಕವಿ ಖಲೀಲ್ ಗೀಬ್ರಾನ್ ಹೇಳುತ್ತಾನೆ:
ಕಾವ್ಯ ಒಂದು ಅಭಿಪ್ರಾಯದ ಅಭಿವ್ಯಕ್ತಿ ಅಲ್ಲ, ರಕ್ತ ಸುರಿಯುತ್ತಿರುವ ಗಾಯದಿಂದ ಇಲ್ಲವೇ ಮುಗುಳ್ನಗುತ್ತಿರುವ ಬಾಯಿಂದ ಹೊಮ್ಮಿದ ಗಾನ ಅದು. ಎಂದು.
ಪದ್ಯ ಪದವಿಲ್ಲದಿರಬೇಕು
ಹೆಜ್ಜೆ ಗುರುತು ಇಲ್ಲದೆ ಪಕ್ಷಿ ಹಾರುವಂತೆ
ಕಾಲದಲ್ಲಿ ಸ್ತಬ್ಧ ಎನ್ನಿಸಬೇಕು
ಏರುವ ಚಂದ್ರನಂತೆ
ಹೇಳಕೂಡದು
ಇರಬೇಕು
(ಯು.ಆರ್. ಅನಂತಮೂರ್ತಿ)
ಪದಗಳು ಕಾಲ ರಹಿತ, ಅವುಗಳನ್ನು ಹೇಳುವಾಗ
ಮತ್ತು ಬರೆಯುವಾಗ ಅವುಗಳು ಕಾಲ ರಹಿತ
ಎಂಬುದನ್ನು ತಿಳಿದು
ಹೇಳಬೇಕು, ಬರೆಯಬೇಕು.
ಕಾವ್ಯ ಅನಾಯಾಸವಾಗಿ ಮೂಡಿ ಬರಬೇಕು, ಹೂ ಅರಳಿದಂತೆ, ಅರಳಿ ಘಮಘಮಿಸಿದಂತೆ, ಆ ಸುಗಂಧಗಾಳಿ ಎಲ್ಲೆಡೆ ಪಸರಿದಂತೆ....
ಕಾವ್ಯ ಎಂದರೆ ಕಟ್ಟುವುದಲ್ಲ, ಚಿಂತನೆಯನ್ನು ಬಿತ್ತುವುದು.... ಅಂತರಂಗದ ಜ್ಞಾನ ಗರ್ಭದಲ್ಲಿ ಹುಟ್ಟುವಂಥದ್ದು. ಕಟ್ಟಿದ್ದು ಕಾಲಕ್ರಮೇಣ ಬಿದ್ದುಹೋಗುತ್ತದೆ, ಆದರೆ ಹುಟ್ಟುದ ಕಾವ್ಯ ಕಾಲದ ಕರಪಿಡಿದು ಅದರೊಟ್ಟಿಗೆ ಬೆಳೆಯುತ್ತಾ ಸಾಗುತ್ತದೆ.
ಮನುಷ್ಯರೆಲ್ಲರಿಗೂ ಭಾವನೆಗಳಿರುತ್ತವೆ, ಆದರೆ ಭಾವನೆಗಳನ್ನು ಹೊಂದಿರುವ ಎಲ್ಲರೂ ಕವಿಯಾಗಲಾರರು. ಕಾವ್ಯ ಎಂಬುದು ಸೃಜನಶೀಲ ಚಿಂತನೆಯ ಆಯಾಮ. ಅಂತರ್ಗತ ಮಂಥನದ ಅಭಿವ್ಯಕ್ತಿ. ಕವಿಯಾದವನಿಗೆ ತಾನು ಕವಿತೆ ರಚಿಸಲು ಬಳಸುವ ಭಾಷೆಯ ಮೇಲಿನ ಹಿಡಿತ ಮತ್ತು ಶಬ್ಧ ಭಂಡಾರ ಬಹಳ ಮುಖ್ಯವಾಗುತ್ತದೆ. ಇಲ್ಲದಿದ್ದಲ್ಲಿ ತಾನು ಬಳಸುವ ಪದಗಳು ಅಪಾರ್ಥಗಳನ್ನು ಸೃಷ್ಟಿಸಿ ಕವಿ/ಕವಿತೆಯ ಅಶಯವನ್ನೇ ವಿಧ್ವಂಸ ಮಾಡಬಹುದು. ಅಂತೆಯೇ.... ಕವಿಯ ಕೇವಲ ಕಪೋಲ ಕಲ್ಪಿತ ಕಲ್ಪನೆಗಳಿಂದ ಕೂಡಿದ ಕಾವ್ಯ ಸತ್ವಭರಿತ ಕಾವ್ಯವಾಗಲಾರದು, ಜೊತೆಗೆ ವಾಸ್ತವದ ಛಾಯೆಯುಳ್ಳ ಸತ್ಯತೆ ಸಹ ಬೇಕಾಗುತ್ತದೆ.
ಪ್ರತಿಭಾಶಾಲಿ ಕವಿಯಾದವನಿಗೆ ತನ್ನ ಮಿತಿಗಳು ತಿಳಿದಿರಬೇಕು. ಆ ಮಿತಿಗಳನ್ನು ಮೀರಿ ಅರಿವಿನ ಬಯಲನ್ನು ಸ್ಪರ್ಶಿಸಬೇಕಾಗುತ್ತದೆ. ಕಾವ್ಯದ ದಾರಿ ಹಲವು ಬಗೆಯದಾಗಿರುತ್ತದೆ; ಹರಿತ, ಲಲಿತ, ನಿಗೂಢ, ಮಾಧುರ‍್ಯ, ಮ್ಲಾನ ಎಂಬ ದಾರಿಗಳನ್ನು ಆತ ತನ್ನ ಕಾವ್ಯಕ್ಕೆ ತೋರಿಸಬಲ್ಲ. ಕವಿ ತನ್ನ ಕಾವ್ಯದ ಆಶಯಕ್ಕೆ ಮತ್ತು ಮೂಲದ್ರವ್ಯಕ್ಕೆ ದಕ್ಕೆಯಾಗದ ರೀತಿಯಲ್ಲಿ ತನ್ನ ಸಾಹಿತ್ಯೋಪಮೆಯನ್ನು ಬಳಸುತ್ತಾನೆ. ಈ ಮೊದಲೇ ಹೇಳಿದಂತೆ ಕವಿತೆಗೆ ಶಬ್ದಾಡಂಬರಕ್ಕಿಂತ ಪರಿಕರ ಮತ್ತು ರೂಪಕಗಳು ಬಹಳ ಮುಖ್ಯವಾಗುತ್ತವೆ. ಹೇಳಬೇಕಾದ ವಿಷಯ ಅಥವಾ ಮುಟ್ಟಿಸಬೇಕಾದ ಸಂದೇಶವನ್ನು ಮನಃಪೂರ್ವಕವಾಗಿ ಮನಗಾಣಿಸುವುದಕ್ಕೆ ಎಷ್ಟು ಅಗತ್ಯವೋ ಅಷ್ಟು ಪ್ರಮಾಣದ ಸಾಹಿತ್ಯ ಲೇಪನವನ್ನು ಒಬ್ಬ ಸಮರ್ಥ ಕವಿ ನಿರುಕಿಸುತ್ತಾನೆ.
ಕಾವ್ಯ ರಚನೆಗಳಲ್ಲಿ ಆರಂಭದಿಂದಲೂ ನಾವು ಹಲವಾರು ಪ್ರಕಾರಗಳನ್ನು ಕಾಣುತ್ತೇವೆ; ಒಡ್ಡೋಲಗದ ಕಾವ್ಯ, ಧಾರ್ಮಿಕ ಕಾವ್ಯ, ಸಮಾನತೆಯ ಕಾವ್ಯ(ವಚನ, ತತ್ವಪದ) ಬೆವರುವಾಸನೆಯ ಕಾವ್ಯ(ದಲಿತ, ಬಂಡಾಯ) ಎಂದು ಅವುಗಳನ್ನು ಸ್ಥೂಲವಾಗಿ ವಿಂಗಡಿಸಬಹುದಾದರೂ ಮತಧರ್ಮ, ದೇಶಕಾಲ, ಸಂಸ್ಕೃತಿ, ನಾಗರಿಕತೆ, ವರ್ಣ, ಲಿಂಗ ಬೇಧಗಳ ಪ್ರಭಾವ ಕಾವ್ಯ/ಸಾಹಿತ್ಯ ರಚನೆಯ ಮೇಲೆ ಇದ್ದೇ ಇರುತ್ತದೆ. ಶಿಷ್ಟ ಪ್ರಕಾರದ(ಚಂಪೂ, ರಗಳೆ, ಷಟ್ಪದಿ, ಸಾಂಗತ್ಯ, ನವೋದಯ, ನವ್ಯ, ಸೃಜನಶೀಲ ಇತ್ಯಾದಿ) ಸಾಹಿತ್ಯದಲ್ಲಿ ರಚನೆಗೊಂಡ ಕಾವ್ಯಕ್ಕೆ ಅದರದೇಯಾದ ಕಾವ್ಯ ಲಕ್ಷ ಣಗಳು ಇರುತ್ತವೆ; ರಸ(ಭಾವ, ವಿಭಾವ, ಅನುಭಾವ, ಸಂಚಾರಿಭಾವ), ರೀತಿ(ಪದ ರಚನೆ, ವಿನ್ಯಾಸ), ಧ್ವನಿ(ಶಬ್ದಗಳ ಆಚೆಗಿನ ಅರ್ಥ) ಎಂದು ಅವುಗಳನ್ನು ಲಾಕ್ಷ ಣಿಕರು ಪದಗ್ರಹಿಸುತ್ತಾರೆ. ಸಾಹಿತ್ಯದ ಇತರ ಪ್ರಕಾರಗಳಿಗಿಂತ ಕಾವ್ಯದಲ್ಲಿ ಭಾಷೆಯ ರಚನೆ ಬಿಗಿಯಾಗಿರುತ್ತದೆ. ಅದರ ಘಟಕಾಂಶಗಳಾದ-ನಾದ, ಅರ್ಥ, ಧ್ವನಿ, ಪದಜೋಡಣೆ, ಲಯ ಮುಂತಾದವು ನಿಕಟವಾಗಿ ಹೆಣೆದುಕೊಂಡಿರುತ್ತವೆ. ಕಿರಿದರಲ್ಲಿ ಹಿರಿದಾದ ಅರ್ಥ ಮತ್ತು ಭಾವವನ್ನು ದಿಗ್ದರ್ಶಿಸುತ್ತವೆ. ಹೀಗಾಗಿ ಕಾವ್ಯವೆಂದರೆ ಅದು ಸುಮ್ಮನೆ ಪದ ಜೋಡಣೆಯಾಗಲಿ, ಉಶಬ್ದಾಡಂಬರವಾಗಲಿ ಅಲ್ಲ. ಬಳಸುವ ಶಬ್ದಗಳಲ್ಲಿ ಆಯಾ ಭಾವಕ್ಕನುಗುಣವಾಗಿ ಧ್ವನಿಸುವಿಕೆಯೂ ಸಹ ಕವಿತೆಯ ಪ್ರಾಭಲ್ಯವನ್ನು ದ್ವಿಗುಣಗೊಳಿಸುತ್ತದೆ.
ಒಂದು ಕಡೆ ಲೇಖಕ/ವಿಮರ್ಶಕ ಗಿರೀಶ್ ಹತ್ವಾರ್(ಜೋಗಿ) ಬರೆಯುತ್ತಾರೆ: ಕವಿತೆ ತಂತ್ರಜ್ಞಾನವಲ್ಲ, ಅದು ತಂತ್ರ ಮತ್ತು ಜ್ಞಾನ ಒಂದಾಗದ ಸ್ಥಿತಿ. ಕಂಡದ್ದು ಮತ್ತು ಗ್ರಹಿಸಿದ್ದನ್ನು ಅಷ್ಟು ಸುಲಭವಾಗಿ ಕನೆಕ್ಟ್ ಮಾಡಲಾಗದ ಅತಂತ್ರ ಗಳಿಗೆಗಳನ್ನು ಹಿಡಿಯುವ ಯತ್ನ.
ಕ್ಷಣಗಳು ಮೀನಿನಂತೆ ಜಾರಿಯೋ, ಚಿಟ್ಟೆಯಂತೆ ಹಾರಿಯೋ ಹೋಗುವುದನ್ನು ಕವಿ ನೋಡುತ್ತಾ ಕೂರುತ್ತಾನೆ, ಅಸಹಾಯಕನಾಗಿ. ಆ ಅಸಹಾಯಕತೆಯಲ್ಲೇ ಕವಿತೆ ಹುಟ್ಟುತ್ತದೆ. ಗಾಢ ಆತ್ಮವಿಶ್ವಾಸದಲ್ಲಿ ಥಿಸೀಸ್ ಬರೆಯಬಹುದೇ ಹೊರತು ಕವಿತೆ ಬರೆಯಲಾಗುವುದಿಲ್ಲ.1.jpg)
ಕವಿತೆ ಹೇಗಿರಬೇಕು ಎಂಬುದಕ್ಕೆ ಗೋಪಾಲಕೃಷ್ಣ ಅಡಿಗರು ಬರೆದ ಮಾತುಗಳನ್ನು ಅವಲೋಕಿಸಬಹುದು - ಒಂದು ಕವನ ಸಫಲವಾಗುವುದು ಅದರಲ್ಲಿ ಕವಿ ಕಾಲವನ್ನು ತಡೆಹಿಡಿದು ನಿಲ್ಲಿಸಿದಾಗ. ಹೀಗೆ ನಿಲ್ಲಿಸುವುದು ಸಾಧ್ಯವಾಗುವುದು ಭೂತ-ಭವಿಷ್ಯತ್ತು-ವರ್ತಮಾನಗಳನ್ನು ಒಂದು ಬಿಂದುವಿನಲ್ಲಿ ತಂದು ಕೇಂದ್ರೀಕರಿಸಿದಾಗ.
'ಟಿ.ಎಸ್.ಎಲಿಯಟ್' ಹೇಳಿದ ಹಾಗೆ....
ನಾಳೆಯಲ್ಲೂ ಇದ್ದೀತು ಇಂದು ನಿನ್ನೆಯದೊಂದು ಕ್ಷಣ
ನಿನ್ನೆಯಲ್ಲೂ ಇತ್ತಲ್ಲವೇ ನಾಳೆಯದೊಂದು ಕ್ಷಣ
(Time present and time past
Are both perhaps present in time future
And time future continued in time past
~ T.S. Eliot)
ಹಾಗಾದಾಗ ಮಾತ್ರ ಕವಿತೆ ಸಾರ್ಥಕವಾಗುತ್ತದೆ. ತನ್ನ ಅಪೂರ್ವ ತೇಜಸ್ಸಿನಿಂದ ಹೊಳೆಯ ತೊಡಗುತ್ತದೆ. ಮತ್ತೆ ಮತ್ತೆ ಓದುವಂತೆ ಪ್ರೇರೇಪಿಸುತ್ತದೆ. ಒಂದು ಕವಿತೆ ಹೇಗೆ ಒಳ್ಳೆಯ ಕವಿತೆ ಆಗುತ್ತದೆ ಅನ್ನುವುದಕ್ಕೆ ಮನಸ್ಸೇ ಮಾನದಂಡ ಎನ್ನುತ್ತಾರೆ.
ಕಾಲ ಎಲ್ಲವನ್ನು ಕೊಲ್ಲುತ್ತದೆ! ಕಾಲ ಕೊಲ್ಲಲಾರದೆ ಹೋದರೆ ಆಧುನಿಕತೆ ಕೊಲ್ಲುತ್ತದೆ ಹಾಗು ಹೊಸತನ್ನು ಸೃಷ್ಟಿಸುತ್ತದೆ.
ಕಾವ್ಯದ ಪ್ರಕಾರಗಳಾದ ನವೋದಯ
ದಲಿತ
ಬಂಡಾಯ
ನವ್ಯ
ಪ್ರಕಾರಗಳು ಸೃಷ್ಟಿಯಾದದ್ದೇ ಹೀಗೆ.
ಕಾಲಮಾನದ ಗತಿಯೊಂದಿಗೆ ನಿಂತ ನಿರಾಗದೆ ಹರಿಯುವ ಅಗತ್ಯ ಕವಿಯ ಅಲೋಚನೆಗಳಿಗಿದೆ.
ಹೊಸತಾಗಿ ಬರೆಯಲು ಪ್ರಾರಂಭಿಸುವವರು ಮೊದಲು ರಚಿಸುವುದೇ ಹನಿಗವಿತೆ, ಚುಟುಕು, ಹೈಕು, ರುಬಾಯಿ, ತಂಕಾಗಳನ್ನು. ಈಗ ಯಾರೂ ಸಹ ನೀಳ್ಗವಿತೆ, ಖಂಡಕಾವ್ಯಗಳ ಗೋಜಿಗೆ ಹೋಗುವುದಿಲ್ಲ. ಬರೆದರೂ ಸಹ ಓದುವವರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಅಧ್ಯಯನಶೀಲತೆ ಕುಂದುತ್ತಿರುವುದು. ಹಾಗಾಯೇ ಇಂದಿನ ಸಮಯದಲ್ಲಿ ಯಾವೊಂದು ಮಹಾಕಾವ್ಯಗಳು ಸೃಷ್ಟಿಯಾಗುತ್ತಿಲ್ಲ.
ಒಂದು ಶತಮಾನದ ಬಳಿಕವೂ ಅಷ್ಟೇ ಪ್ರೀತಿಯಿಂದ ಓದಿಕೊಳ್ಳದ ಕಾವ್ಯ ಬರೆದವನು ಮಹಾಕವಿ ಅಗಲಾರ ಹೀಗೆ ಅಂದವರು - ಗೋಪಾಲಕೃಷ್ಣ ಅಡಿಗರು.
ಅದೇ ರೀತಿಯಲ್ಲಿ ಒಬ್ಬ ಕವಿ ಬರೆದ ಸಾವಿರಾರು ಕವಿತೆಗಳ ಪೈಕಿ ಹತ್ತು ಕವಿತೆಗಳು ಉಳಿದುಕೊಂಡರೆ ಅವನು ಮಹಾಕವಿ, ಐದು ಕವಿತೆಗಳು ಉಳಿದುಕೊಂಡರೆ ಅವನು ಉತ್ತಮ ಕವಿ, ಒಂದು ಕವಿತೆ ಉಳಿದುಕೊಂಡರೆ ಅವನು ಕವಿ. ಒಂದೂ ಉಳಿಯದೇ ಹೋದರೆ ಅವನು ವಿಮರ್ಶಕ ಎಂದು - ಬಿ.ಸಿ. ರಾಮಚಂದ್ರ ಶರ್ಮ ರವರು ಒಂದು ಕವನ ಸಂಕಲನದ ಬಿಡುಗಡೆಯ ಸಮಯದಲ್ಲಿ ಹೇಳಿದ್ದರು.
ಆದರೆ ಕವಿ ಆದವನು ಕೇವಲ ಲಿಪಿಕಾರ, ಯಾವುದೋ ಆಮೂರ್ತ ಶಕ್ತಿಯೊಂದು ಕವಿಯಲ್ಲಿ ಕೇಂದ್ರೀಕೃತವಾಗಿರುತ್ತೆ. ಆ ಶಕ್ತಿ ಬರೆಸಿದುದನ್ನು ಲಿಪಿಕಾರ ದಾಖಲಿಸುತ್ತಾನೆ ಎಂಬ ಒಂದು ನಂಬಿಕೆಯೂ ಇದೆ.
ಅದೇನೇ ಇದ್ದರೂ.... ಸಾಹಿತ್ಯಾಸಕ್ತರ ಹೃದಯನೆಲದಲ್ಲಿ ಪ್ರೇಮದ ಬೀಜ ಮೊಳಕೆಯಾಗಿಸುವ ಅವಶ್ಯಕತೆ, ಮನಸ್ಸು ಮನಸ್ಸುಗಳ ನಡುವೆ ಸ್ನೇಹದ ಸೇತುವೆಯಾಗಬೇಕಾದ ಅನಿವಾರ್ಯತೆ ಇದೆ; ಕಾವ್ಯಕ್ಕೆ ಆ ತಾಕತ್ತು ಖಂಡಿತಾ ಇದೆ.
ಗದ್ಯಂ ಪದ್ಯಂ ಸಮಸ್ತ ಜನಹೃದ್ಯo
- ಕೇಶಿರಾಜ
***
"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...
ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...
"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...
©2025 Book Brahma Private Limited.