Date: 26-03-2023
Location: ಬೆಂಗಳೂರು
ಮಂಡ್ಯದ ಜಿಲ್ಲಾ ಯುವ ಬರಹಗಾರರ ಬಳಗ, ಪರಿಚಯ ಪ್ರಕಾಶನ ಹಾಗೂ ಭೂಮಿಬೆಳಗು ಸಾಂಸ್ಕೃತಿಕ ಸಂಘದಿಂದ ನಡೆದ 'ಮಹಿಳಾ ಕವಿಗೋಷ್ಠಿ' ಕಾರ್ಯಕ್ರಮವು ಶನಿವಾರದಂದು ಮಂಡ್ಯದ ಕನ್ನಿಕ ಶಿಲ್ಪ ನವೋದಯ ತರಬೇತಿ ಕೇಂದ್ರದಲ್ಲಿ ನಡೆಯಿತು.
ಕವಿತೆ ಆತ್ಮಸಂತೋಷದ ಮಾತಿನ ಹೊರತಾಗಿ ಬೆಳೆಯಬೇಕು. ಕಾವ್ಯ ಕೇವಲ ನಮ್ಮ ವ್ಯಕ್ತಿತ್ವದ ಪ್ರತಿಸ್ಪಂದನೆಯಾಗಿ ಉಳಿದಿಲ್ಲ. ಕವಿಗಳು ಯಾವುದೇ ಪೂರ್ವಗ್ರಹಗಳಿಗೆ ಪೀಡಿತರಾಗದೆ ಪ್ರಚಲಿತ ಸಮಾಜದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಿ ಬರೆಯಬೇಕು. ವ್ಯವಸ್ಥೆಯ ಓರೆಕೋರೆಗಳನ್ನು ತಿದ್ದಿತೀಡಿ ಸಮಾಜವನ್ನು ಸದಾ ಎಚ್ಚರದಲ್ಲಿಡಬೇಕು. ಸಮಾನತೆ, ಸಹಬಾಳ್ವೆ, ಸೋದರತೆ, ಸಾಮರಸ್ಯದಿಂದ ಬದುಕುವುದನ್ನು ಬೋಧಿಸುವ ಕಾವ್ಯ ಎಲ್ಲ ಕಾಲಕ್ಕೂ ಬೇಕಾಗಿದೆ.
ಕವಯತ್ರಿ, ಲೇಖಕಿ ಸುಚಿತ್ರಾ ಹೆಗಡೆ, ‘ಕಾವ್ಯವು ಭಾಷೆಯ ಜೊತೆ ಹುಡುಕಾಟದ ಅನುಸಂಧಾನವಾಗಿದೆ. ಇದರಲ್ಲಿ ಶಕ್ತ ಭಾವ ಮತ್ತು ಧ್ವನಿ ತುಂಬಿರಬೇಕು. ಆದ್ದರಿಂದಲೇ, ವ್ಯಕ್ತ ಪಡಿಸಲಾಗದ ಭಾವನೆಗಳನ್ನು ವ್ಯಕ್ತಪಡಿಸುವಂತಹ ಪರಿಕರಗಳನ್ನು ಉಪಯೋಗಿಸಿ ಅಭಿವ್ಯಕ್ತಿಸುವದೆೇ ಕಾವ್ಯವೆಂದು ಬನ್ನಂಜೆಯವರು ಹೇಳುತ್ತಾರೆ. ಹಾಗೆ, ಕೇವಲ ಸುಂದರ ಪದ ಮತ್ತು ಪ್ರಾಸ ಪೋಣಿಸಿದರೆ ಕಾವ್ಯವಾಗದು. ಇದರೊಂದಿಗೆ ಲಯ, ಅರ್ಥ, ಧ್ವನಿ, ರೂಪಕ, ಪ್ರತಿಮೆ, ಒಳನೋಟಗಳನ್ನು ಪ್ರತಿಬಿಂಬಿಸಬೇಕು ಎಂದು ವಿವರಿಸಿದರು’.
‘ಕಾವ್ಯ ನಮ್ಮನ್ನು ನಿರಂತರವಾಗಿ ಹರಿತಗೊಳಿಸುವ ಪ್ರಕ್ರಿಯೆ. ನಮ್ಮ ಆಲೋಚನೆ ಮತ್ತು ಭಾವಧಾರೆಗಳನ್ನು ಹದಗೊಳಿಸುತ್ತದೆ. ಆದ್ದರಿಂದ ಕಾವ್ಯಕ್ಕೆ ಸ್ವತಃ ನಾವೇ ಒಡ್ಡಿಕೊಳ್ಳಬೇಕು. ಕಾವ್ಯದ ಅಧ್ಯಯನಶೀಲತೆಯಿಂದ ನಮ್ಮ ವ್ಯಕ್ತಿತ್ವ, ಅರಿವು ವಿಕಾಸ ಹೊಂದುತ್ತದೆ. ಭಾವನೆಗಳು ಪ್ರಖರಗೊಳ್ಳುತ್ತವೆ. ಆ ಮೂಲಕ ಕವಿ ಪ್ರತಿಭೆಯನ್ನು ವಿಸ್ತರಿಸಿಕೊಂಡು ಕವಿತೆಯಿಂದ ಕವಿತೆಗೆ ಬೆಳೆಯುತ್ತಾ ಹೋಗಬೇಕು’ ಎಂದ ಸಲಹೆ ನೀಡಿದರು.
‘ಸಮಾನತೆಗಾಗಿ ಹೋರಾಡುವ ಮೊದಲು ಮಹಿಳೆಯರು ತಮ್ಮ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಬೇಕು. ಸಮಾಜದಲ್ಲಿ ಮಹಿಳೆಯರ ಏಕತೆ ಜಯದ ಮೊದಲ ಮೆಟ್ಟಿಲು ಎನ್ನುವ ಕಿವಿಮಾತು ’ಹೇಳಿದರು.
ಸಾಹಿತಿ ಮಲ್ಲಿಕಾರ್ಜುನಸ್ವಾಮಿ ಮಹಾಮನೆ, ‘ಹೊಸ ಹೊಸ ಉನ್ನತ ಆಲೋಚನಾ ಸ್ತರಗಳಿಗೆ ಕರೆದೊಯ್ಯುವ ಕಾವ್ಯದ ಓದು ನಮಗೆ ಜೀವನ ಪ್ರೀತಿ ಮತ್ತು ರೀತಿಯನ್ನು ಕಲಿಸುತ್ತದೆ. ಜೊತೆಗೆ, ಹೊಸ ತಲೆಮಾರಿನ ಜನಾಂಗದ ಎದೆಯಲ್ಲಿ ಮೌಲ್ಯಗಳನ್ನು ಬೆಳೆಸುತ್ತದೆ .ಕವಿತೆ 'ವಾಚ್ಯತೆ'ಯಿಂದ ಕೂಡಿರಬಾರದು. ಅದು ಯಾವಾಗಲೂ 'ಧ್ವನಿ'ಸುವ ಗುಣ ಹೊಂದಿರಬೇಕು. ಕವಿ ತನ್ನೊಳಗೆ ಧ್ವನಿಸುವ ನವಿರುತನ, ಪಿಸುನುಡಿ, ಬೆಂಕಿ, ಜ್ವಾಲೆ, ಪ್ರಶ್ನೆ, ಒಳತೋಟಿ, ಛಿದ್ರಗೊಂಡ ಮನಸ್ಥಿತಿಯನ್ನು ಸಶಕ್ತವಾಗಿ ಕಾವ್ಯ ಲಹರಿಯ ಮೂಲಕ ಅಭಿವ್ಯಕ್ತಪಡಿಸಬೇಕು. ಬದುಕಿನ ಹೊಸ ಹೊಸ ನೆಲೆಗಳನ್ನು ಕಾವ್ಯದ ಮುಖೇನ ಹುಡುಕಾಟ ನಡೆಸಿ, ದಕ್ಕಿದ ಅನುಭವಗಳನ್ನು ಕಾವ್ಯಕ್ಕಿಳಿಸಿದರೆ ಸಾಲದು, ಪದ ಪದದಲ್ಲೂ ಹೊಸ ಹೊಸ ಅರ್ಥವನ್ನು ಧ್ವನಿಸಬೇಕು’ ಎಂದು ವಿಶ್ಲೇಷಿಸಿದರು.
‘ಲಿಂಗ ಭೇದವನ್ನು ತೊರೆದು ಸರಿಸಮಾನವಾಗಿ ಹೆಣ್ಣು ಗಂಡು ಬದುಕವ ಲಯವನ್ನು, ಮಾಧುರ್ಯತೆಯನ್ನು ರೂಡಿಸಿಕೊಳ್ಳಬೇಕು. ಇಬ್ಬರೂ ಆಪ್ತ ಒಡನಾಡಿಗಳಾಗಿದ್ದಾಗ ಬದುಕು ಹಸನಾಗುತ್ತದೆ ಎಂದ ಮಹಾಮನೆಯವರು, ಮಂಡ್ಯ ನೆಲದ ಮಣ್ಣಿನಲ್ಲಿ ಹೋರಾಟದ ಮನೋಭಾವ ಮತ್ತು ದಿಟ್ಟತನದ ಗುಣವಿದೆ. ಇಂತಹ ನೆಲದಲ್ಲಿ ಯುವ ಬರಹಗಾರರ ಬಳಗ ಕ್ರಿಯಾಶೀಲವಾಗಿ ಸಾಹಿತ್ಯದ ನೆಲೆಗಳನ್ನು ವಿಸ್ತರಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು’ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ಆಶಯ ನುಡಿಗಳನ್ನಾಡಿದರು. ಸಿಐಟಿಯು ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿ. ಕುಮಾರಿ, ಪರಿಚಯ ಪ್ರಕಾಶನದ ಸಂಸ್ಥಾಪಕ ಎಂ.ಎನ್. ಶಿವಕುಮಾರ್ ಆರಾಧ್ಯ, ಕನ್ನಿಕಶಿಲ್ಪ ನವೋದಯ ತರಬೇತಿ ಕಂದ್ರದ ಪ್ರಾಂಶುಪಾಲೆ ಹೆಚ್.ಆರ್. ಕನ್ನಿಕ, ರಾಷ್ಟ್ರೀಯ ಯುವ ಪ್ರಶಸ್ತಿ ವಿಜೇತೆ ಕೆ.ಪಿ. ಅರುಣಕುಮಾರಿ ಉಪಸ್ಥಿತರಿದ್ದರು.
ಪೋಟೋ ಗ್ಯಾಲರಿ :


ಬಸವಕಲ್ಯಾಣ: ವಚನ ಸಾಹಿತ್ಯದಿಂದ ಈ ನೆಲದ ಭಾಷಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಾಗಿದೆ ಎಂದು ಅಂತರ್ ರಾಷ್ಟ್ರೀಯ ...
2026ನೇ ಸಾಲಿನ ಟೊಟೊ ಪುರಸ್ಕಾರಕ್ಕೆ ಕನ್ನಡ ವಿಭಾಗದಲ್ಲಿ ಒಂಭತ್ತು ಜನ ಯುವ ಸೃಜನಶೀಲ ಬರಹಗಾರರ ಹೆಸರನ್ನ ಮೊದಲನೇ ಪಟ್ಟಿಗ...
ಧಾರವಾಡ: ಮಕ್ಕಳಲ್ಲಿ ಕಲ್ಪನಾ ಶಕ್ತಿ ಬೆಳೆಸುವುದರ ಜೊತೆಗೆ ಓದಿನ ಅಭಿರುಚಿ ಹಿಗ್ಗಿಸಬೇಕಿದೆ. ಅಂದಾಗ ಅವರು ಓದಿನ ರುಚಿಯೊಂ...
©2025 Book Brahma Private Limited.