ಕೊಂಕಣಿ ಭಾಷೆಯನ್ನು ಮಾತನಾಡುವ ಜಾನಪದ ಸೊಗಡಿಗೆ ಹೆಸರಾಗಿರುವ ಕುಡುಬಿ ಸಮುದಾಯವೂ, ಅವರದ್ದೇ ಆದ ವಿಧಿ-ವಿಧಾನಗಳನ್ನು ಅನುಸರಿಸುವ ನಿಟ್ಟಿನಲ್ಲಿ ಸಾಂಪ್ರದಾಯಿಕತೆ ರೂಢಿಸಿಕೊಂಡಿದೆ. ಕುಡಬಿ ಪದವು ಕುಡುಬಿಯರ ಮೂಲ ಜನಾಂಗದ ಪದವಲ್ಲ. ಗೋವಾದಲ್ಲಿ ಕುಲುಮಿ ಎಂದು ಕರೆಯುತ್ತಿದ್ದ ಈ ಪಂಗಡವನ್ನು, ಕರ್ನಾಟಕಕ್ಕೆ ವಲಸೆ ಬಂದ ನಂತರ ‘ಕುಡುಬಿ’ ಎಂದಾಗಿ, ಸರ್ಕಾರಿ ದಾಖಲೆಯಲ್ಲೂ ಸೇರ್ಪಡೆಯಾಯಿತು ಎನ್ನುತ್ತಾರೆ ಯುವ ಬರಹಗಾರ್ತಿ ರಂಜಿತಾ ಸಿದ್ದಕಟ್ಟೆ. ಅವರು ಕುಡುಬಿ ಸಮುದಾಯದ ಹಿನ್ನೆಲೆ ಹಾಗೂ ಹೋಳಿ ಆಚರಣೆಯ ಬಗ್ಗೆ ಬರೆದ ಲೇಖನ ನಿಮ್ಮ ಓದಿಗಾಗಿ..
ಬಣ್ಣಬಣ್ಣದ ರಂಗುಗಳಿಂದ ಕೂಡಿದ ಹಬ್ಬವೇ -ಹೋಳಿ. ಏಕತೆ ಮತ್ತು ಸೌಮ್ಯತೆಯ ಸ್ವರೂಪವಾಗಿರುವ ಹೋಳಿಯನ್ನು ಭಾರತದ ಅನೇಕ ಸಮುದಾಯಗಳು ಪುರಾಣದ ಹಿನ್ನೆಲೆಯನ್ನು ಅನುಸರಿಸಿ ವಿಶಿಷ್ಟವಾಗಿ ಆಚರಿಸುತ್ತವೆ. ಅಂತಹ ಸಮುದಾಯಗಳಲ್ಲಿ ಜನಪದ ಸೊಗಡಿಗೆ ಹೆಸರುವಾಸಿಯಾದ ಕುಡುಬಿ ಜನಾಂಗವೂ ಒಂದು.
‘ಕುಡುಬಿ’ ಬದುಕಿಗೆ ಹೋಳಿ ರಂಗು: ಹೋಳಿ ಹಬ್ಬವನ್ನು ಕುಡುಬಿ ಜನಾಂಗವು ಬಹಳ ವೈವಿಧ್ಯಮಯವಾಗಿ ತಮ್ಮ ಸಾಂಪ್ರದಾಯಿಕ ಸೋಗಡಿನೊಂದಿಗೆ ವಿಶೇಷವಾಗಿ ಆಚರಿಸುವುದು ವಾಡಿಕೆ. ಗೋವಾ ಮೂಲದಿಂದ ವಲಸೆ ಬಂದು ಕರಾವಳಿ ಕರ್ನಾಟಕದಲ್ಲಿ ಬದುಕನ್ನು ಕಟ್ಟಿಕೊಂಡಿರುವ ಕುಡುಬಿಗರು ಆಚರಿಸುವ ಹೋಳಿಯು -ಆಕರ್ಷಕವಾಗಿದೆ. ಹೋಳಿ ಎಂದು ಕೂಡಲೇ ಮುಖಕ್ಕೆಲ್ಲ ಬಣ್ಣ ಎರಚುತ್ತಾ ಸಂಭ್ರಮಿಸುವ ಆಚರಣೆಗಳಂತೆ ಕುಡುಬಿಗರ ಈ ಹೋಳಿ ಇದ್ದೀತು ಎಂದು ನೀವು ಭಾವಿಸಿದರೆ ನಿಮ್ಮ ಊಹೆ ತಪ್ಪು. ಇದು ಬಣ್ಣ ಹಚ್ಚಿ ಸಂಭ್ರಮಿಸುವ ಹೋಳಿ ಹಬ್ಬವಲ್ಲ. ವಾರ ಪರ್ಯಂತ ಅತ್ಯಂತ ಸಂಭ್ರಮ ಸಡಗರದೊಂದಿಗೆ ಎಲ್ಲವೂ ಸಂಪ್ರದಾಯಬದ್ದವಾಗಿ ನಡೆಯುವ ಕುಡುಬಿಗಳ ಹೋಳಿ ಆಚರಣೆಯು ಅವರ ನಂಬಿಕೆಯ ಬಹು ಮುಖ್ಯ ಹಬ್ಬ. ಆ ದಿನ ಕುಡುಬಿ ಕೇರಿಗಳ ತುಂಬೆಲ್ಲ ಸಂಭ್ರಮ ಸಡಗರವೇ ಮೈವೆತ್ತು ನರ್ತಿಸುವಂತಿರುತ್ತದೆ.
ಶುಭ ಮುಹೂರ್ತದಲ್ಲಿ….ಹಿರಿಯರು ನಿರ್ಧರಿಸಿದ ಶುಭ ಮುಹೂರ್ತವೊಂದರಲ್ಲಿ ಗೋವಿ ಕುಡುಬಿಗಳ ಕೂಡುಕಟ್ಟಿನ ಎಲ್ಲ ಸದಸ್ಯರು ಮಂಡಕಾರಿ( ವಾಳ್ಯದ ಗುರಿಕಾರ) ಮನೆಯಲ್ಲಿ ಒಗ್ಗೂಡುತ್ತಾರೆ. ಪ್ರಾತಃಕಾಲದಲ್ಲಿ ಎದ್ದು ಎಣ್ಣೆ ಅಭ್ಯಂಜನ ಸ್ನಾನಗೈದು ಶುಚಿಯಾಗಿ, ಹೋಳಿ ಕುಣಿತಕ್ಕೆ ಬರುವ ಸದಸ್ಯರನ್ನು ಶೃಂಗರಿಸಿದ ಮೇಲೆಯೇ ಮಂಡಕಾರಿ ನಾಯ್ಕ ತಾನು ಗೆಜ್ಜೆಕಟ್ಟಿಕೊಳ್ಳಲು ಅಣಿಯಾಗುತ್ತಾನೆ. ಅವನ ವೇಷ ಮುಗಿಯುತ್ತಿದ್ದಂತೆಯೇ ಕುಡುಬಿಗಳ ಕೂಡುಕಟ್ಟಿನಲ್ಲಿ ಹಬ್ಬದ ವಾತಾವರಣ ಕಳೆಗಟ್ಟುತ್ತಾ ಹೋಗುತ್ತದೆ. ಹೋಳಿ ಹುಣ್ಣಿಮೆಯ ದಿನದಿಂದ ವಾಳ್ಯದ ಗುರಿಕಾರನ ನೇತೃತ್ವದಲ್ಲಿ ಎಂಟು ದಿನಗಳ ಕಾಲ ನಗರ ಭಜನೆಯನ್ನು ಕೈಗೊಳ್ಳಲಾಗುತ್ತದೆ. ತಮ್ಮ ಕುಡುಬಿ ಜನಾಂಗದ ಮನೆಗಳಲ್ಲಿ ಮಾತ್ರವಲ್ಲದೇ, ಇತರ ವರ್ಗದ ಮನೆಗಳಲ್ಲೂ ಹೋಳಿ ಕುಣಿತವನ್ನು ಆಡಿಸಲಾಗುತ್ತದೆ. ಆ ಮನೆಯವರು ಸೇವಾರೂಪದಲ್ಲಿ 1 ಕೆ.ಜಿ. ಅಕ್ಕಿ, ಅಡಿಕೆಯನ್ನು ಮಂಡಕಾರಿ ನಾಯ್ಕನಿಗೆ ಒಪ್ಪಿಸುವುದು ವಾಡಿಕೆ.
ಕುಡುಬಿ ಸಮುದಾಯದ ಹಿನ್ನೆಲೆ : ಕುಡುಬಿ ಸಮುದಾಯದವರು ಮೂ‘ಲತಃ ಗೋವಾ ಪ್ರದೇಶದ ಮೂಲ ನಿವಾಸಿಗಳು. ಸುಮಾರು 15- 16ನೇ ಶತಮಾನದಲ್ಲಿ ಪೋರ್ಚ್ ಗೀಸರ ದಬ್ಬಾಳಿಕೆಯಿಂದ ಕರ್ನಾಟಕದ ಕರಾವಳಿ ಪ್ರದೇಶಕ್ಕೆ ವಲಸೆ ಬಂದವರು. ಕೆಲವು ಕುಡುಬಿ ಪಂಗಡಗಳು ಕೇರಳ ಪ್ರದೇಶಕ್ಕೆ ವಲಸೆ ಹೋದವು. ಆದರೆ, ಕರಾವಳಿ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಕುಡುಬಿ ಜನಾಂಗವು, ತನ್ನದೇ ಆದ ಭಾಷಾ ಪ್ರೌಢಿಮೆಯಿಂದ ಕರಾವಳಿಯಲ್ಲಿ ವಿಭಿನ್ನ ಛಾಪನ್ನು ಬಿತ್ತರಿಸಿದೆ. ಕೊಂಕಣಿ ಭಾಷೆಯನ್ನು ಮಾತನಾಡುವ ಜಾನಪದ ಸೊಗಡಿಗೆ ಹೆಸರಾಗಿರುವ ಕುಡುಬಿ ಸಮುದಾಯವೂ, ಅವರದ್ದೇ ಆದ ವಿಧಿ-ವಿಧಾನಗಳನ್ನು ಅನುಸರಿಸುವ ನಿಟ್ಟಿನಲ್ಲಿ ಸಾಂಪ್ರದಾಯಿಕತೆ ರೂಢಿಸಿಕೊಂಡಿದೆ. ಕುಡಬಿ ಪದವು ಕುಡುಬಿಯರ ಮೂಲ ಜನಾಂಗದ ಪದವಲ್ಲ. ಗೋವಾದಲ್ಲಿ ಕುಲುಮಿ ಎಂದು ಕರೆಯುತ್ತಿದ್ದ ಈ ಪಂಗಡವನ್ನು, ಕರ್ನಾಟಕಕ್ಕೆ ವಲಸೆ ಬಂದ ನಂತರ ‘ಕುಡುಬಿ’ ಎಂದಾಗಿ, ಸರ್ಕಾರಿ ದಾಖಲೆಯಲ್ಲೂ ಸೇರ್ಪಡೆಯಾಯಿತು. ಕುಡುಬಿ ಎಂಬುದು ಕೃಷಿಗೆ ಸಂಬಂಧಿಸಿದ ಮೂಲ ಪದ. ಗೋವಾದಿಂದ ವಲಸೆ ಬರುವಾಗ ಕೃಷಿಗೆ ಸಂಬಂಧಿಸಿದ ಎಲ್ಲ ಪರಿಕರಗಳನ್ನು ಹೊತ್ತುಕೊಂಡು ಬಂದ ಕುಡುಬಿಗಳು, ಈಗಲೂ ಕೃಷಿಯನ್ನೇ ತಮ್ಮ ವೃತ್ತಿಯನ್ನಾಗಿ ಅವಲಂಭಿಸಿದ್ದಾರೆ.
ಹೋಳಿ ಆಚಾರ- ವಿಚಾರಗಳು: ಕುಡುಬಿಗಳು ಶಿವನ ಆರಾಧಕರು. ಆದ್ದರಿಂದ, ಅವರ ಹೋಳಿ ಹಬ್ಬಕ್ಕೂ ತನ್ನದೇ ಆದ ಹಿನ್ನೆಲೆ ಇದೆ. ಹೋಳಿಯ ಇತಿಹಾಸವು ಪುರಾಣವನ್ನು ಆಧರಿಸಿದೆ. ಈಶ್ವರನು ಧ್ಯಾನಸಕ್ತನಾಗಿರುವಾಗ ಕಾಮದೇವರು ಅಥವಾ ಮನ್ಮಥನು ಶಿವನ ವ್ರತವನ್ನು ಭಂಗ ಮಾಡಲು ಬಾಣವನ್ನು ಬಿಡುತ್ತಾನೆ. ಬಾಣ ತಾಗಿದ ಶಿವನು ಕಣ್ಣು ತೆರೆಯುತ್ತಾನೆ. ಅವನ ಕೋಪವನ್ನು ಯಾರಿಂದಲೂ ತಣಿಸಲು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ಬೆಟ್ಟ ಗುಡ್ಡಗಳಲ್ಲಿ ವಾಸವಾ
ಗಿದ್ದ ಕುಡುಬಿ ಸಮುದಾಯದವರು ತಮ್ಮದೇ ಸಂಪ್ರದಾಯದ ಗುಮ್ಮಟೇ, ಕೋಲಾಟಗಳನ್ನು ಬಡಿಯುತ್ತಾ ಹಾಡಿ ಕುಣಿದು ಕುಪ್ಪಳಿಸುತ್ತಾರೆ. ತಮ್ಮ ಬೆವರನ್ನು ಸುರಿಸಿ ಆರಾಧನೆಯನ್ನು ಮಾಡುವ ಈ ಜನಾಂಗವನ್ನು ಕಂಡ ಶಿವನು ತನ್ನ ಕೋಪವನ್ನು ತಣಿಸಿಕೊಳ್ಳುತ್ತಾನೆ. ಇದರ ತರುವಾಯ, ಪ್ರತೀ ವರ್ಷ ಈಶ್ವರನ ಕೋಪವನ್ನು ತಣಿಸುವುದಕ್ಕಾಗಿ ಮಾರ್ಚ್ ತಿಂಗಳಿನಲ್ಲಿ ಹೋಳಿ ಹಬ್ಬವನ್ನು ಆಚರಿಸುತ್ತಾರೆ ಎಂಬುದು ಪ್ರತೀತಿ. ಗೋವಿ ಕುಡುಬಿಗಳ ಮನೆದೇವರು ಮಲ್ಲಿಕಾರ್ಜುನ. ಗೋವಾದಲ್ಲಿ ಕುಡುಬಿಗಳ ಮಲ್ಲಿಕಾರ್ಜುನ ದೇವಸ್ಥಾನವನ್ನು ಕಾಣಬಹುದು.
ಸಂಭ್ರಮದ ಪೂರ್ವ ತಯಾರಿ : ಹೋಳಿ ಹಬ್ಬಕ್ಕೆ ಮೂರು ತಿಂಗಳು ಇರುವಂತೆಯೇ ಕುಡುಬಿಗಳ ತಯಾರಿ ಆರಂಭಗೊಳ್ಳುತ್ತದೆ.
ತಮ್ಮ ಸಮುದಾಯದ ಗುರಿಕಾರ ಅಥವಾ ಮಂಡಕಾರಿ ನಾಯ್ಕ ಅಂದರೆ ಪಂಗಡದ ಯಜಮಾನನ ಮನೆಯಲ್ಲಿ ಒಟ್ಟಾಗುವ ಸಮುದಾಯದ ಹಿರಿಯ- ಕಿರಿಯ ಸದಸ್ಯರು ಹಬ್ಬದ ಕುರಿತು ಸುದೀರ್ಘವಾಗಿ ಚರ್ಚಿಸುತ್ತಾರೆ.
ಹಗಲಿಡೀ ಬಿಸಿಲಿನಲ್ಲಿ ಬೆವರು ಬಸಿದು ಜೀವನ ನಿರ್ವಹಣೆಯ ಕಾಯಕದಲ್ಲಿ ತೊಡಗಿ ಮನೆ ಸೇರುವ ಕುಡುಬಿಗಳು ರಾತ್ರಿಯ ಸಮಯದಲ್ಲಿ ಪಂಗಡದ ಯಜಮಾನನ ಮನೆಯಲ್ಲಿ ಒಟ್ಟಾಗುತ್ತಾರೆ. ಅಲ್ಲಿ ಸಮುದಾಯದ ಕಿರಿಯವರಿಗೆ ಹೋಳಿ ಆಚರಣೆಯ ಮುಖ್ಯ ಆಕರ್ಷಣೆ ‘ಗುಮ್ಟೆ ಕುಣಿತ’ (ಗುಮಟೆ)ವನ್ನು ಹಾಗೂ ಕೋಲಾಟ ಮತ್ತು ಕುಡುಬಿಯರ ಸಂಸ್ಕೃತಿಯನ್ನು ಬಿಂಬಿಸುವ ಹೋಳಿಯನ್ನು ಹೇಳಿ ಕೊಡಲಾಗುತ್ತದೆ.
ಏನಿದು ಗುಮ್ಟೆ ಕುಣಿತ?: ಸಂಜೆಯ ಸೂರ್ಯ ಪಡುವಣದರುವಾಗಲೇ ಕುಡುಬಿಗಳ ಕೇರಿಯಿಂದ ಹೊರಡುವ ಢಂ.ಢಂ.. ಗುಮ್ಟೆಯ ಸದ್ದು ಊರಿಡೀ ಮೊಳಗುತ್ತದೆ. ‘ಕುಡುಬಿಗಳಿಗೆ ಚೆಂಗು ಬಂದಿದೆ ಹೋಳಿ ಆರಂಭಗೊಳ್ಳುತ್ತಿದೆ’ ಎಂದು ಎಲ್ಲರೂ ಸಂಭ್ರಮಿಸುತ್ತಾರೆ. ಚೆಂಗು ಎಂದರೆ ಹೋಳಿ ಪ್ರಾರಂಭವಾಗುವ ಮಾಸ. ಗುಮಟೆಯು ಕುಡುಬಿ ಜನಾಂಗದ ಸಾಂಪ್ರದಾಯಿಕ ವಾದಕ ಸಾಧನವಾಗಿದೆ. ಗುಮಟೆ ಅನ್ನುವ ಶಬ್ದಕ್ಕೆ ‘ಸುಂದರ’ ಎಂಬ ಅರ್ಥವೂ ಇದೆ. ಆವೆ ಮಣ್ಣಿನಿಂದ ತಯಾರಿಸಿದ ವಿಶಿಷ್ಟ ಮಡಿಕೆ ಇದು. ಕೊಡ ಆಕಾರದ ಒಂದು ಪುರಾತನ ಸಂಗೀತ ಸಾಧನ. ಗುಮಟೆಯ ಒಂದು ಭಾಗದಲ್ಲಿ ದೊಡ್ಡದಾದ ಬಾಯಿಯಿದ್ದರೆ ಇನ್ನೊಂದು ಕಡೆ ಸಣ್ಣ ತೂತಿರುತ್ತದೆ. ಉಡ ಇನ್ನಿತರ ಪ್ರಾಣಿಗಳ ಚರ್ಮವನ್ನು ಸುಲಿದು ನಿರ್ದಿಷ್ಟ ಹದ ಬರುವವರೆಗೆ ಬಿಸಿಲಲ್ಲಿ ಒಣಗಿಸಿ ಮಡಕೆಯ ಅಗಲದ ಬಾಯಿ ಇರುವ ಕಡೆ ಬಿಗಿಯಾಗಿ ಎಳೆದು ಕಟ್ಟಲಾಗುತ್ತದೆ.
ವೇಷಭೂಷಣ -ಆಚರಣೆ : ಹೋಳಿ ವೇಷಧಾರಿಗಳು ನೆರಿಗೆ ತೆಗೆದ ಸೀರೆಯನ್ನುಟ್ಟು ಕಾಲಿಗೆ ಗೆಜ್ಜೆ ಕಟ್ಟುತ್ತಾರೆ. ತುಂಬು ತೋಳಿನ ಅಂಗಿ ಧರಿಸಿ ತಲೆಗೆ ಬಿಗಿಯಾದ ಮುಂಡಾಸನ್ನು ಸುತ್ತಿಕೊಳ್ಳುತ್ತಾರೆ. ಅದಕ್ಕೆ ಕೆಂಪು ಬಣ್ಣದ ಕಾಗದದ ಹೂಗಳನ್ನು ಸುತ್ತಿಕೊಳ್ಳುತ್ತಾರೆ. ಭೀಮರಾಜ ಹಕ್ಕಿಯ ಗರಿಯನ್ನು ಸಿಕ್ಕಿಸಿ
ಬಣ್ಣ ಬಣ್ಣದ ಪಟ್ಟೆಗಳನ್ನು ಹೊದ್ದು ಕೈಯಲ್ಲಿ ಗುಮ್ಟೆಗಳನ್ನು ಹಿಡಿದು, ಮನೆ ಮನೆಗೆ ಹೋಗಲು ಅಣಿಯಾಗುತ್ತಾರೆ. ದಕ್ಷಿಣ ಕನ್ನಡದಲ್ಲಿ ಅಬ್ಬಲಿಗೆ ಹೂವಿನ ಬಳಕೆ ಮಾಡುತ್ತಾರೆ. ಪಂಗಡದ ಇಬ್ಬರು ಪುರುಷರು ಸೀತೆ, ರಾಮನ ವೇಷ ಧರಿಸಿ, ಪುರಾಣದ ವಿಚಾರಗಳನ್ನು ಹಾಡಿನ ಮೂಲಕ ಕಟ್ಟಿಕೊಡುತ್ತಾರೆ. ಇದು ಕುಡುಬಿಗಳ ಹೋಳಿಯ ವೇಷ-ಭೂಷಣವಾಗಿದೆ
‘ಕೃಷ್ಣ ದೇವ ತೂಕ ಕೇಳು ಕೇಳಾಯ್ತಾ..
ನಾಗದೇವ ತೂಕ ಕೇಳು ಕೇಳಾಯ್ತಾ
ಗಂಗಾದೇವಿ ತೂಕ ಕೇಳು ಕೇಳಾಯ್ತಾ’
ಇಂತಹ ನೂರಾರು ಅವರ ಮಾತೃಭಾಷೆ ಕೊಂಕಣಿ ಸಾಲುಗಳೊಂದಿಗೆ ಸಮಸ್ತ ದೇವರ ಹೊಗಳುವಿಕೆಯೊಂದಿಗೆ ಹೋಳಿ ಕುಣಿತ ಆರಂಭಗೊಳ್ಳುತ್ತದೆ.
ಹುಲಿ ಕುಣಿತದ ಪ್ರಮುಖ ಆಕರ್ಷಣೆ : ಹುಲಿ ಕುಣಿತವು ಸಂಭ್ರಮದ ಹೋಳಿ ಉತ್ಸವದ ಪ್ರಮುಖ ಆಕರ್ಷಣೆ. ಸಣ್ಣ ಮಕ್ಕಳಿಂದ ಹಿಡಿದು ಮಧ್ಯವಯಸ್ಸಿನವರೆಗೆ ಹುಲಿ ಕುಣಿತದ ಬಣ್ಣವನ್ನು ಹಚ್ಚಿ ಪ್ರದರ್ಶನ ನೀಡುತ್ತಾರೆ. ಮುಂಜಾನೆ
ಯಿಂದ ಹುಲಿ ವೇಷ ಬಣ್ಣ ಹಚ್ಚಿ ದೇವಸ್ಥಾನದಲ್ಲಿ ಕುಣಿತವನ್ನು ಪ್ರದರ್ಶಿಸುತ್ತಾರೆ.
ಹೀಗೆ ಕುಡುಬಿ ಜನಾಂಗವು ತನ್ನದೇ ಆದ ಭಾಷಾ ವೈಖರಿ, ಆಲೋಚನಾ ಪ್ರಕ್ರಿಯೆ ಜಾನಪದ ಶೈಲಿಯ ಸೊಗಡಿನಿಂದ ಸಮಾಜವನ್ನು ಆಕರ್ಷಿಸಿದೆ. ಕುಡುಬಿಯರ ವಾಸದ ನೆಲೆಗಳು, ಅವರಿಗೆ ಹಾಗೂ ಕಾಡಿಗೆ ಇರುವ ಸಂಬಂಧಗಳು, ಆಹಾರ ಸಂಗ್ರಹಣೆ ಕ್ರಿಯೆ, ಬೇಟೆ ಮತ್ತು ಕುಮರಿ ವ್ಯವಸಾಯದತ್ತ ತಮ್ಮನ್ನು ಇಗಲೂ ತೊಡಗಿಸಿಕೊಂಡು ಹೋಗುತ್ತಿದ್ದಾರೆ.
- ರಂಜಿತಾ ಸಿದ್ಧಕಟ್ಟೆ
***
"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...
ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...
"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...
©2025 Book Brahma Private Limited.