"ಗಂಡನ ಸಾಂಗತ್ಯವಿಲ್ವದೇ ಏಕಾಂಗಿಯಾಗಿ ಮಕ್ಕಳನ್ನು ಬೆಳೆಸಿದ್ದು, ರಾಜಕುವರರಾಗಿದ್ದೂ ಅರಮನೆಯ ರಾಜಕೀಯದಿಂದಾಗಿ ಮಕ್ಕಳನ್ನು ಕಟ್ಟಿಕೊಂಡು ಕಾಡಿನಲ್ಲಿ ಅಲೆದದ್ದು, ಕೊನೆಯವರೆಗೂ ಕರ್ಣ ತನ್ನ ಮಗ ಎನ್ನುವ ಗುಟ್ಟು ಬಿಟ್ಟುಕೊಡಲಾಗದ ದುಗುಡ ಇವೆಲ್ಲಾ ಸಾಮಾನ್ಯವಾಗಿ ಗೊತ್ತಿರುವ ವಿಷಯಗಳು. ಇವುಗಳನ್ನು ಮೀರಿ ಈ ಪುಸ್ತಕದಲ್ಲಿ ಆಕೆಯ ಇಡಿಯಾದ ವ್ಯಕ್ತಿತ್ವ ದಕ್ಕುತ್ತದೆ," ಎನ್ನುತ್ತಾರೆ ಶ್ವೇತಾ ಹೊಸಬಾಳೆ. ಅವರು ಜಗದೀಶಶರ್ಮಾ ಸಂಪ ಅವರ ‘ಕುಂತಿ ಪಾಡು’ ಕೃತಿ ಕುರಿತು ಬರೆದ ವಿಮರ್ಶೆ.
ಮಹಾಭಾರತದ ಹಲವು ಕಾಡುವ ಪಾತ್ರಗಳಲ್ಲಿ ಕುಂತಿಯೂ ಒಬ್ಬಳು. ಅವಳ ಬದುಕನ್ನು ಆರಂಭದಿಂದ ಅಂತ್ಯದವರೆಗೂ ಸಂಗ್ರಹಿಸಿಕೊಟ್ಟಿದ್ದು ಈ ಪುಸ್ತಕದ ವಿಶೇಷ. ಅವಳ ಬದುಕಿನ ಪ್ರಮುಖ ಘಟನೆಗಳಾದ ಮದುವೆಗೂ ಮುಂಚೆ ಕರ್ಣನನ್ನು ಹೆತ್ತು ಪರಿತಪಿಸಿದ್ದು, ಗಂಡನ ಸಾಂಗತ್ಯವಿಲ್ವದೇ ಏಕಾಂಗಿಯಾಗಿ ಮಕ್ಕಳನ್ನು ಬೆಳೆಸಿದ್ದು, ರಾಜಕುವರರಾಗಿದ್ದೂ ಅರಮನೆಯ ರಾಜಕೀಯದಿಂದಾಗಿ ಮಕ್ಕಳನ್ನು ಕಟ್ಟಿಕೊಂಡು ಕಾಡಿನಲ್ಲಿ ಅಲೆದದ್ದು, ಕೊನೆಯವರೆಗೂ ಕರ್ಣ ತನ್ನ ಮಗ ಎನ್ನುವ ಗುಟ್ಟು ಬಿಟ್ಟುಕೊಡಲಾಗದ ದುಗುಡ ಇವೆಲ್ಲಾ ಸಾಮಾನ್ಯವಾಗಿ ಗೊತ್ತಿರುವ ವಿಷಯಗಳು. ಇವುಗಳನ್ನು ಮೀರಿ ಈ ಪುಸ್ತಕದಲ್ಲಿ ಆಕೆಯ ಇಡಿಯಾದ ವ್ಯಕ್ತಿತ್ವ ದಕ್ಕುತ್ತದೆ.
ಎರಡನೇ ಬಾರಿ ಪಾಂಡವರು ವನವಾಸ ಅಜ್ಞಾತವಾಸ ಮುಗಿಸಿ ಬಂದರೂ ದುರ್ಯೋಧನ ನ್ಯಾಯವಾಗಿ ಕೊಡಬೇಕಾದ ರಾಜ್ಯವನ್ನು ಹಿಂತಿರುಗಿಸದಿದ್ದಾಗ ಸಂಧಾನವನ್ನೂ ಧಿಕ್ಕರಿಸಿದಾಗ ಕೃಷ್ಣನ ಮೂಲಕ ತನ್ನ ಮಕ್ಕಳನ್ನು ಯುದ್ಧಕ್ಕೆ ಪ್ರೇರೇಪಿಸುವ ಸಂದೇಶ ಕಳಿಸುವ ಆಕ್ರೋಶ ಭರಿತ ಅಪರೂಪದ ಕುಂತಿ ಇಲ್ಲಿ ಸಿಗುತ್ತಾಳೆ! ಅದಕ್ಕೂ ಮೊದಲು ಕೃಷ್ಣನೊಡನೆ ಒಬ್ಬೊಬ್ಬ ಮಕ್ಕಳ ಗುಣವಿಶೇಷಣಗಳನ್ನು ನೆನಪಿಸಿಕೊಂಡು ಆಡುವ ಮಾತುಗಳು ಕುಂತಿಯ ಹೆತ್ತೊಡಲ ಸಂಕಟವನ್ನು ಸಶಕ್ತವಾಗಿ ದಾಟಿಸುತ್ತವೆ. ಬಹುಶಃ ಕುಂತಿ ಗಟ್ಟಿ ಮನಸ್ಸು ಮಾಡಿ ಯುದ್ಧದ ಪರ ನಿಲ್ಲದಿದ್ದರೆ ಅಮ್ಮನ ಮಾತನ್ನು ಅಕ್ಷರಶಃ ಪಾಲಿಸುವ ಧರ್ಮರಾಯನೂ ಯುದ್ಧಕ್ಕೆ ಮನಸ್ಸು ಮಾಡುತ್ತಿರಲಿಲ್ಲವೇನೋ ಎಂದೆನಿಸುವಷ್ಟು ಕುಂತಿಯ ಮಾತು ನಿರ್ಣಾಯಕವಾಗಿರುವ ಸನ್ನಿವೇಶ ಈ ಪುಸ್ತಕದಲ್ಲಿದೆ.
ಯುದ್ಧ ಅನಿವಾರ್ಯವಾದಾಗ ಕರ್ಣನ ವಿಷಯದಲ್ಲಿ ತಾಳುವ ನಿರ್ಲಿಪ್ತತೆ, ಕರ್ಣಾವಸಾನದ ನಂತರ ತಾಳುವ ಪಾಪಪ್ರಜ್ಞೆ, ಅದನ್ನು ವ್ಯಾಸರು ಬಗೆಹರಿಸುವ ರೀತಿ, ತನ್ನ ಮಕ್ಕಳಿಗೆ ಅನ್ಯಾಯ ಮಾಡಿದ್ದರೂ ಧೃತರಾಷ್ಟ್ರನ ಮೇಲೆ ಕೋಪವಿಲ್ಲದ ಉದಾರತೆ, ಮಕ್ಕಳನ್ನು ಕಳೆದುಕೊಂಡ ಗಾಂಧಾರಿಯ ಸಂಕಷ್ಟಕ್ಕೆ ಜೊತೆಯಾಗುವ ಸಹೃದಯತೆ, ಕೊನೆಗೆ ಅವರೊಡನೆಯೇ ವಾನಪ್ರಸ್ಥಕ್ಕೆ ತೆರಳಿ ಬದುಕನ್ನು ಮುಗಿಸುವ ಕುಂತಿಯ ಪಾತ್ರ ಸೆಳೆಯುತ್ತದೆ, ಮನಸ್ಸಲ್ಲುಳಿಯುತ್ತದೆ.
ಮೂಲ ಮಹಾಭಾರತವನ್ನು ಅದರ ಆಶಯಕ್ಕೆ ಧಕ್ಕೆ ಬರದಂತೆ ಕರ್ತೃ ಕೃತಿನಿಷ್ಠವಾಗಿ ಕಥೆಗಳ ಮೂಲಕ, ಪಾತ್ರಗಳ ಮೂಲಕ ಮತ್ತೆ ಮರು ನಿರೂಪಿಸುವ ಜಗದೀಶ ಶರ್ಮಾ ರವರ ಶೈಲಿ ಇಷ್ಟವಾಗುತ್ತದೆ.
- ಶ್ವೇತಾ ಹೊಸಬಾಳೆ
"ಆತ್ಮ-ಪರಮಾತ್ಮ, ಭೂತ-ಪ್ರೇತ, ಧರ್ಮ-ಅಧರ್ಮಗಳಿಗೆ ಹೆದರಿ ಬದುಕುವುದು ಸರಿಯಲ್ಲ ಎನ್ನುತ್ತಾರೆ. ಅಂಧಶ್ರದ್ಧೆಯಿಂದ ಮ...
"ಪ್ರಪಂಚದಾದಂತ್ಯ ರೈತರು, ಸಾಮಾನ್ಯ ಜನರು, ಹೆಂಗಸರು, ಮಕ್ಕಳು ಹೇಗೆ ತಮ್ಮದಲ್ಲದ ಯುದ್ಧದಂತಹ, ಕ್ಷಾಮದಂತಹ ಸದಾ ಕಾಡ...
"ಈ ಕೃತಿಯಲ್ಲಿ ವಿಜಯನಗರ ಸಾಮ್ರಾಜ್ಯದ ಶಂಕುಸ್ಥಾಪನೆಯ ವಿವರ, ವಿದ್ಯಾರಣ್ಯರ ಪ್ರಶಂಸೆ, ಕೃಷ್ಣರಾಯ ನಿಗೆ ಮಂತ್ರಿಗಳ ...
©2024 Book Brahma Private Limited.