ಮಾದೊರುಬಾಗನ್ ಎಂಬ ಅರ್ಧನಾರೀಶ್ವರ: ಪ್ರೊ. ಜಯಲಲಿತಾ


ಬಂಡಾರ ಪ್ರಕಾಶನದ ಸಹಯೋಗದಲ್ಲಿ ‘ಬುಕ್ ಬ್ರಹ್ಮ’ ಪ್ರಕಟಿಸುತ್ತಿರುವ ‘ಒಳತಿಳಿ’ ವಾರದ ಓದು ವಿಶೇಷ ವಿಮರ್ಶಾ ಸರಣಿಯಲ್ಲಿ ಮೊದಲ ಭಾಗವಾಗಿ ಪ್ರೊ.ಜಯಲಲಿತಾ ಅವರು ಬರೆದಿರುವ ಅರ್ಧನಾರೀಶ್ವರ ಕೃತಿಯ ವಿಮರ್ಶೆ ನಿಮ್ಮ ಓದಿಗಾಗಿ

ಪೆರುಮಾಳ್ ಮುರುಗನ್ ಅವರ 'ಮಾದೊರುಬಾಗನ್' ಎಂಬ ಹೆಸರಿನ ತಮಿಳು ಕಾದಂಬರಿಯನ್ನು 2010ರಲ್ಲಿ ಕಾಲಚ್ಚುವಡು ಪ್ರಕಾಶನವು ಪ್ರಕಟಿಸಿತು. ಇದನ್ನು ಕೆ. ನಲ್ಲತಂಬಿಯವರು 'ಅರ್ಧನಾರೀಶ್ವರ' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಲಂಕೇಶ್ ಪ್ರಕಾಶನದ ಮೂಲಕ ಈ ಕಾದಂಬರಿ ಕನ್ನಡದ ಅಂಗಳವನ್ನು ತಲುಪಿದೆ.

ಪೆರುಮಾಳ್ ಮುರುಗನ್ ನಾಮಕ್ಕಲ್ ಜಿಲ್ಲೆಯ ತಿರುಚೆಂಗೋಡು ಎಂಬ ಊರಿನಲ್ಲಿ ಜನಿಸಿದವರು. ಇದೇ ಊರಿನ ಪ್ರಮುಖ ದೇವಸ್ಥಾನವೊಂದರಲ್ಲಿ ವರ್ಷಕ್ಕೊಮ್ಮೆ ನಡೆಯುವ ಉತ್ಸವದ ಹದಿನಾಲ್ಕನೇ ದಿನದ ಆಚರಣೆಯೇ ಈ ಕಾದಂಬರಿಯ ಕೇಂದ್ರ ಅಂಶವಾಗಿದೆ. ಏರುವೆಯಿಲ್, ನಿಳಲ್ ಮುಟ್ರಮ್, ಕೂಳ ಮಾದಾರಿ, ಕಂಕಣಮ್ ಕಾದಂಬರಿಗಳ ನಂತರ ಅವರು ಬರೆದ ಐದನೇ ಕಾದಂಬರಿ ಇದಾಗಿದೆ. ಇದರ ಅನುವಾದಕರಾದ ಕೆ. ನಲ್ಲತಂಬಿ ಸಾಕಷ್ಟು ಕೃತಿಗಳನ್ನು ಕನ್ನಡದಿಂದ ತಮಿಳಿಗೆ, ತಮಿಳಿನಿಂದ ಕನ್ನಡಕ್ಕೆ ಅನುವಾದಿಸಿ ಹೆಸರುವಾಸಿಯಾಗಿದ್ದಾರೆ. ನೇಮಿಚಂದ್ರರ ಕಾದಂಬರಿಯನ್ನು (ಯಾದ್ವಶೇಮ್) ತಮಿಳಿಗೆ ಅನುವಾದಿಸಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದಿದ್ದಾರೆ.

ಅರ್ಧನಾರೀಶ್ವರ (ಮಾದೊರು ಬಾಗನ್)ಎಂಬ ಕಾದಂಬರಿಯು ಮಕ್ಕಳಿಲ್ಲದ ದಂಪತಿಗಳಾದ ಪೊನ್ನಾ ಮತ್ತು ಕಾಳಿಯರ ಜೀವನದ ಸುತ್ತಾ ನಡೆಯುವ ಘಟನೆಯನ್ನು ಆಧರಿಸಿ ನಿರೂಪಿತವಾಗಿದೆ. ಈ ಕಾದಂಬರಿಯು ಕೆಲವು ಮಡಿವಂತರಿಗೆ ನಮ್ಮ ಸಂಸ್ಕೃತಿಯ ಅವಹೇಳನದಂತೆ ಕಂಡಿತು. ಹಾಗಾಗಿ ಅವರು ಇದನ್ನು ತೀವ್ರವಾಗಿ ವಿರೋಧಿಸಿದ್ದರಿಂದ ಪೆರುಮಾಳ್ ಮುರುಗನ್ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಇದೇ ಕಾದಂಬರಿಯನ್ನು ವಾಸುದೇವನ್ ಅವರು 'ಒನ್‌ಪಾರ್ಟ್ ವುಮೆನ್' ಎಂಬ ಹೆಸರಿನಲ್ಲಿ ಇಂಗ್ಲೀಷಿಗೆ ಅನುವಾದಿಸಿದ್ದಾರೆ. ಈ ಅನುವಾದಕ್ಕೆ 2016ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ಲೇಖಕನೊಬ್ಬ ಯಾವಾಗಲೂ ತಾನು ರಚಿಸುವ ಕೃತಿಯಲ್ಲಿ ಎಲ್ಲೊ ಒಂದೆಡೆ ಪರೋಕ್ಷವಾಗಿಯಾಗಿದರೂ ಭಾಗಿಯಾಗಿಯೇ ಇರುತ್ತಾನೆ ಎಂಬ ಅಭಿಪ್ರಾಯವಿದೆ. ಇದರಲ್ಲೂ ಮುರುಗನ್ ಅವರು ಪೊನ್ನಾಳ್ ಮತ್ತು ಮುಖವರಿಯದ ಹೆಂಗಳೆಯರ ಮೂಲಕ ತಮ್ಮ ಭಾವನೆಗಳನ್ನು ಹೊರಹಾಕಿದ್ದಾರೆ. ಪಾತ್ರಗಳನ್ನು ಸಮರ್ಥಿಸಿಕೊಳ್ಳುವಲ್ಲಿಯೇ ತಮ್ಮ ವಿಚಾರಗಳನ್ನು ಸಮರ್ಥಿಸಿಕೊಳ್ಳುತ್ತಾರೆ. ಕಥೆಯ ಹೂರಣ ಬಹಳ ಸರಳವಾದದ್ದು. ಆದರೆ ಅದು ಮುಂದಿಡುವ ಮೌಲ್ಯಗಳ ಸಂಘರ್ಷ ಚಿಂತನಾರ್ಹವಾದುದು. ಪೊನ್ನಾ ಮತ್ತು ಕಾಳಿಯರ ಪ್ರೇಮ ಆದರ್ಶವಾದುದು. ಮದುವೆಯಾಗಿ ಹನ್ನೆರಡು ವರ್ಷಗಳಾದರೂ ಮಕ್ಕಳಿಲ್ಲ ಎಂಬ ಕೊರತೆ ಬಿಟ್ಟರೆ, ಬೇರಾವ ಚಿಂತೆಯೂ ಇವರ ಪ್ರೀತಿಗೆ ತಡೆಯಾಗಿಲ್ಲ. ಆದರೆ ಸಮಾಜದ ನಿರೀಕ್ಷೆ, ಬಂಧುಬಾಂಧವರ ಅವಹೇಳನ ಅವರ ನೆಮ್ಮದಿಯನ್ನು ಕೆಡಿಸುತ್ತದೆ. ಈ ವಿಷಯದಲ್ಲಿ ಕಾಳಿ ಸಹಾ ಹೆಂಡತಿಯಷ್ಟೇ ದುಃಖಿಯಾಗಿರುತ್ತಾನೆ. ಅರ್ಧನಾರೀಶ್ವರ ಎಂಬ ಪರಿಕಲ್ಪನೆಯೇ ಸಮಸಮಾಜದ, ಲಿಂಗತಾರತಮ್ಯವಿಲ್ಲದ ಸ್ಥಿತಿಯ ಸಂಕೇತ. ಹಾಗೆಯೇ ಇಲ್ಲಿ ಕಾಳಿ ಮತ್ತು ಪೊನ್ನಾಳ ಆರಂಭದ ಪ್ರೀತಿಯ ಜೀವನ, ಮಕ್ಕಳಿಲ್ಲದ ಕೊರಗಿನ ಸಂದರ್ಭ ಸುಖ ದುಃಖಗಳ ಸಮಪಾಲು. ಈ ಸಂದರ್ಭದಲ್ಲಿ ಹೆಣ್ಣು ಮತ್ತು ಗಂಡಿನ ಸಮಚಲನೆಯನ್ನು ಈ ಕಾದಂಬರಿ ಪ್ರತಿಪಾದಿಸುತ್ತದೆ. ಆದರೆ ಈ ಸಮಚಲನೆ ಎಲ್ಲಾ ಕಡೆಯೂ ನಿರೀಕ್ಷಿಸಲಾಗದು, ನಿರೀಕ್ಷಿಸಲೂಬಾರದು ಎಂಬುದನ್ನು ಈ ಕಾದಂಬರಿಯಲ್ಲಿ ಗಮನಿಸಬಹುದು. ಮದುವೆಗೆ ಮೊದಲು ಉತ್ಸವದ ಹದಿನಾಲ್ಕನೇ ದಿನದಲ್ಲಿ ಭಾಗವಹಿಸುತ್ತಿದ್ದ ಕಾಳಿ, ತನ್ನ ಹೆಂಡತಿ ಅದೇ ಹದಿನಾಲ್ಕನೇ ದಿನದ ಉತ್ಸವಕ್ಕೆ ಭಾಗವಹಿಸುವುದನ್ನು ಒಪ್ಪಿಕೊಳ್ಳಲು ಸಿದ್ಧನಾಗುವುದಿಲ್ಲ.

ಪೊನ್ನಾ ಮಗುವನ್ನು ಪಡೆಯಲು ತನ್ನ ಮೇಲೆ ಹೇರಲಾದ ಅಷ್ಟೂ ಪರಿಹಾರಗಳನ್ನೂ ಮಾಡಿ ಮುಗಿಸುತ್ತಾಳೆ. ಫಲಿತಾಂಶ ಮಾತ್ರ ಸೊನ್ನೆ. ಕೊನೆಗೆ ಅವಳ ತಾಯಿ, ಅಣ್ಣ, ಅತ್ತೆ ಎಲ್ಲರೂ ಒಂದು ಪರಿಹಾರವನ್ನು ಅವಳ ಮುಂದಿಡುತ್ತಾರೆ. ಗಂಡನಾದ ಕಾಳಿಗೆ ಸಮ್ಮತವಿಲ್ಲದಿದ್ದರೂ, ಸೊನ್ನಾ ಕೊನೆಗೆ ಆ ದಾರಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾಳೆ. ಅದೇ ನಿಯೋಗ ಪದ್ಧತಿ. ಅಂದರೆ ತಿರುಚೆಂಗೋಡಿನ ಅರ್ಧನಾರೀಶ್ವರ ದೇವಾಲಯದಲ್ಲಿ ನಡೆಯುವ ಉತ್ಸವದ ಹದಿನಾಲ್ಕನೆಯ ದಿನ ಮದುವೆಯಾಗಿ ಮಕ್ಕಳಿಲ್ಲದ ಹೆಂಗಸರು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಆ ದಿನ ಯಾವ ಹೆಣ್ಣು ಯಾವ ಗಂಡನ್ನಾದರೂ ಕೂಡಬಹುದು. ಮದುವೆಯಾದ ಹೆಂಗಸರಿಗೆ ಮಾತ್ರ ಈ ಅವಕಾಶ. ಆದರೆ ಗಂಡಸಿಗೆ ಆ ರೀತಿಯ ನಿಬಂಧನೆಯೇನೂ ಇಲ್ಲ. (ಇಲ್ಲೂ ಸಮಚಲನೆಯನ್ನು ಮೀರಿರುವುದನ್ನು ಕಾಣಬಹುದು)

ಪ್ರಾಚೀನ ಹಿಂದೂ ಸಂಪ್ರದಾಯದಲ್ಲಿ ಮಹಿಳೆಯೊಬ್ಬಳು ಪತಿಯಿಂದ ತನಗೆ ಮಕ್ಕಳಾಗದಿದ್ದರೆ ಪೂಜ್ಯ ವ್ಯಕ್ತಿಯೊಬ್ಬನಿಂದ ಮಗುವನ್ನು ಪಡೆಯುವ ಪದ್ಧತಿ ಸರ್ವರಿಂದಲೂ ಮಾನ್ಯವಾದ ಪದ್ಧತಿಯಾಗಿತ್ತು. ಇದನ್ನೇ ನಿಯೋಗ ಪದ್ಧತಿ ಎನ್ನುತ್ತಿದ್ದರು. ಈ ಕಾದಂಬರಿಯಲ್ಲಿಯೂ 'ಹದಿನಾಲ್ಕನೇ ದಿನದಂದು ಕೂಡುವ, ಕಾಣುವ ಗಂಡಸರೆಲ್ಲರೂ ಸ್ವಾಮಿಗಳೇ' ಎಂಬ ಮಾತಿನ ಬಳಕೆಯಾಗಿದೆ. ಇದು ಪರೋಕ್ಷವಾಗಿ ಪೂಜ್ಯನಿಂದ ಮಗುವನ್ನು ಪಡೆಯಬಹುದೆಂಬ ಪ್ರಾಚೀನ ಪದ್ಧತಿಯನ್ನೇ ನೆನಪಿಗೆ ತರುತ್ತದೆ. ಮಹಾಭಾರತದಲ್ಲಿ ಸತ್ಯವತಿ ತನ್ನ ಹಿರಿಯ ಮಗನಾದ ವ್ಯಾಸನನ್ನು ತನ್ನ ಕಿರಿಯ ಮಗನಾದ ವಿಚಿತ್ರವೀರ್ಯನ ವಿಧವಾ ಪತ್ನಿಯರಾದ ಅಂಬಿಕೆ, ಅಂಬಾಲಿಕೆಯರೊಡನೆ ನಿಯೋಗ ಮಾಡಲು ಕೇಳಿಕೊಳ್ಳುವ ಪ್ರಸಂಗದಲ್ಲಿ ಇದರ ಪ್ರಸ್ತಾಪವನ್ನು ಕಾಣಬಹುದು. ವೇದಕಾಲದ ನಂತರ ಆ ಪದ್ಧತಿ ಬಳಕೆಗೆ ಬರಲಿಲ್ಲ ಎಂಬ ಅಭಿಪ್ರಾಯಗಳೂ ಇವೆ. ಪುರಾಣ, ಸಂಪ್ರದಾಯ, ಬುಡಕಟ್ಟು ಪದ್ಧತಿಗಳು, ಕಾಪಾಲಿಕ, ನಾಥಪಂಥಗಳ ಕಡೆಗೆ ಕಣ್ಣು ಹಾಯಿಸಿದರೆ ನಾಗರೀಕ ಪರಂಪರೆ ನಿಷಿದ್ಧವೆಂದು ಭಾವಿಸಿರುವ ಈ ಬಗೆಯ ಹಲವು ಅಂಶಗಳು ಅಲ್ಲಿ ಸಹಜವಾಗಿ ಸ್ವೀಕರಿಸಲ್ಪಟ್ಟಿರುವುದು ಗೋಚರಿಸುತ್ತದೆ. ಇದೇ ನಿಯೋಗ ಪದ್ಧತಿ ಆಧುನಿಕ ಸಂದರ್ಭದಲ್ಲಿ ವೀರ್ಯದಾನದ ರೂಪದಲ್ಲಿ ಮಾರ್ಪಟ್ಟಿದೆ ಎಂದರೂ ತಪ್ಪಾಗಲಾರದು. ಅಮೇರಿಕಾದಂತಹ ರಾಷ್ಟ್ರಗಳು ಇದನ್ನು ಅಧಿಕೃತವಾಗಿ ಒಪ್ಪಿಕೊಂಡು ಕಾನೂನು ಜಾರಿ ಮಾಡಿವೆ.

2003ರಲ್ಲಿ ಅಮೋಲ್‌ ಪಾಲೇಕರ್ ನಿರ್ದೇಶಿಸಿದ 'ಅನಹತ್' ಎಂಬ ಮರಾಠಿ ಸಿನಿಮಾ ಕೂಡಾ ಇದೇ ನಿಯೋಗ ಪದ್ಧತಿಯ ಹಿನ್ನೆಲೆಯನ್ನು ಹೊಂದಿದೆ. ಮಲ್ಲ ಸಾಮ್ರಾಜ್ಯದ ರಾಜಧಾನಿಯಾದ ಶ್ರಾವಸ್ತಿಯಲ್ಲಿದ್ದ ಮಲ್ಲದ ರಾಜನಿಗೆ ಉತ್ತರಾಧಿಕಾರಿಯನ್ನು ಹುಟ್ಟಿಸುವ ಸಾಮರ್ಥ್ಯವಿಲ್ಲದಾಗ ತನ್ನ ಮಡದಿ ಶೀಲಾವತಿಯನ್ನು ಒಂದು ರಾತ್ರಿಯ ಮಟ್ಟಿಗೆ ಸಂಗಾತಿಯೊಬ್ಬನೊಡನೆ ನಿಯೋಗ ಪದ್ಧತಿಯ ಮೂಲಕ ಕೂಡಲು ಒತ್ತಾಯಿಸಲಾಗುತ್ತದೆ. ಏಕಲವ್ಯ ಎಂಬ ಹೆಸರಿನ ಅಮಿತಾಬ್ ಬಚ್ಚನ್ ನಟಿಸಿರುವ ಸಿನಿಮಾದಲ್ಲೂ ಜಯವರ್ಧನ್ ಎಂಬ ರಾಜನಿಗೆ ಮಕ್ಕಳಾಗದೇ ಇರುವಾಗ ಅವನ ಹೆಂಡತಿಯನ್ನು ಪುತ್ರ ಕಾಮೇಷ್ಟಿ ಯಾಗದ ಸಲುವಾಗಿ ಗಂಗೋತ್ರಿಗೆ ಕಳಿಸುತ್ತಾನೆ. ರಾಜನ ತಾಯಿಯು ಅವನ ಹೆಂಡತಿಯೊಡನೆ ಹೋಗುತ್ತಾಳೆ. ಅಲ್ಲಿ ಸಂತನೊಬ್ಬ ಬೀಜದಾನವನ್ನು ಮಾಡಿದನೆಂದು ಜಯವರ್ಧನನ ತಾಯಿ ಹೇಳುತ್ತಾಳೆ. ರಾಣಿಗೆ ಅವಳಿ ಮಕ್ಕಳು ಜನಿಸುತ್ತಾರೆ. ಕೊನೆಗೆ ರಾಜನಿಗೆ ತನ್ನ ಹೆಂಡತಿ ಗರ್ಭ ಧರಿಸಿದ್ದು ಸಂತನಿಂದಲ್ಲ, ತನ್ನ ರಕ್ಷಕಭಟನಿಂದ ಎಂಬ ನಿಜವು ತಿಳಿಯುತ್ತದೆ. ಹಾಸಿಗೆ ಹಿಡಿದ ಹೆಂಡತಿಯ ಕುತ್ತಿಗೆ ಹಿಸುಕಿ ಕೊಲ್ಲುತ್ತಾನೆ. ರಕ್ಷಕಭಟನನ್ನು ಕೊಲ್ಲಲು ಸಂಚು ಹೂಡುತ್ತಾನೆ. ಇಲ್ಲಿ ತನ್ನ ಹೆಂಡತಿಯೊಡನೆ ಕೂಡಿದ್ದು ತನ್ನ ಸೇವಕ ಎಂಬ ಸತ್ಯ ರಾಜನಿಗೆ ಅರಗಿಸಿಕೊಳ್ಳಲಾಗುವುದಿಲ್ಲ. ಅರ್ಧನಾರೀಶ್ವರ ಕಾದಂಬರಿಯಲ್ಲೂ ಕಾಳಿಗೆ ತನ್ನ ಹೆಂಡತಿಯು ಅಸ್ಪೃಶ್ಯನನ್ನು ಆಯ್ಕೆ ಮಾಡಿಕೊಂಡರೆ ಎಂಬ ಭಯವು ಆವರಿಸುವುದನ್ನೂ ಕಾಣಬಹುದು.

ಕಾಳಿ ಎರಡನೆಯ ಮದುವೆಗೂ ಸಮ್ಮತಿಸುವುದಿಲ್ಲ. ಅದಕ್ಕೆ ಎರಡು ಕಾರಣಗಳನ್ನು ಊಹಿಸಬಹುದು. ಒಂದು ಅವನಿಗೆ ಮಡದಿಯ ಮೇಲಿದ್ದ ಪ್ರೀತಿ, ಮತ್ತೊಂದು ಎರಡನೆಯ ಮದುವೆಯಲ್ಲೂ ತನಗೆ ಮಕ್ಕಳಾಗದಿದ್ದರೆ ತನ್ನ ಪುರುಷತ್ವದ ಬಗ್ಗೆ ಜನರು ಆಡಿಕೊಳ್ಳುವರೆಂಬ ಭಯ. ಮಕ್ಕಳನ್ನು ಹುಟ್ಟಿಸುವುದೆಂಬುದು ಪಿತೃಪ್ರಧಾನ ಸಂಸ್ಕೃತಿಯಲ್ಲಿ ಗಂಡಿನ ಪೌರುಷತ್ವವನ್ನು ಜಗತ್ತಿಗೆ ತೋರುವುದಾಗಿದೆ. ಹಾಗಾಗಿಯೇ ದೇವರ ಜಾತ್ರೆಯ ಹೆಸರಲ್ಲಿ ಮಕ್ಕಳನ್ನು ಪಡೆಯಲು, ಹೆಣ್ಣಿಗೆ ಅನ್ಯ ಗಂಡಿನೊಡನೆ ಕೂಡಲು ಒಂದು ಅನಧಿಕೃತ ಪರವಾನಗಿಯನ್ನು ನೀಡಿಬಿಡುತ್ತಾರೆ.

ಪೊನ್ನಾ ಮಕ್ಕಳಿಲ್ಲದ ಬಂಜೆ ಎಂಬ ಅವಹೇಳನವನ್ನು ಸಹಿಸಲಾಗದೆ ಮಗುವಿಗಾಗಿ ಮತ್ತೊಬ್ಬನ ಜೊತೆ ಕೂಡಲು ಸಿದ್ಧಳಾಗುತ್ತಾಳೆ. ಇದು ಅವಳಿಗೆ ಅನಿವಾರ್ಯವೂ ಹೌದು. ಏಕೆಂದರೆ ಮಕ್ಕಳಾಗದಿದ್ದರೆ ಬಂಜೆ ಎಂದು ಸಮಾಜವು ಅವಹೇಳನ ಮಾಡುವುದಲ್ಲದೆ, ತನ್ನ ಗಂಡನಾದ ಕಾಳಿಯನ್ನೂ ಸಹಾ ‘ಬರಡ'ನೆಂದು ಕರೆಯುವುದು ಅವಳಿಗೆ ಹಿಡಿಸದ ವಿಷಯ. 'ಕೆಲವು ಹಸುಗಳ ಗ್ರಹಚಾರವೇ ಹಾಗೆ ಅಳಿಯಂದ್ರೆ ಎಷ್ಟು ಸಲ ಹಾಯಿಸಿದರೂ ಗಬ್ಬಾನೆ ಆಗಲ್ಲ, ನೀವೇನೂ ಯೋಚಿಸೋ ಹಸೂನ ಬದಲಾಯಿಸಿ ಬಿಡಿ' ಎನ್ನುವ ಸೆಲ್ಲಪ್ಪಗೌಂಡರ್‌ನ ಮಾತು ತನ್ನನ್ನು ಉದ್ದೇಶಿಸಿಯೇ ಎಂಬುದು ಪೊನ್ನಾಳಿಗೆ ಚೆನ್ನಾಗಿ ಗೊತ್ತು. ಇದಕ್ಕೆಲ್ಲಾ ಪರಿಹಾರವಾಗಿಯೇ ಆಕೆ ಜಾತ್ರೆಯಲ್ಲಿ ಸಿಗುವ ಸ್ವಾಮಿಯನ್ನು ಹುಡುಕಿ ಹೊರಡುತ್ತಾಳೆ. ಕೊನೆಗೂ ಕತ್ತಲ ರಾತ್ರಿಯಲ್ಲಿ ಅವಳಿಗೊಬ್ಬ ಸ್ವಾಮಿ ಸಿಕ್ಕೇ ಬಿಡುತ್ತಾನೆ. ಆ ಸಂದರ್ಭದಲ್ಲಿ ಅವಳ ಮನಸ್ಸಿನಲ್ಲಾಗುವ ತುಮುಲ, ಅಳುಕು, ಕಾಳಿಯ ನೆನಪು ಇವೆಲ್ಲವನ್ನೂ ಕಾದಂಬರಿಕಾರರು ಹೆಣ್ಣಿನ ನೋಟದಲ್ಲಿಯೇ ಕಂಡಿರಿಸಿದ್ದಾರೆ. ಅರಣ್ಯವಾಸಿಗಳು ಮತ್ತು ನಾಗರೀಕ ಜನರ ನಡುವಿನ ಸೂಕ್ಷ್ಮ ಸಂಘರ್ಷಗಳು ಈ ಕಾದಂಬರಿಯ ಒಳಗೆ ಪಡಿಮೂಡಿವೆ. ಹಲವು ಗಂಡುಗಳ ವಿಭಿನ್ನ ಮಾದರಿಗಳನ್ನು, ಹೆಣ್ಣಿನ ವಿಭಿನ್ನ ಮಾದರಿಗಳನ್ನು ಹಲವು ಪಾತ್ರಗಳ ಮೂಲಕ ಈ ಕಾದಂಬರಿಯು ಚಿತ್ರಿಸಿದೆ.

ಪೊನ್ನಾಳ ಗಂಡನಾದ ಕಾಳಿಗೆ ತನ್ನ ಹೆಂಡತಿ ಮತ್ತೊಬ್ಬನೊಡನೆ ಕೂಡುವುದು ಸಹಿಸಲಾರದ ವಿಷಯವಾಗುತ್ತದೆ. ಅವಳು ತನ್ನವಳೆಂಬ ಹಕ್ಕಿನ ಭಾವನೆಯೂ ಇದಕ್ಕೆ ಕಾರಣವಾಗಿದೆ. ತನ್ನ ಹೆಂಡತಿ ಇದಕ್ಕೆ ಒಪ್ಪುವುದಿಲ್ಲ ಎಂಬದು ಕಾಳಿಯ ಅಚಲವಾದ ನಂಬಿಕೆ. ಆದರೆ ಹೆಂಡತಿಯನ್ನು ಇದರ ಬಗ್ಗೆ ಕೇಳಿದಾಗ “ಈ ಹಾಳ್ಮಗೂಗಾಗ್ ನೀನ್ ಹೋಗೊಂದ್ರೆ ಹೋಗ್ತಿನಿ' ಎನ್ನುತ್ತಾಳೆ. ಇದು ಅವನ ನಿರೀಕ್ಷೆಗೆ ಮೀರಿದ ಉತ್ತರ. ಅಂದಿನಿಂದ ಕಾಳಿಯ ಮನಸ್ಥಿತಿಯೇ ಬದಲಾಗುತ್ತದೆ. ಹೆಂಡತಿ ಪ್ರತಿ ತಿಂಗಳು ಮುಟ್ಟಾಗುವುದೇ ಅವಳ ಪಾವಿತ್ರ್ಯತೆಗೆ ಆಧಾರವಾಗಿ ಬಿಡುತ್ತದೆ. 'ಮುಟ್ಟಾಗಿ ಅವಳು ಅಳುತ್ತಾ ಬಂದರೆ ಈಗ ಒಳಗೊಳಗೇ ಕಾಳಿಗೆ ಸಂತೋಷವಾಗುತ್ತದೆ. ಮುಟ್ಟಾಗುತ್ತಿರುವವರೆಗೆ ಅವಳು ನಂಬಿಕೆಗೆ ಅರ್ಹಳು' ಎಂಬ ಸ್ಥಿತಿಗೆ ತಲುಪುತ್ತಾನೆ. ಆದರೆ ಪೊನ್ನಾ ತನ್ನ ಮಾತನ್ನು ಮೀರಿ ಜಾತ್ರೆಯ ಹದಿನಾಲ್ಕನೇ ದಿನದ ಆಚರಣೆಗೆ ಹೋದ ವಿಷಯ ಕಾಳಿಗೆ ತಿಳಿದ ನಂತರ ಅವನು ಮಾನಸಿಕವಾಗಿ ಬಹಳ ನೋವನ್ನು ಅನುಭವಿಸುತ್ತಾನೆ. ತನ್ನ ಮಾತನ್ನು ಮೀರಿ ಹೋದಳೆಂದು ಆವೇಶಕ್ಕೆ ಒಳಗಾಗುತ್ತಾನೆ. ಕಥೆ ಅಲ್ಲಿಗೆ ಮುಗಿಯುತ್ತದೆ. ಕಾದಂಬರಿಕಾರರು ಉದ್ದೇಶಪೂರ್ವಕವಾಗಿಯೇ ಕಥೆಯನ್ನು ಅಪೂರ್ಣವಾಗಿರಿಸಿದ್ದಾರೆ. ಅಂದರೆ ಪ್ರತಿಯೊಬ್ಬ ಓದುಗನು ಇಲ್ಲಿ ಸ್ವತಂತ್ರನಾಗಿ ತನಗೆ ಸರಿ ಎನಿಸಿದ ಅಂತ್ಯವನ್ನು ಕಾದಂಬರಿಗೆ ಕೊಟ್ಟುಕೊಳ್ಳುವ ಅವಕಾಶವನ್ನು ಪಡೆದುಕೊಳ್ಳುತ್ತಾನೆ.

ಮೂಲ ತಮಿಳು ಮತ್ತು ಕನ್ನಡ ಅನುವಾದ ಎರಡನ್ನೂ ಓದಿರುವ ನನಗೆ ಕೆ.ನಲ್ಲತಂಬಿಯವರು ಬಳಸಿರುವ ಆಪ್ತವಾದ ಭಾಷೆ, ನಿರರ್ಗಳವಾಗಿ ಓದಿಸಿಕೊಂಡು ಹೋಗುವ ಶೈಲಿ, ಕೆಲವು ಪದಗಳನ್ನು ಮೂಲದಿಂದ ಹಾಗೆಯೇ ಇಟ್ಟು ಅದಕ್ಕೆ ಅಡಿಟಪ್ಪಣಿಯಲ್ಲಿ ವಿವರಣೆ ನೀಡಿರುವ ತಂತ್ರ ಬಹಳ ಇಷ್ಟವಾಯಿತು. ಮೂಲಕ್ಕೆ ನಿಷ್ಠೆಯಿಂದ ಅನುವಾದಿತವಾಗಿರುವ ಅರ್ಧನಾರೀಶ್ವರ ಕಾದಂಬರಿಯು ಸೋದರಭಾಷೆಯೊಂದರ ವಿಭಿನ್ನ ಸಂಸ್ಕೃತಿಯನ್ನು ಸರಳ ಮತ್ತು ಅನನ್ಯ ರೀತಿಯಲ್ಲಿ ಪರಿಚಯಿಸುವಲ್ಲಿ ಯಶಸ್ವಿಯಾಗಿದೆ. ಇದನ್ನು ಕನ್ನಡಕ್ಕೆ ತಂದ ಅನುವಾದಕರಿಗೆ, ಪ್ರಕಾಶಕರಿಗೆ ಧನ್ಯವಾದಗಳು.

MORE FEATURES

'ಹೆಗಲು': ತ್ಯಾಗ, ನಿಸ್ವಾರ್ಥತೆಯ ಅಪರೂಪದ ಜೀವನಗಾಥೆ

14-12-2025 Bengaluru

"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...

ಅನುಕ್ಷಣ ಅನುಭವಿಸಿ: ಸಮಯ ನಿರ್ವಹಣೆಯ ಮಾರ್ಗದರ್ಶಿ

14-12-2025 BENGALURU

ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...

ಮಕ್ಕಳ ಕಥಾಸಾಹಿತ್ಯ ಸಂವೇದನೆಯ ಹೊಸ ಹೆಜ್ಜೆಗಳು.......

13-12-2025 ಬೆಂಗಳೂರು

"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...