ಮಹಿಳಾ ರಂಗಭೂಮಿ ಪರಂಪರೆ

Date: 15-11-2021

Location: ಬೆಂಗಳೂರು


‘ವೃತ್ತಿರಂಗಭೂಮಿಯಲ್ಲಿ ಕಲಾವಿದೆಯರಾಗಿ ಮಹಿಳೆಯರು ಸಾಧಿಸಿದ ಸಾಧನೆ ಬಹುದೊಡ್ಡದು. ವೃತ್ತಿರಂಗ ಕಲಾವಿದೆಯರ ಬಗೆಗೆ ಈಗಾಗಲೇ ಕೆಲವು ಕೃತಿಗಳು ಪ್ರಕಟವಾಗಿವೆ. ಇಂದು ರಂಗಕಲಾವಿದೆಯರ ಪ್ರಾದೇಶಿಕ ರಂಗಚರಿತ್ರೆಗಳನ್ನು ಕಟ್ಟಿಕೊಳ್ಳಬೇಕಾಗಿದೆ’ ಎನ್ನುತ್ತಾರೆ ಲೇಖಕ ಡಾ. ಬಸವರಾಜ ಸಬರದ. ಅವರು ‘ಮಹಿಳಾ ರಂಗಭೂಮಿ’ ಹೆಸರಿನಲ್ಲಿ ಬರೆಯುತ್ತಿರುವ ಮಹತ್ವದ ಅಂಕಣಕ್ಕೊಂದು ಅರ್ಥಪೂರ್ಣ ಪ್ರಾಸ್ತಾವಿಕ ಬರಹ ಇಲ್ಲಿದೆ.

ರಂಗಭೂಮಿಯೊಂದು ವಿಶ್ವವಿದ್ಯಾಲಯವಿದ್ದಂತೆ, ಇದರ ವ್ಯಾಪ್ತಿ ತುಂಬ ದೊಡ್ಡದು. ಪ್ರಾರಂಭದಲ್ಲಿ ಮೂಕಾಭಿನಯದ ಮೂಲಕ ಹುಟ್ಟಿಕೊಂಡ ರಂಗಭೂಮಿ ಇಂದು ವೈವಿಧ್ಯಮಯ ರೀತಿಯಲ್ಲಿ ಬೆಳೆದುನಿಂತಿದೆ. ರಂಗಭೂಮಿಯಲ್ಲಿ ಅನೇಕ ಪ್ರಕಾರಗಳಿವೆ. ವಿವಿಧ ಪ್ರಯೋಗಗಳಾಗಿವೆ. ಅಧ್ಯಯನದ ಅನುಕೂಲಕ್ಕಾಗಿ ಜನಪದ ರಂಗಭೂಮಿ, ವೃತ್ತಿರಂಗಭೂಮಿ ಮತ್ತು ಹವ್ಯಾಸಿರಂಗಭೂಮಿಯೆಂಬ ವರ್ಗೀಕರಣವಿದ್ದರೂ, ಇದರೊಳಗಡೆ ಮತ್ತೆ ಅನೇಕ ವಿಭಾಗಗಳಿವೆ. ಜನಪದ ರಂಗಭೂಮಿಯಲ್ಲಿ ಧರ್ಮ-ನೀತಿ-ಆದರ್ಶದಂತಹ ಮೌಲ್ಯಗಳು ಪ್ರಧಾನವಾದರೆ, ವೃತ್ತಿರಂಗಭೂಮಿಯಲ್ಲಿ ಮನರಂಜನೆ ಮುಖ್ಯವಾಯಿತು. ಹವ್ಯಾಸಿ ರಂಗಭೂಮಿಯು, ಜನಸಾಮಾನ್ಯರ ಶಾಲೆ-ಕಾಲೇಜಿನಂತಾಗಿ ಸಾಮಾಜಿಕ ಜಾಗೃತಿಯನ್ನುಂಟುಮಾಡಿತು. ಇಂದು ರಂಗಭೂಮಿ ಹೊಸ  ತಂತ್ರಜ್ಞಾನದೊಂದಿಗೆ ಹೊಸ ಆವಿಷ್ಕಾರಗಳೊಂದಿಗೆ ಬೆಳೆದುನಿಂತಿದೆ.

ಈ ಮೂರೂ ರಂಗಭೂಮಿಗಳನ್ನು ಕುರಿತಂತೆ ಈಗಾಗಲೇ ಅನೇಕ ಕೃತಿಗಳು ಪ್ರಕಟವಾಗಿವೆ, ಚರ್ಚೆಗಳು ನಡೆದಿವೆ. ಆದರೆ ಮಹಿಳಾ ರಂಗಭೂಮಿಯನ್ನು ಕುರಿತಂತೆ ಹೆಚ್ಚಿನ ಚರ್ಚೆ ನಡೆದಿಲ್ಲ. ಆಧುನಿಕ ಸಾಹಿತ್ಯದ ಸಂಧರ್ಭದಲ್ಲಿ ಮಹಿಳೆಯರು ಕಥೆ-ಕಾದಂಬರಿ ಪ್ರಕಾರಗಳಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಆದರೆ ರಂಗಭೂಮಿಯಲ್ಲಿ ನಾಟಕರಚನೆಗೆ ಸಂಬಂಧಿಸಿದಂತೆ ಅಂತಹ ದೊಡ್ಡಸಾಧನೆ ಕಾಣಿಸುವುದಿಲ್ಲ. ಆದರೆ ಇತ್ತೀಚಿನ ದಶಕಗಳಲ್ಲಿ ಮಹಿಳೆ ಅನೇಕ ಮಹತ್ವದ ನಾಟಕ ಕೃತಿಗಳನ್ನು ಕೊಟ್ಟಿದ್ದಾಳೆ. ಅಂತಹ ನಾಟಕಗಳನ್ನು ಕುರಿತು ಚರ್ಚಿಸುವುದೇ ಈ ಲೇಖನದ ಉದ್ದೇಶವಾಗಿದೆ.

ಜನಪದ ರಂಗಭೂಮಿಯಲ್ಲಿ ಯಕ್ಷಗಾನ ಮತ್ತು ಬಯಲಾಟ ರಂಗಪ್ರಯೋಗಗಳಿಗೆ ಸಂಬಂಧಿಸಿದಂತೆ ಮಹಿಳೆಯ ಪಾತ್ರ ತುಂಬ ಗೌಣವಾಗಿದೆ. ಆದರೆ ಸಣ್ಣಾಟ ಪ್ರಕಾರದಲ್ಲಿ ಆಕೆಯ ಸಾಧನೆ ಗಮನಿಸುವಂತಿದೆ. ಸಣ್ಣಾಟಗಳಲ್ಲಿ ಅನೇಕ ಮಹಿಳೆಯರು ದೊಡ್ಡ ದೊಡ್ಡ ಕಲಾವಿದೆಯರಾಗಿ ಬೆಳೆದುನಿಂತಿದ್ದಾರೆ. ಆದರೆ ಸಣ್ಣಾಟಗಳ ರಚನೆಗೆ ಮಹಿಳೆ ಇಂದಿಗೂ ಕೈಹಾಕಿಲ್ಲ. ಕೃಷ್ಣಪಾರಿಜಾತ ಮತ್ತು ಸಂಗ್ಯಾಬಾಳ್ಯಾದಂತಹ ಸಣ್ಣಾಟಗಳಲ್ಲಿ ಮಹಿಳೆ, ಕಲಾವಿದೆಯಾಗಿ-ರಂಗನಟಿಯಾಗಿ ಬಹುದೊಡ್ಡ ಸಾಧನೆಯನ್ನು ಮಾಡಿದ್ದಾಳೆ. ಅದೇ ರೀತಿ ವೃತ್ತಿರಂಗಭೂಮಿಯಲ್ಲಿ ಕಲಾವಿದೆಯಾಗಿ ಬೆಳೆದುನಿಂತಿದ್ದಾಳೆ. ಜನಪದ ರಂಗಭೂಮಿಗೆ ಸಂಬಂಧಿಸಿದ ಕೃತಿಗಳನ್ನು ರಚನೆ ಮಾಡದಿದ್ದರೂ, ವೃತ್ತಿರಂಗಭೂಮಿಯ ನಾಟಕಗಳನ್ನು ರಚಿಸಿದ್ದಾಳೆ. ಇನ್ನು ಹವ್ಯಾಸಿ ರಂಗಭೂಮಿಯಲ್ಲಿ ನಟಿಯಾಗಿ-ನಿರ್ದೇಶಕಿಯಾಗಿ ಪಾಲ್ಗೊಳ್ಳುವುದರ ಜೊತೆಗೆ ನಾಟಕಕಾರಳಾಗಿಯೂ ಗಮನ ಸೆಳೆದಿದ್ದಾಳೆ. ಹೀಗೆ ಜನಪದರಂಗಭೂಮಿ-ವೃತ್ತಿರಂಗಭೂಮಿ-ಹವ್ಯಾಸಿರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಮಹಿಳಾ ರಂಗಸಾಧ್ಯತೆಗಳನ್ನು ಕಟ್ಟಿಕೊಡುವುದೇ ಮಹಿಳಾ ರಂಗಭೂಮಿಯಾಗಿದೆ. ಈ ಲೇಖನದಲ್ಲಿ ಮಹಿಳೆಯರ ರಂಗಕೃತಿಗಳಿಗೆ ಸಂಬಂಧಿಸಿದಂತೆ ಮಾತ್ರ ಚರ್ಚಿಸಲಾಗಿದೆ. 

ವೃತ್ತಿರಂಗಭೂಮಿಗೆ ಸಂಬಂಧಿಸಿದಂತೆ ಒಂದಿಬ್ಬರು ಮಹಿಳೆಯರು ಮಾತ್ರ ನಾಟಕಗಳನ್ನು ರಚಿಸಿದ್ದಾರೆ. ಆದರೆ ಕಲಾವಿದೆಯರಾಗಿ ಅನೇಕ ಮಹಿಳೆಯರು ಬಹುದೊಡ್ಡ ಸಾಧನೆಯನ್ನು ಮಾಡಿದ್ದಾರೆ. ಹವ್ಯಾಸಿರಂಗಭೂಮಿಯಲ್ಲಿ ಅನೇಕ ನಾಟಕಗಳು ರಚನೆಯಾಗಿವೆ. ಅವುಗಳ ವರ್ಗೀಕರಣವೂ ಕೂಡ ವೈವಿಧ್ಯಮಯವಾಗಿದೆ. ಈ ಲೇಖನದಲ್ಲಿ ಮಹಿಳೆಯರು ರಚಿಸಿರುವ ರಂಗಕೃತಿಗಳ ಬಗೆಗೆ ಮಾತ್ರ ಚರ್ಚಿಸಲಾಗಿದೆ. ಮಹಿಳೆಯರು ರಚಿಸಿರುವ ಅನೇಕ ರೇಡಿಯೋ ನಾಟಕಗಳು, ಬಾನುಲಿ ನಾಟಕಗಳಿವೆ. ಅವು ರಂಗಕೃತಿಗಳಾಗದೇ ಇರುವುದರಿಂದ ಅವುಗಳನ್ನಿಲ್ಲಿ ಪ್ರಸ್ತಾಪಿಸಿಲ್ಲ. ಮಹಿಳೆಯರು ಅನೇಕ ಕಿರುನಾಟಕಗಳನ್ನು, ಏಕಾಂಕ ನಾಟಕಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಕೆಲವು ಏಕಾಂಕಗಳು ಶಾಲೆ-ಕಾಲೇಜುಗಳ ಗ್ಯಾದರಿಂಗ್‍ಗಳಲ್ಲಿ ಪ್ರಯೋಗವಾಗಿರಬಹುದಾದರೂ ಇಲ್ಲಿ ರಂಗಸಾಧ್ಯತೆಗಳು ತುಂಬ ಕಡಿಮೆ. ಹೇಮಾ ಪಟ್ಟಣಶೆಟ್ಟಿ ಮೊದಲಾದ ಲೇಖಕಿಯರು ಇಂತಹ ಕಿರುನಾಟಕಗಳನ್ನು ರಚಿಸಿದ್ದಾರೆ. ವೈದೇಹಿಯವರಂತಹ ಅನೇಕ ಲೇಖಕಿಯರು ಮಕ್ಕಳ ನಾಟಕಗಳನ್ನು ರಚಿಸಿದ್ದಾರೆ. ಕನ್ನಡದಲ್ಲಿ ಅನೇಕ ಅನುವಾದ ನಾಟಕಗಳೂ ಪ್ರಕಟವಾಗಿವೆ. ಇವುಗಳ ಬಗೆಗೆ ಇಲ್ಲಿ ಚರ್ಚಿಸದೆ ಕೇವಲ ಮಹಿಳೆಯರ ರಂಗನಾಟಕಗಳ ಬಗೆಗೆ ಮಾತ್ರ ವಿಮರ್ಶಿಸಲಾಗಿದೆ.

2. ಮಹಿಳಾ ವೃತ್ತಿ ನಾಟಕ ಪರಂಪರೆ 
ವೃತ್ತಿರಂಗಭೂಮಿಯಲ್ಲಿ ಕಲಾವಿದೆಯರಾಗಿ ಮಹಿಳೆಯರು ಸಾಧಿಸಿದ ಸಾಧನೆ ಬಹುದೊಡ್ಡದು. ವೃತ್ತಿರಂಗ ಕಲಾವಿದೆಯರ ಬಗೆಗೆ ಈಗಾಗಲೇ ಕೆಲವು ಕೃತಿಗಳು ಪ್ರಕಟವಾಗಿವೆ. ಇಂದು ರಂಗಕಲಾವಿದೆಯರ ಪ್ರಾದೇಶಿಕ ರಂಗಚರಿತ್ರೆಗಳನ್ನು ಕಟ್ಟಿಕೊಳ್ಳಬೇಕಾಗಿದೆ. ರಂಗವಿಶ್ವವಿದ್ಯಾಲಯವನ್ನು ಸ್ಥಾಪಿಸಿದರೆ ರಂಗಭೂಮಿ ಹೊಸ ಆಯಾಮ ಪಡೆದು ಬೆಳೆದು ನಿಲ್ಲಲು ಸಾಧ್ಯವಿದೆ. 1962ರ ಸಂದರ್ಭದಲ್ಲಿ ಪ್ರಾರಂಭವಾಗಿದ್ದ ಕೆ. ನಾಗರತ್ನಮ್ಮ ಅವರ ಸ್ತ್ರೀ ನಾಟಕ ಮಂಡಳಿಯೇ ಮಹಿಳೆಯರು ಕಟ್ಟಿದ ಪ್ರಥಮ ಸ್ತ್ರೀ ನಾಟ್ಯ ಸಂಘವಾಗಿದೆಯೆಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಆದರೆ ಸತ್ಯ ಸಂಗತಿ ಬೇರೆ ಇದೆ. 1948ರಲ್ಲಿ ಕೊಪ್ಪಳದ ಕಟ್ಟೀಮನಿ ಸೋದರಿಯರು ಕಟ್ಟಿದ “ಶ್ರೀನಟರಾಜ ನಾಟ್ಯ ಕಲಾಸಂಘ” ಕನ್ನಡ ವೃತ್ತಿರಂಗಭೂಮಿಯ ಪ್ರಥಮ ಮಹಿಳಾ ನಾಟ್ಯಸಂಘವಾಗಿದೆ. ದಲಿತ ಕಲಾವಿದೆಯರಾಗಿದ್ದ ಭೀಮವ್ವ, ಪಾರ್ವತೆವ್ವ, ಯಂಕಮ್ಮ, ಸುಲೋಚನಾ ಈ ಸೋದರಿಯರು 1948ರಲ್ಲಿ ಕೊಪ್ಪಳದಲ್ಲಿ ಮಹಿಳಾ ನಾಟ್ಯಸಂಘವನ್ನು ಸ್ಥಾಪಿಸಿ ನಾಡಿನಾದ್ಯಂತ ಅನೇಕ ನಾಟಕಗಳನ್ನು ಪ್ರದರ್ಶಿಸಿದ್ದಾರೆ. ಈ ಸೋದರಿಯರು ನಟನೆ, ಹಾಡುಗಾರಿಕೆ, ಸಂಗೀತ ನಿರ್ದೇಶನ, ರಂಗಸಜ್ಜಿಕೆ ಹೀಗೆ ರಂಗಭೂಮಿಯ ಎಲ್ಲ ಕ್ಷೇತ್ರಗಳಲ್ಲಿಯೂ ಪರಿಣಿತರಾಗಿದ್ದರೆಂದು ತಿಳಿದು ಬರುತ್ತದೆ. ಈ ಕಂಪನಿಯ ವ್ಯವಸ್ಥಾಪಕರಾಗಿ ಇವರ ಸೋದರಮಾವ ದೇವೇಂದ್ರಪ್ಪ ಕನಕಗಿರಿಯವರು ಈ ಕಂಪನಿ ಬೆಳೆಯಲು ಕಾರಣರಾದರೆಂದು ಕೊಪ್ಪಳದ ಶ್ರೀ ಎಚ್.ಎಸ್. ಪಾಟೀಲ ಅವರು “ಕೊಪ್ಪಳ ಜಿಲ್ಲೆಯ ಸಾಹಿತ್ಯ ಸಂಸ್ಕೃತಿ ಪರಂಪರೆ”-2010 ಕೃತಿಯಲ್ಲಿ ವಿವರಿಸಿದ್ದಾರೆ. ಈ ಸೋದರಿಯರು ಸ್ಥಾಪಿಸಿದ ಮಹಿಳಾ ನಾಟ್ಯಸಂಘವು ಎಂಟು ವರ್ಷಗಳ ಕಾಲ ಬೇರೆ ಬೇರೆ ಊರುಗಳಲ್ಲಿ ವೃತ್ತಿನಾಟಕಗಳನ್ನು ಪ್ರಯೋಗಿಸಿ ಜನಮನ ತಲುಪಿತೆಂದು ತಿಳಿದುಬರುತ್ತದೆ. ಈ ಸೋದರಿಯರಲ್ಲಿ ಸುಲೋಚನಾ ನಟಿಯು, ತಳಕಲ್ಲ ವೆಂಕಟರೆಡ್ಡಿಯವರ ನಾಟಕ ಕಂಪನಿಯಲ್ಲಿ ಹಾಸ್ಯ ಪಾತ್ರ ಮಾಡುತ್ತಿದ್ದಳು. ಯಂಕಮ್ಮ ಏಣಗಿ ಬಾಳಪ್ಪನವರ ಕಲಾವೈಭವ ನಾಟ್ಯಸಂಘದಲ್ಲಿ ನಾಯಕಿ ಪಾತ್ರ ಮಾಡುತ್ತಿದ್ದಳು. ಪಾರ್ವತಮ್ಮ ಎಲ್ಲ ರೀತಿಯ ಪಾತ್ರಗಳನ್ನು ಮಾಡುತ್ತಿದ್ದಳು. ಹಿರಿಯ ಸೋದರಿ ಭೀಮವ್ವ ಸಾಧ್ವಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಳು. ಯಂಕಮ್ಮ ದೊಡ್ಡ ಸಂಗೀತಗಾರ್ತಿಯಾಗಿದ್ದಳು. ಪಾರ್ವತಮ್ಮ ಕೆಲವು ನಾಟಕಗಳಲ್ಲಿ ಪುರುಷ ಪಾತ್ರಗಳನ್ನೂ ಮಾಡುತ್ತಿದ್ದಳು. ದಲಿತ ಕುಟುಂಬಕ್ಕೆ ಸೇರಿದ್ದ ಈ ಸೋದರಿಯರ ರಂಗಸಾಧನೆ ಎಲ್ಲಿಯೂ ದಾಖಲಾಗಿಲ್ಲ. ರಂಗಚರಿತ್ರೆಗಳನ್ನು ಬರೆಯುವದರಿಂದ ಮಾತ್ರ ನಾಡಿನ ಎಲ್ಲ ಕಲಾವಿದರ ಬಗೆಗೆ ಬೆಳಕು ಚೆಲ್ಲಲು ಸಾಧ್ಯವಾಗುತ್ತದೆ. ಕುಕನೂರಿನ ರಹಮಾನೆವ್ವ ಮುಸ್ಲೀಂ ಕುಟುಂಬದಿಂದ ಬೆಳೆದುಬಂದ ಬಹುದೊಡ್ಡ ಕಲಾವಿದೆ. ಇವರ ಮನೆತನವೇ ಒಂದು ನಾಟ್ಯಸಂಘವಾಗಿತ್ತು. ರೆಹಮಾನವ್ವ ಎರಡು ನಾಟ್ಯಸಂಘಗಳನ್ನು ಕಟ್ಟುತ್ತಾರೆ. ಅವರ ಮಕ್ಕಳೆಲ್ಲ ಈ ನಾಟ್ಯಸಂಘದ ಮೂಲಕ ಬೆಳೆಯುತ್ತಾರೆ. ರೆಹಮಾನವ್ವನ ಮಗ ಬಾಬು ಇಂದು ಕುಕನೂರಿನಲ್ಲಿದ್ದಾರೆ. 1950ರಲ್ಲಿ ರೆಹಮಾನೆವ್ವ ಕುಕನೂರಿನಲ್ಲಿ ಶ್ರೀ ಲಲಿತ ನಾಟ್ಯಸಂಘ ಸ್ಥಾಪಿಸುತ್ತಾಳೆ. 14ನೇ ವರ್ಷಕ್ಕೆ ಬಣ್ಣಹಚ್ಚಿ ರಂಗಭೂಮಿಗೆ ಕಾಲಿಡುತ್ತಾಳೆ. ಕೊಪ್ಪಳದ ಮತ್ತೊಬ್ಬ ಮಹತ್ವದ ಕಲಾವಿದೆಯರೆಂದರೆ ಸುಭದ್ರಮ್ಮ ಹುಣಸೀಮರದ. 1948ರಲ್ಲಿ ದುರ್ಗಾದಾಸರ ನಾಟಕ ಕಂಪನಿ ಸೇರಿ ಪಾತ್ರ ಮಾಡುತ್ತಾಳೆ. ಇನ್ನೊಂದು ಮಹತ್ವದ ಸಂಗತಿಯೇನೆಂದರೆ ದುರ್ಗಾದಾಸರ ಅಕ್ಕ ಸಂಜೀವಮ್ಮ ದೇವರಕೆರೆಯಲ್ಲಿ 1933ರಲ್ಲಿಯೇ “ವಿಶ್ವಕಲಾದರ್ಶನ ನಾಟಕ ಕಂಪನಿ” ಸ್ಥಾಪಿಸಿದ್ದಾಳೆ. ಇದು ಮಹಿಳಾ ನಾಟ್ಯ ಸಂಘವಾಗಿರದಿದ್ದರೂ ಒಬ್ಬ ಮಹಿಳೆಯೇ ಆ ಕಾಲದಲ್ಲಿ ಕಟ್ಟಿದ ನಾಟ್ಯ ಸಂಘವಾಗಿದೆ. ಇಂತಹ ಅನೇಕ ಸಂಗತಿಗಳು ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿವೆ. ಎಲೆಮರೆಯ ಕಾಯಿಯಂತಿದ್ದ ಇಂತಹ ಮಹಿಳೆಯರನ್ನು ನಮ್ಮ ಅಕಾಡೆಮಿಗಳು, ರಂಗಸಂಸ್ಥೆಗಳು ನಿರ್ಲಕ್ಷಿಸಿವೆ. 1930ರ ಸಂದರ್ಭದಲ್ಲಿಯೇ ಮಹಿಳೆ ವೃತ್ತಿರಂಗಭೂಮಿಯಲ್ಲಿ ಮಹತ್ವದ ಸ್ಥಾನಪಡೆದಿದ್ದಳೆಂಬುದು ಸ್ಪಷ್ಟವಾಗುತ್ತದೆ. 

ವೃತ್ತಿರಂಗಭೂಮಿಯಲ್ಲಿ ಮಹಿಳೆ ನಟಿಯಾಗಿ, ನಾಟಕಸಂಘದ ಮಾಲಕಳಾಗಿ ದೊಡ್ಡಸಾಧನೆ ಮಾಡಿದ್ದಾಳೆ. ಕನ್ನಡದ ಮೊದಲ ಮಹಿಳಾ ನಟಿ ಯಲ್ಲೂಬಾಯಿಯೆಂದು ತಿಳಿದು ಬರುತ್ತದೆ. 1898ರಲ್ಲಿ ಪಾಪಾಸಾನಿ ಎಂಬ ಮಹಿಳೆ ವೃತ್ತಿ ನಾಟಕಮಂಡಳಿ ಕಟ್ಟಿ, ಯಶಸ್ವಿಯಾದದ್ದು ಐತಿಹಾಸಿಕವಾಗಿ ತುಂಬ ಮುಖ್ಯವಾಗುತ್ತದೆ. ನಂತರದ ವರ್ಷಗಳಲ್ಲಿ ಅನೇಕ ಮಹಿಳೆಯರು ವೃತ್ತಿನಾಟ್ಯಸಂಘಗಳನ್ನು ಸ್ಥಾಪಿಸಿದ್ದಾರೆ.

1908ರಲ್ಲಿ ಲಕ್ಷ್ಮೇಶ್ವರದ ಬಚ್ಚಾಸಾನಿ, 1925ರಲ್ಲಿ ಗುಳೇದಗುಡ್ಡದ ಗಂಗೂಬಾಯಿ ನಾಟಕ ಮಂಡಳಿಗಳನ್ನು ಕಟ್ಟಿದ್ದಾರೆ. ಗುಳೇದಗುಡ್ಡದ ಗಂಗೂಬಾಯಿಯ “ಶ್ರೀಕೃಷ್ಣನಾಟಕ ಮಂಡಳಿ”ಯಲ್ಲಿ ಆ ಕಾಲದ ಪ್ರಖ್ಯಾತ ನಟರು, ಕಲಾವಿದರಾಗಿದ್ದರು. ಹಂದಿಗನೂರು ಸಿದ್ಧರಾಮಪ್ಪನಂತಹ ದೊಡ್ಡ ಕಲಾವಿದ ರಂಗಪ್ರವೇಶ ಮಾಡಿದ್ದು ಇದೇ ಕಂಪನಿಯ ಮುಖಾಂತರವೆಂಬುದು ಮಹತ್ವದ ಸಂಗತಿಯಾಗುತ್ತದೆ. ಮೈಸೂರಿನ ಅಂಬುಜಮ್ಮ ಕಟ್ಟಿದ ನಾಟಕ ಮಂಡಳಿಯಲ್ಲಿ ಪುರುಷ ಪಾತ್ರಗಳನ್ನು ಸ್ತ್ರೀಯರೇ ಮಾಡುತ್ತಿದ್ದರು. 1939ರಲ್ಲಿ ಸೋನುಬಾಯಿ ದೊಡ್ಡಮನಿ “ನೂತನ ಸಂಗೀತ ನಾಟಕ ಮಂಡಳಿ ಹಾವೇರಿ” ಎಂಬ ಕಂಪನಿಯನ್ನು ಸ್ಥಾಪಿಸಿದರು. 1958ರಲ್ಲಿ ಆರ್. ನಾಗರತ್ನಮ್ಮ ಅವರು ವೃತ್ತಿನಾಟಕ ಕಂಪನಿಯನ್ನು ಕಟ್ಟಿದರು. ಎಲ್ಲೂಬಾಯಿ ಚಿಮಣಾ, ಜುಬೇದಾಬಾಯಿ ಸವಣೂರು, ತೆರೇಸಮ್ಮ, ನಾಗರತ್ನಮ್ಮ ಮರಿಯಮ್ಮನಳ್ಳಿ, ಸರಸ್ವತಿನಾಯ್ಡು, ಕುಂದಾಪುರ ಸುಮಿತ್ರ ಈ ಮೊದಲಾದ ಮಹಿಳೆಯರು ನಾಟಕ ಕಂಪನಿಯನ್ನು ಸ್ಥಾಪಿಸಿದವರಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಚಿಂದೋಡಿ ಲೀಲಾ, ಪ್ರೇಮಾ ಗುಳೇದಗುಡ್ಡ, ಸುಮತಿಶ್ರೀಯವರು ಸ್ವತಂತ್ರ ನಾಟಕ ಕಂಪನಿಗಳನ್ನು ಕಟ್ಟಿ ರಂಗಭೂಮಿಗೆ ತಮ್ಮದೇ ಆದ ಕೊಡುಗೆಯನ್ನು ಕೊಟ್ಟಿದ್ದಾರೆ. ಮಹಿಳೆಯರು ಹೀಗೆ ದೊಡ್ಡ ದೊಡ್ಡ ಕಲಾವಿದೆಯರಾಗಿ ವೃತ್ತಿನಾಟಕಗಳಲ್ಲಿ ಬೆಳೆದು ನಿಂತರು, ನಾಟಕ ಕಂಪನಿಗಳನ್ನು ಕಟ್ಟಿ ಕಂಪನಿಯ ಮಾಲಿಕರಾಗಿ ಯಶಸ್ವಿಯಾದರು. ಆದರೆ ನಾಟಕ ರಚನೆಯಲ್ಲಿ ಹೆಚ್ಚಿನ ಮಹಿಳೆಯರು ಕಾಣಿಸಿಕೊಳ್ಳಲಿಲ್ಲ.

ಮಹಿಳೆಯರು ನಾಟಕ ರಚನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳದೇ ಇರುವುದಕ್ಕೆ ಮುಖ್ಯ ಕಾರಣವೆಂದರೆ-ಶಿಕ್ಷಣ. ವೃತ್ತಿರಂಗಭೂಮಿಲ್ಲಿ ಹೆಚ್ಚಿನ ಶಿಕ್ಷಣ ಪಡೆದ ಮಹಿಳೆಯರು ಇರಲಿಲ್ಲ. ಹೀಗಾಗಿ ನಾಟಕ ರಚನೆ ಅವರಿಗೆ ಸಾಧ್ಯವಾಗಲಿಲ್ಲ. ಆದರೂ ಮಹಿಳೆ ನಾಟಕ ರಚನೆಯಲ್ಲಿಯೂ ಹಿಂದೆ ಬಿದ್ದಿಲ್ಲವೆಂಬುದಕ್ಕೆ ಕೆಲವು ಉದಾಹರಣೆಗಳಿವೆ. ಅವುಗಳಲ್ಲಿ ನ್ಯಾಮತಿ ಕಮಲವ್ವ ಹಾಗೂ ಪ್ರೇಮಾ ಬಾದಾಮಿ ಪ್ರಮುಖರಾಗಿದ್ದಾರೆ. 1961ರ ಅವಧಿಯಲ್ಲಿ ನ್ಯಾಮತಿ ಕಮಲವ್ವ “ಮೂಲಾನಕ್ಷತ್ರ” ಎಂಬ ನಾಟಕ ರಚಿಸಿದ್ದಾರೆ. ಅದೇ ರೀತಿ ಇತ್ತೀಚಿನ ವರ್ಷಗಳಲ್ಲಿ 2009 ರಿಂದ ಪ್ರೇಮಾ ಬಾದಾಮಿ ಅನೇಕ ವೃತ್ತಿನಾಟಕಗಳನ್ನು ರಚಿಸಿದ್ದಾರೆ.

3. ಮಹಿಳಾ ಹವ್ಯಾಸಿನಾಟಕ ಪರಂಪರೆ
ಹವ್ಯಾಸಿ ರಂಗಭೂಮಿಯಲ್ಲಿ ಇದುವರೆಗೆ ಪುರುಷರು ಬರೆದ ನಾಟಕಗಳ ಬಗೆಗೆ ಹೆಚ್ಚಿನ ಚರ್ಚೆ ನಡೆದಿವೆ. ಮಹಿಳೆಯರ ನಾಟಕಗಳ ಕುರಿತು, ಮಹಿಳಾ ರಂಗಭೂಮಿ ಕುರಿತು ಹೆಚ್ಚಿನ ಕೃತಿಗಳು ಪ್ರಕಟವಾಗಿಲ್ಲ. ಇಲ್ಲಿ ಆ ಕೊರತೆಯನ್ನು ತುಂಬಿಕೊಡುವ ಪ್ರಯತ್ನವಿದೆ.

ಹವ್ಯಾಸಿ ಮಹಿಳಾ ನಾಟಕಪರಂಪರೆಯಲ್ಲಿ ಮೂರು ಘಟ್ಟಗಳನ್ನು ಗುರುತಿಸಬಹುದಾಗಿದೆ. ನವೋದಯ ಸಂದರ್ಭದ ತಿರುಮಲಾಂಬಾ, ಆರ್. ಕಲ್ಯಾಣಮ್ಮ ಅವರ ಘಟ್ಟ ಪ್ರಾರಂಭದ ಹಂತವಾದರೆ, ನವ್ಯ ಸಂದರ್ಭದ ಕಾಕೋಳು ಸರೋಜರಾವ್, ಟಿ. ಸುನಂದಮ್ಮ ಅವರ ನಾಟಕಗಳನ್ನು ಎರಡನೇ ಘಟ್ಟಕ್ಕೆ ಸೇರಿಸಬೇಕಾಗುತ್ತದೆ. ಬಂಡಾಯ ಕಾಲಘಟ್ಟದಲ್ಲಿ ಹುಟ್ಟಿಕೊಂಡ ವಸುಮತಿ ಉಡುಪ, ಲಲಿತಾ ಸಿದ್ಧಬಸವಯ್ಯ ಈ ಮೊದಲಾದ ಲೇಖಕಿಯರ ನಾಟಕಗಳನ್ನು ಮೂರನೇ ಘಟ್ಟಕ್ಕೆ ಸೇರಿಸಬೇಕಾಗುತ್ತದೆ. ಈ ಮೂರೂ ಘಟ್ಟಗಳ ಹವ್ಯಾಸಿ ನಾಟಕಗಳನ್ನು ಅಧ್ಯಯನ ಮಾಡಿದಾಗ ಮೂರನೇ ಘಟ್ಟದಿಂದ ಬಂದ ನಾಟಕಗಳೇ ರಂಗಪ್ರಯೋಗಗಳನ್ನು ಕಂಡು ಯಶಸ್ವಿಯಾಗಿವೆ. ನವೋದಯ ಸಂದರ್ಭದ ಕೈಲಾಸಂ ಶ್ರೀರಂಗ, ನವ್ಯ ಘಟ್ಟದ ಕಾರ್ನಡ-ಕಂಬಾರರಂತಹ ನಾಟಕಕಾರರು ಮಹಿಳೆಯರಲ್ಲಿ ಕಾಣಿಸದಿದ್ದರೂ ಬಂಡಾಯ ಚಳವಳಿಯ ನಂತರ ಅನೇಕ ಮಹತ್ವದ ನಾಟಕಗಳು ಮಹಿಳೆಯರಿಂದ ಪ್ರಕಟವಾಗಿವೆ. ಅಂತಹ ನಾಟಕಗಳ ಪ್ರಾಯೋಗಿಕ ವಿಮರ್ಶೆಯನ್ನು ಇಲ್ಲಿ ಮಾಡಲಾಗಿದೆ.

ಹವ್ಯಾಸಿ ಮಹಿಳಾ ರಂಗಭೂಮಿಯಲ್ಲಿ, ರಂಗದಮೇಲೆ ಪ್ರಯೋಗಗೊಂಡ ನಾಟಕಗಳು ಮಾತ್ರ ಲೆಕ್ಕಕ್ಕೆ ಬರುತ್ತವೆ. ಆದರೆ ನಮ್ಮಲ್ಲಿ ಅನೇಕ ಮಹಿಳೆಯರು ರೇಡಿಯೋ ನಾಟಕಗಳನ್ನು ಬರೆದಿದ್ದಾರೆ, ಮಕ್ಕಳ ನಾಟಕಗಳನ್ನು ರಚಿಸಿದ್ದಾರೆ. ಏಕಾಂಕ ನಾಟಕಗಳನ್ನು ಪ್ರಕಟಿಸಿದ್ದಾರೆ. ಇಂತಹ ನಾಟಕಗಳನ್ನು ಇಲ್ಲಿ ಉಲ್ಲೇಖಿಸಲಾಗಿಲ್ಲ. ಈ ರೀತಿಯ ನಾಟಕಗಳ ಉದ್ದೇಶ ಬೇರೆಯಾಗಿರುವುದರಿಂದ ಅವು ನೇರವಾಗಿ ರಂಗಕೃತಿಗಳಾಗಿ ಗುರುತಿಸಿಕೊಳ್ಳುವುದಿಲ್ಲ. ನಾಟಕಕೃತಿಯು ಕಥೆ-ಕಾದಂಬರಿಯಂತೆ ಓದುವದಕ್ಕಾಗಿ ಬರೆದದ್ದಲ್ಲ. ನಾಟಕಕೃತಿಗೆ ರಂಗಪ್ರಯೋಗ ಬಹಳಮುಖ್ಯ. ಅದು ರಂಗದಮೇಲೆ ಬಂದಾಗಲೇ ರಂಗಕೃತಿಯಾಗುತ್ತದೆ. ಆದುದರಿಂದ ಇಲ್ಲಿ ರಂಗಕೃತಿಗಳ ಬಗೆಗೆ ಮಾತ್ರ ಚರ್ಚಿಸಲಾಗಿದೆ. ಮಹಿಳಾ ನಾಟಕಕಾರರ ಬಗೆಗೆ ಅಧ್ಯಯನಕ್ಕೆ ತೊಡಗಿದರೆ ನೂರಕ್ಕೂ ಹೆಚ್ಚು ಲೇಖಕಿಯರ ಎರಡು ನೂರಕ್ಕೂ ಹೆಚ್ಚು ನಾಟಕಗಳು ಕಾಣಿಸಿಕೊಳ್ಳುತ್ತವೆ. ಆದರೆ ಅವುಗಳಲ್ಲಿ ರಂಗಕೃತಿಗಳಾಗಿ ಯಶಸ್ವಿಯಾದ ನಾಟಕಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ, ಇದಕ್ಕೆ ಅನೇಕ ಕಾರಣಗಳಿವೆ.

ವೃತ್ತಿನಾಟಕವಿರಲಿ, ಹವ್ಯಾಸಿ ನಾಟಕವಿರಲಿ ಪುರುಷನು ನಾಟಕಕಾರನಾಗಿ ಹೆಸರು ಪಡೆದಂತೆ, ಮಹಿಳೆಗೆ ಸಾಧ್ಯವಾಗಲಿಲ್ಲ. ಇದಕ್ಕೆ ಮುಖ್ಯಕಾರಣ ಶಿಕ್ಷಣ. ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮಲ್ಲಿ ಅಕ್ಷರ ಕಲಿತ ಮಹಿಳೆಯರು ತುಂಬ ವಿರಳ. ಸ್ವಾತಂತ್ರ್ಯೋತ್ತರ ಸಂದರ್ಭದಲ್ಲಿ ಮಹಿಳೆಯರು ಶಿಕ್ಷಣ ಪಡೆದರೂ ಕಥೆ-ಕಾದಂಬರಿಗಳ ರಚನೆಗೆ ಮಾತ್ರ ಸೀಮಿತರಾದರೇ ಹೊರತು ನಾಟಕರಚನೆಗೆ ಕೈಹಾಕಲಿಲ್ಲ. ನಾಟಕ ಎಂದರೆ ಮೂಗುಮುರಿಯುತ್ತಿದ್ದ ಆ ಕಾಲಘಟ್ಟದಲ್ಲಿ ಸಹಜವಾಗಿಯೇ ಮಹಿಳೆಯರು ರಂಗಭೂಮಿಯಕಡೆ ಬರಲಿಲ್ಲ. ಕೆಲವು ನಟಿಯರು ತಮ್ಮ ಹೊಟ್ಟೆಪಾಡಿಗಾಗಿ ವೃತ್ತಿರಂಗಭೂಮಿ ಸೇರಿಕೊಂಡರು. ದಲಿತ-ಬಂಡಾಯ ಚಳವಳಿಯ ನಂತರ ಸ್ತ್ರೀವಾದಿ ಹೊರಾಟಗಳು ಪ್ರಾರಂಭವಾದ ಮೇಲೆ ಮಹಿಳೆ ಮುಕ್ತವಾಗಿ ರಂಗಭೂಮಿ ಪ್ರವೇಶಿಸಲು ಸಾಧ್ಯವಾಯಿತು. ವೃತ್ತಿರಂಗಭೂಮಿಯ ನಟಿಯರಲ್ಲಿ ಹೆಚ್ಚಿನವರು ಶಿಕ್ಷಣ ಪಡೆಯದೇ ಇದ್ದುದರಿಂದ ಅಲ್ಲಿ ಮಹಿಳಾ ನಾಟಕಕಾರರು ಹೆಚ್ಚಿನ ಸಂಖ್ಯೆಯಲ್ಲಿ ಹುಟ್ಟಿಕೊಳ್ಳಲಿಲ್ಲ. ಹವ್ಯಾಸಿರಂಗಭೂಮಿಗಾಗಿ ಮಹಿಳೆಯರು ನಾಟಕಗಳನ್ನು ರಚಿಸಿಕೊಟ್ಟರೂ ಇವರ ನಾಟಕಗಳನ್ನು ಪ್ರಯೋಗಿಸುವ ರಂಗತಂಡಗಳಿರಲಿಲ್ಲ. ಹೀಗಾಗಿ ಮಹಿಳೆ ರಂಗಭೂಮಿ ಕ್ಷೇತ್ರದಲ್ಲಿ ಕಲಾವಿದೆಯಾಗಿ ಉನ್ನತ ಸ್ಥಾನಕ್ಕೇರಿದಂತೆ, ನಾಟಕಕಾರ್ತಿಯಾಗಿ ದೊಡ್ಡ ಹೆಸರು ಪಡೆಯಲಿಲ್ಲ. ನಾಟಕ ರಚನೆಗಾಗಿಯೇ ಜ್ಞಾನಪೀಠ ಪ್ರಶಸ್ತಿ ಪಡೆದ ಗಿರೀಶ ಕಾರ್ನಾಡರಂತಹ, ನಾಟಕಕಾರ್ತಿಯರು ಇಂದಿಗೂ ಕಾಣಿಸುತ್ತಿಲ್ಲ. ಇದಕ್ಕೆ ಸಮಾಜ ವ್ಯವಸ್ಥೆಯಲ್ಲಿನ ಅಸಮಾನತೆ, ಮಹಿಳೆಯರಿಗಿರುವ ಸಂಸಾರದ ಒತ್ತಡ ಇವೆಲ್ಲಾ ಕಾರಣವಾಗಿವೆ.

ಆಧುನಿಕ ಸಾಹಿತ್ಯದ ಪ್ರಾರಂಭದ ಘಟ್ಟದಲ್ಲಿ ಶಿಕ್ಷಣಪಡೆದ ಮಹಿಳೆಯರ ಸಂಖ್ಯೆ ತುಂಬಾ ವಿರಳವಾಗಿತ್ತು. ಆ ಸಂದರ್ಭದಲ್ಲಿ ನಾಟಕಗಳನ್ನು ರಚಿಸಿದವರೆಲ್ಲ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಮಹಿಳೆಯರೇ ಹೆಚ್ಚಾಗಿದ್ದರು. ಸ್ವಾತಂತ್ರ್ಯದೊರೆತು ಹಲವು ದಶಕಗಳ ನಂತರ ಇಲ್ಲಿಯ ಶೂದ್ರ-ದಲಿತ ಮಹಿಳೆಯರಿಗೆ ಶಿಕ್ಷಣದ ಅವಕಾಶ ಸಿಕ್ಕಿತು. ಈ ಮಾತನ್ನು ದಲಿತ ಮಹಿಳಾ ಲೋಕಕ್ಕೆ ವಿಸ್ತರಿಸಿದರೆ ಇನ್ನೂ ಆಶ್ಚರ್ಯವಾಗುತ್ತದೆ. ಇಂದು ನೂರಾರು ಮಹಿಳೆಯರು ನಾಟಕ ರಚಿಸಿದ್ದಾರೆ. ಆದರೆ, ಅದರಲ್ಲಿ ದಲಿತ ಮಹಿಳೆಯರೆಷ್ಟೆಂದು ನೋಡಿದಾಗ ತುಂಬ ಅಸಮಾಧಾನವಾಗುತ್ತದೆ. ಸರಸ್ವತಿಯವರಂತಹ ಬೆರಳೆಣಿಕೆಯಷ್ಟು ಲೇಖಕಿಯರು ಮಾತ್ರ ಇಂದು ನಾಟಕ ರಚನಾಕಾರರಾಗಿ ಗುರುತಿಸಿಕೊಂಡಿದ್ದಾರೆ. ಪ್ರಥಮ ಘಟ್ಟದಲ್ಲಿ (ನವೋದಯ ಸಂದರ್ಭದಲ್ಲಿ) ನಂಜನಗೂಡಿನ ತಿರುಮಲಾಂಬಾ, ಸರಸ್ವತಿಬಾಯಿ ರಾಜವಾಡೆ, ಆರ್.ಕಲ್ಯಾಣಮ್ಮ, ಸರಸ್ವತಿದೇವಿ ಗೌಡರ, ಸೀತಾದೇವಿ ಪಡಕೋಣೆ, ತಿರುಮಲೆ ರಾಜಮ್ಮ, ಸಂತೂಬಾಯಿ ನೀಲಗಾರ ಈ ಮೊದಲಾದ ಮಹಿಳೆಯರನ್ನು ಹೆಸರಿಸಬಹುದಾಗಿದೆ. 1916ರಲ್ಲಿ ರಚನೆಯಾದ “ರಮಾನಂದಾ” ನಾಟಕ ಮೊದಲ ಹವ್ಯಾಸಿ ನಾಟಕವಾಗಿದೆ. ಈ ನಾಟಕವನ್ನು ರಚಿಸಿದ ತಿರುಮಲಾಂಬಾ ಅವರೇ ಹವ್ಯಾಸಿ ರಂಗಭೂಮಿಯ ಪ್ರಥಮ ನಾಟಕಕಾರ್ತಿಯಾಗಿದ್ದಾರೆ. ಇವರಿಂದ “ಚಂದ್ರವದನ”, “ವಿವೇಕೋದಯ”ದಂತಹ ನಾಟಕಗಳು ಪ್ರಕಟವಾಗಿವೆ. ಇದರ ಜೊತೆಗೆ ಅವರು “ಭಾರ್ಗವ ಗರ್ವಭಂಗ”, “ಪ್ರಜ್ಞಾ ಸ್ವಯಂವರ”ದಂತಹ ಕಾವ್ಯಪ್ರಧಾನವಾದ ನಾಟಕಗಳನ್ನು ರಚಿಸಿದ್ದಾರೆ. ಆರ್.ಕಲ್ಯಾಣಮ್ಮನವರು “ಕಪ್ಪಲ್ಲ ಕಬ್ಬು”, “ನಿರ್ಮಲಾ” ನಾಟಕಗಳ ಜತೆಗೆ “ಎದುರಾಯ”, “ಸತಿ ಪದ್ಮಿನಿ”ಯಂತಹ ಐತಿಹಾಸಿಕ ನಾಟಕಗಳನ್ನು ರಚಿಸಿದ್ದಾರೆ. ಇವುಗಳ ಜೊತೆಗೆ “ಸ್ನೇಹಲತೆ”, ಬ್ಯಾರಿಸ್ಟರ್ ರಾಮಚಂದ್ರನ್”, “ದರಿದ್ರನಾರಾಯಣ”, ಇಪ್ಪತ್ತನೆ ಶತಮಾನದ ಅಳಿಯ” ಈ ಮೊದಲಾದ ಸಾಮಾಜಿಕ ನಾಟಕಗಳನ್ನು ರಚಿಸಿದ್ದಾರೆ. ಸರಸ್ವತಿದೇವಿ ಗೌಡರ ಅವರು “ಧರ್ಮಸಂಕಟ”, “ಮೋಳಿಗೆಯ ಮಾರಯ್ಯ” ನಾಟಕಗಳನ್ನು ರಚಿಸಿದ್ದಾರೆ. ಮಹಿಳೆಯರು ರಚಿಸಿರುವ ಶರಣರನ್ನು ಕುರಿತ ನಾಟಕಗಳಲ್ಲಿ “ಮೋಳಿಗೆಯಮಾರಯ್ಯ” ಪ್ರಥಮ ನಾಟಕವಾಗಿದೆ. ಸೀತಾದೇವಿ ಪಡಕೋಣೆಯವರ “ಕಟಕ ರೋಹಿಣೀ ಸಂವತ್ಸರದಲ್ಲಿ” “ವೇಣುಮಾವ”ದಂತಹ ನಾಟಕಗಳನ್ನು ಬರೆದಿದ್ದಾರೆ. ಸರಸ್ವತಿಬಾಯಿ ರಾಜವಾಡೆಯವರು “ಸಂಸಾರ”, ಪರಿಣಮದಂತಹ ನಾಟಕಗಳನ್ನು ರಚಿಸಿದ್ದಾರೆ.

ಪ್ರಾರಂಭದ ಈ ನಾಟಕಗಳಲ್ಲಿ ಸ್ತ್ರೀ ಶಿಕ್ಷಣದ ಅಗತ್ಯತೆಯನ್ನು ಒತ್ತಿ ಹೇಳಲಾಗಿದೆ. ಹೆಣ್ಣು ಸತಿಧರ್ಮ ಪಾಲಿಸಬೇಕು, ಪತಿವ್ರತೆಯಾಗಿರಬೇಕೆಂಬ ನೀತಿ ಮಾತುಗಳು ಹೇರಳವಾಗಿವೆ. ಮಹಿಳೆಗೆ ಸಂಸಾರ ಮುಖ್ಯ ಪತಿಯನ್ನು ಪೂಜ್ಯಭಾವದಿಂದ ನೋಡಬೇಕೆಂಬ ಆಶಯಗಳಿವೆ. ಯುವತಿಯರು ಕಾಮಪ್ರಚೋದನೆಯಿಂದ ದೂರವಿರಬೇಕೆಂಬ ಉಪದೇಶದ ಮಾತುಗಳಿವೆ. ಪೌರಾಣಿಕ ವಸ್ತುವನ್ನೊಳಗೊಂಡ ನಾಟಕಗಳಲ್ಲಿ ಆದರ್ಶ, ನೀತಿ, ಪೂಜ್ಯಭಾವ ಮುಖ್ಯವಾಗಿವೆ. ಬಾಲ್ಯವಿವಾಹವನ್ನು ಖಂಡಿಸುವ, ವರದಕ್ಷಿಣ ಪದ್ಧತಿಯನ್ನು ನಿರಾಕರಿಸುವ ಸಾಮಾಜಿಕವಾಗಿ ಮುಖ್ಯವಾಗುವ ಕೆಲವು ನಾಟಕಗಳು ಇದೇ ಸಂದರ್ಭದಲ್ಲಿ ಪ್ರಕಟವಾಗಿವೆ. ಹೀಗೇ ನವೋದಯ ಸಂದರ್ಭದ ಇಂತಹ ಮಹಿಳಾನಾಟಕಗಳು ಸತಿಧರ್ಮಕ್ಕೆ ಪ್ರಾಮುಖ್ಯತೆ ಕೊಟ್ಟಿವೆ. ಸತಿ ಸಂಸಾರದ ಕಣ್ಣು ಎಂಬಂತಹ ಆಶಯಗಳು, ಉಪದೇಶಗಳು ಹೇರಳವಾಗಿವೆ. ಮಹಿಳೆಯರು ಇಲ್ಲಿ ನಾಟಕದ ಹೆಸರಿನಲ್ಲಿ ಕಥೆ-ಕಾದಂಬರಿಗಳನ್ನು ಬರೆದಂತೆ ಕಾಣಿಸುತ್ತದೆ. ಈ ನಾಟಕಗಳಲ್ಲಿ ರಂಗಸಾಧ್ಯತೆಗಳು ಕಾಣಿಸಿಕೊಳ್ಳುವುದು ತುಂಬ ವಿರಳವೆನ್ನಬಹುದಾಗಿದೆ.

ನವೋದಯ ಸಂದರ್ಭದಲ್ಲಿ ಪ್ರಕಟವಾಗಿರುವ ಮಹಿಳಾ ನಾಟಕಗಳಲ್ಲಿ ಕೆಲವು ಮಾತ್ರ ಪ್ರಯೋಗಗೊಂಡಿವೆ. ತಿರುಮಲಾಂಬಾ ಅವರ “ರಮಾನಂದಾ” ನಾಟಕವು ನಂಜನಗೂಡಿನ ಬನಮಯ್ಯ ಕಾಲೇಜಿನಲ್ಲಿ ಪ್ರಯೋಗಗೊಂಡಿದೆ. ತಿರುಮಲಾಂಬಾ ಅವರೇ ಈ ನಾಟಕವನ್ನು ನಿರ್ದೇಶನ ಮಾಡಿದ್ದಾರೆ. ಆರ್. ಕಲ್ಯಾಣಮ್ಮ ಅವರು ಎಂಟು ನಾಟಕಗಳನ್ನು ರಚಿಸಿದ್ದು ಅವುಗಳಲ್ಲಿ ಕೆಲವು ನಾಟಕಗಳು ರಂಗಭೂಮಿಯ ಮೇಲೆ ಪ್ರಯೋಗಿಸಲ್ಪಟ್ಟಿವೆಯೆಂದು ತಿಳಿದುಬರುತ್ತದೆ. ತಿರುಮಲೆ ರಾಜಮ್ಮನವರು ‘ತಪಸ್ವಿನೀ’, ‘ಮಹಾಸತಿ’, ‘ವಾತ್ಸಲ್ಯ’, ‘ತರಂಗಲೀಲಾ’, ‘ಸ್ವರ್ಗವಿಕಸನ’, ‘ಉನ್ಮತ್ತ ಭಾಮೀನಿ’, ‘ದುಂದುಂಬಿ’ ಎಂಬ ಆರು ನಾಟಕಗಳನ್ನು ರಚಿಸಿದ್ದಾರೆ. ಆದರೆ ಇವುಗಳಲ್ಲಿ ಯಾವ ನಾಟಕವೂ ಪ್ರಯೋಗಗೊಂಡಿಲ್ಲ. ಸಮಾಜಸೇವಕಿಯಾಗಿದ್ದ ಸಿ.ಎನ್. ಜಯಲಕ್ಷ್ಮೀದೇವಿಯವರು ಮೈಸೂರು ಪರಿಸರದ ಲೇಖಕಿ. ಇವರ ‘ದೇವಯಾನಿ’, ‘ದಶರಥ’ ನಾಟಕಗಳು ರಂಗದ ಮೇಲೂ ಯಶಸ್ವಿಯಾಗಿದ್ದವೆಂದು ತಿಳಿದುಬರುತ್ತದೆ. ಇವರು ನಾಲ್ಕು ಮಕ್ಕಳ ನಾಟಕಗಳನ್ನು ರಚಿಸಿದ್ದಾರೆ. 

ಸಿ.ಎಸ್. ಜಯಲಕ್ಷ್ಮೀ ದೇವಿಯವರು “ದೇವಯಾನಿ” ಮತ್ತು “ದಶರಥ” ದಂತಹ ಪೌರಾಣಿಕ ನಾಟಕಗಳನ್ನು ರಚಿಸಿದ್ದಾರೆ. ಆದರೆ ಗಿರೀಶ ಕಾರ್ನಾಡರ “ಯಯಾತಿ” ನಾಟಕದಲ್ಲಿ ಬರುವ ದೇವಯಾನಿ ಪಾತ್ರಕ್ಕೂ ಸಿ.ಎನ್. ಜಯಲಕ್ಷ್ಮೀದೇವಿಯವರ ದೇವಯಾನಿ ಪಾತ್ರಕ್ಕೂ ತುಂಬ ವ್ಯತ್ಯಾಸವಿದೆ. ದೇವಯಾನಿಯ ಹಠ, ಮೊಂಡುತನ ಮತ್ತು ಮುಂಗೋಪದಂತಹ ಗುಣಸ್ವಭಾವಗಳನ್ನು ಜಯಲಕ್ಷ್ಮೀದೇವಿಯವರ ನಾಟಕ ಹೇಳುತ್ತದೆ. ಗುರುಪುತ್ರಿಯಾದರೂ ಇವಳಲ್ಲಿರುವ ತಾಮಸ ಗುಣಗಳತ್ತ ಈ ನಾಟಕ ಬೆರಳು ಮಾಡಿ ತೋರಿಸುತ್ತದೆ.

ನವೋದಯದ ಪ್ರಾರಂಭದ ಘಟ್ಟದಲ್ಲಿ ರಚಿಸಿದ ಮಹಿಳೆಯರ ನಾಟಕಗಳಲ್ಲಿ ಪ್ರಯೋಗಗೊಂಡ ನಾಟಕಗಳ ಸಂಖ್ಯೆ ಬೆರಳೆಣಿ ಕೆಯಷ್ಟಿದೆ. ಮಹಿಳೆಯರ ಈ ನಾಟಕಗಳು ರಂಗಭೂಮಿಯ ಮೇಲೆ ಏಕೆ ಹೆಚ್ಚಾಗಿ ಪ್ರದರ್ಶನ ಕಾಣಲಿಲ್ಲವೆಂಬುದಕ್ಕೆ ಅನೇಕ ಕಾರಣಗಳಿವೆ. ಈ ಮಹಿಳಾ ನಾಟಕಕಾರರು ಹವ್ಯಾಸಿ ನಾಟಕಗಳನ್ನು ಕಟ್ಟಿದ್ದು ತುಂಬ ವಿರಳವೆನ್ನಬಹುದಾಗಿದೆ. ಆ ಕಾಲಘಟ್ಟದಲ್ಲಿ ಹವ್ಯಾಸಿ ನಾಟಕತಂಡಗಳ ಸಂಖ್ಯೆಯೂ ಹೆಚ್ಚಾಗಿರಲಿಲ್ಲ. ಲೇಖನಿ ಹಿಡಿಯುವುದರ ಜತೆಗೆ ಸಂಸಾರಭಾರವನ್ನೂ ಮಹಿಳೆಯರೇ ಹೊತ್ತುಕೊಂಡಿದ್ದರಿಂದ ಅವರಿಗೆ ತಾವು ಬರೆದ ನಾಟಕಗಳನ್ನು ತಾವೇ ಪ್ರಯೋಗಿಸಲು ಸಮಯಾವಕಾಶವೂ ಇರುತ್ತಿರಲಿಲ್ಲ. ಹೀಗಾಗಿ ಇವರ ಅನೇಕ ನಾಟಕಗಳು ಪುಸ್ತಕ ರೂಪದಲ್ಲಿ ಉಳಿದವೇ ಹೊರತು ರಂಗಕೃತಿಗಳಾಗಿ ಪ್ರಯೋಗಗೊಳ್ಳಲಿಲ್ಲ.

ಎರಡನೇ ಘಟ್ಟದಲ್ಲಿ (ನವ್ಯ ಕಾಲಘಟ್ಟದಲ್ಲಿ)  ಅನೇಕ ಮಹಿಳೆಯರು ರಂಗನಾಟಗಳನ್ನು ರಚಿಸಿದ್ದಾರೆ. ಇವರು ನವ್ಯದ ಅವಧಿಯಲ್ಲಿ ನಾಟಕಗಳನ್ನು ರಚಿಸಿದ್ದಾರೆಯೇ ಹೊರತು, ನವ್ಯಸಿದ್ಧಾಂತಗಳನ್ನು ಒಪ್ಪಿಕೊಂಡು ನಾಟಕಗಳನ್ನು ರಚಿಸಲಿಲ್ಲ. ಕಾರ್ನಾಡ, ಲಂಕೇಶರ ಹಾಗೆ ಇವರು ನವ್ಯನಾಟಕಕಾರರಲ್ಲ. ಇವರಲ್ಲಿ ಟಿ. ಸುನಂದಮ್ಮ, ಕಾಕೋಳು ಸರೋಜರಾವ್, ವಿಶಾಲಾಕ್ಷಿ ಲಕ್ಷ್ಮಣಗೌಡ, ಲೀಲಾದೇವಿ ಪ್ರಸಾದ, ಮಲ್ಲಿಕಾ, ನಿರುಪಮಾ, ಅನುಸೂಯಾ ರಾಮರೆಡ್ಡಿ, ಸುಲೋಚನಾ ಆರಾಧ್ಯ, ಅನುಪಮಾ ನಿರಂಜನ, ಈ ಮೊದಲಾದವರು ಪ್ರಮುಖರಾಗಿದ್ದಾರೆ.

ಖ್ಯಾತ ಹಾಸ್ಯ ಲೇಖಕಿ ಟಿ. ಸುಂನದಮ್ಮನವರ ನಾಟಕಗಳು ಹಾಸ್ಯರಸ ಪ್ರಧಾನವಾಗಿದ್ದು ಅವರು ಗಂಭೀರ ಸಮಸ್ಯೆಗಳ ಕಡೆ ಗಮನ ನೀಡಲಿಲ್ಲ. “ಕೂಸು ಹುಟ್ಟುವುದಕ್ಕೆ ಮುಂಚೆ”, “ಆದರ್ಶದ ಆಡಂಬರ”, “ಚಿಕ್ಕಪ್ಪನ ಉಯಿಲು”, “ಬಾದಾರಾಯಣ”, “ಬರೆದ ಕೈ”, “ಗೃಹಲಕ್ಷ್ಮೀ”, “ಚಕ್ರಚುಕ್ಕೆ’, “ಸದಾಶಿವನ ಸ್ವಯಂವಧು” ಈ ಮೊದಲಾದ ನಾಟಕಗಳನ್ನು ರಚಿಸಿದ್ದಾರೆ. ಇವರು ಹೆಚ್ಚಾಗಿ ರೇಡಿಯೋ ನಾಟಕಗಳನ್ನು ಬರೆದಿದ್ದಾರೆ.

ಕಾಕೋಳು ಸರೋಜರಾವ ಅವರು “ಕರ್ನಾಟಕ ರಮಾರಮಣ”, “ಲಾಟ್ರಿಲಕ್ಷ್ಮೀ”, “ಬಂಜೆ”, “ನಾನು ಭಾರತೀಯ”, “ಪಾಂಚಜನ್ಯ”, “ಶಾಂತಲಾ” ಈ ಮೊದಲಾದ ನಾಟಕಗಳನ್ನು ರಚಿಸಿದ್ದಾರೆ. “ಕರ್ನಾಟಕ ರಮಾರಮಣ” ನಾಟಕವು ಬೆಂಗಳೂರಿನ ಎಚ್.ಎ.ಎಲ್. ತಂಡದವರಿಂದ ಕಾರ್ಮಿಕ ರಂಗಭೂಮಿಯ ಮುಖಾಂತರ ಪ್ರಯೋಗಗೊಂಡಿದೆ. 

ಪ್ರಸಿದ್ಧ ಕಾದಂಬರಿಗಾರ್ತಿ ಅನುಪಮಾ ನಿರಂಜನ ಅವರು ಇದೇ ಅವಧಿಯಲ್ಲಿ “ಕಲ್ಲೋಲ” ಎಂಬ ನಾಟಕವೊಂದನ್ನು ರಚಿಸಿದ್ದಾರೆ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಾವಿತ್ರಮ್ಮನ ಪಾತ್ರವು ಇಲ್ಲಿ ಪ್ರಮುಖವಾಗಿದೆ. ಮಹತ್ವಾಕಾಂಕ್ಷೆಯ ಹೆಣ್ಣಿನ ಚಿತ್ರಣವಿದೆ. ಈ ನಾಟಕವನ್ನು ಅಸೊಸಿಯೇಟೆಡ್ ಅಮೇಚೂರ ಆರ್ಟಿಸ್ಟ್  ಕಲಾವಿದರು, ಬೆಂಗಳೂರು ಇವರು ರಂಗಪ್ರದರ್ಶನ ಮಾಡಿದ್ದಾರೆ.

1975ರಿಂದ 1985ರ ಒಂದು ದಶಕವನ್ನು ಅಂತರಾಷ್ಟ್ರೀಯ ಮಹಿಳಾ ವರ್ಷಾಚರಣೆಯೆಂದು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ದಲಿತ-ಬಂಡಾಯ ಚಳವಳಿ ಪ್ರಾರಂಭವಾಯಿತು. ಸಮುದಾಯ ಇಪ್ಟಾದಂತಹ ಎಡಸಿದ್ಧಾಂತದ ರಂಗಸಂಘಟನೆಗಳು ಹುಟ್ಟಿಕೊಂಡವು. ದಲಿತ ಸಂಘರ್ಷ ಸಮಿತಿಯ ಹೋರಾಟಗಳ ಮೂಲಕ ಜಾಗೃತಿಯ ಮೂಲಕ ಕೆಲವರಾದರೂ ಮಹಿಳೆಯರು ದಲಿತ ಸಮಸ್ಯೆಗಳ ಕಡೆ ನೋಡತೊಡಗಿದರು. ಮಹಿಳಾ ರಂಗಪರಂಪರೆ ಹಾಗೂ ನಾಟಕ ಪರಂಪರೆಯಲ್ಲಿ ಈ ಮೂರನೇ ಘಟ್ಟವು (ದಲಿತ-ಬಂಡಾಯ ಚಳವಳಿಗಳ ಸಂಧರ್ಭವು) ತುಂಬ ಮಹತ್ವದ್ದಾಗಿದೆ. 1980 ರಿಂದ 2020ರವರೆಗೆ ಅನೇಕ ಮಹಿಳೆಯರು ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಪ್ರೇಮಾಕಾರಂತ, ಬಿ. ಜಯಶ್ರೀ, ಎಸ್. ಮಾಲತಿಯವರಂತಹ ಮಹಿಳೆಯರು ದೆಹಲಿಯ ಎನ್.ಎಸ್.ಡಿ. ಪದವೀಧರರಾಗಿ ಹೊರಬಂದು ಅನೇಕ ಹೊಸ ಅಲೆಯ, ಪ್ರಗತಿಪರ ನಾಟಕಗಳನ್ನು ನಿರ್ದೇಶಿಸಿದರು, ಮಹಿಳಾ ರಂಗಭೂಮಿ ಈ ಕಾಲಘಟ್ಟದಲ್ಲಿ ಕಣ್ಣಿಗೆ ಕಾಣುವ ಹಾಗೆ ಬೆಳೆದುನಿಂತಿತು. ಆ ಮೂಲಕ ಮಹಿಳಾ ನಾಟಕಗಳ ಸುವರ್ಣಯುಗ ಪ್ರಾರಂಭವಾಯಿತು. ಇದೇ ಸಂದರ್ಭದಲ್ಲಿ ಮಹಿಳೆಯರು ಬೀದಿನಾಟಕಗಳನ್ನು ರಚಿಸಿದರು.

ಮಹಿಳಾ ಹವ್ಯಾಸಿ ನಾಟಕಪರಂಪರೆ ಈ ಸಂದರ್ಭದಯೇ ಬೆಳೆದುನಿಂತಿತು. ಈ ಅವಧಿಯಲ್ಲಿ ಅನೇಕ ನಾಟಕಕಾರ್ತಿಯರು ಕಾಣಿಸಿಕೊಂಡರು. ಅನೇಕ ಬೀದಿನಾಟಕಗಳನ್ನು ರಚಿಸಿದ ವಿಜಯಾ ಅವರಿಂದ ಈ ಮೂರನೇ ಘಟ್ಟದ ನಾಟಕ ಪರಂಪರೆ ಪ್ರಾರಂಭವಾಗುತ್ತದೆ. ಈ ಅವಧಿಯಲ್ಲಿ ವಿವಿಧ ವರ್ಗದ, ಮಹಿಳೆಯರಿಂದ ಬೇರೆ ಬೇರೆ ಪ್ರಾದೇಶಿಕ ನಾಟಕಗಳು ಹುಟ್ಟಿಕೊಳ್ಳಲು ಸಾಧ್ಯವಾಯಿತು. ಹೀಗಾಗಿ ಈ ಘಟ್ಟವು ಮಹಿಳಾ ರಂಗಭೂಮಿಯ ಬೆಳವಣಿಗೆಯ ಕಾಲವಾಗಿದೆ.

ಲೀಲಾದೇವಿ, ಆರ್. ಪ್ರಸಾದ ಅವರು 1954ರಲ್ಲಿ “ಸಂಜೀವಿನಿ” ಎಂಬ ಪೌರಾಣಿಕ ನಾಟಕವನ್ನು ರಚಿಸಿದ್ದಾರೆ. ಚಹಾ ಇಂದು ಹೇಗೆ ಸಂಜೀವಿನಿಯಾಗಿದೆಯೆಂಬುದನ್ನು ಪೌರಾಣಿಕ ಪಾತ್ರಗಳ ಹಿನ್ನೆಲೆಯಲ್ಲಿ ವಿವರಿಸಿದ್ದಾರೆ. ವಿಶಾಲಾಕ್ಷಿ ಲಕ್ಷ್ಮಣಗೌಡ ಅವರು “ಚಿರಸ್ಮೃತಿ” ಎಂಬ ಪೌರಾಣಿಕ ನಾಟಕವನ್ನು ರಚಿಸಿದ್ದಾರೆ. ಎಚ್.ಆರ್. ಇಂದಿರಾ ಅವರು ಕಿರುನಾಟಕ ಪ್ರಹಸನಗಳನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಬರೆದಿದ್ದಾರೆ.

ಮಲ್ಲಿಕಾ ಅವರು ನವ್ಯದ ಅಂತ್ಯದ ಸಂದರ್ಭದಲ್ಲಿ ನಾಲ್ಕು ನಾಟಕಗಳನ್ನು ರಚಿಸಿದ್ದಾರೆ. “ಪುಣ್ಯಾಭಿಸಾರ”, “ಪುಣ್ಯ ಪಯೋನಿಧಿ”, “ಫಾಲ್ಗುಣ  ಪರ್ವ”, “ಕೃತಂಸ್ಮರ” ಈ ಮೊದಲಾದ ನಾಟಕಗಳನ್ನು ಎಪ್ಪತ್ತರ ದಶಕದಲ್ಲಿ ರಚಿಸಿದ್ದಾರೆ. 1991ರ ಸಂದರ್ಭದಲ್ಲಿ “ರಣಹದ್ದು”, “ತಿರುವುಮರುವು”ದಂತಹ ಪ್ರಹಸನಗಳನ್ನು ರಚಿಸಿದ್ದಾರೆ. ಅನುಸಯಾ ರಾಮರೆಡ್ಡಿಯವರು ‘ಮನೆಗೆ ಮೂರು ಮಾಣಿ ಕ್ಯ”, “ಮಿತ ಸಂಸಾರ ಸುಖಕ್ಕೆ ಆಧಾರ” ಎಂಬಂತಹ ಕುಟುಂಬ ಯೋಜನೆ ಕುರಿತಾದ ನಾಟಕಗಳನ್ನು ಎಪ್ಪತ್ತರ ದಶಕದಲ್ಲಿ ಬರೆದಿದ್ದಾರೆ. ಇದೇ ಅವಧಿಯಲ್ಲಿ ಸುಲೋಚನಾ ಆರಾಧ್ಯ ಅವರು “ತಪ್ಪಸ್ವಿನಿ”ಯೆಂಬ ಗೀತನಾಟಕವನ್ನು ರಚಿಸಿದ್ದಾರೆ. ಸಿ.ಎನ್. ಲಕ್ಷ್ಮೀದೇವಿಯವರು 1979ರಲ್ಲಿ “ದಶರಥ” ಎಂಬ ಪೌರಾಣಿಕ ನಾಟಕವನ್ನು ಬರೆದಿದ್ದಾರೆ. ಜಿ.ವಿ. ರೇಣುಕಾ ಅವರ “ಉಡತಡಿಯ ಮಲ್ಲಿಗೆ” ನಾಟಕವು ಇದೇ ಕಾಲಘಟ್ಟದಲ್ಲಿ ಪ್ರದರ್ಶನಗೊಂಡಿದೆ.

ಎರಡನೇ ಘಟ್ಟದ ಅವಧಿಯಲ್ಲಿ 1950ರಿಂದ 1980ರವರೆಗೆ ಮಹಿಳೆಯರು ಹೆಚ್ಚು ನಾಟಕಗಳನ್ನೇನೋ ರಚಿಸಿದರು. ಆದರೆ ಅವು ಹೆಚ್ಚಿನ ರಂಗಪ್ರಯೋಗಗಳನ್ನು ಕಾಣಲಿಲ್ಲ. ನವ್ಯದ ಧೋರಣೆಯನ್ನಿಟ್ಟುಕೊಂಡು ಯಾರೂ ನಾಟಕ ರಚಿಸಲಿಲ್ಲ. ನವ್ಯದ ಸಂದರ್ಭದಲ್ಲಿ ಮಹಿಳೆಯರಿಂದ ಪೌರಾಣಿಕ ಐತಿಹಾಸಿಕ ನಾಟಕಗಳು ರಚನೆಯಾದದ್ದು ಕುತೂಹಲವನ್ನು ಹುಟ್ಟಿಸುತ್ತದೆ.

ದಲಿತ ಬಂಡಾಯ ಸಂದರ್ಭದಲ್ಲಿ ನಾಟಕಗಳನ್ನು ರಚಿಸಿದ ಪ್ರಮುಖ ಮಹಿಳೆಯರಲ್ಲಿ ವಿಜಯಾ (ವಿಜಯಮ್ಮ), ಎಸ್. ಮಾಲತಿ, ಗೀತಾರಾಮಾನುಜಂ, ಸರೋಜ ಇಟ್ಟಣ್ಣವರ, ವಿಜಯಾ ಸುಬ್ಬರಾಜ, ವಸುಮತಿ ಉಡುಪ, ಎಸ್.ವಿ. ಪ್ರಭಾವತಿ, ಲಲಿತಾ ಸಿದ್ಧಬಸವಯ್ಯ, ವಿಜಯಶ್ರೀ ಸಬರದ, ಭಾಗೀರಥಿ ಹೆಗಡೆ, ಎಚ್.ಎಲ್. ಪುಷ್ಪ, ಇಂದಿರಾ ಹಾಲಂಬಿ, ಪದ್ಮಿನಿ ನಾಗರಾಜ, ಪಿ. ಚಂದ್ರಿಕಾ, ಜಯಶ್ರೀ ಕಂಬಾರ, ಎಂ. ಉಷಾ, ದು. ಸರಸ್ವತಿ ಈ ಮೊದಲಾದವರನ್ನು ಉಲ್ಲೇಖಿಸಬಹುದಾಗಿದೆ. ಇವರೊಂದಿಗೆ ಒಂದೋ, ಎರಡೋ ನಾಟಕಗಳನ್ನು ರಚಿಸಿದ ಲತಾ ರಾಜಶೇಖರ, ರತ್ನಾಮೂರ್ತಿ, ಸರಿತಾ ಕುಲಕರ್ಣಿ, ಕವಿತಾ ರೈ, ಸುಲೋಚನಾ ಆರಾಧ್ಯ, ಕೆ.ಎನ್. ವಿಜಯಲಕ್ಷ್ಮಿ, ದಮಯಂತಿ ನರೇಗಲ್ಲ, ಶಾರದಾ ಮೂರ್ತಿ, ಸುಜಾತಾ ಅಕ್ಕಿ, ಮಮತಾ ಸಾಗರ, ಮಲ್ಲಿಕಾ ಘಂಟಿ, ಶಕುಂತಲಾ ದುರಗಿ, ಲಲಿತಾಂಬಾ ಚಂದ್ರಶೇಖರ, ಎಸ್. ಹೇಮಲತಾ, ಕಲಾ ಮಂಜುನಾಥ, ಎಲ್.ಜಿ. ಮೀರಾ ಈ ಮೊದಲಾದ ಮಹಿಳಾ ನಾಟಕಕಾರರನ್ನು ಗುರುತಿಸಬಹುದಾಗಿದೆ.

ವಿಜಯಾ ಅವರು ಅನೇಕ ಬೀದಿನಾಟಕಗಳನ್ನು ರಚಿಸಿದ್ದು “ಬಂದರೋ ಬಂದರು” ಅವರ ಪ್ರಥಮ ಬೀದಿನಾಟಕವಾಗಿದೆ. ತುರ್ತಪರಿಸ್ಥಿತಿಯ ಕರಾಳ ಮುಖಗಳನ್ನು ಈ ನಾಟಕದಲ್ಲಿ ಕಾಣಬಹುದಾಗಿದೆ. ಈ ಬೀದಿನಾಟಕವು ಅನೇಕ ಪ್ರಯೋಗಗಳನ್ನು ಕಂಡಿದ್ದು ತಮಿಳು, ತೆಲಗು, ಮುಂತಾದ ಭಾಷೆಗಳಿಗೆ ಅನುವಾದವೂ ಆಗಿದೆ. “ಕೇಳ್ರಪ್ಪೊ ಕೇಳ್ರಿ”, “ಮುಖವಿಲ್ಲದವರು”, “ಎಲ್ಲಿದ್ದೇವೆ ನಾವು ಎಲ್ಲಿದ್ದೇವೆ”, “ಉಳ್ಳವರ ನೆರಳು” ಈ ಮೊದಲಾದ ಬೀದಿನಾಟಕಗಳನ್ನು ವಿಜಯಾ ಅವರು ರಚಿಸಿದ್ದು, “ಎಲ್ಲಿದ್ದೇವೆ ನಾವು ಎಲ್ಲಿದ್ದೇವೆ” ನಾಟಕವು ನೂರಾರು ಪ್ರಯೋಗಗಳನ್ನು ಕಂಡಿದೆ. ಇವರ ಅನೇಕ ಬೀದಿನಾಟಕಗಳನ್ನು ಬೆಂಗಳೂರಿನ ಚಿತ್ರ ನಾಟಕ ತಂಡವು ಪ್ರಯೋಗಿಸಿದೆ. ಚಿತ್ರನಾಟಕ ತಂಡವು ಬೀದಿನಾಟಕ ತಂಡವೆಂದೇ ಗುರುತಿಸಲ್ಪಟ್ಟಿತು. ದಲಿತ-ಬಂಡಾಯ ಸಂಘಟನೆಗಳು ಹುಟ್ಟುವುದಕ್ಕೆ ಮೊದಲೇ ವಿಜಯಾ ಅವರು ತಮ್ಮ ಬೀದಿನಾಟಕಗಳ ಮೂಲಕ ಜನಜಾಗೃತಿಯನ್ನುಂಟು ಮಾಡಿದ್ದರು.

ಎಸ್. ಮಾಲತಿಯವರು ರಚಿಸಿದ “ಕೂಲಿಹೆಣ್ಣು” ಬೀದಿನಾಟಕವು, ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಶೋಷಣೆಯ ವಿರುದ್ಧ ಬಂಡಾಯವೆದ್ದಿದೆ. “ಬೆಲೆ ಏರಿಕೆ” ಇವರ ಮತ್ತೊಂದು ಬೀದಿನಾಟಕವಾಗಿದೆ. ಹಾವಾಡಿಗರ ಆಟದ ತಂತ್ರವನ್ನು ಬಳಸಿ ಈ ನಾಟಕವನ್ನು ಪ್ರಯೋಗಿಸಲಾಗಿದೆ. ಇವರ “ಬುದ್ಧ ಹೇಳಿದ ಕಥೆ” ನಾಟಕ ನಟಮಿತ್ರರು ತಂಡದಿಂದ ಪ್ರಯೋಗಗೊಂಡಿದ್ದು ಮಾಲತಿಯವರೇ ನಿರ್ದೇಶನ ಮಾಡಿದ್ದಾರೆ. ಮಾಲತಿಯವರ “ಮರದತಾಯಿ”, “ಭೀಮ ಕಥಾನಕ”, “ಗಿಳಿಯಾದ ಮಂತ್ರವಾದಿ”, “ಸಪ್ತಸಾರಸ್ವತ” “ನ್ಯಾಯಕ್ಕೆ ಜಯ” ಈ ಮೊದಲಾದ ನಾಟಕಗಳು ಶಿವಮೊಗ್ಗದ ರಂಗತಂಡಗಳಿಂದ ಪ್ರಯೋಗಗೊಂಡಿವೆ.

ಗೀತಾ ರಾಮಾನುಜಂ ಈ ಕಾಲಘಟ್ಟದ ಮತ್ತೊಬ್ಬ ಮಹತ್ವದ ನಾಟಕಕಾರರಾಗಿದ್ದಾರೆ. ಇವರ “ನಿಜಗಲ್ಲಿನ ರಾಣ ” ನಾಟಕವು 28.12.1988ರಂದು ನ್ಯಾಷನಲ್ ಕಾಲೇಜು ವಿದ್ಯಾರ್ಥಿಗಳಿಂದ ಪ್ರದರ್ಶನಕಂಡು ಬಹುಮಾನಗಳಿಸಿತು. “ಸ್ಫುರದ್ರೂಪಿ ರಂಗಸ್ವಾಮಿ”, “ಬೆಳಕಿನೆಡೆಗೆ”, “ಅರಿವು”, “ಸ್ಪಂದನ”, “ವಾಸ್ತವಿಕತೆ” ಈ ಮೊದಲಾದ ಇವರ ನಾಟಕಗಳು ಅನೇಕ ಕಾಲೇಜು ಸಮಾರಂಭಗಳಲ್ಲಿ ಪ್ರದರ್ಶನ ಕಂಡಿವೆ. ಗೀತಾ ರಾಮಾನುಜಂ ಸ್ವತಃ ನಿರ್ದೇಶಕರಾಗಿದ್ದರು. ಇವರು ಕೆಲವು ನಾಟಕಗಳನ್ನು ಅನುವಾದ ಮಾಡಿದ್ದಾರೆ.

ಸರೋಜ ಇಟ್ಟಣ್ಣನವರ ಅವರು ಮೂರು ನಾಟಕಗಳನ್ನು ರಚಿಸಿದ್ದು 1988ರಲ್ಲಿ ಅವು ಪ್ರಕಟವಾಗಿವೆ. “ಪಾಸಿನ ಹುಡುಗರು”, “ಬಿಸಿಲು ನೆರಳು” ಈ ಎರಡು ನಾಟಕಗಳು ಮೊದಲು ಪ್ರಕಟವಾಗಿ ಪ್ರಯೋಗಗೊಂಡಿವೆ. 1990ರಲ್ಲಿ ಇವರ “ನಾಟಕದವಳು” ನಾಟಕ ಪ್ರಕಟವಾಗಿದೆ. ಇವರು ಈ ನಾಟಕದಲ್ಲಿ ಹೆಣ್ಣನ್ನು ಕೇಂದ್ರವಾಗಿರಿಸಿಕೊಂಡು ಅವಳ ಬವಣೆಯ ಜತೆಗೆ ಹೆಣ್ಣಿನ ಸಾಧ್ಯತೆಗಳನ್ನು ವಿವರಿಸಿದ್ದಾರೆ. ವೃತ್ತಿ ನಾಟಕದ ನಟನೊಂದಿಗೆ ಮದುವೆಯಾಗಿ ಸಾಮಾಜಿಕ ಅಪವಾದಗಳಿಗೆ ಈಡಾದ ಪ್ರಸಂಗವನ್ನು ಈ ನಾಟಕದಲ್ಲಿ ಕಾಣಬಹುದಾಗಿದೆ. ಎಸ್. ಸಂಧ್ಯಾ ಅವರು “ಮಂಥರೆಯ ಅಂತರಂಗ” ದಂತಹ ಏಕವ್ಯಕ್ತಿ ರಂಗಪ್ರಯೋಗ ಕೊಟ್ಟಿದ್ದಾರೆ. “ನೀಲಿ” ನಾಟಕದ ಜತೆಗೆ ಇತರ ನಾಲ್ಕು ಏಕಾಂಕನಾಟಕಗಳನ್ನಿವರು ಬರೆದಿದ್ದಾರೆ. ಎಸ್. ಸಂಧ್ಯಾ ಅವರು 1998ರಲ್ಲಿ ಲಲ್ಲೇಶ್ವರಿ ಮತ್ತು ಕಾರಿಕಾಲಮ್ಮೆ ಕುರಿತು ನಾಟಕಗಳನ್ನು ಬರೆದಿದ್ದಾರೆ. “ಮೊದಲ ತವರಿನ ಎರಡು ನಾಟಕಗಳು” ಹೆಸರಿನಲ್ಲಿ ಈ ಕೃತಿ ಪ್ರಕಟವಾಗಿದೆ.

ಇದೇ ಕಾಲಘಟ್ಟದಲ್ಲಿ ನಾಟಕಗಳನ್ನು ರಚಿಸಿದ ವಿಜಯಾ ಸುಬ್ಬರಾಜ 1998ರಲ್ಲಿ “ಪಾಂಚಾಲಿ ಮತ್ತು ಇತರ ನಾಟಕಗಳು” ರಂಗಕೃತಿಯನ್ನು ಪ್ರಕಟಿಸಿದ್ದಾರೆ. ತೆಲುಗಿನ ಮಹಾಕವಿ ಶ್ರೀನಾಥನ “ಪಲ್ನಾಡಿ ವೀರಚರಿತ್ರಂ” ಕಾವ್ಯಕಥೆಯನ್ನಾಧರಿಸಿ ಮತ್ತೊಂದು ಮಹಾಭಾರತ ನಾಟಕವನ್ನು 2003ರಲ್ಲಿ ರಚಿಸಿದ್ದಾರೆ. ಇವರ “ಪಾಂಚಾಲಿ” ನಾಟಕವು ನಾಟಕ ಅಕಾಡೆಮಿಯ ಸಹಾಯಧನದಿಂದ ಎರಡುಸಲ ಪ್ರದರ್ಶನ ಕಂಡಿದೆ. ಇದೊಂದು ಪೌರಾಣಿಕ ನಾಟಕವಾಗಿದೆ.“ದಂಗೆ ಎದ್ದವಳು”, “ನಗರವಧು”, “ಸಾಲವತಿ”, “ಪುಣ್ಯಕೋಟಿ”, “ಪೃಥ್ವಿವಲ್ಲಭ” ಇವು ಇವರ ಇತರ ನಾಟಕಗಳಾಗಿವೆ.

ಮಕ್ಕಳ ನಾಟಕಗಳಲ್ಲಿ ಆಸಕ್ತಿ ಹೊಂದಿರುವ ಜಿ.ವಿ. ರೇಣುಕಾ ಅವರು 1976ರಲ್ಲಿಯೇ “ಸುರಚಿ ಕಲಾವಿದರು” ಎಂಬ ಮಕ್ಕಳ ನಾಟಕ ಸಂಘವನ್ನು ಸ್ಥಾಪಿಸಿದರು. “ಉಡುತಡಿಯ ಮಲ್ಲಿಗೆ” ಹಾಗೂ “ಪಂಚವಟಿ” ಇವರ ಪ್ರಮುಖ ನಾಟಕಗಳಾಗಿದ್ದು ಉಳಿದಂತೆ ಕೆಲವು ಮಕ್ಕಳ ನಾಟಕಗಳನ್ನು ರಚಿಸಿದ್ದಾರೆ. ಎಸ್.ವಿ. ಪ್ರಭಾವತಿಯವರು ಕನ್ನಡದ ಪ್ರಮುಖ ಸಾಹಿತಿ. ಕವಿ-ಮಿಮರ್ಶಕಿಯಾಗಿ ಹೆಸರು ಮಾಡಿರುವ ಇವರು ಕೆಲವು ನಾಟಕಗಳನ್ನು ರಚಿಸಿದ್ದಾರೆ. ಅವರ “ಸ್ವಗತಗಳು” ಕಿರುನಾಟಕವು “ಪ್ರಯೋಗರಂಗ” ನಾಟಕ ಸ್ಪರ್ಧಯಲ್ಲಿ ಪ್ರದರ್ಶನ ಕಂಡಿದೆ. ಅವರ “ಪಾಂಚಾಲಿಯ ಸ್ವಗತ ಮತ್ತು ಇತರ ನಾಟಕಗಳು” ಕೃತಿಯಲ್ಲಿ ಬರುವ “ಪಾಂಚಾಲಿ” ನಾಟಕವು ಏಕವ್ಯಕ್ತಿ ಪ್ರದರ್ಶನದ ನಾಟಕವಾಗಿದೆ. ಈ ನಾಟಕವು ಕಾವ್ಯಾತ್ಮಕವಾಗಿದೆ.

ಅನೇಕ ಕಥೆ-ಕಾದಂಬರಿಗಳನ್ನು ರಚಿಸಿರುವ ವಸುಮತಿ ಉಡುಪ ಅವರು ಹಲವಾರು ನಾಟಕಗಳನ್ನು ರಚಿಸಿದ್ದಾರೆ.“ಮೂಲೋಕ” ಎಂಬ ಇವರ ನಾಟಕಗಳ ಸಂಕಲನ 2011ರಲ್ಲಿ ಪ್ರಕಟವಾಗಿದೆ. ಈ ಸಂಕಲನದಲ್ಲಿ “ಮೃಗತೃಷ್ಣಾ”, “ಕವಡೆ ಪುರಾಣ”, “ಅಗ್ನಿದಿವ್ಯ” ಎಂಬ ಮೂರು ನಾಟಕಗಳಿವೆ. ಈ ಸಂಕಲನದಲ್ಲಿರುವ “ಮೃಗತೃಷ್ಣಾ” ನಾಟಕವು 1999ರಲ್ಲಿ ಪ್ರಕಟವಾಗಿದ್ದು, ಶಿವಮೊಗ್ಗದ “ಅಭಿನಯ” ತಂಡದವರಿಂದ ಪ್ರಯೋಗಗೊಂಡು ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದೆ. ಈ ನಾಟಕವು ಕಾದಂಬರಿ ರೂಪದಲ್ಲಿ “ಸುಧಾ” ಪತ್ರಿಕೆಯಲ್ಲಿ ಧಾರವಾಹಿಯಾಗಿಯೂ ಪ್ರಕಟವಾಗಿದೆ. ಇವರ ಈ ಮೂರು ನಾಟಕಗಳ ವಿಶಿಷ್ಟತೆಯೆಂದರೆ, ಇವು ಮೊದಲು ಕಾದಂಬರಿಗಳಾಗಿ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿ ನಂತರದಲ್ಲಿ ನಾಟಕರೂಪ ಪಡೆದಿವೆ.

ಲೀಲಾವತಿ ರಾಮಕೃಷ್ಣ ಅವರು “ಶಿಖಂಡಿ”, “ನಿತ್ಯಕನ್ಯೆ” ಮೊದಲಾದ ನಾಟಕಗಳನ್ನು ರಚಿಸಿದ್ದಾರೆ. ಶಿಖಂಡಿ ನಾಟಕವು ಮಹಾಭಾರತದ ಅಂಬೆಯನ್ನು ಚಿತ್ರಿಸುವ ನಾಕಟವಾಗಿದ್ದು 2005ರಲ್ಲಿ ಪ್ರಕಟವಾಗಿದೆ. “ನಿತ್ಯಕನ್ಯೆ” ನಾಟಕವು ಯಯಾತಿ ರಾಜನ ಮಗಳು ಮಾಧವಿಗೆ ಸಂಬಂಧಿಸಿದ ಕಥಾನಕವಾಗಿದೆ. ಇವರ ನಾಟಕಗಳು ಪ್ರಯೋಗಗೊಂಡಿವೆ.

ಎಂ.ಎಸ್. ವೇದಾ ಅವರ “ಉತ್ತರ ಶಾಕುಂತಲಾ” ಎಂಬ ಪೌರಾಣಿಕ ನಾಟಕವನ್ನು ರಚಿಸಿದ್ದು, ಪ್ರಬುದ್ಧ ಶಾಕುಂತಲೆಯನ್ನು ಇಲ್ಲಿ ಕಾಣಬಹುದಾಗಿದೆ. ಈ ನಾಟಕದಲ್ಲಿ ದುಷ್ಯಂತನ ಪಾತ್ರವು ಫ್ಲಾಷ್ ಬ್ಯಾಕ್‍ದಲ್ಲಿ ಮೂಡಿ ಬಂದಿದೆ. ಹೆಣ್ಣು ಸದಾ ಆಸರೆಯನ್ನು ಬಯಸುವವಳಲ್ಲಿ, ಅವಳಿಗೂ ಸ್ವತಂತ್ರ ವ್ಯಕ್ತಿತ್ವವಿದೆ, ಅವಳು ಸ್ವತಂತ್ರವಾಗಿ ಬದುಕ ಬಲ್ಲಳೆಂಬುದನ್ನು ನಾಟಕ ಹೇಳುತ್ತದೆ.

25ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ನಾಟಕಗಳನ್ನು ರಚಿಸಿರುವ ಇಂದಿರಾ ಹಾಲಂಬಿ (ಗಿರಿವಾಸಿನಿ) ಯವರು ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಹೀಗೆ ಎಲ್ಲ ಬಗೆಯ ಕಥಾವಸ್ತುಗಳನ್ನು ಆಯ್ಕೆಮಾಡಿಕೊಂಡಿದ್ದಾರೆ. 2002ರಲ್ಲಿ “ಭೂ-ಕೈಲಾಸ” ನಾಟಕ ಪ್ರಕಟವಾಯಿತು. ನಂತರದಲ್ಲಿ “ಭಕ್ತಪ್ರಹ್ಲಾದ”, “ಚಂದ್ರಹಾಸ”, “ಪ್ರತಿಜ್ಞೆ” ಈ ಮುಂತಾದ ಪೌರಾಣಿಕ ನಾಟಕಗಳು ಪ್ರಕಟವಾದವು. 2007ರಲ್ಲಿ “ಬಾಂಧವ್ಯ” ಎಂಬ ಸಾಮಾಜಿಕ ನಾಟಕ ರಚನೆಯಾಯಿತು. ನಂತರದಲ್ಲಿ “ಋಣಮುಕ್ತರಲ್ಲ”ದಂತಹ ನಾಟಕಗಳು ಪ್ರಕಟವಾದವು. “ಪಂಚಮುಖಿ” ಹೆಸರಿನಲ್ಲಿ ಐದು ರೂಪಕಗಳನ್ನು ರಚಿಸಿರುವ ಇಂದಿರಾ ಅವರು ಮಕ್ಕಳ ನಾಟಕಗಳನ್ನು ರಚಿಸಿದ್ದಾರೆ. ಇಂದಿರಾ ಅವರು ಹೆಚ್ಚಿನ ಸಂಖ್ಯೆಯಲ್ಲಿ ನಾಟಕಗಳನ್ನು ರಚಿಸಿದ್ದರೂ, ಅವರ ನಾಟಕಗಳು ಅದೇ ಸಂಖ್ಯೆಯಲ್ಲಿ ಪ್ರಯೋಗಗೊಳ್ಳಲಿಲ್ಲ.

ವಿಜಯಶ್ರೀ ಸಬರದವರು “ಉರಿಲಿಂಗ”, “ಹೂವಿನ ತೇರನೇರಿ ಹೂವಾದವರು”ಎಂಬ ನಾಟಕಗಳನ್ನು ಮತ್ತು ಕೆಲವು ಬಾನುಲಿ ನಾಟಕಗಳನ್ನು ಪ್ರಕಟಿಸಿದ್ದಾರೆ. ಇವರ “ಎರಡು ನಾಟಕಗಳು” 2008ರಲ್ಲಿ ಪ್ರಕಟವಾಗಿವೆ. ಈ ಎರಡು ನಾಟಕಗಳು ಶರಣರನ್ನು ಕುರಿತಾಗಿವೆ. ಮೊದಲನೇ ನಾಟಕವು ಕಳ್ಳನಾಗಿದ್ದ ಉರಿಲಿಂಗ ಪೆದ್ದಿ, ಶರಣನಾಗಿ ಬೆಳೆದಪರಿಯನ್ನು ವಿವರಿಸುತ್ತದೆ. ಹರಳಯ್ಯ-ಮಧುವಯ್ಯ ಇವರ ಮಕ್ಕಳ ವಿವಾಹದ ದುರಂತವನ್ನು“ಹೂವಿನ ತೇರನೇರಿ ಹೂವಾದವರು”ನಾಟಕ ಹೇಳುತ್ತದೆ. ಇವರ “ಉರಿಲಿಂಗ” ನಾಟಕವು ಸಿ.ಜಿ.ಕೆ.ಯವರ ನಿರ್ದೇಶನದಲ್ಲಿ ಪ್ರಯೋಗಕಂಡಿದೆ. ಎರಡನೇ ನಾಟಕವೂ ಕೂಡ ಹವ್ಯಾಸಿ ನಾಟಕ ತಂಡಗಳಿಂದ ಪ್ರಯೋವಾಗಿದೆ. “ಉರಿಲಿಂಗ”ನಾಟಕವು ಹೆಚ್ಚು ಪ್ರಯೋಗಗಳನ್ನು ಕಂಡಿದ್ದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪಠ್ಯಪುಸ್ತಕವೂ ಆಗಿರುವುದನ್ನು ಗಮನಿಸಬಹುದಾಗಿದೆ.

ಲಲಿತಾ ಸಿದ್ಧಬಸವಯ್ಯನರ “ಇನ್ನೊಂದು ಸಭಾಪರ್ವ” ನಾಟಕವು 2010ರಲ್ಲಿ ಪ್ರಕಟವಾಗಿದೆ. ದ್ರೌಪದಿಯನ್ನೇ ಕೇಂದ್ರವಾಗಿರಿಸಿಕೊಂಡಿರುವ ಈ ನಾಟಕದ ಪ್ರಾಯೋಗಿಕ ವಿಮರ್ಶೇಯನ್ನು ಮುಂದಿನ ಅಧ್ಯಾಯದಲ್ಲಿ ಮಾಡಲಾಗಿದೆ. 2016-17ರಲ್ಲಿ ಬೆಂಗಳೂರಿನ ರಂಗಶಂಕರದಲ್ಲಿ ಈ ನಾಟಕ ಪ್ರಯೋಗವಾಗಿದೆ. ತುಮಕೂರಿನ ಸ್ವರಭಾರತಿ ಕಲಾಕೇಂದ್ರವು ಇವರ ಈ ನಾಟಕವನ್ನು ಪ್ರಯೋಗಿಸಿದೆ.

ಭಾಗೀರಥಿ ಹೆಗಡೆಯವರ ಎರಡು ನಾಟಕಗಳು ಪ್ರಕಟವಾಗಿವೆ. “ಪ್ರಭಾವತಿ” ಎಂಬ ನಾಟಕ 2000ರಲ್ಲಿ ಪ್ರಕಟವಾಗಿದ್ದು ಜನಪದ ಗೀತೆಯೊಂದರ ಹಿನ್ನಲೆಯಲ್ಲಿ ರಚನೆಯಾಗಿದೆ. ಎರಡನೇ ನಾಟಕ “ಅಧೋಗಮನ” ಪರಿಸರಕ್ಕೆ ಸಂಬಂಧಿಸಿದ ನಾಟಕವಾಗಿದೆ. ದಮಯಂತಿ ನರೇಗಲ್ಲರ “ಪಗಡೀ ಆಟಾ” 2008ರಲ್ಲಿ ಪ್ರಕಟವಾಗಿದೆ. ಇದು ಐದು ಅಂಕಗಳ ನಾಟಕವಾಗಿದ್ದು ಸಮಕಾಲೀನ ರಾಜಕೀಯದ ವಿಡಂಬನೆ ಈ ನಾಟಕದ ವಸ್ತುವಾಗಿದೆ. “ಅಮೇರಿಕಾ ಅಮೇರಿಕಾ ಮತ್ತು ಇತರ ನಾಟಕಗಳು” ಕೂಡಾ 2008ರಲ್ಲಿಯೇ ಪ್ರಕಟವಾಗಿದೆ. ಇದು ಏಕಾಂಕ ನಾಟಕಗಳ ಸಂಕಲನವಾಗಿದೆ. ರತ್ನಾಮೂರ್ತಿಯವರ “ಒಂದು ತೋಟದ ಕಥೆ ಮತ್ತು ಇತರ ನಾಟಕಗಳು” 2009 ರಲ್ಲಿ ಪ್ರಕಟವಾಗಿದೆ. ಪರಿಸರ ಪ್ರೇಮ ಮೊದಲ ನಾಟಕದ ವಸ್ತುವಾಗಿದೆ. ಉಳಿದ ನಾಟಕಗಳು ಪೌರಾಣಿಕ ನಾಟಕಗಳಾಗಿವೆ. ಲೀಲಾ ಮಣ್ಣಾಲ ಅವರ “ನವರಸಾಭಿನಯ” ಕೃತಿಯಲ್ಲಿ ಇಪ್ಪತ್ತು ಪ್ರಸಂಗಗಳಿವೆ. ಇದು 1999ರಲ್ಲಿ ಪ್ರಕಟವಾಗಿದೆ. 2004ರಲ್ಲಿ ಪ್ರಕಟವಾದ “ರಸವರ್ಷ” ಕಿರು ನಾಟಕಗಳ ಸಂಕಲನವಾಗಿದೆ.

ಎಸ್. ಸಂಧ್ಯಾ ಅವರು “ಮೊದಲ ತವರಿನ ಎರಡು ನಾಟಕಗಳು” ಕೃತಿಯನ್ನು 1998ರಲ್ಲಿ ರಚಿಸಿದ್ದಾರೆ. ಇವೆರಡೂ ನಾಟಕಗಳು ಮಹಿಳಾ ಆಧ್ಯಾತ್ಮಸಾಧಕಿಯರ ಬಗೆಗಿವೆ. “ಕಾರೈಕ್ಕಲ್‍ನ ಅಮ್ಮೇಯಾರ್” ಎಂಬ ನಾಟಕವು ತಮಿಳುನಾಡಿನಲ್ಲಿ 6ನೇ ಶತಮಾನದಲ್ಲಿ ಆಗಿಹೋದ ಕಾರಿಕಾಲಮ್ಮೆಯ ಕುರಿತದ್ದಾದರೆ, “ಲಲ್ಲೇಶ್ವರಿ” ಉತ್ತರ ಕಾಶ್ಮೀರದ (12ನೇ ಶತಮಾನ) ಸಂತಳೊಬ್ಬಳ ಕಥಾನಕವನ್ನೊಳಗೊಂಡಿದೆ. ಕೆಲವು ಕಿರು ನಾಟಕಗಳನ್ನು ಸಂಧ್ಯಾ ಅವರು ರಚಿಸಿದ್ದಾರೆ.“ಮಂಥರೆಯ ಅಂತರಂಗ” ಎಂಬ ಏಕವ್ಯಕ್ತಿ ರಂಗಪ್ರಯೋಗವನ್ನು ಇವರು ರಚಿಸಿದ್ದಾರೆ. “ದೀಪಿಕಾ” ಮತ್ತು “ಅಕ್ಯೂಕಿ” ಸಂಧ್ಯಾ ಅವರ ಸ್ತ್ರೀಪ್ರಧಾನ ನಾಟಕಗಳಾಗಿದ್ದು ಸ್ತ್ರೀಯ ಇಚ್ಛಾಶಕ್ತಿ ಮತ್ತು ಕ್ರಿಯಾಶಕ್ತಿ ಈ ನಾಟಕಗಳಲ್ಲಿ ಮೇಳೈಸಿವೆ. ಇ.ಪಿ. ಆಲಮೇಲು ಅವರು 2003ರಲ್ಲಿ “ಹೈಟೆಕ್ ಹಯವದನಾಚಾರ್ ಮತ್ತು ಇತರ ನಾಟಕಗಳು” ಕೃತಿಯನ್ನು ಪ್ರಕಟಿಸಿದ್ದಾರೆ. ಇವರ ನಾಟಕಗಳಲ್ಲಿ ಅಮೇರಿಕನ್ನಡಿಗರ ವಸ್ತುವೇ ಪ್ರಧಾನವಾಗಿದೆ. “ಕುಜದೋಷವೋ... ಶುಕ್ರದೆಸೆಯೋ” ಎಂಬ ನಗೆನಾಟಕವನ್ನು ಇವರು ರಚಿಸಿದ್ದಾರೆ.

2007ರಲ್ಲಿ ಪ್ರಕಟವಾಗಿರುವ “ಭೂಮಿಯಲ್ಲ ಇವಳು” ಎಚ್.ಎಲ್. ಪುಷ್ಪ ಅವರ ಮಹತ್ವದ ನಾಟಕವಾಗಿದೆ. ಜನ್ನಕವಿಯ “ಯಶೋಧರ ಚರಿತೆ”ಯಲ್ಲಿ ಬರುವ ಅಮೃತಮತಿಯ ಕಥನ ಇದಾಗಿದೆ. ಅಮೃತಮತಿಯ ಪಾತ್ರದ ಮೂಲಕ ಸ್ತ್ರೀ ಸಾಧ್ಯತೆಗಳನು ಕಟ್ಟಿಕೊಡುವುದು ಈ ನಾಟಕದ ಉದ್ದೇಶವಾಗಿದೆ. 1990ರಲ್ಲಿ ಪ್ರಕಟವಾಗಿರುವ ಮಲ್ಲಿಕಾ ಘಂಟಿಯವರ “ಚಾಜ” ನಾಟಕವು ಊಳಿಗಮಾನ್ಯ ವ್ಯವಸ್ಥೆಯ ಕ್ರೌರ್ಯವನ್ನು ಹೇಳುತ್ತದೆ. ಇವರ “ಒಂದು ಬಾವಿಯ ಸುತ್ತ” ನಾಟಕವು ಕಲಬುರಗಿಯಲ್ಲಿ ಇಪ್ಟಾ ಸಂಘಟನೆಯಿಂದ ಪ್ರಯೋಗಗೊಂಡಿದೆ.

ಆರ್.ಟಿ. ರಮಾ ಅವರು “ಐದು ನಾಟಕಗಳು” ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ. ವಿಜಯಶ್ರೀ ಸುವರ್ಣಾ ಅವರು “ಕಪ್ಪು ಹುಡುಗಿ”, “ಕಲ್ಯಾಣಿ ನನ್ನ ಹೆಂಡ್ತಿ”, “ನಾನೂನೀನೂ ಜೋಡಿ”, “ಮಾತೃವಾತ್ಸಲ್ಯ” ಹೆಸರಿನ ನಾಲ್ಕು ನಾಟಕಗಳನ್ನು ಪ್ರಕಟಿಸಿದ್ದಾರೆ. ಕವಿತಾ ರೈ ಅವರು “ಲೋಕಮುದ್ರಾ” ಎಂಬ ಮಹತ್ವದ ನಾಟಕವನ್ನು ರಚಿಸಿದ್ದಾರೆ. ಪುರಾಣ ಮತ್ತು ವರ್ತಮಾನಗಳನ್ನು ಬೆಸೆಯುವ ಪ್ರಯತ್ನ ಇಲ್ಲಿದೆ. ಪುರಾಣಗಳಲ್ಲಿದ್ದ “ಲೋಪಾಮುದ್ರೆ” ಕವಿತಾ ರೈ ಅವರಲ್ಲಿ “ಲೋಕಾಮುದ್ರೆ”ಯಾಗಿ ಕಾಣಿಸಿಕೊಂಡಿದ್ದಾಳೆ.

ಎಂ. ಉಷಾ ಅವರ “ಶೂಲಿಹಬ್ಬ” ಮಹತ್ವದ ನಾಟಕವಾಗಿದೆ. ರವೀಂದ್ರ ಕಲಾಕ್ಷೇತ್ರದ 50ನೇ ವರ್ಷದ ನೆನಪಿಗಾಗಿ ಆಯೋಜಿಸಿದ್ದ ನಾಟಕ (ಹಸ್ತಪ್ರತಿಗಳ) ಸ್ಪರ್ಧೆಯಲ್ಲಿ ಈ ನಾಟಕದ ಹಸ್ತಪ್ರತಿ ಪ್ರಶಸ್ತಿ ಪಡೆದುಕೊಂಡು ಪ್ರಯೋಗಗೊಂಡಿದೆ. ಈ ನಾಟಕವು ಕುಮಾರರಾಮ ರತ್ನಾಜಿಯವರ ಕಥಾವಸ್ತುವನ್ನೊಳಗೊಂಡಿದೆ. ಚರಿತ್ರೆಯನ್ನು ನೋಡುವ ಕ್ರಮಬದಲಾಗಬೇಕೆಂಬ ಆಶಯ ಈ ನಾಕಟದಲ್ಲಿದ್ದು ಈ ನಾಟಕದ ಪ್ರಾಯೋಗಿಕ ವಿಮರ್ಶೆಯನ್ನು ಮುಂದಿನ ಅಧ್ಯಾಯದಲ್ಲಿ ಮಾಡಲಾಗಿದೆ.

ಪಿ.ಚಂದ್ರಿಕಾ ಅವರ “ಮೋದಾಳಿ” ಪ್ರಥಮ ನಾಟಕವಾಗಿದ್ದು 2019ರಲ್ಲಿ ಪ್ರಕಟವಾಗಿದೆ. ಭೂತ-ವರ್ತಮಾನಗಳ ಮುಖಾಮುಖಿಯನ್ನು ಇಲ್ಲಿ ಕಾಣಬಹುದಾಗಿದೆ. ಹೆಣ್ಣಿನ ವ್ಯಕ್ತಿತ್ವ ಕುರಿತಂತೆ ಇಲ್ಲಿ ಹೊಸಬಗೆಯ ಚಿಂತನೆಯಿದ್ದು, ಇದು ಇತ್ತೀಚಿನ ನಾಟಕವಾಗಿದ್ದು ಇದನ್ನಿಲ್ಲಿ ಪ್ರಾಯೋಗಿಕ ವಿಮರ್ಶೆಗೊಳಪಡಿಸಲಾಗಿದೆ. ದು. ಸರಸ್ವತಿಯವರ “ಸಣ್ತಿಮ್ಮಿ ಪುರಾಣ” 2018ರಲ್ಲಿ ಪ್ರಕಟವಾಗಿದ್ದು ಇದರಲ್ಲಿ ಆರು ನಾಟಕಗಳಿವೆ. ರಂಗಭೂಮಿಯಲ್ಲಿ ಹೋರಾಟದ ಸಾಧ್ಯತೆಗಳನ್ನು ಕಂಡುಕೊಂಡಿರುವ ದು. ಸರಸ್ವತಿಯವರು ಮಹತ್ವದ ಬೀದಿನಾಟಕಗಳನ್ನು ರಚಿಸಿದ್ದಾರೆ. ಅವರ “ದನಿನ ಚಮ್ಡುದ್ ಮೆಟ್ ಮೆಟ್ಳಂಡ್ರೆ ಗ್ವಾಮಾತೆ ತುಳ್ದಂಗಲ್ವಾ?” ಎಂಬ ನಾಟಕವನ್ನು ಪ್ರಾಯೋಗಿಕ ವಿಮರ್ಶೆಗೊಳಪಡಿಸಲಾಗಿದೆ.

ಜಯಶ್ರೀ ಕಂಬಾರ ಅವರ “ಎರಡು ನಾಟಕಗಳು”ಕೃತಿ 2013ರಲ್ಲಿ ಸಪ್ನಾ ಪ್ರಕಾಶನದಿಂದ ಪ್ರಕಟಿತವಾಗಿವೆ. ಪುರಾಣ ಕಾಲದ ಯಯಾತಿಯ ಮಗಳು ಮಾಧವಿಯನ್ನು ಕುರಿತಾದ ಈ ನಾಟಕ ಮಹತ್ವದ ನಾಟಕವಾಗಿದೆ. ಇನ್ನೊಂದು ಕೃತಿ ಕೂಡಾ ಪೌರಾಣಿಕ ನಾಟಕವಾಗಿದೆ. “ಏಕಲವ್ಯ” ಹೆಸರಿನ ಮತ್ತೊಂದು  ನಾಟಕವು “ಋಣ” ಎಂಬ ಹೆಸರಿನಲ್ಲಿ ಪ್ರಯೋಗಗೊಂಡಿದೆ. ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಬಹುಭಾಷಾ ನಾಟಕೋತ್ಸವ ಸಮಿತಿಯಿಂದ ಈ ನಾಟಕ ಪ್ರಯೋಗಗೊಂಡಿದೆ. “ಮಾಧವಿ” ಸ್ತ್ರೀಸಾಧ್ಯತೆಯ ಮಹತ್ವದ ನಾಟಕವಾಗಿದ್ದು ಇದರ ಪ್ರಾಯೋಗಿಕ ವಿಮರ್ಶೆ ಮಾಡಲಾಗಿದೆ.

ಸುಜಾತ ಅಕ್ಕಿಯವರ “ಚಾಮ ಚೆಲುವೆ” ನಾಟಕವು ನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ. ಜಾನಪದದಲ್ಲಿ ಕೆಲಸ ಮಾಡಿರುವ ಸುಜಾತಾ ಅವರು ನಾಟಕದಲ್ಲೂ ಪ್ರಯೋಗ ಮಾಡಿದ್ದಾರೆ. ಬಳ್ಳಾರಿ ಜಿಲ್ಲೆಯವರಾದ ಇವರು ಈಗ ಮೈಸೂರಿನಲ್ಲಿದ್ದಾರೆ. ಮಂಡ್ಯ ರಮೇಶ ಅವರ ನಿರ್ದೇಶನದಲ್ಲಿ “ನಟನ” ತಂಡದಿಂದ ಈ ನಾಟಕ ಪ್ರಯೋಗಗೊಂಡಿದೆ.

ಭಾರ್ಗವಿ ನಾರಾಯಣ ಅವರ “ಅದು ಹೀಗೂ ಉಂಟು” ನಾಟಕವು ಬೆಂಗಳೂರಿನ ರಂಗಶಂಕರದಲ್ಲಿ ಗ್ರೀನ್ ಕ್ಲಬ್‍ವತಿಯಿಂದ ಪ್ರಯೋಗಗೊಂಡಿದೆ. ಬಿ.ವಿ. ಭಾರತಿಯವರ “ಅನಾಹತ”ನಾಟಕವು ಬೆಂಗಳೂರಿನ ಥೇಮಾ ತಂಡಿದಂದ ಪ್ರದರ್ಶನ ಕಂಡಿದೆ. ಕೆ.ಎನ್. ವಿಜಯಲಕ್ಷ್ಮಿಯವರ “ಯಮ”ನಾಟಕವು ಬೆಂಗಳೂರಿನ ಪ್ರಯೋಗರಂಗ ತಂಡದಿಂದ ಪ್ರಯೋಗಗೊಂಡಿದೆ. ಪದ್ಮಿನಿ ನಾಗರಾಜ ಅವರ “ಅವ್ವ” ನಾಟಕವು ರಂಗಶಂಕರದಲ್ಲಿ ಪ್ರಯೋಗಕಂಡಿದೆ. ಕಲಾ ಮಂಜುನಾಥ ಅವರ “ದಿಗಂಬರ ದಿವ್ಯ ವಸ್ತ್ರಾಂಬರೆ” ನಾಟಕವು ತುಮಕೂರಿನ ಜಾಗೃತಿ ಮಹಿಳಾ ಸಂಘದಿಂದ ಪ್ರದರ್ಶನ ಕಂಡಿದೆ. ಮಮತಾ ಜಿ. ಸಾಗರ ಅವರ “ಮಾಯಾ ಬಜಾರ್” ಮುಂಬಯಿಯ ನಾಟಕೋತ್ಸವದಲ್ಲಿ ಪ್ರಯೋಗಗೊಂಡಿದೆ. ಹೀಗೆ ಅನೇಕ ಮಹಿಳಾ ನಾಟಕಗಳು ಪ್ರಯೋಗಗೊಂಡಿವೆ.

ಪ್ರಯೋಗಗೊಳ್ಳದೇ ಇರುವ ಅನೇಕ ಮಹಿಳಾ ನಾಟಕಗಳಿವೆ. ಅವೂ ಕೂಡ ಮಹಿಳಾ ಹವ್ಯಾಸಿ ರಂಗಭೂಮಿಗೆ ಸೇರುತ್ತವೆ. ಗೀತಾ ಸಿತಾರಾಮ ಅವರ “ಊರ್ಮಿಳಾ”, “ಭೀಷ್ಮ”, ವಿಶಾಲಾಕ್ಷಿ ಲಕ್ಷ್ಮಣಗೌಡ ಅವರ “ಚಿರಸ್ಮೃತಿ”ಯಂತಹ ಪೌರಾಣಿಕ ನಾಟಕಗಳನ್ನು ಹೆಸರಿಸಬಹುದಾಗಿದೆ. ಲತಾ ರಾಜಶೇಖರ ಅವರ “ಅಹಿಂಸಾ ಪರಮೋ ಧರ್ಮಃ”, ಸುಲೋಚನಾ ಆರಾಧ್ಯ ಅವರ “ಕೆಳದಿಯ ಕಳಸ”, “ಕಿಂಕರ ಕಿರಣ”, “ತಪಸ್ವಿನಿ”. ಜಿ.ವಿ. ರೇಣುಕಾ ಅವರ “ಉಡತಡಿಯ ಮಲ್ಲಿಗೆ” ಎಂ.ಎನ್. ಸರೋಜಮ್ಮ ಅವರ “ಶ್ರೀರಾಮಾನುಜ” ಇವೆಲ್ಲಾ ಐತಿಹಾಸಿಕ ನಾಟಕಗಳಾಗಿವೆ.

ಕಲ್ಯಾಣಮ್ಮ ಅವರ “ಸ್ನೇಹಲತೆ”, ನಿರುಪಮಾ ಅವರ “ರಣಹದ್ದು”, ಅನಸೂಯ ರಾಮರೆಡ್ಡಿಯವರ “ಮನೆಗೆ ಮೂರು ಮಾಣಿಕ್ಯ”, ಸುಧಾ ಹರೀಶ್ ಅವರ “ದಿಢೀರ ಮದುವೆ”, ಶಕುಂತಲಾ ದುರಗಿಯವರ “ಮಗ್ಗುಲ ಮನೆ ಅತಿಥಿ ಮತ್ತು ಇತರ ನಾಟಕಗಳು” ಇವೆಲ್ಲಾ ಸಾಮಾಜಿಕ ನಾಟಕಗಳಾಗಿವೆ. ಶಾರದಾ ಮೂರ್ತಿಯವರ “ಅಕ್ಕಪಕ್ಕ” ಎ.ಪಂಕಜ ಅವರ “ಊರ್ಮೀಳೆ” ಸರಿತಾ ಕುಲಕರ್ಣಿಯವರ “ನಿಯತಿ” ನಾಟಕಗಳ ಸಂಕಲನವನ್ನು ಇಲ್ಲಿ ಹೆಸರಿಸಬಹುದಾಗಿದೆ.

ಇವೆಲ್ಲಾ ಮಹಿಳೆಯರ ಸ್ವತಂತ್ರ ಹವ್ಯಾಸಿ ನಾಟಕಗಳಾಗಿವೆ. ಇನ್ನು ರೂಪಾಂತರ ನಾಟಕಗಳು, ಅನುವಾದ ನಾಟಕಗಳು, ಮಕ್ಕಳನಾಟಕಗಳು, ಬಾನುಲಿ ನಾಟಕಗಳು, ಅಧಿಕ ಸಂಖ್ಯೆಯಲ್ಲಿವೆ. ಅವುಗಳನ್ನು ಇಲ್ಲಿ ಚರ್ಚೆಗೊಳಪಡಿಸಿಲ್ಲ. ಎಚ್. ನಾಗವೇಣಿಯವರ “ಗಾಂಧಿಬಂದ” ಕಾದಂಬರಿಯು ಚಂಪಾಶೆಟ್ಟಿಯವರ ನಿರ್ದೇಶನದಲ್ಲಿ ನಾಟಕವಾಗಿ ಯಶಸ್ವಿ ಪ್ರಯೋಗ ಕಂಡಿದೆ. ವೈದೇಹಿಯವರ ಮಕ್ಕಳ ನಾಟಕಗಳು ಪ್ರದರ್ಶನ ಕಂಡಿವೆ. ಇನ್ನು ಮಹಿಳಾ ರಂಗನಿರ್ದೇಶಕರ ಬಗೆಗೆ, ಮಹಿಳಾ ನಾಟಕ ತಂಡಗಳ ಬಗೆಗೆ ಪ್ರತ್ಯೇಕ ಕೃತಿಗಳನ್ನು ರಚಿಸುವಷ್ಟು ಕೆಲಸವಾಗಿದೆ. ಇದರ ಬಗೆಗೆ ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ. ಮೂರನೇ ಘಟ್ಟದಲ್ಲಿ ಮಹಿಳೆ ರಂಗಭೂಮಿಯಲ್ಲಿ ನಾಟಕಕಾರಳಾಗಿ ಮಹತ್ವದ ಸ್ಥಾನ ಪಡೆದಿದ್ದಾಳೆ. 

4. ಸಮಾರೋಪ:
ಮಹಿಳಾ ರಂಗನಾಟಕ ಪರಂಪರೆಯಲ್ಲಿ ಮುಖ್ಯವಾಗಿ ವೃತ್ತಿನಾಟಕಗಳು ಮತ್ತು ಹವ್ಯಾಸಿ ನಾಟಕಗಳು ಬರುತ್ತವೆ. ವೃತ್ತಿನಾಟಕ ಪರಂಪರೆಯಲ್ಲಿ ಕೇವಲ ಇಬ್ಬರು ಮಹಿಳೆಯರು ನಾಟಕಗಳನ್ನು ರಚಿಸಿದ್ದಾರೆ. 1961ರಲ್ಲಿ ಪ್ರಕಟವಾದ ನ್ಯಾಮತಿ ಕಮಲವ್ವನವರ ನಾಟಕ “ಮೂಲಾ ನಕ್ಷತ್ರ” ಹಾಗೂ 2006ರಿಂದ ಪ್ರಕಟವಾಗಿರುವ ಪ್ರೇಮಾ ಬಾದಾಮಿಯವರ ವೃತ್ತಿ ನಾಟಕಗಳು ಮುಖ್ಯವಾಗಿವೆ. ಪುರುಷ ವೃತ್ತಿನಾಟಕಕಾರಿಗಿಂತ ಇವರು ಭಿನ್ನವಾಗಿ ಬರೆದಿದ್ದಾರೆ. ಆದರೆ ಹೆಚ್ಚಿನ ಸಂಖ್ಯೆಯ ಮಹಿಳೆಯರು ವೃತ್ತಿನಾಟಕಗಳನ್ನು ರಚಿಸಲಿಲ್ಲವೆಂಬುದೇ ಕೊರತೆಯಾಗಿದೆ. “ಮೂಲಾನಕ್ಷತ್ರ” ನಾಟಕವು ಮೂಲಾನಕ್ಷತ್ರದಲ್ಲಿ ಹುಟ್ಟಿದವರಿಗೆ ತೊಂದರೆಯಾಗುತ್ತದೆಂಬ ಮೂಢನಂಬಿಕೆಯನ್ನು ಹೊಡೆದೋಡಿಸಿದೆ. ಪ್ರೇಮಾ ಬಾದಾಮಿಯವರ “ಧರಿತ್ರಿ” ನಾಟಕದಲ್ಲಿ ಪರಸ್ತ್ರೀಯರ ಸಂಗವ ಮಾಡಿದ ಪತಿಯನ್ನು ಕ್ಷಮಿಸಿದ ನಾಯಕಿ, ಅವನು ಪಶ್ಚಾತಾಪ ಪಟ್ಟುಕೊಂಡಾಗ ಮತ್ತೆ ಬದುಕುವ ಅವಕಾಶವನ್ನು ನೀಡುತ್ತಾಳೆ. ಹೆಣ್ಣು ಧರಿತ್ರಿಯಿದ್ದ ಹಾಗೆ ಎಲ್ಲವನ್ನು ಕ್ಷಮಿಸುತ್ತಾಳೆಂಬ ಆಶಯ ಇಲ್ಲಿದೆ. ಆದರೆ ಮಹಿಳೆಯರು ರಚಿಸಿರುವ ಈ ವೃತ್ತಿನಾಟಕಗಳು ನೂರಾರು ಪ್ರಯೋಗಗಳನ್ನು ಕಂಡು ವೃತ್ತಿರಂಗಭೂಮಿಯಲ್ಲಿ ಯಶಸ್ವಿಯಾಗಲಿಲ್ಲ. ಇದಕ್ಕೆ ಅನೇಕ ಕಾರಣಗಳಿವೆ.

ಮಹಿಳಾ ಹವ್ಯಾಸಿ ನಾಟಕ ಪರಂಪರೆಯಲ್ಲಿ ಮೂರು ಘಟ್ಟಗಳಿವೆ. ಈ ಘಟ್ಟಗಳನ್ನು ನವೋದಯ-ನವ್ಯ-ಬಂಡಾಯ ಘಟ್ಟಗಳೆಂದು ಗುರುತಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಆಯಾ ಘಟ್ಟದ ಆಶಯ-ಧೋರಣೆಗಳಿಗೆ ತಕ್ಕಂತೆ ಇವರ ನಾಟಕಗಳಿಲ್ಲ. ಹೀಗಾಗಿ ಅವುಗಳನ್ನು ಮೂರು ಘಟ್ಟಗಳೆಂದು ಗುರುತಿಸುವುದೇ ಸೂಕ್ತವಾದುದಾಗಿದೆ. 1916ರಲ್ಲಿ ರಚನೆಯಾದ ತಿರುಮಲಾಂಬಾ ಅವರ “ರಮಾನಂದಾ” ನಾಟಕದಿಂದ 2019ರಲ್ಲಿ ರಚನೆಯಾಗಿರುವ ಪಿ. ಚಂದ್ರಿಕಾ ಅವರ “ಮೋದಾಳಿ” ನಾಟಕದ ವರೆಗೆ ಈ ಪರಂಪರೆ ಬೆಳೆದುಕೊಂಡು ಬಂದಿದೆ. ಮೂರೂ ಘಟ್ಟಗಳ ಈ ಅವಧಿಯಲ್ಲಿ ಪೌರಾಣಿಕ ನಾಟಕಗಳು, ಐತಿಹಾಸಿಕ ನಾಟಕಗಳು, ಸಾಮಾಜಿಕ ನಾಟಕಗಳು, ಬೀದಿನಾಟಕಗಳು, ಏಕವ್ಯಕ್ತಿ ಪ್ರಯೋಗದ ನಾಟಕಗಳು, ರಚನೆಯಾಗಿವೆ. ಇವರಲ್ಲಿ ಗೀತನಾಟಕಗಳ ಮತ್ತು ಜನಪದಶೈಲಿಯ ನಾಟಕಗಳ ರಚನೆ ಕಾಣಿಸುವುದಿಲ್ಲ.

ಪೌರಾಣಿಕ ನಾಟಕಗಳಲ್ಲಿ ತಿರುಮಲಾಂಬಾ ಅವರ “ಚಂದ್ರವದನಾ” ಪ್ರಥಮ ಪೌರಾಣಿಕ ನಾಟಕವಾಗಿದೆ. ನಂತರದಲ್ಲಿ ಪ್ರಕಟವಾದ ಅವರ “ಭಾರ್ಗವ ಗರ್ವಭಂಗ”, “ವಿವೇಕೋದಯ”, “ಯಯಾತಿ”, “ತಪತೀ ಕಲ್ಯಾಣ” ಇವೆಲ್ಲ ಪೌರಾಣಿಕ ನಾಟಕಗಳೇ ಆಗಿವೆ. ತಿರುಮಲೆ ರಾಜಮ್ಮನವರ “ತಪಸ್ವಿನಿ” ಎಂಬ ಪೌರಾಣಿಕ ನಾಟಕವು 1962ರಲ್ಲಿ ರಚನೆಯಾಗಿದೆ. ಸಿ.ಎನ್. ಜಯಲಕ್ಷ್ಮಿದೇವಿಯವರ “ದಶರಥ” 1976ರಲ್ಲಿ ಪ್ರಕಟವಾಗಿದೆ. ಅವರ ಇನ್ನೊಂದು ನಾಟಕ “ದೇವಯಾನಿ” 1993ರಲ್ಲಿ ಪ್ರಕಟವಾಗಿದೆ. ಗೀತಾ ಸೀತಾರಮ ಅವರ “ಊರ್ಮಿಳಾ” 1996ರಲ್ಲಿ ಪ್ರಕಟವಾಗಿದೆ. ವಸುಮತಿ ಉಡುಪ ಅವರ “ಮೃಗತೃಷ್ಣಾ” 1999ರಲ್ಲಿ ಪ್ರಕಟವಾಗಿದೆ. ಲೀಲಾವತಿ ರಾಮಕೃಷ್ನ ಅವರ “ನಿತ್ಯಕನ್ಯೆ” 2003ರಲ್ಲಿ ರಚನೆಯಾದರೆ, ಎಚ್.ಎಲ್. ಪುಷ್ಪಾ ಅವರ “ಭೂಮಿಯಲ್ಲ ಇವಳು” 2004ರಲ್ಲಿ ಪ್ರಕಟವಾಗಿದೆ. ಲೀಲಾವತಿ ರಾಮಕೃಷ್ಣ ಅವರ “ಶಿಖಂಡಿ” 2005ರಲ್ಲಿ ಪ್ರಕಟಗೊಂಡರೆ, ಎಸ್.ವಿ. ಪ್ರಭಾವತಿಯವರ “ಪಾಂಚಾಲಿಯ ಸ್ವಗತ” 2009ರಲ್ಲಿ ಮುದ್ರಣಗೊಂಡಿದೆ. ವಿಜಯ ಸುಬ್ಬರಾಜ ಅವರ “ಪಾಂಚಾಲಿ” ಮತ್ತು ಲಲಿತಾ ಸಿದ್ಧಬಸವಯ್ಯ ಅವರ “ಇನ್ನೊಂದು ಸಭಾಪರ್ವ” ನಾಟಕಗಳು 2010ರಲ್ಲಿ ಪ್ರಕಟವಾಗಿವೆ. ಕವಿತಾ ರೈ ಅವರ “ಲೋಕಮುದ್ರಾ” 2011ರಲ್ಲಿ ಪ್ರಕಟವಾಗಿದೆ. ಗೀತಾ ಸೀತಾರಾಮ ಅವರ “ಭೀಷ್ಮ” ಮತ್ತು ವಿಶಾಲಾಕ್ಷಿ ಲಕ್ಷಣಗೌಡ ಅವರ “ಚಿರಸ್ಮೃತಿ” ಇವೂ ಕೂಡ ಪೌರಾಣಿಕ ನಾಟಕಗಳೇ ಆಗಿವೆ.

ಪುರುಷನಾಟಕಕಾರರಿಗೆ ಸರಿಸಮಾನವಾಗಿ ಮಹಿಳೆಯರು ಪೌರಾಣಿಕ ನಾಟಕಗಳನ್ನು ರಚಿಸಿದ್ದಾರೆ. ಪುರುಷರ ಪೌರಾಣಿಕ ನಾಟಕಗಳಲ್ಲಿ ಕಾಣಿಸದ ಸ್ತ್ರೀ ಸಾಧ್ಯತೆಗಳು, ಮಹಿಳಾ ನಾಟಕಕಾರರಲ್ಲಿ ಕಾಣಿಸಿಕೊಂಡಿವೆ. ಪುರಾಣಗಳಲ್ಲಿ ಮೌನವಾಗಿ ರೋಧಿಸುತ್ತಿದ್ದ ಕುಂತಿ, ಇಲ್ಲಿ ಧೈರ್ಯವಾಗಿ ಎದ್ದು ನಿಂತು ತನ್ನ ವೇದನೆಯನ್ನು ತೋಡಿಕೊಂಡಿದ್ದಾಳೆ. ಪುರಾಣದ ಪಾಂಚಾಲಿ ಮೌನವಾಗಿ ವಸ್ತ್ರಾಪಹರಣಕ್ಕೊಳಗಾಗಿದ್ದರೆ, ಇಲ್ಲಿಯ ಪಾಂಚಾಲಿ ವಸ್ತ್ರಾಪಹರಣವನ್ನು ಪ್ರತಿಭಟಿಸಿ ನಿಂತಿದ್ದಾಳೆ.

ಇದೇ ರೀತಿ ಪುರಾಣ ಪಾತ್ರಗಳಾದ ಅಮೃತಮತಿ, ಅಂಬೆ, ದೇವಯಾನಿ, ಶಾಕುಂತಲಾ, ಊರ್ಮಿಳೆ ಇವರು ಈ ಮಹಿಳಾ ನಾಟಕಗಳಲ್ಲಿ ದನಿಯೆತ್ತಿ ನಿಂತಿದ್ದಾರೆ. ಸ್ತ್ರೀ ಸಾಧ್ಯತೆಯ ಅನಂತ ಮುಖಗಳನ್ನು ಈ ಪೌರಾಣಿಕ ನಾಟಕಗಳಲ್ಲಿ ಕಾಣಬಹುದಾಗಿದೆ. ದ್ರೌಪದಿಯಂತೂ ಈ ನಾಟಕಕಾರ್ತಿಯರಿಗೆ ಸಾಧ್ಯತೆಯ ಸಂಕೇತವಾಗಿದ್ದಾಳೆ. ಸೀತೆ, ಮಂಡೋದರಿಯ ಪಾತ್ರಗಳೂ ಇಲ್ಲಿ ಹೊಸ ಬೆಳಕಿನಲ್ಲಿ ಥಳ ಥಳ ಹೊಳೆಯುತ್ತವೆ. ಇತ್ತೀಚಿನ ಮಹಿಳಾ ನಾಟಕಕಾರರು ಈ ಪೌರಾಣಿಕ ಪಾತ್ರಗಳನ್ನು ಸ್ತ್ರೀವಾದಿ ಅಧ್ಯಯನದ ನೆಲೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ದುಶ್ಯಾಸನ ದ್ರೌಪದಿಯ ಸೀರೆಯನ್ನು ಸೆಳೆಯುತ್ತ ಹೋದಂತೆ ಅವಮಾನಿತಳಾದ ಆಕೆ, ಇಲ್ಲಿ ಕುದಿಯುತ್ತಿರುವ ದ್ರೌಪದಿಯಾಗಿ ಕಂಡಿದ್ದಾಳೆ. ದ್ರೌಪದಿಯ ಒಳಗಿನ ಬೇಗುದಿ ಮಹಿಳೆಯರ ಈ ನಾಟಕಗಳಲ್ಲಿ ಪ್ರತಿಭಟನೆಯ ಧ್ವನಿಯಾಗಿ ಕಾಣಿಸಿಕೊಂಡಿದೆ. ಇವರು ಸೃಷ್ಟಿಸಿರುವ ದ್ರೌಪದಿ ಇಲ್ಲಿ ಸ್ತ್ರೀವಾದಿಯಾಗಿ ಝಳಪಿಸಿದ್ದಾಳೆ.

ಯಶೋಧರರಾಜನ ರಾಣಿ ಅಮೃತಮತಿ ಈ ಮಹಿಳಾ ನಾಟಕಗಳಲ್ಲಿ ಕಳಂಕಿತೆಯಾಗಿ ಕಾಣಿಸಿಕೊಳ್ಳದೆ, ಉಸಿರುಗಟ್ಟಿಸುವ ವಾತಾವರಣದಿಂದ ಬಿಡುಗಡೆಗೊಂಡ ಹೊಸ ಪಾತ್ರವಾಗಿ ಕಾಣಿಸಿಕೊಂಡಿದ್ದಾಳೆ. ಐಷಾರಾಮದ ಪ್ರಭಾವಳಿಯಿಂದ ಬಿಡುಗಡೆಯಾಗಿ, ಸಾಮಾನ್ಯ ಮಹಿಳೆಯಾಗಿ ಬದುಕಬೇಕೆಂದವಳು ಪ್ರಯತ್ನಿಸಿದ್ದಾಳೆ. ಹೆಣ್ಣು ಭೂಮಿಯಲ್ಲವೆಂಬ ಆಶಯ ಇಲ್ಲಿ ಸ್ಪಷ್ಟವಾಗಿದೆ. ಹೆಣ್ಣಿನ ಸಹನೆಗೂ ಒಂದು ಮಿತಿಯಿದೆ, ಆ ಮಿತಿಯನ್ನು ಮೀರಿದರೆ ಅವಳೂ ಸ್ಪೋಟಿಸುತ್ತಾಳೆಂಬ ಎಚ್ಚರವೂ ಇಲ್ಲಿದೆ. ಎಚ್.ಎಲ್. ಪುಷ್ಪಾ ಅವರ “ಭೂಮಿಯಲ್ಲ ಇವಳು” ನಾಟಕ ಇದನ್ನು ಸ್ಪಷ್ಟಪಡಿಸುತ್ತದೆ. ಅದೇ ರೀತಿ ಲೀಲಾವತಿ ರಾಮಕೃಷ್ಣ ಅವರ “ಶಿಖಂಡಿ” ನಾಟಕದಲ್ಲಿ ಮಹಾಭಾರತದ ಅಂಬೆ ಹೊಸ ಅವತಾರ ತಾಳಿದ್ದಾಳೆ. ಅಂಬೆ ಇಲ್ಲಿ ಶೋಷಣೆಗೊಳಪಟ್ಟ ಸ್ತ್ರೀದನಿಯಾಗಿ ಎಚ್ಚತ್ತು ನಿಂತಿದ್ದಾಳೆ. ದ್ವಿಲಿಂಗಿಗಳ ಮಾನಸಿಕ ತೊಳಲಾಟವನ್ನು ಹೇಳುವ ಈ ನಾಟಕ ಇಂದಿಗೂ ಪ್ರಸ್ತುತವಾಗುತ್ತದೆ.

ಯಯಾತಿಯ ಮಗಳು ಮಾಧವಿ ಹೆಚ್ಚು ಶೋಷಣೆಗೊಳಗಾದ ಪಾತ್ರವಾಗಿದ್ದಾಳೆ. ಹೆಣ್ಣು ಭೋಗದ ವಸ್ತುವಾಗಿ ಇಲ್ಲಿ ಒಬ್ಬನಿಂದ ಇನ್ನೊಬ್ಬ ರಾಜನಿಗೆ ಮಾರಾಟವಾಗುತ್ತಾಳೆ. ಇದನ್ನು ಈ ಮಹಿಳಾ ನಾಟಕಕಾರರು ತೀವ್ರವಾಗಿ ವಿರೋಧಿಸಿದ್ದಾರೆ. 1922ರಲ್ಲಿ ಪ್ರಕಟವಾದ ತಿರುಮಲಾಂಬಾ ಅವರ “ವಿವೇಕೋದಯ” ನಾಟಕ, ಲೀಲಾವತಿ ರಾಮಕೃಷ್ಣ ಅವರ “ನಿತ್ಯಕನ್ಯೆ” ನಾಟಕ ಹಾಗೂ ಜಯಶ್ರೀ ಕಂಬಾರ ಅವರ “ಮಾಧವಿ” ನಾಟಕ ಈ ಮೊದಲಾದ ನಾಟಕಗಳಲ್ಲಿ ಯಯಾತಿಯ ಮಗಳು ಮಾಧವಿ ಹೊಸ ರೂಪದಲ್ಲಿ ಕಾಣಿಸಿಕೊಂಡಿದ್ದಾಳೆ. ಪುರಾಣವನ್ನು ಒಡೆಯುವ, ಇತಿಹಾಸವನ್ನು ಮುರಿದು ಕಟ್ಟುವ ಅನೇಕ ಹೊಸ ಪ್ರಯತ್ನಗಳು ಈ ಮಹಿಳಾ ನಾಟಕಗಳಲ್ಲಿವೆ.

ಸಿ.ಎನ್. ಜಯಲಕ್ಷ್ಮಿದೇವಿಯವರ “ದೇವಯಾನಿ” ಕಾರ್ನಾಡರ “ದೇವಯಾನಿ”ಯಂತೆ ಬೆಳೆಯದಿದ್ದರೂ, ತಾನು ಶ್ರೇಷ್ಠ ಮಹಿರ್ಷಿಯ ಮಗಳೆಂಬ ಅಹಂಕಾರದಿಂದ ಬೀಗುತ್ತಾಳೆ. ಶರ್ಮಿಷ್ಠೆ ಯಯಾತಿಗೆ ಹತ್ತಿರವಾದಂತೆ, ದೇವಯಾನಿ ಯಯಾತಿಯಿಂದ ದೂರವಾಗುತ್ತಾಳೆ. ಈ ಎರಡು ಮಹಿಳಾ ಪಾತ್ರಗಳ ವಿರುದ್ಧ ಸ್ವಭಾವದ ಗುಣಗಳನ್ನು ಇಲ್ಲಿ ನಾಟಕಕಾರ್ತಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಪುರಾಣದ “ಲೋಪಾಮುದ್ರೆ” ನಾಟಕವನ್ನು ಕವಿತಾ ರೈ ಅವರು “ಲೋಕಾಮುದ್ರೆಯಾಗಿ” ಹೊಸ ರೂಪದೊಂದಿಗೆ ರಚನೆ ಮಾಡಿದ್ದಾರೆ. ಹೀಗೆ ಮಹಿಳೆಯರ ಈ ನಾಟಕಗಳಲ್ಲಿ ಪುರಾಣ ಪಾತ್ರಗಳಾದ ಅಹಲ್ಯಾ, ಸೀತೆ, ದ್ರೌಪದಿ, ತಾರಾ, ಮಂಡೋದರಿ ಹೊಸ ಆಶಯಗಳೊಂದಿಗೆ ಹೊಸ ಸಾಧ್ಯತೆಗಳಾಗಿ ಕಾಣಿಸಿಕೊಂಡಿವೆ. ಪುರಾಣದಲ್ಲಿ ನಿರ್ಲಕ್ಷಿಸಲ್ಪಟ್ಟ ಊರ್ಮಿಳೆ, ಗೀತಾ ಸೀತಾರಾಮ್ ಅವರ ನಾಟಕದಲ್ಲಿ ವಿರಾಗಿಣಿಯಾಗಿ ಕಾಣಿಸಿಕೊಂಡಿದ್ದಾಳೆ. ಹೀಗೆ ಈ ಮಹಿಳಾ ನಾಟಕಗಳಲ್ಲಿ ಪುರಾಣ ಪಾತ್ರಗಳು ವರ್ತಮಾನದಲ್ಲಿ ಬೆಳೆದು ನಿಂತಿವೆ.

ಮಹಿಳೆಯರು ಅನೇಕ ಐತಿಹಾಸಿಕ ನಾಟಕಗಳನ್ನು ರಚಿಸಿದ್ದು ಅವುಗಳನ್ನು ಕುರಿತಂತೆ ಚರ್ಚೆ ನಡೆಯ ಬೇಕಾಗಿದೆ. 1957ರಲ್ಲಿ ನೆಹರೂ ಪ್ರಕಟನಾಲಯದಿಂದ ಪ್ರಕಟವಾದ ತಿರುಮಲೆ ರಾಜಮ್ಮ (ಭಾರತಿ) ನವರ “ಮಹಾಸತಿ” ಮಹಿಳೆಯರ ಪ್ರಥಮ ಐತಿಹಾಸಿಕ ನಾಟಕವಾಗಿದೆ.

ಸುಲೋಚನಾ ಆರಾಧ್ಯ ಅವರ “ತಪಸ್ವಿನಿ” ನಾಟಕವು 1976ರಲ್ಲಿ ಪ್ರಕಟವಾದರೆ, “ಕಿಂಕರ ಕಿರಣ” 1978ರಲ್ಲಿ ಮತ್ತು “ಕೆಳದಿಯ ಅರಸ” 1980ರಲ್ಲಿ ಪ್ರಕಟವಾಗಿದೆ. ಈ ನಾಟಕಕಾರ್ತಿ ಮೂರು ಐತಿಹಾಸಿಕ ನಾಟಕಗಳನ್ನು ರಚಿಸಿದ್ದಾರೆ. ಎಂ.ಎನ್. ಸರೋಜಮ್ಮ ಅವರು “ಶ್ರೀರಾಮಾನುಜ” ನಾಟಕವನ್ನು 1984ರಲ್ಲಿ ಪ್ರಕಟಿಸಿದ್ದು, ಮೈಸೂರಿನ ಕೃಷ್ಣಾಂಜಲಿ ಸಂಘದಿಂದ ಈ ನಾಟಕ ಪ್ರಕಟವಾಗಿದೆ. ವಿಶಿಷ್ಟಾದ್ವೈತ ಸಿದ್ಧಾಂತವನ್ನು ನೀಡಿದ ಶ್ರೀರಾಮಾನುಜಾಚಾರ್ಯರ ಜೀವನಚರಿತ್ರೆಯನ್ನು ಕುರಿತು ಆರು ಅಂಕಗಳಲ್ಲಿ ಈ ನಾಟಕ ರಚನೆಯಾಗಿದೆ. ಇದು ನಾಟಕವಾಗುವದಕ್ಕಿಂತ ಕಾದಂಬರಿಯಾಗಿದ್ದರೆ ಸರಿಯಾಗಿರುತ್ತಿತ್ತೆಂದೆನಿಸುತ್ತದೆ. ರಂಗಪ್ರಯೋಗಗಳ ಸಾಧ್ಯತೆಗಳು ಇಲ್ಲಿ ತುಂಬ ಕಡಿಮೆ ಇವೆ.

ಎಸ್.ಸಂಧ್ಯಾ ಅವರ “ಮೊದಲ ತವರಿನ ನಾಟಕಗಳು” ಕೃತಿ 1998ರಲ್ಲಿ ಅಂಕಿತ ಪುಸ್ತಕ ಪ್ರಕಾಶನದಿಂದ ಪ್ರಕಟವಾಗಿದೆ. ಲತಾ ರಾಜಶೇಖರ ಅವರು “ಅಹಿಂಸಾ ಪರಮೋಧರ್ಮಃ” ನಾಟಕರಚಿಸಿದ್ದು, ಅದು ಸಪ್ನಾ ಬುಕ್‍ಹೌಸ್‍ದಿಂದ 2012ರಲ್ಲಿ ಪ್ರಕಟವಾಗಿದೆ. ಎಂ. ಉಷಾ ಅವರ “ಶೂಲಿ ಹಬ್ಬ” ನಾಟಕವು 2015ರಲ್ಲಿ ಸಿರಿವರ ಪ್ರಕಾಶನದಿಂದ ಪ್ರಕಟವಾಗಿದೆ. ಕಾಕೋಳು ಸರೋಜರಾವ್ ಅವರು “ಕರ್ನಾಟಕ ರಮಾರಮಣ” ಮತ್ತು “ಪಾಂಚಜನ್ಯ” ಎಂಬ ಎರಡು ಐತಿಹಾಸಿಕ ನಾಟಕಗಳನ್ನು ರಚಿಸಿದ್ದಾರೆ. ಇನ್ನೂ ಕೆಲವು ಮಹಿಳೆಯರು ಐತಿಹಾಸಿಕ ನಾಟಕಗಳನ್ನು ರಚಿಸಿದ್ದಾರೆ.

ಐತಿಹಾಸಿಕ ನಾಟಕಕಾರರಲ್ಲಿ ಸಂಸ, ಎಂ.ಆರ್.ಶ್ರೀ, ಮಾಸ್ತಿ, ಕುವೆಂಪು, ಶ್ರೀರಂಗ, ಗಿರೀಶ್ ಕಾರ್ನಾಡ ಈ ಮೊದಲಾದ ನಾಟಕಕಾರರು ಪ್ರಮುಖರಾಗಿದ್ದಾರೆ, ಮಹಿಳೆಯರಲ್ಲಿ ಈ ಮೇಲೆ ಹೆಸರಿಸಿರುವ ನಾಟಕಕಾರರು ಪ್ರಮುಖರಾಗಿದ್ದಾರೆ. ತಿರುಮಲೆ ರಾಜಮ್ಮನವರು ತಮ್ಮ ನಾಟಕದಲ್ಲಿ ಹೆಗ್ಗಡದೇವನ ಕೋಟೆಯ, ದೇಕಬ್ಬೆಯ ದುರಂತದ ಬದುಕನ್ನು ಚಿತ್ರಿಸಿದ್ದಾರೆ. ನಾಡಾಧಿಪತಿ ರವಿಗ-ಪೊನ್ನಬ್ಬೆ ಮಗಳಾದ ದೇಕಬ್ಬೆಯ ಸತಿಸಹಗಮನ ಪದ್ಧತಿಯ ದುರಂತ ಚಿತ್ರಣ ಇಲ್ಲಿದೆ. ವಿಜಯನಗರದ ಅರಸು ಕೃಷ್ಣದೇವರಾಯನನ್ನು ಕುರಿತು ಕಾಕೋಳು ಸರೋಜರಾವ್ ನಾಟಕ ರಚಿಸಿದ್ದರೆ, ಹೊಯ್ಸಳರ ರಾಜಧಾನಿ ದ್ವಾರಸಮುದ್ರ (ಹಳೇಬಿಡು) ನಶಿಸಿಹೋಗಲು ಒಂದು ಹೆಣ್ಣಿಗಾದ ಅನ್ಯಾಯವೇ ಕಾರಣವೆಂದು ಕಮಲಾ ರಾಮಸ್ವಾಮಿ ತಮ್ಮ “ಅಭಿಶಾಪ” ನಾಟಕದಲ್ಲಿ ಹೇಳಿದ್ದಾರೆ. ಸೂಲೋಚನಾ ಆರಾಧ್ಯ ಅವರು “ಕೆಳದಿಯ ಕಳಸ” ನಾಟಕದಲ್ಲಿ 17ನೇ ಶತಮಾನದಲ್ಲಿ ಕೆಳದಿಯನ್ನು ಆಳ್ವಿಕೆ ಮಾಡಿದ ಚೆನ್ನಮ್ಮನ ಸಾಧನೆಗಳನ್ನು ಹೇಳಿದ್ದಾರೆ. ಸ್ತ್ರೀ ರಾಜ್ಯಭಾರ ಮಾಡಿದಾಗ ಎಂತೆಂತಹ ಸವಾಲುಗಳು ಎದುರಾಗುತ್ತವೆಂಬುದನ್ನು ಈ ನಾಟಕ ಹೇಳುತ್ತದೆ. ಸ್ವಾಧಿ ಅರಸರ ಮಾತುಗಳಲ್ಲಿ ಚೆನ್ನಮ್ಮನ ಹಿರಿಮೆಯನ್ನು ಕಾಣಬಹುದಾಗಿದೆ. ಇದೇ ರೀತಿ ಲತಾ ರಾಜಶೇಖರ ಅವರು ಮಗದ ಸಾಮ್ರಾಟನಾಗಿದ್ದ ಶ್ರೇಣಿಕ ಮಹಾರಾಜನ ಜೀವನವೃತ್ತಾಂತವನ್ನು ತಮ್ಮ “ಅಹಿಂಸಾ ಪರಮೋಧರ್ಮಃ” ನಾಟಕದ ಮೂಲಕ ಅಭಿವ್ಯಕ್ತಿಪಡಿಸಿದ್ದಾರೆ. ಭೋಗದಲ್ಲಿ ಮುಳುಗಿದ್ದ ಶ್ರೇಣಿಕನನ್ನು ಅಲೌಕಿಕದ ಕಡೆಗೆ ತರಲು ಪ್ರಯತ್ನಿಸುವ ಅವನ ಪತ್ನಿ ಚೇಳಿನಿಯ ಪಾತ್ರ ಇಲ್ಲಿ ಗಮನಸೆಳೆಯುತ್ತದೆ. ಕೊನೆಗೂ ಚೇಳಿನಿ ತನ್ನ ಪತಿಯಾಗಿದ್ದ ಅರಸನನ್ನು ಅಹಿಂಸಾ ಮಾರ್ಗಕ್ಕೆ ತರುತ್ತಾಳೆ. ಕಾಕೋಳು ಸರೋಜಮ್ಮನವರ “ಪಾಂಚಜನ್ಯ” ಚಿತ್ರದುರ್ಗದ ಚರಿತ್ರೆಗೆ ಸಂಬಂಧಿಸಿದ ನಾಟಕವಾದರೆ, ಎಂ. ಉಷಾ ಅವರ “ಶೂಲಿಹಬ್ಬ” ನಾಟಕ ಕಂಪಿಲ ಅರಸನ ಮಗ ಕುಮಾರರಾಮನನ್ನು ಕುರಿತದ್ದಾಗಿದೆ. ಹೀಗೆ ಅನೇಕ ಐತಿಹಾಸಿಕ ನಾಟಕಗಳನ್ನು ಮಹಿಳೆಯರು ರಚಿಸಿದ್ದಾರೆ. 

ಮಹಿಳೆಯರು ರಚಿಸಿರುವ ಈ ಐತಿಹಾಸಿಕ ನಾಟಕಗಳಲ್ಲಿ ಇತಿಹಾಸದ ವರ್ಣನೆಯಿರದೆ ಹೆಣ್ಣು ಇತಿಹಾಸದ ಚಕ್ರದಲ್ಲಿ ಹೇಗೆ ಸಿಲುಕಿ ಒದ್ದಾಡಿದ್ದಾಳೆ, ತನ್ನ ಸಮಕಾಲೀನ ಸವಾಲುಗಳನ್ನು ಹೇಗೆ ಎದುರಿಸಿ ನಿಂತಿದ್ದಾಳೆಂಬುದನ್ನು ಕುರಿತು ಚಿತ್ರಿಸಲಾಗಿದೆ. ರಾಜ್ಯವನ್ನಾಳಿದ ಅನೇಕ ಹೆಣ್ಣುಮಕ್ಕಳ ಮುತ್ಸದ್ಧಿತನ, ಅವರ ವೀರತ್ವ, ರಾಜ್ಯದ ಹಿತವನ್ನು ಕಾಪಾಡಿದ ಅವರ ಹೋರಾಟಗಳನ್ನು ಮಹಿಳೆಯರ ಐತಿಹಾಸಿಕ ನಾಟಕಗಳು ವ್ಯಕ್ತಪಡಿಸುತ್ತವೆ. ಪುರುಷರು ರಚಿಸಿರುವ ಐತಿಹಾಸಿಕ ನಾಟಕಗಳಲ್ಲಿ ಕಾಣದಂತಹ ಸ್ತ್ರೀಸಾಧ್ಯತೆಗಳನ್ನು ಮಹಿಳೆಯರ ಐತಿಹಾಸಿಕ ನಾಟಕಗಳಲ್ಲಿ ಕಾಣಬಹುದಾಗಿದೆ. ಆದರೆ ಇತಿಹಾಸವನ್ನು ವರ್ತಮಾನದ ಮೂಲಕ ಕಟ್ಟಿಕೊಡುವ ಕುವೆಂಪು, ಕಾರ್ನಾಡರಂತಹ ನಾಟಕಕಾರರು ಇಲ್ಲಿನ್ನೂ ಬೆಳೆದು ನಿಂತಿಲ್ಲವೆಂಬುದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ.

ಐತಿಹಾಸಿಕ ಪರಂಪರೆಗೆ ಸೇರುವ ಅನೇಕ ಶರಣರನ್ನು ಕುರಿತು ಮಹಿಳೆಯರು ನಾಟಕಗಳನ್ನು ರಚಿಸಿದ್ದಾರೆ. ಅದೇ ರೀತಿ ಮಹಿಳಾ ಸಂತರಾದ ಕಾಶ್ಮೀರದ ಲಲ್ಲೇಶ್ವರಿ ಹಾಗೂ ತಮಿಳುನಾಡಿನ ಆಂಡಾಳ ಕುರಿತಂತೆ ಮಹತ್ವದ ನಾಟಕಗಳನ್ನು ರಚಿಸಿದ್ದಾರೆ. 12ನೇ ಶತಮಾನದ ಶರಣರನ್ನು ಕುರಿತಂತೆ ಅನೇಕ ನಾಟಕಗಳು ಬಂದಿವೆ. ಸುಲೋಚನಾ ದೇವಿ ಆರಾಧ್ಯ ಅವರ “ತಪಸ್ವಿನಿ”, ಜಿ.ವಿ. ರೇಣುಕಾ ಅವರ “ಉಡುತಡಿಯ ಮಲ್ಲಿಗೆ” ಕಲಾ ಮಂಜುನಾಥ ಅವರ “ದಿಗಂಬರ ದಿವ್ಯವಸ್ತ್ರಾಂಬರೆ”, ಸರಸ್ವರಿದೇವಿ ಗೌಡರ ಅವರ “ಮೋಳಿಗೆ ಮಾರಯ್ಯ” ವಿಜಯಶ್ರೀ ಸಬರದ ಅವರ “ಉರಲಿಂಗ ಮತ್ತು ಹೂವಿನತೇರಿ ಹೂವಾದವರು” ನಾಟಕಗಳು ಪ್ರಮುಖವಾಗಿವೆ. ಬೀದರದ ಅಕ್ಕ ಅನ್ನಪೂರ್ಣ ಅವರ “ಮಹಾಮಹಿಮ ಸಂಗನಬಸವಣ್ಣ” ಹಾಗೂ ಇತರ ನಾಟಕಕಾರ್ತಿಯರು ಇತ್ತಿಚೇಗೆ ರಚಿಸಿರುವ ಶರಣರನ್ನು ಕುರಿತಾದ ನಾಟಕಗಳ ಬಗೆಗೆ ಚರ್ಚೆಯೇನಡೆದಿಲ್ಲ. ಆಕಾಶವಾಣಿ, ದೂರದರ್ಶನಕ್ಕಾಗಿಯೇ ಮಹಿಳೆಯರು ರಚಿಸಿರುವ ಶರಣರ ಕುರಿತಾದ ನಾಟಕಗಳನ್ನು ಇಲ್ಲಿ ಉಲ್ಲೇಖಿಸಿಲ್ಲ.

ಶರಣರ ಕುರಿತಾದ ನಾಟಕಗಳಲ್ಲಿ ಹೆಚ್ಚಿನ ನಾಟಕಕಾರ್ತಿಯರು ಅಕ್ಕಮಹಾದೇವಿಯನ್ನು ಕುರಿತೇ ಬರೆದಿದ್ದಾರೆ. ಸುಲೋಚನಾ ಆರಾಧ್ಯ ಅವರಿಗೆ ಮಹಾದೇವಿಯಕ್ಕ ತಪಸ್ವಿನಿಯ ಹಾಗೆ ಕಾಣಿಸಿದರೆ, ಜಿ.ವಿ. ರೇಣುಕಾ ಅವರಿಗೆ ಅಕ್ಕ, ಉಡುತಡಿಯ ಮಲ್ಲಿಗೆಯಾಗಿ ಕಾಣಿಸಿದ್ದಾರೆ. ಕಲಾ ಮಂಜುನಾಥ ಅವರಿಗೆ ಅಕ್ಕ, ಕಾರಣಿಕ ಶಿಶುವಾಗಿ ಕಂಡಿದ್ದಾಳೆ. ಕೌಶಿಕ ಮತ್ತು ಅಕ್ಕ ಅವರ ಸಂಬಂಧವನ್ನು ಈ ನಾಟಕಕಾರ್ತಿ ತಾಯಿ-ಮಗುವಿನ ಸಂಬಂಧದಂತೆ ವ್ಯಾಖ್ಯಾನಿಸಿದ್ದಾರೆ.

ಮಹಿಳೆಯರು ರಚಿಸಿರುವ ಸಾಮಾಜಿಕ ನಾಟಕಗಳ ಸಂಖ್ಯೆಯೇ ಹೆಚ್ಚಾಗಿದೆ. ಸ್ತ್ರೀಶೋಷಣೆ, ಸಾಮಾಜಿಕ ಅಸಮಾನತೆ, ವರದಕ್ಷಿಣೆಯ ಪಿಡುಗು, ಹೆಣ್ಣು ಭ್ರೂಣಹತ್ಯೆ, ಪಾತಿವ್ರತ್ಯದ ಸಮಸ್ಯೆ, ಅವಲಂಬಿತ ಜೀವನ, ನಿರುದ್ಯೋಗ ಸಮಸ್ಯೆ ಹೀಗೆ ಇಂತಹ ಅನೇಕ ಸಮಸ್ಯೆಗಳನ್ನಿಟ್ಟುಕೊಂಡು ಮಹಿಳೆಯರು ಅನೇಕ ಸಾಮಾಜಿಕ ನಾಟಕಗಳನ್ನು ರಚಿಸಿದ್ದಾರೆ. ವಿಜಯಾ, ಎಸ್. ಮಾಲತಿ, ದು. ಸರಸ್ವತಿಯವರಂತವರು ಬೀದಿನಾಟಕಗಳ ಮೂಲಕ ಪ್ರಸ್ತುತ ಸಮಸ್ಯೆ-ಸವಾಲುಗಳನ್ನು ಪ್ರಕಟಿಸಿದ್ದಾರೆ. ಟಿ. ಸುನಂದಮ್ಮ, ಜಿ.ವಿ. ರೇಣುಕಾ, ಶಾರದಾಮೂರ್ತಿ, ನಿರುಪಮರಂತಹ ನಾಟಕಕಾರ್ತಿಯರು ಹಾಸ್ಯನಾಟಕಗಳನ್ನು ರಚಿಸಿದ್ದಾರೆ. ಮಹಿಳೆಯರು ರಚಿಸಿರುವ ಸಾಮಾಜಿಕ ನಾಟಕಗಳ ಕಥಾವಸ್ತು ಕುರಿತು ಪ್ರತ್ಯೇಕ ಕೃತಿರಚಿಸುವಷ್ಟು ಸಾಮಗ್ರಿ ಸಿಗುತ್ತದೆ. ಅವುಗಳಲ್ಲಿ ಕೆಲವು ಸಾಮಾಜಿಕ ನಾಟಕಗಳನ್ನು ಇಲ್ಲಿ ಹೆಸರಿಸಬಹುದಾಗಿದೆ.

1921ರಲ್ಲಿ ಮಂಗಳೂರಿನ ಶಾರದ ಮುದ್ರಣಾಲಯದಿಂದ ಪ್ರಕಟವಾದ ಕಲ್ಯಾಣಮ್ಮನವರ “ಸ್ನೇಹಲತೆ” ನಾಟಕವು ಮಹಿಳೆಯರ ಪ್ರಥಮ ಸಾಮಾಜಿಕ ನಾಟಕವಾಗಿದೆ. 1922ರಲ್ಲಿ ಬೆಂಗಳೂರಿನ ಶಾರದ ಗ್ರಂಥಮಾಲೆಯಿಂದ ಇವರ ಇನ್ನೊಂದು ನಾಟಕ “ಹಿಂದೂ ಭಾಗ್ಯೋದಯ” ಪ್ರಕಟವಾಗಿದೆ. 1924ರಲ್ಲಿ ನಂಜನಗೂಡಿನ ಸತಿಹಿತೈಷಿಣಿ ಮಾತೃಮಂದಿರದಿಂದ ತಿರುಮಲಾಂಬಾ ಅವರ “ರಮಾನಂದಾ” ನಾಟಕ ಪ್ರಕಟವಾಗಿದೆ. ಇವೆಲ್ಲಾ ಮೊದಲ ಘಟ್ಟದ ಮಹಿಳಾ ಸಾಮಾಜಿಕ ನಾಟಕಗಳಾಗಿವೆ.

1961ರಲ್ಲಿ ಬೆಂಗಳೂರಿನ ಉಮಾ ಪಬ್ಲಿಕೇಷನ್ಸ್ದಿಂದ ನಿರುಪಮ ಅವರ “ರಣಹದ್ದು” ನಾಟಕ ಪ್ರಕಟವಾದರೆ, 1974ರಲ್ಲಿ ಚಿತ್ರದುರ್ಗದ ದೀಪಕ ಬುಕ್‍ಹೌಸ್‍ದಿಂದ ಅನಸೂಯ ರಾಮರೆಡ್ಡಿಯವರ “ಮನೆಗೆ ಮೂರು ಮಾಣಿಕ್ಯ” ನಾಟಕ ಪ್ರಕಟವಾಗಿದೆ. ಅನುಪಮಾ ನಿರಂಜನ ಅವರ “ಕಲ್ಲೋಲ” ನಾಟಕವು ಬೆಂಗಳೂರಿನ ವಾಗ್ದೇವಿ ಪ್ರಕಾಶನದಿಂದ ಪ್ರಕಟವಾಗಿದೆ. 1994ರಲ್ಲಿ ಮೈಸೂರಿನ ಸುರೇಖ ಪ್ರಕಾಶನದಿಂದ ಸುಧಾ ಹರೀಶ ಅವರ “ದಿಢೀರ ಮದುವೆ” ಪ್ರಕಟವಾಗಿದ್ದರೆ, ಇದೇ ವರ್ಷ ಮಹಾರಾಜ ಪಬ್ಲಿಕೇಷನ್ಸ್ ನಿಂದ ಎಸ್. ಹೇಮಲತಾ ಅವರ “ಶ್ರೀಮದ್ರಮಾರಮಣ ಗೋವಿಂದ” ನಾಟಕ ಪ್ರಕಟವಾಗಿದೆ. 1996ರಲ್ಲಿ ಬೆಂಗಳೂರಿನ ಪುರೋಗಾಮಿ ಸಾಹಿತ್ಯ ಸಂಘದಿಂದ ಗೀತಾರಾಮಾನುಜಂ ಅವರ “ಎಂಟು ನಾಟಕಗಳು” ಕೃತಿ ಪ್ರಕಟವಾಗಿದೆ. ಕರ್ನಾಟಕ ಲೇಖಕಿಯರ ಸಂಘದಿಂದ 1997ರಲ್ಲಿ ನಾಗಮಣಿ ಎಸ್. ರಾವ್ ಅವರ ಸಂಪಾದಕತ್ವದಲ್ಲಿ “ರಂಗಲೇಖಕಿ” ನಾಟಕಗಳ ಸಂಗ್ರಹ ಪ್ರಕಟವಾಗಿದೆ. 2003ರಲ್ಲಿ ರಾಜಪ್ರಕಾಶನದಿಂದ ಲೀಲಾವತಿ ರಾಮಕೃಷ್ಣ ಅವರ “ತೆರೆ” ನಾಟಕಗಳ ಸಂಗ್ರಹ ಪ್ರಕಟಿತವಾಗಿದ್ದರೆ, 2004ರಲ್ಲಿ ಮೈಸೂರಿನ ಲೋಹಿಯಾ ಪ್ರಕಾಶನದಿಂದ ಎಸ್. ಮಾಲತಿಯವರ ಎರಡು “ಕಿರುನಾಟಕಗಳು” ಕೃತಿ ಪ್ರಕಟವಾದೆ. 2013ರಲ್ಲಿ ಮಂಗಳ ಪ್ರಕಾಶನದಿಂದ ಶಾರದಾ ವಿ. ಮೂರ್ತಿಯವರ “ಅಕ್ಕಪಕ್ಕ” ನಾಟಕಗಳ ಸಂಗ್ರಹ ಪ್ರಕಟವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅನೇಕ ಯುವ ಲೇಖಕಿಯರು ನಾಟಕಗಳ ರಚನೆಯತ್ತ ಆಸಕ್ತಿ ವಹಿಸಿದ್ದಾರೆ.

ಲಿಂಗ ರಾಜಕಾರಣದಿಂದ ಉಂಟಾಗಿರುವ ಅಸಮಾನತೆಯೇ ಈ ಮಹಿಳಾ ನಾಟಕಗಳ ಪ್ರಮುಖ ಸಾಮಾಜಿಕ ವಸ್ತುವಾಗಿದೆ. ರಾಜಕೀಯ ಕ್ಷೇತ್ರದಲ್ಲಿ ನೀಡಬಹುದಾಗಿದ್ದ ರಿಜರ್ವೇಷನ್ ಇನ್ನೂ ನೆನೆಗುದಿಗೆ ಬಿದ್ದಿದೆ. ಪುರುಷ ನಾಟಕಕಾರರಂತೆ, ಮಹಿಳಾ ನಾಟಕಕಾರರಲ್ಲಿ ರಾಜಕೀಯ ವಿಷಯದ ನಾಟಕಗಳು ತುಂಬಾ ಕಡಿಮೆ ಎನ್ನಬಹುದಾಗಿದೆ. ಪೌರಾಣಿಕ-ಐತಿಹಾಸಿಕ-ಸಾಮಾಜಿಕ ಹೀಗೆ ಯಾವುದೇ ವಿಷಯ ಕುರಿತು ಮಹಿಳೆಯರು ನಾಟಕಗಳನ್ನು ರಚಿಸಿರಲಿ, ಅಲ್ಲಿ ಮಹಿಳಾ ಸಮಸ್ಯೆಯೇ ಕೇಂದ್ರವಾಗಿದೆ. ಕೆಲವು ನಾಟಕಗಳಲ್ಲಿ ಮಹಿಳಾ ಸಾಧ್ಯತೆಗಳು ಕಾಣಿಸಿಕೊಂಡಿವೆ. ಇವರ ಅನೇಕ ನಾಟಕಗಳು ಕಾದಂಬರಿಯ ಶೈಲಿಯಲ್ಲಿಯೇ ಇವೆ. ಅವುಗಳಲ್ಲಿ ರಂಗಪ್ರಯೋಗಗಳ ಸಾಧ್ಯತೆಗಳು ತುಂಬ ಕಡಿಮೆ ಇವೆ. ಹೀಗಾಗಿ ಮಹಿಳೆಯರ ಅನೇಕ ನಾಟಕಗಳು ಪ್ರಯೋಗಗಳನ್ನು ಕಂಡಿಲ್ಲ.

ಮಹಿಳೆಯರೇ ಕಟ್ಟಿದ ಅನೇಕ ಹವ್ಯಾಸಿ ನಾಟಕತಂಡಗಳಿವೆ. 1965ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾದ ಆರ್. ನಾಗರತ್ನ ಅವರ “ಕಲಾಭಿಮಾನಿಗಳು” ನಾಟಕ ತಂಡವು ಮಹಿಳೆಯರ ಪ್ರಥಮ ಹವ್ಯಾಸಿ ತಂಡವಾಗಿದೆ. 1976ರಲ್ಲಿ ಬಿ.ಜಯಶ್ರೀ ಅವರು ಬೆಂಗಳೂರಿನಲ್ಲಿ “ಸ್ಪಂದನ” ತಂಡವನ್ನು ಕಟ್ಟಿದರು. 1977ರಲ್ಲಿ ವೈ.ಕೆ. ಸಂಧ್ಯಾಶರ್ಮ ಅವರು ಬೆಂಗಳೂರಿನಲ್ಲಿ “ಸಂಧ್ಯಾ ಕಲಾವಿದರು” ತಂಡವನ್ನು ಸ್ಥಾಪಿಸಿದರು. 1982ರಲ್ಲಿ ಪ್ರೇಮಾ ಕಾರಂತ ಅವರು ಬೆಂಗಳೂರಿನಲ್ಲಿ “ಬೆನಕ” ಮಕ್ಕಳ ನಾಟಕ ಕೇಂದ್ರ ಪ್ರಾರಂಭಿಸಿದರು. 1983ರಲ್ಲಿ ಶಾರದ ಸಿಂಹ ಅವರು ಬೆಂಗಳೂರಿನಲ್ಲಿ “ವೇದಿಕೆ ಫೌಂಡೇಷನ್” ಸ್ಥಾಪಿಸಿದರೆ, 1990ರಲ್ಲಿ ರತ್ನಾ ನಾಗೇಶ ಅವರು ಬೆಂಗಳೂರಿನಲ್ಲಿ “ಸಂಯುಕ್ತ ಸಾಂಸ್ಕೃತಿಕ ವೇದಿಕೆ” ಕಟ್ಟಿದರು. ಇದೇ ಸಂದರ್ಭದಲ್ಲಿ ಗುಲಬರ್ಗಾದಲ್ಲಿ ಇಂದಿರಾ ಮಾನ್ವಿಕರ್ ಅವರು “ಸಂಗಮೇಶ್ವರ ಮಹಿಳಾ ನಾಟಕ ಸಂಘವನ್ನು” ಸ್ಥಾಪಿಸಿದರು. 1998ರಲ್ಲಿ ಬೆಂಗೂರಿನಲ್ಲಿ ಲಕ್ಷ್ಮೀ ಚಂದ್ರಶೇಖರ ಅವರು “ಕ್ರಿಯೇಟಿವ್ ಥೇಟರ್” ಕಟ್ಟಿದರು. 2003ರಲ್ಲಿ ಬಿ.ವಿ. ಸರಸ್ವತಿಯವರು “ದೃಶ್ಯರಂಗ ಕಲಾಸಂಘ” ತಂಡವನ್ನು ಬೆಂಗಳೂರಿನಲ್ಲಿ ಕಟ್ಟಿದರೆ, 2004ರಲ್ಲಿ ಶೀವಮೊಗ್ಗದಲ್ಲಿ ಪ್ರತಿಭಾ ರಾಘವೇಂದ್ರ ಅವರು “ಸ್ಪಂದನ” ನಾಟಕ ತಂಡ ಸ್ಫಾಪಿಸಿದರು. ಇದೇ ವರ್ಷ ಎನ್. ಮಂಗಳಾ ಅವರು ಬೆಂಗಳೂರಿನಲ್ಲಿ “ಸಂಚಾರಿ ಥಿಯೇಟರ್” ಪ್ರಾರಂಭಿಸಿದರು. 2006ರಲ್ಲಿ ದಾಕ್ಷಾಯಿಣಿ  ಭಟ್ ಅವರು ಬೆಂಗಳೂರಿನಲ್ಲಿ “ದೃಶ್ಯ” ತಂಡ ಕಟ್ಟಿದರೆ, 2007ರಲ್ಲಿ ಬೆಂಗಳೂರಲ್ಲಿ ಛಾಯಾ ಭಾರ್ಗವಿಯವರು “ಅದಮ್ಯರಂಗ ಸಂಸ್ಕೃತಿ ಟ್ರಸ್ಟ್” ಪ್ರಾರಂಭಿಸಿದರು. 2008ರಲ್ಲಿ ಬೆಂಗಳೂರಲ್ಲಿ ನಿರ್ಮಲಾ ನಾದನ್ ಅವರು “ರಂಗಪ್ರಹರಿ” ತಂಡ ಕಟ್ಟಿದರೆ ಇದೇ ವರ್ಷ ಬೆಂಗಳೂರಲ್ಲಿ ಸುರಭಿ ವಶಿಷ್ಟ ಅವರಿಂದ “ನಮ್ಕಂಪನಿ” ಪ್ರಾರಂಭವಾಯಿತು. 2009ರಲ್ಲಿ ನಯನ ಸೂಡಾ ಅವರು “ರಂಗ ಪಯಣ” ಪ್ರಾರಂಭಿಸಿದರು. 2011ರಲ್ಲಿ ಮೈಸೂರಿನಲ್ಲಿ ನಾಗವೇಣಿ ಯವರು “ನಕ್ಕುನಲಿ” ತಂಡ ಕಟ್ಟಿದರೆ, 2016ರಲ್ಲಿ ಮಂಡ್ಯದಲ್ಲಿ ಅಕ್ಷತಾ ಪಾಂಡವಪುರ ಅವರು “ದಿ ಚಾನಲ್ ಥೇಟರ್ಸ್” ಪ್ರಾರಂಭಿಸಿದರು. 2016ರಲ್ಲಿ ಎಸ್.ವಿ. ಸುಷ್ಮಾ ಅವರಿಂದ “ಥೇಮಾ” ತಂಡ ಹುಟ್ಟಿಕೊಂಡರೆ, 2007ರಲ್ಲಿ ಹಾಸನದಲ್ಲಿ ಮಮತಾ ರಾಣಿ  ಅವರಿಂದ “ಅರಸೀ ಸಾಂಸ್ಕೃತಿಕ ವೇದಿಕೆ” ಪ್ರಾರಂಭವಾಯಿತು.

ರಾಮನಗರದಿಂದ ಎನ್. ವರಲಕ್ಷ್ಮೀ ಅವರು ಬಂಜಾರ ಸಾಂಸ್ಕೃತಿಕ ಅಕಾಡೆಮಿ ಸ್ಥಾಪಿಸಿದರೆ. ಬೆಂಗಳೂರಿನಿಂದ ಭಾರ್ಗವಿ ನಾರಾಯಣ ಅವರು “ಗ್ರೀನ್ ರೂಂ” ಪ್ರಾರಂಭಿಸಿದರು ಮಹಿಳೆಯರೇ ಕಟ್ಟಿದ ಇನ್ನೂ ಅನೇಕ ಹವ್ಯಾಸಿ ತಂಡಗಳು ಬೇರೆ ಬೇರೆ ಊರುಗಳಲ್ಲಿ ಸ್ಥಾಪನೆಯಾಗಿ ಕೆಲವು ನಾಟಕಗಳನ್ನು ಪ್ರದರ್ಶನಮಾಡಿವೆ. ಇನ್ನೂ ಕೆಲವು ಹವ್ಯಾಸಿ ತಂಡಗಳು ಸರಕಾರದಿಂದ ಸಹಾಯಧನ ಪಡೆಯುವದಕ್ಕಾಗಿಯೇ ಹುಟ್ಟಿಕೊಂಡದ್ದನ್ನು ಕಾಣಬಹುದಾಗಿದೆ. ಏನೇ ಇದ್ದರೂ ಇಷ್ಟೊಂದು ಮಹಿಳಾ ಹವ್ಯಾಸಿ ತಂಡಗಳು ಕರ್ನಾಟಕದಲ್ಲಿ ರಂಗಚಟುವಟಿಕೆಗಳನ್ನು ಮಾಡುತ್ತಿರುವುದು ಸ್ವಾಗತಾರ್ಹ ವಿಚಾರವಾಗಿದೆ.

ಹವ್ಯಾಸಿ ರಂಗಭೂಮಿಯ ರಂಗತಂಡಗಳ ಬಗೆಗೆ ಪ್ರತ್ಯೇಕ ಅಧ್ಯಯನ ಮಾಡಿ ಕೃತಿ ರಚಿಸುವಷ್ಟು ಸಾಮಗ್ರಿ ಇದೆ. ಅದೇ ರೀತಿ ರಂಗನಿರ್ದೇಶಕಿಯರ ಬಗೆಗೆ ರಂಗನಟಿಯರ ಕುರಿತು ಪ್ರತ್ಯೇಕ ಸಂಪುಟಗಳನ್ನೇ ಹೊರತರಬಹುದಾಗಿದೆ. ಮಹಿಳೆಯರು ಕಟ್ಟಿದ ಇಷ್ಟೆಲ್ಲ ಹವ್ಯಾಸಿ ನಾಟಕ ತಂಡಗಳಿದ್ದ ಕಾರಣಕ್ಕಾಗಿಯೇ, ಮಹಿಳೆಯರು ರಚಿಸಿರುವ ನಾಟಕಗಳಲ್ಲಿ ಕೆಲವು ನಾಟಕಗಳಾದರೂ ಪ್ರಯೋಗವಾಗಲು ಸಾಧ್ಯವಾಗಿದೆ. ತಿರುಮಲಾಂಬಾ ಅವರು ತಮ್ಮ “ರಮಾನಂದಾ” ನಾಟಕವನ್ನು ತಾವೇ ನಿರ್ದೇಶಿಸಿ ನಂಜನಗೂಡಿನ ಬನಮಯ್ಯ ಕಾಲೇಜಿನ ರಂಗವೇದಿಕೆಯಲ್ಲಿ ಪ್ರದರ್ಶನ ಮಾಡಿದ್ದು ಗಮನಾರ್ಹ ಸಂಗತಿಯಾಗುತ್ತದೆ.

ಅನೇಕ ಮಹಿಳೆಯರು ರಂಗನಿರ್ದೇಶಕಿಯರಾಗಿ ಹವ್ಯಾಸಿ ರಂಗಭೂಮಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಿಂದ ಪದವಿ ಪಡೆದು ಬಂದ ಕೆಲವು ಮಹಿಳೆಯರಾದರೂ ಕನ್ನಡ ಹವ್ಯಾಸಿ ರಂಗಭೂಮಿ ಬೆಳೆಯಲು ಕಾರಣರಾಗಿದ್ದಾರೆ. ಪ್ರೇಮಾ ಕಾರಂತ, ಬಿ.ಜಯಶ್ರೀ, ಎಸ್. ಮಾಲತಿ ಈ ಮೊದಲಾದ ಮಹಿಳೆಯರು ಎನ್.ಎಸ್.ಡಿ. ಪದವೀಧರರಾಗಿದ್ದಾರೆ. ಆರುಂಧತಿರಾಗ, ಗೌರಿದತ್ತು, ಇಂದಿರಾ ಮಾನ್ವಿಕರ್, ಲಕ್ಷ್ಮೀ ಚಂದ್ರಶೇಖರ್, ಹೇಮಾ ಪಟ್ಟಣಶೆಟ್ಟಿ, ರಂಗಸಂಘಟಕರಾಗಿ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಚಂಪಾಶೆಟ್ಟಿ ದಾಕ್ಷಾಯಿಣಿ ಭಟ್, ಮಂಗಳಾ, ನಿರ್ಮಲಾ ನಾದನ್, ಛಾಯಭಾರ್ಗವಿ, ಹೆಲೆನ್ ಮೈಸೂರು, ವಿಶ್ವೇಶ್ವರಿ ಹಿರೇಮಠ, ನಯನ ಸೂಡಾ ಈ ಮೊದಲಾದ ಮಹಿಳೆಯರು ರಂಗ ನಿರ್ದೇಶಕಿಯರಾಗಿ ಕೆಲಸ ಮಾಡುತ್ತಿದ್ದಾರೆ.

ಮಹಿಳೆಯರು ಅನೇಕ ಮಹತ್ವದ ಹವ್ಯಾಸಿ ನಾಟಕಗಳನ್ನು ರಚಿಸಿದ್ದಾರೆ. ಆದರೆ ಅವರ ನಾಟಕಗಳನ್ನು ಪ್ರದರ್ಶಿಸಲು ಮಹಿಳಾ ಹವ್ಯಾಸಿ ತಂಡಗಳು ಮತ್ತು ನಿರ್ದೇಶಕರು ಹೆಚ್ಚಿನ ಸಂಖ್ಯೆಯಲ್ಲಿಲ್ಲ. ಹೀಗಾಗಿ ಮಹಿಳೆಯರ ನಾಟಕಗಳು ರಂಗಭೂಮಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಲ್ಲ, ಹೆಚ್ಚಿನ ಪ್ರದರ್ಶನಗಳಾಗಿಲ್ಲ. ಮಹಿಳೆಯರು ಕಾದಂಬರಿಗಳ ಹಾಗೆ ನಾಟಕಗಳನ್ನು ರಚಿಸಿ ಕುಳಿತರೆ ಆಗುವುದಿಲ್ಲ. ಅವುಗಳನ್ನು ಪ್ರದರ್ಶಿಸುವ ಕಡೆಯೂ ಗಮನ ಕೊಡಬೇಕು. ಇಂದು ರಂಗಪ್ರಯೋಗಗಳಲ್ಲಿ ರಾಜಕೀಯ ಹೆಚ್ಚಾಗಿದೆ. ಕೆಲವು ಹವ್ಯಾಸಿ ತಂಡಗಳು ತಮಗೆ ಬೇಕಾದ ನಾಟಕಕಾರರ ನಾಟಕಗಳನ್ನು ಮಾತ್ರ ಪ್ರಯೋಗಿಸುತ್ತವೆ. ಇನ್ನು ಸಮುದಾಯದಂತಹ ತಂಡಗಳು ಎಡಪಂಥಿಯ ವಿಚಾರಧಾರೆಯಿದ್ದ ನಾಟಕಗಳನ್ನು ಮಾತ್ರ ಪ್ರಯೋಗಕ್ಕೆ ಆರಿಸಿಕೊಳ್ಳುತ್ತವೆ. ಇನ್ನು ಕೆಲವು ಹವ್ಯಾಸಿ ತಂಡಗಳು ಸರಕಾರದ ಸಹಾಯಧನ ಪಡೆಯಲು ನಾಟಕಗಳನ್ನು ಪ್ರದರ್ಶಿಸುತ್ತವೆ. ಹೀಗಾಗಿ ಸಾಹಿತ್ಯಕವಾಗಿ ಉತ್ತಮವಾದ ನಾಟಕಗಳು ಪ್ರಯೋಗಗೊಳ್ಳದೇ ಇರುವ ಸಾಧ್ಯತೆಯೇ ಹೆಚ್ಚಾಗಿದೆ. ನಾಟಕಸಾಹಿತ್ಯದ ಬೆಳವಣಿಗೆಗೆ ರಂಗಭೂಮಿಯನ್ನವಲಂಬಿಸಿರುವುದರಿಂದ ಮಹಿಳಾ ನಾಟಕಕಾರರು ರಂಗಭೂಮಿಯ ಸಾಧ್ಯತೆಗಳನ್ನು ತಿಳಿದು ಕೊಳ್ಳಬೇಕಾಗುತ್ತದೆ. ರಂಗಭೂಮಿಯಲ್ಲಿ ತೊಡಗಿಸಿ ಕೊಳ್ಳಬೇಕಾಗುತ್ತದೆ. ಇದಕ್ಕೆ ನಾಟಕ ಅಕಾಡೆಮಿ, ರಂಗಾಯಣದಂತಹ ಸಂಸ್ಥೆಗಳು ಯುವ ಮಹಿಳೆಯರಿಗೆ ರಂಗಕಮ್ಮಟಗಳನ್ನೇರ್ಪಡಿಸುವ ರಂಗನಿರ್ದೇಶಕಿಯರನ್ನು ಬೆಳೆಸುವ ಕಾರ್ಯಯೋಜನೆಗಳನ್ನು ಹಾಕಿಕೊಳ್ಳ ಬೇಕಾಗುತ್ತದೆ. ರಂಗಭೂಮಿ ಅತ್ಯಂತ ಪ್ರಬಲವಾದ ಮಾಧ್ಯಮ, ಈ ಮಾಧ್ಯಮದ ಕೈಗೆ ನಾಟಕ ಸಿಗದಿದ್ದರೆ ಅದು ರಚನೆಯಾದರೂ ವ್ಯರ್ಥವಾಗುತ್ತದೆ. ರಂಗಭೂಮಿಯಲ್ಲಿಯೂ ಲಿಂಗರಾಜಕಾರಣದ ಪ್ರಭಾವ ಇದ್ದೇ ಇದೆ. ಇವೆಲ್ಲ ಸಂಗತಿಗಳನ್ನು ಗಮನಿಸಿ ಮಹಿಳೆಯರು ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳುವುದು ಅನಿವಾರ್ಯವಾಗಿದೆ. ಆಗ ಮಾತ್ರ ಮಹಿಳಾ ರಂಗಭೂಮಿ ಬೆಳೆದು ನಿಲ್ಲುತ್ತದೆ. 



 

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...