ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು

Date: 28-08-2022

Location: ಬೆಂಗಳೂರು


“ತಮ್ಮ ಅತ್ಯಲ್ಪ ಆದಾಯದಲ್ಲಿ ಕಳೆದ ಇಪ್ಪತ್ಮೂರು ವರ್ಷಗಳಿಂದ ಲಕ್ಷಾಂತರ ಗಿಡಗಳನ್ನು ನೆಟ್ಟು ಮಕ್ಕಳಂತೆ ಪೋಷಿಸುತ್ತಿರುವ ಅವರ ಹಸಿರು ಭೂಮಿಯ ಕನಸು ಪ್ರತಿಯೊಬ್ಬರ ಕನಸಾಗಬೇಕು. ಅವರೊಂದಿಗೆ ನಾವೆಲ್ಲರೂ ಕೈ ಜೋಡಿಸೋಣ” ಎನ್ನುತ್ತಾರೆ ಲೇಖಕಿ ಜ್ಯೋತಿ ಎಸ್. ಅವರು ತಮ್ಮ ಹೆಜ್ಜೆಯ ಜಾಡು ಹಿಡಿದು ಅಂಕಣದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಕೋಡ ಗ್ರಾಮದ 52 ವರ್ಷದ ಮಾಧವ ಉಲ್ಲಾಳರ ಸಾಧನೆಯ ಬಗ್ಗೆ ಪರಿಚಯಿಸಿದ್ದಾರೆ.

ಕೆಲವರಿಗೆ ಪ್ರಕೃತಿಯೊಂದಿಗೆ ವಿಶೇಷ ಬಾಂಧವ್ಯವಿರುತ್ತದೆ. ಎಷ್ಟರಮಟ್ಟಿಗೆ ಎಂದರೆ ಮನೆಯ ಸದಸ್ಯರಂತೆ ತಮ್ಮ ಮಕ್ಕಳಂತೆ ಗಿಡಮರಗಳನ್ನು ಪೋಷಿಸುತ್ತಾರೆ. ಅವುಗಳ ಜೊತೆಗೆ ಮಾತನಾಡುತ್ತ ತೊಂದರೆಯಾದರೆ ತಮಗೇ ಏನೋ ಆಯಿತು ಅನ್ನುವಷ್ಟು ನೋವನ್ನನುಭವಿಸುತ್ತಾರೆ. ಅಂತಹ ಭಾವಾನಾಜೀವಿಗಳು ಅವರು. ಅಂಥವರು ನಮ್ಮ ನಡುವಿನ ವಿಶೇಷ ವ್ಯಕ್ತಿಗಳು. ಅಂತಹದ್ದೇ ಒಬ್ಬ ವಿಶೇಷ ವ್ಯಕ್ತಿಯ ಜೀವನದ ಹಾದಿ ಇಂದಿನ ನಿಮ್ಮ ಓದಿಗೆ.

ಇವರಿಗೆ ಮಕ್ಕಳಿಲ್ಲ... ಆದರೆ, ಲಕ್ಷಾಂತರ ಗಿಡಗಳನ್ನು ನೆಟ್ಟು, ಮಕ್ಕಳಿಗಿಂತ ಹೆಚ್ಚಾಗಿ ಅದರ ಪೋಷಣೆಯನ್ನು ಕಳೆದ 23 ವರ್ಷಗಳಿಂದಲೂ ಮಾಡುತ್ತ ಬಂದಿರುವ ವೃಕ್ಷ ಜೀವಿ ಇವರು. ಸ್ಮಶಾನದಲ್ಲಿ, ದೇವಸ್ಥಾನ, ಚರ್ಚ್, ರಸ್ತೆ ಬದಿಗಳಲ್ಲಿ ನಾನಾ ಜಾತಿಯ ಹೂವು ಹಣ್ಣು ಬಿಡುವ ಸ್ಥಳೀಯ ಗಿಡಮರಗಳನ್ನು ನೆಟ್ಟು ಪೋಷಿಸುತ್ತಾ ಬಂದಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಉಲ್ಲಾಳ ತಾಲೂಕಿನ, ಕೂಸ ಹಿತ್ತಿಲು, ಕೋಡಿ ಗ್ರಾಮದ 52 ವರ್ಷದ ಪ್ರಕೃತಿ ಮಡಿಲ ಕೂಸು ಮಾಧವ ಉಲ್ಲಾಳ.

ಇವರ ವಿಶೇಷತೆ ಎಂದರೆ ಇವರು ಮರಗಳೊಟ್ಟಿಗೆ ಮಾತನಾಡುತ್ತಾರೆ, ಒಡನಾಡುತ್ತಾರೆ. ಮರದಿಂದ ಮರಕ್ಕೆ ಪ್ರೀತಿಯನ್ನು ಹಂಚುತ್ತಾರೆ. ಇತ್ತೀಚೆಗೆ ಇವರು ಮಂಗಳೂರು ಜಂಕ್ಷನ್ ನಂತೂರಿನಿಂದ ಕೇರಳ ಬಾರ್ಡರ್ ತಲಪಾಡಿವರೆಗೂ 14 ಕಿ. ಮೀ ಹೈ ವೇಯ ಎರಡೂ ಬದಿಗಳಲ್ಲಿ ಗಿಡ ನೆಟ್ಟಿದ್ದಾರೆ. ಪ್ರಕೃತಿ ಪ್ರೇಮವೇ ಉಸಿರಾದ ಇವರ ಇಲ್ಲಿಯವರೆಗಿನ ಹಾದಿಯನ್ನು ಅವರದೇ ಮಾತಿನಲ್ಲಿ ಓದಿಕೊಳ್ಳಿ.

*
'ನನ್ನ ಊರು ಕೋಡಿ. ತಂದೆ ನಾರಾಯಣ, ತಾಯಿ ಕಮಲ. ನಾನು 8ನೇ ತರಗತಿಯವರೆಗೆ ಓದಿದ್ದೇನೆ. ಮನೆ ಮನೆಗೆ, ಅಂಗಡಿಗೆ ಹೋಗಿ ಠೇವಣಿ ಸಂಗ್ರಹ ಮಾಡುವುದು ನನ್ನ ದಿನನಿತ್ಯದ ಕಾಯಕ. ಠೇವಣಿ ಸಂಗ್ರಹ ಮಾಡಲು ನಡೆದುಕೊಂಡು ಹೋಗುತ್ತಿದ್ದೆ. ಹೀಗೆ ಓಡಾಡುವಾಗ ಬಿಸಿಲಿಗೆ ಮೈ ಪೂರ್ತಿ ಬೆವರುತ್ತಿದ್ದೆ. ಒಂದು ದಿನ ಮನೆಗೆ ಬಂದು ನನ್ನ ಹಿರಿಯರಿಗೆ ಕೇಳಿದಾಗ ಅವರು ಭೂಮಿಯನ್ನು ತಂಪು ಮಾಡಲು ಗಿಡ ನೆಟ್ಟರೆ ಸಾಕು. ಅವು ಬೆಳೆದು ದೊಡ್ಡ ಮರವಾದರೆ ನೆರಳು ಬರತ್ತೆ. ಭೂಮಿ ತಂಪಾಗತ್ತೆ ಎಂದರು. ಆಗ ಒಂದೆರಡು ಗಿಡಗಳನ್ನು ನೆಡುತ್ತಿದ್ದೆ. ನಂತರದ ದಿನಗಳಲ್ಲಿ ಪಡೀಲು ಅರಣ್ಯ ಇಲಾಖೆಯ ನರ್ಸರಿಗೆ ಹೋಗಿ ಗಿಡ ತರಲು ಪ್ರಾರಂಭಿಸಿದೆ. ಆಗ ಗಿಡಗಳ ಬೆಲೆ ಒಂದು ರೂಪಾಯಿ, ಹೆಚ್ಚೆಂದರೆ ಎರಡು ರೂಪಾಯಿ ಇರುತ್ತಿತ್ತು. ನಮ್ಮ ಗುಡ್ಡದಲ್ಲಿ ಆಗ ಮರಗಳು ಹೆಚ್ಚು ಇರಲಿಲ್ಲ. ಅಕೇಶಿಯ, ಬೆಲ್ಜಿಯಂ ಮತ್ತು ನೀಲಗಿರಿಯನ್ನು ಆ ಸಮಯದಲ್ಲಿ ನೆಟ್ಟಿದ್ದರು.'

'ನಾನು ಹಣ್ಣು ಮತ್ತು ಹೂವು ಬಿಡುವ ಗಿಡಗಳನ್ನು ಹೆಚ್ಚು ಆಯ್ಕೆ ಮಾಡಿಕೊಂಡು ಗಿಡ ನೆಟ್ಟು ಸಾಕುತ್ತಿದ್ದೆ. ಉದಾಹರಣೆಗೆ :- ಕಕ್ಕೆ ಮರ, ಹಲಸು, ಹೆಬ್ಬಲಸು, ನೆಲ್ಲಿ, ಜಂಬುನೇರಳೆ, ಹೊಂಗೆ, ಬೊಲ್ಪಾಲೆ, ಕರೀಮರ, ಹುಣಸೆ, ಮಹಾದನಿ, ಪಾರಿಜಾತ, ಗಂಧ, ರಕ್ತ ಚಂದನ, ಬೇವು, ಕಾಡುಬೇವು, ಸ್ಥಳೀಯ ಬೇವು, ಹೆಬ್ಬೇವು, ಅರ್ಥಿಮರ, ಅರಳೀಮರ, ಶಮೀ ವೃಕ್ಷ, ನಾಗ ಸಂಪಿಗೆ, ಕೆಂಡ ಸಂಪಿಗೆ, ನಾಗಲಿಂಗ ಪುಷ್ಪ ಇತ್ಯಾದಿ. ಈಗ ಕಳೆದ 18 ವರ್ಷದಿಂದೀಚೆಗೆ ಆಯುರ್ವೇದದ ಗಿಡಗಳಾದ ಅರ್ಜುನ, ಸೀತಾ ಅಶೋಕ, ಸರಕ ಇಂಡಿಕ ಇತ್ಯಾದಿ ಗಿಡಗಳನ್ನೂ ಕೂಡ ನೆಡುತ್ತಾ ಬಂದಿದ್ದೇನೆ. ಇವಲ್ಲದೆಯೂ ರುದ್ರಾಕ್ಷಿ, ಸುರಗಿ, ಪಾಲಾಕ್ಷ, ಹಾಳೆಮರ, ಹೊಳೆ ದಾಸವಾಳ ಇತ್ಯಾದಿ ಗಿಡಗಳನ್ನು ನೆಟ್ಟು ಪೋಷಿಸುತ್ತಾ ಬಂದಿದ್ದೇನೆ. ರಾವಣನಿಗೆ ಅರಮನೆ ಇದ್ದರೂ ಸೀತಾಮಾತೆಯನ್ನು ಅಪಹರಣ ಮಾಡಿ ಅಶೋಕವನದಲ್ಲಿ ಇರಿಸಿದ್ದನು. ಅಂದರೆ ರಾವಣನಿಗೆ ಗೊತ್ತಿತ್ತು ನೋವು ನಿವಾರಕ ಗುಣ ಆ ವೃಕ್ಷದಲ್ಲಿ ಇದೆ ಎಂದು. ಇತಿಹಾಸದಲ್ಲಿ ಈ ಉಲ್ಲೇಖ ಇದೆ. ಹೀಗೆ ನಮ್ಮಲ್ಲಿನ ಹಲವಾರು ಗಿಡಮರಗಳಿಗೆ ವಿಶೇಷ ಗುಣಗಳಿವೆ.'

'ನನ್ನ ಕೆಲಸದಲ್ಲಿ ನನಗೆ 3% ಕಮಿಷನ್ ಸಿಗುತ್ತದೆ. ಅದರಲ್ಲಿ 1%ನ್ನು ಗಿಡ ನೆಡಲು ಬಳಸಿಕೊಳ್ಳುತ್ತಿದ್ದೇನೆ. ನಾನು ಗಿಡ ನೆಡಲು ಪ್ರಾರಂಭ ಮಾಡಿದ್ದು ನನ್ನ ಸುತ್ತಲಿನ ವಾತಾವರಣದ ತಾಪಮಾನ ಕಡಿಮೆ ಮಾಡಲು. ಇಂದು ಇಡೀ ವಿಶ್ವ ಮಾತನಾಡುತ್ತಿದೆ ತಾಪಮಾನ ಕಡಿಮೆ ಮಾಡುವುದು ಹೇಗೆ? ಇದನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತಿಲ್ಲ ಎಂದು. ಇಷ್ಟು ಗಿಡಗಿಡಮರಗಳಿದ್ದೂ ಇಷ್ಟೊಂದು ತಾಪಮಾನ ಏರಿಕೆಯಾಗುತ್ತಿದೆ. ವಿಶ್ವದಲ್ಲಿ ಒಂದೇ ಒಂದು ಮರ ಇಲ್ಲ ಅಂದರೆ ಭೂಮಿಯ ಉಷ್ಣಾಂಶ, ತಾಪಮಾನ ಹೇಗಿರುತ್ತದೆ ಎನ್ನುವುದನ್ನು ಕಲ್ಪಿಸಿಕೊಳ್ಳುವುದು ಕೂಡ ಅಸಾಧ್ಯ. ನಮಗೆ ಫ್ಯಾಕ್ಟರಿಗಳು ಬೇಕು. ದೊಡ್ಡ ದೊಡ್ಡ ಕೈಗಾರಿಕೆಗಳು ಬೇಕು. ವರ್ಷಕ್ಕೆ ಲಕ್ಷಾಂತರ ಮಕ್ಕಳು ಡಿಗ್ರಿ ಮಾಡಿ ಹೊರ ಬರುತ್ತಿದ್ದಾರೆ. ಅವರಿಗೆಲ್ಲ ಉದ್ಯೋಗ ಬೇಕು. ಹಾಗಾಗಿ ಕೈಗಾರೀಕರಣ, ರಸ್ತೆ ಅಭಿವೃದ್ಧಿಯಾಗಬೇಕು. ಅದನ್ನು ಮಾಡಿಕೊಂಡು ಪರಿಸರವನ್ನೂ ಸಂರಕ್ಷಣೆ ಮಾಡಬೇಕು. ಎಲ್ಲಿ ರಸ್ತೆಗಳು ಅಭಿವೃದ್ಧಿ ಹೊಂದುತ್ತಿವೆಯೋ ಅಲ್ಲೆಲ್ಲ ಎಷ್ಟೋ ಸಾವಿರಾರು ಮರಗಳನ್ನು ಕಡಿಯುತ್ತಿದ್ದಾರೆ. ಎಷ್ಟೋ ಕಡೆ ಪರ್ಯಾಯವಾಗಿ ಒಂದೇ ಒಂದು ಗಿಡ ನೆಡಲು ಅವಕಾಶವಿಲ್ಲ'.

'ನಾನು ಹೆಚ್ಚಾಗಿ ಮಂದಿರ, ಮಸೀದಿ, ಚರ್ಚ್, ಸ್ಮಶಾನದಲ್ಲಿ ಗಿಡಗಳನ್ನು ನೆಡುತ್ತೇನೆ. ಏಕೆಂದರೆ ಅಲ್ಲಿ ಯಾರೂ ಮರಗಳನ್ನು ಕಡಿಯುವುದಿಲ್ಲ. ಪ್ರಾಣಿ, ಪಕ್ಷಿಗಳು ಆ ಗಿಡ, ಮರಗಳಲ್ಲಿ ಬಿಡುವ ಹಣ್ಣನ್ನು ತಿಂದು ಖುಷಿಯಿಂದ ಬದುಕುತ್ತವೆ. ಅವುಗಳಿಗೆ ಆಶ್ರಯ ತಾಣವಾಗುತ್ತದೆ. ಹೀಗೆ ಗಿಡಗಳನ್ನು ನೆಟ್ಟು ಅರಣ್ಯ ಇಲಾಖೆ, ಜಲಮಂಡಳಿಯವರ ಜೊತೆಗೆ ಟೈ ಅಪ್ ಮಾಡಿಕೊಂಡು ಒಂದು, ಎರಡು ವರ್ಷ ನನಗೆ ಸಹಕಾರ ಕೊಡಬೇಕು ಎಂದು ಪತ್ರ ಬರೆದು ಅವರ ಅನುಮತಿ ಸಹಕಾರದೊಂದಿಗೆ ಪ್ರತಿದಿನ ನೀರು ಹಾಕಲು ಕೇಳಿಕೊಳ್ಳುತ್ತೇನೆ'.

'ಗಿಡ ನೆಡುತ್ತೇವೆ ಅಂತ ಯಾವುದೊ ಒಂದು ಗಿಡವನ್ನು ನೆಟ್ಟು ಬಂದುಬಿಟ್ಟರೆ, ಅದು ಅಲ್ಲಿನ ವಾತಾವರಣಕ್ಕೆ ಸ್ಪಂದಿಸದೆ ಗಿಡ ಬೆಳವಣಿಗೆ ಆಗುವುದಿಲ್ಲ. ಪ್ರದೇಶದಿಂದ ಪ್ರದೇಶಕ್ಕೆ ಮಣ್ಣಿನ ಗುಣಮಟ್ಟ ಬೇರೆ ಇರುತ್ತದೆ. ಅಲ್ಲಿನ ಹವಾಮಾನ, ಪರಿಸ್ಥಿತಿ, ಮಣ್ಣಿನ ಗುಣಮಟ್ಟ ನೋಡಿಕೊಂಡು ಗಿಡಗಳನ್ನು ನೆಡುವುದು ಬಹಳ ಮುಖ್ಯ. ಮಣ್ಣಿನ ಗುಣಮಟ್ಟವನ್ನು ಪರೀಕ್ಷೆ ಮಾಡಿ ನಾನು ಗಿಡಗಳನ್ನು ನೆಡುತ್ತೇನೆ. ಬಯಲುಸೀಮೆ, ಗಟ್ಟಿತನ ಇರುವ ಮಣ್ಣು, ಮರಳು ಮಿಶ್ರಿತ ಹೊಯ್ಗೆ ಮಣ್ಣು, ಆವೆ ಮಣ್ಣು, ಸಮುದ್ರ ತೀರದಲ್ಲಿ ಬೇರೆ ಮಣ್ಣು, ಹೊಳೆ ಬದಿಯಲ್ಲಿ ಬೇರೆ ಮಣ್ಣು ಹೀಗೆಲ್ಲಾ ಬೇರೆ ಬೇರೆ ಪ್ರಭೇದದ ಮಣ್ಣುಗಳು ಇರುತ್ತವೆ. ಗಟ್ಟಿ ಮಣ್ಣು ಇರುವ ಜಾಗದಲ್ಲಿ ಹಲಸು, ಹೆಬ್ಬಲಸು, ತೆಂಗು, ಅಡಿಕೆ, ಆಲ ಇತ್ಯಾದಿಯಾಗಿ ಬೆಳೆಯಬಹುದು. ಬಯಲು ಸೀಮೆಯಲ್ಲಿ ಟೀಕ್, ಸಾಗುವಾನಿ, ತೆಂಗು. ಒಟ್ಟಾರೆ ಮಣ್ಣಿನ ಗುಣಮಟ್ಟ ತಿಳಿದುಕೊಂಡು ಗಿಡಗಳನ್ನು ನೆಟ್ಟರೆ ಪ್ರಯೋಜನವಾಗುತ್ತದೆ. ಯಾವ ಗಿಡ ಯಾವ ಗಿಡವನ್ನು ಪ್ರೀತಿಸುತ್ತದೆ, ಯಾವುದರ ಜೊತೆಗೆ ಸ್ನೇಹ ಮಾಡುತ್ತದೆ ಎಂಬುದೂ ಮುಖ್ಯ. ಅದರಲ್ಲಿ ಕೂಡ ಗಿಡದ ಬೆಳವಣಿಗೆಯನ್ನು ಕಾಣಬಹುದು. ನಮ್ಮಲ್ಲಿ ಬೆಳೆಯುವ ಗಿಡಗಳನ್ನು ಪಶ್ಚಿಮ ಘಟ್ಟಗಳಲ್ಲಿ ನೆಟ್ಟರೆ ಅಲ್ಲಿಯ ಮಣ್ಣಿನ ಗುಣಮಟ್ಟ ಬೇರೆ ಇರುವುದರಿಂದ ಗಿಡದ ಬೆಳವಣಿಗೆ ಕುಂಠಿತವಾಗುತ್ತದೆ. ಹೀಗೆ ಎಲ್ಲವೂ ಒಂದಕ್ಕೊಂದು ಸಂಬಂಧ ಇರುತ್ತದೆ. ಇವೆಲ್ಲ ನಾವು ಗಮನಿಸಬೇಕಾದ ಸಂಗತಿಗಳು. ಹಾಗಾಗಿ ಆಯಾ ಪ್ರದೇಶಕ್ಕೆ ಸಂಬಂಧಪಟ್ಟಂತೆ ಗಿಡಗಳನ್ನು ಆಯ್ಕೆಮಾಡಿಕೊಳ್ಳುತ್ತೇನೆ. ದಕ್ಷಿಣ ಕನ್ನಡದಲ್ಲಿ ಮಾವು, ಹಲಸು, ಹೆಬ್ಬಲಸು, ನೇರಳೆ, ನೆಲ್ಲಿ, ಶಾಸ್ತಿಕಾಯಿ, ಕೋಕಂ, ಈ ರೀತಿಯಾಗಿ ಆ ಪ್ರದೇಶದ ಮಣ್ಣನ್ನು ಗುರುತಿಸಿಕೊಂಡು ಗಿಡಗಳನ್ನು ನೆಡುತ್ತೇನೆ. ದಕ್ಷಿಣ ಕನ್ನಡಕ್ಕೆ ಕದಂಬ ವೃಕ್ಷವನ್ನು ಮೊದಲ ಬಾರಿಗೆ ತಂದ ಖುಷಿ ನನಗೆ. ಇದರ ಹೂವು ಹಣ್ಣುಗಳಿಗೆ ಬಹಳ ವಿಶೇಷತೆ ಇದೆ. ಈ ಮರಕ್ಕೆ 1600 ರಿಂದ 1700 ವರ್ಷಗಳ ಆಯುಷ್ಯವಿದೆ. ಇದರ ಒಂದು ಹಣ್ಣಿನಲ್ಲಿ 150ಕ್ಕೂ ಹೆಚ್ಚು ಗಿಡಗಳನ್ನು ಮಾಡಬಹುದು. ಕದಂಬ ಗಿಡದ ಪರಿಚಯ ಎಲ್ಲರಿಗೂ ಆಗಲಿ ಎಂದು ಸುಮಾರು 900ಕ್ಕೂ ಹೆಚ್ಚು ಗಿಡಗಳನ್ನು ನಮ್ಮ ತಾಲ್ಲೂಕಿನ ಹಲವು ಭಾಗಗಳಲ್ಲಿ ನೆಟ್ಟಿದ್ದೇನೆ. ಕೈಗಾರಿಕೆಗಳು ಬರಬೇಕು ದೇಶ ಅಭಿವೃದ್ಧಿಯಾಗಬೇಕು. ಜೊತೆಗೆ ಹಸಿರನ್ನು ಹೆಚ್ಚು ಮಾಡಬೇಕು. ಈ ಕುರಿತು ಯೋಚನೆ, ಯೋಜನೆ ಮಾಡಿದ್ರೆ ಮಾತ್ರ ಪರಿಹಾರವನ್ನು ಕಂಡುಕೊಳ್ಳಬಹುದು. ಮಂಗ, ಆನೆ, ಇತ್ಯಾದಿ ಪ್ರಾಣಿಗಳು ನಾಡಿಗೆ ಬರಲು ಕಾರಣವೆಂದರೆ ಅವುಗಳಿಗೆ ಬೇಕಾದ ಆಹಾರ ಕಾಡಿನಲ್ಲಿ ಸರಿಯಾಗಿ ಸಿಗುತ್ತಿಲ್ಲ. ಹಾಗಾಗಿ ಹೆಚ್ಚು ಹಣ್ಣು ಬಿಡುವ ಗಿಡಗಳನ್ನು ಅರಣ್ಯಗಳಲ್ಲಿ ನೆಡಬೇಕು. ಒಮ್ಮೆ ಗಿಡ ನೆಟ್ಟರೆ ಕನಿಷ್ಠ 25 ವರ್ಷವಾದರೂ ಆ ಗಿಡಗಳು ಇರಬೇಕು'.

'ಮಂಗಳೂರಿನಲ್ಲಿ ತುಂಬ ಕಡೆ ಸಾಲು ಮರಗಳನ್ನು ನೆಟ್ಟಿದ್ದೇನೆ. ಹಂಪಿನಕಟ್ಟೆ, ಜ್ಯೋತಿ, ಉಲ್ಲಾಳದಲ್ಲಿ ಕದಂಬ ವನ ಮಾಡಿದ್ದೇನೆ. ಅದಲ್ಲದೆಯೂ ಹಾಸನ, ಹರಿಹರ, ದಾವಣಗೆರೆ, ಹೈದರಾಬಾದ್, ರಾಯಚೂರು, ಗುಲ್ಬರ್ಗ ಇತ್ಯಾದಿ ಕಡೆ ಹೋಗಿ ಮರಗಳನ್ನು ನೆಟ್ಟಿದ್ದೇನೆ. ಮನೆಗೊಂದು ಮರ ಎನ್ನುವ ಯೋಜನೆಯಂತೆ ಇದನ್ನೆಲ್ಲ ಮಾಡಿದ್ದೇನೆ. ಯಾರದ್ದಾದರೂ ಮನೆಯಲ್ಲಿ ಒಂದು ಮಗು ಹುಟ್ಟಿದೆ ಅಂತಾದರೆ ಆ ಮಗುವಿನ ಹೆಸರಲ್ಲಿ ಒಂದು ಗಿಡ ನೆಡಬೇಕು. ಏನೇ ಸಂಭ್ರಮಾಚರಣೆ ಇದ್ದರೂ ಅದರ ನೆನಪಿಗಾಗಿ ಗಿಡವೊಂದನ್ನು ನೆಡಬಹುದು. ಮಳೆಗಾಲ ಕಡಿಮೆಯಾದ ಮೇಲೆ ಸ್ವಲ್ಪ ಕೆಲಸ ಕಡಿಮೆಯಾಗುತ್ತದೆ. ಆಗ ಪ್ರತಿ ಭಾನುವಾರ 6 ಗಂಟೆಗೆ ಎದ್ದು ಯೋಗ ಮಾಡಿ ನಿತ್ಯಕರ್ಮಗಳನ್ನು ಮುಗಿಸಿ ಹಾರೆ, ಪಿಕಾಸಿ ಹಿಡಿದುಕೊಂಡು ಹೋಗಿ ಮನೆಗೊಂದೊಂದು ಮರಗಳನ್ನು ನೆಟ್ಟು ಬರುತ್ತಿದ್ದೆ. ಕೆಲವೊಮ್ಮೆ ಪ್ರಾಣಿಗಳು ಗಿಡವನ್ನು ತಿಂದುಬಿಡುತ್ತವೆ. ಗಿಡಗಳನ್ನು ತಿನ್ನದಿರಲೆಂದು ಸಗಣಿ ನೀರನ್ನು ಚುಮುಕಿಸುತ್ತೇನೆ. ಗಾಳಿ, ಮಳೆ ಬಂದರೆ ಗಿಡಗಳು ಮುಗಚಿ ಬೀಳುತ್ತವೆ. ಹಾಗಾಗದಿರಲೆಂದು ಅರಣ್ಯ ಇಲಾಖೆಯಿಂದ ಬಿದಿರು ಕಡ್ಡಿಗಳನ್ನು ತಂದು ಗಿಡಕ್ಕೆ ಹೊದಿಕೆ ಮಾಡಿ ಕಟ್ಟುತ್ತೇನೆ. ಉಳಿದಂತೆ ಮಧ್ಯಾಹ್ನ 1 ಗಂಟೆಯವರೆಗೆ ಗಿಡದ ಕೆಲಸ ಮಾಡುತ್ತೇನೆ. ನಂತರ ನನ್ನ ಕೆಲಸವಾದ ಠೇವಣಿ ಸಂಗ್ರಹಕ್ಕೆ ಹೋಗುತ್ತೇನೆ'.

*
'ನಾನು ಮಾಡುವ ಈ ಎಲ್ಲಾ ಕೆಲಸಕ್ಕೂ ನನ್ನ ಶ್ರೀಮತಿ ರೇಖಾ ಅವರ ಸಂಪೂರ್ಣ ಬೆಂಬಲ, ಪ್ರೋತ್ಸಾಹವಿದೆ. ನಾನು ಇರುವುದು ಬಾಡಿಗೆ ಮನೆಯಲ್ಲಿ. ಭೂಮಿಯ ತಾಪಮಾನ ಏರಿಕೆಯಾಗಿ ಮುಂದಿನ ಪೀಳಿಗೆಗೆ ಭೂಮಿ ಉಳಿಯದಿದ್ದರೆ ಅವರಿಗೆ ಬಾಡಿಗೆ ಭೂಮಿ ಸಿಗುವುದಿಲ್ಲ. ಹಾಗಾಗಿ ನನ್ನ ಕನಸು ನನ್ನ ಮುಂದಿನ ಗುರಿ ಇನ್ನೂ ಲಕ್ಷಾಂತರ ಗಿಡಗಳನ್ನು ಇಡೀ ದೇಶದ ಉದ್ದಗಲಕ್ಕೂ ನೆಟ್ಟು ಪೋಷಣೆ ಮಾಡುತ್ತಾ ಬರಬೇಕು. ಇಡೀ ನಮ್ಮ ಭೂಮಿ ತಾಪಮಾನದಿಂದ ಉರಿಯುತ್ತಿರುವುದನ್ನು ಕಡಿಮೆ ಮಾಡಬೇಕು. ಮರಗಿಡಗಳು ಕಡಿಮೆಯಾಗುತ್ತಿರುವುದರಿಂದ ಇದೆಲ್ಲ ಸಂಭವಿಸುತ್ತಿರುವುದು' ಎಂಬ ಕಾಳಜಿಯ ಮಾತುಗಳನ್ನಾಡುತ್ತಾರೆ.

ತಮ್ಮ ಅತ್ಯಲ್ಪ ಆದಾಯದಲ್ಲಿ ಇಷ್ಟೆಲ್ಲ ಮಾಡಿರುವ ಮಾಧವ ಉಲ್ಲಾಳ ಅವರ ಹಸಿರು ಭೂಮಿಯ ಕನಸು ಪ್ರತಿಯೊಬ್ಬರ ಕನಸಾಗಬೇಕು. ಅವರೊಂದಿಗೆ ಪರೋಕ್ಷವಾಗಿ ನಾವೆಲ್ಲರೂ ಕೈ ಜೋಡಿಸೋಣ. ಅವರ ಮುಂದಿನ ಎಲ್ಲ ಯೋಚನೆ ಯೋಜನೆಗಳಿಗೆ ಶುಭವಾಗಲಿ.

ಸರ್ಕಾರಗಳು ಅಭಿವೃದ್ಧಿ ಯೋಜನೆಗಳ ನೆಪದಲ್ಲಿ ದಿನನಿತ್ಯ ಸಾವಿರಾರು ಮರಗಳ ಮಾರಣಹೋಮ ಮಾಡುತ್ತವೆ. ನಂತರ ತುಂಬ ಕಡೆ ಗಿಡಗಳನ್ನು ನೆಡುವುದಿಲ್ಲ, ನೆಟ್ಟರೂ ಸರಿಯಾಗಿ ನಿರ್ವಹಿಸುವುದಿಲ್ಲ. ನೀರಾವರಿಗಾಗಿ ಕುಡಿಯುವುದಕ್ಕಾಗಿ ಮರಗಳನ್ನು ಕಡಿದು ಅಣೆಕಟ್ಟುಗಳನ್ನು ಕಟ್ಟುತ್ತಾರೆ. ಮಳೆ ಬಂದು ನೀರು ಸಂಗ್ರಹವಾಗಿ ಆ ಅಣೆಕಟ್ಟುಗಳಲ್ಲಿ ಟನ್ನುಗಟ್ಟಲೆ ಹೂಳು ತುಂಬಿ ಉಳಿದ ಅರಣ್ಯ ಪ್ರದೇಶವೂ ಮುಳುಗುತ್ತದೆ. ಅರಣ್ಯ, ಬೆಟ್ಟಗುಡ್ಡಗಳಲ್ಲಿ ಎಗ್ಗಿಲ್ಲದೆ ಗಣಿಗಾರಿಕೆಗೆ ಅವಕಾಶ ಕೊಡುತ್ತಾರೆ. ಸಾಗುವ ದಾರಿ ಕಡಿಮೆಯಾಗಲೆಂದು ಕಾಡುಗಳ ಮಧ್ಯದಲ್ಲಿ ರಸ್ತೆ, ರೈಲು ಮಾರ್ಗ ನಿರ್ಮಾಣ ಮಾಡುತ್ತಾರೆ. ಇದು ನಿಜಕ್ಕೂ ನಾವು ಬದುಕುವ ಹಾದಿ ಕಡಿಮೆ ಮಾಡಿಕೊಂಡಂತೆ. ಹಾಗಂತ ಸರ್ಕಾರಗಳನ್ನು ಟೀಕೆ ಮಾಡುತ್ತ ಕೂರುವುದರಲ್ಲಿ ಅರ್ಥವಿಲ್ಲ. ಏಕೆಂದರೆ ಇತ್ತೀಚೆಗೆ ನಿಸರ್ಗದ ಸಮಾಧಿ ಸರ್ಕಾರದ ಅಘೋಷಿತ ಅಲಿಖಿತ ಕೆಲಸವಾದಂತಿದೆ. ಹಾಗಾಗಿ ನಾವೇ ಮುಂದಾಗಿ ನಮ್ಮ ಮನೆಗಳ ಮುಂದೆ, ನಮ್ಮ ಹೊಲಗಳ ಬದುಗಳಲ್ಲಿ, ಸಾಧ್ಯವಾದರೆ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡೋಣ. ಹಾಗೆನೇ ಒಂದಷ್ಟು ಜನ ಕೂಡಿಕೊಂಡು ಮರಗಳ ಬೀಜ ಸಂಗ್ರಹ ಮಾಡಿ ಮಳೆಗಾಲದಲ್ಲಿ ಊರ ಹೊರಗಿನ ಬೆಟ್ಟ ಬಯಲುಗಳಲ್ಲಿ ನೆಟ್ಟರೆ ಮುಂದಿನ ಕೆಲವು ವರ್ಷಗಳಲ್ಲಿ ಊರಿಗೊಂದು ಕಾಡು ನಿರ್ಮಾಣವಾಗಿರುತ್ತದೆ.

-ಜ್ಯೋತಿ. ಎಸ್

ಈ ಅಂಕಣದ ಹಿಂದಿನ ಅಂಕಣಗಳು ನಿಮ್ಮ ಓದಿಗಾಗಿ:
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್ಯ

MORE NEWS

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...