"ಚಿಕ್ಕವರಿದ್ದಾಗ ಕಾಡು, ಗುಡ್ಡವನ್ನೆಲ್ಲಾ ಅಲೆದು ತಿನ್ನುವಾಗ ಹುಳಿ ಸಿಹಿಯಾದ ಸೀಬೆ ಹಣ್ಣಿನ ರೀತಿಯ ಅನುಭವ ನೀಡುವ ಈ ಹಣ್ಣಿಗಾಗಿ ನಾವು ಸಾಮಾನ್ಯವಾಗಿ ಬೇಸಿಗೆಯಲ್ಲಿ ತೆರಳುತ್ತಿದ್ದೆವು. ಆದರೆ ಬದಲಾದ ಕಾಲಘಟ್ಟದಲ್ಲಿ ಈ ಮರವು ತುಂಬಾ ಅಪರೂಪವಾಗುತ್ತಿದ್ದು, ಮುಂದಿನ ಪೀಳಿಗೆಗೆ ಈ ಮರವನ್ನು ಉಳಿಸಿ ಬೆಳೆಸುವ ತುರ್ತು ಅಗತ್ಯವಿದೆ" ಎನ್ನುತ್ತಾರೆ ಅನುರಾಗ್ ಆರ್. ಗೌಡ. ಅವರು ಬರೆದಿರುವ ಈ ಲೇಖನದ ಮೂಲಕ ಜೀವಿಲೋಕದಲ್ಲೊಂದು ಸುತ್ತು ಹಾಕಿದ ಅನುಭವ ನೀಡಲಿದೆ.
ವೈಜ್ಞಾನಿಕ ಹೆಸರು: Flacourtia montana (ಫ್ಲಕೋರ್ಷಿಯಾ ಮೊಂಟಾನಾ)
ಕುಟುಂಬ: Salicaceae (ಸ್ಯಾಲಿಕೇಸಿ)
ಸ್ಥಳೀಯ ನಾಮಧೇಯ: ಜೇಪಲು, ಹಣ್ಣು ಸಂಪಿಗೆ, ಕಲ್ಲು ಸಂಪಿಗೆ, ಅಬ್ಳುಕ, ಚಂಪೆ ಹಣ್ಣು
ಮಲೆನಾಡಿನ ಕಾಡುಗಳಲ್ಲಿ ಬೇಸಿಗೆ ಬಂತೆಂದರೆ ಸಾಕು, ಸಳ್ಳೆ, ಹೆಬ್ಬಲಸು, ಹಲಸು, ಚೂರಿ, ಚೊಟ್ಟೆ, ನೇರಳೆ, ಮಾವು, ಅತ್ತಿ, ಜೀರಕನ ಹುಳಿ, ಮಂಚಿನ ತೊಳೆ, ಹಾಲೆ ಹಣ್ಣು, ಗುಮ್ಮನ ಮುಳ್ಳಿನ ಹಣ್ಣು, ಮಜ್ಜಿಗೆ ಹಣ್ಣು, ಅಬ್ಲಣ್ಣು ಹೀಗೆ ವಿವಿಧ ವೃಕ್ಷ, ಪೊದೆ, ಬಳ್ಳಿಗಳು ತಳೆಯುವ ಹಣ್ಣುಗಳ ಸುಗ್ಗಿ ಪ್ರಾರಂಭವಾಗುತ್ತದೆ.
ಇಂತಹ ಅನೇಕ ಕಾಡಿನಲ್ಲಿ ದೊರಕುವ ಹಣ್ಣುಗಳ ಪೈಕಿ ಜೇಪಲು ಹಣ್ಣು ಕೂಡ ಪ್ರಮುಖ ಹಣ್ಣಾಗಿದೆ. ಕೆಂಬಣ್ಣದ ಹುಳಿ ಸಿಹಿ ಮಿಶ್ರಿತ ರುಚಿಯುಳ್ಳ ಹಣ್ಣನ್ನು ತಳೆಯುವ ಮುಳ್ಳುಗಳುಳ್ಳ ಮಧ್ಯಮ ಗಾತ್ರದ ಈ
ವೃಕ್ಷದ ವೈಜ್ಞಾನಿಕ ನಾಮಧೇಯ ಫ್ಲಕೋರ್ಷಿಯಾ ಮೊಂಟಾನ ( Flacourtia montana). ಸ್ಯಾಲಿಕೇಸಿ (Salicaceae) ಕುಟುಂಬಕ್ಕೆ ಸೇರಿದ ಈ ಸಸ್ಯಕ್ಕೆ ಸ್ಥಳೀಯವಾಗಿ ಹಣ್ಣು ಸಂಪಿಗೆ, ಕಲ್ಲು ಸಂಪಿಗೆ, ಅಬ್ಳುಕ, ಚಂಪೆ ಹಣ್ಣು ಮುಂತಾದ ಹೆಸರುಗಳೂ ಇವೆ.
ದಕ್ಷಿಣ ಭಾರತದ ನಿತ್ಯ ಹರಿದ್ವರ್ಣ ಮತ್ತು ಅರೆ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಮಾತ್ರ ಕಂಡು ಬರುವ ಈ ಮರವು ಸುಮಾರು 6 - 8 ಮೀ ಎತ್ತರವಾಗಿದ್ದು ಇದರ ಕಾಂಡವು ಸರಳ ಮತ್ತು ಅಡ್ಡಕ್ಕೆ ನೇರವಾದ ಬಲಿಷ್ಟವಾದ ಮುಳ್ಳುಗಳನ್ನು ಹೊಂದಿರುತ್ತದೆ. ತೊಗಟೆಯು ಕಂದುಬಣ್ಣವನ್ನು ಹೊಂದಿದ್ದು, ನಯವಾದ ಮೇಲ್ಮೈ ಹೊಂದಿರುತ್ತವೆ . ಈ ಮರದ ಎಲೆಗಳು ಸುಮಾರು 0.4-0.9 ಸೆಂ.ಮೀ ಉದ್ದವಿದ್ದು ತುಂಬಾ ನಯವಾದ ಮೇಲ್ಮೈಯನ್ನು ಹೊಂದಿರುವುದರಿಂದ ಬಿಸಿಲಿನಲ್ಲಿ ಹೊಳೆಯುವಂತೆ ಕಾಣುತ್ತದೆ. ಏಕಲಿಂಗ ಪುಷ್ಪಗಳನ್ನು ತಳೆಯುವ ಈ ಮರದ ಹೂವುಗಳು ಚಿಕ್ಕದಾಗಿದ್ದು ಮಕರಂದ ಹೀರಲು ಬರುವ
ಕೀಟಗಳನ್ನು ತನ್ನ ವಿಶಿಷ್ಟ ಕಂಪಿನಿಂದ ಆಕರ್ಷಿಸುತ್ತದೆ. ಈ ಸಸ್ಯದ ಹಣ್ಣುಗಳು ಒಂದು ಬೀಜವುಳ್ಳ ಹೊಳೆಯುವ ಕೆಂಪು ಬಣ್ಣದ ತಿರುಳುಳ್ಳ ಹಣ್ಣಾಗಿದ್ದು, ವಿವಿಧ ಪಕ್ಷಿಗಳು ಮತ್ತು ವನ್ಯ ಪ್ರಾಣಿಗಳು ಈ ಹಣ್ಣುಗಳನ್ನು ತಿನ್ನಲು ಇಷ್ಟಪಡುತ್ತವೆ.
ಇನ್ನು ಈ ಮರದ ವಿವಿಧ ಭಾಗಗಳು ವಿವಿಧ ಔಷಧೀಯ ಗುಣಗಳನ್ನು ಹೊಂದಿದ್ದು, ಜ್ವರ ಬಂದಾಗ ಇದರ ತೊಗಟೆ, ಎಲೆ ಮತ್ತು ಬೇರಿನ ಕಷಾಯವನ್ನು ಔಷಧಿಯಾಗಿ ಕೂಡ ಉಪಯೋಗಿಸುತ್ತಾರೆ. ಮತ್ತು ಈ ಮರದ ಹಣ್ಣುಗಳು ಉಷ್ಣ ಪ್ರವೃತ್ತಿಯನ್ನು ಹೊಂದಿರುತ್ತವೆ ಎಂದು ಹಿರಿಯರು ಹೇಳುತ್ತಾರೆ.
ಚಿಕ್ಕವರಿದ್ದಾಗ ಕಾಡು, ಗುಡ್ಡವನ್ನೆಲ್ಲಾ ಅಲೆದು ತಿನ್ನುವಾಗ ಹುಳಿ ಸಿಹಿಯಾದ ಸೀಬೆ ಹಣ್ಣಿನ ರೀತಿಯ ಅನುಭವ ನೀಡುವ ಈ ಹಣ್ಣಿಗಾಗಿ ನಾವು ಸಾಮಾನ್ಯವಾಗಿ ಬೇಸಿಗೆಯಲ್ಲಿ ತೆರಳುತ್ತಿದ್ದೆವು. ಆದರೆ ಬದಲಾದ ಕಾಲಘಟ್ಟದಲ್ಲಿ ಈ ಮರವು ತುಂಬಾ ಅಪರೂಪವಾಗುತ್ತಿದ್ದು, ಮುಂದಿನ ಪೀಳಿಗೆಗೆ ಈ ಮರವನ್ನು ಉಳಿಸಿ ಬೆಳೆಸುವ ತುರ್ತು ಅಗತ್ಯವಿದೆ.
ಅನುರಾಗ್ ಆರ್. ಗೌಡ
"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...
ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...
"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...
©2025 Book Brahma Private Limited.