Date: 20-11-2024
Location: ಬೆಂಗಳೂರು
"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರೆ ಈ ಕಥೆಯ ಕೇಂದ್ರಬಿಂದು ಮಾತ್ರ ಚೆನ್ನಮ್ಮ ಎಂಬ ಒಬ್ಬ ಮುಗ್ಧೆ. ಇಲ್ಲಿ ನಿರೂಪಕರು ಊರೂರು ಸುತ್ತಿ ಅಲ್ಲಿಯ ವಿಶೇಷತೆಗಳನ್ನು ತಿಳಿದು ಚಿತ್ರಿಸುವುದು ಅವರ ಖಯಾಲಿ," ಎನ್ನುತ್ತಾರೆ ವಾಣಿ ಭಂಡಾರಿ. ಅವರು ತಮ್ಮ ‘ಅಂತರ್ ದೃಷ್ಟಿ’ ವಿಮರ್ಶಾ ಸರಣಿಯಲ್ಲಿ ಜಿ.ಎಚ್. ನಾಯಕ ಅವರ ಸಂಪಾದಿತ ಕೃತಿಯಿಂದ ಆಯ್ದ ಆನಂದ ಅವರ “ನಾನು ಕೊಂದ ಹುಡುಗಿ ಕಥೆಯಲ್ಲಡಗಿರುವ ಮೌಢ್ಯತೆ” ಬಗ್ಗೆ ವಿಮರ್ಶಿಸಿದ್ದಾರೆ.
ನವೋದಯ ಸಾಹಿತ್ಯ ಸಂದರ್ಭದಲ್ಲಿ ಮಾಸ್ತಿಯವರನ್ನು ಬಿಟ್ಟರೆ ಆ ತಲೆಮಾರಿನ ಕಥೆಗಾರರಲ್ಲಿ ಆನಂದ ಅವರ ಹೆಸರು ಪ್ರಮುಖವಾದದ್ದು ಹಾಗೂ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಇವರು ಮೂಲತ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು, ಆನವಟ್ಟಿ ಗ್ರಾಮದಲ್ಲಿ 1902ರಲ್ಲಿ ಜನಿಸಿದರು. ಇವರು ಬಹಳಷ್ಟು ಬೇರೆ ಭಾಷೆಯ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಡಾಂಟೆ, ಡೇನಿಯಲ್, ರಾಬರ್ಟ್, ಸರ್ ವಾಲ್ಟರ್, ವಿಗ್ದೊರೊವಾ, ಇವರುಗಳ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರು ಸುಮಾರು 12 ಕಥಾ ಸಂಕಲನಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿರುವುದು ಇವರ ಹೆಗ್ಗಳಿಕೆ. ಇವರ ಪ್ರಮುಖ ಕತೆಗಳು “ಬದುಕು, ನಾನು ಕೊಂದ ಹುಡುಗಿ, ಅಶ್ವರೋಹಿ,ಹೆಂಡತಿಯ ಕಾಗದ, ಸರಸಿಯ ಗೊಂಬೆ, ದೂರದ ಆನೆ, ನಾವು ಹಾಗೆಯೇ, ಸಂಭ್ರಮ, ಕೊನೆ ಎಂಟಾಳೆ, ನಟರಾಜ, ಮನವಿದ್ದಂತೆ ಮಾತು, ಪದ್ಮ ಪಾಪು, ಟೀ ಸಮಯ, ಕರಿ ಹುಡುಗಿ ಮತ್ತು ರಾಧೆಯ ಕ್ಷಮೆ,” ಇಂತಹ ಅಪರೂಪದ ಕಥೆಗಳನ್ನು ನೀಡಿರುತ್ತಾರೆ.
ಇವರ ಬಹುಪಾಲು ಕಥೆಗಳು ಒಂದು ಕುಟುಂಬದ ಚೌಕಟ್ಟಿನಲ್ಲಿ ಜರುಗುತ್ತವೆ. ಈ ಕುಟುಂಬದಲ್ಲಿ ಹೆಚ್ಚು ಕಡಿಮೆ ಒಂದು ಮಗು ಇಷ್ಟರ ಮಿತಿ ಹೊಂದಿರುವ ಹಾಗೂ ಮಧ್ಯಮ ವರ್ಗದ ಸೌಹಾರ್ದಯುತ ಜೀವನ ಕ್ರಮವನ್ನು ಕಂಡುಕೊಳ್ಳುವಂತದ್ದು, ನೆಮ್ಮದಿಯ ಪರಸ್ಪರ ಹೊಂದಾಣಿಕೆ ಸರಸ ಸಲ್ಲಾಪಗಳು ರಸಿಕತೆ ಇತ್ಯಾದಿ ಅಂಶಗಳು ಕಥೆಯ ಒಳಹೊಕ್ಕರೂ ಸಹ ಗೃಹಸ್ಥಾಶ್ರಮದಲ್ಲಿರುವ ಪುರುಷ ಇತರೆ ಬಾಹ್ಯ ಸೌಖ್ಯಕ್ಕಾಗಿ ಹಾತೊರೆಯದಂತಹ ನಿಷ್ಠೆಯ ಚಿತ್ರಣವೇ ಇವರ ಬಹುಪಾಲು ಕಥೆಗಳಲ್ಲಿ ಇರುವಂತದ್ದು. ಇವರ ಬಹುಮುಖ್ಯ ಕಥೆಗಳಲ್ಲಿ ಒಂದಾದ “ನಾನು ಕೊಂದ ಹುಡುಗಿ ಕಥೆಯು” ಸಹ ಇದರಿಂದ ಹೊರತಾಗಿಲ್ಲ. ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಕಳನಾಯಕರು ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರೆ ಈ ಕಥೆಯ ಕೇಂದ್ರಬಿಂದು ಮಾತ್ರ ಚೆನ್ನಮ್ಮ ಎಂಬ ಒಬ್ಬ ಮುಗ್ಧೆ. ಇಲ್ಲಿ ನಿರೂಪಕರು ಊರೂರು ಸುತ್ತಿ ಅಲ್ಲಿಯ ವಿಶೇಷತೆಗಳನ್ನು ತಿಳಿದು ಚಿತ್ರಿಸುವುದು ಅವರ ಖಯಾಲಿ. ಈ ಅಭಿರುಚಿಯಿಂದಾಗಿಯೇ ಬೇಸಿಗೆ ರಜೆಯ ಸಮಯದಲ್ಲಿ ಪ್ರೇಕ್ಷಣೀಯ ಸ್ಥಳಗಳನ್ನು ಕಂಡು ಚಿತ್ರ ರೂಪದಲ್ಲಿ ಸಂಗ್ರಹಿಸಬೇಕೆಂಬ ಹಠದಲ್ಲಿ ಊರೂರು ತಿರುಗುವಾಗ “ನಾಗವಲ್ಲಿ” ಎಂಬ ಹಳ್ಳಿಯಲ್ಲಿ ಕರಿಯಪ್ಪ ಎಂಬ ಗಣ್ಯರ ಮನೆಯಲ್ಲಿ ತಂಗಿದಾಗ ಜರುಗಿದ ಒಂದು ಘಟನೆಗೆ ಈ ಕಥಾ ಹಂದರ.
ಒಂದೆರಡು ರಾತ್ರಿ ಕರಿಯಪ್ಪನವರ ಮನೆಯಲ್ಲಿದ್ದುಕೊಂಡೆ ಸುತ್ತಾ ಮುತ್ತಾ ಸ್ಥಳಗಳನ್ನು ಕಂಡು ರಾತ್ರಿ ಸುಸ್ತಾಗಿ ಮಲಗಿರುವಾಗ ಕರಿಯಪ್ಪನವರ ಮಗಳು ಚೆನ್ನಮ್ಮ ಹಾಲನ್ನಿಡಿದು ನಿರೂಪಕರು ಇರುವ ರೂಮಿಗೆ ಬಂದಾಗ ನಿರೂಪಕರಿಗೆ ಆಶ್ಚರ್ಯ ಮತ್ತು ಭಯ ಸಮ್ಮಿಶ್ರವಾಗಿ ಮೂಡುತ್ತದೆ. ಈ ಸರಿ ರಾತ್ರಿಯಲ್ಲಿ ನನ್ನ ಕೋಣೆಗೆ ಏಕೆ ಬಂದೆ ಎಂದು ಚೆನ್ನಮ್ಮಳಲ್ಲಿ ಕೇಳುವ ಆ ಸಂದರ್ಭದಲ್ಲಿಯೇ ಕಥೆಯ ತೀವ್ರತೆ ಮತ್ತು ಕಥೆಯ ಮೂಲ ಆಶಯ ತೆರೆದುಕೊಳ್ಳುವುದು. ಕರಿಯಪ್ಪರಿಗೆ ಚೆನ್ನಮ್ಮ ಹುಟ್ಟಿದ ಏಳೆಂಟರ ವಯಸಿನಲ್ಲಿ ಅನಾರೋಗ್ಯ ಪೀಡಿತಳಾದ ಸಮಯದಲ್ಲಿ ‘ಮರಡೀ’ ದೇವರಿಗೆ ಹರಕೆ ಮಾಡಿಕೊಂಡಿದ್ದು ಅರ್ಥಾತ್ ಆಕೆಯನ್ನು ಬಸವಿಯನ್ನಾಗಿ ಬಿಟ್ಟಿರುವಂಥದ್ದು, ಅತಿಥಿಗಳ ಸೇವೆಗೆ ಹರಕೆ ಒಪ್ಪಿಸಿದಂತೆ, ಮನೆಗೆ ಬಂದ ಅತಿಥಿಗಳೇ ದೇವರ ಸಮಾನ. ಅಂತಹ ದೇವರಿಗೆ ತಮ್ಮ ಹರಕೆಯನ್ನು ಒಪ್ಪಿಸುವುದು ಅರ್ಥಾತ್ ತಮ್ಮ ದೇಹವನ್ನು ಒಪ್ಪಿಸುವುದೇ ಅವರ ದೃಷ್ಟಿಯಲ್ಲಿ ಹರಕೆ ಒಪ್ಪಿಸಿದಂತೆ ಎಂಬ ತಿಳಿವಳಿಕೆಯು ಇದ್ದಂತಿದೆ ಈ ಕಥೆಯಲ್ಲಿ. ಆದರೆ ಹಾಗೆ ಒಪ್ಪಿಸಲು ಬಂದಾಕೆಗೆ ತನ್ನ ನಿರಾಕರಣೆಯನ್ನು ಸೂಚಿಸುವುದರ ಮೂಲಕ ಚೆನ್ನಮ್ಮಳ ಮನಸ್ಸನ್ನು ಘಾಸಿಗೊಳಿಸುತ್ತಾರೆ ನಿರೂಪಕರು. ಆಕೆಯ ಹೃದಯಕ್ಕೆ ನಾಟುವಂತೆ ಸಮಾಜದ ಕ್ರೂರತೆ ಮತ್ತು ಹೀಗೆಲ್ಲ ಸೆರಗು ಹಾಸುವ ಪ್ರಕ್ರಿಯೆಯು ಸೂಳಿಯರಿಗೆ ಸಮಾನವಾಗಿರುವಂತಹದ್ದು. ಇಂತಹ ಕ್ರಿಯಾತ್ಮಕ ನಿಲುವು ಹಾಗೂ ಆಕೆಯ ಮುಗ್ದತೆಯಿಂದ ಅವಳನ್ನು ಅವಳು ಕಳೆದುಕೊಳ್ಳುತ್ತಿರುವುದರ ಬಗ್ಗೆ ಎಲ್ಲವನ್ನು ತುಲಾನಾತ್ಮಕವಾಗಿ ಚೆನ್ನಮಳಿಗೆ ತಿಳಿಸಿ ಅವಳು ಮಾಡುತ್ತಿರುವ ಕಾರ್ಯ ತಪ್ಪೆಂದು ತಿಳಿಸಿ ಆಕೆಯಿಂದ ಭಾಷೆ ತೆಗೆದುಕೊಂಡು ತನ್ನನ್ನು ಮನ್ನಿಸು ಎಂದು ಆಕೆಯ ಹಣೆಗೊಂದು ಹೂ ಮುತ್ತನ್ನು ಇಟ್ಟು ರಾತ್ರಿ ಕೋಣೆಯಿಂದ ಕಳಿಸಿ ಬೆಳಗ್ಗೆ ಎದ್ದಾಗ ಹಿತ್ತಲಿನ ತೋಟದಲ್ಲಿರುವ ಬಾವಿಯಲ್ಲಿ ಆಕೆಯ ಹೆಣ ಕಂಡ ಚಿತ್ರಣವೇ ಈ ಕಥೆ.
ಆನಂದ ಅವರ ನಾನು ಕೊಂದ ಹುಡುಗಿಯನ್ನು ಅವಲೋಕಿಸಿದಾಗ ಭಾವ ತೀವ್ರತೆಯ ಭಾವಜಲವೇ ಉಕ್ಕಿ ಹರಿದಂತೆ ಭಾಸವಾಗುತ್ತದೆ. ನಮ್ಮ ಸಮಾಜದ ಕರಾಳ ಪದ್ಧತಿಗೆ ಒಂದು ಜೀವ ನಲುಗುವ ಚಿತ್ರಣ ಹಾಗೂ ಅವರಲ್ಲಿ ಇರುವ ಮೌಢ್ಯತೆಯು
ಸಮ್ಮಿಳಿತವಾದ ಕ್ರಿಯೆಯು ಜರಗುವುದು. “ಆರ್ಯಾಂಬ ಪಟ್ಟಾಬಿ ಅವರು ಸಹ ಬಸವಿ” ಎಂಬ ಕಾದಂಬರಿಯಲ್ಲಿ ದೇವದಾಸಿ ಪದ್ಧತಿಯ ಚಿತ್ರಣ ಹಾಗೂ ವರ್ಗಕ್ಕೆ ಧರ್ಮದ ಸ್ಪರ್ಶ ನೀಡಿ ಹೆಣ್ಣು ಮಕ್ಕಳ ಬದುಕನ್ನು ನಾಶ ಮಾಡುವ ಒಂದು ಪದ್ದತಿಯ ಕುರಿತು ಉಲ್ಲೇಖಿಸಿರುತ್ತಾರೆ. ಇದರ ಹೊರತಾಗಿಯೂ ಈ ಒಂದು ಪದ್ಧತಿಯು ಬಹಳ ಪ್ರಾಚೀನವಾದ ಪದ್ಧತಿ ಎಂದೇ ತಿಳಿಯಬಹುದಾಗಿದೆ. “ಮೆಹೆಂಜೋದಾರೋ ಸಂಸ್ಕೃತಿಯ ಮಾತೃದೇವತೆ ಅಥವಾ ಸಂತಾನ ದೇವತೆಯ ಗುಡಿಯಲ್ಲಿ ಪುರುಷರು ಹಾಗೂ ಸ್ತ್ರೀಯರು ಗುಲಾಮರಾಗಿರುತ್ತಿದ್ದರೆಂದು ಅವರಲ್ಲಿ ಅನೇಕರು ದೇವದಾಸಿಯರು ಎಂದು ಗೃಹಿಣೀಯರಾಗುವ ಮುನ್ನ ಸ್ವಲ್ಪಕಾಲವಾದರೂ ಮಾತೃದೇವತಾ ಮಂದಿರದಲ್ಲಿ ದೇವದಾಸಿಯರಾಗಿರುವುದು ಆಗಿನ ಸಮಾಜದಲ್ಲಿ ಗೌರವ ಪ್ರತಿಷ್ಠೆಗಳ ಮಾತಾಗಿತ್ತೆಂದು ತಿಳಿದು ಬರುತ್ತದೆ”, (ಮೈಸೂರು ವಿ. ವಿಶ್ವ ಕೋಶ ದೇವದಾಸಿ) ಪ್ರಾಚೀನ ಹಿಂದೂ ಗ್ರಂಥಗಳಲ್ಲಿ ಏಳು ವಿಧದ ದೇವದಾಸಿಯರ ಉಲ್ಲೇಖವಿರುವುದು ವಿದ್ವಾಂಸರ ಅಭಿಪ್ರಾಯ. ದತ್ತಾ, ವಿಕ್ರೀತಾ, ಭೃತ್ಯಾ, ಭಕ್ತಾ, ಹೃತಾ,ಅಲಂಕಾರ, ರುದ್ರಗಣಿತ ಅಥವಾ ಗೋಪಿಕಾ, ಹೀಗೆ ಏಳು ವಿಧದ ದೇವದಾಸಿಯರಲ್ಲಿ ಭಿನ್ನ ನೆಲೆಯ ಪಾತ್ರ ಚಿತ್ರಣಗಳು ಹಾಗೂ ಅವರ ರೀತಿ ನೀತಿಗಳು ಬೇರೆ ಆಯಾಮಗಳನ್ನು ಪಡೆದುಕೊಳ್ಳುತ್ತವೆ ಎಂಬುದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. “ಎಂ. ಚಿದಾನಂದಮೂರ್ತಿಯವರು ಕರ್ನಾಟಕ ಶಾಸನಗಳಲ್ಲಿ ಅಂಗ ಭೋಗ ಮತ್ತು ರಂಗಭೋಗ ಎಂಬ ಮಾತುಗಳು ಬರುತ್ತವೆ ಎಂಬುದನ್ನು ವಿಸ್ತಾರವಾಗಿ ವಿವರಿಸುತ್ತಾರೆ”.
ನಾನು ಕೊಂದ ಹುಡುಗಿಯ ಕಥೆಯಲ್ಲಿ ಬರುವ ಈ ಬಸವಿ ಪದ್ಧತಿಯು ನಮಗೆ ಇನ್ನೊಂದು ಮುಖದ ನೆಲೆಯ ಆಯಾಮವನ್ನು ತೆರೆದು ತೋರಿಸುತ್ತದೆ. ನವೋದಯ ಕಾಲಘಟ್ಟ ಸಂದರ್ಭದಲ್ಲಿ ಚಿತ್ರಣಗೊಂಡ ಈ ಕಥೆಯನ್ನು ನಾವು ವಿಮರ್ಶೆಗೆ ಒಳಪಡಿಸಿದಾಗ ಚನ್ನಮ್ಮಳ ಸಾವಿಗೆ ನೇರವಾಗಿ ಕಾರಣವಾದವರು ಯಾರು? ಈ ಕಥೆಯ ನಿರೂಪಕರೇ? ಅಥವಾ ಈ ಸಮಾಜದ ಕ್ರೂರ ಪದ್ದತಿಯೇ? ಅಥವಾ ಮನೆಯವರ ಮೌಢ್ಯತೆಯೇ? ಹಾಗೂ ಆಕೆಯ ಮುಗ್ಧತೆಯಾ? ಅಸಹಾಯಕತೆಯಾ? ಎಂಬೆಲ್ಲ ಪ್ರಶ್ನೆಗಳಿಗೂ ಅವಳ ಸಾವು ಉತ್ತರವಾಗಲಾರದು. ನಿರೂಪಕರು ತನ್ನ ಚಾರಿತ್ರವನ್ನು ಸಾಬೀತು ಪಡಿಸುವ ಸಲುವಾಗಿ ಚೆನ್ನಮ್ಮಳ ಸಾವಿಗೆ ಕಾರಣವಾದರೆ? ಎಂಬ ನೋವು ಕಾಡದೇ ಇರದು. ಒಂದು ವೇಳೆ ಆಕೆಯನ್ನು ಸಮಾಧಾನಿಸಿ ಅವಳ ಮನಕೊಂದಿಷ್ಟು ಗಟ್ಟಿತನವನ್ನು ನೀಡಿ ಅವಳ ತಪ್ಪಿನ ಅರಿವನ್ನು ಮಾಡಿಸಿದ್ದೇನೋ ಸರಿ. ಆದರೆ ಆಕೆಯ ಮುಂದಿನ ಭವಿಷ್ಯದ ಬಗ್ಗೆ ಅವಳಿಗೆ ಅರಿವು ನೀಡಬೇಕಾದ್ದು ನಿರೂಪಕರ ಧರ್ಮವಾಗಿತ್ತು. ಕಾರಣ ಒಲಿದು ಬಂದವಳನ್ನು ನಿರಾಕರಿಸಿ ಸುಮ್ಮನೆ ಕಳಿಸುವ ಅವಕಾಶ ನಿರೂಪಕರಿಗೆ ಇತ್ತು. ಆದರೆ ನಿರೂಪಕರು ಇಲ್ಲಿ ನಿರಾಕರಣೆಗಿಂತ ಆಕೆ ಮಾಡುವ ಹೇಯ ಕೆಲಸದ ಕುರಿತ ಆಕ್ಷೇಪಣೆ ಮತ್ತು ನೈತಿಕತೆಯ ವ್ಯಾಖ್ಯಾನ ನೀಡುವ ಜರೂರತ್ತು ನಮಗೆ ಕಾಣಸಿಗುತ್ತದೆ. ನೈತಿಕತೆಯ ಉಪನ್ಯಾಸ ನೀಡಿದ ನಿರೂಪಕರಿಗೆ ಆಕೆಯ ಮುಂದಿನ ಬದುಕಿನ ಆಕೆ ಬಗ್ಗೆ ತಿಳಿಸುವ ಮತ್ತು ಅಲ್ಲಿ ಸಂಭವಿಸಬಹುದಾದ ಗೋಜಲಿನ ಸಿಕ್ಕನ್ನು ಬಿಡಿಸಿ ಮುನ್ನುಗ್ಗಿ ಬದುಕುವ ಮನೋ ಧೈರ್ಯವನ್ನು ಆಕೆಯಲ್ಲಿ ಬಿತ್ತಲೇ ಇಲ್ಲ. ಇನ್ನು ಮುಂದೆ ಇಂಥ ಕೆಲಸಕ್ಕೆ ಹೋಗಬಾರದೆಂದು ಭಾಷೆ ತೆಗೆದುಕೊಂಡರಷ್ಟೇ.ಭಾಷೆ ತೆಗೆದುಕೊಂಡ ಮೇಲೆ ಅವಳ ಮುಂದಿನ ಬದುಕಿನ ಗತಿಯೇನು? ಭಾಷೆ ತೆಗೆದುಕೊಂಡಾಕ್ಷಣ ಅವರ ತಂದೆ ತಾಯಿ ಇನ್ಯಾರೋ ಅತಿಥಿಗಳು ಮನೆಗೆ ಬಂದಾಗ ಹೀಗೆ ಕೋಣೆಗೆ ಕಳಿಸಬಹುದಾದ ಸಾಧ್ಯತೆಗಳ ಬಗ್ಗೆ ನಿರೂಪಕರು ಯಾಕೆ ಯೋಚಿಸಲಿಲ್ಲ? ಅಂತಹ ಒಂದು ಪದ್ಧತಿಯನ್ನು ವಿಡಂಬಿಸುವ ನಿರ್ಮೂಲ ಮಾಡುವ ಇಚ್ಛೆ ಇದ್ದಲ್ಲಿ ಆಕೆಯ ಮುಗ್ದತೆ,ಹಾಗೂ ಮನೆಯವರ ಮೌಢ್ಯತೆಯನ್ನು ತೊಲಗಿಸುವ ಸಲುವಾಗಿಯಾದರೂ ಆಕೆಗೆ ಅವಳ ತಪ್ಪಿನ ಅರಿವು ಮೂಡಿಸಿದಂತೆ ಚೆನ್ನಮ್ಮಳ ತಂದೆ ಕರಿಯಪ್ಪ ಮತ್ತು ಅವರ ಮನೆಯವರನ್ನು ಕರೆದು ಕೂರಿಸಿ ನೀತಿ, ನಿಷ್ಠೆ,ಕ್ರೂರತೆ, ಮೌಲ್ಯತೆಯ, ನೈತಿಕತೆಯ, ಪಾಠ ಹೇಳಬಹುದಾಗಿತ್ತು ಅಲ್ಲವೇ? ಜೊತೆಗೆ ಆ ಒಂದು ರಾತ್ರಿಯಾದರೂ ಆಕೆಯನ್ನು ಕೋಣೆಯಲ್ಲಿ ಇರಿಸಿಕೊಂಡು ಆಕೆಯ ಮನದ ಆತಂಕವನ್ನು ಹೋಗಲಾಡಿಸಿ ಬೆಳಗ್ಗೆ ಕಳಿಸಿದರೆ ನಿರೂಪಕರ ಚಾರಿತ್ರಕ್ಕೇನು ಕೊಂದು ಉಂಟಾಗುತ್ತಿರಲಿಲ್ಲ. ಅದರ ಪಾಪ ಪುಣ್ಯ ಕೃತ್ಯದ ಬಗ್ಗೆ ಉಪನ್ಯಾಸ ನೀಡಿ ಅವಳ ಮನಸ್ಸನ್ನು ಪರಿವರ್ತಿಸಬೇಕೆಂದು ಕೊಂಡರೆ ವಿನಹ ಅವರ ಮನೆಯವರ ಮನಸ್ಸಿಗೆ ಮೌಢ್ಯತೆಯಗೆ ಪಾಠ ಹೇಳುವಲ್ಲಿ ವಿಫಲವಾದರೇ,ನಿರೂಪಕರ ಈ ವಿಫಲತೆಯೇ ಆಕೆಯ ಸಾವು ಎಂದು ನೇರವಾಗಿ ಷರ ಬರೆಯಬಹುದು. ಮೂಲ ಬೇರನ್ನು ಕೀಳಬೇಕೆ ವಿನಹ ಮೇಲೆ ಚಿಗುರಿದ ಎಲೆಯನ್ನೊ, ನಳನಳಿಸುವ ಹೂವನ್ನೊ ಕಿತ್ತರೆ, ಆಳಕ್ಕಿಳಿದ ಬೇರು ಸಾಯುವುದೇ? ಅಂತಹ ಆಳದಲ್ಲಿರುವ ಹೇಯವಾದ ಬೇರಿಗೆ ಬೆಂಕಿ ಹಾಕಲು ಶಕ್ತರಿಲ್ಲ ಎಂದಾದರೆ ಹೂವಿನ ಮೇಲೆ ಹಕ್ಕು ಅಧಿಕಾರ ಸ್ಥಾಪಿಸಿ ಉಪನ್ಯಾಸ ನೀಡಿ ಉಪಾಯದಿಂದ ಆಕೆಯನ್ನು ಕೋಣೆಯಿಂದ ಸಾಗು ಹಾಕುವ ತೀರ್ಮಾನವನ್ನು ಹೇಗೆ ತೆಗೆದುಕೊಂಡರು ನಿರೂಪಕರು?. ತಾನು ಶುದ್ಧ,ನಿಷ್ಠಾವಂತ, ಚಾರಿತ್ರವಂತ, ಎಂದು ಸಾಬೀತು ಪಡಿಸುವ ಸಲುವಾಗಿ ಒಂದು ಆತ್ಮದ ಕೊಲೆಯಾಯಿತಲ್ಲ ಈ ಸಾವಿಗೆ ಕಾರಣರು ಯಾರು? ಈ ಸಮಾಜದ ಅತ್ಯಂತ ನಿಕೃಷ್ಟ ಪದ್ಧತಿಯ? ಅಥವಾ ನಿರೂಪಕರ ಮನಸ್ಥಿತಿಯ? ಎಂಬುದನ್ನು ಸಹೃದಯರು ವಿವೇಚಿಸಬೇಕಾದ ಅಂಶ.
ಆ ಹೇಯ ಕರ್ಮದ ಕುರಿತು ಸಾಧಕ ಬಾದಕ ಹಾಗೂ ಮುಂದಿನ ಅವಳ ಬದುಕಿಗೆ ಒಂದಿಷ್ಟು ಸ್ಪಷ್ಟ ನಿರ್ಧಾರದ ದಾರಿಯನ್ನು ತೋರಿಸಿ ಒಬ್ಬ ಅಣ್ಣನಾಗಿ ಮಾಡಬಹುದಾದ ಸಾಧ್ಯತೆಗಳನ್ನು ಅವಳಲ್ಲಿ ತುಂಬಿ ಅವಳ ಆತಂಕ ತಳಮಳ ತಲ್ಲಣಗಳಿಗೆ ಸಾಂತ್ವನ ನೀಡಿ ಅಂದು ಅಲ್ಲಿಯೇ ಉಳಿಸಿಕೊಂಡಿದ್ದರೆ ಇವರ ಚಾರಿತ್ರ್ಯಕ್ಕೆ ಕಳಂಕ ತಟ್ಟುತ್ತಿರಲಿಲ್ಲ. ಮೂಲತಃ ಅವರು ಬಂದು ಉಳಿದುಕೊಂಡಿದ್ದೆ ಅಂತವರ ಮನೆಯಲ್ಲಿ ಹಾಗಿರುವುದರಿಂದ “ಬೈನೆ ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದರು ಅದನ್ನು ಸೇಂದಿ (ಕಳ್ಳು) ಎಂದೇ ಈ ಜಗತ್ತು ಪರಿಭಾವಿಸುವುದು” ಹೀಗಿರುವಾಗ ನಿರೂಪಕರು ಅಂತಹ ಪ್ರಕ್ರಿಯೆ ದುರಂತ ಸಂಭವಿಸುವುದನ್ನು ತಪ್ಪಿಸಬಹುದಿತ್ತು.
ಒಟ್ಟಾರೆ ಈ ಕಥೆ ಭಾವ ತಲ್ಲಣಗಳ ತಾರ್ಕಿಕತೆಯೊಂದಿಗೆ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. “ಆನಂದರ ಕಥೆಗಳಲ್ಲಿ ಭಾವ ತೀವ್ರತೆ ಉಂಟು
ದುಃಖ, ನಲಿವು,ಅನುರಾಗ, ಎಲ್ಲ ತೀಕ್ಷ್ಣ. ಆದರೆ ಮಾಸ್ತಿಯವರ ಕಥೆಗಳಲ್ಲಿ ಚಿತ್ರಿಸಿದ ಜೀವನದ ವೈಶಾಲ್ಯ ಇವರ ಕಥೆಗಳಿಲ್ಲ”-(ಎಸ್ ಎಲ್ ಶೇಷಗಿರಿ ರಾವ್- ಹೊಸಗನ್ನಡ ಸಾಹಿತ್ಯ ಚರಿತ್ರೆ ) ಹೃದಯಕ್ಕೆ ತಟ್ಟಿ ಬಡಿದೆಬ್ಬಿಸುವಂತಹ ಭಾವೋದ್ವೇಗ ಇವರ ಕಥೆಗಳಲ್ಲಿ ಕಾಣುತ್ತದೆ. “ಒಟ್ಟಿನಲ್ಲಿ ದಾಂಪತ್ಯ ಇಲ್ಲವೇ ಸರಸ, ಪ್ರೇಮದ ಸಲ್ಲಾಪ, ಚೇಷ್ಟಗಳನ್ನೇ ತಿರು ತಿರುಗಿ ಚಪ್ಪರಿಸುವ ಲೋಲುಪತೇ ಆನಂದರಲ್ಲಿ ಹೆಚ್ಚಾಗಿ ಕಾಣುತ್ತದೆ”.(ಜಿಎಚ್ ನಾಯಕ್)
ಇವರ ಕಥೆಯಲ್ಲಿ ಪ್ರಶ್ನೆಗಳನ್ನು ಎತ್ತಿದ್ದಾರೆಯೇ ವಿನಹ ಉತ್ತರವನ್ನು ಹುಡುಕಿ ಸಂಭಾಳಿಸುವ ಮನಸ್ಥಿತಿ ಈ ಕಥೆಯಲ್ಲಿ ಕಾಣಲಾರದು. ಧಾರ್ಮಿಕ ಚೌಕಟ್ಟು ಸಾಂಸ್ಕೃತಿಕ ಕಾಳಜಿ ಕಂಡರೂ ಅದರ ಮುಂದಿನ ನಡೆಗೆ ದಾರಿ ಯಾವುದು ಎಂಬುದರ ಕಡೆ ಅವರ ಗಮನ ಇದ್ದಂತಿಲ್ಲ. ಒಟ್ಟಾರೆ ಇವರ ಕಥೆಯು ಸದಾ ಮನದೊಳಗೆ ಚದುರಿ ವ್ಯಾಕುಲಗೊಂಡು ಒಂದುಗೂಡತಕ್ಕಂತಹ ಸಾಮರ್ಥ್ಯ ಹೊಂದಿದೆ. ಸಮಕಾಲಿನ ಸಂದರ್ಭಕ್ಕೂ ಸಹ ಈ ಕಥೆ ಮುಖಾಮುಖಿಯಾಗುತ್ತದೆ. ಇತ್ತೀಚಿನ ದಿನಮಾನಗಳಲ್ಲೂ ಕೆಲವು ಕಡೆ ಈ ಬಸವಿ ಪದ್ಧತಿ ಇನ್ನೂ ಉಸಿರಾಡುತ್ತಿದೆ ಅದರಲ್ಲೂ ನಮ್ಮ ಕರ್ನಾಟಕದಲ್ಲಿಯೇ ಎಂಬುದನ್ನು ತಿಳಿಸಲು ವಿಷಾದವೆನಿಸುತ್ತದೆ. ಈ ಪದ್ಧತಿಯು ಕೆಳ ವರ್ಗದ ಜನರಲ್ಲಿ ಇದೆ. “ಮಾದೇಶ್ವರನಿಗೆ ಗುಡ್ಡೆ” ಎಂಬ ಹೆಸರಿನ ದೇವದಾಸಿಯರಿದ್ದರೆ, ಎಲ್ಲಮ್ಮನಿಗೆ ಜೋಗತಿಯರು ಎಂಬ ಹೆಸರಿನವರು ಇರುವುದುಂಟು. ಹೀಗೆ ಈ ಕರಾಳತೆಗೆ ಬಿಡುಗಡೆಯ ಭಾಗ ಸಂಪೂರ್ಣವಾಗಿ ದೊರೆತಂತೆ ಕಾಣುವುದಿಲ್ಲ.
- ವಾಣಿ ಭಂಡಾರಿ
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
"ಮನುಶ್ಯ ಪ್ರಾಣಿಗೆ ಯಾವುದೊ ಒಂದು ಕಾಲದಲ್ಲಿ ಬಾಶೆ ಎಂಬ ಶಕ್ತಿ ದಕ್ಕಿತು. ಹೀಗಾಗಿ ಬಾಶೆ ಪ್ರಾಕ್ರುತಿಕವೂ ಅಹುದು ಅ...
©2024 Book Brahma Private Limited.