ನಿರ್ದೇಶಕನಾಗಿ ಒಂದು ವರ್ಷ : ದಾವಣಗೆರೆ ರಂಗಾಯಣ ಕಟ್ಟುವುದೆಂದರೆ...

Date: 14-08-2025

Location: ಬೆಂಗಳೂರು


"ಹೊಸ ರಂಗಾಯಣ ಕಟ್ಟುವುದೆಂದರೆ ತಿಂಗಳೊಪ್ಪತ್ತಲ್ಲಿ ಒಂದು ನಾಟಕ ಕಟ್ಟಿದಷ್ಟು ಸರಳ, ಸುಲಭವಲ್ಲ. ಅದು ದುರ್ದಮ್ಯದ ಮಜಕೂರ. ಪೂರ್ವಸೂರಿಗಳ ಸಾರಸ್ವತ ಲೋಕ, ಕಾರಂತರ ರಂಗಧಾರ್ಷ್ಟ್ಯದ ದಟ್ಟ ಪರಿಚಯವೇ ನನಗೆ ಅಖಂಡ ಧೈರ್ಯ. ವರ್ತಮಾನದ ಕಾರ್ಪೊರೇಟ್ ಕಲ್ಚರ್ ನಡುವೆ ವೃತ್ತಿ ರಂಗಭೂಮಿ ನಾವಿನ್ಯಗೊಳಿಸುವುದು ದುರ್ಭರ ಸಾಹಸವೇ ಹೌದು," ಎನ್ನುತ್ತಾರೆ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿ ಬುತ್ತಿ ಅಂಕಣಕ್ಕೆ ಬರೆದ ಲೇಖನವಿದು.

ಯಾವುದೇ ಕೆಲಸ ಕೈಗೆತ್ತಿಕೊಳ್ಳಲಿ, ಅದನ್ನು ಅತ್ಯಂತ ಪ್ರೀತಿ, ಶ್ರದ್ಧೆ, ನಿಷ್ಠೆಯಿಂದ ಮಾಡುವುದು ನನ್ನ ಮೊದಲ ಆದ್ಯತೆ. ಅಷ್ಟು ಮಾತ್ರವಲ್ಲದೇ ಅದು ನನ್ನ ಮನಸಾಕ್ಷಿ ಒಪ್ಪುವಂತಿರಬೇಕು. ಬರವಣಿಗೆಯಂತು ಅದಕ್ಕೆ ಹೊರತಾದುದಲ್ಲ. ಹಾಗೆ ನೋಡಿದರೆ ವಾರ - ವಾರ 'ಮುಖಾಬಿಲೆ' ಮತ್ತು 'ರೊಟ್ಟಿಬುತ್ತಿ' ಅಂಕಣಗಳಿಗೆ ಬರೆಯುವುದಕ್ಕಿಂತ ನಾನು ದಿನಾಲೂ ಓದುವುದೇ ಅಧಿಕ. ಈಗಲೂ ನಾಲ್ಕು ನಾಟಕಗಳನ್ನು ಓದಿ ಅವಕ್ಕೆ ಮುನ್ನುಡಿ ಬರೆಯುವುದನ್ನು ಬಾಕಿ ಉಳಿಸಿಕೊಂಡಿದ್ದೇನೆ. ಅಷ್ಟಕ್ಕೂ ನನಗೆ ಓದುವುದರಲ್ಲಿ ಇರುವ ಖುಷಿ ಮತ್ತು ಆಸ್ಥೆ, ಬರವಣಿಗೆ ಕ್ರಿಯೆಯಲ್ಲಿ ಇರದು.

ಅಂದಹಾಗೆ ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕನಾಗಿ ಇದೇ 2025 ರ ಆಗಸ್ಟ್ ಹದಿನಾರಕ್ಕೆ ಒಂದು ವರುಷ. ತುಂಬಿದ ವರುಷ ಖರೇ, ಆದರೆ ಹರುಷ ತುಂಬಿ ಬಂದಿಲ್ಲ. ಅಷ್ಟಕ್ಕೂ ಒಂದೇ ವರುಷದಲ್ಲೇ ಅಂದುಕೊಂಡದ್ದೆಲ್ಲ ಈಡೇರುವಂತಹದ್ದಲ್ಲ. ಹಾಗೇ ಸುಮ್ಮನೆ ಒಂದು ಕ್ಷಣ ಹೊಳ್ಳಿ ನೋಡಿದೆ. ಆಡಾಡ್ತಾ ವರುಷ ಕಳೆಯದೇ ಪ್ರತಿಯೊಂದು ದಿನ, ಗಳಿಗೆಗಳನ್ನು ರಂಗಸಂಸ್ಕೃತಿಯೊಂದಿಗೆ ಅನುಸಂಧಿಸಿದ ಸದ್ಭಾವ ಮಾತ್ರ ತುಂಬಿ ತುಳುಕಿತು. ಭಾರೀ ಸಾಧನೆ ಮಾಡಿದೆನೆಂಬ ಅಹಮಿಕೆ ಅಕ್ಷರಶಃ ಇಲ್ಲ. ಸರಕಾರ ನನಗೆ ವಹಿಸಿದ ಕೆಲಸವನ್ನು ಕಾಯಕದಂತೆ ಆತ್ಮಸಾಕ್ಷಿಯಾಗಿ ಮಾಡಿದ ಸಂತುಲಿತ ಸಮಾಧಾನ. ಹಾಗಂತ ಅದು ಸರ್ಕಾರಿ ನೌಕರಿಯಂತಲ್ಲ.

ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿರುವ ಪುಟ್ಟ ಕಚೇರಿ ನನ್ನದು. ನಾಲ್ವರು ಸಿಬ್ಬಂದಿ. ನಾವು ನಾಲ್ವರು, ರಂಗಸೇನಾನಿಗಳಂತೆ ಒಗ್ಗಟ್ಟಿನಿಂದ ಕೆಲಸ ಮಾಡಿದ ಮತ್ತೊಂದು ಸಮಾಧಾನ. ಪ್ರೀತಿಯಿಂದಲೇ ಗೆಲುವು ಸಾಧಿಸುವ, ಗುರಿ ತಲುಪುವ ಹಾದಿಯ ಸದೃಢ ನಡೆಯ ನಂಬಿಕೆ. ನನ್ನೆದುರು ಇರುವ ಸವಾಲುಗಳು ಹತ್ತಾರು. ಕನಸುಗಳೂ ಹತ್ತಾರು. ರಂಗಾಯಣ ಒಂದು ಸ್ವಾಯತ್ತ ಸಂಸ್ಥೆ. ಅದರ ನಿರ್ದೇಶಕರು ರೂಪಿಸುವ ಸಾಂಘಿಕ ರಂಗಯೋಜನೆ, ಕನಸುಗಳು ಅಲ್ಲಿ ಅರಳುವ ಅವಕಾಶ. ಆದರೆ ಮೂಲಭೂತ ಸೌಕರ್ಯಗಳೇ ಇಲ್ಲದಿರುವಾಗ ಸ್ವಾಯತ್ತತೆಗೆ ಪೂರ್ಣಾರ್ಥ ದೊರಕೀತು ಹೇಗೆ ?

ಏಕೆಂದರೆ ಹೊಸ ರಂಗಾಯಣ ಕಟ್ಟುವುದೆಂದರೆ ತಿಂಗಳೊಪ್ಪತ್ತಲ್ಲಿ ಒಂದು ನಾಟಕ ಕಟ್ಟಿದಷ್ಟು ಸರಳ, ಸುಲಭವಲ್ಲ. ಅದು ದುರ್ದಮ್ಯದ ಮಜಕೂರ. ಪೂರ್ವಸೂರಿಗಳ ಸಾರಸ್ವತ ಲೋಕ, ಕಾರಂತರ ರಂಗಧಾರ್ಷ್ಟ್ಯದ ದಟ್ಟ ಪರಿಚಯವೇ ನನಗೆ ಅಖಂಡ ಧೈರ್ಯ. ವರ್ತಮಾನದ ಕಾರ್ಪೊರೇಟ್ ಕಲ್ಚರ್ ನಡುವೆ ವೃತ್ತಿ ರಂಗಭೂಮಿ ನಾವಿನ್ಯಗೊಳಿಸುವುದು ದುರ್ಭರ ಸಾಹಸವೇ ಹೌದು. ಬೇರೆ ರಂಗಾಯಣಗಳಿಗೆ ಕಾರಂತಪ್ರಣೀತ ಮೈಸೂರು ಮಾದರಿಗಳಿವೆ. ಆದರೆ ಶೂನ್ಯದಲ್ಲಿ 'ಸ್ವರೂಪ' ಕಂಡುಕೊಳ್ಳುವ ಮತ್ತು ಸಂರಚಿಸಿಕೊಳ್ಳುವ ಸವಾಲು ನನ್ನದಾಗಿದೆ.

ಈ ಎಲ್ಲ‌ ಸವಾಲುಗಳ ನಡುವೆ ಮೂಲಭೂತ ಸೌಕರ್ಯ ನಿರ್ಮಾಣಕ್ಕೆ ಪ್ರಥಮ ಆದ್ಯತೆಯ ಸಂಕಲ್ಪ ತೊಟ್ಟೆ. ಇಲಾಖೆ ಮತ್ತು ಸರ್ಕಾರಕ್ಕೆ ನಾಕಾರು ಬಾರಿ ಮನವಿ ಸಲ್ಲಿಕೆ. ಅದಕ್ಕಾಗಿ ನಾನು ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ. ₹ ಹತ್ತುಕೋಟಿ ಅನುದಾನಕ್ಕಾಗಿ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಕೆ. ಹಾಗಂತ ಮನವಿ ಸಲ್ಲಿಸಿ ಕುಂತರಾಗದು. ಒಂದಲ್ಲ ಎರಡಲ್ಲ ಮೂರು ಬಾರಿ ಮುಖ್ಯಮಂತ್ರಿ ಅವರನ್ನು ಭೆಟ್ಟಿಮಾಡಿ ಮನವಿಯ ಮನವರಿಕೆ. ಈ ಸಂದರ್ಭದಲ್ಲಿ ನೆರವಾದ ಡಾ. ವೆಂಕಟೇಶಯ್ಯ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಆಯವ್ಯಯದಲ್ಲಿ ನಮ್ಮ ರಂಗಾಯಣಕ್ಕೆ ₹ ಮೂರುಕೋಟಿ ಘೋಷಣೆ ಮಾಡಿದಾಗ ಪಟ್ಟ ಪರಿಶ್ರಮಕ್ಕೆ ಫಲ ದೊರಕಿದ ಸಹಜ ಸಂತಸ.

ಮೂಲಭೂತ ಸೌಕರ್ಯಗಳು, ರಂಗಮಂದಿರ ಮತ್ತು ಥಿಯೇಟರ್ ಮ್ಯುಸಿಯಮ್ ನಿರ್ಮಾಣಕ್ಕೆಂದು ಆಯವ್ಯಯದ ಕಂಡಿಕೆಯಲ್ಲಿ ಸ್ಪಷ್ಟವಾಗಿ ಘೋಷಣೆ ಆಗಿತ್ತು. ಅದರ ಬೆನ್ನುಹತ್ತಿ ಅನುದಾನ ಬಿಡುಗಡೆಗಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ, ಇತರೆ ಪ್ರಕ್ರಿಯೆಗಳಿಗೆ ತಿಂಗಳುಗಳೇ ಗತಿಸಿದವು. ಈ ದಿಸೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಾದ ಜಿ.ಎಂ. ಗಂಗಾಧರಸ್ವಾಮಿ ಅವರ ಸಹೃದಯ ನೆರವು ಮರೆಯಲಾಗದು. ದಾವಣಗೆರೆಯಲ್ಲೇನೋ ಓಕೆ., ಬೆಂಗಳೂರು ಮಟ್ಟದಲ್ಲಿ ಕಡತಗಳ ಜಾಡು ಹಿಡಿದು ಫಾಲೋ ಅಪ್ ಮಾಡುವುದು ಸುಮ್ಮನಲ್ಲ. ವರಸೆಭರಿತ ಸೆಡವಿನ ಬ್ಯುರೊಕ್ರಸಿಯೊಂದಿಗೆ ಜಾಣತನದಿಂದ ವ್ಯವಹರಿಸುವ ಕಲೆ ಅರಿಯದಿದ್ದರೆ ಬಹಳೇ ಕಷ್ಟ. ಅದು ಹೇಳಲಾಗದ ಹಾಗು ಹೇಳದಿರಲಾಗದ ಕಟು ಮತ್ತು ಕಹಿ ವಾಸ್ತವ. ಬೇಸರಿಸದೇ ಕಚೇರಿಯ ಮೇಜುಗಳಿಗೆ ಅಲೆದಲೆದು ಮನದಲ್ಲೇ ಶಪಿಸಿದ್ದೇನೆ.

ಐ. ಎ. ಎಸ್. ಅಧಿಕಾರಿಗಳನ್ನು ಮಾತಾಡಿಸಿ ಸುಗಮವಾಗಿ ಕೆಲಸ ಮಾಡಿಕೊಳ್ಳಬಹುದು. ಆದರೆ ಕೆಳಹಂತದ ಅಧಿಕಾರಶಾಹಿ ಜತೆ ಏಗುವುದು ಮಾತ್ರ ಸಾಧಾರಣದ ಮಾತಲ್ಲ. ಹೀಗಾಗಿ ನನಗಂತು ಟೇಬಲ್ಲುಗಳ ಅಲೆದಾಟ ಅನೇಕ ಬಾರಿ ರೇಜಿಗೆ ತರಿಸಿ ಸಾಕು ಸಾಕೆನಿಸುತ್ತಿತ್ತು. ಸತಾಯಿಸುವುದು, ಕೊಕ್ಕೆ ಹಾಕುವುದರ 'ಒಳಹೇತು' ನಿಗೂಢವೇನಲ್ಲ. ವಾಸ್ತವ ಅದೇನೇ ಇರಲಿ, ನನ್ನ ಸ್ವಂತ ಕೆಲಸವನ್ನು ಸಹಿತ ಇಷ್ಟು ಆಸಕ್ತಿಯಿಂದ ಮಾಡಿಲ್ಲವೆಂದು ಮನೆಮಂದಿ ಮತ್ತು ಅನೇಕ ಗೆಳೆಯರು ಮೆಚ್ಚುಗೆಯ ಮಾತಾಡಿದ್ದುಂಟು. ಅದು ನನ್ನ ತಾಳ್ಮೆ ಪರೀಕ್ಷೆಯ ಕೆಲಸದಂತಿದೆ. ಅದನ್ನು ಸಮಾಧಾನ ಮತ್ತು ಸಾವಧಾನದಿಂದಲೇ ಆಗಿಸಿಕೊಳ್ಳಬೇಕು.

ಮೂಲಭೂತ ಸೌಕರ್ಯಗಳ ನಿರ್ಮಾಣವೇ ಮೊದಲ ಆದ್ಯತೆ ಆದರೂ ರಂಗಚಟುವಟಿಕೆಗಳ ಕಡೆಗೆ ದಿವ್ಯಗಮನ ನನ್ನದಾಗಿತ್ತು. perticular ಆಗಿ ವೃತ್ತಿ ರಂಗಭೂಮಿಯ 'ಜೀವಚೈತನ್ಯ'ದ ಹುಡುಕಾಟ ಮತ್ತು ದರ್ಶನ, ನನ್ನ ಗುರಿ. ಅದು ನನ್ನ ಐಡೆಂಟಿಟಿ ಮತ್ತು ಐಡಿಯಾಲಜಿಯನ್ನು ಬೃಹತ್ತಾದ ವೃತ್ತಿ ರಂಗಭೂಮಿ ಜಗತ್ತಿಗೆ ‌ಕನೆಕ್ಟ್‌ ಮಾಡುವ ಕ್ರಿಯೆ. ಇದು ರಂಗಾಯಣ ನಿರ್ದೇಶಕನ ಮುಖ್ಯ ಕೆಲಸವೆಂದೇ ಭಾವಿಸಿರುವೆ. ರಂಗನಾಟಕಗಳ ಭೌತಿಕ ಬದಲಾವಣೆಯ ಜತೆ ತಾತ್ವಿಕ ಸ್ಥಿತ್ಯಂತರದ ಅಪ್ಡೇಟ್ಸ್ ಹುಡುಕಾಟ. ತತಕ್ಷಣದ ಸಾಹಿತ್ಯರಹಿತ ಇನಸ್ಟಂಟ್ ಕಾಮೆಡಿಯಿಂದ ಪರಂಪರೆಯ ಥಿಯೇಟರ್ ಗೆ ಬಂದೊದಗುವ ಅಪಾಯ ಮತ್ತು ದೇಸಿಯ ತೊಡಕುಗಳ ನಿವಾರಣೋಪಾಯ ಸಹಿತ ಸವಾಲೇ ಸೈ. ಹಲವು ದುರಿತಗಳ ಸೂಕ್ಷ್ಮ ಬಿಕ್ಕಟ್ಟುಗಳನ್ನು ಸಮಚಿತ್ತದಿಂದಲೇ ಸರಳ ಮಾಡಿಕೊಂಡು ಯಶಸ್ಸಿನ ಹಾದಿ ಕಂಡುಕೊಳ್ಳುವ ಯತ್ನ. ಈ ನಿಟ್ಟಿನಲ್ಲಿ ಕಂಪನಿ ಮಾಲೀಕರು, ಕಲಾವಿದರ ಸಮಾಲೋಚನೆ ಸಭೆ ಜರುಗಿಸಿದ ಸಂಪ್ರೀತಿ.

ಕೊಂಡಜ್ಜಿ ಬೆಟ್ಟ ಪರಿಸರದ ಹತ್ತೆಕರೆ ಜಮೀನು ನಮ್ಮ ರಂಗಾಯಣ ನಿರ್ಮಾಣದ ಸ್ವತ್ತು. ಅಷ್ಟು ಪ್ರಮಾಣದ ಆಸ್ತಿ ಕರ್ನಾಟಕದ ಬೇರೆ ಯಾವ ರಂಗಾಯಣಗಳಿಗೂ ಇಲ್ಲ. ಅದನ್ನು ದಾವಣಗೆರೆಯೆಂಬ ನಡುಕರ್ನಾಟಕದ ಸಾಂಸ್ಕೃತಿಕ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸುವ ಕನಸು. ಅಲ್ಲೊಂದು ಬೃಹತ್ತಾದ ಥಿಯೇಟರ್ ಮ್ಯುಜಿಯಮ್ ನಿರ್ಮಾಣ ಆಗಬೇಕಿದೆ. ಅಂತಹ ಹತ್ತು ಎಕರೆ ಭೂಮಿಯ ಸಮೀಕ್ಷೆ ಮಾಡಿಸಿದ್ದು ಅರಣ್ಯದ ಅಷ್ಟೂ ಜಾಗಕ್ಕೆ ಬೇಲಿ ಮತ್ತು ಸೂಕ್ತ ಬಂದೋಬಸ್ತಿನ ಕೆಲಸ. ಏಕೆಂದರೆ ಅದು ನನ್ನ ಪಾಲಿಗೆ ಮಣ್ಣುಭೂಮಿ ಮಾತ್ರವಲ್ಲ, ರಂಗಭೂಮಿ. ಅದನ್ನು ಸಂವೇದನಾಶೀಲ ರಂಗಭೂಮತ್ವದ ಅರಿವು ಮತ್ತು ಅನುಸಂಧಾನವೆಂದೇ ಭಾವಿಸಿರುವೆ.
*
ಕಳೆದ ನಲವತ್ತೆಂಟು ವರುಷಗಳಿಂದ ದಾವಣಗೆರೆ ನಿವಾಸಿಯಾಗಿರುವ ನನಗೆ ಈ ಊರಿನ ಸಾಂಸ್ಕೃತಿಕ ಸಂಬಂಧಗಳ ದಿವಿನಾದ ಒಡನಾಟ. ಅದರ ಸರಳ ತಿರುಳು ಒಂದು ಚೆಂದದ ಬದುಕು ಕಟ್ಟಿಕೊಟ್ಟಿದೆ. ಅದಕ್ಕೆಂದೇ, ಕಾರಲ್ಲಿ ಓಡಾಡಿದರೆ ತಿಂಗಳಿಗೆ ನಲವತ್ತು ಸಾವಿರ ಖರ್ಚಾಗುತ್ತದೆಂದು ಆರಂಭದ ಏಳು ತಿಂಗಳ ಕಾಲ ನನ್ನ ಕಿಸೆಯಿಂದ ಖರ್ಚುಮಾಡಿ ಆಟೋದಲ್ಲಿ‌ ಓಡಾಡಿದೆ. ಆದರೆ ೨೦೨೫ ರ ರಾಷ್ಟ್ರೀಯ ವೃತ್ತಿ ರಂಗೋತ್ಸವದ ಓಡಾಟಕ್ಕೆ ಕಾರು ಅನಿವಾರ್ಯ ಆಯಿತು. ಅವತ್ತಿನಿಂದ ಸರ್ಕಾರದ ಕಾರು ಬಳಕೆ. ಅಷ್ಟಲ್ಲದೇ ದಾವಣಗೆರೆ ರಂಗಾಯಣದ ವ್ಯಾಪ್ತಿ ರಾಜ್ಯದ ಮೂವತ್ತೊಂದು ಜಿಲ್ಲೆಗಳ ಮಟ್ಟದ್ದು.

ಒಂದು ವರುಷದಲ್ಲಿ ನಾಕೈದು ನಾಟಕಗಳು ಸೇರಿದಂತೆ ಹದಿಮೂರಕ್ಕೂ ಹೆಚ್ಚು ರಂಗಸಂಭ್ರಮ ತುಂಬಿದ ಕಾರ್ಯಕ್ರಮಗಳು ಸಂಪನ್ನಗೊಂಡಿವೆ. ಅವು ಕೇವಲ ಸಂಖ್ಯಾ ಬಾಹುಳ್ಯ ಪ್ರಣೀತವಾಗಿರದೇ ಗುಣಗ್ರಾಹಿತ್ವದವು ಎಂಬ ರಂಗವಿದ್ವಾಂಸರ ಹೆಗ್ಗಳಿಕೆ ಮಾತುಗಳಿಂದ ನಮ್ಮ ರಂಗಾಯಣದ ಮನೋಬಲ ಮತ್ತು ಮನೋಧರ್ಮ ವೃದ್ಧಿಗೊಂಡಿದೆ. ಅಭಿನಯ, ರಂಗಸಂಗೀತ, ರಂಗಸಜ್ಜಿಕೆಗಳೆಂಬ ಮೂರು ಮುಖ್ಯ ಪರಂಪರೆಗಳಿಂದ ಮುಪ್ಪುರಿಗೊಂಡುದೇ ವೃತ್ತಿ ರಂಗಭೂಮಿ. ರಂಗಸಂಗೀತ ಅದರ ಪ್ರಾಣಜೀವಾಳ. ಅಂತಹ ರಂಗಗೀತೆಗಳನ್ನು ವರ್ಣಾಲಂಕಾರ ಮತ್ತು ವಸ್ತ್ರಾಲಂಕಾರದೊಂದಿಗೆ ಅಭಿನಯಸಮೇತ ಪ್ರದರ್ಶನ ಮಾಡಿದ ವಿನೂತನ ಪ್ರಯೋಗ ಮೊದಲು ದಾವಣಗೆರೆಯಲ್ಲಿ ಜನಮೆಚ್ಚುಗೆ ಪಡೆಯಿತು. ಪರಿಣಾಮ ಎಲ್ಲಾ ಕಂದಾಯ ವಿಭಾಗಗಳಲ್ಲಿ ಅದನ್ನು ವಿಸ್ತೃತಗೊಳಿಸಲು ನಿರ್ಧರಿಸಲಾಯಿತು.

ಮೊದಲ ಬಾರಿಗೆ ಮೈಸೂರಿನತ್ತ ನಮ್ಮ ರಂಗಪಯಣದ ಚಿತ್ತ. ಅಲ್ಲಿನ‌‌ ಡಾ. ಗಂಗೂಬಾಯಿ ಹಾನಗಲ್ ಸಂಗೀತ ವಿ. ವಿ.ಯ ಸಹಯೋಗದಲ್ಲಿ ಕಳೆದ ತಿಂಗಳಷ್ಟೇ (೨೦೨೫ ರ ಜುಲೈ ೨ ರಿಂದ ೧೬ ಜುಲೈ ೨೦೨೫ ) ಜರುಗಿತು. ನಮ್ಮ ನಿರೀಕ್ಷೆ ಮೀರಿ ಸದರಿ ರಂಗಸಂಗೀತ ಕಾರ್ಯಾಗಾರದ ಪ್ರದರ್ಶನ ಯಶಸ್ಸು ಗಳಿಸಿತು. ಹೊಸದೊಂದು ಪ್ರೊಡಕ್ಷನ್ ನಿರ್ಮಿಸಿದ ಶ್ರಮ ಮತ್ತು ಫಲಿತಾಂಶ ನಮ್ಮ ಆತ್ಮವಿಶ್ವಾಸ ಇಮ್ಮಡಿ ಮಾಡಿತು. ಅದನ್ನೀಗ ಇನ್ನಷ್ಟು ಪರಿಷ್ಕರಿಸಿ ನಾಟ್ಯ ಸಂಗೀತ ಅರ್ಥಾತ್ ಸಂಗೀತ ನಾಟಕ ಮಾಡುವ ರಂಗಚಿಂತನೆ.

ತೀಕ್ಷ್ಣವಾದ ನಿತ್ಯ ಬದುಕಿನ ಸೌಂದರ್ಯ ಕಳೆದುಕೊಂಡು ಕರಾಳ ಭವಿಷ್ಯದತ್ತ ಸಾಗುತ್ತಿರುವ ಯುವ ಸಮೂಹಕ್ಕೆ ಇಂತಹ ಕಾರ್ಯಾಗಾರದ ಅಗತ್ಯ ಇದೆ. ಹಾಗಂತ ಮೈಸೂರಿನಲ್ಲಿ ಶಿಬಿರಾರ್ಥಿಗಳು 'ಹೊಸತನದ ಹುರುಪು ತಂದುಕೊಂಡೆವೆಂದು' ಮನತುಂಬಿ ಮಾತಾಡಿದಾಗ ಸಾಂಸ್ಕೃತಿಕ ಸಾರ್ಥಕ್ಯದ ಭಾವತುಂಬಿ ಬಂತು.
*
ಈ ಎಲ್ಲದರ ನಡುವೆ ಹೇಳಲೇಬೇಕಾದ ನೋವಿನ ಕೆಲಸಂಗತಿಗಳು ಇಲ್ಲದಿಲ್ಲ. ಒಂದು ವರುಷದ ಅವಧಿಯಲ್ಲಿ ಕಿರಿಕಿರಿಯ ಕಹಿ ಅನುಭವಗಳು. ಕ್ಷುದ್ರಮನದ ಕೆಲವು ಪಟ್ಟ'ಭದ್ರ' ಹಿತಾಸಕ್ತಿಗಳು ತಮ್ಮ ಅಸಹಿಷ್ಣುತೆಯ ಕ್ರೌರ್ಯಭಾವದ ನೀಚತನ ಮೆರೆದವು. ನಾನು ತಪ್ಪು ಮಾಡಲಿಯೆಂದೇ ಕಾಯುತ್ತಿದ್ದವು. ಮಾಡಲಿಲ್ಲ ಎಂಬುದೇ ಅವಕ್ಕೆ ನಿರಾಸೆ. ಎಂತಹದೇ ತಲ್ಲಣದ ಗಳಿಗೆಗಳಲ್ಲಿ ನಾನು ಧೃತಿಗೆಡದೇ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ಇದರಿಂದಾಗಿ ಕೆಲವು ಕಾಯಂ ವಿರೋಧಿಗಳ‌ ಕರುಬುವಿಕೆ, ಅಂಥವರ ಎಸಿಡಿಟಿ ಕಂಡು ಮರುಕ ಪಟ್ಟಿದ್ದೇನೆ.

ಸರ್ಕಾರ ನನ್ನನ್ನು ದಾವಣಗೆರೆ ರಂಗಾಯಣದ ನಿರ್ದೇಶಕನೆಂದು ನೇಮಿಸಿದ ಕ್ಷಣದಿಂದಲೇ ಕೆಲವೇ ಕೆಲವರ ಅಸಹಿಷ್ಣುತೆಯ ಕಟ್ಟೆ ಒಡೆದಿತ್ತು. ನಲವತ್ತೈದು ವರುಷಗಳ ವೃತ್ತಿ ರಂಗಭೂಮಿಯ ನನ್ನ ಅಧ್ಯಯನ, ಸಂಶೋಧನೆ ಮೂಲಕ ಸಂಪಾದಿಸಿದ ಫೆಲೋಶಿಪ್ ಮುಂತಾದ ಶೈಕ್ಷಣಿಕ ರಂಗಸಂಗತಿಗಳು ಗೊತ್ತಿದ್ದೂ ಕೆಲವರು ವಿರೋಧಕ್ಕಾಗಿಯೇ ವಿರೋಧ ಎಂಬಂತೆ ಒಳಗೊಳಗೆ ಕುದ್ದು ಕುದ್ದು ಕುಬ್ಜರಾಗುತ್ತಿದ್ದರು. ಅದರಿಂದ ನಾನಂತೂ ಅಳುಕಲಿಲ್ಲ. ರಂಗ ಕಾರ್ಯಾಗಾರದ ಉದ್ಘಾಟನೆ ಸಮಾರಂಭವೊಂದರಲ್ಲಿ ಓರ್ವ ಆಸಾಮಿ ವಿರೋಧ ಮಾಡಲಿಕ್ಕಾಗಿಯೇ ಬಂದು "ನೀವು ಯಾವ ಕಂಪನಿಯಲ್ಲಿ ಕಲಾವಿದ ಆಗಿದ್ರಿ" ಎಂದು ಯುದ್ದಗೆದ್ದ ಉಮೇದಿನಲ್ಲಿ ಕಿಲುಬಾಟದ ಗಲಾಟೆ ಮಾಡಿದ್ದ. ಕಾರ್ಯಾಗಾರದ ಯಶಸ್ಸು ಕಂಡು ಅವನು 'ಪರಿವರ್ತನೆ' ಕಂಡನೆಂದು ತಿಳಿದು ಬಂತು.

ರಂಗಸಂಗೀತ ಕಾರ್ಯಾಗಾರಕ್ಕೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ‌. ಹದಿನೆಂಟರಿಂದ ನಲವತ್ತು ‌ವರ್ಷ ವಯೋಮಿತಿ ನಿಗದಿ ಮಾಡಲಾಗಿತ್ತು ಪುಣ್ಯಾತ್ಮೆಯೊಬ್ಬರು ರಾತ್ರಿ ಹೊತ್ತು ಫೋನಾಯಿಸಿ "ನಲವತ್ತು ದಾಟಿದ ನನ್ನಂತಾಕೆಗೆ ನಿನ್ ರಂಗಾಯಣದಲ್ಲಿ ರಂಗಗೀತೆ ಕಲಿಸಲು ಅವಕಾಶವಿಲ್ಲವೇ" ಎಂದು ಮೂದಲಿಕೆಯ ತೊದಲು ತೊದಲು ದನಿಯಲ್ಲಿ ತಡವಿಕೊಂಡಿದ್ದಳು. ಹೀಗೆ ಇಂತಹ ಕಿರಿಕಿರಿಗಳು ಇವತ್ತಿಗೂ ನಿಂತಿಲ್ಲ.

ಅವು ಅಷ್ಟಕ್ಕೆ ನಿಲ್ಲದೇ ಪತ್ರಿಕಾ ಗೋಷ್ಠಿ ಕರೆದು ನನ್ನನ್ನು ತೇಜೋವಧೆ ‌ಮಾಡುವವರೆಗೂ ಮುಂದುವರೆಯಿತು. ಏಕೆಂದರೆ ಕೆಲವರ ವಿಕೃತವಾಂಛೆ ಅವಾಗಿರುತ್ತವೆ. ಹೊಲಬು ನಾಲಗೆಯ ರಂಗಸಂಘಟಕನೊಬ್ಬ "ಸದರಿ ರಂಗಾಯಣದಿಂದ ತನಗೆ ಯಾವ ಲಾಭವೂ ದಕ್ಕುತ್ತಿಲ್ಲ. ಪರ್ಯಾಯ ರಂಗಾಯಣವೇ ಬೇಕೆಂದು" ಪೂಸಿದ್ದಾನೆ. ತನಗೆ ದೊರಕದ ದ್ರಾಕ್ಷಿ ಹುಳಿಯೆಂಬ ರಂಗ ಸಂಗಾತಿಯೊಬ್ಬನು ಕಲಿಯುಗದ ಕಿಲುಬು ಸ್ವರದಲ್ಲಿ ಅವಿವೇಕದ ಮಾತುಗಳಾಡಿದ್ದೂ ಆಯಿತು. ಇಂತಹ ಅಸೂಯೆ, ಅಸಹನೀಯ ವಾತಾವರಣದ ನಡುವೆಯೂ ವಿಚಲಿತನಾಗದೇ ಮುನ್ನಡೆಯುತ್ತಿರುವೆ. ಅದೇನೇ ಇರಲಿ, ವೃತ್ತಿ ರಂಗಭೂಮಿಯ "‌ಮಾದರಿ" ನಾಟಕವೊಂದನ್ನು ಸಿದ್ಧಪಡಿಸಿ ತೋರಿಸುವ ಕನಸು ಶೀಘ್ರದಲ್ಲೇ ಸಾಕಾರಗೊಳ್ಳಲಿದೆ.

ಮಲ್ಲಿಕಾರ್ಜುನ ಕಡಕೋಳ
9341010712

MORE NEWS

ಮೊದಲ ನಾಟಕದ ಮೊದಲ ಟೀಮ್ ಸ್ಪಿರಿಟ್

08-12-2025 ಬೆಂಗಳೂರು

"ರಂಗಾಭ್ಯಾಸದಲ್ಲಿ ಮೊದ ಮೊದಲು ಅರ್ಥಾತ್ ಆರಂಭಕ್ಕೆ ಭಾಷಿಕವಾಗಿ ಸಣ್ಪುಟ್ಟ ತೊಡಕುಗಳು ಕಾಡಿದವು. ಪ್ರತಿಗಂಧರ್ವ ಹೆಸ...

ಪುರುಷವತಾರ- ದೇಹ ಮೀಮಾಂಸೆಯ ಕಥನ 

05-12-2025 ಬೆಂಗಳೂರು

"`ಪುರುಷಾವತಾರ’ ಕಾದಂಬರಿಯಲ್ಲಿ ಗೋಸಾಯಿ ಗುರು ಹನುಮಂತ ಒಂಟಿಮನಿ ಅವರಿಗೆ ಹೇಳುವ ಮಾತುಗಳಿವು. ಈ ಮಾತುಗಳು ಕ...

DAILY COLUMN: ಮಗುವಿನ ಪ್ರಾಗ್ನಿಕ ರಚನೆ, ಕಲಿಕೆ ಮತ್ತು ಬಾಶೆ

04-12-2025 ಬೆಂಗಳೂರು

"ತಾಯ್ಮಾತು ಮತ್ತು ಶಿಕ್ಶಣ ಮಾದ್ಯಮ ಇವುಗಳ ನಡುವಿನ ರಾಚನಿಕ ಬಿನ್ನತೆಗಳೂ ಕೂಡ ಪೆರಮಾತಿನ ಶಿಕ್ಶಣದ ಸೋಲಿಗೆ ಕಾರಣವಾ...